ಕರ್ನಾಟಕ ಗತವೈಭವ/ಪೂರಕ ಪ್ರಕರಣ ೨

ವಿಕಿಸೋರ್ಸ್ದಿಂದ



೧೫೨

ಕರ್ನಾಟಕ-ಗತವೈಭವ.



ಪೂರಕ ಪ್ರಕರಣ ೨.
ಲಿಪಿಗಳ ಮುದ್ರಣ- ಪದ್ಧತಿ.
ವಾ
ಚಕರೇ! ನಾವು ಈ ಪ್ರಕರಣದಲ್ಲಿ ಶಿಲಾಲಿಪಿ ಮತ್ತು ತಾಮ್ರ ಶಾಸನಗಳ ಮುದ್ರೆಗಳನ್ನು ತೆಗೆದುಕೊಳ್ಳುವ ರೀತಿಯನ್ನು ಹೇಳುವೆವು. ಶಿಲಾಲಿಪಿಗಳನ್ನು ಓದುವುದು ತುಸ ಕಠಿಣ ಕಾರ್ಯವು. ಆದರೆ ಅವುಗಳನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ಅಷ್ಟೊಂದು ಕಠಿಣವಾದ ಕೆಲಸವಲ್ಲ. ಸ್ವಲ್ಪ ಅಭ್ಯಾಸದಿಂದ ಅದನ್ನು ಪ್ರತಿಯೊಬ್ಬನೂ ಕಲಿಯಬಹುದು. ಮೇಲಾಗಿ, ಈಗಿನ ಪರಿಸ್ಥಿತಿಯಲ್ಲಿ ಶಿಲಾಲಿಪಿಗಳನ್ನು ಓದುವುದಕ್ಕಿಂತ ಲಿಪಿಗಳನ್ನು ಸಂಗ್ರಹಿಸುವ ಕೆಲಸವು ಹೆಚ್ಚು ಮಹತ್ವದ್ದಾಗಿದೆ. ಶೋಧನ (Research) ಕ್ಕಿಂತ ರಕ್ಷಣವು (Conservation) ಹೆಚ್ಚು ಮಹತ್ವವುಳ್ಳದ್ದೆಂದು ಅನೇಕ ವರ್ಷಗಳ ಅನುಭವದಿಂದ ಗೊತ್ತಾಗಿದೆ. ಆದುದರಿಂದ, ನಾವು ನಮ್ಮ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿರುವ ಶಿಲಾಲಿಪಿಗಳನ್ನು ಮೊದಲು ರಕ್ಷಿಸಬೇಕು. ಮತ್ತು ಅವುಗಳ ಮುದ್ರಣವನ್ನು ತೆಗೆದು, ಇತಿಹಾಸ-ಮಂಡಲದಂಥ ಒಂದು ಸಂಸ್ಥೆಯಲ್ಲಿ ಸಂಗ್ರಹಿಸಿಟ್ಟರೆ, ಇಂದಿಲ್ಲ ನಾಳೆ ಯಾವ ಪುಣ್ಯಾತ್ಮನಾದರೂ ಅವುಗಳನ್ನು ಓದಿ, ಸಾರವನ್ನು ತೆಗೆದಾನು. ಆದರೆ ಈ ವಿಷಯದಲ್ಲಿ ಇಲ್ಲಿಯವರೆಗೆ ಆದ ಕೆಲಸವನ್ನು ನಾವು ಮೊದಲು ಅರಿತುಕೊಳ್ಳದೆ ಕೆಲಸಕ್ಕೆ ಪ್ರವೃತ್ತರಾದರೆ ನಿಷ್ಕಾರಣವಾಗಿ ಶ್ರಮವೂ ವೆಚ್ಚವೂ ಬೆಳೆಯುವುದು. ಆದಕಾರಣ ಮುದ್ರಣದ ರೀತಿಯನ್ನು ಹೇಳುವ ಪೂರ್ವದಲ್ಲಿ ಎಷ್ಟು ಶಿಲಾಲಿಪಿಗಳು ಮುದ್ರಿತವಾಗಿರುತ್ತವೆಂಬುದನ್ನು ಹೇಳುವವು. ನಮ್ಮ ಸುದೈವದಿಂದ ೧೯೦೫ ನೇ ಇಸವಿಯವರೆಗೆ ಮುದ್ರಿತವಾದ ಶಿಲಾಲೇಖಗಳದೊಂದು ಸಂಪೂರ್ಣ ಪಟ್ಟಿಯನ್ನು ಪ್ರೊ. ಕಿಲಹಾರ್ನ ಎಂಬವರು ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಪತ್ರಿಕೆಯ ೭ನೆಯ ಸಂಪುಟದ ಕೊನೆಯಲ್ಲಿ ಕೊಟ್ಟಿರುತ್ತಾರೆ. ಇದರಲ್ಲಿ, ಸುಮಾರು ೧೧೦೦ ಶಾಸನಗಳ ಯಾದಿಯು ಇರುತ್ತದೆ. ಅವುಗಳಲ್ಲಿ ೨೧೦ ತಾಮ್ರ ಶಾಸನಗಳೂ ೮೯೦ ಶಾಸನಗಳೂ ಇರುತ್ತವೆ. (೩೨೦ ಕನ್ನಡ, ೨೯೦ ಸಂಸ್ಕೃತ ೯೦ 

