ಕನ್ನಡಿಗರ ಕರ್ಮ ಕಥೆ/ಕಡೆಯ ಉಪಾಯ
ಎಂದು ಕೇಳಿದಳು. ಪಾಪ ! ಲೈಲಿಯು ತಿರುಗಿ ಮಾತಾಡದೆ ಹಾಲು ತರಲಿಕ್ಕೆ ಹೋದಳು. ಇತ್ತ ಮಾಸಾಹೇಬರು ವಿಚಾರಮಗ್ನರಾಗಿಯೇ ಇದ್ದರು. ಇಷ್ಟು ಹೊತ್ತಾದರೂ ಮಗನು ಬಾರದೆಯಿರುವದು ಅವರಿಗೆ ಸಲಕ್ಷಣವಾಗಿ ತೋರಲಿಲ್ಲ. ಅವರ ಮನಸ್ಸು ಬಹಳ ಅಸ್ವಸ್ಥವಾಯಿತು. ನಾನು ನಿನ್ನೆ ಆಡಿದ ಮಾತಿಗೆ ರಣಮಸ್ತನು ಸಿಟ್ಟಾಗಿ ಎಲ್ಲಿಗಾದರೂ ಹೊರಟುಹೋಗಿರಬಹುದೆ? ಹಾಗಿದ್ದರೆ ಮುಂದೆ ನನ್ನ ಗತಿಯೇನು ? ಛೇ, ನನ್ನ ರಣಮಸ್ತನು ಹೀಗೆ ಮಾಡಲಿಕ್ಕಿಲ್ಲ. ಆತನು ಹೀಗೆ ನನ್ನನ್ನು ಎಂದೂ ಬಿಟ್ಟುಹೋಗಲಿಕ್ಕಿಲ್ಲ. ಸಿಟ್ಟಾಗಿ ತಾಸೆರಡು ತಾಸು ಹೋಗುವದರೊಳಗೇ ಆತನಿಗೆ ಪಶ್ಚಾತ್ತಾಪವಾದೀತು. ಎಂಬಿವೇ ಮೊದಲಾದ ವಿಚಾರಗಳಿಂದ ಅವರು ತಲ್ಲಣಿಸುತ್ತಿರಲು, ಲೈಲಿಯು ಹಾಲು ತಕ್ಕೊಂಡುಬಂದಳು. ಮಾಸಾಹೇಬರು ಹಾಲನ್ನು ಕುಡಿದು; ಆದರೂ ಅವರಿಗೆ ಸಮಾಧಾವಾಗಲಿಲ್ಲ. ಅವರು ತಮ್ಮ ಕೋಣೆಯಿಂದ ಹೊರಬಿದ್ದು ಮಗನ ಬಂಗಲೆಗೆ ಹೋದರು. ಅಲ್ಲಿಂದ ಕುಂಜವನವನ್ನು ಪ್ರವೇಶಿಸಿದರು ಹೋದ ನಜೀರನು ಇನ್ನೂ ಬರಲಿಲ್ಲವಲ್ಲ ? ಕರೀಮನು ಹಾದಿಯಲ್ಲಿ ಭೇಟಿಯಾಗಿದ್ದರೆ ನಜೀರನು ಇಷ್ಟು ಹೊತ್ತಿಗೆ ಬರುತ್ತಿದ್ದನು. ಕರೀಮನು ಹಾದಿಯಲ್ಲಿ ಭೆಟ್ಟಿಯಾದಂತೆ ತೋರುವದಿಲ್ಲ. ಇನ್ನು ಏನು ಮಾಡಬೇಕು? ನಾನಾದರೂ ಹೋಗಲಾ ! ಏನೂ ಗೊತ್ತಿಲ್ಲದೆ ಹೋಗುವದಾದರೂ ಎತ್ತ ? ಎಂದು ಚಡಪಡಿಸುತ್ತ ಕುಂಜವನವನ್ನೆಲ್ಲ ತಿರುಗಿದರಲ್ಲದೆ, ವಿಜಯನಗರದ ಹಾದಿಯ ಕಡೆಗೆ ಹೋಗಿ ನೋಡಿ ನೋಡಿ ದಣಿದರು. ಇಷ್ಟರಲ್ಲಿ ಮಧ್ಯಾಹ್ನವು ತಿರುಗಿತು. ಅದರೂ ಯಾರೂ ಸುಳಿಯಲಿಲ್ಲ.
ಆಗ ಲೈಲಿಯು ಮಾಸಾಹೇಬರ ಬಳಿಗೆ ಬಂದು- “ನಿನ್ನಿನಿಂದ ಅನ್ನವಿಲ್ಲ. ಊಟಮಾಡಬೇಕೆಂದು” ಹೇಳಿಕೊಳ್ಳಲು, ಮಾಸಾಹೇಬರು-ಹುಡುಗನ ಗೊತ್ತು ಹತ್ತುವವರೆಗೆ ಅನ್ನ-ನೀರು ವರ್ಜ್ಯವು. ಆತನು ನನ್ನ ಮೇಲೆ ಸಿಟ್ಟಾಗಿ ಹೋಗಿರುವನು. ಆತನ ಗೊತ್ತುಹಚ್ಚಿ, ಆತನ ಸಂಗಡ ಎರಡು ಮಾತುಗಳನ್ನಾಡಿದ ಬಳಿಕ ಊಟವು, ಅಲ್ಲಿಯವರೆಗೆ ಊಟವಿಲ್ಲ. ಸುಮ್ಮನೆ ಆಗ್ರಹ ಮಾಡಬೇಡ ಎಂದು ಸ್ಪಷ್ಟವಾಗಿ ಹೇಳಿದರು. ಲೈಲಿಯು ಎಷ್ಟು ಹೇಳಿಕೊಂಡರೂ ಅವರು ಕೇಳಲಿಲ್ಲ. ಆಗ ಲೈಲಿಯು-ಊಟವಿಲ್ಲದಿದ್ದರೆ ಇಲ್ಲ, ಹೀಗೆ ಬಿಸಲಲ್ಲಿ ಎಡತಾಕುವದನ್ನು ಬಿಟ್ಟು ಒಳಗಾದರೂ ನಡೆಯಿರಿ, ಎಂದು ಹೇಳಿದಳು. ಅದಕ್ಕೂ ಮಾಸಾಹೇಬರು ಕಿವಿಗೊಡಲಿಲ್ಲ. ಕಡೆಗೆ ತಾಯಿಯು ಮಗಳನ್ನು ಸಥಿಯಿಂದ ಸಿಟ್ಟುಮಾಡಿ ಕರಕೊಂಡು ಹೋಗುವಂತೆ, ಲೈಲಿಯು ಮಾಸಾಹೇಬರನ್ನು ಸಿಟ್ಟುಮಾಡಿ ಒಳಗೆ ಕರಕೊಂಡು ಹೋದಳು. ಮಾಸಾಹೇಬರು ಬಹು ಅಶಕ್ತರಾಗಿದ್ದರು. ತಮ್ಮ ಕೋಣೆಯೊಳಗೆ ಹೋದ ಕೂಡಲೇ ಅವರು ಹೊರಸಿನ ಮೇಲೆ ಕಣ್ಣುಮುಚ್ಚಿ ಸುಮ್ಮನೆ ಮಲಗಿಕೊಂಡರು. ಹೀಗಿರುವಾಗ ಹೊತ್ತು ಮುಳುಗಿತು, ಕತ್ತಲಾಗಹತ್ತಿತು. ರಣ ಮಸ್ತಖಾನನೂ ಇಲ್ಲ, ಆತನನ್ನು ನೋಡಲಿಕ್ಕೆ ಹೋದವನೂ ಇಲ್ಲ. ಇನ್ನು ತಾವು ಸ್ವತಃ ಹೋದಹೊರತು ಎರಡನೆಯ ಮಾರ್ಗವಿಲ್ಲೆಂದು ಮಾಸಾಹೇಬರು ನಿಶ್ಚಯಿಸಿದರು; ಆದರೆ ಅವರು ಎಲ್ಲಿಗಂತ ಹೋಗಬೇಕು ? ರಣಮಸ್ತಖಾನನು ಇಂಥಲ್ಲಿ ಇರುವನೆಂದು ಗೊತ್ತಾದರೆ ಹೋಗುವದು ನೆಟ್ಟಗೆ, ಏನೂ ಗೊತ್ತಿಲ್ಲದೆ ಹೋಗಿ ಫಲವೇನು? ಎಂಬ ಪ್ರಶ್ನೆಯು ಉತ್ಪನ್ನವಾಗಿ ಅವರು ನಿರಾಶೆಪಡುತ್ತಿರಲು, ನಜೀರನು ಬಂದ ಸುದ್ದಿಯನ್ನು ಲೈಲಿಯು ಹೇಳಿ, ಆತನನ್ನು ಮಾಸಾಹೇಬರ ಎದುರಿಗೆ ಬಂದು ನಿಲ್ಲಿಸಿದಳು. ನಜೀರನು ಬಂದವನು ಏದುಸಿರು ಬಿಡುತ್ತಲೇ ಬಂದಿದ್ದನು. ಅವನಿಗೆ ತಟ್ಟನೆ ಮಾತಾಡಲಿಕ್ಕೆ ಬರಲೊಲ್ಲದು. ಮಾಸಾಹೇಬರು ಆತನನ್ನು ನೋಡಿ, “ಏನು ಸುದ್ದಿಯನ್ನು ತಂದಿರುವೆ ?” ಎಂದು ಕಣ್ಣುಸನ್ನೆಯಿಂದಲೇ ಕೇಳಿದರು. ಅದನ್ನು ನೋಡಿ ಏದುಸಿರು ಬಿಡುತ್ತಲೇ ನಜೀರನು ಮಾಸಾಹೇಬರನ್ನು ಕುರಿತು-
ನಜೀರ-ಮಾಸಾಹೇಬ, ನನ್ನ ಬೆನ್ನ ಹಿಂದೆಯೇ ಕರೀಮನು ಬರುತ್ತಾನೆ. ಆತನು ಎಲ್ಲ ಸುದ್ದಿಯನ್ನು ಏಕಾಂತದಲ್ಲಿ ತಮಗೆ ಹೇಳುವನು.
