ತಮ್ಮ ಹೆಂಡತಿ ಮತ್ತು ಮಗಳು ಅಲ್ಲಿ ನಿಂತಿದ್ದನ್ನು ನೋಡಿ ಶಿವಯ್ಯವರು ಹಿಂದಕ್ಕೆ ಬಂದರು. ಮಹಾದೇವಿ ಅವರ ಗಮನವನ್ನೂ ಸೆಳೆದಿದ್ದಳು.
``ಏನಂತೆ ...? ಕೇಳಿದರು ಶಿವಯ್ಯನವರು ಹೆಂಡತಿಯನ್ನು.
``ಏನೂ ಇಲ್ಲ. ಯಾವ ಊರು ಅಂತ ಕೇಳಿದೆ...
ಶಿವಮ್ಮನ ಮಾತು ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಶಿವಯ್ಯನವರು ಮಹಾದೇವಿಯನ್ನು ಕುರಿತು,
``ಬಾರಮ್ಮ, ಬಾ ಶಿವನಿಗೆ ಪೂಜೆಮಾಡುತ್ತೇವೆ. ಪ್ರಸಾದ ತೆಗೆದುಕೊಂಡು ಹೋಗುವಿಯಂತೆ. ಅವ್ಯಾಜವಾದ ವಾತ್ಸಲ್ಯದಿಂದ ಕರೆದರು. ಶಿವಮ್ಮನ ದೃಷ್ಟಿಯೂ ಅದೇ ಭಾವವನ್ನು ಸೂಚಿಸಿತು. ಮಗಳು ಅಪರ್ಣೆ, ಮಾತನ್ನೇನು ಆಡದಿದ್ದರೂ ಸ್ನೇಹದ ದೃಷ್ಟಿಯಿಂದ ಅವಳನ್ನೇ ನೋಡುತ್ತಿದ್ದಳು. ಅವಳ ಗಂಡ ರುದ್ರಮುನಿ ಆಗಲೇ ಶಿವಾಲಯದ ಮಹಾದ್ವಾರದ ಬಳಿಯಲ್ಲಿದ್ದರೂ ಇವಳ ನಾಚಿಕೆ ಕಡಿಮೆಯಾಗಿರಲಿಲ್ಲ.
ಮಹಾದೇವಿ ಅವಳನ್ನೇ ನೋಡಿದಳು. ಹೊಸದಾಗಿ ಮದುವೆಯಾಗಿ ಅಂದು ಗಂಡನ ಮನೆಗೆ ಹೊರಟುನಿಂತ ತನ್ನ ಗೆಳತಿ ಶಂಕರಿಯನ್ನು ನೋಡಿದ ಚಿತ್ರ ನೆನಪಿಗೆ ಬಂದಿತು ಮಹಾದೇವಿಗೆ.
ವಿಶ್ವಾಸದಿಂದ ಅವರು ತನ್ನನ್ನು ಕರೆಯುತ್ತಿರುವಾಗ ಇಲ್ಲವೆನ್ನುವ ಮನಸ್ಸಾಗಲಿಲ್ಲ ಮಹಾದೇವಿಗೆ. ಅವರನ್ನು ಹಿಂಬಾಲಿಸಿ ಮತ್ತೊಮ್ಮೆ ಶಿವಾಲಯವನ್ನು ಪ್ರವೇಶಿಸಿದಳು.
ಶಿವಯ್ಯನವರು ಪೂಜೆಯನ್ನು ಮಾಡಿ ಶಿವನಿಗೆ ಮಂಗಳಾರತಿಯನ್ನು ಎತ್ತಿದರು. ಮಂಗಳಾರತಿಯ ಹೊಂಬೆಳಕಿನಲ್ಲಿ ಹೊಳೆಯುತ್ತಿರುವ ಶಿವನ ಮೂರ್ತಿಯನ್ನು ಕಂಡು, ಅವನ ಲೀಲೆಗಾಗಿ ಅಚ್ಚರಿಗೊಂಡಳು ಮಹಾದೇವಿ.
ಹಣ್ಣು ಕಾಯಿಗಳ ನೈವೇದ್ಯವಾಯಿತು ಶಿವನಿಗೆ. ಅನಂತರ ಶಿವನ ಹೆಸರಿನಿಂದ ತಮಗೆ ನೈವೇದ್ಯ ಮಾಡಿಕೊಳ್ಳಲು ಕುಳಿತರು ಎಲ್ಲರೂ ಬಸವಣ್ಣನವರ ಎದುರು. ಇವನ ಪ್ರಸಾದರೂಪವಾಗಿ ಮಹಾದೇವಿಗೆ ಎರಡು ಬಾಳೆಹಣ್ಣುಗಳು ಸಾಕಷ್ಟು ಕೊಬ್ಬರಿ ಸಿಕ್ಕಿತು. ಹೊಟ್ಟೆಯ ಅವಶ್ಯಕತೆಯೂ ಅವುಗಳನ್ನು ಸ್ವಾಗತಿಸಿತು. ಏಕೆಂದರೆ ಈ ದಿನವೆಲ್ಲಾ ಆಕೆ ಏನನ್ನೂ ತಿಂದಿರಲಿಲ್ಲ.
ಬೆಳಿಗ್ಗೆ ಕೌಶಿಕನ ಅರಮನೆಯಲ್ಲಿ ಸ್ನಾನಮಾಡಿ ಪೂಜೆಗೆ ಕುಳಿತಿದ್ದಳು. ಆದರೆ ಪೂಜೆ ಮುಗಿಯುವ ವೇಳೆಗೆ ಕೌಶಿಕನ ಅಚಾತುರ್ಯದ ಘಟನೆಯಿಂದ ದಿಗಂಬರಳಾಗಿ ಅರಮನೆಯಿಂದ ಹಾಗೆಯೇ ಹೊರಬಿದ್ದಿದ್ದಳು. ಅನಂತರ