ವಿಷಯಕ್ಕೆ ಹೋಗು

ಅನ್ನಪೂರ್ಣಾ/ಸುಮಂಗಲೆ ಶಿರಿನ್

ವಿಕಿಸೋರ್ಸ್ದಿಂದ
ಅನ್ನಪೂರ್ಣಾ
ಸುಮಂಗಲೆ ಶಿರಿನ್

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

90831ಅನ್ನಪೂರ್ಣಾ — ಸುಮಂಗಲೆ ಶಿರಿನ್

ಸುಮಂಗಲೆ ಶಿರಿನ್

ಪ್ರಜ್ಞೆ ಬರುತ್ತಿದೆ ಆಕೆಗೆ.
ಆದರೆ ಡಾಕ್ಟರರು ಹೇಳುತ್ತಿದ್ದಾರೆ: " ಈ ಸುತ್ತೂ ದಾಟಬೇಕು.
ಬಹಳ ಹೊತ್ತು ಇರೋದಿಲ್ಲ ಈ ಪ್ರಜ್ಙಾವಸ್ಥೆ. ಇನ್ನೊಮ್ಮೆ ಪ್ರಜ್ಞೆ ಬಂದಾಗ
ಅದೇ ನಿರ್ಧಾರದ್ದು. ಆಗ ಎಲ್ಲ ಅಪಾಯವನ್ನೂ ದಾಟದ ಹಾಗೆ."
ಶಿರಿನ್ ಮಲಗಿದ್ದಾಳೆ. ಕರುಳನ್ನು ಕಿತ್ತಾಡಿಸಿದ ಆ 'ನಿದ್ರೆ ಮಾತ್ರೆ'ಗಳ
ಫಲವಾಗಿ,ತೊಳಲಾಡಿ ಜೀವಚ್ಛವದಂತೆ ನೀಡಿಕೊಂಡ ಆ ದೇಹ
ಮತ್ತೆ ಚಲಿಸುವ ಚಿಹ್ನೆಯನ್ನು ತೋರುತ್ತಿದೆ.
ಆ ಹದಿನೇಳರ ಹುಡಿಗಿಯ,-ಆಸ್ಪತ್ರೆಯ ಬಿಳಿಯ ನಿಲುವಂಗಿಯಲ್ಲಿ
ದೇವಿಯ ಹಾಗೆ ಕಾಣಿಸುತ್ತಿದ್ದಾಳೆ.
ದೇವಿ ! ಇತ್ತ ನೋಡಮ್ಮ ! ಆಳುತ್ತ ಸುತ್ತಲೂ ನಿಂತಿರುವ ತಾಯಿ,
ತಂದೆ, ಆ ಇಬ್ಬರು ತಂಗಿಯರು; ತುಟಿ ಪಿಟ್ಟಿನ್ನದೆ ಭೀತಿಯ ಮುಖಮುದ್ರೆ
ಯಿಂದ ನಿನ್ನನ್ನೆ ನೋಡುತ್ತಿರುವ ಕಿರಿಯ ಇನ್ನಿಬ್ಬರು ಸೋದರಿಯರು;
ಆ ಡಾಕ್ಟರು-ಇನ್ನೊಬ್ಬ ಲೇಡಿ ಡಾಕ್ಟರು, ನಿನ್ನ ತಂದೆಯ ಮಿತ್ರರು
ಯಾರೊ ಒಬ್ಬರು-, ಇವರನ್ನೆಲ್ಲ ಒಮ್ಮೆ ನೋಡಮ್ಮ..........
ಶಿರಿನ್ ಕನವರಿಸುತ್ತಿದ್ದಾಳೆ. ಬಿಳಿಚಿಕೊಂಡ ಆ ತುಟಗಳ ಮೇಲೆ
ಮುಗುಳ್ನಗು ಲಾಸ್ಯವಾಡುತ್ತಿದೆ. ತೆಳ್ಳನೆ ಬೀಸುತಿರುವ ಗಾಳಿಯಿಂದ ತಪ್ಪಿಸಿ
ಕೊಂಡು ಆ ಮುಂಗುರುಳು ಹಣೆಯ ಮೇಲೆ ಹರಿದಾಡುತ್ತಿದೆ. ಆ ಕಿವಿಗಳಲ್ಲಿ
ಗುಂಯ್ ಗುಂಯ್ ಗುಂಯಾರವನ್ನು ಆಕೆ ಕೇಳುತ್ತಿದ್ದಾಳೆ. ಅದು ಮಂಗಳ
ವಾದ್ಯ-ಶಹನಾಯ್ !
ಆದರೆ ಆ ಕಣ್ಣುಗಳ ಮಾತಾಡುತ್ತಿವೆ.
" ಬೇಡಿ....ಈ ಮಂಗಳವಾದ್ಯ ಬೇಡಿ......ಬರೆ ಶಹನಾಯ್ ನೀವು
ಬಿಟ್ಟೀರಾ ? ಜತೆಯಲ್ಲೇ ಮಂತ್ರ-ತಂತ್ರಗಳನ್ನು ತರುವವರು ನೀವು.

ನಮಿಬ್ಬರ ವಿಷಯದಲ್ಲಿ ನೀವು ಕೈಹಾಕಬೇಡಿ...."
ಸುಮಂಗಲೆ ಶಿರಿನ್

ಆದರು ಮೊಳಗುತ್ತಲೇ ಇದೆ ಮಂಗಳವಾದ್ಯ . ಎಷ್ಟು ಮಧುರ !
ನೂರು ಕೃಷ್ಣರು ನೂರು ದಿಕ್ಕುಗಳಿಂದ ಮುರಲಿ ನುಡಿಸಿದ ಹಾಗೆ ! ಆದಕ್ಕೆ
ಮಾರುಹೋಗಿ ಆಕೆ ಮುಗುಳ್ನಗುತ್ತಿದ್ದಾಳೆ....
ಕಾರಿರುಳು ಓಡುತ್ತಿದೆ....ಬರುತಲಿದ್ದಾಳೆ ಉಷೆ.
ಆದರೆ ಆ ತಾಯಿ ? ಅಯ್ಯೋ-ಅದೆಂಥ ರೋದನ ಒಮ್ಮೆಲೆ! ಯಾಕೆ
ಏನಾಯಿತು?
ಡಾಕ್ಟರ್ ಶಿರಿನ್ ಳನ್ನು ಪರೀಕ್ಷಿಸುತ್ತಿದ್ದಾಳೆ. ಲೇಡಿ ಡಾಕ್ಟರ್ ಹುಡುಗಿ
ತಾಯಿಯನ್ನು ಸಂತೈಸುತ್ತಿದ್ದಾರೆ. ಯಾರೋ ಮಿತ್ರರು ಆ ತಂದೆಯನ್ನು
ಕುರ್ಚಿಯ ಮೇಲೆ ಕುಳ್ಳಿರಿಸುತ್ತಿದ್ದಾರೆ. ಆ ಹುಡುಗಿಯರು " ಅಕ್ಕಾ-
ಪ್ರೇಮಕ್ಕಾ " ಎಂದು ಕರೆಯುತ್ತಿದ್ದಾರೆ. ಗಾಳಿ ಬಲವಾಗಿ ಬೀಸಿ ಆಸ್ಪತ್ರೆ
ಯೊಂದು ಗಾಜಿನ ಕಿಟಕಿಯನ್ನು ಅಪ್ಪಳಿಸುತ್ತಿದೆ.ಹೊರ ಆಂಗಳದಲ್ಲೊಂದು
ನಾಯಿ ಭೋ... ಎಂದು ಕೂಗುತ್ತಿದೆ.
****
ಜೀಲಂ ನದೀ ತಟದಿಂದ ಧಾವಿಸಿ ಬಂದ ಕುಟುಂಬ ಅದು. ಮತಾಂ
ಧತೆಯ ಮುಸುಕಿನಲ್ಲಿ ಪ್ರಾಣನೀಗಿದ ಹಿರಿಯ ಮಗನನ್ನು ಬಿಟ್ಟು ಆ ಸಿಂಧಿ
ತಾಯ್ತಂದೆಯರು, ಸಾಧ್ಯವಿದ್ದಷ್ಟುನ್ನು ಎತ್ತಿಕೊಂಡು, ಐವರು ಹೆಣ್ಣುಮಕ್ಕ
ಳೊಡನೆ ಇಳಿದು ಬಂದರು. ಮುಂಬಯಿಗೆ,ಅಲ್ಲಿಂದ ಪುಣೆಗೆ,ಮತ್ತೆ ಅಲ್ಲಿಂದ
ಕನ್ನಡದೇಶದ ರಾಜಧಾನಿಗೆ......ಅವರ ಪಯಣ ಬೆಳೆಯಿತು. ಎಂಥ ಅರ್ಥ
ಹೀನ ವಿನಿಯಮ ! ಉತ್ತರಕ್ಕೆ ಮುಸಲ್ಮಾನ ಕುಟುಂಬಗಳು; ದಕ್ಷಿಣಕ್ಕೆ
ಮುಸಲ್ಮಾನೇತರ ಕುಟುಂಬಗಳು. ದ್ವೇಷಗಳ ಉರಿವ ಕೊಳ್ಳಿಯನ್ನೆತ್ತಿ
ಕೊಂಡು ಅವರು ಸಾಗಿದರು. ಅತ್ಯಂತ ಕರಾಳವಾದೊಂದು ಅಧ್ಯಾಯವನ್ನು
ದೇಶ ಬರೆಯಿತು-
ಗುರುಬಕ್ಷಸಿಂಗ್ ತೀರ ಬಡವನಲ್ಲ. ಮಡದಿ ಮಕ್ಕಳ ಮೇಲಿದ್ದ
ವಸ್ತು-ಒಡವೆ ಆ ಕುಟುಂಬದ ಬೆಂಗಾವಲಿಗೆ ನಿಂತುವು. ಕನ್ನಡದೇಶವನ್ನ
ವರು ತಮ್ಮ ಪುನರ್ಜನ್ಮದ ತಾಯ್ನಾಡೆಂಡು ಬಗೆದರು. ಗುರುಬಕ್ಷಸಿಂಗ್
ಸಣ್ಣದೊಂದು ಬಟ್ಟೆಯಂಗಡಿ ತೆರೆದ. ಚಿಕ್ಕಮಕ್ಕಳೆರಡು ಶಾಲೆಗೆ ಹೋಗಿ