೨ನೆಯ ಪೂರಕ ಪ್ರಕರಣ - ಕರ್ನಾಟಕ-ಇತಿಹಾಸ-ಸಂಶೋಧನ.

೧೫೩


ಕನ್ನಡ ಸಂಸ್ಕೃತ ಮಿಶ್ರ, ಮಿಕ್ಕುವು ತೆಲುಗು ಮುಂತಾದುವುಗಳು). ಮುಂದಿನ ಪಟ್ಟಿಯನ್ನು ಮಾತ್ರ ತಯಾರಿಸಬೇಕಾಗಿದೆ. ಇದಲ್ಲದೆ, ಡಾ. ಫ್ಲೀಟ್ ಸಾಹೇಬರು ತೆಗೆದುಕೊಂಡ ೫೦೦-೬೦೦ ಮುದ್ರಣಗಳ ಸಂಗ್ರಹವು ಪುಣೆಯಲ್ಲಿ ಆರ್ಕಿಯಾಲಜಕಲ್ ಡಿಪಾರ್ಟಮೆಂಟಿನ ಒಂದು ಕೊಠಡಿಯಲ್ಲಿ ಬಿದ್ದಿರುವುದನ್ನು ನಾವು ಸ್ವತಃ ನೋಡಿದ್ದೇವೆ. ಅದರ ಪಟ್ಟಿಯು ಅಲ್ಲಿ ದೊರೆಯಲಿಲ್ಲ. ಆ ಪಟ್ಟಿಯೊಂದನ್ನು ಸಿದ್ಧ ಮಾಡಿದರೆ, ಯಾವ ಯಾವ ಶಿಲಾಲಿಪಿಗಳು ಮುದ್ರಣವಾಗಿಲ್ಲವೆಂಬುದನ್ನು ತಿಳಿದುಕೊಳ್ಳಲಿಕ್ಕೆ ಅನುಕೂಲವಾಗುವುದು. ಇಷ್ಟು ಮಾಹಿತಿಯು ದೊರೆಯಬೇಕಾದರೆ ನಮಗೆ ಪ್ರಯಾಸವಾದುದರಿಂದ ಮುಂದೆ ಮಾರ್ಗದರ್ಶಿಯಾಗಬೇಕೆಂದು ನಾವು ಈ ಮಾಹಿತಿಯನ್ನು ಇಲ್ಲಿ ನಮೂದಿಸಿ ಇಟ್ಟಿರುವೆವು.