ಮಾಸಾಹೇಬ-(ಹಾಸಿಗೆಯಿಂದ ಎದ್ದು ಕುಳಿತು) ಅವನು ಹೇಳುವದನ್ನು ಹೇಳಲಿ : ಆದರೆ ರಣಮಸ್ತಖಾನನು ಬಂದನೇ ? ಆತನು ಸುರಕ್ಷಿತನಾಗಿರುವನೇ?
ನಜೀರ-ಅದೇನೂ ನನಗೆ ಗೊತ್ತಿಲ್ಲ. ನವಾಬ ಸಾಹೇಬರು ಕರೀಮನ ಸಂಗಡವಂತು ಇಲ್ಲ. ಅಂದಬಳಿಕ ಅವನು ಎಲ್ಲಿರುವನೋ ಏನೋ ಯಾರಿಗೆ ಗೊತ್ತು !
ಈ ಮೇರೆಗೆ ಅವರಿಬ್ಬರೂ ಮಾತನಾಡುತ್ತಿರಲು ಕರೀಮನು ಬಂದನೆಂಬ ಸುದ್ದಿಯು ಮಾಸಾಹೇಬರಿಗೆ ಹತ್ತಿತು. ಆಗ ಅವರು ಎಲ್ಲರನ್ನು ಹೊರಗೆ ಕಳಿಸಿ, ಕರೀಮನನ್ನು ಏಕಾಂತದಲ್ಲಿ ಕರೆದರು. ಆಗ ಕರೀಮನು ಮಾಸಾಹೇಬರ ಬಳಿಗೆ ಬಂದು ಮೂರುಸಾರೆ ಕುರ್ನಿಸಾತ ಮಾಡಿ ಕೈ ಜೋಡಿಸಿಕೊಂಡು *ಗರೀಬಪರವರ” ಈ ಗುಲಾಮನಿಂದ ದೊಡ್ಡ ಅಪರಾಧವಾಗಿದೆ; ಕ್ಷಮೆಯ ಬಗ್ಗೆ ಆಶ್ವಾಸನೆ ದೊರೆತರೆ ಎಲ್ಲ ಸಂಗತಿಯನ್ನು ಅರಿಕೆ ಮಾಡಿಕೊಳ್ಳುವೆನು, ಅನ್ನಲು, ಮಾಸಾಹೇಬರು- “ಹೇಳು ಹೇಳು, ಎಂದು ಆತುರಪಡಹತ್ತಿದರು. ಆಗ ಕರೀಮನು ರುಮಾಲದಿಂದ ಕೈಯನ್ನು ಕಟ್ಟಿಕೊಂಡು ದೈನ್ಯಭಾವದಿಂದ ಗರೀಬ ಪರವರ, ಮಾಲೀಕಸಾಹೇಬರು ತಮಗೆ ಹೇಳಿದ ಮಾತನ್ನು-ಕಟ್ಟ ಕಡೆಯ ಮಾತನ್ನು ಯಾವ ಮೋರೆಯಿಂದ ನಾನು ತಮ್ಮ ಮುಂದೆ ಹೇಳಲಿ ?
ಮಾಸಾಹೇಬ-(ಕೂಡಲೆ ಗಾಬರಿಯಾಗಿ) ಕಡೆಯ ಮಾತು! ಎಲಾ ! ನಮ್ಮ ರಣಮಸ್ತಖಾನನು ನೆಟ್ಟಗಿದ್ದಾನಷ್ಟೇ ? ಕಡೆಯ ಮಾತು ಎಂದು ಹೇಳುವೆಯಲ್ಲ ? ಹಾಗೆಂದರೇನು ? ಹೇಳು ಮೊದಲು ಆತನು ಸುರಕ್ಷಿತವಾಗಿ ಇದ್ದಾನೆಯೋ ಇಲ್ಲವೋ ಹೇಳು, ಆಮೇಲೆ ಮುಂದಿನ ಮಾತು.
ಕರೀಮ-ಹೊ ಹೊ ! ಮಾಸಾಹೇಬ, ಅವರು ಸುರಕ್ಷಿತವಾಗಿದ್ದಾರೆ; ಚಕ್ಕಂದದಿಂದ ಇದ್ದಾರೆ; ಆನಂದದಿಂದ ಇದ್ದಾರೆ; ಆದರೆ ಪುನಃ ಅವರು ತಮ್ಮ ಕಣ್ಣಿಗೆ ಮಾತ್ರ ಬೀಳಲಾರರು.
ಮಾಸಾಹೇಬ-ಎಲ್ಲಿರುತ್ತಾನೆ ? ಅದನ್ನು ಮೊದಲು ನನಗೆ ಹೇಳು.
