ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅತಿಮಾನುಷ ಕಥೆಗಳು
೭೭

ಮನೆಗೆ ಹೋಗಿ - “ಅವ್ವಾ ನಿಮ್ಮ ಮಗಳನ್ನು ತೋರಿಸಿಕೊಡುತ್ತೇನೆ. ನನಗೆ ಎರಡು ಮುಷ್ಟಿ ಅನ್ನ ಹಾಕಿರಿ” ಎಂದು ತನ್ನ ಜೋಳಿಗೆಯನ್ನು ಮುಂದೊಡ್ಡಿದನು. ಮನೆಯವರು ಎರಡಕ್ಕೆ ನಾಲ್ಕು ಮುಷ್ಟಿ ಅಕ್ಕಿ ಹಾಕಿ, ನನ್ನ ಮಗಳನ್ನು ತೋರಿಸೆನ್ನಲು, ಅವನು ಅವರನ್ನು ಅಶ್ವತ್ಥಮರದ ಬಳಿಗೆ ಕರೆತಂದು ಬಿಂಜಾಲಿಯನ್ನು ತೋರಿಸಿದನು. ಮರದ ಮೇಲೆ ಕುಳಿತಿದ್ದ ಬಿಂಬಾಲಿಯನ್ನು ಕಂಡು ತಾಯಿ ಕರೆದಳು -

“ಬಿ೦ಬಾಲಿ ಬಿಂಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆ೦ದವೊ.
ಮೀಯೋಕೆ ಬಾರೆ ಬಿಂಬಾಲಿ.”

ಬಿಂಬಾಲಿ ಅಲ್ಲಿಂದಲೇ ಹೇಳಿದಳು -

“ಆವಾಗೀನ ಕಾಲದಲ್ಲಿ ಅವ್ವ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಅತ್ತೆಯೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”

ತಾಯಿ ಹಿಂದಿರುಗಿ ಹೋದಳು. ತಂದೆ ಬಂದು ಕರೆದನು -

“ಬಿ೦ಬಾಲಿ ಬಿ೦ಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆ೦ದವೊ.
ಮೀಯೋಕೆ ಬಾರೆ ಬಿಂಬಾಲಿ.”

ಮರದ ಮೇಲಿಂದಲೇ ಬಿಂಬಾಲಿ ಪಡಿನುಡಿದಳು -

“ಆವಾಗೀನ ಕಾಲದಲ್ಲಿ ಅಪ್ಪ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಮಾವನೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”

ತಂದೆ ಹೋದನು. ಅಣ್ಣ ಬಂದು, ಮೊದಲು ತಾಯ ತಂದೆ ಕರೆದಂತೆ - “ಮೀಯಲ್ಕೆ ಬಾರೇ ಬಿಂಬಾಲಿ” ಎಂದು ಕರೆದನು. ಅವನಿಗೂ ಮರದ ಮೇಲಿಂದಲೇ ಉತ್ತರ ನೀಡಿದಳು-

“ಆವಾಗೀನ ಕಾಲದಲ್ಲಿ ಅಣ್ಣ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಪುರುಷ ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”