ಪುಟ:Vimoochane.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೬೯

ನಾನು ಎಲ್ಲವನ್ನೂ ತೆಗೆದೆ. ಶ್ರೀಕಂಠ ಮಿತಿಮೀರಿ ಕುಡಿದ.

"ಶ್ರೀ ಚೀಯರ್ಸ್...ಸಾಧನಾ ಬೋಸ್‍ಗೆ, ಶಾರದಾ ದೇವಿಗೆ, ಮುನಿಸ್ವಾಮಪ್ನಿಗೆ....ಕೆಂಪು ಬಾವುಟಕ್ಕೆ...ಹಿಕ್..."

ಆ ದಿನ ಅವನು ವಾಪಸು ಹೋಗುವುದು ಸಾಧ್ಯವಿರಲಿಲ್ಲ. ನನ್ನ ಹಾಸಿಗೆಯನ್ನೆ ಎರಡು ಭಾಗಮಾಡಿ, ಮಂಚದ ಮೇಲೆ ಅವ ನನ್ನು ಮಲಗಿಸಿದೆ. ಮಗುವಿನಂತೆ ತೊದಲುತ್ತ ತೊದಲುತ್ತ ನಿದ್ದೆ ಹೋದ ಅವನನ್ನೆ ನೋಡುತ್ತ , ನನ್ನ ಹೃದಯ ಮುದುಡಿಕೊಂಡಿತು.

...ಆತ ಸುಖವಿಲ್ಲದ ಪ್ರಾಣಿ . ಹಣವಿತ್ತು - ಸಿರಿವಂತಿಕೆ ಯಿತ್ತು. ಸ್ಥಾನಮಾನಗಳಿದ್ದುವು. ಅದು ಜೀವನದ ಏಣಿಯಲ್ಲಿ ಮೇಲು ಭಾಗ. ಬಲು ಸುಲಭವಾಗಿ ಅದನ್ನವನು ತಲಪಿದ್ದ.

ನಾನು ಏಣಿಯ ಕೆಳ ಭಾಗದಿಂದ ಬಂದಿದ್ದೆ. ಅಲ್ಲಿ ಹಣವಿರ ಲಿಲ್ಲ- ಸಿರಿವಂತಿಕೆ ಇರಲಿಲ್ಲ. ಸ್ಥಾನಮಾನಗಳಿರಲಿಲ್ಲ. ಸುಖವೂ ಇರಲಿಲ್ಲ. ಜೀವನ ಅಲ್ಲಿ ಅಸಹ್ಯವಾಗಿತ್ತು.

ಆದರೆ ಈ ಮೇಲಿನ ಮಹಡಿಯಲ್ಲೂ ಜೀವನ ಅಸಹ್ಯ ವಾಗಿತ್ತಲ್ಲವೆ ?

ಇದು ಯಾಕೆ ಹೀಗೆ? ಹೀಗೆ ಯಾಕೆ?

ಹಾಗಾದರೆ ಸುಖವೆನ್ನುವುದು ಎಲ್ಲಿತ್ತು ? ಏಣಿಯ ಯಾವ ಹಂತದಲ್ಲಿತ್ತು ? ಸಮಾಜದಲ್ಲಿ ಯಾವನು ಸುಖವಾಗಿದ್ದ ಹಾಗಾದರೆ ?

....ಆ ಸುಖವೆನ್ನುವ ವಸ್ತು ಸಿಗುವುದು ಸಾಧ್ಯವೇ ಇಲ್ಲವೆ ? ನಡುವಿರುಳು ದಾಟಿಯೂ ಬಲು ಹೊತ್ತಾದ ಮೇಲೆ ನನಗೆ ನಿದ್ದೆ ಬಂತು.

ಬೆಳಿಗ್ಗೆ ಎದ್ದು ನಾನು ಬಾಗಿಲು ತೆರೆದಾಗ , ಶ್ರೀಕಂಠನ ಮನೆಯ ಹಿರಿಯ ಆಳು ಮಗ ಹೊರಗೆ ಕುಳಿತಿದ್ದ.

"ಏನೋ ?"

"ಅಮ್ಮಾವ್ರು ಕಳ್ಸವ್ರೆ. ಮೊಗೀಗೆ ಜರ . ಸಾಹೇಬ್ರು ಇದ್ರೆ ತಷ್ಣ ಕರ್ಕೊಂಬಾ ಅಂದ್ರು........"