ಕನ್ನಡ ಹುಡುಗಿಯರಾದುವು.
೪೪
ಅನ್ನಪೂರ್ಣಾ

ಐವರು ಹೆಣ್ಣು ಮಕ್ಕಳಲ್ಲಿ ಹಿರಿಯ ಹುಡುಗಿ ಪ್ರೇಮಾ.ಮತೀಯ
ಗಲಭೆ ಆರಂಭವಾದಾಗ ಹದಿನೈದು ವರ್ಷ ಆಕೆಗೆ. ಅವಳ ಕಣ್ಣೆದುರಲ್ಲೆ
ಹಾರಾಡಿದ ಕಲ್ಲು-ಕಲ್ಲು, ಝಣತ್ಕರಿಸಿದ ಚೂರಿ-ಚಾಕು,ಆರಿಹೋದ ಜೀವ
ಜ್ಯೋತಿಗಳು, ಆ ಕಣ್ಣುಗಳಲ್ಲಿದ್ದ ನಿಷ್ಕಳಂಕ ಪ್ರಕಾಶವನ್ನು ಕಸಿದುಕೊಂಡಿ
ದ್ದುವು. ಮುಗುಳುನಗೆ ಮಾಯವಾಯಿತು. ಗಭೀರತೆ ನೆಲೆಸಿತು.ಮುಗ್ದತೆಯ
ಬದಲು ವಯಸ್ಸಿನ ಹಿರಿಮೆ ಮನೆಮಾಡಿತು.
ಅನಂತರದ ಸಂಕಟಮಯ ತಿಂಗಳು ಹಲವು .ಎಲ್ಲವೂ ಶೂನ್ಯ-ಶೂನ್ಯ
ವೆಂದು ತೋರುತ್ತಿದ್ದ ದಿನಗಳ. ಆ ಮೇಲೆ ತುಂಗಭದ್ರೆಯನ್ನು ದಾಟ
ಬಂದು ಶೀತಲ ವಾತಾವರಣದಲ್ಲಿ ಅವರ ನೆಲೆಸಿದ್ದು .
ಅಳಿದುಹೋದ ಆ ಅಣ್ಣನ ನೆನಪೊ-ಮರುಕಳಿಸಿ ಮರುಕಳಿಸಿ ಬರು
ತ್ತಿತ್ತು. ಜೀಲಂ ನದಿ ತೀರದಲ್ಲಿದ್ದ ಆ ಪುಟ್ಟ ಪಟ್ಟಣ ಕೈನೀಡಿ ಕರೆಯುತ್ತಿತ್ತು.
ಹಳೆಯ ದಿನಗಲಳ ಮಧುರ ಸ್ಮರಣೆಗಳು. ಇರುವ ಸಾಲನ್ನು ಕಟ್ಟ ಹರಿಯು
ತ್ತಿದ್ದವು.
ಅಂಥದರಲ್ಲೂ ಬದುಕಿ ಉಳಿದಳಾಕೆ;ಬದುಕಿ ಬೆಳೆದಲಳಾಕೆ. ಮತ್ತೆ
ನಿಧಾನವಾಗಿ ನೆರೆಮನೆಯ ಕನ್ನಡ ಮಕ್ಕಳನ್ನು ಕಂಡು ಆಕೆ ಮುಗುಳ್ನಗು
ನಕ್ಕಳು. ಪಕ್ಕದ ಹೂದೋಟದಲ್ಲಿ ಅರಳುತ್ತಿದ್ದ ಚೆಂಗುಲಾಬಿಯನ್ನು ಕಂಡು
ಕಂಪನ್ನು ಆಘ್ರಾಣಿಸು ಆಕೆ ಎದೆಯುಬ್ಬಿಸಿದಳು. ಬಹಳ ದಿನಗಳ ಮೇಲೆ
ಆಕೆಯ ಆಸೆ ಚಿಗುರೊಡೆಯಿತು;ಕನಸು ಗರಿಗೆದರಿತು.
ಆಂಥದೊಂದು ಬೆಳಗು ಮುಂಜಾನೆ ಎದ್ದು ಕಿಟಕಿ ತೆರೆದಾಗ ಆಕೆ
ಮಾಧವನನ್ನು ಕಂಡಳು.
ಅವನೂ ಅದೇ ಆಗ ಕಿಟಕಿ ತೆರೆಯುತ್ತಿದ್ದ.ಆಕೆಗಿಂತ ಎರಡು ವರ್ಷ
ದೊಡ್ಡವನಿರಬಹುದು ಆತ. ತೆಳ್ಳಗಿನ ಎತ್ತರದ ದೇಹ. ಮಾಟವಾಗಿ
ತುಂಬಿಕೊಂಡಂತೆ ಕಾಣಿಸುತ್ತಿದ್ದ ಗೌರವರ್ಣ ಮುಖ.ಆಸ್ತವ್ಯಸ್ತವಾಗಿ
ಚೆದರಿದ್ದರೂ ಓರಣವಾಗಿ ತೋರುತ್ತಲಿದ್ದ ಕ್ರಾಪು.....
ಆಕೆ ಒಂದು ಕ್ಷಣ ಹಾಗೆಯೇ ನಿಂತಳು : ಆತನು ಕೂಡಾ.
ತನಗೆ ಅರಿವಿಲ್ಲದಂತೆಯೇ ಆಕೆಯ ಕೈಗಳು ಮತ್ತೆ ಕಿಟಕಿಯನ್ನು

