ಕನ್ನಡಿಗರ ಕರ್ಮ ಕಥೆ/ಮಾಸಾಹೇಬರ ದುರವಸ್ಥೆ
ಮಾಸಾಹೇಬರ ದುರವಸ್ಥೆ
ಇನ್ನು ಕುಂಜವನದಲ್ಲಿದ್ದ ಮಾಸಾಹೇಬರ ಸಮಾಚಾರವನ್ನಷ್ಟು ತಕ್ಕೋಳೋಣ, ರಾಮರಾಜನು ಮಾಸಾಹೇಬರ, ಅಥವಾ ಲೈಲಿಯ ಮನಸ್ಸನ್ನು ಒಲಿಸಿಕೊಳ್ಳಲಾರದೆ ಹತಾಶನಾಗಿ ಹೋದನಂತರ, ಮಾಸಾಹೇಬರು ಬಹು ಕಷ್ಟದಿಂದ ಕಾಲಹರಣ ಮಾಡಹತ್ತಿದರು. ಕುಂಜವನದಲ್ಲಿ ತಮ್ಮನ್ನು ಸೆರೆಯಲ್ಲಿಟ್ಟಿದ್ದು ಅವರಿಗೆ ಅತ್ಯಂತ ದುಸ್ಸಹವಾಗಿತ್ತು. ತಾವು ಈ ಪ್ರತಿಬಂಧದಿಂದ ಪಾರಾಗಿ ಹೋಗುವದು ಅಶಕ್ಯವೆಂದು ತಿಳಿದು, ಅವರು ದಿನದಿನಕ್ಕೆ ಚಿಂತೆಯಿಂದ ಕ್ಷೀಣವಾಗಹತ್ತಿದರು. ಮೊದಲಿನಂತೆ ಧನಮಲ್ಲನು ಕೃಷ್ಣಸರ್ಪದ ಹಾಗೆ ಅವರನ್ನು ಕಾಯುತ್ತಲಿದ್ದನು. ಧನಮಲ್ಲನ ಮನಸ್ಸನ್ನೊಲಿಸಿಕೊಳ್ಳುವದು ಅವರಿಗೆ ತೀರ ಅಸಾಧ್ಯವಾಗಿತೋರಿತು. ಲೈಲಿಯೂ ಈ ಕೆಲಸದಲ್ಲಿ ಕೈ ಊರಿದಳು. ಹೀಗೆಯೇ ಅವರಿಬ್ಬರು ಕಾಲಹರಣ ಮಾಡುತ್ತಿರಲು, ಇತ್ತ ಯುದ್ಧಪ್ರಸಂಗವು ಒದಗಿದ್ದರಿಂದ ಸೈನ್ಯದೊಡನೆ ರಾಮರಾಜನು ದಂಡಯಾತ್ರೆಗೆ ಹೊರಟನು. ಈ ಯಾವ ಸುದ್ದಿಯೂ ಮಾಸಾಹೇಬರಿಗೆ, ಅಥವಾ ಲೈಲಿಗೆ ಗೊತ್ತಾಗಿದ್ದಿಲ್ಲ. ಹೀಗಿರುವಾಗ ಒಂದು ದಿನ ಮಾಸಾಹೇಬರು ಲೈಲಿಯನ್ನು ಕುರಿತು-ಮಾರ್ಜಿನೆ, ಏನಾದರೂ ಮಾಡು, ಧನಮಲ್ಲನ ಮನಸ್ಸನ್ನು ಒಲಿಸಿಕೊಂಡು ನನ್ನನ್ನಷ್ಟು ಬಂಧಮುಕ್ತ ಮಾಡು; ನಾವು ಎಲ್ಲಿಂದ ಬಂದೆವೋ ಅಲ್ಲಿಗೇ (ಉತ್ತರ ಹಿಂದುಸ್ತಾನಕ್ಕೆ) ಹೋಗೋಣ, ಇಲ್ಲವೆ ಇಬ್ಬರೂ ತೆಕ್ಕೆಬಿದ್ದು ಕೃಷ್ಣೆಯಲ್ಲಿ ಹಾರಿಕೊಂಡು ಜೀವಕೊಡೋಣ. ನೀನು ಮುದುಕೆಯಾಗಿರುತ್ತೀ; ನನಗೆ ಬದುಕುವ ಆಸೆಯಿಲ್ಲ; ಆದ್ದರಿಂದ ನೀನು ಇಷ್ಟು ಕೆಲಸ ಮಾಡು, ಎಂದು ಹೇಳಿದರು. ಮಾರ್ಜಿನೆಯು ಎಷ್ಟು ಸಮಾಧಾನ ಮಾಡಿದರೂ ಮೆಹೆರಜಾನಳು (ಮಾಸಾಹೇಬರು) ಕೇಳಲಿಲ್ಲ. ಹೀಗೆಯೇ ಕೆಲವು ದಿನಗಳು ಹೋದವು. ಒಂದು ದಿನ ಮೆಹೆರಜಾವಳಿಗೆ ಏನು ತಿಳೀಯಿತೋ ಏನೋ, ಆಕೆಯು ಒಮ್ಮೆಲೆ ಮಾರ್ಜಿನೆಯನ್ನು ಕರೆದು "ಧನಮಲ್ಲನ ಮನಸ್ಸನ್ನು ಒಲಿಸಿಕೊಳ್ಳಲೆಂದು ನಾನು ನಿನಗೆ ಬಹು ದಿವಸಗಳಿಂದ ಹೇಳುತ್ತ ಬಂದೆನು; ಆದರೆ ನಿನ್ನಿಂದ ಆ ಕೆಲಸವಾಗಲಿಲ್ಲ; ಆದ್ದರಿಂದ ಈಗ ನಾನೇ ಆ ಕೆಲಸಕ್ಕೆ ಕೈ ಹಾಕುತ್ತೇನೆ. ಯಾವತ್ತು ಅಂಜಿಕೆಯನ್ನು ಬಿಟ್ಟು ನಾನು ಆತನನ್ನು ಮಾತಾಡಿಸುವೆನು, ಹೋಗು, ಧನಮಲ್ಲನನ್ನು ಕರಕೊಂಡು ಬಾ, ಎಂದು ಹೇಳಿದಳು. ತನ್ನ ಒಡೆಯಳ ಈ ಮಾತುಗಳನ್ನು ಕೇಳಿ ಮಾರ್ಜಿನೆಯು ಚಕಿತಳಾಗಿ, ಮೆಹೆರಜಾನಳನ್ನು ಎವೆಯಿಕ್ಕದೆ ನೋಡಹತ್ತಿದಳು, ಆಗ ಮೆಹೆರಜಾನಳು ಮತ್ತೆ ಮಾರ್ಜಿನೆಗೆ-ಯಾಕೆ ? ಹೀಗೆ ನನ್ನ ಕಡೆಗೆ ನೋಡುತ್ತೀ ? ಕರಕೊಂಡು ಬಾ ಅವನನ್ನು, ನನ್ನ ಮುಂದೆ ನಿಲ್ಲಸಿ, ನೀನು ಹೋಗು, ಆತನು ನಿಶ್ಚಯವಾಗಿ ನಮಗೆ ಅನುಕೂಲವಾದಾನೆಂದು ನನಗೆ ತೋರುತ್ತದೆ.
ಮಾರ್ಜಿನೆ-(ವಾತ್ಸಲ್ಯದಿಂದ) ತಂಗಿ, ಮೆಹೆರಜಾನ, ಆ ಧನಮಲ್ಲನ ಹೃದಯವು ವಜ್ರಕ್ಕಿಂತ ಕಠಿಣವು, ನೀನು ಎಷ್ಟು ಹೇಳಿಕೊಂಡರೂ ಅದು ದ್ರವಿಸಲಾರದು. ಆತನ ಮನಸ್ಸಿನಲ್ಲಿ ಏನಿರುವದು ಏನಿರುವದಿಲ್ಲೆಂಬದು ಈವರೆಗೆ ಯಾರಿಗಾದರೂ ಗೊತ್ತಾಗಿರುತ್ತದೆಯೋ ?
ಮೆಹೆರಜಾನ-ಮಾರ್ಜಿನೆ, ಅದನ್ನೆಲ್ಲ ನಾನು ಬಲ್ಲೆನು. ಅದರ ಅನುಭವವು ನನಗಿರುವದಿಲ್ಲವೋ ? ಆದರೆ ಇದೊಂದು ಕಡೆಯ ಉಪಾಯವನ್ನಷ್ಟು ಮಾಡಬೇಕೆಂದು ನಾನು ನಿಶ್ಚಯಿಸಿರುತ್ತೇನೆ ! ಸಾಧಿಸದಿದ್ದರೆ, ನಮಗೆ ಇದಕ್ಕೂ ಹೆಚ್ಚಿನ ಕಷ್ಟವೇನು ಒದಗಬೇಕಾಗಿದೆ ? ಸಾಧಿಸಿದರೆ ಇಲ್ಲಿಂದ ಪಾರಾಗಿಯಾದರೂ ಹೋದೆವು. ಈಗ ನೀನು ಹೋಗು, ನನ್ನ ಸಂಗಡ ಚರ್ಚಿಸುತ್ತ ಕುಳಿತುಕೊಳ್ಳಬೇಡ. ಧನಮಲ್ಲನ ಹೆಸರು ಕೇಳಿದರೆ ನನ್ನ ಸರ್ವಾಂಗದಲ್ಲಿ ಕಂಪವು ಉತ್ಪನ್ನವಾಗುತ್ತಿರಲು, ಆತನನ್ನು ಈಗ ಏಕಾಂತದಲ್ಲಿ ಭೇಟಿಯಾಗುತ್ತೇನೆಂದಬಳಿಕ, ನನ್ನ ಮನಸ್ಸು ಎಷ್ಟು ಕಲ್ಲಾಗಿರುತ್ತದೆಂಬದನ್ನು ನೀನೇ ತರ್ಕಿಸು, ಹೋಗು-ಹೋಗು, ಜೀವದ ಹಂಗು ಬಿಟ್ಟವರಿಗೆ ಯಾವ ಕೆಲಸ ಮಾಡುವದು ತಾನೆ ಕಠಿಣವು ! ಹೋಗು, ಆಲೋಚಿಸುತ್ತ ಕುಳಿತುಕೊಳ್ಳಬೇಡ. ಇಲ್ಲದಿದ್ದರೆ ನಾನೇ ಅವನ ಬಳಿಗೆ ಹೋಗುತ್ತೇನೆ.
ಹೀಗೆ ನುಡಿದು ಮೆಹೆರ್ಜಾನಳು ಮೇಲಕ್ಕೆ ಎದ್ದುಬಿಟ್ಟಳು. ಇದನ್ನು ನೋಡಿ ಮಾರ್ಜಿನೆಯು, ಇಂದಿನ ಪ್ರಸಂಗವು ವಿಲಕ್ಷಣವಾಗಿ ತೋರುತ್ತದೆ; ಆದ್ದರಿಂದ ನಾನು ಈ ಹಟ ಹಿಡಿಯುವದು ಯೋಗ್ಯವಲ್ಲೆಂದು ತಿಳಿದು ಆಕೆಯು ಮೇಲಕ್ಕೆದ್ದಳು. ಮಾರ್ಜಿನೆಯು ತಟ್ಟನೆ ಹೋಗಿ ಧನಮಲ್ಲನ್ನನು ಗಟ್ಟಿಯಾಗಿ ಕೂಗಿ ಕರೆದಳು. ಧನಮಲ್ಲನು ಹತ್ತಿರ ಬಂದಕೂಡಲೆ ಆಕೆಯು- “ಧನಮಲ್ಲಾ, ನಿಮಗೆ ಮಾತಾಡಲಿಕ್ಕೆ ಬರುತ್ತದೆಂಬದನ್ನೂ, ನಿನ್ನ ಕಿವಿಗಳು ಕೇಳುತ್ತವೆಂಬದನ್ನೂ ನಾವು ಬಹುದಿವಸದಿಂದ ಬಲ್ಲೆವು. ಆದ್ದರಿಂದ ನೀನು ಈಗ ಈ ಗತ್ತನ್ನು ಬಿಟ್ಟು ಬಿಡು. ಈಗ ಮಾಸಾಹೇಬರುನಿನ್ನನ್ನು ಕರೆಯುತ್ತಾರೆ. ತಟ್ಟನೆ ಹೋಗು; ಅವರು ಏನು ಹೇಳುತ್ತಾರೆಂಬುದನ್ನು ಕೇಳಿಕೋ. ಅವರ ಸಂಗಡ ಹುಚ್ಚು ಹುಚ್ಚು ಬಡಿಯಬೇಡ, ಎಬಡತನದಿಂದ ನಡಕೊಳ್ಳಬೇಡ, ಇವೊತ್ತಿನವರೆಗೆ ಅವರು ನಿನ್ನನ್ನು ಪ್ರತ್ಯಕ್ಷ ಕರಿಸಿ ಏನೂ ಹೇಳಿರುವದಿಲ್ಲ. ಈವೊತ್ತು ಏನೋ ಹೇಳುತ್ತಾರೆ, ಅವರ ಮನಸ್ಸನ್ನು ನೋಯಿಸಬೇಡ, ನನಗೆ ಸಹ ಅವರು- “ನೀನು ಆತನ ಸಂಗಡ ಬರಬೇಡ, ಆತನೊಬ್ಬನನ್ನೇ ಕಳಿಸಿಕೊಡು” ಎಂದು ಹೇಳಿದ್ದಾರೆ; ಆದ್ದರಿಂದ ಬೇಗನೆ ಹೋಗು ಎಂದು ಹೇಳಿದಳು. ಅದನ್ನು ಕೇಳಿದ ಕೂಡಲೆ ಧನಮಲ್ಲನ ಮುಖಮುದ್ರೆಯು ಪ್ರಫುಲ್ಲಿತವಾಯಿತು. ಆ ಮುಖದಲಿ ಮುಗುಳುನಗೆಯು ಒಪ್ಪಿತು. ಆತನು ಆಶ್ಚರ್ಯಮಗ್ನನಾದ್ದರಿಂದ ಮಾರ್ಜೀನೆಯನ್ನು ಕೆಕ್ಕರಿಸಿ ನೋಡಹತ್ತಿದನು. ಆಗ ಮಾರ್ಜಿನೆಗೆ ಸ್ವಲ್ಪ ಧೈರ್ಯ ಬಂದಂತಾಗಿ, ಆಕೆಯು ಆತನಿಗೆ- ಹೋಗು-ಹೋಗು, ನನ್ನನ್ನು ಕೆಕ್ಕರಿಸಿ ನೋಡಬೇಡ. ಮಾಸಾಹೇಬರು ಒಳ್ಳೇ ಉತ್ಕಂಠಯಿಂದ ನಿನ್ನ ಹಾದಿಯನ್ನು ನೋಡುತ್ತಿರುವರು ಹೋಗು, ಎಂದು ಹೇಳಿದಳು. ಕೂಡಲೆ ಧನಮಲ್ಲನು ಮೆಹೆರಜಾನಳ ಬಳಿಗೆ ಹೋಗಿ ಆಕೆಯನ್ನು ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ಮೆಹೆರಜಾನಳ ಸರ್ವಾಂಗವು ಬುರುಕಿಯಿಂದ ಮುಚ್ಚಿಹೋಗಿತ್ತು, ಆಕೆಯು ಧನಮಲ್ಲನು ಬಂದ ಸುಳಿವನ್ನರಿತು, ತಟ್ಟನೆ ತನ್ನ ಮೊರೆಯ ಮೇಲಿನ ನುರುಕೆಯನ್ನು ತೆಗೆದು ಒಮ್ಮೆಲೆ ಆತನನ್ನು ಕುರಿತು-ಧನಮಲ್ಲ, ಇಲ್ಲಿಯವರೆಗಿನ ಮೆಹೆರ್ಜಾನ ಬೇರೆ, ಇನ್ನು ಮೇಲಿನ ಮೆಹೆರ್ಜಾನಳು ಬೇರೆಯೆಂದು ತಿಳಿ. ಇಲ್ಲಿಯವರೆಗೆ ನಾನುನಿನಗೆ ಹೆದರುತ್ತಿದ್ದೆನು. ಈಗ ನೀನು ನನಗೆ ಒಡಹುಟ್ಟಿದ ಅಣ್ಣನಂತೆ ಇರುತ್ತೀ, ನೀನಾದರೂ ನಿನ್ನ ಒಡಹುಟ್ಟಿದ ತಂಗಿಯೆಂತಲೇ ತಿಳಿದು ನನ್ನ ಮಾನವನ್ನು ಕಾಯಿ ನಿನಗೆ ನಾನು ಶರಣು........
ಈ ಮೇರೆಗೆ ನುಡಿಯುವಾಗ ಮೆಹೆರಜಾನಳ ಕಂಠವು ಬಿಗಿದು, ಮಾತುಗಳು ಹೊರಡದಾದವು. ಆಕೆಯ ಕಣ್ಣುಗಳಿಂದ ನೀರುಗಳು ಸುರಿಯಹತ್ತಿದವು. ಆಕೆಯು ಕೆಳಗೆ ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಧನಮಲ್ಲನು ಆಕೆಯನ್ನು ಚಮತ್ಕಾರ ದೃಷ್ಟಿಯಿಂದ ನೋಡಹತ್ತಿದನಲ್ಲದೆ, ಬಾಯಿಂದ ಪಿಟ್ಟೆಂದು ಮಾತಾಡಲಿಲ್ಲ. ಆಗ ಮೆಹೆರ್ಜಾನಳು-ಧನಮಲ್ಲಾ, ನಿನಗೆ ಮಾತಾಡಲಿಕ್ಕೆ ಬರುತ್ತದೆಂಬುದು ನನಗೆ ಗೊತ್ತಿರುತ್ತದೆ; ಆದ್ದರಿಂದ ನನ್ನ ಮುಂದೆ ನಿಜವಾದ ಸ್ವರೂಪವನ್ನು ಮುಚ್ಚಬೇಡ, ಈವೊತ್ತಿನವರೆಗೆ ಆದದ್ದನ್ನೆಲ್ಲ ಮರೆತುಬಿಡು. ನನ್ನನ್ನು ಒಡಹುಟ್ಟಿದ ತಂಗಿಯೆಂದು ತಿಳಿದು, ನನ್ನ ಮಾನವನ್ನು ಕಾಯಿ, ನನಗೆ ಈಕಾರಾಗೃಹವಾಸವು ಅತ್ಯಂತ ದುಸ್ಸಹವಾಗಿರುವದು. ನನ್ನನ್ನು ಬಂಧನದಿಂದ ಮುಕ್ತಳನ್ನಾಗಿಯಾದರೂ ಮಾಡು. ಇಲ್ಲವೆ ಇದೇ ಈ ನಿನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಹಿಚಿಕಿ ನನ್ನ ಹೆಣವನ್ನು ಈ ಪುಷ್ಕರಣಿಯಲ್ಲಿ ಚಲ್ಲಿಯಾದರೂ ಬಿಡು. ನನಗೆ ಈ ಕಾರಾಗೃಹವಾಸವು ಸಾಕು. ಯಾಕೆ, ಮಾತಾಡು, ಏನು ಮಾಡುತ್ತೀಯೆಂಬದನ್ನು ಸ್ಪಷ್ಟವಾಗಿ ಹೇಳು, ಎಂದು ನುಡಿದು ಆಕೆಯು ತನ್ನ ಮೈಮೇಲಿನ ಬುರುಕಿಯನ್ನು ದೂರ ಚಲ್ಲಿಕೊಟ್ಟು ಆತನ ಎದುರಿಗೆ ಹೋಗಿ ನಿಂತುಕೊಂಡಳು. ಆಗ ಧನ ಮಲ್ಲನು ಸೌಮ್ಯರೂಪದಿಂದ-ಏನು ? ಈ ಕೈಯಿಂದ ನಿನ್ನ ಕುತ್ತಿಗೆಯನ್ನು ಹಿಚಕಲಾ ? ನೀವು ನನ್ನನ್ನು ಇಲ್ಲಿಯವರೆಗೆ ಕೃಷ್ಣಸರ್ಪವೆಂದು ತಿಳಿಯುತ್ತ ಬಂದಿರುವಿರಿ. ನಾನು ಕೃಷ್ಣಸರ್ಪದಂತೆ ನಡೆದದ್ದೂ ನಿಜವು; ಆದರೆ ನಿಮ್ಮನು ಕಡಿಯಲಿಕ್ಕೆಂದು ಹಾಗೆ ನಾನು ನಡೆಯಲಿಲ್ಲ. ನಿಮಗೆ ಸುತ್ತು ಹಾಕಿ ಆ ಆನಂದಲ್ಲಿ
ಈ ಮಾತುಗಳನ್ನು ಕೇಳಿದಕೂಡಲೇ ಮೆಹೆರ್ಜಾನಳು ಮೆಟ್ಟಿಬಿದ್ದು, ದೂರ ಸರಿದು ನಿಂತುಕೊಂಡಳು. ಕೂಡಲೆ ಧನಮಲ್ಲನು ಮೆಹೆರ್ಜಾನಳಿಗೆ-ಯಾಕೆ, ಹೀಗೆ ಈಗ ಮೆಟ್ಟಿಬೀಳುವದೇಕೆ ? ನಾನು ಕಚ್ಚಿ ಪ್ರಾಣಹರಣ ಮಾಡುವದು ನಿಮ್ಮನ್ನಲ್ಲ ! ಬೇರೊಬ್ಬರನ್ನು ! ಆದರೆ ನಿಮ್ಮನ್ನು ನಾನು ಸುತ್ತು ಹಾಕಿ ಆನಂದಪಡತಕ್ಕವನು. ನಿಮ್ಮನ್ನು ಹುಡಕಲಿಕ್ಕೆ ನಾನು ಎಷ್ಟು ಕಷ್ಟ ಪಟ್ಟೆನು ? ಮೂವತ್ತು-ಮೂವತ್ತೈದು ವರ್ಷಗಳವರೆಗೆ ಹಿಂದುಸ್ತಾನವನ್ನೆಲ್ಲ ತಿರುಗಿದೆನು. ಸಾವಿರಾರು ಸ್ಥಳಗಳಲ್ಲಿ ನಿಮ್ಮನ್ನು ಹುಡುಕಿದೆನು. ಕಡೆಗೆ ಹುಡುಕುತ್ತ, ಹುಡುಕುತ್ತ ನೀವು ವಿಜಾಪುರಕ್ಕೆ ಹೋಗಿರುವಿರೆಂಬ ಸುದ್ದಿಯನ್ನು ಕೇಳಿ ಅಲ್ಲಿಗೆ ಹೋದೆನು. ಅಲ್ಲಿಗೆ ನಾನು ಹೋಗುವದರೊಳಗಾಗಿ ನೀವು ಇಲ್ಲಿಗೆ ಬಂದಿದ್ದಿರಿ. ಆಗ ನಾನು ಇಲ್ಲಿಗೆ ಬಂದೆನು. ನಿಮ್ಮ ಬಳಿಯಲ್ಲಿಯೇ ಇರಬೇಕೆನ್ನುವ ಹಾಗೆ ನನಗೆ ಆಗುತ್ತದೆ. ನಾನು ಕೃಷ್ಣಸರ್ಪವೇನೋ ನಿಜ, ಆದರೆ ಆ ಸರ್ಪವು ಕಡಿಯುವದು ಬೇರೊಬ್ಬನನ್ನು: ಸುತ್ತುಹಾಕಿಕೊಂಡು ಕುಳಿತುಕೊಳ್ಳುವದು ನಿಮ್ಮನ್ನು ; ಹೊತ್ತು ಬಂದಾಗ ಆ ಸರ್ಪವು ತನ್ನ ವೈರಿಯ ಸಮಾಚಾರವನ್ನು ತಕ್ಕೊಳ್ಳುವದು. ನೀವು ಸರ್ಪಕ್ಕೆ ವೈರಿಯಲ್ಲ. ಚಂದನ ಗಿಡವಿದ್ದ ಹಾಗೆ. ಸರ್ಪವು ಚಂದನ ಗಿಡವನ್ನು ಸುತ್ತಿಕೊಳ್ಳುವದಲ್ಲದೆ, ಆ ಗಿಡವನ್ನು ನಾಶ ಮಾಡುವದೆ.
ಧನಮಲ್ಲನ ಈ ಮಾತುಗಳನ್ನು ಕೇಳಿ ಮೆಹೆರ್ಜಾನಳು ಆಶ್ಚಯ್ಯಪಟ್ಟಳು. ಧನಮಲ್ಲನ ಪಾಪಬುದ್ದಿಯು ಕೂಡಲೇ ಆ ಚಾಣಾಕ್ಷಿಯ ಲಕ್ಷದಲ್ಲಿ ಬಂದಿತು. ಈ ದುಷ್ಕನು ತನ್ನ ಯಾವ ವೈರಿಯನ್ನು ಕಡಿದು ನಾಶ ಮಾಡುತ್ತಿರಬಹುದು ? ಈ ದುಷನನ್ನು ನಾನಾಗಿ ಕರಿಸಿಕೊಂಡು ಮೂಲಮಾಡಿಕೊಂಡಹಾಗಾಯಿತಲ್ಲ ! ಇನ್ನು ಈ ಅರಿಷ್ಟನಿವಾರಣವನ್ನು ಹ್ಯಾಗೆ ಮಾಡಿಕೊಳ್ಳಬೇಕು? ಮಾರ್ಜೀನೆಯನ್ನಾದರೂ ಕೂಡಿ ಕರೆಯಲಾ? ಎಂಬ ವಿಚಾರಗಳು ಉತ್ಪನ್ನವಾಗುತ್ತಿರಲು, ಧನಮಲ್ಲನು- “ನಾನು ನಿಮ್ಮ ಬಿಡುಗಡೆಯನ್ನು ಮಾಡಲಾ? ಮಾಡುವೆನು, ಮಾಡುವೆನು; ಆದರೆ ಮೊದಲು ನನ್ನ ವೈರಿಯ ಜೀವವನ್ನು ಹಿಂಡಿದಬಳಿಕ ನಿಮ್ಮ ಬಿಡುಗಡೆ ಮಾಡುವೆನು. ಸದ್ಯಕ್ಕೆ ನಿಮ್ಮನ್ನು ಬಿಟ್ಟು ಕೊಡುವಹಾಗಿಲ್ಲ. ನಮ್ಮ ವೈರಿಯು ನಿಮ್ಮ ಬಳಿಗೆ ಒಬ್ಬನೇ ಬರಲಿ, ಅವನನ್ನು ನಿಮ್ಮ ಸಮಕ್ಷಮಗೊಂದು ನಿಮ್ಮನ್ನು ಇಲ್ಲಿಂದ ಬಿಡಿಸಿಕೊಂಡು ಹೋಗುವೆನು. ನನ್ನ ವೈರಿಯು ನಾಳೆ ನಾಡದು ಇಷ್ಟರಲ್ಲಿ ಬಂದಾನು. ನನ್ನ ಪಾಲನ್ನು ಆ ದುಷ್ಟ ವೈರಿಯು ಅಪಹರಿಸಿದ ಬಳಿಕ ನಾನು ಹ್ಯಾಗೆ ಸೈರಿಸಲಿ? ಧನಮಲ್ಲನು ನನ್ನನ್ನು ಅತಿ ನಿಷ್ಠರವಾಗಿ ಕಾಯುವನೆಂದು ನೀವು ತಿಳಿದಿರಬಹುದು; ಆದರೆ ಧನಮಲ್ಲನು ನಿಮ್ಮ ಸಲುವಾಗಿ ನಿಷ್ಠರನಾಗಬಹುದೆ? ನನ್ನ ವೈರಿಯಾದ ರಾಮರಾಜನು ನಿಮ್ಮನ್ನು ಹುಡುಕಿಸುವದನ್ನು ಬಿಟ್ಟು, ನನಗೆ ಬಾಯಿಗೆ ಬಂದಹಾಗೆ ಮಾತಾಡಿ ಈಗ ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ನನ್ನನ್ನು ಹೊರಗೆ ಹಾಕಿದನು. ನಾನು ನಿಮ್ಮ ಮೇಲಿನ ಆಸೆಯಿಂದ ಕಷ್ಟಪಟ್ಟು ಒಂದೇಸಮನೆ ಹುಡುಕಿ ನಾಯಿಯಹಾಗೆ ನಿಮ್ಮ ಬಾಗಿಲು ಕಾಯುತ್ತ ಇಲ್ಲಿ ಬಿದ್ದಿರುತ್ತೇನೆ; ಆದರೆ ನಾಯಿಯು ರಾಮರಾಜನ ಅನ್ನಕ್ಕೆ ಜೋತು ನಿಮ್ಮನ್ನು ಕಾಯುತ್ತಿರುತ್ತದೆಂದು ತಿಳಿಯಬೇಡಿರಿ. ಕೇವಲ ನಿಮ್ಮ ಆಸೆಯಿಂದಲೇ ನಾಯಿಯು ನಿಮ್ಮ ಬಾಗಿಲು ಕಾಯುತ್ತಿರುವದು. ಕೃಷ್ಣಸರ್ಪವು ರಾಮರಾಜನ ಪ್ರಾಣಹರಣ ಮಾಡಿ ಮೆಹೆರ್ಜಾನ ರೂಪವಾದ ಚಂದನ ವೃಕ್ಷವನ್ನು ಸುತ್ತುಹಾಕಿದರೆ ಅದರ ಕೆಲಸ ತೀರಿತು” ಎಂದು ನುಡಿದು ಆ ದುಷ್ಟ ಧನಮಲ್ಲನು ಮೆಹೆರ್ಜಾನಳನ್ನು ಎವೆಯಿಕ್ಕದೆ ನೋಡಹತ್ತಿದನು. ಇದನ್ನು ನೋಡಿ, ಧನಮಲ್ಲನ ಮಾತುಗಳನ್ನು ಕೇಳಿ, ಮೆಹೆರ್ಜಾನಳ ಸರ್ವಾಂಗವು ಕಂಪಿಸಹತ್ತಿತು. ಆ ಮಹಾ ಪತಿವ್ರತೆಯು ತನ್ನ ದುರ್ದೈವವನ್ನೂ, ದುರವಸ್ಥೆಯನ್ನೂ ಹಳಿದುಕೊಳ್ಳಹತ್ತಿದಳು. ಇತ್ತ ಕಾಮುಕನಾದ ದುಷ್ಟ ಧನಮಲ್ಲನು ವಿವೇಕ ಭ್ರಷ್ಟನಾಗತೊಡಗಿದ್ದನು. ಅಷ್ಟರಲ್ಲಿ ಮಾರ್ಜೀನೆಯು ಅಲ್ಲಿಗೆ ಬಂದಳು. ಆಕೆಯ ಸಂಗಡ ಒಬ್ಬ ತರುಣಿಯು ಬಂದಿದ್ದಳು. ಆ ತರುಣಿಯ ಸರ್ವಾಂಗವು ಬುರುಕೆಯಿಂದ ಮುಚ್ಚಿಹೋಗಿತ್ತು. ಆ ತರುಣಿಯನ್ನು ಕಳಿಸಬಂದ ರಾಮರಾಜನ ನೃತ್ಯನು ಆ ತರುಣಿಯನ್ನು ಮಾಸಾಹೇಬರಿಗೆ ಒಪ್ಪಿಸಹೇಳಿ ಮಾರ್ಜೀನೆಯ ಒಪ್ಪಿಗೆಯಿಂದ ಹೊರಟುಹೋದನು. ಹೀಗೆ ಜನರು ಬಂದದ್ದರಿಂದ ಧನಮಲ್ಲನು ಸುಮ್ಮನೆ ಹೊರಟು ಹೋದನು. ಆಗ ಮೆಹೆರ್ಜಾನಳಿಗೆ ದೊಡ್ಡ ಕುತ್ತಿನಿಂದ ಪಾರಾದಂತೆ ಸಮಾಧಾನವಾಯಿತು. ಆಕೆಯು ಮಾರ್ಜಿನೆಗೆ ಮಾರ್ಜಿನೆ, ದುರ್ದೈವಿಗಳಾದ ನಮ್ಮ ಬಳಿಗೆ ವಿಪತ್ತನ್ನನುಭವಿಸುವದಕ್ಕಾಗಿಮತ್ತೆ ಯಾವ ದುರ್ದೈವಿಯು ಬಂದಳು? ರಾಮರಾಜನು ನೋವಿನಮೇಲೆ ಬರೆ ಕೊಟ್ಟಹಾಗೆ ಮಾಡುವದಕ್ಕಾಗಿಯೇ ಒಬ್ಬೊಬ್ಬರಂತೆ ತರುಣ ಸ್ತ್ರೀಯರನ್ನು ಹಿಡಿದು ನನ್ನ ಬಳಿಗೆ ಕಳಿಸುವನೋ ಏನು ? ಎಂದು ನುಡಿಯುತ್ತಿರಲು, ಹೊಸದಾಗಿ ಬಂದ ತರುಣಿಯು ತನ್ನ ಮೋರೆಯ ಮೇಲಿನ ಬುರುಕೆಯನ್ನು ಚೆಲ್ಲಿಕೊಟ್ಟು ಮಾಸಾಹೇಬರ ಎದುರಿಗೆ ನಿಂತುಕೊಂಡಳು. ತನ್ನ ಮಗನ ಸರ್ವಸ್ವದ ನಾಶಕ್ಕೂ, ತನ್ನ ದುಃಖದ ಹೆಚ್ಚಳಕ್ಕೂ ಕಾರಣಳಾದ ನೂರಜಹಾನಳು ಅಕಸ್ಮಕವಾಗಿ ತನ್ನ ಎದುರಿಗೆ ನಿಂತದ್ದನ್ನು ನೋಡಿ ಮೆಹೆರ್ಜಾನಳಿಗೂ, ಮಾರ್ಜಿನೆಗು ಬಹಳ ಆಶ್ಚರ್ಯವಾಯಿತು. ಅತ್ತ ನೂರಜಹಾನಳಾದರೂ ತಾನು ಒಮ್ಮಿಂದೊಮ್ಮೆ ಮಾಸಾಹೇಬರನ್ನು ನೋಡಿ ಆಕೆಯ ಮನಸ್ಸಿಗೆ ಬಹಳ ಸಮಾಧಾನವಾಯಿತು. ತನ್ನನ್ನು ಮದುವೆಯಾಗುವದಕ್ಕಾಗಿ ರಣಮಸ್ತಖಾನನು ಮಾಡಿದ ಭಯಂಕರ ಪ್ರತಿಜ್ಞೆಯನ್ನು ಆತನು ಹ್ಯಾಗೆ ನೆರವೇರಿಸುವನೆಂಬದರ ಆಲೋಚನೆಯೊಂದೇ ನೂರಜಹಾನಳ ಮನಸ್ಸಿನಲ್ಲಿ ಇತ್ತು. ರಣಮಸ್ತಖಾನನು ರಾಮರಾಜನನ್ನು ಕೂಡಿಕೊಂಡಿದ್ದು ತನ್ನ ಪ್ರತಿಜ್ಞೆಯನ್ನು ಪೂರ್ಣಮಾಡುವದಕ್ಕಾಗಿ ಎಂದು ಆಕೆಯು ತಿಳಿದಿದ್ದಳು; ಯಾಕೆಂದರೆ ರಣಮಸ್ತಖಾನನ ಸ್ವಾಭಿಮಾನ-ಸ್ತಜಾತ್ಯಾಭಿಮಾನಗಳ ಪರಿಚಯವೂ ತನ್ನ ಮೇಲಿದ್ದ ಆತನ ಅಕೃತ್ರಿಮ ಪ್ರೇಮದ ಪರಿಚಯವೂ ನೂರಜಹಾನಳಿಗೆ ಇದ್ದವು; ಆದ್ದರಿಂದ ಆಕೆಯು ರಣಮಸ್ತಖಾನನ್ನು ಮನಮುಟ್ಟಿ ಪ್ರೀತಿಸುತ್ತಿದ್ದಳು. ರಣಮಸ್ತಖಾನನ ತಾಯಿಯಾದ್ದರಿಂದ ಮಾಸಾಹೇಬರ ಮೇಲಿನ ನೂರಜಹಾನಳ ವಿಶ್ವಾಸವು ಕಡಿಮೆಯಾಗಿದ್ದಿಲ್ಲ; ಆದರೆ ಮಾಸಾಹೇಬರು ಮಾತ್ರ ನೂರಜಹಾನಳನ್ನು ನೋಡಿ ಹುಬ್ಬು ಗಂಟಿಕ್ಕಿದರು. ತನ್ನ, ಹಾಗು ತನ್ನ ಮಗನ ಸರ್ವಸ್ವದ ನಾಶಕ್ಕೆ ಈಕೆಯೇ ಕಾರಣಳಾದಳೆಂಬ ಕಾರಣದಿಂದ ಮೆಹೆರಜಾನಳ ಮನಸ್ಸಿನಲ್ಲಿ ನೂರಜಹಾನಳ ವಿಷಯವಾಗಿ ತಿರಸ್ಕಾರವು ಉತ್ಪನ್ನವಾಯಿತು. ಮೇಲಾಗಿ ಮತ್ತೊಂದು ಮಾತಿನ ಸಂಶಯವು ಮೆಹೆರಜಾನಳ ಮನಸ್ಸಿನಲ್ಲಿ ಉತ್ಪನ್ನವಾಗಿ, ಆಕೆಯ ಮನಸ್ಸು ಮತ್ತಷ್ಟು ವ್ಯಗ್ರವಾಯಿತು. ರಾಮರಾಜನು ನೂರಜಹಾನಳನ್ನು ಸ್ವಾಧೀನ ಪಡಿಸಿಕೊಂಡು ತನ್ನನ್ನು ಫಲಿಸುವದಕ್ಕಾಗಿಯೇ ಬುದ್ಧಿಪೂರ್ವಕವಾಗಿ ಆಕೆಯನ್ನು ತನ್ನ ಬಳಿಗೆ ಕಳಿಸಿರುವನೆಂದು ಮೆಹೆಜಾನಳು ಕಲ್ಪಿಸಿದಳು; ಆದ್ದರಿಂದ ಆಕೆಯು ನೂರಜಹಾನಳ ಯೋಗಕ್ಷೇಮವನ್ನೇನೂ ವಿಚಾರಿಸದೆ ಮಾರ್ಜೀನೆಗೆ-ಲೈಲೀ, ನನ್ನನ್ನು ಛಲಿಸುವದರಲ್ಲಿ ಇದಿಷ್ಟು ಕಡಿಮೆಯಾಗಿತ್ತು ; ಆದ್ದರಿಂದ ನನ್ನ ದುರ್ದೈವವು ಈಕೆಯನ್ನು ಇಲ್ಲಿಗೆ ಬರಮಾಡಿತು. ಬಹಳ ನೆಟ್ಟಗಾಯಿತು; ಇನ್ನು ನೀವಿಬ್ಬರೂ ಇಲ್ಲಿಂದ ಹೊರಟುಹೋಗಿರಿ. ಈಕೆಯನ್ನು ಎರಡನೆಯದೊಂದು ಕೋಣೆಯಲ್ಲಿ ಇಡು, ನನ್ನಬಳಿಯಲ್ಲಿ ಬೇಡ. ನನ್ನ ಜಪಕ್ಕೆ ಸುಮ್ಮನೆ ವಿಘ್ನ ಮಾಡಬೇಡ, ಎಂದು ಹೇಳಿ ನೂರಜಹಾನಳ ಕಡೆಗೆ ಬೆನ್ನುಮಾಡಿ ಕುಳಿತುಕೊಂಡಳು.
ತನ್ನ ಒಡೆಯಳ ಸ್ವಭಾವವನ್ನು ಮಾರ್ಜೀನೆಯು ಪೂರ್ಣ ಬಲ್ಲವಳಾಗಿದ್ದಳು; ಆದ್ದರಿಂದ ಆಕೆಯು ಎರಡನೆಯ ಮಾತಾಡದೆ ನೂರಜಹಾನಳನ್ನು ಕರಕೊಂಡು ಬೇರೊಂದು ಕೋಣೆಗೆ ಹೋದಳು. ಹೀಗೆ ಮಾಡುವದು ಮಾರ್ಜೀನೆಗೆ ಯೋಗ್ಯವಾಗಿ ತೋರಲಿಲ್ಲ; ಆದರೆ ಮೆಹೆರ್ಜಾನಳ ದುರವಸ್ಥೆಯನ್ನು ಅರಿತ ಆ ಪ್ರೆಮಲ ಸ್ವಭಾವದ ವೃದ್ದದಾಸಿಯು, ಆಕೆಯ ಮನಸ್ಸಿನ ವಿರುದ್ಧವಾಗಿ ನಡೆಯಲಾರದೆ ನೂರಜಹಾನಳನ್ನು ಬೇರೊಂದು ಕೋಣೆಗೆ ಕರಕೊಂಡು ಹೋದಳು. ನೂರಜಹಾನಳೂ ಅತ್ಯಂತ ಅಭಿಮಾನದ ಸ್ವಭಾವದವಳಿದ್ದಳು ಆಕೆಗೆ ಮಾಸಾಹೇಬರ ಈ ರೀತಿಯು ಸರಿಬೀಳಲಿಲ್ಲ. ಮಾಸಾಹೇಬರು ನೂರಜಹಾನಳ ಕಡೆಗೆ ಬೆನ್ನುಮಾಡಿ ಕುಳಿತುಕೊಳ್ಳುವದರೊಳಗೆ ನೂರಜಹಾನಳು ಹೊರಗೆ ಹೋಗುವದಕ್ಕಾಗಿ ಬಾಗಿಲ ಕಡೆಗೆ ತಿರುಗಿದ್ದಳು. ತಮ್ಮ ಸರ್ವಸ್ವದ ನಾಶಕ್ಕೆ ನೂರಜಹಾನಳೇ ಕಾರಣಳೆಂಬ ಸಿಟ್ಟು, ಮೆಹೆರ್ಜಾನಳಂತೆ ಮಾರ್ಜೀನೆಯ ಮನಸ್ಸಿನಲ್ಲಿಯೂ ಇತ್ತು ; ಆದ್ದರಿಂದ ಆಕೆಯು ನೂರಜಹಾನಳನ್ನು ಕುರಿತು ಅವ್ವಾ, ಈವರೆಗೆ ನಮ್ಮ ಸರ್ವಸ್ವದ ನಾಶಮಾಡಿ, ಇಂಥ ವಿಪತ್ಕಾಲದಲ್ಲಿ ಮತ್ತೆ ನಮ್ಮ ಡಂಕು ತೀರಿಸಿಕೊಳ್ಳುವದಕ್ಕೆ ಯಾಕೆ ಬಂದೆಯೆಂದು ಕೇಳಲು, ನೂರಹಜಾನಳು ವಕ್ರದೃಷ್ಟಿಯಿಂದ ಮಾರ್ಜೀನೆಯನ್ನು ನೋಡುತ್ತ ತಟ್ಟನೆ ಆಕೆಗೆ ನೀವಿಬ್ಬರೂ ಇಲ್ಲಿ ಇರುತ್ತೀರೆಂಬುದು ನನ್ನ ಪಾದರಕ್ಷೆಗೆ ಕೂಡ ಗೊತ್ತಿದ್ದಿಲ್ಲ. ಆ ದುಷ್ಟ ರಾಮರಾಜನು ಕಳಿಸಿಕೊಟ್ಟಿದ್ದರಿಂದ ನಾನು ಪರಾಧೀನಳಾಗಿ ಇಲ್ಲಿಗೆ ಬಂದೆನು, ಎಂದು ಉತ್ತರವನ್ನು ಕೊಟ್ಟಳು. ಇಂತ ದುರುತ್ತರವನ್ನು ಕೊಡಲಿಕ್ಕೆ ನೂರಜಹಾನಳಿಗೆ ಅಂಥ ಕಾರಣವೇನೂ ಇದ್ದಿಲ್ಲ; ಆದರೆ ಮೆಹೆರ್ಜಾನಳ ನಡತೆಯನ್ನು ನೋಡಿದ್ದರಿಂದಲೂ, ಮಾರ್ಜೀನೆಯ ಮಾತುಗಳನ್ನು ಕೇಳಿದ್ದರಿಂದಲೂ, ಸಂತಾಪಸ್ವಭಾವದ ಆ ತರುಣಿಯ ಮುಖದಿಂದ ಸಿಟ್ಟಿನ ಭರದಲ್ಲಿ ಅಂಥ ದುರುತ್ತರವು ತಾನೇ ಹೊರಟುಹೋಯಿತು. ಈ ದುರುತ್ತರವನ್ನು ಕೇಳಿದ ಕೂಡಲೇ ಮಾರ್ಜೀನೆಯಾದರೂ ಅಲ್ಲಿ ನಿಲ್ಲದೆ ಸಂತಾಪದಿಂದ ಹೊರಟುಹೋದಳು; ಆದರೆ ಮಾರ್ಜೀನೆಯ ಈ ಸಿಟ್ಟು ಬಹಳಹೊತ್ತು ನಿಲ್ಲಲಿಲ್ಲ. ಮಾಸಾಹೇಬರ ಮನಸ್ಸಿನ ಸ್ಥಿತಿಯಾದರೂ ಬೇಗನೆ ಬದಲಾಯಿತು. ನೂರಜಹಾನಳು ಹೋದಕೂಡಲೇ ಮಾಸಾಹೇಬರು ಮನಸ್ಸಿನಲ್ಲಿ-ಈ ಹುಡುಗಿಯು ಇಂಥ ಪ್ರಸಂಗಲ್ಲಿ ರಾಮರಾಜನ ಕೈಯಲ್ಲಿ ಹ್ಯಾಗೆ ಸಿಕ್ಕಿರಬಹುದು? ಏನಾದರೂ ಪ್ರಸಂಗ ಒದಗಿ ಆ ತರುಣಿಯು ಆತನ ಸೆರೆಯಾಳಾಗಿರುವಳು. ಇಂಥ ಪ್ರಸಂಗದಲ್ಲಿ ಎರಡು ಒಳ್ಳೆಯ ಮಾತುಗಳನ್ನಾದರೂ ಆಡಿ ಆಕೆಯನ್ನು ಸಮಾಧಾನಗೊಳಿಸುವದು ಯೋಗ್ಯವು. ನಾನು ಆಕೆಯ ