ನೋಡುತ್ತಾ ಯಾವುದೋ ಒಂದು ವಚನವನ್ನು ಕಲಿಯುವುದರಲ್ಲಿ ತೊಡಗಿದ್ದ.
ಮಹಾದೇವಿ ಪ್ರವೇಶಿಸುತ್ತಾ :
``ನಾವು ತೊಂದರೆ ಕೊಡುತ್ತಿಲ್ಲವಷ್ಟೆ, ಮಹಾಸ್ವಾಮಿ ?
``ಇಲ್ಲವಮ್ಮ, ಇಲ್ಲ. ನಿಮ್ಮ ಆಗಮನವನ್ನೇ ನಿರೀಕ್ಷಿಸಿಕೊಂಡಿದ್ದೆವು
ಸಂಗಮದೇವರು ಹೇಳಿದರು.
ಮಹಾದೇವಿ ಕುಳಿತುಕೊಂಡಳು. ಅವಳ ಪಕ್ಕದಲ್ಲಿ, ಅದರ ಸ್ವಲ್ಪ ಹಿಂದೆ ರಸವಂತಿ ಕುಳಿತಳು. ಮಹಾದೇವಿ ಏಕನಾದದ ಜಂಗಮನತ್ತ ನೋಡುತ್ತಾ :
``ಯಾವುದು ಹೇಳುತ್ತಿದ್ದುದು ? ಸಂಗಮದೇವರು ಕೇಳಿದುದು ಕಿರಿಯ ಜಂಗಮನನ್ನು.
``ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ ಎಂಬ ವಚನ. ಅದು ಸ್ವಲ್ಪ ತಪ್ಪುತ್ತಿತ್ತು. ಅದನ್ನು ಕಲಿಯುತ್ತಿದ್ದೆ - ಹೇಳಿದ ಆತ.
``ತುಂಬಾ ಸುಂದರವಾದ ವಚನ. ಅದನ್ನೇ ಮೊದಲು ಹೇಳೋಣ. - ಸಂಗಮ ದೇವರು ಹೇಳಿದರು. ವಚನ ಪ್ರಾರಂಭವಾಯಿತು. ನಾಲ್ವರೂ ಒಟ್ಟಿಗೇ ಧ್ವನಿಯೆತ್ತಿದರು :
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ.
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ.
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲ ಸಂಗಮದೇವಾ.
ಏಕನಾದಕ್ಕೆ ಹೊಂದುವಂತೆ ಮತ್ತು ಅರ್ಥದ ಅಭಿವ್ಯಕ್ತಿಗೆ ಸಹಾಯವಾಗುವಂತೆ ಮಾತ್ರ ಅದಕ್ಕೆ ನಾದವನ್ನು ಜೋಡಿಸಲಾಗಿತ್ತು.
ಕೇಳುತ್ತಾ ಕೇಳುತ್ತಾ ಮಹಾದೇವಿಯ ಅಂತರಂಗ ತುಂಬಿಬಂದಿತು. ತನ್ನ ಅಂತರಂಗದ ಮೊರೆಯೇ ಅಣ್ಣನ ಬಾಯಿಂದ ಮೂಡಿಬಂದಂತೆ ತೋರುತ್ತಿತ್ತು ಮಹಾದೇವಿಗೆ.
ನಾಲ್ವರೂ ಒಟ್ಟಾಗಿ ಹೇಳುತ್ತಿದ್ದರು. ಧ್ವನಿಯ ಗಾಂಭೀರ್ಯವು ಅರ್ಥ ಗಾಂಭೀರ್ಯಕ್ಕೆ ಪರಿಪುಷ್ಟವಾಗಿ ಅರಮನೆಯ ಆ ಕೋಣೆಯನ್ನೇ ಪಾರ್ಥನಾ ಮಂದಿರದ ಗರ್ಭಗೃಹವನ್ನಾಗಿ ಮಾರ್ಪಡಿಸಿತ್ತು.
ವಚನ ಮುಗಿಯಿತು. ಆದರೆ ಅದು ನಿರ್ಗಮಿಸಿದ ವಾತಾವರಣದ ಪ್ರಭಾವ ಮುಗಿಯಲಿಲ್ಲ.