ಮುಚ್ಚಿದುವು; ಮುಚ್ಚಿ ತೆರೆದುವು.
ಸುಮಂಗಲೆ ಶಿರಿನ್
೪೫

ಆತ ಮುಗುಳ್ನಕ್ಕ. ಆಕೆಯ ಹೃದಯ ಕಂಪಿಸಿತು;ತುಟಿಯದುರಿತು.
ಹೀಗಿದ್ದರೂ ಮುಗುಳು ನಗೆಯೊಂದು ಆ ಮುಖದ ಮೇಲೆ ಕಾಣಿಸಿಕೊಂಡಿತು.
ಅದು ಆರಂಭ....
...ಆತ ಕಾಲೇಜಿನಲ್ಲಿ ಓದುತ್ತಿದ್ದ. ಆ ವರ್ಷವೇ ಬಿ.ಎಸ್.ಸಿ.
ಪರೀಕ್ಷೆಗೆ ಆತ ಕುಳಿತುಕೊಳ್ಳುವುದು. ಉತ್ತೀರ್ಣನಾದಬಳಿಕ ನೌಕರಿಯ
ಬೇಟೆಗಾಗಿ ಹೊರಡುವವನು. ಹಿಂದೆ ಅವನ ತಂದೆ ವಿದ್ಯಾ ಇಲಾಖೆಯಲ್ಲಿದ್ದ
ವರು. ಪುಟ್ಟ ನಿವೃತ್ತ ಅಧಿಕಾರಿ. ಒಂದಿಷ್ಟು ಪೆನ್ ಶನ್ ಬರುತ್ತಿತ್ತು. ಆದರೆ
ಮನೆವೆಚ್ಚದ ಹೆಚ್ಚಿನ ಭಾರವಹಿಸುತ್ತಿದ್ದವನು, ಪದವೀಧರನಾಗಿ ಮುಂಬ
ಯಿಗೆ ಹೋಗಿ ಸಂಸಾರ ಹೂಡಿ ದುಡಿದು ಸಂಪಾದಿಸುತ್ತಿದ್ದ ಹಿರಿಯಮಗ.
ಮಾಧವ ಎಂದವನ ಹೆಸರು-ಮಾಧವರಾವ್.ಗೆಳೆಯರು ಮಾಧೂ
ಎಂದು ಕರೆಯುತ್ತಿದ್ದರು. ಆತನ ಬೆನ್ನಲ್ಲೆ ಹುಟ್ಟಿದ್ದ ತಂಗಿ ತೀರಿಕೊಂಡಿ
ದ್ದಳು. ಮನೆಯಲ್ಲಿ ಉಳಿದವರೆಂದರೆ ಆತನ ಪುಟ್ಟ ತಮ್ಮ, ಪುಟ್ಟ ತಂಗಿ
ಯೊಬ್ಬಳು, ಮತ್ತು ವಾತ್ಸಲ್ಯಮಯಿಯಾದ ತಾಯಿ.
ಬಹಳ ದಿನ ಗುರುಬಕ್ಷಸಿಂಗನ ಹಿರಿಯ ಮಗಳು ಪ್ರೇಮಾ,ಮಾಧವ
ನನ್ನು ನೋಡಿದಳು. ಆತ ಆಕೆಯನ್ನು ನೋಡುತ್ತಿದ್ದ.
ಮಾಧು ಕಾಲೇಜಿಗೆ ಹೊರಡುವ ಹೊತ್ತಿಗೆ ಕಿಟಕಿಯಲ್ಲಿ ಕಾಣಿಸಿಕೊಳ್ಳು
ತ್ತಿದ್ದಳು ಪ್ರೇಮಾ, ತಪ್ಪದೆ, ಪ್ರತಿದಿನವೂ. ಹಾಗೆಯೇ ಕಾಲೇಜಿಂದ ಆತ
ಮರಳುವಾಗಲೂ.
ಆ ಮನೆಮನೆಯ ಚಿಕ್ಕಮಕ್ಕಳೊಳಗೆ ಬಾಂಧವ್ಯ ಬೆಳೆಯಿತು. ಅವ
ರನ್ನು ಕರೆಯುವ ಕೂಡಿಸುವ ನಿಮಿತ್ತದಿಂದ ಆಕೆ ಮಾದೊ ಮನೆಗೆ ಎಂದಾದ
ರೊಮ್ಮೆ ಬರುತ್ತಿದ್ದಳು. ಹಾಗೆ ಬರುತ್ತಿದ್ದುದೆಲ್ಲ ಹೆಚ್ಚಾಗಿ ಆತನ ರಜಾ
ದಿನಗಳಲ್ಲೇ !
ಒಂದು ಸಂಜೆ ಮನೆಗೆ ಮರಳಿದ ಮಾಧು, ತನ್ನ ಕೋಣೆಯ ಬೀರುವಿ
ನಿಂದ ಒಂದೆರಡು ಇಂಗ್ಲಿಷ್ ಕಾದಂಬರಿಗಳು ಮಾಯವಾಗಿದ್ದುದನ್ನು ಕಂಡ.
ಅಮ್ಮ ಹೇಳಿದರು:"ರೇಗಬೇಡ ಸದ್ಯ:ಆ ಸಿಂಧಿ ಹುಡುಗಿ ತಗೊಂಡು
ಹೋಗಿದಾಳೆ. ಇಂಗ್ಲೀಷು ಬರುತ್ತಂತೆ ಅದಕ್ಕೆ. ಏನೋ ಸ್ವಲ್ಪ ಓದ್ಕೊಂಡಿದೆ

ಯಂತೆ. ಓದಲಿ ಪಾಪ, ಇಸಕೊಂಡರಾಯಿತು ಆ ಮೇಲೆ."
೪೬
ಅನ್ನಪೂರ್ಣಾ

"ಹೂಂ" ಎಂದ ಮಾಧು.
ನಾಲ್ಕು ದಿನಗಳಮೇಲೆ ಪ್ರೇಮಾಳ ಚಿಕ್ಕತಂಗಿ ಅವೆರಡೂ ಪುಸ್ತಕ
ತಂದಳು. ಒಂದರೊಳಗೆ ಚೀಟಿ ಇತ್ತು.
"ನಿಮ್ಮನ್ನು ಕೇಳದೆ ಒಯ್ದದ್ದಕ್ಕೆ ಕ್ಷಮೆ ಬೇಡುವೆ. ಬೇಡುವೆ. ಬೇರೇನಾದರೂ
ಕಳಿಸುವಿರಾ?"
ಸಹಿ ಕೂಡಾ ಇರಲಿಲ್ಲ!
ಮಾಧೂ ಆ ಹುಡುಗಿಯ ಮುಂಗುರುಳು ನೇವರಿಸಿದ. ಬೇರೊಂದು
ಪುಸ್ತಕ ತೆಗೆದು, ಅದರೊಳಗೊಂದು ಚೇಟಿಯಿಟ್ಟ.
ಆ ಚೀಟಿ ಬರೆದಾಗ ಎದೆ ಡವಡವನೆ ಹೊಡೆದುಕೊಂಡಿತು:
"ನಿಮ್ಮ ಚೀಟಿ ತಲುಪಿತು. ಪುಸ್ತಕ ಕಳಿಸಿದೀನಿ-ಮಾಧೂ."
ಆ ಮಗುವನ್ನು ಕಳುಹಿಕೊಟ್ಟ ಮೇಲೆ ಮಾಧವ ಕಿಟಕಿಯತ್ತ ನೋಡಿದ.
ಪ್ರೇಮಾ ಅಲ್ಲೇ ನಿಶ್ಚಲಳಾಗಿ ನಿಂತಿದ್ದಳು. ಆ ಕಣ್ಣುಗಳಲ್ಲಿ ತೇವವಾಡುತ್ತಿದ್ದ
ಹಾಗೆ ತೋರುತ್ತಿತ್ತು.
ಪರಸ್ಪರ ನೋಡಬೇಕೆಂಬ ಆಸೆ ಅವರಿಗೆ.ಆದರೆ ಕದ್ದು ನೋಡಬೇಕು.
ಒಬ್ಬರೊಡನೊಬ್ಬರು ಮಾತಾಡಬೇಕೆಂಬ ಬಯಕೆ ಅವರಿಗೆ. ಆದರೆ ಆದಕ್ಕೆ
ಅವಕಾಶವಿಲ್ಲ. ಕನ್ನಡದೇಶದ ಸಮಾಜಪದ್ದತಿ ಅಂಥಾದ್ದು. ಸಾಮಾಜಿಕ
ಸಂಬಂಧಗಳು ಅಂಥವು. ಹುಡುಗ ಹುಡುಗಿಯರು ಜತೆಯಲ್ಲಿ ಹೋದರೆ
ಅದಕ್ಕೆ ಅಪಾರ್ಥ ಕಲ್ಪಿಸುತ್ತಾರೆ. ಸಹಸ್ರ ಕಣ್ಣುಗಳು ತೀಕ್ಷ್ಣನೋಟ
ಬೀರುತ್ತವೆ. ಸಾವಿರ ಕಿವಿಗಳು ನಿವುರಿ ನಿಲ್ಲುತ್ತವೆ.ಹೃದಯವನ್ನು ಹರಿದು
ತಿನ್ನುವ ಹಾಗೆ ಮಾತುಗಳು ಇರಿಯುತ್ತವೆ.
ತಮಗೆ ಅರಿವಿಲ್ಲದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸಿದರು ಆ ಲೈಲಾ
ಮಜ್ನು . ಪುಸ್ತಕಗಳ ಮೇಲಿನ ಹೊದಿಕೆಯ ರಕ್ಷಯೊಳಗೆ ಅವರ ಒಲುಮೆಯ
ಓಲೆಗಳು ಅತ್ತಿಂದಿತ್ತ ಇತ್ತಿಂದತ್ತ ಪಯಣ ಬೆಳೆಸಿದುವು. ಮನೆಯ ಪುಟ್ಟ
ಮಕ್ಕಳು ಅವರಿಬ್ಬರು ಸಂದೇಶವಾಹಕರಾದರು.
ಗುಡಿಯ ಹಿಂದಿನ ಬೆಟ್ಟದ ಮರೆಯಲ್ಲಿ ಆ ಮೊದಲ ಭೇಟಿ!
ಆತನಾದರೋ ಗೊತ್ತಾಗಿದ್ದುದಕ್ಕಿಂತ ಒಂದು ಗಂಟೆ ಮುಂಚೆಯೆ

ಬಂದು ಹಾದಿ ನೋಡುತ್ತಿದ್ದ.
ಸುಮಂಗಲೆ ಶಿರಿನ್
೪೭
ಆಕೆ ತಡವಾಗಿ ಬಂದಳು ಏದುತ್ತ. ಏದುತ್ತ.

