ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಪಾತ್ಮ ರಾಜ

ಪಾಪಾತ್ಮ ರಾಜನ ರಾಜ್ಯದಲ್ಲಿ ಸಂಪತ್ತು ಬಹಳವಿತ್ತು. ಅದೆಲ್ಲ ಅರಮನೆ, ದಂಡು, ಪರಿವಾರ ಅವುಗಳಿಗೇ ಖರ್ಚಾಗಿ ಬಿಡುತ್ತಿತ್ತು. ಆದರೆ ರಾಜನಿಗೆ ಹಣವನ್ನು ಕೂಡಹಾಕಬೇಕೆಂಬ ಹವ್ಯಾಸ ಬಹಳ. ಅದಕ್ಕಾಗಿ ಅವನು ಹೆಂಡತಿ, ಮಕ್ಕಳು, ರಾಜ್ಯ ಬಿಟ್ಟುಕೊಟ್ಟು ಕೈಯಲ್ಲಿ ಸಾವಿರ ರೂಪಾಯಿ ತೆಗೆದುಕೊಂಡು ದೇಶಾಂತರಕ್ಕೆ ಹೊಗಿಬಿಟ್ಟನು.

ಹನ್ನೆರಡು ಯೋಜನ ದಾಟಿ ಹೋದನು. ಮೂರುದಿನ ಊಟ ಮಾಡಿರಲಿಲ್ಲ. ದಾರಿಯಲ್ಲಿ ಒಂದು ಆಲದಮರವನ್ನು ನೋಡಿ ಅದರ ಹಣ್ಣುಗಳನ್ನು ತಿನ್ನಬೇಕೆಂದು ಹತ್ತಿರ ಹೋದನು. ಅಷ್ಟರಲ್ಲಿ ಮರದ ಮೇಲೆ ಕುಳಿತ ಹಕ್ಕಿಗಳೆಲ್ಲ ಕೂಗಿದವು-"ಈತನು ಮಹಾಧನಲೋಭಿ. ಹಣದಾಶೆಗಾಗಿ ತನ್ನನ್ನು ನಂಬಿದ ಹೆಂಡರು ಮಕ್ಕಳನ್ನು ಸಹ ಬಿಟ್ಟು ಬಂದ ಪಾಪಿ. ಈತನಿಗೆ ಆಶ್ರಯ ಕೊಡಬೇಡ."

ಆಲದ ಮರವು ಎಲೆಗಳನ್ನೆಲ್ಲ ಉದುರಿಸಿ ಅವನಿಗೆ ನೆರಳು ಸಿಗದಂತೆ ಮಾಡಿತು. ತಿನ್ನುವಾಸೆಯಿಂದ ಹಣ್ಣುಗಳಿಗೆ ಕೈ ಹಾಕಿದರೆ, ಹಣ್ಣಿನ ತುಂಬ ಹುಳುಗಳೇ ಬುಚುಗುಡುತ್ತಿದ್ದವು. ಅವನು ನಿರಾಶನಾಗಿ ಅಲ್ಲಿಂದೆದ್ದನು.

ಮತ್ತೆ ಹನ್ನೆರಡು ಗಾವುದ ನಡೆದು ಹೋಗಲು, ರಾಜನು ಮಗಳ ಊರನ್ನು ತಲುಪಿದನು. ಮಗಳಿಗೆ ಬಡತನ ಬಂದಿತ್ತು. ಕಟ್ಟಿಗೆ ಹೊರೆತಂದು ಮಾರಿಕೊಂಡು ಉಪಜೀವನ ಸಾಗಿಸುತ್ತಿದ್ದಳು. ತನ್ನ ಬಳಿಯಲ್ಲಿರುವ ಹಣವನ್ನು ಕಂಗಾಲಳಾದ ಮಗಳು ನೋಡಿದರೆ ದೋಚದೆ ಬಿಡಳೆಂದು ಬಗೆದು, ಎರಡು ಬಟ್ಟೆಯ ತುಂಡುಗಳಲ್ಲಿ ಐದೈದು ನೂರು ನಾಣ್ಯಗಳನ್ನು ಹರಹಿ, ತನ್ನ ಎರಡೂ ಕಾಲುಗಳಿಗೆ ಸುತ್ತಿಕೊಂಡು ಮೇಲೆ ಹುರಿಯಿಂದ ಬಿಗಿದನು. ನಡೆಯುವುದಕ್ಕೆ ಕಷ್ಟವಾದರೂ, ಕಾಲುಗಳಿಗೆ ನೋವಾದರೂ ಸಹಿಸಿಕೊಂಡು ಮಗಳ ಮನೆಗೆ ಹೋದನು.

ಮಗಳು ಬಡವಿಯಾದರೂ ಬಹಳ ದಿನಕ್ಕೆ ಬಂದ ತಂದೆಯನ್ನು ಆನಂದದಿಂದ ಬರಮಾಡಿಕೊಂಡಳು. ತಾನು ಅರೆಹೊಟ್ಟೆಯುಂಡು, ತಂದೆಗೆ ಊಟದಿಂದ ತೃಪ್ತಿ ಪಡಿಸಿದಳು. ಒಂದೆರಡು ದಿನಗಳಲ್ಲಿ ದೀಪಾವಳಿ ಹಬ್ಬ