ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೨೭


ಹೀಗೆ ಮಹಾದೇವಿ ಹಾಡಿದ ವಚನಗಳಿಗೆ ಲೆಕ್ಕವೇ ಇರಲಿಲ್ಲ. ಅಣ್ಣನ ಮಹಾ ಮನೆಯ ಬೆಳಕಾಗಿ ಓಡಾಡುತ್ತಿದ್ದಳು ; ಹಾಡುತ್ತಿದ್ದಳು ; ಶರಣರ ದಾಸೋಹದ ಸಂಭ್ರಮದಲ್ಲಿ ನೆರವಾಗುತ್ತಿದ್ದಳು. ಶರಣರ ಸಾಧನೆಯನ್ನೂ ಅವರ ಕಾರ್ಯಗಳನ್ನೂ ಮೆಚ್ಚಿ ವಚನಗಳನ್ನೂ ಹಾಡುಗಳನ್ನೂ ಬರೆಯುತ್ತಿದ್ದಳು.

ಆದರೆ ಅಲ್ಲಮನ ನೇತೃತ್ವದಲ್ಲಿ ಅವಳ ಸಾಧನೆ ಮುಂದುವರೆದಂತೆ, ಅವಳ ಮನಸ್ಸು ಹೆಚ್ಚು ಅಂತರ್ಮುಖವಾಗತೊಡಗಿತ್ತು. ಬರಬರುತ್ತಾ ಅಲ್ಲಮನೊಡನೆ ಆಧ್ಯಾತ್ಮದ ಅನುಸಂಧಾನ ಮತ್ತು ಸಾಧನೆ ಇವೇ ಅವಳ ಸರ್ವಸ್ವವಾಯಿತು. ಬಸವಣ್ಣನವರೊಡನೆ ಮತ್ತು ಶರಣೆಯರಾದ ಲಿಂಗಮ್ಮ, ಲಕ್ಕಮ್ಮ ಮತ್ತು ರಾಣಿ ಮಹಾದೇವಿ ಮೊದಲಾದವರೊಡನೆ ಆಗಾಗ ಅನುಭಾವಗೋಷ್ಠಿ, ಇದಲ್ಲದೆ ಇನ್ನೇನೂ ಅವಳಿಗೆ ಬೇಡವಾಯಿತು.

ಇದನ್ನು ಗಮನಿಸಿದ ನೀಲಾಂಬಿಕೆ, ಒಮ್ಮೆ ಬಸವಣ್ಣನೆದುರು ಆಡಿ ತೋರಿಸಿದಾಗ : ``ನಿಜ, ಅದು ಬಹುಕಾಲ ಜಿಜ್ಞಾಸೆ, ಚರ್ಚೆಗಳಲ್ಲಿ ಕಾಲ ಕಳೆಯುವ ಚೇತನವಲ್ಲ, ನೀಲಾ. ಅದಾವ ಪುಣ್ಯದಿಂದಲೋ ಇಷ್ಟು ಕಾಲ ಕಲ್ಯಾಣದಲ್ಲಿದೆ. ಕಣ್ಣು ಕೋರೈಸುವಂತಹ ಮಿಂಚಿನಂತಹ ಬೆಳಕು ಅದು. ಬಹಳ ಕಾಲ ಅದನ್ನು ನಾವು ಇಟ್ಟುಕೊಳ್ಳಲಾರೆವೆಂದು ತೋರುತ್ತದೆ ಎಂದಿದ್ದ ಬಸವಣ್ಣ. ಅದನ್ನು ಈಗ ನೆನಸಿಕೊಂಡಳು ನೀಲಮ್ಮ.

ಅಷ್ಟರಲ್ಲಿ ಮಹಾದೇವಿ ತನ್ನ ಆಲೋಚನಾಮಗ್ನವಾದ ಮನಸ್ಸಿನಿಂದ ಹೊರಗೆ ಬರುತ್ತಾ ಹೇಳಿದಳು :

``ಇನ್ನೂ ಎಷ್ಟು ದಿನ ಈ ವಚನರಚನೆಯ ಮಾತಿನ ಮಾಲೆಯನ್ನು ಪ್ರದರ್ಶಿಸುತ್ತಾ ಕಾಲ ಕಳೆಯುವುದು ಎಂದು ನನಗೆ ಅನ್ನಿಸುತ್ತದೆ, ತಾಯಿ.

``ನಿನ್ನ ಮಹೋನ್ನತವಾದ ಸಾಧನೆಗೆ ಇನ್ನು ಕಲ್ಯಾಣದ ಕಾರ್ಯಕ್ಷೇತ್ರ, ಕಿರಿದಾಗುವಂತೆ ಕಾಣುತ್ತಿದೆಯಲ್ಲವೇ, ಮಹಾದೇವಿ ? ಕೇಳಿದಳು ನೀಲಮ್ಮ.

``ಇಲ್ಲ... ಹಿರಿದು ಕಿರಿದೆಂಬ ಮಾತಿಲ್ಲ. ನಿಮ್ಮೆಲ್ಲರ ಕರುಣೆಯ ಕಂದ ನಾನು. ನನ್ನ ಮದುವೆಯನ್ನು ನೀವು ಮಾಡಿದ್ದೀರಿ. ಇನ್ನು ನನ್ನ ಸ್ಥಳ ಗಂಡನಮನೆಯಲ್ಲಿ ಎನಿಸುತ್ತಿದೆ. ಅಂದಮಾತ್ರಕ್ಕೆ ತೌರೂರಿನ ಕ್ಷೇತ್ರ ಕಿರಿದಾಯಿತೆಂದಲ್ಲ ; ಮಗಳ ಕೆಲಸ ತವರುಮನೆಯಲ್ಲಿ ಮುಗಿಯಿತು ಎಂದರ್ಥ. ಈ ಕಲ್ಯಾಣದ ತೌರೂರಿನಲ್ಲಿ ಹತ್ತಿದ ಆತ್ಮ ಜ್ಯೋತಿ ಮೇಲೇರಿ ಮಹಾಜ್ಯೋತಿಯೊಡನೆ ಲೀನವಾಗಲು ಬಯಸುತ್ತಿದೆ.