ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



46

ಪ೦ಪರಾಮಾಯಣದ ಕಥೆ

ಇತ್ತ, ಆಂಜನೇಯನು ಹಾದಿಯಲ್ಲಿ ದಧಿಮುಖ ಪರ್ವತವನ್ನೂ ಆ ಪರ್ವತದ ಮೇಲೆ ಅಪ್ರತಿಮರಾದ ಚಾರಣರನ್ನೂ ಅವರ ಬಳಿಯಲ್ಲಿ ದಿವ್ಯ ಮಂತ್ರ ಗಳನ್ನು ಜಪಿಸುತ್ತಿದ್ದ ಬಹಳ ಚೆಲುವೆಯರಾದ ಮೂವರು ಕನ್ನೆಯರನ್ನೂ ಕಂಡನು. ಆಗ ಇವರನ್ನು ದಾರುಣವಾದ ದಾವಾನಲನು ಸುಡಲು ಯತ್ನಿಸಿ ದುದನ್ನು ಕಂಡು ಹನುಮಂತನು ಜಲವರ್ಷ ವಿದ್ಯೆಯಿಂದ ಅದನ್ನು ನಾಶಪಡಿಸಿ ಮುನಿಗಳ ಪಾದಾರವಿಂದವನ್ನು ಭಕ್ತಿಯಿಂದ ಪೂಜಿಸಿದನು. ಆ ಕನ್ನೆಯರು ಹನುಮಂತನ ಮಹೋಪಕಾರಕ್ಕಾಗಿ ಅವನನ್ನು ಸ್ತೋತ್ರ ಮಾಡಿ ಕೈ ಮುಗಿದು ಕೊಂಡು ನಿಂತಿರುವಲ್ಲಿ ಅವರು ಆ ಮಹಾಟವಿಯಲ್ಲಿರಲು ಕಾರಣವೇನೆಂದು ಆತನು ಕೇಳಿದನು. ಅದಕ್ಕೆ ತಾವು ದಧಿಮುಖ ನಗರದರಸಾದ ಗಂಧರ್ವನೆಂಬ ಖಚರಪತಿಯ ಮಕ್ಕಳೆಂದೂ, ಅನೇಕ ಮಂದಿ ವಿದ್ಯಾಧರರು ತಮ್ಮನ್ನು ಮದುವೆ ಮಾಡಿಕೊಡೆಂದು ಕೇಳಿದರೂ ತಮ್ಮ ತಂದೆಯು ತಮ್ಮನ್ನು ಯಾರಿಗೂ ಕೊಡದೆ ಇರುವಲ್ಲಿ ಅ೦ಗಾರವೇಗನೆಂಬ ವಿದ್ಯಾಧರನು ಕೇಳಲು ಅವನನ್ನೂ ಉದಾಸೀನ ಮಾಡಿ ಜಿನಭವನಕ್ಕೆ ಹೋಗಿ ತನ್ನ ಮಕ್ಕಳಿಗೆ ಅನುರೂಪನಾದ ವರನಾವ ನೆಂದು ಅಲ್ಲಿದ್ದ ಮಹಾಮುನಿಯನ್ನು ಕೇಳಿ ಉತ್ತರಶ್ರೇಣಿಗೆ ಪ್ರಧಾನವಾದ ಸಾಹಸ ಗತಿಯನ್ನು ಕೊಂದವನೇ ತನ್ನ ಮಕ್ಕಳಿಗೆ ಪತಿಯಾಗುವನೆಂದು ತಿಳಿದು ಸಂತೋಷ ಪಟ್ಟನೆಂದೂ, ತಾವು ಈ ಕಾಡಿನಲ್ಲಿ ಹನ್ನೆರಡು ವರುಷಗಳಿದ್ದು ಮನೋವೇಗ ವೆಂಬ ವಿದ್ಯೆಯನ್ನು ಸಾಧಿಸಿದೆವೆಂದೂ ಕಾಡುಕಿಚ್ಚಿನ ಕೇಡನ್ನು ತಮಗೆ ಆಗ ಒದವಿಸಿದವನು ತಮ್ಮನ್ನು ಪಡೆಯದೆ ಹೋದ ಅ೦ಗಾರವರ್ಮನೆಂದೂ ತಿಳಿಸಿ ದರು. ಹನುಮಂತನು ಸಾಹಸಗತಿಯನ್ನು ಕೊಂದ ರಾಘವನು ಕಿಷ್ಕಂಧಪುರದಲ್ಲಿರುವನೆಂದು ಹೇಳಿ ಮುಂದಕ್ಕೆ ಹೊರಟನು. ಗಂಧರ್ವನು ಸಿದ್ಧವಿದ್ಯೆಯ ರಾದ ತನ್ನ ಮಕ್ಕಳನ್ನು ಕಂಡು ಸಂತೋಷಪಟ್ಟು ಹನುಮಂತನು ಹೇಳಿದ ವೃತ್ತಾಂತವನ್ನು ಅವರಿಂದ ತಿಳಿದು ಅವರನ್ನೊಡಗೊಂಡು ಉಚಿತ ಪರಿವಾರ ದೊಡನೆ ಕಿಷ್ಕಂಧಕ್ಕೆ ಹೋಗಿ ಪ್ರಶಸ್ತ ದಿನದಲ್ಲಿ ಅವರನ್ನು ರಾಮನಿಗೆ ಮದುವೆ ಮಾಡಿಕೊಟ್ಟು ಬಲು ಹರುಷದಿಂದಿದ್ದನು.
ಇತ್ತ, ಹನುಮಂತನು ಲಂಕೆಯನ್ನು ಸೇರಿ ಪಟ್ಟಣದ ಹೊರಗಡೆ ಬೀಡನ್ನು ಬಿಟ್ಟು ಮರುದಿನ ಪುರವನ್ನು ಹೊಗಬೇಕೆಂದಿರುವಲ್ಲಿ ವಿದ್ಯಾತ್ಮಕವಾದ ಕೋಟೆಯು ಅಡ್ಡಿಯಾಗಲು ಕೋಪಾವಿಷ್ಟನಾಗಿ ದಿವ್ಯ ವಜ್ರಕವಚವನ್ನು ತೊಟ್ಟು ದೈವಿಕ ವಾದ ತನ್ನ ಗದಾಯುಧದಿಂದ ವಿದ್ಯಾ ಪ್ರಕಾರವನ್ನೊಡೆದು ದ್ವಾರಪಾಲಕನಾದ ವಜ್ರಮುಖನೆಂಬ ದನುಜನನ್ನು ಕೊಂದನು. ಇದನ್ನು ಕಂಡು ಆ ದನುಜನ ಮಗಳಾದ ಲಂಕಾಸುಂದರಿಯು ಕಡು ಮುಳಿದು ತನ್ನ ತಂದೆಯನ್ನು ಕೊಂದವನನ್ನು ಸಂಹರಿಸುವೆನೆಂದು ಬಂದು ಹನುಮಂತನನ್ನು ನೋಡಿ ಮೋಹಗೊಂಡು