ಒಂದು ಕ್ಷಣ ಇಬ್ಬರೂ ಮಾತಾಡಲಿಲ್ಲ. ಆಕೆಯೇ ಹರುಕು ಮುರುಕು
ಇಂಗ್ಲೀಷಿನಲ್ಲಿ ಮೊದಲು ಮಾಡಿದಳು:
"ತಡವಾಯ್ತು ಬರೋದು. ಯಾರೋ ಉತ್ತರದಿಂದ ನಮ್ಮ ಹಾಗೆ
ಈ ಊರಿಗೆ ಬಂದ ಸ್ನೇಹಿತೆ ಮನೆಗೆ ಹೋಗಿಬರ್ತ್ತೀನಂತ ಓಡಿಬಂದೆ.ಬಹಳ
ಹೊತ್ತಾಯ್ತು ಬಂದು?"
"ಹೂಂ. ಬರೋದೇ ಇಲ್ವೇನೋ ನೀವು ಎಂದಿದ್ದೆ. ಹಾದಿ ನೋಡಿ
ನೋಡಿ ದೃಷ್ಟಿ ಮಂದವಾಯಿತು. ಕುತ್ತಿಗೆ ನೋಯುವದಕ್ಕೆ ಶುರು."
....ಮತ್ತೆ ಮಾತಿನ ಸರಪಳಿ ಕಡಿದ ಹಾಗೆ.ವಿಷಯವೇ ತೋಚಲಿಲ್ಲ
ಯಾರಿಗೂ !
ಮಾಧೂ ಕೇಳಿದ: "ಸುಮ್ಮನೆ ಇರೋದಕ್ಕೇನಾ ಬಂದಿದ್ದ?ಏನಿದು?"
"ಮಾತಾಡಿ ನೀವು"
"ಏನನ್ನ?"
ಆಕೆ ನಕ್ಕುಬಿಟ್ಟಳು;ಆತನೂ ನಕ್ಕ.
ಮಾಧೂ ಹೇಳಿದ:
"ಎಷ್ಟೊಂದು ಕಷ್ಟ.ಒಂದಿಷ್ಟು ಸರಿಯಾಗಿ ನೋಡಿ ಮಾತಾಡೋಣ
ವೆಂದರೆ! ಎಷ್ಟೊಂದು ಹಿಂಸೆ!ಮನೆಯವರಿಗೆ ಗೊತ್ತಾದರೆ ಆಗಿಹೋಯಿತು
ಕಥೆ."
"ನಿಮ್ಮಲ್ಲೂ ಅಷ್ಟೆ.ನಮ್ಮಲ್ಲೂ ಆಷ್ಟೆ.ನಮ್ಮ ಊರಲ್ಲೂ ಇದೇ
ರೀತಿ.ಮನಸ್ಸು ಬಿಚ್ಚಿ ಮಾತಾಡೋಕೆ ಅವಕಾಶವೇ ಇಲ್ಲ."
ಎರಡು ಗಂಟೆಗಳ ಕಾಲ ಹಾಗೆಯೇ ಏನನ್ನೋ ಹರಟುತ್ತ ಕುಳಿತರು.
ಒಬ್ಬರನ್ನೊಬ್ಬರು ಪ್ರೀತಿಸುವ ಪ್ರೇಮಿಸುವ ಬಗೆಗೆ ಅವರು ಮಾತೆತ್ತೆಲೇ ಇಲ್ಲ.
ಆ ಸಾರೆ.......
ಮುಂದಿನವಾರ ಮತ್ತೆ ಸಂಧಿಸಿದಾಗ ಆಕೆ,
"ನಂಗೆ ಕನ್ನಡ ಕಲಿಸ್ತ್ತೀರಾ?" ಎಂದು ಕೇಳಿದಳು.

"ಹೂಂ,ನನಗೆ ಸಿಂಧಿ ಕಲಿಸಿ?" ಎಂದು ಆತ ಕೇಳಿದ.
೪೮
ಅನ್ನಪೂರ್ಣಾ

ನಡುವೆಯೊಮ್ಮೆ ಮಾತಾಡಲು ವಿಷಯ ದೊರಕದೇಹೋದಾಗ, ಆಕೆ
ಮೌನ ಮುಖಮುದ್ರೆಯಿಂದ ಆತನನ್ನೇ ನೋಡಿದಳು.ಯಾವುದೋ ವೇದ
ನೆಯ ನೆರಳು ಆ ಸುಂದರ ಮುಖವನ್ನು ಆವರಿಸಿತ್ತು. ಪರಸ್ಪರರನ್ನು ಅವರಿ
ಬ್ಬರೂ ಎವೆಯಿಕ್ಕದೆ ದಿಟ್ಟಸಿ ನೋಡಿಕೊಂಡರು. ನಾಲ್ಕು ಕಣ್ಣುಗಳಲ್ಲೂ
ಆನಂದಬಾಷ್ಪ ತುಂಬಿಬಂತು.
ಮಾಧೂ ಮುಂದಾಗಿ ಆಕೆಯ ಬಲಗೈಯನ್ನು ತನ್ನ ಎರಡೂ ಕೈಗಳಲ್ಲಿ
ಎತ್ತಿಹಿಡಿದು ಅದುಮಿದ; ಮೃದುವಾಗಿ ಅದುಮಿದ.
" ಏನನಿಸಿತ್ತೆ ಗೊತ್ತಾ" ಎಂದು ಕೇಳಿದಳು ?
" ಇಲ್ಲಿ ;ಏನು ?"
" ಅಳಬೇಕು ಎನ್ನಿಸುತ್ತೆ."
" ಹೌದು,ನನಗೂ ಹಾಗೇನೇ. ಸಂತೋಷದ ಅಳು ಅಲ್ಲವೆ?"
" ಎಂಥ ದಿನ ಇವತ್ತು!"
" ಇವತ್ತಿನಿಂದ ನನ್ನ ನಿನ್ನ ಸಂಬಂಧ ಏನು ಗೊತ್ತೆ ?"
" ಹೂಂ- ಏನು ಹೇಳು."
" ನಮಗಿಬ್ಬರಿಗೂ ಮದುವೆಯಾದ ಹಾಗೆ ಇವತ್ತು."
ಆಕೆಗೆ ಲಜ್ಜೆಯಾಯಿತು;ಆತನಿಗೂ.
" ಶಿರಿನ್ ಫರ್ ಹಾದ್ ಕಥೆ ಗೊತ್ತೆ ನಿನಗೆ?"
" ಹೌದು ಕೇಳಿದೀನಿ."
" ಹಾಗೆಯೇ ಆಲ್ಲವೇ ನಾವೂನೂ?"
" ಹೂಂ-ಹೂಂ. ಆದರೆ ನಾವು ಬದುಕುವವರು !"
" ಹೌದು ಬದುಕುವವರು-ಗಂಡಹೆಂಡಿರ ಹಾಗೆ-ಆದರ್ಶವಾಗಿ."
" ನೀನು - ನೀನು ನನ್ನ ಶಿರಿನ್ ......"
" ಹೂಂ. ಪ್ರೇಮಾ ಹೆಸರು ಚೆನ್ನಾಗಿಲ್ಲವೇನೋ..."
" ಇದೆ. ಪ್ರೇಮಾ ಉಳಿದವರಿಗೆಲ್ಲ. ನನಗೆ ನೀನು ಶಿರಿನ್."
" ಹೂನಪ್ಪಾ. ನೀನು ಮಾತ್ರ ಫರಾಹಾದ್ ಅಲ್ಲ."
" ಮತ್ತೆ ?"

" ನೀನು ನನ್ನ ಮಧು ."
ಸುಮಂಗಲೆ ಶಿರಿನ್
೪೯

" ಮಧೂನೆ ? ಮಾಧೂ ಅಲ್ವೆ ? "
"ಉಹುಂ. ಮಧು. ನನ್ನ ಮಧು."
....ಮತ್ತೆ ಅವರು ಭವಿತವ್ಯದ ಮಾತಾಡಿದರು. ಆತ ಪಾಸಾಗಿಯೇ
ಆಗುತ್ತಾನೆ. ಆ ಮೇಲೆ ಕೆಲಸ ಹುಡುಕಬೇಕು. ಯಾರಾದರೂ ಸಹಾಯ
ಮಾಡಿಯೇ ಮಾಡುತ್ತಾರೆ. ಕೆಲಸ ಸಿಗದೇ ಇದ್ದೀತೇ ?
....ಆ ಊರಲ್ಲಿ ನೆಲಸಿದ ಸಿಂಧಿಗಳೆಲ್ಲ ತಮ್ಮ ಮಕ್ಕಳಿಗಾಗಿ ಒಂದು
ಸಣ್ಣ ಶಾಲೆ ಏರ್ಪಡಿಸುವರಂತೆ. ಅಲ್ಲಿ ಉಪಾಧ್ಯಾಯಿನಿಯಾಗುವ ಆಸೆ
ಶಿರಿನ್‌ಗೆ. ಆಕೆ ಕಲಿತವಳಲ್ಲವೆ ಸ್ವಲ್ಪ ?
ಹಾಗೆ ಇಬ್ಬರೂ ಇಷ್ಟಿಷ್ಟು ಸಂಪಾದಿಸಬೇಕು- ಅದಾದಮೇಲೆ
ತಮ್ಮದೇ ಆದೊ೦ದು ಗುಬ್ಬಚ್ಚಿಗೂಡು-ಪುಟ್ಟ ಸಂಸಾರ.
ನಡುವೆ ಮನೆಯ ಹಿರಿಯರು ತಡೆಯಾದರೆ ? ಆಗ ? ಅಂಥ ಆಪತ್ತು
ಬಂದಾಗ ?
ಅಂಥ ಯೋಚನೆಗಳ ನಡುವೆ ಅವರಿಬ್ಬರ ಮನವೂ ತಲ್ಲಣಿಸುತ್ತಿತ್ತು.
ಹಾಗಾಗಲಾರದು-ಎಂದು ಅವರು ಆಶಿಸುತ್ತಿದ್ದರು. ಆದರೆ, ಒಂದುವೇಳೆ
ಹಾಗಾದರೆ ಮುಂದೆ ? ಅಲ್ಲಿಗೆ ಅವರ ವಿಚಾರ ಸರಣಿ ನಿಲ್ಲುತ್ತಿತ್ತು.
....ಮುಂದೆ ? ಹಿರಿಯರನ್ನು ಮೀರಿ ವರ್ತಿಸುವುದು ಸಾಧ್ಯವಾದೀತೆ ?
ಅವರನ್ನು ವಿರೋಧಿಸಿ ನಡೆಯುವುದಕ್ಕಾದೀತೇ ? ಆಗ ದಿಕ್ಕು ತೋಚದೆ
ಹೋಗುತ್ತಿತ್ತು ಅವರಿಬ್ಬರಿಗೂ....
ಅಂತೂ ಆ ದಿನ ಬಂತು. ಮಾಧುವಿನ ಪರೀಕ್ಷೆ ಮುಗಿದು ಬೇಸಿಗೆಯ
ರಜಾ ಆರಂಭವಾದ ಕಾಲ. ಆಗಲೇ ಮಾಧವನ ತಂದೆ ಮಗನ ಮದುವೆಯ
ಮಾತೆತ್ತಿದರು. ಹೆಣ್ಣಿನ ಜತೆಯಲ್ಲಿ ನೌಕರಿಯನ್ನೂ ಕೊಡಿಸುವ ಆಶ್ವಾಸನೆ
ಬಂದಿತ್ತು ! ಮಾಧೂ ಒಲ್ಲೆನೆಂದ.
ತಂದೆ ಗದರಿಸಿದರು.
ತಾಯಿ ಅತ್ತು ಗೋಳಾಡಿದರು.
" ನನಗೆ ಮದುವೆಯೇ ಬೇಡ " ಎಂದ ಅವರ ಹುಡುಗ.
ತಂದೆ ಸಿಟ್ಟಿದ್ದು ಮಗನ ಕೆನ್ನೆಗೆ ಎರಡೇಟು ಬಿಗಿದರು. ಆ ದಿನ ಮಾಧು
ಅನ್ನ ನೀರು ಮುಟ್ಟಲಿಲ್ಲ.

೫೦
ಅನ್ನಪೂ‍ರ್ಣಾ


ಆ ರಾತ್ರೆ ತಾಯಿ ಬಳಿ ಬಂದು ಮಲಗಿದ್ದ ಮಗನ ಮೈದಡವಿದಳು.
ಆತ ಎಷ್ಟೋ ಹೋತ್ತು ಮಾತಾಡಲಿಲ್ಲ. ಮಗನ ತಲೆದಿಂಬನ್ನು
ತನ್ನ ಕಣ್ಣಿರಿನಿಂದ ತೋಯಿಸಿದಳು.ತುಂಬ ನೋಂದುಕೊಂಡಿತ್ತು ಹೆತ್ತ
ಆ ಕರುಳು.
ಕೊನೆಗೂ ತಾಯಿ ಕೇಳಿದಳು:
" ಯಾರನ್ನಾದರೂ ಪ್ರೀತಿಸ್ತಿದೀಯೇನೋ?"
ಆತ ಇಲ್ಲವೆನ್ನಲಿಲ
"ಅಂತೂ ನಾನು ಊಹಿಸಿದ್ದೇ ಸರಿಹೋಯಿತು ಅನ್ನು.ಅಯ್ಯೋ!"
ಎಂದಳಾಕೆ.
"ಅದೇ ಹುಡಗೀನೇನೋ?"
ಆತ ಮತಾಡಲಿಲ್ಲ.
"ಅಯ್ಯೋ ಪ್ರಾರಬ್ಧವೇ,ಹೀಗೂ ಆಗ़್ಹೊಯ್ತೇ!"
ಆಗುವುದೇನು-ಹೋಗುವುದೇನು? ಮಾಧು ತಂದೆ ಸುಮ್ಮನಿರುವರೆ?
ಅವರು ಗುರುಬಕ್ಷಸಿಂಗನನ್ನು ಕರೆದು ಅವಾಚ್ಯ ಬೈಗಳ ಮಳೆ ಸುರಿಸಿದರು:
"ಬಲೆಯಲ್ಲಿ ಕೆಡವೋದಕ್ಕೇನೊ ನೀನು ಹುಡುಗೀರ್ನ ಸಾಕ್ತಿರೋದು !"
ಗದ್ಗದ ಕಂಠದಿಂದ ಸಿಂಗ್ ಹೇಳಿದ:
"ಕ್ಷಮಿಸಿ; ನೋಯಿಸಬೇಡಿ ಮನಸ್ಸನ್ನ.ನನ್ನದೇ ತಪ್ಪು.ಹುಡುಗೀ
ದಲ್ಲ.ತಿಳಿಯಹೇಳ್ತೀನಿ ಆಕೆಗೆ."
ಆದರೆ ಆತ, ಒಡೆದ ಸೌದೆಯನ್ನು ಕೈಯಲ್ಲೆತ್ತಿಕೊಂಡು ಹೊಡೆಯುತ್ತ
ಮಗಳಿಗೆ ತಿಳಿಯ ಹೇಳಿದ. ...ಹಾಗೆ,ಅದೇ ಅರಳುತ್ತಿದ್ದ ಆ ಎರಡು ಮೊಗ್ಗೆಗಳೂ ಸಂಪ್ರ
ದಾಯದ ಕಟ್ಟು ಕಟ್ಟಳೆಯ ಮುಳ್ಳುಬೇಲಿಯೊಳಗೆ ಸಿಲುಕಿಕೊಂಡುವು.ಆ
ಮನಗಳನ್ನು ಮುರಿದರು;ಶರೀರಗಳನ್ನು ಜರ್ಜರಿತಗೊಳಿಸಿದರು.
ಅವರು ಪರಸ್ಪರರನ್ನು ಪ್ರೀತಿಸಿದ್ದು ಎಂಥ ಅಪರಾಧ!ಎಂಥ ಅಕ್ಷಮ್ಯ
ಅಪರಧ!ಸಮಾಜದ ಬುಡಕಟ್ಟೆ ಸಡಿಲಗೊಂಡು ಅಲ್ಲೋಲ
ಕಲ್ಲೋಲವಾಗುವ ಹಾಗೆ ಅವರು ನಡೆಯುವುದೇ?

"ಮನೆ ಬಿಟ್ಟುತೋಲಗು!" ಎಂದರು ತಂದೆ,ಮಗನಿಗೆ.

ಸುಮಂಗಲೆ ಶಿರಿನ್
೫೧
"ಕಾಲು ಮುರಿದುಹಾಕ್ತೀನಿ ಬೋಳಿರಂಡೆ"ಎಂದು ಇನೋಬ್ಬ
ಗದರಿಸಿದರು.
ತಯಂದಿರಿಬ್ಬರೂ ಬೇರೆ ಬೇರೆಯಾಗಿ ಕಣ್ಣೀರ ನದಿ ಹರಿಸಿದರು.
ಎರಡೂ ಮನೆಯ ಹಿರಿಯ ಕಿರಿಯರೆಲ್ಲ ನಡೆಯುತ್ತಿದ್ದ ರುದ್ರನಾಟಕದ
ಪ್ರೇಕ್ಷಕರಾದರು.
++++
ಆ ಸಂಜೆ ಅವರೇನೊ ಪರಸ್ಪರ ಮೊದಲೇ ಏರ್ಪಡಿಸಿ ಭೇಟಿಯಾಗ
ಲಿಲ್ಲ.ಅವನ ಕಾಲುಗಳು ಆ ಬೆಟ್ಟದತ್ತ ಬಂದವು.ಆಕೆಯೂ ಬಲುಭಾರ
ದೊಂದು ಹೃದಯವನ್ನೆತ್ತಿಕೊಂಡು ಬಂದಳು.
ಆ ಒಂದೊಂದೇ ಸ್ಮರಣೆ....ಆ ಹತ್ತು ತಿಂಗಳಲ್ಲಿ ಬೆಳೆದು ಬಂದ ಆ
ಬಾಂಧವ್ಯ....ಮೊದಲ ನೋಟ, ಮೋದಲ ಭೇಟಿ, ಮೊದಲ ಮಾತು...ಆ
ಚೀಟಿ-ಕಾಗದಗಳು.....ಜತೆಯಾಗಿ ಕುಳಿತು ಏನೋ ತಿಂಡಿ ತಿಂದ ಆ
ನೆನಪುಗಳು........