ಕರೀಮ-ಆಗಲೇ ಅವರು ರಾಮರಾಜನ ಸಂಗಡ ವಿಜಯನಗರಕ್ಕೆ ಹೋದರು, ನಾನು ತಮ್ಮ ಅಪ್ಪಣೆಯಂತೆ ತಿರುಮಲನ ಧರ್ಮಶಾಲೆಗೆ ಮುಂಗಡ ಹೋಗಿ ಅವರ ಹಾದಿಯನ್ನು ನೋಡುತ್ತ ಕುಳಿತುಕೊಂಡೆನು. ಮೊದಲು ನನ್ನನ್ನು ರಣಮಸ್ತಖಾನರೇ ಮುಂದೆ ಕಳಿಸಿದ್ದಾರೆ. ಹಿಂದಿನಿಂದ ಅವರು ಬರುವರು” ಎಂದು ಹೇಳಿದೆನು. ನಾನು ಸುಮ್ಮನೆ ಒಂದು ಹಳ್ಳು ಒಗೆದು ನೋಡಬೇಕೆಂದು ಮಾಡಿದೆನು; ಆದರೆ ಅಷ್ಟರಿಂದ ನನ್ನ ಕೆಲಸವೇ ಆಯಿತು. ನನ್ನ ಮಾತನ್ನು ಕೇಳಿದಕೂಡಲೇ ಅವರು ನನ್ನನ್ನು ಒಳ್ಳೆ ಮರ್ಯಾದೆಯಿಂದ ಆದರ ಪೂರ್ವಕವಾಗಿ ನಡಿಸಿಕೊಳ್ಳಹತ್ತಿದರು. ಆಗ ನಾನು ನನಗೆಲ್ಲ ಗೊತ್ತಿರುವದೆಂಬದನ್ನು ತೋರಿಸುವ ಉದ್ದೇಶದಿಂದ ಅವರನ್ನು ಕುರಿತು- “ರಾಮರಾಜರು ಯಾವಾಗ ಬರುತ್ತಾರೆ ! ನಿನ್ನೆ ಬಂದ ಹೊತ್ತಿಗೇ ಬರುವರೋ ?” ಎಂದು ಸುಮ್ಮನೆ ಕೇಳಿ ನೋಡಿದೆನು. ಕೂಡಲೇ ಆ ಕಾವಲುಗಾರರ ಮುಖ್ಯಸ್ಥನು ನನ್ನನು ಕುರಿತು- “ಬರುತ್ತೇವೆಂದು ಹೇಳಿಯಂತು ಕಳಿಸಿದ್ದಾರೆಂದು ಹೇಳಿದನು. ನಾನು ಒಗೆದ ಎರಡು ಹಳ್ಳುಗಳಿಂದಲೂ ಕಾರ್ಯವು ಚೆನ್ನಾಗಿ ಸಾಧಿಸಿತು. ಆಮೇಲೆ ನಾನು ಅವರೊಳಗೆ ಬೆರೆತುಕೊಂಡು ತಂಬಾಕದ ಝರಕೆಗಳ ಮೇಲೆ ಝರಕೆಗಳನ್ನು ಹೊಡೆಯಹತ್ತಿದೆನು. ಅಷ್ಟರಲ್ಲಿ ರಾಮರಾಜರು ಬಂದರೆಂಬ ಸುದ್ದಿಯು ಬಂದಿತು. ಆಗ ಕಾವಲುಗಾರರು ಗಡಬಡಿಸಿ ಓಡಹತ್ತಿದರು. ರಾಮರಾಜನು ಕಾವಲುಗಾರರನ್ನು ಏನೋ ಅವರ ಮಾತಿನಿಂದ ಕೇಳಲು, ಆ ಕಾವಲುಗಾರರ ಮುಖ್ಯಸ್ಥನು ನನ್ನ ಕಡೆಗೆ ಬೆರಳುಮಾಡಿ ಏನೋ ಹೇಳಿದನು. ಆಗ ರಾಮರಾಜರು ಅತ್ಯಂತ ತೀಕ್ಷ್ಣ ದೃಷ್ಟಿಯಿಂದ ನನ್ನನ್ನು ನೋಡಹತ್ತಿದರು. ನಾನು ಸ್ಪಷ್ಟವಾಗಿ ಕುಳಿತಿದ್ದೆನು. ಆಗ ಅವರು ನನ್ನನ್ನು ತಮ್ಮ ಹತ್ತರಕ್ಕೆ ಕರೆದು-ನಿನ್ನನ್ನು ಅವರು ಇಂದು ಮುಂದೆ ಯಾಕೆ ಕಳಿಸಿದರು ? ಅವರು ಬರಲಿಕ್ಕೆ ಇನ್ನೂ ವಿಳಂಬವಿರುವದೋ ಏನು? ಎಂದು ಕೇಳಿದರು. ಅದಕ್ಕೆ ನಾನು-"ಹೌದು, ಸ್ವಲ್ಪ ತಡಮಾಡಿ ಬರಬಹುದು” ಎಂದು ಇಷ್ಟೇ ಹೇಳಿದೆನು. ಒಂದು ಸುಳ್ಳುಮಾತು ಆಡಿದ ಕೂಡಲೇ ಅದನ್ನು ಮುಚ್ಚಲಿಕ್ಕೆ ಎರಡನೆಯ ಸುಳ್ಳು, ಆ ಎರಡನೆಯ ಸುಳ್ಳನ್ನು ಮುಚ್ಚಲಿಕ್ಕೆ ಮೂರನೆಯ ಸುಳ್ಳು ಎಂಬಂತೆ ನನ್ನ ಈ ಕೃತಿಯು ಅವರಿಗೆ ತಿಳಿದರೆ, ನನ್ನ ಗತಿಯು ಏನಾದೀತೆಂಬದರ ಎಚ್ಚರವು ಆಗ ನನಗೆ ಉಳಿಯಲಿಲ್ಲ. ದುರ್ದೈವದಿಂದ ಖಾನ್‌ಸಾಹೇಬರು ಅಲ್ಲಿಗೆ ಬಂದುಬಿಟ್ಟರು. ಅವರನ್ನು ನೋಡಿದ ಕೂಡಲೇ ನನ್ನ ಕಣ್ಣುಗಳು ತೆರೆದು ನಾನು ಹಿಂದಹಿಂದಕ್ಕೆ ಸರಿಯಹತ್ತಿದೆನು. ಅಷ್ಟರಲ್ಲಿ ರಾಮರಾಜನು ಖಾನಸಾಹೇಬರನ್ನು ಕುರಿತು-ನೀವು ಮುಂದೆ ಕಳಿಸಿದ ಮನುಷ್ಯನು ಇದೇ ಈಗ ಇಲ್ಲಿಗೆ ಬಂದನು....... ಎಂದು ಇನ್ನೂ ಏನೋ ಮಾತಾಡುತ್ತಿರಲು, ಅಷ್ಟರಲ್ಲಿ ಖಾನಸಾಹೇಬರು-ನಮ್ಮ ಮನುಷ್ಯನು ? ನಮ್ಮ ಮನಷ್ಯನು ಯಾವನವನು? ನಾನಂತು ಯಾರನ್ನೂ ಮುಂದೆ ಕಳಿಸಿರುವದಿಲ್ಲ. ಎಲ್ಲಿ ಇದ್ದಾನೆ ಅವನು ? ಎಂದು ಕೇಳಿದರು. ಆಗ ನನ್ನ ಮೋರೆ ಹುಚ್ಚು ಇಟ್ಟಿತು. ನನಗೆ ಎಲ್ಲಿ ಅಡಗಿಕೊಳ್ಳಲಿ ಎಲ್ಲಿ ಬಿಡಲಿ ಎನ್ನುವ ಹಾಗೆ ಆಯಿತು. ಆದರೆ ಮಾಡಲೇನು? ತೆಪ್ಪಗೆ ಖಾನಸಾಹೇಬರ ಮುಂದೆ ನಿಂತುಕೊಳ್ಳಲಾಯಿತು. ಕಾವಲುಗಾರರು ನನ್ನನ್ನು ತಬ್ಬಿಕೊಂಡು ತಂದೇಬಿಟ್ಟರು.”