ಲಿಪಿಗಳನ್ನು ಓದುವ ಕೆಲಸಕ್ಕೆ ಏನಾದರೂ ಹಂಚಿಕೆಯುಂಟೋ ಎಂಬ ಬಗ್ಗೆ ನಾವು ಬಹಳ ಶೋಧಿಸಿದ್ದೇವೆ. ಆದರೆ ಅದು ಕೇವಲ ಅಭ್ಯಾಸದಿಂದಲೇ ಸಾಧ್ಯವಾಗತಕ್ಕುದೆಂದು ಅನೇಕ ತಜ್ಞರ ಮತವುಂಟು. ಆದರೂ ತೀರ ಹಿಂದಿನ ಅಕ್ಷರಗಳ ಸರಣೆಯು ಹೇಗಿತ್ತೆಂಬುದು ಕೆಲಮಟ್ಟಿಗೆ ಕೆಳಗೆ ಕಾಣಿಸಿದ ಪುಸ್ತಕದಿಂದ ಗೊತ್ತಾಗಬಹುದು.

(೧) English Translation of Buhler's Indische Palæographie and the tables called Tafels.

(೨) ಮೇಲೆ ಹೇಳಿದ ಸೂಚನೆಗಳನ್ನು ಲಕ್ಷದಲ್ಲಿಟ್ಟು ಮುಂದಿನ ರೀತಿಯಂತೆ ಮುದ್ರಣಗಳನ್ನು ತೆಗೆದುಕೊಳ್ಳಬೇಕು. ಈ ಕೆಲಸಕ್ಕೆ ಇಂಗ್ಲಿಷ್‌ ಜ್ಞಾನವು ಬೇಕೇಬೇಕಂತಲೂ ಇಲ್ಲ. ಈ ವಿಷಯದ ಕಡೆಗೆ ಕನ್ನಡ ಅಧ್ಯಾಪಕರ ಲಕ್ಷ್ಯವು ವೇಧಿಸಿದರೆ ನಮ್ಮ ಕಾರ್ಯವು ಸುಲಭವಾಗಿ ಆಗಬಹುದಾಗಿದೆ. 

ಮುದ್ರಣರೀತಿ.

(೧) ಮೊದಲು, ಕಲ್ಲಿನಲ್ಲಿ ಕೂತಂಥ ಮಣ್ಣು, ಸುಣ್ಣ, ಎಣ್ಣೆ ಮುಂತಾದುವನ್ನು ಮೆಲ್ಲನೆ ಮೊಳೆಗಳಿಂದ ತೆಗೆದು ಕಲ್ಲನ್ನು ಚನ್ನಾಗಿ ತೊಳೆಯಬೇಕು. ಹೀಗೆ ಮಾಡುವಾಗ, ಅಕ್ಷರಗಳು ನಿಚ್ಚಳವಾಗಿ ಕಾಣಬೇಕೆಂದು ಯಾವ ಕಬ್ಬಿಣ 

೧೫೪

ಕರ್ನಾಟಕ-ಗತವೈಭವ.


ಸಾಮಾನುಗಳನ್ನೂ ಕಲ್ಲಿಗೆ ಒತ್ತಿ ತಿಕ್ಕಬಾರದು, ಅಕ್ಷರಗಳು ನೆಟ್ಟಗೆ ಕಾಣಿಸಬೇಕೆಂದು ಕಲ್ಲಿಗೆ ಮಸಿ ಹಚ್ಚಿ ಕಪ್ಪು ಮಾಡಬಾರದು. ಇದರಿಂದ ಅಕ್ಷರಗಳು ತಿಳಿಯುವುವೆಂದು ನಿಮಗೆ ಮೊದಲು ತೋರಿದರೂ ಅದು ಕಲ್ಲನ್ನು ಕೆಡಿಸಿ ಬಿಡುವುದಲ್ಲದೆ, ಮುಂದೆ, ನೋಡುವವರಿಗೂ ತೊಂದರೆಯುಂಟುಮಾಡಿದಂತಾಗುತ್ತದೆ.

