ಉಬ್ಬುತ್ತಿರುವ ನಿನ್ನ ಸ್ಥಿತಿಯನ್ನು ಸೂಚಿಸಿಕೊಂಡೆ. ನೋಡು, ಕಾಮಪ್ರಪಂಚದಲ್ಲಿ ಪೂರ್ವರಂಗಪ್ರಸಾದನವು ತಿರ್ಯಗ್ಜಂತುಗಳಲ್ಲಿ ಹೆಚ್ಚು. ಉತ್ತರರಂಗ ಪ್ರಸಾದನವು ದೇವತೆಗಳದು. ಪೂರ್ವೋತ್ತರಂಗಪ್ರಸಾದನವು ಮನುಷ್ಯ ಪ್ರಸ್ಥಾನವು. ನೀನು ಸಹಜವಾಗಿ ದೇವತೆಯಾದುದರಿಂದ ನಿನಗೆ ಉತ್ತರರಂಗ ಪ್ರಸಾದನವು ಪ್ರಿಯವೆಂದು ನಾನು ಅವಸರಿಸಿದೆ. ನೀನು ದೆವತೆಯಾದರೂ ನನಗಾಗಿ ಮಾನುಷಧರ್ಮವನ್ನು ಅನುಸರಿಸಿರುವೆಯೆಂಬುದನ್ನು ಪರ್ಯಾಯವಾಗಿ ಸೂಚಿಸಿ ಉಪಕಾರ ಮಾಡಿದೆ. ಹಾಗೂ ಆಗಲಿ.”
“ದೇವ, ಕಾಮವು ಮತ್ತೆಲ್ಲವನ್ನೂ ಮರೆಸುವ ವ್ಯಾಪಾರವು. ಅಲ್ಲಿಯೂ ತಾವು ತಿರ್ಯಗ್ದೇವಮಾನವ ಧರ್ಮಗಳನ್ನು ಮರೆಯದೆ ವ್ಯವಹರಿಸುವಿರಲ್ಲ ! ಈ ವಿಚಕ್ಷಣೆಯು ತಮ್ಮೊಬ್ಬರಿಗೇ ಸಾಧ್ಯ ! ಇದು ನಿಜವಾಗಿಯೂ ವಿಚಿತ್ರ !”
“ನೀನು ಹೇಳಿದುದು ಬಹಳ ಸರಿ. ಆದರೆ, ದೇವಿ, ಇದು ನನ್ನ ವಿಶೇಷ ಗುಣವಲ್ಲ. ಅಂದು ನಾವು ಸೇವಿಸಿದ ಚ್ಯವನಮಹರ್ಷಿಯ ವರಪ್ರಸಾದ. ಮಾನವರು ಸಹಜವಾಗಿ ರಜೋಗುಣದವರು. ರಜೋಗುಣವು ಉಬ್ಬುತಗ್ಗಿನ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಸತ್ಯವನ್ನು ಅಯಥಾ ಆಗಿ ತೋರಿಸುವುದು. ಹಾಗೆ ಅಯಥಾ ಆಗಿ ಕಂಡುಕಂಡುದನ್ನೆಲ್ಲ ಸತ್ಯವೆಂದು ಭ್ರಮಿಸಿ, ಮೋಹಗೊಂಡು, ತನ್ನನ್ನು ಕಿರಿದು ಮಾಡಿಕೊಂಡು ಒದ್ದಾಡುವುದೇ ಮಾನವ ಧರ್ಮವು. ಇದನ್ನು ಮೀರಿ ವಸ್ತುವಸ್ತುವಿಗೂ ಸ್ವಧರ್ಮವಿರುವುದೆಂದು ತಿಳಿದು, ಪರಸ್ಪರ ಅವಿರುದ್ಧವಾಗಿ, ಮೋಹವನ್ನು ತುಳಿದು ಸ್ಮೃತಿಯನ್ನು ಮೆರೆದು ವರ್ತಿಸುವುದೇ ಧರ್ಮಾರಾಧನವು. ಹಸುವಿಗೆ ಮಾಂಸವನ್ನೂ ಹುಲಿಗೆ ಹುಲ್ಲನ್ನೂ ಹಾಕಿದರೆ ಆದೀತೆ? ಸ್ತ್ರೀಯಾದರೇನು? ಪುರುಷನಾದರೇನು? ಎರಡೂ ಅಲ್ಲದ ಸಾಕ್ಷಿ ನಾನೆಂಬ ವೇದಾಂತ ಸಿದ್ಧಾಂತವು ನಿಜವಾದರೂ, ಕ್ಷೇತ್ರಧರ್ಮವಾದ ಕಾಮವಿಕಾರಕ್ಕೊಳಗಾಗಿ ವರ್ತಿಸಬೇಕಾದ ಈ ಕಾಲದಲ್ಲಿ ಆ ಸಿದ್ಧಾಂತವನ್ನು ಅವಲಂಬಿಸಲಾದೀತೆ? ಮಿಕ್ಕೆಡೆಯಲ್ಲಿ ನಾಯಕನು ನಾನು. ಇಲ್ಲಿ ನೀನು ನಾಯಕಿಯು. ನೋಡು ನವಿಲು ಕೂಡ ನಲ್ಲೆಯು ಕಾಣುವಂತೆ ನರ್ತಿಸಿ ಪ್ರಕೃತ್ಯಾರಮಣಾನುಕೂಲಳಾದ ಸಹಚರಿಯನ್ನು ಒಲಿಸಿಕೊಳ್ಳುವುದು. ಅಲ್ಲವೆ? ನಾನೂ ಹಾಗೆಯೇ ಮಾಡುವೆನು. ವೈಣಿಕನ ಉಪಧರ್ಮವನ್ನು ಸಹಿಸಿಕೊಂಡು ಮೃದು ಮಧುರವಾಗಿ ನುಡಿಯುವ ವೀಣೆಯಂತೆ ನೀನೂ ನನ್ನ ಉಪಮರ್ದದಿಂದ ಉಪಚಿತರಸಳಾಗಿ ಸುಪ್ರೀತಳಾಗಿ ನನ್ನನ್ನು ಸಂಪ್ರೀತಿಗೊಳಿಸು.”
ಹೀಗೆಯೇ ದಂಪತಿಗಳು ಮನೋವಾಕ್ಕಾಯಗಳಿಂದ ಒಬ್ಬರನ್ನೊಬ್ಬರು