ಇಲ್ಲಿಯವರೆಗೆ ಮಾಸಾಹೇಬರು ಕರೀಮನ ಮಾತುಗಳನ್ನು ಸುಮ್ಮನೆ ಕೇಳುತ್ತಲಿದ್ದರು. ಈಗ ಮಾತ್ರ ಅವರು ಕರೀಮನಿಗೆ-ಛೀ, ಬುದ್ಧಿಗೇಡಿ ! ನೀನು ಇಷ್ಟು ಎಬಡನಿದ್ದೀ ಎಂಬುದು ನನಗೆ ಗೊತ್ತಿದ್ದಿಲ್ಲ. ಒಳ್ಳೆಯದು ಮುಂದೇನಾಯಿತು ಹೇಳು, ಎಂದು ಕೇಳಿದರು. ಅದಕ್ಕೆ ಕರೀಮನು-ಮುಂದೇನಾಗುವುದು? ನಾನು ಖಾನಸಾಹೇಬರ ಎದುರಿಗೆ ನಿಂತುಕೊಂಡ ಕೂಡಲೇ ಅವರು ನನ್ನ ಗುರುತು ಹಿಡಿದು ಗದ್ದರಿಸಿ-ಎಲಾ ಗುಪ್ತಚಾರನನ್ನಾಗಿ ಯಾರು ಕಳಿಸಿದರು ನಿನ್ನನ್ನು? ಮಾಸಾಹೇಬರಲ್ಲವೇ ? ಹೌದು, ಅವರೇ ನಿನ್ನನ್ನು ಕಳಿಸಿದರು. ನಿನ್ನ ಮೋರೆಯೇ ಹಾಗೆ ಹೇಳುತ್ತದೆ. ಸುಳ್ಳು ಹೇಳಬೇಡ. ಒಳ್ಳೆಯದು. ಇನ್ನು ಕದ್ದು ಮುಚ್ಚಿಯಾದರೂ ಯಾತಕ್ಕೆ ! ಸ್ವಲ್ಪನಿಲ್ಲು, ನಿನ್ನ ಮುಂದೆಯೇ ಮಾಸಾಹೇಬರಿಗೆ ಸ್ಪಷ್ಟವಾಗಿ ಹೇಳಿ ಕಳಿಸಿಬಿಡುತ್ತೇನೆ. ಹಿಡಿರೋ ಇವನನ್ನು ಅನಕಾ ಪ್ರತಿಬಂಧದಲ್ಲಿ ನಾನು ಪುನಃ ಹೇಳಿದಾಗ ಕರಕೊಂಡು ಬರುವಿರಂತೆ, ಎಂದು ಹೇಳಿ ಅವರು ರಾಮರಾಜನೊಡನೆ ಏಕಾಂತವಾಡಲಿಕ್ಕೆ ಹೋದರು. ಅಲ್ಲಿ ಬಹಳ ಹೊತ್ತು ಅವರ ಏಕಾಂತವಾಯಿತು. ಆಮೇಲೆ ಖಾನಸಾಹೇಬರು ಪುನಃ ತಮ್ಮ ಬಳಿಗೆ ನನ್ನನ್ನು ಕರಿಸಿಕೊಂಡು ನನಗೆ- “ಲುಚ್ಚಾ ನಿನ್ನನ್ನು ಒಂದು ಗಿಡಕ್ಕೆ ತೂಗರಟ್ಟಿಸಿ ಈಗ ಹೊಡೆಸುತ್ತಿದ್ದೆನು; ಆದರೆ ನಿನ್ನಿಂದ ಒಂದು ಮಹತ್ವದ ಕೆಲಸ ಮಾಡಿಸಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ ಬಿಟ್ಟಿದ್ದೇನೆ. ಹೀಗೆ ಮುಂದಕ್ಕೆ ಬಾ. ನಾನು ಹೇಳುವದನ್ನು ಚೆನ್ನಾಗಿ ಲಕ್ಷ್ಯದಲ್ಲಿಟ್ಟುಕೋ ಮಾಸಾಹೇಬರ ಮುಂದೆ ಹೇಳುವಾಗ ಒಂದು ಶಬ್ದವನ್ನಾದರೂ ತಪ್ಪಬೇಡ. ನಾನು ಹೇಳಿದಂತೆ ಒಂದು ಅಕ್ಷರ ಬಿಡದೆ ಅವರ ಮುಂದೆ ಹೇಳು. ಇನ್ನು ಮೇಲೆ ಅವರಿಗೂ ನನಗೂ ಭೇಟಿಯಾಗಲಾರದೆಂದು ಸ್ಪಷ್ಟವಾಗಿ ಅವರಿಗೆ ಹೇಳು. ನಾನು ಅವರಿಗೆ ಎರವಾದೆನು. ಅವರು ನನಗೆ ಎರವಾದರು. ನಾನು ವಿಜಾಪುರದ ಬಾದಶಹನ ಚಾಕರಿಯನ್ನು ಬಿಟ್ಟೆನು ಈಗ ಹಿಂದೂ ರಾಮರಾಜನ ನೌಕರನಾಗಿರುತ್ತೇನೆ. ನಾನು ಇನ್ನು ವಿಜಾಪುರದವರ, ಅದೇಕೆ ಎಲ್ಲಾ ಮುಸಲ್ಮಾನ ರಾಜರ ಸೇಡು ತೀರಿಸಿಕೊಳ್ಳತಕ್ಕವನು. ನೀವು ಗುಪ್ತರೀತಿಯಿಂದ ಶೋಧಮಾಡಿಸಿ ತಿಳಕೊಳ್ಳುವುದಕ್ಕಿಂತ ಹೆಚ್ಚು ಸ್ಪಷ್ಟವಾಗಿ ನಾನು ತಿಳಿಸಿರುತ್ತೇನೆಂದು ಮಾಸಾಹೇಬರಿಗೆ ಹೇಳು, ಎಂದು ನನ್ನ ಮುಂದೆ ಖಾನಸಾಹೇಬರು ಹೇಳಿದರು.
ಕರೀಮನ ಈ ಮಾತುಗಳನ್ನು ಕೇಳಿದ ಕೂಡಲೇ ಮಾಸಾಹೇಬರಿಗೆ ದಶದಿಕ್ಕುಗಳು ಶೂನ್ಯವಾದವು. ಇತ್ತ ಕರೀಮನು ತಾನು ಹೇಳುವ ಈ ಎಲ್ಲ ಸುದ್ದಿಯನ್ನು ಕೇಳಿದ ಬಳಿಕ ಮಾಸಾಹೇಬರು ತನಗೆ ಯಾವ ಶಿಕ್ಷೆಯನ್ನು ವಿಧಿಸುವರೋ ಏನೋ. ಅಷ್ಟರಲ್ಲಿ ತಾನು ಕಾಲಿಗೆ ಬುದ್ದಿಯನ್ನು ಹೇಳಿಸಬೇಕೆಂದು ಯೋಚಿಸಿ, ಆತನು ಅಲ್ಲಿಂದ ಪಲಾಯನ ಸೂಕ್ತವನ್ನು ಪಠಿಸಿದನು. ಮಾಸಾಹೇಬರು ತಮ್ಮೊಳಗೆ ವಿಚಾರಮಗ್ನರಾಗಿದ್ದರು. ಅವರು ಮನಸ್ಸಿನಲ್ಲಿ-ಇದೇನು ! ಇದೆಲ್ಲಿಯ ಬಡಿಗಲ್ಲು ಬಂದಿತು ? ನಾನು ಎಚ್ಚತ್ತಿರುವೆನೋ, ಕನಸಿನಲ್ಲಿರುವೆನೋ ! ಈತನು ನನ್ನೆದುರಿಗೆ ನಿಂತು ಹೇಳುವುದೇನು, ನಾನು ಜಾಗೃತಾವಸ್ಥೆಯಲ್ಲಿ ಕೇಳುವೆನೋ, ಸ್ವಪ್ನಾವಸ್ಥೆಯಲ್ಲಿ ಕೇಳುವೆನೋ ? ನನ್ನ ಮಗನು. ಯಾವನನ್ನು ಒಂದು ಉದ್ದಿಷ್ಟ ಕಾರ್ಯವನ್ನು ಮಣ್ಣುಗೂಡಿಸಿ, ನನ್ನ ಆಶಾತಂತುವನ್ನು ಹರಿದು ನನ್ನನ್ನು ದೂರ ದಬ್ಬಿಕೊಟ್ಟು ಯಾರ ಕಡೆಗೆ ಹೋದನು, ಆತನು ಯಾರ ಸ್ನೇಹವನ್ನು ಬಳಿಸಿದನು ? ಯಾರನ್ನು ದ್ವೇಷಿಸುತ್ತಿದ್ದನು ? ಯಾರಿಗೆ ಇಂಥ ನಿಷ್ಠುರ ಮಾತುಗಳನ್ನು ಹೇಳಿಕಳಿಸಿದನು ? ಇನ್ನು ಮುಂದೆ ನಾನು ಏನು ಮಾಡಲಿ? ಇನ್ನು ನನಗೆ ಬದಕುವ ಆಸೆ ಏತಕ್ಕೆ ? ಪರವರದಿಗಾರ, ಅಲ್ಲಾ ಈವರೆಗೆ ನಿನ್ನನ್ನು ಸೇವಿಸಿದ್ದು ವ್ಯರ್ಥವಾಯಿತೇ ? ಇಷ್ಟು ದಿವಸ ಯಾಕೆ ಆಸೆಯನ್ನು ತೋರಿಸಿದಿ ? ಇಷ್ಟು ದಿವಸ ನನ್ನ ಕೈಯಿಂದ ಆತನ ಸಂಗೋಪವನ್ನಾದರೂ ಯಾಕೆ ಮಾಡಿಸಿದಿ ? ಆತನು