ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-1-Part-1.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜರ್ಸಿ ಹೋರಿಯನ್ನೋ ಇಲ್ಲವೇ ಇದರ ಅದಲುಬದಲನ್ನೋ ಫಲೀಕರಿಸುವುದು, ಒಂದೇ ತಳಿಯಲ್ಲಿ ಅಡ್ಡತಳಿಯಬ್ಬಿಸುವ ಉದಾಹರಣೆ. ಹೆಣ್ಣು ಕುದುರೆಯೊಂದಿಗೆ ಗಂಡು ಕತ್ತೆಯನ್ನು ಕೂಡಿಸಿದರೆ ಬೇರೆ ಬೇರೆ ಜಾತಿ ಪ್ರಾಣಿಗಳಿಂದ ಅಡ್ಡತಳಿ ಎಬ್ಬಿಸಿದಂತೆ ಆಗುವುದು. ಗಂಡು ಕತ್ತೆ ಹೆಣ್ಣು ಕುದುರೆಯೊಂದಿಗೆ ಕೂಡಿದ ಮೇಲೆ ಹೇಸರಕತ್ತೆ ಹುಟ್ಟುತ್ತದೆ. ಹೆಣ್ಣುಕತ್ತೆಯೊಂದಿಗೆ ಗಂಡು ಕುದುರೆ ಕೂಡಿದರೆ ಹುಟ್ಟುವೂದೂ ಹೇಸರ ಕತ್ತೆಯೇ (ಹಿನ್ನಿ). ಗಂಡು ಕಾಡುಕೋಣ ಸಾಕಿದ ಹಸುವನ್ನು ಕೂಡಿದರೆ ಕೋಣಸು (ಕ್ಯಾಟೆಲ್ಲೊ) ಹುಟ್ಟುವುದು. ಹೀಗೆ ಪಟ್ಟೆಕುದುರೆಯೂ (ಜ಼ೀಬ್ರ) ಕುದುರೆಯೂ ಸೇರಿದರೆ ಪಟ್ಟೆಕುದುರೆತರ (ಜ಼ೀಬ್ರಾಯಿಡ್) ಆಗುತ್ತದೆ. ದನಗಳ, ಚಮರೀ ಮೃಗಗಳ ನಡುವೆ ಹುಟ್ಟುವ ಪ್ರಾಣಿ ದನಚಮರೀ (ಪಿಯೆನ್ ನಿಯೂ). ಬೇರೆ ಬೇರೆ ಜಾತಿಗಳಿಗಿಂತಲೂ ತಳಿಗಳ ನಡುವಣ ಅಡ್ಡತಳಿಯೆಬ್ಬಿಕೆಯೇ ಹೆಚ್ಚು ಬಳಕೆಯಲ್ಲಿದೆ. ಅಡ್ಡತಳಿಯೆಬ್ಬಿಸುವ ವಿಧಾನಗಳಲ್ಲಿ ಮುಖ್ಯವಾದವು ಮೂರು : ೧ ಶುದ್ಧ ತಳಿಯ ಹೆಣ್ಣಿನೊಂದಿಗೆ ಅದೇ ತಳಿಯ ಇನ್ನೊಂದು ಶುದ್ಧ ತಳಿಯ ಗಂಡನ್ನು ಕೂಡಿಸುವುದು; ೨ ಅಡ್ಡತಳಿಯಲ್ಲಿ ಹುಟ್ಟಿದವುಗಳ ಮೇಲೆ ಒಂದಾದ ಮೇಲೊಂದರಂತೆ ಎರಡು ಶುದ್ಧ ತಳಿಯ ಜೀವಿಗಳ ನಡುವೆ ಅಡ್ಡ ತಳಿಯೆಬ್ಬಿಸುವುದು; ೩ ಎರಡಕ್ಕೂ ಹೆಚ್ಚಿನ ಶುದ್ಧತಳಿ ಜೀವಿಗಳನ್ನು ಸರದಿಯಲ್ಲಿ ಅವುಗಳ ಅಡ್ದ ತಳಿಯ ಪೀಳಿಗೆಯೊಂದಿಗೆ ಕೂಡಿಸುವ, ಸರದಿಯ ಅಡ್ಡತಳಿಯೆಬ್ಬಿಕೆ. ಅಡ್ಡತಳಿಯೆಬ್ಬಿಸುವುದು ಪಶುಪಾಲಕರಲ್ಲಿ ಸಾಮಾನ್ಯ. ಇದರಿಂದ ಒಂದೇ ಮಂದೆಯಲ್ಲಿರುವ ಸಾಕುಪ್ರಾಣಿಗಳ ನಡುವೆ ಸಂತಾನೋತ್ಪತ್ತಿ ಜರುಗಿಸುವ ಬದಲಿಗೆ ಹೊಸ ತಳಿಗಳನ್ನು (ಜೀನ್ಸ್) ಬಳಸುವುದು. ಇದರಿಂದ ವಿಶೇಷ ಲಕ್ಷಣಗಳುಳ್ಳ ಹೊಸ ತಳಿಗಳನ್ನು ಪಡೆಯಬಹುದು. ಸಂಕರದ (ಹೈಬ್ರಿಡ್) ಫಲವನ್ನೂ ಪಡೆಯಬಹುದು. ಇಂತಹ ಅಡ್ಡತಳಿಯೆಬ್ಬಿಸುವ ವಿಧಾನದ ಮೂಲಕ ಉತ್ತಮ ಸಾಕುಪ್ರಾಣಿ ಅಥವಾ ಸಸ್ಯಗಳನ್ನು ಪಡೆಯುವುದರಿಂದ ಆರ್ಥಿಕವಾಗಿ ಲಾಭದಾಯಕ. ಹೈನಿನ ದನ, ಮಾಂಸದ ದನ, ಕುರಿಗಳು, ಹಂದಿ, ಕೋಳಿ, ಬಾತುಗಳೇ ಮೊದಲಾದ ಜೀವಿಗಳಲ್ಲಿ ಅಡ್ಡ ತಳಿ ವಿಧಾನದಿಂದ ಅನೇಕ ಸಂಕರ/ಮಿಶ್ರ ತಳಿಗಳನ್ನು ಪಡೆಯಲಾಗಿದೆ. ಹೈನಿನ ದನಗಳಲ್ಲಿ ಅಡ್ಡತಳಿಯವು ಬೇಗನೆ ಬೆದೆಗೆ ಬರುತ್ತವೆ. ಹಾಲು ಹೆಚ್ಚಿಗೆ ನೀಡುತ್ತವೆ. ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚು. ಅವುಗಳ ಶುದ್ಧತಳಿಯವು ಮೂಲ ಸಂತಾನದವಕ್ಕಿಂತಲೂ ಕ್ರಮ ತಪ್ಪದೆ ಈಲಾಗುತ್ತದೆ. ಮಾಂಸದ ದನಗಳಲ್ಲಿ, ಅಡ್ಡತಳಿ ಯವು ಅವುಗಳದೇ ಶುದ್ಧತಳಿಗಿಂತಲೂ ಗುಣಮಟ್ಟದ ಮಾಂಸವನ್ನು ರೂಪಿಸುತ್ತವೆ. ಕರುಗಳು, ಹಾಲು ಬಿಡಿಸುವ ಹೊತ್ತಿಗೆ ಬಲು ಚೆನ್ನಾಗಿ ಬೆಳೆದಿರುವುವಲ್ಲದೆ, ಬೇಗನೆ ಮೈಗೂಡುತ್ತವೆ. ಮುಂಡದ ತೂಕ ಹೆಚ್ಚು. ಹದವಾಗುವ ಅಟ್ಟೆ ಭರ್ಜರಿ. ಹಾಗೇ ಕುರಿಗಳಲ್ಲೂ ಶುದ್ಧತಳಿಗಿಂತಲೂ ಅಡ್ಡತಳಿಯವೇ ತೂಕವಾದ ಮರಿಗಳನ್ನು ಹಾಕುತ್ತವೆ. ಬೆಳೆವಣಿಗೆಯೂ ಶೀಘ್ರಗತಿಯಲ್ಲಾಗಬಹುದು. ಕೋಳಿ, ಬಾತುಗಳಲ್ಲಿ ಕೂಡ ಅಡ್ಡತಳಿ ಯವೇ ಚೆನ್ನಾಗಿ ತಿಂದು ಬೇಗನೆ ಬೆಳೆಯುತ್ತ ತೂಕದ ಮೊಟ್ಟೆಗಳನ್ನು ಹೆಚ್ಚಾಗಿ ಕೊಡುವುವಲ್ಲದೆ, ಮರಣಪ್ರಮಾಣವೂ ಕಡಿಮೆಯಾಗುವುದು. ಅಡ್ಡತಳಿ ಹಂದಿಗಳು ಒಂದೊಂದು ಸೂಲಿಗೂ ಹೆಚ್ಚು ಮರಿಗಳನ್ನು ಹಾಕುತ್ತವೆ. ಮರಿಗಳು ಹುಟ್ಟುವಾಗಲೇ ಸಾಯುವುದು ಕಡಿಮೆ. ಹಾಲು ಬಿಡಿಸುವ ಹೊತ್ತಿಗೆ ಹೆಚ್ಚಿನ ಸಂಖ್ಯೆಯ ಮರಿಗಳು ಬದುಕುಳಿದಿರುತ್ತವೆ. ಕತ್ತೆ, ಕುದುರೆಗಳಿಗಿಂತಲೂ ಹೇಸರಕತ್ತೆಗಳು ಇನ್ನಷ್ಟು ಗಟ್ಟಿಮುಟ್ಟಾಗಿ, ಹೆಚ್ಚು ಚುರುಕು ಬುದ್ಧಿಯವಾಗಿ, ಬಹುಕಾಲ ಬದುಕಿರುತ್ತವೆ. ಶುದ್ಧತಳಿಗಳಿಗೂ ಅಡ್ಡತಳಿಗಳೇ ಮೂಲತಳಿ. ಕಳೆದ ಕೆಲವು ದಶಕಗಳಿಂದಲೂ ಹಲವಾರು ಹೊಸ ತಳಿಗಳು ಬೆಳೆದುಬಂದಿವೆ. ಆಮೇಲೆ ಬೇಕಾದುವುಗಳ ಆಯ್ಕೆ, ಒಳತಳಿಯ ಆಯ್ಕೆ ಹೀಗೇ ಹೋಗುತ್ತದೆ. ಬೆಳೆಸಿದ ಕೆಲವು ಮುಖ್ಯ ತಳಿಗಳನ್ನೂ ಮೂಲತಳಿಗಳಾಗಿ ಬಳಕೆಯಲ್ಲಿರುವ ಅಚ್ಚತಳಿಗಳನ್ನೂ ಇಲ್ಲಿ ಹೆಸರಿಸಿದೆ. (ಎಸ್.ಕೆ.ಜಿ.) ಅಡ್ರಿನಲ್ ಗ್ರಂಥಿಗಳ ರೋಗಗಳು : ಇವನ್ನು ಕುಸುರಿಯವೆಂದೂ (ಮೆಡುಲ್ಲ) ರಗಟೆಯವೆಂದೂ (ಕಾರ್ಟೆಕ್ಸ್) ವಿಂಗಡಿಸಬಹುದು. ಕುಸುರಿಯಲ್ಲಿ ಏಳುವ ರೋಗಕ್ಕೆ, ಒಂದು ಗಂತಿ (ಮಬ್ಬಣ ಕಣಗಂತಿ, ಫ್ಯಾಗ್ರೆಮೋಸಿಟೋಮ) ಕಾರಣ. ಆಗ ಈ ಗಂತಿಯಿಂದ ಅಡ್ರಿಲೀನ್, ನಾರಡ್ರಿನಲೀನ್ ವಿಪರೀತ ಸುರಿವುದ ರಿಂದ, ಕೈಕಾಲುಗಳು ತಣ್ಣಗೆ ನೀಲಿಗಟ್ಟಿ, ಆಗಿಂದಾಗ್ಗೆ ರಕ್ತದ ಒತ್ತಡದೇರಿಕೆ, ಎದೆಯಲ್ಲಿನ ಗುಂಡಿಗೆಯ ಡವಡವಿಕೆ, ಬೆವರಿಕೆ, ಚಿಟ್ಟಾಗುವ ತಲೆನೋವುಗಳು, ಕಳವಳ, ಓಕರಿಕೆ, ವಾಂತಿ ಆಗುತ್ತವೆ. ಗಂತಿಯನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕುವುದೇ ವಾಸಿಮಾಡುವ ಉಪಾಯ. ಅಡ್ರಿನಲ್ ಗ್ರಂಥಿಯ ರಗಟೆಯ ರೋಗವನ್ನು ಅದರ ನಿಜಗೆಲಸ ಏರುಪೇರಾದಂತೆ ವಿಂಗಡಿಸಬಹುದು: ಅತಿಗೆಲಸ, ಕೆಲಸಗೊರೆ. ಈ ಎರಡನೆಯದಕ್ಕೆ ಅಡಿಸನ್ನನ ರೋಗ (ನೋಡಿ- ಅಡಿಸನ್ನನ-ರೋಗ) ಎಂಬ ಹೆಸರಿದೆ. ಅಡ್ರಿನಲ್ ರಗಟೆಯ ಅತಿಗೆಲಸ ಹುಟ್ಟುತ್ತಲೇ ಬಂದಿರಬಹುದು, ಆಮೇಲೆ ಗಳಿಸಿದ್ದಾಗಿರ ಬಹುದು. ಹುಟ್ಟುತ್ತಾ ಬಂದಿದ್ದು ಇಕ್ಕೆಡೆಯಲ್ಲೂ ಮಲೆತವಾಗಿ (ಹೈಪರ್‍ಟ್ರೊಫಿ) ಹಿರಿದಾಗಿರಬಹುದು. ಗಳಿಸಿದ್ದಾದರೆ ಗಂತಿಯಿಂದಲೂ ಆಗಿರಬಹುದು. ಹೆಣ್ಣುಕೂಸಿನಲ್ಲಿ ಹುಟ್ಟುತ್ತಲೇ ಹಿರಿದಾಗಿದ್ದರೆ, ಮೈಮೇಲೆಲ್ಲ ಕೂದಲು ಬೆಳೆದು, ಮುಟ್ಟು ನಿಂತು, ಗಂಡಿನ ಲಕ್ಷಣಗಳೊಂದಿಗೆ ಹುಸಿಯಿರ್ಲಿಂಗಿತನ (ಸ್ಯೂಡೊ ಹರ್ಮಫ್ರೊಡಿಟಿಸಮ್) ಕಾಣಿಸಿ ಕೊಳ್ಳುತ್ತದೆ. ಗಂಡುಕೂಸಿನಲ್ಲಿ ಜನನಾಂಗಗಳ ಮುನ್ನೆರತ (ಪ್ರಿಕಾಸಿಟಿ) ಕಾಣುವುದು. ಸಂತಾನಬಲ ಕಳೆದು ಬೊಜ್ಜು ಮೈ ಬರುವುದು. ಇಬ್ಬರಲ್ಲೂ ಗಂಡುತನದೊಂದಿಗೆ, ಮೈಯಿಂದ ಉಪ್ಪು ಕಳೆವ ಲಕ್ಷಣ ಕೂಟವೂ (ಸಿಂಡ್ರೋಮ್) ಕಾಣಬರುತ್ತದೆ. ಗಳಿಸಿದ ಅಡ್ರಿನಲ್ ರಗಟೆಯ ಅತಿಗೆಲಸಕ್ಕೆ ಮೆಲುಪಿನ (ಬಿನೈನ್) ಇಲ್ಲವೇ ವಿಷಮ (ಮ್ಯಾಲಿಗ್ನೆಂಟ್) ಅಡ್ರಿನಲ್ ಗಂತಿಯೋ, ಅಡ್ರಿನಲ್ ಗ್ರಂಥಿಯ ಮಲೆತವೋ ಕಾರಣವಾಗಿರಬಹುದು. ಗಂತಿಯಾಗದ ಅಡ್ರಿನಲ್ ಗ್ರಂಥಿ ಅತಿಗೆಲಸದಲ್ಲಿ ಗ್ರಂಥಿಗಳು ಹಿರಿದಾಗದೆ ಇರುವುದು ಅಪರೂಪವಲ್ಲ. ಅಂಥದಕ್ಕೆ ತೆಮಡಿಕ ಗ್ರಂಥಿಯಲ್ಲಿ (ಪಿಟ್ಯೂಟರಿ ಗ್ಲಾಂಡ್) ಏಳುವ ಗಂತಿ ಕಾರಣ. ಅಡ್ರಿನಲ್ ರಗಟೆಯ ಗಳಿಸಿದ ಅತಿಗೆಲಸ ಕಷಿಂಗನ ಲಕ್ಷಣಕೂಟವಾಗೋ ಅಡ್ರಿನಲ್ ಜನನಾಂಗದ (ಅಡ್ರಿನೊಜೆನಿಟಲ್) ಲಕ್ಷಣಕೂಟವಾಗೋ ಇವೆರಡೂ ಇದ್ದೋ ತೋರಿ ಬರುತ್ತದೆ. ಕಷಿಂಗನ ಲಕ್ಷಣಕೂಟದಲ್ಲಿ ಹೆಗ್ಗುರುತುಗಳಾಗಿ ಬೊಜ್ಜುತನ, ಎಲುತೂತುಗಳಾಗಿ (ಅಸ್ಟಿಯೂಪೊರೊಸಿಸ್), ಚರ್ಮ ತೆಳುಕಲಾಗಿ ಸುಲಭವಾಗಿ ಬಿರಿಯುವುದರಿಂದ ಊದಾ ಬಣ್ಣದ ಪಟ್ಟೆಗಳು, ಸಿಹಿಮೂತ್ರ, ಮೊಗ ಹೊಟ್ಟೆ ಕಾಲುಗಳ ಕೆಂಪೇರಿಕೆ, ನಿತ್ರಾಣ, ಹಲವೇಳೆ ಮನೋಬೇನೆಗಳೂ ಇರಬಹುದು. ಹೆಣ್ಣಿನಲ್ಲಿ ಗಂಡಿನ ಲಕ್ಷಣಗಳು ಕಾಣುವುದೂ ಎಳೆಯವರಲ್ಲಿ ಜನನಾಂಗದ ಮುನ್ನೆರತವೂ ವಯಸ್ಕನಲ್ಲಿ ಹಲಮಟ್ಟದ ಪುಂಸ್ತ್ವ ಕಳೆವುದೇ ಅಡ್ರಿನಲ್ ಜನನಾಂಗದ ಲಕ್ಷಣ ಕೂಟ ಎನಿಸಿಕೊಳ್ಳುತ್ತದೆ. ಶಸ್ತ್ರಕ್ರಿಯೆಯಿಂದ ತೆಗೆವುದೇ ಅಡ್ರಿನಲ್ ಗಂತಿಯ ಚಿಕಿತ್ಸೆ. ಹುಟ್ಟುತ್ತಬಂದ ಮಲೆತಕ್ಕೆ ಕೊನೆಯ ತನಕವೂ ಕಾರ್ಟಿಸೋನ್ ಇಲ್ಲವೇ ಅದರಂಥ ಕೃತಕ ಸಮಗೂಲಿಗಳನ್ನು (ಅನಲೋಗ್) ಕೊಡುವುದೇ ಚಿಕಿತ್ಸೆ. ಮೈಯಿಂದ ಉಪ್ಪು ಕಳೆದು ಹೋಗುತ್ತಿದ್ದರೆ, ಉಪ್ಪನ್ನು ಉಳಿಸಿಕೊಳ್ಳುವ ಡಿಸಾಕ್ಸಿಕಾರ್ಟಿಕೊಸ್ಟಿರೋನನ್ನೂ ಕೊಡಬೇಕು. ಕಷಿಂಗನ ಲಕ್ಷಣಕೂಟದೊಂದಿಗಿನ ಗಂತಿಯಿಂದೇಳದೆ, ಗಳಿಸಿದ ಅಡ್ರಿನಲ್ ಅತಿಗೆಲಸಕ್ಕೆ ಬರುವ ಚಿಕಿತ್ಸೆಗಳಿವು: ತೆಮಡಿಕ ಗ್ರಂಥಿಯ ವಿಕಿರಣಿಡಿತ (ಇರ್ರೇಡಿಯೇಷನ್) ದೊಂದಿಗೆ, ಒಂದು ಅಡ್ರಿನಲ್ ಗ್ರಂಥಿ ತೆಗೆತ; ಆಡ್ರಿನಲ್ ಗ್ರಂಥಿಗಳಲ್ಲಿ ಬಲುಪಾಲು ತೆಗೆತ; ತೆಮಡಿಕದ ತೆಗೆತ; ಅಡ್ರಿನಲ್‍ಗಳನ್ನೋ ತೆಮಡಿಕ ಗ್ರಂಥಿಯನ್ನೋ ಪೂರ್ತಿ ತೆಗೆದರೆ, ಹಾಳುಮಾಡಿದರೆ, ಅಡ್ರಿನಲ್ ಚೋದನಿಕಗಳನ್ನು ಬದಲುಸೇವಿಕ ಚಿಕಿತ್ಸೆಯಾಗಿ ಕೊಡುತ್ತಿರಬೇಕು. ಮುಮ್ಮೊದಲ ಆಲ್ಡೊಸ್ಟಿರೋನ್ ವಿಷತೆ (ಪ್ರೈಮರಿ ಅಲ್ಡೊಸ್ಟಿರೋನಿಸಮ್). ಅಡ್ರಿನಲ್ ರಗಟೆಯ ಅತಿಗೆಲಸದ ಒಂದು ಬಗೆ. ಗಂತಿಯಾಗಿರುವುದೇ ಸಾಮಾನ್ಯ ಕಾರಣವಾದರೂ ಗಂತಿಯಿಲ್ಲದೆ ಕೂಡ ಅಲ್ಡೊಸ್ಟಿರೋನ್ ಅತಿಯಾಗಿ ಸುರಿಯಲೂಬಹುದು. ರಕ್ತದ ಏರಿದೊತ್ತಡ ರಕ್ತರಸಿಕೆಯಲ್ಲಿನ ಪೊಟ್ಯಾಸಿಯಂ ಇಳಿತ, ರಕ್ತದಲ್ಲಿನ ಇಂಗಾಲಾಮ್ಲದ ಏರಿಕೆ, ಮೂತ್ರಪಿಂಡ ಕೆಟ್ಟಿರುವ ಪುರಾವೆಗಳು, ಮೂತ್ರದಲ್ಲಿ ಹೆಚ್ಚಾಗಿ ಪೊಟ್ಯಾಸಿಯಂ ಕಳೆತ, ಮೂತ್ರದಲ್ಲಿ ಬಹುವಾಗಿ ಆಲ್ಡೊಸ್ಟಿರೋನ್ ಹೆಚ್ಚು ಕಳೆತವೂ ಅಂಥ ಲಕ್ಷಣಕೂಟದಲ್ಲಿ ಇರುತ್ತವೆ. ಹಲವೇಳೆ ಎಡೆಸೆಳೆವು (ಟಿಟ್ಯನಿ). ಸ್ನಾಯು ನಿತ್ರಾಣ, ಹೇರಳವಾಗಿ ಮೂತ್ರ ಸುರಿತವೂ ರೋಗಿಯಲ್ಲಿ ಕಂಡುಬರುತ್ತದೆ. ಅಡ್ರಿನಲ್ ಗ್ರಂಥಿ ತೆಗೆದುಹಾಕಿದರೆ ರೋಗ ಲಕ್ಷಣಗಳು ಇಲ್ಲವಾಗುತ್ತವೆ. (ನೋಡಿ- ಕಷಿಂಗ್, ಹಾರ್ವೆ) (ಡಿ.ಎಸ್.ಎಸ್.) ಅಡ್ರಿನಲ್ ಗ್ರಂಥಿಗಳು : ಹೊಟ್ಟೆಯಲ್ಲಿ ಬೆನ್ನಿಗಂಟಿಕೊಂಡಿರುವ ಎರಡು ಮೂತ್ರಪಿಂಡಗಳ ಮೇಲೂ ಕುಲಾವಿಗಳಂತಿರುವ ಇವೆರಡು ಸಣ್ಣ ಗ್ರಂಥಿಗಳಿಗೂ ಮೂತ್ರಪಿಂಡ ಮೇಲಣ (ಅಡ್ರಿನಲ್) ಗ್ರಂಥಿಗಳೆಂದು ಹೆಸರಿದೆ. ನೇರವಾಗಿ ರಕ್ತದೊಳಕ್ಕೆ ಒಳಸುರಿವ, ನಾಳವಿರದ ಗ್ರಂಥಿಗಳಿವು. ಬಲಗಡೆಯದು ಮುಕ್ಕೋನಾಕಾರದಲ್ಲೂ ಎಡಗಡೆಯದು ಅರೆಚಂದ್ರಾಕಾರದಲ್ಲೂ ಇವೆ. ಅನುವೇದನ (ಸಿಂಪತೆಟಿಕ್) ನರದ ಮಂಡಲದ ಅಲ್ಲದೆ ರಕ್ತನಾಳಗಳ ಸಂಬಂಧ ಇವೆರಡಕ್ಕೂ ಧಾರಾಳವಾಗಿದೆ. ಒಂದೊಂದು ಗ್ರಂಥಿಯಲ್ಲೂ ಎರಡು ಬೇರೆ ಬೇರೆ ಭಾಗಗಳಿವೆ: ಕವಚದಂಥ ರಗಟೆ; ತಿರುಳಿನಂಥ ಕುಸುರಿ (ಮೆಡುಲ್ಲ). ರಗಟೆಯ ಭಾಗವೇ ಹೆಚ್ಚು ದಪ್ಪ. ಮೂರು ವಲಯಗಳಲ್ಲಿ ಜೀವಕಣಗಳೂ ಕಂಬಗಳಂತೆ ಜೋಡಣೆಯಾಗಿವೆ. ಜೀವಿಗೆ ಬೇಕೇಬೇಕಿರುವ ಬಸಿರಣಿಕಕ್ಕೆ (ಪ್ರೊಜಿಸ್ಟಿರೋನ್) ಸಂಬಂಧಿ ಸಿದ ಸ್ಟಿರಾಯ್ಡ್‍ಗಳು ಎನಿಸಿಕೊಂಡಿರುವ, ಹಲವಾರು ಚೋದನಿಕಗಳು (ಹಾರ್ಮೋನ್ಸ್) ಇಲ್ಲಿ ತಯಾರಾಗುತ್ತವೆ. ನರಗಳ ಸಂಬಂಧದಿಂದ ಬಂದ ಜೀವಕಣಗಳಿರುವ ಕುಸುರಿನಲ್ಲಿ ಬಹುವಾಗಿ ಅಡ್ರಿನಲೀನೂ ಸ್ವಲ್ಪ ನಾರಡ್ರಿನಲೀನೂ ತಯಾರಾಗುತ್ತವೆ. ಸಾರಕದ ತಯಾರಿಕೆ : ಪ್ರಾಣಿಗಳಿಂದ ತಂದ ಹಿಮಗಟ್ಟಿಸಿದ ಅಡ್ರಿನಲ್ ಗ್ರಂಥಿಗಳನ್ನು ನುಣ್ಣಗೆ ಕತ್ತರಿಸಿ, ತಣ್ಣನೆಯ ಮದ್ಯಸಾರದಲ್ಲಿ ಸಾರವಿಳಿಸುವುದರಿಂದ, ಇದರ ಸಾರಕ ತಯಾರಾಗುತ್ತದೆ. ಗ್ರಂಥಿಯಲ್ಲಿನ ನೀರು ಮದ್ಯಸಾರದಲ್ಲಿ ಸೇರಿಕೊಂಡು ರಗಟೆಯ