(೨) ಪ್ರಥಮತಃ ವೃತ್ತ ಪತ್ರಿಕೆಗಳಿಗೆ ಬಳಸುವ ಉತ್ತಮತರದ ಕಾಗದವನ್ನು ತೆಗೆದುಕೊಂಡು ಅದನ್ನು ಕೆಲವು ನಿಮಿಷ ನೀರಿನಲ್ಲಿ ತೊಯಿಸಬೇಕು, ಹುರುಬರಕಾದ ಲಿಪಿಗಳಿಗೆ ದೇಶೀಯ ಕಾಗದಗಳನ್ನು ಬಳಸಬೇಕು. ಆ ಕಾಗದವನ್ನು ನೀರಿನಲ್ಲಿ ತೊಯಿಸಲೇ ಬೇಕು, ಫೂಲಸ್ಕೇಪ ಕಾಗದಗಳು ಸಾಮಾನ್ಯವಾಗಿ ಎಲ್ಲ ತರದ ಲಿಪಿಕಲ್ಲುಗಳಿಗೂ ಉಪಯೋಗಕ್ಕೆ ಬರುತ್ತವೆ.

(೩) ಆ ತೊಯಿಸಿದ ಕಾಗದವನ್ನು, ಅತ್ತಿತ್ತ ಸರಿದಾಡದಂತೆ ಒಂದೇ ಸಮನಾಗಿ ಆ ಲಿಪಿಗಲ್ಲಿನ ಮೇಲೆ ಇಡಬೇಕು. ನಡನಡುವೆ ಮಡಿಕೆ ಬೀಳಗೊಡ ಬಾರದು. ಆ ತೊಯಿಸಿದ ಪತ್ರವು ಆಗ ಕಲ್ಲಿಗೆ ಅಂಟಿಕೊಳ್ಳುವುದು.

(೪) ಕೂಡಲೇ, ಬಿರುಸಾದ ಕುಂಚನ್ನಾದರೂ ವಸ್ತ್ರವನ್ನಾದರೂ ತೆಗೆದುಕೂಂಡು ಗಾಳಿಯಿಂದ ಹಾರದೆ ಕಾಗದವು ಕಲ್ಲಿಗೆ ಅಚ್ಚುಕಟ್ಟಾಗಿ ಹತ್ತಿಕೊಳ್ಳುವಂತೆ ಮೆಲ್ಲಗೆ ಜಾಣತನದಿಂದ ಒತ್ತಬೇಕು. ಆ ಕಾಗದವೆಲ್ಲ ಸಂದಿಗೊಂದಿ ಸಹ ಬಿಡದಂತೆ ಕಲ್ಲಿಗೆ ಸರಿಯಾಗುವಂತೆ ಹಗುರಾಗಿ ಒತ್ತುತ್ತಿರಬೇಕು, ಅಕ್ಷರಗಳು ಆಳವಾಗಿ ಕೊರೆಯಲ್ಪಟ್ಟಿದ್ದರೆ ಅಥವಾ ಮೇಲ್ಬದಿಯು ಡೊಂಕಾಗಿದ್ದರೆ ಕಾಗದಕ್ಕೆ ಅನೇಕ ಕಡೆಗೆ ರಂಧ್ರಗಳು ಬೀಳುವುವು. ಹೀಗಾದ ಪಕ್ಷಕ್ಕೆ, ಆ ಕಾಗದದ ಮೇಲೆ ಮತ್ತೊಂದು, ಅದೂ ಹರಿಯ ಹತ್ತಿದರೆ ಮತ್ತೂ ಒಂದು ಕಾಗದವನ್ನು ಮೊದಲಿನಂತೆಯೇ ತೊಯಿಸಿ ಹಾಕಿ ಒತ್ತಬೇಕು.

