ಸ್ವಲ್ಪ ಹೊತ್ತಿನಲ್ಲಿ ಸರಪಳಿ ಹಾಕಿದ ಸೀಮೆ ನಾಯಿಯೊಡನೆ ಕುಳ್ಳಗಿನ,
ಮುದುಡಿದ ಎದೆಯ ವ್ಯಕ್ತಿಯೊಬ್ಬ ಬಂದ. ಎಣ್ಣೆ ನೀರು ಸೋ೦ಕಿಯೇ ಇಲ್ಲ
ವೇನೋ ಎನ್ನುವಂತಹ ಒರಟಾದ ತಲೆ ಕೂದಲು. ಪುಟ್ಟ ಮುಖದಲ್ಲಿ ಪುಟ್ಟ
ಬಾಯಿ. ನಾಲ್ಕಾರು ದಿನದಿಂದ ಬೆಳೆದಿದ್ದ ಕುರುಚಲು ಗಡ್ಡ. ಚಪ್ಪಲಿ
ಪಾಯಜಾಮ, ಶರಟು. ಯಾವುದೋ ದೊಡ್ಡವರ ಮನೆಯ ನಾಯಿಯನ್ನು
'ವಾಕಿಂಗ್' ಕರೆದೊಯ್ಯುತ್ತಿರುವ ಜವಾನ-ಎಂದು ಯಾರಾದರೂ ಭಾವಿಸುವ
ಹಾಗಿದ್ದ.
ಆದರೆ ಆತ ಬಂದೊಡನೆಯೇ ಲಾಕಪ್ಪಿನಲ್ಲಿದ್ದ ಏಳು ಜನರೂ ಎದ್ದು
ನಿಂತರು. ನೀರವತೆ, ವಿನಮ್ರತೆ, ಗೌರವ; ಆತ್ಮೀಯತೆಯ ಪಿಸುದನಿ. ಆತನೋ
ಮಿತಭಾಷಿ. ಚುಟುಕು ಪ್ರಶ್ನೆಗಳು-ಚುಟುಕು ನಿರ್ದೇಶ... ಪೋಲೀಸರೂ ಆತ
ನೆದುರು ಗೌರವದಿಂದ ಎದ್ದು ನಿಂತಿದ್ದರು. ಆತ ಯಾರಿರಬಹುದೆಂದು ಊಹಿಸು
ವುದು ನನಗೆ ಕಷ್ಟವಾಗಲಿಲ್ಲ. ಆ ನಾಯಕನನ್ನು ಕುರಿತು ನಾನು ಮಾಡಿದ್ದ
ಎಣಿಕೆ ತಪ್ಪಾಯಿತಲ್ಲಾ ಎಂದು ನಾಚುವಂತಾಯಿತು.
ಆತ ನನ್ನನ್ನೂ ಒಮ್ಮೆ ನೋಡಿದ. ಆದರೆ ವಿವರ ತಿಳಿದ ಬಳಿಕ 'ಹುಂ!'
ಎಂದನೇ ಹೊರತು, ನನ್ನ ವಿಷಯದಲ್ಲಿ ಆಸಕ್ತಿ ತೋರಲಿಲ್ಲ.
ಬಿಂದಿಗೆಯಲ್ಲಿ ನೀರು ಬಂತು. ಮೂತ್ರ ಶಂಕೆಗೆ ಕುಳಿತಿದ್ದ ಮೂಲೆಯಲ್ಲೆ
ಅವರು ಮುಖ ತೊಳೆದರು. ಹೋಟೆಲಿನಿಂದ ಹೇರಳವಾಗಿ ಬಂದ ತಿಂಡಿ ತಿಂದರು.
ಚಹಾ ಕುಡಿದರು. ಅವರ ಆಹ್ವಾನವನ್ನು ಸ್ವೀಕರಿಸಲೂ ಆಗದೆ, ನಿರಾಕರಿಸಲೂ
ಆಗದೆ, ಒಂದು ಕಪ್ ಚಹವನ್ನು ನಾನು ಕೈಗೆತ್ತಿಕೊಂಡೆ.
ಹೊರಟು ಹೋಗಿದ್ದ ನಾಯಕ ಬಿಸಿಲೇರಿದಾಗ ಮತ್ತೆ ಬಂದ. ಜಾಮೀ
ನಿನ ಮೇಲೆ ಅವರನ್ನೆಲ್ಲ ಬಿಡುಗಡೆ ಮಾಡಲು ಏರ್ಪಾಟಾಗಿತ್ತು
.
ಲಾಕಪ್ಪಿನಲ್ಲಿ ಕರಿಯ ಪೀಪಾಯಿ ಮತ್ತು ನಾನೂ-ಇಬ್ಬರೇ ಉಳಿದೆವು.
ಆಗ ಹೊರಗೆ ಕಾವಲಿದ್ದ ಪೋಲೀಸರವನು ಹೇಳಿದ:
“ಈ ನಾಯಕನ ಪ್ರತಾಪ ಏನ್ಹೇಳ್ತೀರಾ ಸ್ವಾಮಿ? ಕಾನೂನು ಕಸಕ್ಕೆ
ಸಮ ಟೋನಿ ಅಂತ್ಲೂ
ಆತನ್ನ ಕರೀತಾರೆ. ಫಿಲಿಪ್ ಅಂತೂ ಹೆಸರಿದೆ.
ಬೇರೆಯೂ ಏನೇನೋ ಹೆಸರು. ಸಾರಾಯಿ, ಗಡಿಯಾರ, ಪೆನ್ನು, ಬಂಗಾರ-
ಸ್ವಾಮಿ ಬಂಗಾರ-ಔಷಧಿ, ಅದೇನೇನೋ ಗೋವಾದಿಂದ ಈಚೆಗೆ
ಸಾಗಿಸ್ತಾನೆ, ಒಂದು ನೂರು ಜನರನ್ನ ಇಟ್ಕಂಡು ಸಾಕ್ತಾನೆ, ನಾಲ್ಕು
ದೋಣಿಗಳಿವೆ. ಒಂದು ಸ್ಟೀಮ್ ಲಾಂಚಿದೆ. ನೋಡೋಕೆ ನಮ್ಮ ಜನರ
ಹಾಗಿದಾನೆ. ಆದರೆ ಯಾವ ದೇಶದೋನೂಂತ ಹೇಳೋದೆ ಕಷ್ಟ. ಇವತ್ತು