ತನ್ನ ರವಿಮಂಡಲವನ್ನು ಅವನ ಕೈಯಲ್ಲಿ ಕೊಟ್ಟು ಆಕೆಯ ಚೂಡಾಮಣಿಯನ್ನು ತನಗೆ ತಂದುಕೊಡುವಂತೆ ಅಪ್ಪಣೆಮಾಡಿದನು. ವಾಯುಪುತ್ರನು ಮಹಾಪ್ರಸಾದವೆಂದು ಹೇಳಿ ಬಲಾಚ್ಯುತರ ಅಪ್ಪಣೆಯನ್ನು ಪಡೆದು ವಿಮಾನ ವನ್ನೇರಿ ಆಕಾಶಮಾರ್ಗದಲ್ಲಿ ಹೋಗುತ್ತ ಮಹೇ೦ದ್ರಾಚಲದ ಮಧ್ಯದಲ್ಲಿರುವ ಮಹೇಂದ್ರ ಪುರವನ್ನು ಕಂಡನು. ಅದು ತನ್ನ ಜನ್ಮಭೂಮಿಯೆಂದೂ, ತಾನು ತಾಯಿಯ ಗರ್ಭದಲ್ಲಿರುವಾಗ ಆಕೆಯ ಮೇಲೆ ಅತ್ತೆ ಮಾವಂದಿರು ಇಲ್ಲದ ದೋಷ ವನ್ನಿಟ್ಟು ಆಕೆಯನ್ನು ಹೊರಡಿಸಲು, ಆ ಪುರವನ್ನಾಳುತ್ತಿದ್ದ ತನ್ನ ಮುತ್ತಾತನ ಬಳಿಗೆ ಆಕೆಯು ರಕ್ಷಣೆಗಾಗಿ ಹೋದಳೆಂದೂ, ಆತನೂ ನಿರ್ದಯ ನಾಗಿ ಆಕೆಯನ್ನು ಕಳೆದನೆಂದೂ, ಈ ವಿಷಯಗಳನ್ನು ತನ್ನ ತಾಯಿಯು ತನ್ನೊಡನೆ ಹೇಳಿದ್ದುದು ಆ೦ಜನೇಯನ ನೆನಪಿಗೆ ಬಂದು ಬಹಳ ಸಿಟ್ಟನ್ನುಂಟುಮಾಡಿತು. ಕೂಡಲೆ ಅವನು ತನ್ನ ಸೇನೆಯೊಡನೆ ಆ ಪುರವನ್ನು ಸುತ್ತಿ ಮುತ್ತಲು ಮಹೇಂದ್ರನು ರೋಷಾವೇಶದಿಂದ ಬಂದು ಹನುಮನೊಡನೆ ಕಾದುತ್ತಿರುವಲ್ಲಿ ಹನುಮನು ಅವನ ಸೈನ್ಯವನ್ನು ನಾಶಮಾಡಿದನು. ಇದನ್ನು ಕಂಡು ಪ್ರಸನ್ನ ಕೀರ್ತಿಯು ಸಿಟ್ಟುಗೊಂಡು ಯುದ್ಧಕ್ಕೆ ಬರಲು ಶ್ರೀಶೈಲನು ಅವನನ್ನು ಸೆರೆಹಿಡಿದನು. ಇದನ್ನು ನೋಡಿ ಮಹೇಂದ್ರನು ಹನುಮನೊಡನೆ ಅಚಿಂತ್ಯ ಯುದ್ಧವನ್ನು ಮಾಡಲು ಹನುಮನು ಅವನನ್ನೂ ಹಿಡಿದು ತನ್ನ ಶಿಬಿರಕ್ಕೆ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕುಳ್ಳಿರಿಸಿ ಬಹಳ ವಿನಯದಿಂದ ನಮಸ್ಕರಿಸಿ ತಾನು ಮಹೇಂದ್ರನ ಮೊಮ್ಮಗನೆಂದೂ ಅ೦ಜನಾದೇವಿಗೂ ಪ್ರಭಂಜನನಿಗೂ ಹುಟ್ಟಿದ ಹನುಮನೆಂದೂ ತಿಳಿಸಲು ಆತನು ತನಗೆ ಇಂದ್ರ ಪದವಿ ದೊರೆತಷ್ಟು ಸಂತೋಷ ಚಿತ್ತನಾಗಿ ಹನುಮಂತನ ಶೌರವನ್ನೂ ಪರಾಕ್ರಮವನ್ನೂ ಮನೋಹರಾಕಾರವನ್ನೂ ಹೊಗಳಿ ಹಲವು ಬಗೆಯಾಗಿ ಅವನನ್ನು ಹರಸಿದನು. ಮಾರುತಿಯು ಆತನಿಗೆ ಕೈಮುಗಿದು ಬಾಲಕನ ತಪ್ಪನ್ನು ಕ್ಷಮಿಸಬೇಕೆಂದು ಬೇಡಿಕೊಂಡು ತಮ್ಮ ಕಪಿಧ್ವಜ ಕುಲಕ್ಕೆ ಪರಮೋಪಕಾರವನ್ನು ಮಾಡಿದ ರಘುವೀರನ ಆಜ್ಞೆಯ ಮೇರೆಗೆ ತಾನು ಲಂಕೆಗೆ ಹೋಗುತ್ತಿರುವೆನೆಂದೂ ತಾನು ಬರುವವರೆಗೂ ಮಹೇಂದ್ರಾದಿಗಳು ಕಿಷ್ಕಂಧ ಪುರಕ್ಕೆ ಹೋಗಿ ರಾಮಲಕ್ಷ್ಮಣರ ಸೇವೆಯನ್ನು ಮಾಡುತ್ತಿರುವು ದೆಂದೂ ನಿಯಮಿಸಿ ತಾನು ವಾಯುವೇಗದಿಂದ ದಕ್ಷಿಣಾಭಿಮುಖವಾಗಿ ಹೊರಟನು. ಮಹೇಂದ್ರನು ಪ್ರಸನ್ನ ಕೀರ್ತಿ ಮೊದಲಾದವರೊಡನೆ ಹನುಮರ ದ್ವೀಪಕ್ಕೆ ಹೋಗಿ ಹನುಮನರಮನೆಯನ್ನು ಹೊಕ್ಕು ಅ೦ಜನಾದೇವಿಯನ್ನು ಕಂಡು ಬಹಳ ಹರುಷಗೊಂಡನು. ತಾಯಿ ತಂದೆಗಳನ್ನೂ ಬಂಧುವರ್ಗವನ್ನೂ ನೋಡಿ ಅಂಜನಾ ದೇವಿಯೂ ಸಂತೋಷ ಚಿತ್ತಳಾದಳು, ತರುವಾಯ ಮ ಹೇ೦ದ್ರನೂ ಪ್ರಸನ್ನ ಕೀರ್ತಿಯೂ ಕಿಷ್ಕಂಧಪುರಕ್ಕೆ ಹೋಗಿ ಬಲನಾರಾಯಣರನ್ನು ಕಂಡು ಆಳ್ತನವನ್ನು ಕೈಕೊಂಡು ಕಪಿಧ್ವಜರೊಡನೆ ಕೂಡಿ ಸುಖದಿಂದಿದ್ದರು.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೧
ಗೋಚರ