(೫) ಒತ್ತುವ ಕ್ರಮವು ಮುಗಿದೊಡನೆಯೇ ಕಾಗದವನ್ನು ತೆಗೆಯಬಾರದು. ಒಣಗಿದ ಕೂಡಲೆ ಅದು ತನ್ನಷ್ಟಕ್ಕೆ ತಾನೇ ಕಳಚಿ ಬೀಳುವುದು, ಅದೆಲ್ಲ ಮುಗಿದ ನಂತರ ನಿಮ್ಮ ಕಾಗದವು ಮುದ್ರಿಸಿದಂತಾಗುವುದು. ಈ ಕಾಗದವು ಒಣಗಿರುವ ಕಾರಣ, ಅದು ಬಹು ಬಿರುಸಾಗಿದ್ದು ಎಷ್ಟು ಒತ್ತಿದರೂ ಹಾಗೇ ಇರುತ್ತದೆ. ಆ ಮೇಲೆ ಅದನ್ನು ಸುರುಳಿ ಸುತ್ತಿಟ್ಟು ಅದು ಒದ್ದೆಯಾಗದಂತೆ ಎಚ್ಚರವಿಡಬೇಕು.

೨ನೆಯ ಪೂರಕ ಪ್ರಕರಣ-ಕರ್ನಾಟಕ-ಇತಿಹಾಸ-ಸಂಶೋಧನ.

೧೫೫


(೬) ಕಾಗದವು ಕಲ್ಲಿಗೆಲ್ಲ ಸಾಕಾಗುವಷ್ಟು ದೊಡ್ಡದಾಗಿರದಿದ್ದರೆ, ಮೇಲೆ ಹೇಳಿದ ರೀತಿಯಲ್ಲಿಯೇ ಕಲ್ಲುಗಳ ಒಂದೊಂದೇ ಭಾಗವನ್ನು ಅಳತೆಮಾಡಿ ತೆಗೆದುಕೊಳ್ಳಬೇಕು.ಆದರೆ ಈ ಮುದ್ರಣವಾದ ಕೂಡಲೆ ಆಯಾ ಕಾಗದಗಳಿಗೆ ನಂಬರುಗಳನ್ನು ಹಾಕಿ ಜೋಡಿಸಿ ಅದರಮೇಲೆ ಅದು ಇಂಥ ಗುಡಿಯಲ್ಲಿ ಇಂಥ ದಿಕ್ಕಿಗಿರುವ ಶಿಲಾಲೇಖವೆಂದು ಮುಂತಾಗಿ ಬರೆಯುವುದಕ್ಕೆ ಮರೆಯಬಾರದು.

(೭) ಮಿಕ್ಕ ಯಂತ್ರಗಳ ಕೆಲಸದಂತೆ ಈ ಕೆಲಸವನ್ನು ಮಾಡಲಿಕ್ಕೂ ರೂಢಿಯು ಬೇಕಾಗುತ್ತದೆ. ಪ್ರತಿಯೊಂದರ ಮೂರು ನಾಲ್ಕು ಮುದ್ರಣಗಳನ್ನು ತೆಗೆದುಕೊಂಡರೆ, ಅಕ್ಷರಗಳ ತಪ್ಪುಗಳನ್ನು ತಿಳಿಯಲಿಕ್ಕೂ, ಅವುಗಳನ್ನು ತಿದ್ದಲಿಕ್ಕೂ ಅನುಕೂಲವಾಗುವುದಾದುದರಿಂದ ಬೇರೆ ಬೇರೆ ಮೂರು ನಾಲ್ಕು ಪತ್ರಗಳನ್ನು ಮುದ್ರಿಸಿಕೊಳ್ಳುವುದು ಒಳ್ಳೆಯದು.