ಹುಟ್ಟುತ್ತಲೇ ಸತ್ತುಹೋಗಿದ್ದರೆ ನೆಟ್ಟಗಾಗುತ್ತಿದ್ದಿಲ್ಲವೆ ? ನಾನು ಆತನ ಮಾಯಾಪಾಶದಲ್ಲಿ ಸಿಕ್ಕಿಕೊಳ್ಳದೆ ಅನನ್ಯಭಾವದಿಂದ ನಿನ್ನ ಆರಾಧನೆಯನ್ನಾದರೂ ಮಾಡುತ್ತಿದ್ದೆನು. ಪರಮೇಶ್ವರಾ ಈಗ ನಾನು ಆನನ್ಯಭಾವ ದಿಂದ ನಿನ್ನಲ್ಲಿ ಲೀನಳಾಗಿರುವುದಿಲ್ಲ. ನಿನ್ನಲ್ಲಿ ಅರ್ಧಭಾವವನ್ನೂ, ಮಗನಲ್ಲಿ ಅರ್ಧ ಭಾವವನ್ನೂ ಇಟ್ಟಿರುವೆನು. ಈ ತಪ್ಪಿಗಾಗಿಯೇ ನನ್ನನ್ನು ನೀನು ಹೀಗೆ ದಂಡಿಸಿರುವದಿಲ್ಲಷ್ಟೆ ? ಎಂಥಾ ಭಯಂಕರ ಶಿಕ್ಷೆ ಇದು ! ಹೊಟ್ಟೆಯ ಮಗನಿಂದ ಇಂಥ ಭಯಂಕರ ಶಿಕ್ಷೆಯನ್ನು ಅನುಭವಿಸುವದಕ್ಕಿಂತ ಸಾವು ಬಂದರೆ ನೆಟ್ಟಗಲ್ಲವೆ ? ಎಂದು ಆಲೋಚಿಸಹತ್ತಿದರು. ಹೀಗೆ ಆಲೋಚಿಸುವಾಗ ಅವರಿಗೆ ಅಂದು ಮುಂಜಾವಿನಲ್ಲಿ ಬಿದ್ದಿದ್ದ ಸ್ವಪ್ನದ ನೆನಪಾಯಿತು. ತಮ್ಮ ಮಗನು ತಮ್ಮನ್ನು ಪರ್ವತದ ಕೆಳಗೆ ದೂಡಿಕೊಟ್ಟಿದ್ದರ ಚಿತ್ರವು ಅವರ ಕಣ್ಣಿಗೆ ಕಟ್ಟಿತು. ಅವರು ಮನಸಿಸನಲ್ಲಿ- “ಆ ಕೆಟ್ಟ ಕನಸು ಬಿದ್ದಿದ್ದರಿಂದಲೇ ನಾನು ಇಂಥ ಅನರ್ಥದ ಸುದ್ದಿಯನ್ನು ಕೇಳಿದೆನು. ಈ ಅನರ್ಥವನ್ನು ಸೂಚಿಸುವದಕ್ಕಾಗಿಯೇ ನನಗೆ ಆ ಕನಸು ಬಿದ್ದಿರಬಹುದೋ? ಹೌದು, ಹಾಗಲ್ಲದಿದ್ದರೆ ಅಂಥ ಭಯಂಕರ ಸ್ವಪ್ನವು ಹ್ಯಾಗೆ ಬೀಳುವದು? ನಾನು ಇನ್ನು ಏನು ಮಾಡಲಿ ! ಈ ಕುಂಜವನದ ವಾಸವು ಇನ್ನು ನನಗೆ ಯಾತಕ್ಕೆ ? ಇದರ ಸಂಬಂಧವು ನನಗೆ ಏಕೆ? ಇನ್ನು ಮೇಲೆ ನನ್ನನ್ನು ಇಲ್ಲಿ ಇರಗೊಡುವವರಾದರೂ ಯಾರು? ಇರಗೊಟ್ಟರೂ ನಾನು ಇರಬೇಕೇಕೆ ? ಇನ್ನು ನಾನು ಹೋಗುವುದಾದರೂ ಎಲ್ಲಿಗೆ ? ಮಗನು ಮುಸಲ್ಮಾನರ ವೈರಿಯನ್ನು ಕೂಡಿಕೊಂಡಿದ್ದರಿಂದ ನಾನು ಯಾವ ಮೋರೆಯಿಂದ ಮುಸಲ್ಮಾನರ ರಾಜ್ಯದಲ್ಲಿ ಆಶ್ರಯವನ್ನು ಪಡೆಯಲಿ ? ವಿಜಾಪುರಕ್ಕೆ ಹೋದರೆ, ಜನರು ನನ್ನನ್ನು ಎಷ್ಟು ನಿರಾಕರಿಸಬಹುದಲ್ಲ ! ಜನರು ನನ್ನ ಕಡೆಗೆ ಬೆರಳು ಮಾಡಿ- “ಈ ಚಂಡಾಲಳ ಮಾತಿಗೆ ಮರುಳಾಗಿಯೇ ಬಾದಶಹರು ರಣಮಸ್ತಖಾನನನ್ನು ದೊಡ್ಡ ಪದವಿಗೆ ಏರಿಸಿದರು; ಮತ್ತು ಎಷ್ಟೋ ಜನರು ಅನುಭವಿಕರಿದ್ದರೂ, ಅವರನ್ನೆಲ್ಲ ಬಿಟ್ಟು ವಿಜಯನಗರದಂಥ ರಾಜ್ಯದ ದರ್ಬಾರದಲ್ಲಿ ರಣಮಸ್ತಖಾನನನ್ನು ವಕೀಲನನ್ನಾಗಿ ಬಾದಶಹರು ಕಳಿಸಿದ್ದು, ಈ ದುಷ್ಟಳ ಮಾತಿನಿಂದಲೇ, ಆದರೆ ಕಡೆಗೆ ಆ ಅಧಮ ರಣಮಸ್ತನು ತನ್ನ ಮೋರೆಗೆ ಕಪ್ಪು ಬಡಕೊಂಡದ್ದಲ್ಲದೆ ಬಾದಶಹರ ಗೌರವಕ್ಕೂ ಬಾಧೆ ತಂದನು, ಎಂದು ಜನರು ದೂರಿಕೊಳ್ಳುವರು. ಅಂದು ಬಳಿಕ ವಿಜಾಪುರಕ್ಕಂತು ನಾನು ಹೋಗುವಹಾಗಿಲ್ಲ. ಇನ್ನು ಬೇರೆ ಕಡೆಗೆ ನಾನು ಹೋಗುವದಾದರೂ ಯಾತಕ್ಕೆ ? ಈ ಪುಷ್ಕರಣಿಯಲ್ಲಿ ಹಾರಿಕೊಂಡುಬಿಟ್ಟರಾಯಿತು. ಈಗ ಮೂವತ್ತು ವರ್ಷಗಳ ಹಿಂದೆಯೇ ಮಾಡಬೇಕಾಗಿದ್ದ ಕೆಲಸವನ್ನು ಈಗ ಮಾಡಬೇಕು. ಆಗ ನನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವವಿದ್ದದ್ದರಿಂದ ಅದರ ಮೋಹವು ಬಾಧಿಸಲು ಪ್ರಾಣವನ್ನು ಅರ್ಪಿಸುವದು ನನ್ನಿಂದಾಗಲಿಲ್ಲ. ಆಗ ನನ್ನ ಆಸೆಯೇ ಬೇರೆ ಇತ್ತು. ಯಾವ ಮಗನಿಂದ ರಾಮರಾಜನ ಶಾಸನ ಮಾಡಿಸಬೇಕೆಂದು ನಾನು ಮಾಡಿದ್ದೆನೋ, ಆ ಮಗನೇ ಹೀಗೆ ನನ್ನ ಶಾಸನ ಮಾಡಿದ ಬಳಿಕ ಇನ್ನು ಮೇಲೆ ನನಗೆ ಯಾತರ ಆಸೆ ? ಅಥವಾ ನನ್ನನ್ನು ಶಿಕ್ಷಿಸಲಿಕ್ಕೆ ಮಗನಾದರೂ ಎಷ್ಟರವನು ? ಪರವರದಿಗಾರ ಖುದಾನೇ ನನ್ನ ಅಪರಾಧಕ್ಕಾಗಿ ನನ್ನನ್ನು ಶಿಕ್ಷಿಸಿರುವನು. ನಾನು ಪ್ರತ್ಯಕ್ಷ ಪತಿಯ ಸೇಡನ್ನು ಭಯಂಕರ ರೀತಿಯಿಂದ ತೀರಿಸಲು ಯೋಚಿಸಿದ್ದು ಅಪರಾಧವಲ್ಲವೇ ? ಅಲ್ಲಾನಿಗೆ ಅನ್ಯಾಯವಾಗಿ ತೋರಿದರೆ ರಾಮರಾಜನನ್ನು ಆತನೇ ಶಿಕ್ಷಿಸುತ್ತಿದ್ದನು. ಶಿಕ್ಷಿಸುವುದು ರಕ್ಷಿಸುವುದು ಆತನ ಕೆಲಸವಿದ್ದು, ಅದರಲ್ಲಿ ನಾನು ಯಾಕೆ ಕೈ ಹಾಕಬೇಕು ? ಮೊದಲು ನನ್ನ ಮನಸ್ಸಿನಲ್ಲಿ ಪ್ರೇಮದ ಹೊರತು ಎರಡನೆಯ ವಿಕಾರವೇ ಇದ್ದಿಲ್ಲ, ಅಂದಬಳಿಕ ಅದರ ಸ್ಥಳದಲ್ಲಿ ನಾನು ಈರ್ಷೆಯನ್ನು ಯಾಕೆ ಬರಗೊಡಬೇಕು? ನನ್ನ ಈ ಅಪರಾಧಕ್ಕಾಗಿ ನನಗೆ ದೇಹಾಂತ ಶಿಕ್ಷೆಯಾಗುವುದೇ ನ್ಯಾಯವು.
