ಮುಳ್ಳುಗಳು / ಪ್ರಶ್ನೆ
ಏನೂ ಎದ್ದು ಕಾಣಲಿಲ್ಲ. ಬಹಳ ಬೇಸರವೆನಿಸಿ ಹೊದ್ದುಕೊಂಡಿದ್ದ ರಗ್ಗನ್ನು ಆಕೆ
ಜೋರಾಗಿ ಒದ್ದು ದೂರ ಸರಿಸಿದಳು.
ಎಲ್ಲಿಯೋ ಹನ್ನೆರಡು ಗಂಟೆ ಬಡಿದ ಸದ್ದು ಕೇಳಿಸಿತು. ಕಿಡಿಕಿಯಲ್ಲಿಂದ
ಹೊರಗೆ ಕತ್ತಲು ತುಂಬಿದ ದೂರದ ಆಕಾಶವನ್ನೆ ದಿಟ್ಟಿಸುತ್ತಿದ್ದಂತೆ ಮತ್ತೆ ಅವಳಿಗೆ
ಸಂಜೆ ನಡೆದದ್ದೆಲ್ಲ ನೆನಪಾಗಿ, ಎಂಥದೋ ಘೋರ ಅಪಮಾನವಾದಂತೆನಿಸಿ, ಎದೆ
ಕುದಿಯಿತು. ಕಿಡಿಕಿಯ ಕಬ್ಬಿಣದ ಸಲಾಕೆಗಳನ್ನು ಕಿತ್ತಿ, ಹೊರಗಿನ ಗೇಟಿನ ಚಿಲಕ
ಮುರಿದು, ರಸ್ತೆಯ ಮೇಲಿಂದ ಈ ಅಪರಾತ್ರಿ ಹಾರಿಹೋಗಿ, ಸೀದಾ ಅವನ ಮುಂದೆ
ಧುತ್ತೆಂದು ಇಳಿದು, ಅವನ ಎದೆ ಸೀಳಿ ರಕ್ತ ಕುಡಿಯಬೇಕು ಎನ್ನಿಸಿತು.
ಛೇ, ಇದು ರಾಕ್ಷಸೀವೃತ್ತಿ. ಹುಚ್ಚುತನದ ಪರಮಾವಧಿ. ಹಾಗಾದರೆ ಮತ್ತೇನು
ಮಾಡುವುದು ? ಸಂಜೆ ಅಷ್ಟೆಲ್ಲ ಬೊಗಳಿ ಕೆಟ್ಟ ಮುಖ ಮಾಡಿಕೊಂಡು ಆತ
ಹೊರಟುಹೋಗುತ್ತಿದ್ದಾಗ ಹಿಡಿದು ನಿಲ್ಲಿಸಿ ಕಪಾಳಿಗೆರಡು ಕೊಡಬೇಕಾಗಿತ್ತೆ ?
ಸುಮ್ಮನೆ ಅವನನ್ನು (ಎಂದಿನ ಹಾಗೆ) ಗಟ್ಟಿಯಾಗಿ ಎದೆಗೊತ್ತಿಕೊಂಡು ತನ್ನೊಳಗೆ
ಅಡಗಿಸಿಕೊಳ್ಳುವುದು, ಕರಗಿಸಿಬಿಡುವುದು ಸಾಧ್ಯವಿದ್ದಿದ್ದರೆ....
ಅಲ್ಲ, ತಾನೇಕೆ ಇಲ್ಲದ ದೊಡ್ಡಸ್ತನ ತೋರಿಸಲು ಹೋಗಿ, 'ನಿನ್ನ ಸುಖವೇ
ನನ್ನ ಸುಖ, ನನಗೆ ನಿನ್ನ ಮೇಲೆ ಸಿಟ್ಟಿಲ್ಲ' ಎಂದೆಲ್ಲ ಹೇಳಬೇಕಾಗಿತ್ತು ? ಎಷ್ಟರ
ಮಟ್ಟಿಗೆ ಪ್ರಾಮಾಣಿಕವಾದುದು ಆ ಮಾತು ? ತಾನು ದುಃಖದ ಮಡುವಿನಲ್ಲಿ
ಮುಳುಗೇಳುತ್ತಿದ್ದಾಗಲೂ ಆತ ಮಾತ್ರ ಸುಖಿಯಾಗಿರಲೆಂದು ಬಯಸಲು ತಾನೇನು
ಸಿನೆಮಾದಲ್ಲಿನ ಆದರ್ಶ ನಾಯಕಿಯೆ ?
ಅಲ್ಲ; ತಾನು ಮನುಷ್ಯಳು, ರಕ್ತ-ಮಾಂಸಗಳಿಂದ ತುಂಬಿದ ದೇಹವುಳ್ಳ,
ದ್ವೇಷ-ಕ್ರೋಧ-ಅಸೂಯೆ ಎಲ್ಲವನ್ನೊಳಗೊಂಡ ಮನಸ್ಸುಳ್ಳ ಮನುಷ್ಯಳು.
ಈಗಲೂ ಈ ರಾತ್ರಿ ಹನ್ನೆರಡರಲ್ಲಿ, ತನಗೆ ಅನಿಸುತ್ತಿಲ್ಲವೆ
ಮನಸ್ಸಿನಲ್ಲಿದ್ದುದನ್ನೆಲ್ಲಾ ಕಿರುಚಿಬಿಡಬೇಕು ಎಂದು ? ಅವನಿಗೆ ಕೇಳಿಸುವುದೇ ?
ತಿಳಿಯುವುದೇ ? 'ಶಶೀ, ನಿನ್ನ ಮನಸ್ಸಿನಲ್ಲಿದ್ದುದನ್ನೆಲ್ಲ ನೀನು ಹೇಳದೆಯೆ ನಾನು
ತಿಳಿದುಕೊಳ್ಳಬಲ್ಲೆ, ನಿನ್ನ ಕಣ್ಣುಗಳಲ್ಲಿ ಮಿಂಚುವ ಬೆಳಕಿನಲ್ಲಿ ನಿನ್ನ ಹೃದಯವನ್ನು
ಕಾಣಬಲ್ಲೆ'- ಎಂದು ಹೇಳಿದ್ದ, ಬರೆದಿದ್ದ, ಕವಿತೆ ಕಟ್ಟಿ ಹಾಡಿದ್ದ, ಕುಣಿದಿದ್ದ,
ಮೈಮರೆತಿದ್ದ; ಸಾಹಿತಿ ಅಲ್ಲವೆ!
ಈಗ ? ಎಲ್ಲಾ ಮರೆತನೆ ? ಅಥವಾ ಬೇಕೆಂದೇ ಹೀಗೆ ಮಾಡುತ್ತಿದ್ದಾನೆಯೇ ?
ಸೇಡು ತೀರಿಸಿಕೊಳ್ಳುತ್ತಿದ್ದಾನೆಯೇ ? ಯಾರ ಸೇಡು ಯಾರ ಮೇಲೆ ? ಹಿಂದೊಮ್ಮೆ,
ಅವನಿನ್ನೂ 'ಮನುಷ್ಯ'ನಾಗಿದ್ದಾಗ, ಭವಿಷ್ಯದ ಬಗ್ಗೆ ಸವಿಗನಸು ಕಾಣುತ್ತಿದ್ದಾಗ,
ಪುಟ:ನಡೆದದ್ದೇ ದಾರಿ.pdf/೪೬
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