೨ನೆಯ ರೀತಿ:- ಈ ರೀತಿಯ ಮೇಲಿನಂತೆಯೇ ಇದ್ದರೂ ಯೋಗ್ಯವಾದ ಮತ್ತು ಹದನವಾದ ಉಪಕರಣಗಳೂ ಅನುಭವವೂ ಇದ್ದರೆ ಇದರಲ್ಲಿ ಮುದ್ರೆಗಳು ಹೆಚ್ಚು ಸ್ಫುಟವಾಗಿ ಮೂಡುವುವು, ಮೊದಲು ಮುದ್ರಕರ 'ರೋಲರ್' ಒಂದನ್ನು ತೆಗೆದುಕೊಂಡು ಅದಕ್ಕೆ ಮಸಿ ಹಚ್ಚಿ, ಕಲ್ಲು ಸ್ವಲ್ಪ ತಣ್ಣಗಿರುವಾಗಲೇ (ಆದರೆ ಒದ್ದೆಯಲ್ಲ) ಅದರಮೇಲೆ ಉರುಳಿಸಬೇಕು, ಚರ್ಮಸಹಿತವಾದ ಉಣ್ಣೆಯ ಕುಂಚಿನಿಂದ ಅದನ್ನು ಮೆಲ್ಲಗೆ ಒತ್ತಿದರೆ, ಮಸಿ ಹತ್ತದಿರುವಲ್ಲಿ ಮಸಿ ಹತ್ತುವುದು, ಮತ್ತು ಮಸಿ ಹೆಚ್ಚು ಹತ್ತಿದ ಸ್ಥಳವು ಬೆಳ್ಳಗಾಗುವುದು, ಇದರಿಂದ ಸೂಕ್ಷ್ಮ ಕೆಲಸವು ಬಹು ಸೊಗಸಾಗುವುದು. ಆಮೇಲೆ, ಪೂರ್ವದಂತೆ, ಕಾಗದವನ್ನು ಕಲ್ಲಿನಮೇಲೆ ಒಣಗಿಸಲಿಕ್ಕೆ ಬಿಡಬೇಕು, ಮತ್ತು ಏನಾದೀತೋ ಎಂದು ಸಂಶಯ ತೆಗೆದುಕೊಳ್ಳದೆ ಸುರುಳಿಯಾಗಿ ಸುತ್ತಬೇಕು. ಇದಕ್ಕಾಗಿ ಬೇಕಾಗುವ ಮಸಿಗಾಗಿ, ಪರ್ಸಿಯನ್ ಮಸಿಯನ್ನಾದರೂ, ಕಾಡಿಗೆ ಅಂಟು ಮತ್ತು ನೀರಿನಿಂದ ಕೂಡಿದ ಮಸಿಯನ್ನಾದರೂ ಬಳಸಬಹುದು. ಹೆಚ್ಚು ಮಸಿಯನ್ನು ಹಾಕಿದರೆ ಮುದ್ರೆಯು ಕೆಡುವುದು. ಆದುದರಿಂದ ಸರಿಯಾಗಿ ಬೇಕಾದಷ್ಟು ಮಸಿಯನ್ನೇ ಹಾಕಬೇಕು. ಅದರಂತೆ 'ರೂಲ'ವನ್ನು ಒತ್ತುವಾಗ ಅದನ್ನು ಒಂದೇಮಸಮನಾಗಿ ಉರುಳಿಸಬೇಕು. ಎಂದರೆ ಅಕ್ಷರಗಳ ಸಂದಿಯಲ್ಲಿ ಮಸಿಹೋಗದ ಅಕ್ಷರಗಳು ಬೆಳ್ಳಗೆ ಉಳಿಯುವುವು. ಮಿಕ್ಕಕಡೆಗೆ ಮಸಿ ಹತ್ತುವುದು. 

೧೫೬

ಕರ್ನಾಟಕ-ಗತವೈಭವ.