ಈ ಮೇರೆಗೆ ಮಾಸಾಹೇಬರ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಅವರು ಏನೂ ತೋಚದೆ, ಸ್ತಬ್ದವಾಗಿ ಕುಳಿತುಕೊಂಡುಬಿಟ್ಟರು. ತಮಗೆ ಸುದ್ದಿಯನ್ನು ಹೇಳಿದ ಕರೀಮನು ಯಾವಾಗ ಹೋದನೆಂಬದು ಅವರಿಗೆ ಗೊತ್ತೇ ಆಗಲಿಲ್ಲ. ಅದರಂತೆ ಅವರ ಬಳಿಯಲ್ಲಿ ಲೈಲಿಯು ನಿಂತಿದ್ದ ಅವರಿಗೆ ಗೊತ್ತಾಗಲಿಲ್ಲ. ಮಾಸಾಹೇಬರ ಈ ವಿಚಿತ್ರ ಸ್ಥಿತಿಯನ್ನು ನೋಡಿ ಲೈಲಿಗೆ ಅವರನ್ನು ಮಾತಾಡಿಸುವ ಧೈರ್ಯವಾಗದೆ ಆಕೆಯು ಸುಮ್ಮನೆ ಒತ್ತಟ್ಟಿಗೆ ಆಲೋಚಿಸುತ್ತ ನಿಂತುಬಿಟ್ಟಿದ್ದಳು. ಮಾಸಾಹೇಬರಾದರೂ ಹೀಗೆ ಎಷ್ಟು ಹೊತ್ತು ವಿಚಾರಮಾಡುತ್ತ ನಿಂತುಕೊಳ್ಳುವರು ? ಶರೀರಕ್ಕಿರುವಂತೆ ಮನಸ್ಸಿಗಾದರೂ ದಣುವಿಕೆಯು ಇದ್ದೇ ಇರುವುದು. ಅವರು ಮುಂದೆ ಸ್ವಲ್ಪ ಹೊತ್ತಿನಲ್ಲಿ ಎಚ್ಚತ್ತು ಲೈಲಿಯ ಕಡೆಗೆ ನೋಡಿದರು. ಆಗ ಅವರು ಶಾಂತಮುದ್ರೆಯಿಂದ ಲೈಲಿಯನ್ನು ಕುರಿತು-ಲೈಲೀ. ಇನ್ನು ಇಲ್ಲಿಯ ನಮ್ಮ ಅವತಾರವು ಮುಗಿದಂತಾಯಿತು. ನಮ್ಮ ಮನಸ್ಸಿನಲ್ಲಿದ್ದದು ಒಂದು, ಖುದಾನ ಮನಸ್ಸಿನಲ್ಲಿದ್ದದ್ದು ಮತ್ತೊಂದು, ಖುದಾನು ತನ್ನ ಮನಸ್ಸಿನಂತೆ ಮಾಡಿಬಿಟ್ಟನು. ಇನ್ನುಮುಂದೆ ನಾವು ಏನು ಮಾಡಬೇಕೆಂಬುದನ್ನು ಗೊತ್ತುಮಾಡಿಕೊಂಡು ಇನ್ನು ಒಂದೆರಡುತಾಸಿನೊಳಗೆ ನಿನಗೆ ಹೇಳುವೆನು. ಪುನಃ ಅಜ್ಞಾತವಾಸ ಮಾಡದ ಹೊರತು ನಮಗೆ ಬೇರೆ ಮಾರ್ಗವಿಲ್ಲ. ಇನ್ನು ಮೇಲೆ ನಾವು ಮಾಡಬೇಕಾಗಿರುವ ಅಜ್ಞಾತವಾಸವು ಎಂದೆಂದೂ ಯಾರುಯಾರಿಗೂ ಗೊತ್ತಾಗದಂತೆ ಇರಬೇಕು ! ಎಂದು ನುಡಿದು, ಮಾಸಾಹೇಬರು ಸ್ವಲ್ಪ ನಕ್ಕರು. ಅವರ ನಗೆಯ ಅರ್ಥವು ಲೈಲಿಗೆ ತಿಳಿಯಲಿಲ್ಲೆಂತಲ್ಲ. ಮಾಸಾಹೇಬರು ಆಕೆಯ ಮುಂದೆ ಯಾವ ಸುದ್ದಿಯನ್ನು ಹೇಳದಿದ್ದರೂ, ಲೈಲಿಯ ಕರೀಮನನ್ನೂ, ನಜೀರನನ್ನೂ ಕೇಳಿ ಎಲ್ಲ ಸುದ್ದಿಯನ್ನು ಕೇಳಿಕೊಂಡಿದ್ದಳು, ಸೇವಕರ ಬಾಯಲ್ಲಿ ಮಾತು ಎಲ್ಲಿ ನಿಲ್ಲುವವು ? ಅದರಲ್ಲಿ ರಣಮಸ್ತಖಾನನು ಪಿತೂರಿಗಾಗಿ ಹಿಂದೂ ಜನರಲ್ಲಿ ಕೂಡಿಕೊಂಡಿದ್ದ ಸುದ್ದಿಯು; ಅಂದಬಳಿಕ ಅದು ಗುಪ್ತವಾಗಿ ಬಹಳ ಹೊತ್ತು ಹ್ಯಾಗೆ ಉಳಿಯಬೇಕು ? ಆ ಸುದ್ದಿಯು ಲೈಲಿಯ ಕಿವಿಗೆ ಮುಟ್ಟಿದ್ದಲ್ಲದೆ ಕುಂಜವನದ ತುಂಬ ಹಬ್ಬಿ, ಸ್ವಲ್ಪ ಹೊತ್ತಿನಲ್ಲಿ ಅದು ಮುಖ್ಯ ವಕೀಲನ ಕಿವಿಯ ವರೆಗೂ ಹೋಯಿತು. ಇರಲಿ. ಮಾಸಾಹೇಬರ ಮಾತನ್ನು ಕೇಳಿ ಲೈಲಿಯು ತಾನು ಏನೋ ಮಾತಾಡಬೇಕೆನ್ನುತ್ತಿರಲು, ಅದನ್ನರಿತು ಮಾಸಾಹೇಬರು ಪುನಃ ಲೈಲಿಯನ್ನು ಕುರಿತು-ಲೈಲೀ, ನೀನು ಇನ್ನು ಯಾವ ಮಾತನ್ನೂ ಆಡಬೇಡ. ಮಾತಾಡುವದರಲ್ಲೇನೂ ಅರ್ಥವಿರುವದಿಲ್ಲ. ಈಗ ಮೂವತ್ತು ವರ್ಷಗಳ ಹಿಂದೆ ನಾವು ಈ ಕುಂಜವನವನ್ನು ಬಿಟ್ಟುಹೋಗವಾಗ ಇದ್ದಂತೆಯೇ ಈಗ ಇರುತ್ತೇವೆಂದು ತಿಳಿ, ನಡುವೆ ಆದದ್ದನ್ನೆಲ್ಲ ಮರೆತುಬಿಡು. ಹೋಗು ಒಳಗೆ ಹೋಗು. ನಾನು ಕರೆದ ಕೂಡಲೆ ಬಾ, ಆಗ ಮಾತಾಡೋಣ. ಈಗ ನೀನು ಯಾವ ಮಾತನ್ನೂ ಆಡಬೇಡ, ಎಂದು ಹೇಳಿ ಲೈಲಿಯನ್ನು ಕಳಿಸಿ ಮಾಸಾಹೇಬರು ವಿಚಾರ ಮಗ್ನರಾದರು. ಅವರು ಮನಸ್ಸಿನಲ್ಲಿ ಬಹು ಭಯಂಕರವಾದ ವಿಚಾರ ತರಂಗಗಳು ಉತ್ಪನ್ನವಾದವು. ಕಡೆಗೆ ಅವರು ಪುಷ್ಕರಣಿಯಲ್ಲಿ ಧುಮುಕಿ ತಾವು ಪ್ರಾಣತ್ಯಾಗ ಮಾಡಬೇಕೆಂದು ನಿಶ್ಚಯಿಸಿದರು. ಹೀಗೆ ನಿಶ್ಚಯಮಾಡಿದ ಬಳಿಕ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಬಳಿಕ ಅವರು, ತಾವು ಪ್ರಾಣತ್ಯಾಗ ಮಾಡುವ ಪೂರ್ವದಲ್ಲಿ ಏನು ಮಾಡಬೇಕೆಂಬುದನ್ನು ಕುರಿತು ಆಲೋಚಿಸತೊಡಗಿದರು. ತಮ್ಮ ನಿಜವಾದ ವೃತ್ತಾಂತವನ್ನೆಲ್ಲ ರಣಮಸ್ತಖಾನನಿಗೆ ತಿಳಿಸಬೇಕೆಂದು ಮೊಟ್ಟ ಮೊದಲು ಅವರು ನಿಶ್ಚಯಿಸಿದರು. ನಾನು ಇಂದು ಪ್ರಾಣತ್ಯಾಗ ಮಾಡಿದರೂ ರಣಮಸ್ತಖಾನನಿಗೆ ನಿಜವಾದ ಸಂಗತಿಯನ್ನು ತಿಳಿಸಬೇಕು; ಅಂದರೆ ತಾನು ಯಾರ ಪಕ್ಷವನ್ನು ವಹಿಸಿರುವೆನೆಂಬುದು ಆತನಿಗೆ ಗೊತ್ತಾಗಿ, ಆತನು ರಾಮರಾಜನ ಸೇಡು ತೀರಿಸಿಕೊಳ್ಳದೆ ಬಿಡಲಿಕ್ಕಿಲ್ಲ; ಅಂದಬಳಿಕ ನನ್ನ ಸಂಕಲ್ಪವು ಪೂರ್ಣವಾದದ್ದನ್ನು ನಾನು ಕಣ್ಣಮುಟ್ಟ ನೋಡದಿದ್ದರೂ, ಪರಲೋಕದಲ್ಲಾದರೂ ಅದು ನನಗೆ ಗೊತ್ತಾದರೆ ನನ್ನ ಸಮಾಧಾನವಾದೀತು. ಏನು ಮಾಡದಿದ್ದರೂ ನಿಜವಾದ ಸಂಗತಿಯನ್ನು ರಣಮಸ್ತಖಾನನಿಗೆ ತಿಳಿಸಿಯಾದರೂಬಿಡಬೇಕು. ಅದು ಒಂದು ಬಗೆಯಿಂದ ನನ್ನ ಕರ್ತವ್ಯವೇ ಆಗಿರುವದು.
ಹೀಗೆ ಬಹಳ ಹೊತ್ತು ಆಲೋಚಿಸಿದ ಬಳಿಕ ಮಾಸಾಹೇಬರ ವಿಚಾರವು ಸ್ಥಿರವಾಯಿತು. ಅವರು ನಿಜವಾದ ವೃತ್ತಾಂತವನ್ನು ರಣಮಸ್ತಖಾನನಿಗೆ ತಿಳಿಸಲೇಬೇಕೆಂದು ನಿಶ್ಚಯಿಸಿದರು. ಆದರೆ ಆ ನಿಶ್ಚಯವನ್ನು ಹ್ಯಾಗೆ ಪಾರುಗಣಿಸಬೇಕು ? ಯಾರ ಕೈಯಿಂದ ಪಾರುಗಾಣಿಸಬೇಕು ? ಎಂಬ ವಿಚಾರವು ಅವರಲ್ಲಿ ಉತ್ಪನ್ನವಾಯಿತು. ಈ ಕೆಲಸವನ್ನು ಮಾಡಲಿಕ್ಕೆ ಅವರಿಗೆ ಇಬ್ಬರು ಯೋಗ್ಯರಾಗಿ ತೋರಿದರು. ಒಬ್ಬರು ಸ್ವತಃ ತಾವು, ಎರಡನೆಯವರು ಲೈಲಿಯು, ತಮ್ಮಿಬ್ಬರ ಹೊರತು ಎರಡನೆಯವರಿಗೆ ಯಾವ ಸಂಗತಿಯೂ ಗೊತ್ತಿಲ್ಲದ್ದರಿಂದ ಬೇರೆ ಯಾರಿಂದಲೂ ಆ ಕಾರ್ಯವಾಗುವಂತೆ ಅವರಿಗೆ ತೋರಲಿಲ್ಲ. ಅದರಲ್ಲಿ ತಾವು ಸ್ವತಃ ಎಲ್ಲಿಯೂ ಹೋಗುವಂತೆ ಇದ್ದಿಲ್ಲ. ಅದರಲ್ಲಿ ರಾಮರಾಜನ ರಾಜ್ಯದಲ್ಲಿ ಹೋಗಿ ತಮ್ಮ ಮಗನನ್ನು ಕಾಣುವದಂತು ಅವರಿಗೆ ಶಕ್ಯವೇ ಇಲ್ಲ. ಆದ್ದರಿಂದ ಅವರು ಹೇತುವನ್ನು ಪೂರ್ಣ ಮಾಡಲಿಕ್ಕೆ ಲೈಲಿಯೊಬ್ಬಳು ಮಾತ್ರ ಅವರಿಗೆ ಸಮರ್ಥಳಾಗಿ ತೋರಿದಳು, ಆಗ ಅವರು ಲೈಲಿಯನ್ನು ಕೂಗಿ ಕರೆದು, ತಮ್ಮ ಎದುರಿಗೆ ಕುಳ್ಳಿರಿಸಿಕೊಂಡು- “ಮಾರ್ಜೀನೇ, ಈಗ ನಿನಗೆ ಕಟ್ಟಕಡೆಯದೊಂದು ಮಹತ್ವದ ಕೆಲಸವನ್ನು ಹೇಳುತ್ತೇನೆ” ಎಂದು ಹೇಳಿದರು. “ಮಾರ್ಜೀನೆ” ಎಂದು ಕರೆದದ್ದನ್ನು ಕೇಳಿದ ಕೂಡಲೆ ಲೈಲಿಯು ಗಾಬರಿಯಾಗಿ ಸುತ್ತಮುತ್ತು ನೋಡಹತ್ತಿದಳು. ಆಕೆಯು ಹೀಗೆ ನೋಡುವದರ ಭಾವವನ್ನರಿತು ಮಾಸಾಹೇಬರು- “ಮಾರ್ಜೀನೆ, ಬಹು ದಿನಸಗಳ ಮೇಲೆ ನಿನ್ನ ನಿಜವಾದ ಹೆಸರಿನಿಂದ ನಾನು ನಿನ್ನನ್ನು ಕರೆದದ್ದನ್ನು ಕೇಳಿ, ನೀನು ಗಾಬರಿಯಾದದ್ದು ಆಶ್ಚರ್ಯವಲ್ಲ; ಆದರೆ ನಿನ್ನ ನಿಜವಾದ ಹೆಸರಿನಿಂದ ಕರೆದ ನನ್ನನ್ನು ಇನ್ನು ಮೇಲೆ ಜನರು ಮೆಹರಜಾನಳೆಂದು ಕೆರದರೂ ನಾನು ಹೆದರುವ ಹಾಗಿಲ್ಲ. ಇನ್ನು ಹ್ಯಾಗೂ ಯಾವತ್ತು ನಿಜವಾದ ವೃತ್ತಾಂತವನ್ನು ರಣಮಸ್ತಖಾನನಿಗೆ ನಾವು