ಪ್ರಶ್ನವು ಚೆನ್ನಾಗಿದೆ. ಸತ್ಯದರ್ಶನವು ಎಲ್ಲರಿಗಿಂತ ಹೆಚ್ಚಾಗಿ ದಂಡ್ಯರನ್ನ ದಂಡಿಸುವ ರಾಜನಿಗೂ, ಆ ರಾಜನಿಗೆ ಮಾರ್ಗದರ್ಶಿಯಾದ ರಾಜಗುರುವಿಗೂ ಬೇಕಾದುದು. ಆದುದರಿಂದ ತಾವು ಈ ಪ್ರಶ್ನವನ್ನು ಕೇಳಿದುದು ಪರಮಸಾಧುವಾಯಿತು. ಆಗಲಿ, ಹೇಳೋಣ.”
“ಸತ್ಯಕ್ಕೆ ಎರಡು ರೂಪ. ಇಂದ್ರಿಯಗೋಚರವಾಗುವ ರೂಪವೊಂದು, ಅದು ಚರರೂಪ. ಇಂದ್ರಿಯಗೋಚರವಾಗದ ಸ್ಥಿರರೂಪವೊಂದು. ಚರರೂಪವು ಸ್ಥಿರ ರೂಪದ ಪ್ರತಿಬಿಂಬ. ಲೋಕವೆಲ್ಲವೂ ಅರಿತಿರುವುದು ಈ ಚರರೂಪವನ್ನು. ಅಲೆಗಳಂತೆ ಚಂಚಲವಾದುದು ಇದು. ಹೊತ್ತು ಹೊತ್ತಿಗೆ ಹೊಸತಾಗುತ್ತಿರುವುದು ಇದರ ಸ್ವಭಾವ. ಇದು ದೇಶದೇಶಕ್ಕೂ ಬೇರೆಯಾಗುತ್ತಿರುವುದು. ಅಷ್ಟೇನು? ಸಂಗೀತದಂತೆ ಎನ್ನಿ, ನಿಮ್ಮ ರುಚಿಯಿಂದ ಸಂಗೀತಕ್ಕೆ ಬೆಲೆ. ನಿಮ್ಮ ಜ್ಞಾನ ಸಂಸ್ಕಾರಗಳಿಂದ ರುಚಿಯೂ ಭಿನ್ನೈಸುವುದು. ಹಾಗೆ, ಹುಡುಗನಿಗೆ, ತರುಣನಿಗೆ, ವೃದ್ಧನಿಗೆ ಸತ್ಯವು ಬೇರೆ ಬೇರೆಯಾಗುವುದು. ಆದರೆ, ಆ ಸ್ಥಿರರೂಪವಾದ ಸತ್ಯವಿದೆಯಲ್ಲ ಅದು ಬೇರೆ. ಅದು ಎಲ್ಲರಿಗೂ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಒಂದೇ.
style="text-indent: 1cm;">ಈ ಲೋಕದಲ್ಲಿ ಅದು ಧರ್ಮವಾಗಿ ಗೋಚರವಾಗುವುದು. ಧರ್ಮವು ಸತ್ಯದ ಚರರೂಪದಲ್ಲಿ ಸ್ಥಿರರೂಪವನ್ನು ಆರಾಧಿಸುವಿಕೆ. ಅದಕ್ಕೆ ಚರರೂಪಕ್ಕಿರುವಷ್ಟೂ ಮುಖಗಳುಂಟು. ಅದರಿಂದಲೇ ಧರ್ಮವು ವ್ಯಕ್ತಿಗಳಿಗೆ, ಕಾಲಗಳಿಗೆ, ದೇಶಗಳಿಗೆ ಬೇರೆಬೇರೆಯಾದರೂ, ಎಲ್ಲರಿಗೂ ಅನ್ವಯಿಸುವುದು. ಸಾಮಾನ್ಯರೂಪದಿಂದ ಸಾಧಾರಣವಾಗಿ ಎಲ್ಲರಿಗೂ ಅನ್ವಯಿಸಿದರೂ ವಿಶೇಷರೂಪದಿಂದ ಭಿನ್ನೈಸುವುದೇ ಅದರ ಸ್ವಭಾವ ಎಂದು ಅದಕ್ಕೆ ಗೌರವ. ಅನ್ನವು ಯಾರಿಗೆ ಬೇಡ ? ಹಾಗೆಂದು ಅದಕ್ಕೆ ಒಂದೇ ರೂಪವೇನು ? ಹಾಗೆ ಅನ್ನವು ಒಬ್ಬೊಬ್ಬರಿಗೆ ಒಂದೊಂದು ರೂಪವಾಗಿದ್ದರೂ ತಿಂದವರಿಗೆ ತೃಪ್ತಿಯನ್ನು ಕೊಡುವುದೆಂದು ಅದಕ್ಕೆ ಗೌರವ. ಅದು ಎಲ್ಲರಿಗೂ ಬೇಕಾಗಿರುವುದೂ ಅದೇ ಕಾರಣದಿಂದಲೇ. ಕೆಲವು ಪ್ರಾಣಿಗಳಿಗೆ ಮಾಂಸವು ಅನ್ನ, ಕೆಲವಕ್ಕೆ ಹುಲ್ಲು ಅನ್ನ ಕೆಲವರಿಗೆ ಗೋಧಿಯು ಅನ್ನ. ಇನ್ನು ಕೆಲವರಿಗೆ ಹಣ್ಣುಗಳು ಅನ್ನ. ಹೀಗೆ ರೂಪದಿಂದ ಬೇರೆಬೇರೆಯಾದರೂ ಎಲ್ಲರಿಗೂ ಅನ್ನವು ಒಂದೇ ಹೇಗೆಯೋ, ಹಾಗೆಯೇ ಧರ್ಮವು ಆಚಾರದಲ್ಲಿ ಬೇರೆಬೇರೆಯಾದರೂ ಮೇಲಕ್ಕೆ ಏರಲು ಬೇಕಾಗುವ ಏಣಿಯೆಂದು ಎಲ್ಲರಿಗೂ ಬೇಕಾಗುವುದು. ಹೀಗೆ ವ್ಯವಹಾರದಲ್ಲಿ ಕಾಣುವ ಸತ್ಯವು ಧರ್ಮದ ಅನುಷ್ಠಾನದಿಂದ ಕಾಣುವುದು.