೩ನೆಯ ರೀತಿ:- ಈ ರೀತಿಯು ಬಹಳ ಸುಲಭವಾಗಿರುತ್ತದೆ. ವಿಶೇಷ ಖರ್ಚೂ ಬೇಡ. ಇದು ಮೇಲಿನ ರೀತಿಯಂತೆಯೇ ಇರುತ್ತದೆ. ಲಿಪಿಗಳಿಗೆ ಒದ್ದೆಯ ಕಾಗದವನ್ನು ಅಂಟಿಸಿ ಬಿರುಸಾದ ಕುಂಚಿನಿಂದ ಮೆಲ್ಲಗೆ ಅಕ್ಷರಗಳ ಮೇಲೆ ಬಡಿಯಬೇಕು. ಅಂದರೆ ಅಕ್ಷರಗಳ ಸಂದಿಯಲ್ಲಿ ಆ ಒದ್ದೆಯ ಕಾಗದವು ಹೋಗಿ ಕೂಡುವುದು, ಕೂಡಲೇ ಚರ್ಮದ ಪ್ಯಾಡ್ ಒಂದನ್ನು ತೆಗೆದು ಕೊಂಡು ಅದಕ್ಕೆ ಎರಡನೆಯ ರೀತಿಯಲ್ಲಿ ಹೇಳಿದಂತೆ ತಯಾರ ಮಾಡಿದ ಕಾಡಿಗೆಯ ಮಸಿಯನ್ನು ಹಚ್ಚಿ, ಆ ಒದ್ದೆಯ ಕಾಗದದ ಮೇಲೆ ಬಡಿಯಬೇಕು, ಹಾಗೆ ಮಾಡಿದರೆ ಅಕ್ಷರಗಳ ಸಂದಿಯಲ್ಲಿ ಕುಳಿತ ಕಾಗದಕ್ಕೆ ಮಸಿಯು ಹತ್ತದೆ ಮಿಕ್ಕ ಕಡೆಗೆಲ್ಲ ಮಸಿ ಹತ್ತುವುದು, ಅಕ್ಷರಗಳು ಬೆಳ್ಳಗಾಗಿ ಕಾಣುವುವು, ಕಾಡಿಗೆಯಲ್ಲಿ ಅಂಟು ಬಹಳ ಹಾಕಬಾರದು. ಕಾಡಿಗೆಯು ಹಾರಿ ಹೋಗಬಾರದೆಂದು ಸ್ವಲ್ಪ ಅಂಟು ಹಾಕಬೇಕಾಗುತ್ತದೆ, ರಬ್ಬರ ಸ್ಟಾಂಪು ಒತ್ತುವಂತೆ ಆ ಒದ್ದೆಯ ಕಾಗದದಮೇಲೆ ಮಸಿಯನ್ನು ಮೆಲ್ಲಗೆ ಹಚ್ಚಬೇಕು.

ತಾಮ್ರಶಾಸನದ ಮುದ್ರಣ:- ಮೊದಲು ತಾಮ್ರಪಟವನ್ನು ಸಬಕಾರ ಹಚ್ಚಿ ಚನ್ನಾಗಿ ತೊಳೆಯಬೇಕು, ಅದರಿಂದ ಸ್ವಚ್ಛವಾಗದಿದ್ದರೆ, ನೈಟ್ರಿಕ ಆಸಿಡ್ ನ ನೀರನ್ನು ಸ್ವಲ್ಪ ಹಾಕಬೇಕು. ಈ ನೀರನ್ನು ಹೆಚ್ಚು ಹಾಕಿದರೆ ಶಾಸನವು ಕೆಡುವ ಸಂಭವವದೆ. ಆ ಶಾಸನವು ಒಣಗಿದನಂತರ ಮುದ್ರಿಸುವ ಮಸಿಯನ್ನು ಕುಂಚಿನಿಂದ ಮೆಲ್ಲಗೆ ಬಳಿಯಬೇಕು. ಇದಕ್ಕಾಗಿಯೇ ಒಂದು ದೊಡ್ಡ ಕುಂಚವನ್ನು ಮಾಡಿಸಿಡಬೇಕು. ಅಥವಾ ಒಂದು ಕಾಚಿನ ತುಣುಕನ್ನು ತೆಗೆದುಕೊಂಡು, ಅದರಮೇಲೆ ಮಸಿಯನ್ನು ಹಾಕಿ, ಅದನ್ನೆಲ್ಲ ಅದಕ್ಕೆ ಚನ್ನಾಗಿ ಒಂದೂ ಕಡೆಗೆ ಬಿಡದಂತೆ ಹಚ್ಚಬೇಕು. ಡ್ರಾಯಿಂಗ್‌ ಪೇಪರ್‌ ದಂಥ ದಪ್ಪಾದ ಮೆತ್ತಗಿನ ಕಾಗದವೇ ಒಳ್ಳೆಯದು. ಕಾಗದವನ್ನು ತಾಮ್ರ ಪಟಕ್ಕಿಂತ ಹೆಚ್ಚು ದೊಡ್ಡದಾಗಿ ಕತ್ತರಿಸಿ, ಸ್ವಲ್ಪ ನೀರು ಚಿಮ್ಮಡಿಸಿ, ಅದರ ಮೇಲ್ಬಾಗವನ್ನು ಶಾಸನದ ಮೇಲೆ ಹಾಕಿ, ಕಾಗದವನ್ನು ಹಿಗ್ಗಲಿಗೆ ಮಡಿಸಬೇಕು. ಹೀಗೆ ಮಾಡಿದರೆ, ಆ ಶಾಸನವು ಅತ್ತಿತ್ತ ಅಲುಗಾಡುವುದಿಲ್ಲ. ಶಾಸನಕ್ಕೆ ಬಳೆಯಿದ್ದರೆ, ಆ ಕಾಗದದೊಳಗೆ ಬಳೆ ಹಾಯುವಂಥದೊಂದು ರಂಧ್ರವನ್ನು ಮಾಡಬೇಕು. ಮೇಲ್ಬಾಗವನ್ನು ಬಿರುಸಾದ ಸ್ವಚ್ಛ ಕಾಗದದಿಂದ ಮೆಲ್ಲನೆ ಒತ್ತಬೇಕು. ಒತ್ತದೆ 

೨ನೆಯ ಪೂರಕ ಪ್ರಕರಣ – ಕರ್ನಾಟಕ-ಇತಿಹಾಸ-ಸಂಶೋಧನ.

೧೫೭


ಇರುವ ಸ್ಥಳದಲ್ಲಿ ಒಂದು ಹಸೀ ಬಟ್ಟೆಯನ್ನು ಯಾವಾಗಲೂ ಮಡಿಸಿ ಇಡಬೇಕು. ಆಮೇಲೆ, ದಕ್ಕೆಯಾಗದಂತೆ ಕಾಗದವನ್ನು ತೆಗೆದು ಒಣಗಲಿಕ್ಕೆ ಇಡಬೇಕು. ಮುದ್ರೆಗಳು ಹಿಮ್ಮೈ ಆಗಿರುತ್ತವೆ. ಆದರೆ ಫೋಟೋ ತೆಗೆದುಕೊಂಡರೆ ಅವು ಮತ್ತೆ ಹಿಮ್ಮೈ ಆಗುತ್ತವೆ. ಮಸಿಯ ಕಲೆಗಳು ಪೂರ್ಣವಾಗಿ ಹೋಗಬೇಕಾದರೆ ಟರ್ಪಂಟಾಯಿನವನ್ನು ಸ್ವಲ್ಪ ಹಚ್ಚಿ, ಆಮೇಲೆ ಶಾಸನವನ್ನು ಸಬಕಾರದಿಂದ ತೊಳೆಯಬೇಕು. ಹಾಗೆ ಮಾಡಿದರೆ ಅದು ಸ್ವಚ್ಛವಾಗುವದು.
ಮೇಲೆ ಹೇಳಿದ ರೀತಿಗಳಲ್ಲದೆ ಮಿಕ್ಕ ರೀತಿಗಳುಂಟು, ಆದರೆ ಅವಕ್ಕೆ ಬಹಳ ವೆಚ್ಚ ತಗಲುವದರಿಂದ ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಆದರೆ, ತಾಮ್ರ ಶಾಸನಗಳನ್ನು ಆರ್ಕಿಯಾಲಾಜಿಕಲ್ ಖಾತೆದವರ ಕಡೆಗೆ ಕಳಿಸುವದೇ ಒಳ್ಳೆಯದು. ಅವರು ಅದರ ತಸವೀರು ತೆಗೆದುಕೊಂಡು ತಿರುಗಿ ಕಳುಹಿಸುವರು.