ಹೇಳಲೇಬೇಕಾಗಿದೆ. ಆ ಕಾರ್ಯವನ್ನು ನೀನೇ ಮಾಡತಕ್ಕದ್ದು. ಇಷ್ಟುಹೊತ್ತಿಗೆ ರಣಮಸ್ತಖಾನನಿಗೆ ನಿಜವಾದ ವೃತ್ತಾಂತವನ್ನೆಲ್ಲ ನಾವು ಹೇಳಿಬಿಟ್ಟಿದ್ದರೆ ನೆಟ್ಟಗಾಗುತ್ತಿತ್ತೆಂದು ನನಗೆ ತೋರುತ್ತದೆ. ಹಾಗೆ ಮಾಡಿದ್ದರೆ ಈಗಿನ ಅನರ್ಥದ ಪ್ರಸಂಗವೇ ಒದಗುತ್ತಿದ್ದಿಲ್ಲ. ಬಹಳವಾದರೆ ನನ್ನ ಮಗನು ನನ್ನ ನಿರಾಕರಣವನ್ನು ಮಾಡಿ ನನ್ನನ್ನು ಅಗಲಿಹೋಗುತ್ತಿದ್ದನು. ಈಗಿನಂತೆ ರಾಮರಾಜನ ಸ್ನೇಹವನ್ನು ಸಂಪಾದಿಸುತ್ತಿದ್ದಿಲ್ಲ. ತಿರುಗಿ ಕೇಳಿದರೆ ಆತನು ರಾಮರಾಜನ ಶಾಸನದ ಉಪಾಯವನ್ನು ಯೋಚಿಸಬಹುದಾಗಿತ್ತು. ಇಂದು ಹೇಳೋಣ, ನಾಳೆ ಹೇಳೋಣವೆಂದು ನಾವು ದಿನಮೇಕ ಮಾಡಿದ್ದು ನೆಟ್ಟಗಾಗಲಿಲ್ಲ. ಇರಲಿ, ಹೋದಮಾತು ಇನ್ನು ಬರುವ ಹಾಗಿಲ್ಲ. ಇದನ್ನು ನೀನು ಕರೀಮಬಕ್ಷನನ್ನು ಸಂಗಡ ಕರೆದುಕೊಂಡು ರಣಮಸ್ತನಿದ್ದಲ್ಲಿಗೆ ಹೋಗಿ ಅವನಿಗೆ ನಮ್ಮ ಯಾವತ್ತು ನಿಜವಾದ ವರ್ತಮಾನವನ್ನು ಹೇಳಿಬಿಡು. ಮಾರ್ಜೀನೆ, ನೀನು ಹೋಗು, ನನ್ನದಿಷ್ಟು ಕಡೆಯ ಕೆಲಸವನ್ನು ಮಾಡಿಬಿಡು, ನೀನು ಮಾಡುತ್ತೇನೆಂದು ಒಮ್ಮೆ ಒಪ್ಪಿಕೊಂಡು ಬಳಿಕ ಮುಂದೆ ಎಷ್ಟು ಸಂಕಟಗಳು ಒದಗಿದರೂ ಅದನ್ನು ಲೆಕ್ಕಿಸದೆ ನೀನು ಕೆಲಸವನ್ನು ಮಾಡತಕ್ಕವಳು. ಹೋಗು, ಇದೇ ಕಡೆಯ ಕೆಲಸವು ಇನ್ನು ಪುನಃ ನನ್ನ ಕೆಲಸ ಮಾಡುವ ಪ್ರಸಂಗವು ನಿನಗೆ ಬರಲಿಕ್ಕಿಲ್ಲ, ಎಂದು ಹೇಳಿದಳು, “ಇದೇ ಕಡೆಯ ಕೆಲಸವು, ಇದೇ ಕಡೆಯ ಕೆಲಸವು” ಎಂದು ಮೂರುಸಾರೆ ಮೆಹರಜಾನಳು ಅಂದದ್ದನ್ನು ಕೇಳಿ ಮಾರ್ಜೀನೆಯು-"ತಾವು ಹೇಳುವ ಕಾರ್ಯವನ್ನು ನಾನು ಅವಶ್ಯವಾಗಿ ಮಾಡುವೆನು; “ಇದೇ ಕಡೆಯ ಕೆಲಸ”ವೆಂದು ನೀವು ಮೇಲೆ ಮೇಲೆ ಯಾಕೆ ಅನ್ನುತ್ತೀರಿ? ಇನ್ನು ಮೇಲೆ ನೀವು ನನ್ನನ್ನು ಬಿಟ್ಟು ಎಲ್ಲಿಗಾದರೂ ಹೋಗುವಿರೋ ಏನು? ನೀವು ನನ್ನನ್ನು ಅಗಲಿ ಹೋಗುವ ಹಾಗಿದ್ದರೆ, ನಾನು ನಿಮ್ಮ ಕಡೆಯ ಕೆಲಸವನ್ನು ಮಾಡುವದಕ್ಕಿಂತ ನೀವೇ ನನ್ನ ಕಡೆಯ ಕೆಲಸ ಮಾಡಿಬಿಡಿರಿ. ನೀವು ಪುಷ್ಕರಣಿಯಲ್ಲಿ ನನ್ನನ್ನು ನೂಕಿಬಿಟ್ಟರೆ ಕೆಲಸವು ಮುಗಿದುಹೋಗುವುದು.”
ಮಾರ್ಜೀನೆಯ ಈ ಮಾತುಗಳನ್ನು ಕೇಳಿ ಮೆಹೆರಜಾನಳ ಮನಸ್ಸಿಗೆ ಹ್ಯಾಗೆಹ್ಯಾಗೋ ಆಯಿತು! ಈಕೆಗೆ ತನ್ನ ವಿಚಾರವು ಗೊತ್ತಾಗಿರಬಹುದೋ ಎಂಬ ಸಂಶಯವು ಮೆಹೆರಜಾನಳನ್ನು ಬಾಧಿಸಹತ್ತಿತು ; ಆದರೆ ವಿಚಾರಾಂತದಲ್ಲಿ ಹಾಗೆ ಗೊತ್ತಾಗುವ ಸಂಭವವಿಲ್ಲೆಂದು ತರ್ಕಿಸಿ ಆಕೆಯು ಮಾರ್ಜೀನೆಯನ್ನು ಕುರಿತು- “ಅಲ್ಲೇ, ಮಾರ್ಜೀನೆ, ಕಡೆಯ ಕೆಲಸವೆಂದರೆ, ಮಹತ್ವದ ಕೆಲಸಗಳಲ್ಲಿ ಕಡೆಯದೆಂದು ನಿನಗಿಷ್ಟು ತಿಳಿಯಬಾರದೇನು? ಈ ಜನ್ಮದಲ್ಲಿ ನಮ್ಮಿಬ್ಬರಿಗೆ ಬಿಡುವ ಹಾಗಿದೆಯೇ? ನಿನ್ನ ಬಿಟ್ಟರೆ ನನಗೆ ಗತಿಯಿಲ್ಲ, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿನ್ನನ್ನು ನನ್ನ ಈ ಕೈಗಳಿಂದ ಪುಷ್ಕರಣಿಯಲ್ಲಿ ನೂಕಲಾ? ಹಾಗೆ ಮಾಡುವದಕ್ಕಿಂತ ನಾವಿಬ್ಬರು ತೆಕ್ಕೆಬಿದ್ದು ಒಮ್ಮೆಲೆ ಪುಷ್ಕರಣಿಯಲ್ಲಿ ಹಾರಿಕೊಳ್ಳುವದು ನೆಟ್ಟಗಲ್ಲವೇ ? ಕಡೆಗೆ ಹಾಗೆಯೇ ಮಾಡೋಣವಂತೆ. ಮೊದಲು ರಣಮಸ್ತನಿಗೆ