ಇಬ್ಬರೂ ಕುಳಿತು ದೀರ್ಘಕಾಲ ಕಣ್ಣಿರನ್ನು ಕೋಡಿಗಟ್ಟ ಹರಿಸಿದರು.
"ಶಿರಿನ್...ಇದೇ ಕೋನೆಯ ಶಿರಿನ್? ಇದೇ ಅಂತ್ಯವೆ?"
"................."
"ಶಿರಿನ್,ಮುಕ್ತಿಯೇ ಇಲ್ಲವೆ ಶಿರಿನ್,ಮುಕ್ತಿಯೇ ಇಲ್ಲವೇ?"

"ಮುಕ್ತಿ? ಈ ಜೀವ ಹಾರಬೇಕು-ಆಗ ಮುಕ್ತಿ!"
ಮಧು, ಆಕೆಯ ಬಾಯಿಗೆ ತನ್ನ ಅಂಗೈಯನ್ನು ಅಡ್ಡಲಾಗಿ ಹಿಡಿದ.
ಆಬದ್ಧ ಮಾತಾಡುವುದು ನ್ಯಾಯವೆ?
ಆದರೆ?ಆದರೆ? ಆ ಮಾತಿನಲ್ಲೊಂದು ಎಳೆ ಸತ್ಯಂಶವಿರಲಿಲ್ಲ?
ಮುಕ್ತಿ-ಕೊನೆಯದು-
"ಕೊನೆ ಮತ್ತೊಮ್ಮೆ ಕೇಳಬೇಕು ಶಿರಿನ್.ನೀನು ನಿನ್ಮನೇಲಿ.
ನಾನು ನನ್ಮನೇಲಿ."
"ಆ ಆಸೆಯು ಮುಗಿದ ಮೇಲೆ?"
"ಅದು ನಾಳೆಯ ತೀರ್ಮಾನ."
"ಹೊಂ.ಮಧು"
೫೨
ಅನ್ನಪೂರ್ಣ
...ಆ ನಾಳೆ ಬರದೇ ಹೋಗಲಿಲ್ಲ. ಎರಡು ಮನೆಗಳಲ್ಲೂ ಆ ದಿನ
ರೌದ್ರತೆ ಪರಾಕಾಷ್ಠೆಯನ್ನು ಮುಟ್ಟಿತ್ತು.
ಕತ್ತಲಾದಾಗ ಅವರು ಸಂಧಿಸಿದರು.ಹಿಂದೆಯಾಗಿದ್ದರೆ ತಡವಾಗಿ
ಮನೆಗೆ ಹೋದರೆ ಬೈಗುಳ ಕೆಳಬೇಕು. ಈ ರಾತ್ರೆ ಬೇಕಾದರೆ ಎಷ್ಟು
ಹೊತ್ತಾದರೂ ಸರಿಯೆ! ಸಿಂಗರಿಸಿಕೊಂಡು ಬಂದಿದ್ದಳಾಕೆ. ಆ ವ್ಯಂಗ್ಯ ನಗೆಯೋ! ಪಾಯ
ಜಾಮ ತೊಟ್ಟು,ಎದೆಗೆ ಅಡ್ಡವಾಗಿ ಶಾಲನ್ನು ಇಳಿಬಿಟ್ಟು, ಬರುವುದರ
ಬದಲು ಆಕೆ, ಕನ್ನಡ ಹುಡುಗಿಯರ ಹಾಗೆ ಸೀರೆಯುಟ್ಟು ಬಂದಿದ್ದಳು.
ಮತ್ತೆ ಮತ್ತೆ ಆಕೆ ನಗುತ್ತಿದ್ದಳು.
ಎರಡೂ ತೋಳುಗಳನ್ನಾಕೆ ಮಾಧವನ ಕತ್ತಿನ ಸುತ್ತಲೂ ಬಳಿಸಿದಳು.
ಆ ಮುಖವನ್ನಾತ ಅತಿ ಸಮಿಪದಲ್ಲೇ ನೋಡಿದ. ಒಬ್ಬರ ತುಟಿಗಳು
ಇನ್ನೋಬ್ಬರದನ್ನು ಒತ್ತಿಕೊಂಡವು. ಪರಸ್ಪರ ತೋಳತೆಕ್ಕೆಯಲ್ಲೇ ಅವರು
ಕ್ಷಣಕಾಲ ವಾಸ್ತವತೆಯನ್ನೇ ಮರೆತರು. ಆ ಪ್ರಥಮ ಚುಂಬನ;ಕೊನೆ
ಯದೂ ಆದ ಆ ಚುಂಬನ.
ಆ ಬಳಿಕ ಆತ ಆ ಮಾತ್ರೆಗಳನ್ನು ಕೊಟ್ಟ.
.......ಅನಿವಾರ್ಯವೆನಿಸಿದಾಗ,ಅವಮಾನ ಹೆಚ್ಚಿದಾಗ.....ಮುಕ್ತಿಯ
ಸಾಧನೆಗಾಗಿ.
...ಹಾಗೆ ಅವರು ಆಗಲಿದರು,
ಮರುದಿನ ಬೆಳೆಗ್ಗೆಯೇ ಶಿರಿನ್‌ಳ ಪಾಲಿಗೆ ಆ ಸಂಧಿಯೊದಗಿತು.
ಮಾತ್ರೆಗಳು ಕರುಳನ್ನು ಕತ್ತರಿಸತೊಡಗಿದಾಗ ಆಕೆ ಚೀರಾಡಿದಳು.ಸಾವು
ಸಲೀಸಾಗಿ ಬರುವುದುಂಟೆ?
ಹಾಹಾಕಾರವೆದ್ದಿತು.ಡಾಕ್ಟರು ಬಂದರು.ಅಂಬ್ಯುಲೆನ್ಸ್ ಕಾರ್
ಬಂತು.ಮತ್ತೆ ಆ ಚಿಕಿತ್ಸೆಯ ಯತ್ನ.
ಈ ವಿಷಯ ತಿಳಿದಾಗ ಮಾಧವನ ತಂದೆ ಮಗನ ರಕ್ಷಣೆಗಾಗಿ
ಯತ್ನಿಸಿದರು.ಆದರೆ ಆತ ಕ್ರಾಪು ಕೆದರಿಸಿಕೊಂಡು ಹುಚ್ಚನ ಹಾಗೆ ಸೈಕ
ಲೇರಿ ಅಂಬ್ಯುಲೆನ್ಸ್ ಗಾಡಿಯನ್ನೇ ಹಿಂಬಾಲಿಸಿದ.
ಶಿರಿನಳ ಕುಟುಂಬ ಹೊರೆತಾಗಿ ಬೇರೆ ಯಾರನ್ನು ಒಳಬರಲು
ಸುಮಂಗಲೆ ಶಿರಿನ್
೫೩
ಅವರು ಬಿಡಲಿಲ್ಲ.ಆದರೆ ಭಯಂಕರ ತೋರಿದ ಆ ತೊಳಲಾಟದಲ್ಲೂ
ಶಿರಿನ್," ಮಧೂ ಮಧೂ" ಎಂದು ಚೀರಾಡುತ್ತಿದ್ದಳು.
ಆತ ಹುಚ್ಚನಂಟತೆ ಕಾಟಿನ ಬಳಿ ಧಾವಿಸಿದಾಗ ನೆರೆದಿದ್ದವರು ಹಾದಿ
ಬಿಟ್ಟರು.ಆತ ಆಕೆಯ ಎರಡೊ ಕೈಗಳನ್ನೆತ್ತಿ ಅವಚಿಕೊಳ್ಳುತ್ತ ಗೋಳೋ
ಎಂದು ರೋದಿಸಿದ.ಸುತ್ತು ನಿಂತಿದ್ದ ಅಪರಿಚಿತರು ಕೆಲವರ ಕಣ್ಣುಗಳಲ್ಲೂ
ನೀರು ಹನಿಯಾಡಿಸಿತು.

ಲೇಡಿ ಡಾಕ್ಟರು ಆತನನ್ನು ಸಂತೈಸಲು ನೋಡುತ್ತಿದ್ದರು.
ಕೊನೆಯವಿದಾಯ ಹೇಳುವನಂತೆ ಆಕೆಯ ಮುಂಗುರುಳನ್ನೊಮ್ಮೆ
ನೇವರಿಸಿ ಆತ ಹೊರಟು ಬಂದ. ಹಾಗೆ ಬಂದವನು ಹೊರಗೆ ಬೆಂಚಿನ
ಮೇಲೆ ಕುಳಿತ.ಅಲ್ಲಿ ಆತ ಮಾತ್ರೆಗಳನ್ನು ತಿಂದುದನ್ನು ಯಾರೂ ಕಾಣರು.
ಆತ ಹೊಟ್ಟೆ ಹಿಸುಕಿಕೊಂಡು ಗೊರಕ್ ಗೊರಕ್ ಎನ್ನ ತೊಡಗಿದಾಗಲೇ
ಅದು ಗೊತ್ತಾದುದು.
ಮತ್ತೆ ಅದೇ ಆಸ್ಪತ್ರೆಯ ಇನ್ನೊಂದು ಭಾಗದಲ್ಲಿ ಆತನ ಚಿಕಿತ್ಸೆ
ನಡೆಯಿತು.
ಒಂದು ಕೈಯಿಂದ ಕಾಟಿನ ಹಿಂಭಾಗದ ಸರಳನ್ನು ಹಿಡಿದುಕೊಂಡು
ಮೇಲ್ನೋಗವಾಗಿ ಉಸಿರಿಗಾಗಿ ಚಡಪಡಿಸಿದ ಆ ದ್ರಶ್ಯವೊ !
"ఆ..ಅ`ಹ್ ! ... ಶಿರಿನ್...ಶಿರಿ.."
ಶಿರಿನ್ ಅಂತೆ. ಯಾರ ಹೆಸರೆರೋ ಏನು ಕಥೆಯೋ ವಿವರಿಸಬೇಕಾದ್ದೇ
ಇರಲಿಲ್ಲ, ಕುರುಡರಿಗೂ ಕಾಣುವ ಹಾಗೆ ಆ ದುರಂತ ನಡೆಯುತ್ತಿತ್ತು.
ಪ್ರೀತಿಯ ತಾಯಿ, ಮಗನೆರಡೂಕಾಲುಗಳನ್ನು ಬಿಗಿಹಿಡಿದು, ಅವುಗಳ
ಮೇಲೆ ಹಣೆಯನ್ನಿಟ್ಟು,ಬಿಕ್ಕಿಬಿಕ್ಕಿ ಅಳುತ್ತಿದ್ದದು.ತಲೆ ಕೆಳಗಡೆಮಾಡಿ ఆ
ತಂದೆ ಕುಳಿತರು, ಅಲ್ಲಿ ನೆರೆದಿದ್ದ ಮಧೂ ಬಳಗವೋ... ಆತನ
ನಾಲಾರು ಮಿತ್ರರೋ...

ಮಧಾಹ್ನದ ಎರಡು ಗಂಟೆಗೆ ಮಧುವಿಗೆ ಮುಕ್ತಿ ದೊರೆಯಿತು. ಎಂಥ
ಹೋರಾಟ ಅದು! ಮಾತು ಉಡುಗಿಹೋಗಿದ್ದರೂ ದೃಷ್ಟಿ, ಶಿರಿನ್ ಮಲಗಿದ್ದ
ವಿಭಾಗದತ್ತ ಹರಿಯುತ್ತಿತ್ತು.. "ಒಲ್ಲೆ, ಕೊನೆಗಾಣಲೊಲ್ಲೆ" ಎನ್ನುತ್ತಿತ್ತು
ಜೀವ. ಮತ್ತೆ ಬದುಕುವ ಆಸೆ ಇತ್ತೇನೋ ಅದಕ್ಕೆ!

೫೪
ಅನ್ನಪೂರ್ಣ
ಆದರೆ ಆ ಸಾವಿನ ಒಪ್ಪಂದ.ಆ ಎರಡು ಹಿರಿಯ ಜೀವಿಗಳ ಮಹಾ
ಹಂಬಲಕ್ಕೆ ಕಿರಿಯ ಮುಕ್ತಾಯ...ಕಲ್ಲನ್ನು ಕರಗಿಸುವ,ಕತ್ತನ್ನು ಒತ್ತರಿಸುವ
ಉಗುಳು ನುಂಗಿಸುವ ಆ ಘಟನೆ.
ಶಿರಿನ್‍ಗೆ ಆಗ ಅದೊಂದು ತಿಳಿಯದು.ಸಾವು ಬದುಕುಗಳ ನಡುವೆ
ಗುಟುಕರಿಸುತ್ತಿದೆ ಅವಳ ಜೇವ. ಇ೦ಗದ ಆಸೆಯನ್ನು ಆ ಬೊಗಸೆಗಣ್ಣು
ಗಳು ಹೊರಸೊಸುತ್ತಿವೆ.
ಪ್ರಜ್ಙೆ ಮರಳಿಬರುತ್ತದೆ.
"ಇನ್ನು ಅಪಾಯವಿಲ್ಲ-!" ಎನ್ನುತ್ತಿದ್ದಾರೆ ಡಾಕ್ಟರು. ಲೇಡಿಡಾಕ್ಟರು
ಮುಗುಳ್ನಗುತ್ತಿದ್ದಾರೆ. ಸಾವಿನ ಒಪ್ಪಂದವನ್ನು ಮುರಿದುಹಾಕಿದರು,ಬದು
ಕಿನ ಆರಾಧಕರಾದ ಆ ಡಾಕ್ಟರು. ಒಂದು ಜೀವವನ್ನು ಅವರು ಉಳಿಸಿದ
ಹಾಗಾಯಿತು.
ಶಿರಿನ್ ಬಲು ನಿಧಾನವಾಗಿ ಚೇತರಿಸಿಕೊಂಡಳು.ಆಕೆಗೆ ಮುಕ್ತಿ
ಬೆಕಿತ್ತು.ಆದರೆ ಅದನ್ನು ಎಲ್ಲರೂ ಸೇರಿ ನಿರಾಕರಿಸಿದ್ದರು. ಎಂಥ
ಪಿತೂರಿ!ಒಳಸಂಚು! ಆಕೆಯ ಮನಸ್ಸು ಕಹಿಯಾಗಿತ್ತು.ಡಾಕ್ಟರಿಗೆ ಆಕೆ
ಕೃತಜ್ಙತೆ ಅರ್ಪಿಸಲಿಲ್ಲ.
ಮಧು?ಮಧು? ಮತ್ತೆ ಜೀವ ಆತನಿಗಾಗಿ ಹಂಬಲಿಸುತ್ತಿತ್ತು.
ಎಲ್ಲಿ ಆತ?ಎಲ್ಲಿ?
ಯಾರೊಬ್ಬರೂ ಉತ್ತರ ಕೊಡರು. ಹಿರಿಯರನ್ನಾಕೆ ಬಾಯ್ಬಿಟ್ಟು
ಕೇಳಲಿಲ್ಲ. ಚಿಕ್ಕ ತಂಗಿಯೊಡನೆ ಆಕೆ " ಮಾಮಾ ಎಲ್ಲಿ?" ಎಂದಾಗ
ಉತ್ತರ ಬರಲಿಲ್ಲ.
ಆದರೂ ಆ ಕಣ್ಣುಗಳ ನೋಟ ಅತ್ತಿತ್ತ ಹುಡುಕುತ್ತ ಅಲೆಯಿತು.
ಮೂರನೆಯ ದಿನ ಮಾಧವನ ತಾಯಿ ಬಂದರು.ರಾತ್ರೆಯೆಲ್ಲವೂ
ನಿದ್ದೆ ಬಿಟ್ಟು ಕುಳಿತಿದ್ದ ಶಿರಿನ್‌ಳ ತಾಯಿಯನ್ನು ಕಂಡು ಅವರು ಹೇಳಿದರು:
"ಅಕ್ಕಾ,ನೇವು ಹೋಗಿ ಬನ್ನಿ.....ಸ್ನಾನ ಊಟ ಮುಗಿಸ್ಕೊಂಡು ಬನ್ನಿ.
ನಾನಿರ್ತೀನಿ..."
"ಅಕ್ಕಾ!"
ಮತ್ತೆ ಆ ಗೋಳೋ ಅಳು. ಶಿರಿನ್ ನಿಶ್ಚಲನೋಟದಿಂದ ಇದನ್ನು
ಸುಮಂಗಲೆ ಶಿರಿನ್
೫೫

ನೋಡುತ್ತಿದ್ದಾಳೆ. ಅಳುಕು ಆಕೆಗೆ. ಮಧುವಿನ ತಾಯಿ ತನ್ನ ಬಳಿಯಲ್ಲಿ?
ಸೂರ್ಯೋದಯ ಪಶ್ಚಿಮದಿಂದಲೆ ಆದದು? ಕಲಿಯುಗವೇ ಕಳೆದು
ಹೋಯಿತೇ ಹಾಗಾದರೆ? ತನ್ನ ತಾಯಿಯ ರೋದನದ ಅರ್ಥ?
ఆ ಅರ್ಥ బలు నిಧಾನವಾಗಿ ತಿಳಿಯಿತು. ಹಿಮಗಡ್ಡೆಯನ್ನು ಸೀಳುವ
ಹಾಗೆ ಆ ವಾರ್ತೆ ತಲುಪಿತು- ಮೊದಮೊದಲು ಅಸ್ಪಷ್ಪವಾಗಿ, ಆದುದೇನೆ೦ದು
ಆ ತಾಯಿಯೂ ಹೇಳಲಿಲ್ಲ. ಆದರೆ ಶಿರಿನ್ ಊಹಿಸಿಕೊ೦ಡಳು.
ಮನಸ್ಸು ಹೊಯ್ದಾಡಿತು....ಆಕೆಯೊಬ್ಬಲಳೇ ಪಾಪಿ. ಕೈಲಾಗದ ಹೇಡಿ.
ಆತನಾದರೋ ತನ್ನ ಪಾಲಿನ ಕರ್ತವ್ಯ ಪೂರೈಸಿ ತನ್ನನ್ನು ಬಿಟ್ಟು ಹೋದ.
ಆದರೆ ಎಲ್ಲ ನೋವಿಗೂ ದಿವ್ಯೌಷಧವೆಂಬಂತೆ ಸಕ್ಕರೆಯ ನಾಲ್ಕು
ಮಾತನ್ನು ಆ ತಾಯಿ ಹೇಳಿದರು:
"ಪ್ರೇಮಾ....ಶಿರಿ....ನೀನೇನೇ ಇನ್ನು ನನ್ನ ಪಾಲಿನ ಮಾಧೂ, ಎಲ್ಲಾ,
ನೀನೇನೇ....ನನ್ನ ಸರ್ವಸ್ವ....ಕ್ಷಮಿಸು ತಾಯಿ ಈ ಮುದುಕೀನಾ.... ಕ್ಶಮಿಸು"
++++
ಕ್ಷಮಿಸಬೇಕಂತೆ!
ಮತ್ತೆ ನೂರು ವಿಚಾರಗಳು ಬಂದವು: ಇನ್ನು ನನ್ನ ಪಾಲಿಗೆ ಉಳಿದು
ದೇನು? ಲೈಲಾ-ಮಜ್ನು; ಶಿರಿನ್-ಫರ್ಹಾದ್, ದೊಡ್ಡ ಪರಂಪರೆ
ಇದು. . .ಅದೇ ಹಾದಿಯಲ್ಲಿ ಅಲ್ಲವೆ ತಾವು ಸಾಗಬೇಕಾದದ್ದು? ಮಾಧು
ನಿಜಕ್ಕೂ ವೀರ....ಕೊನೆಗೆ ತನಗೇ ಆವಮಾನವಾದದ್ದು.
. . .ಸಾಯಬೇಕು ಇನ್ನಾದರೂ. . .
ಆದರೆ ದುರ್ಬಲವಾಗಿದ್ದ ಆ ಹೃದಯ ಯಾವ ತಿರ್ಮಾನವನ್ನು ಮಾಡು
ವುದಕ್ಕೂ ಸಮಥ‍ವಾಗಲಿಲ್ಲ. ಕೃಶವಾಗಿದ್ದ ಆ ಶರೀರ ಕೊರಗಿ ಕೊರಗಿ
ಮತ್ತೂ ಕಡ್ಡಿಯಾಯಿತು.
ಡಾಕ್ಟರು ತನ್ನ ತಂಗಿಯೇ ಆಕೆ ಎಂಬಂತೆ ಆರೈಕೆ ಮಾಡಿ ಬದುಕಿಸಿದರು, . .

... ಸಂಜೆಗತ್ತಲು ಕವಿಯುತ್ತಿದೆ. ಆಸ್ಪತ್ರೆಯ ಸ್ಪೆಶಲ್ ವಾರ್ಡಿನಲ್ಲಿ
ಪ್ರಶಾಂತವಾಗಿ ವಿದ್ಯುತ್ ಬೆಳಕು ಪಸರಿಸಿದೆ. ಪಕ್ಕದ ಕೋಣೆಗಳಲ್ಲಿ ಗುಣ
ಮುಖರಾಗುತ್ತಿದ್ದವರೆಲ್ಲ ಮಾತನಾಡುತ್ತಾ ನಗುತ್ತಾ ಹೊತ್ತು ಕಳೆಯುತ್ತಿ
೫೬
ಅನ್ನಪೂರ್ಣಾ

ದ್ದಾರೆ. ರೇಡಿಯೋ ದಿಲ್ಲೀ ಕೇಂದ್ರದಿಂದ ಆಶಾವಾದದ 'ಆಯೇಗಾ ಆಯೇಗಾ'
ಅಮರಗೀತವನ್ನು ಮಿಡಿಯುತ್ತಿದೆ.
ಶಿರಿನ್ ದಿಂಬಿಗೊರಗಿ ಕುಳಿತು ಕುಳಿತು, ಕಿಟಿಕಿಯಾಚೆ ದೂರ ದೂರ ನೋಡು
ತ್ತಿದ್ದಾಳೆ. ಇನ್ನೇನು ತಾಯಿ ಊಟವೆತ್ತಿಕೊಂಡು ಬರುವ ಹೊತ್ತು-
ಫರ್ಹಾದ್ ನನ್ನು ಕಳೆದುಕೊಂಡ ಶೀರಿನ್ ಬದುಕಿ ಉಳಿದಿದ್ದಾಳೆ.
ವೈಧವ್ಯ ಪ್ರಾಪ್ತವಾಗಿದೆ ಆಕೆಗೆ.
ವೈಧವ್ಯ. ವೈಧವ್ಯವೆಂದರೆ?
ಮಾಧವನ ಮಧುರ ನೆನಪೊಂದರ ಹೊರತು ಬೇರೇನೂ ಉಳಿಯಲೇ
ಇಲ್ಲವೆ ಆಕೆಯ ಪಾಲಿಗೆ?
... ಹದಿನೇಳರ ವಯಸ್ಸಿನಲ್ಲಿಯೇ ಮುಕ್ತಾಯ ಸಾಧ್ಯವೆ?
. ..ಆ ಬಾಹುಗಳು ಮತ್ತೆ ಬಲಿಷ್ಠವಾಗುವವು. ಆ ಹೃದಯ ಮತ್ತೆ
ತುಂಬಿಕೊಳ್ಳುವುದು. ಮುಖವರಳುವುದು ಮತ್ತೊಮ್ಮೆ.
ಮತ್ತೊಮ್ಮೆ ಶೀತಲಗಾಳಿಗೆ ಮುಖವೊಡ್ಡಿ ಆಕೆ ಮುಂಗುರಳನ್ನು ನೇವ
ರಿಸದೆ ಇದ್ದಾಳೆ? ಅರಳುವ ಚೆಂಗುಲಾಬಿಯನ್ನು ಮತ್ತೊಮ್ಮೆ ಆಘ್ರಾಣಿಸಿ
ಆಕೆ ಎದೆಯುಬ್ಬಿಸಲಾರಳೆ.
. . .ಇಂಥ ನಿಷ್ಠರ ನಿಯಮ ದಿಗ್ಭಂಧನವಿಲ್ಲದ ಸಮಾಜ ಇದ್ದೀತು
ಎಲ್ಲಿಯೋ. ಅಲ್ಲಾಗದಿದ್ದರೆ ಇಂಥ ಸ್ಥಿತಿ ಒದಗುತ್ತಿತ್ತೆ?
... ವಿಶಾಲವಾದುದು ಈ ಪ್ರಪಂಚ. ಅದರಲ್ಲಿ ಎಳೆಯ ಶಿರಿನ್ ಗೆ ಜಾಗ
ವಿಲ್ಲ ಎನ್ನುವವರು ಯಾರು? ಆ ಹಿರಿಯ ಹೃದಯದಲ್ಲಿ ಪ್ರೀತಿಗೆ-ಪ್ರೇಮಕ್ಕೆ
ಮತ್ತೆ ಸ್ಥಾನವಿಲ್ಲ ಎನ್ನುವವರು ಯಾರು?
ಆದರೆ ಮಾಧುವಿನ ಸಹಸ್ರ ನೆನಪು ಆಕೆಯನ್ನಾವರಿಸಿದೆ. ಆರನ ನೆನಪಿ
ಗಾಗಿ ಬದುಕಬೇಕು. ಆ ಕ್ರೂರ ಘಟನೆಗೆ ಸಾಕ್ಷ್ಯವಾಗಿ ಉಳಿಯಬೇಕು.
ಮೈಮರೆಯುತ್ತಿದೆ ಆಕೆಗೆ. ಗತಕಾಲದ ನೆನಪುಗಳು ಭವಿಷ್ಯತ್ತಿನ
ಕಲ್ಪನೆಗಳೊಡನೆ ಲೀನಗೊಳ್ಳುವುದು ಆಗಲೇ.
ಆಕೆ ತನ್ಮಯಳಾಗಿದ್ದಾಳೆ.
ವಿಧವೆಯಲ್ಲ ಆಕೆ-ಸುಮಂಗಲೆ ಶಿರಿನ್!

                 ---------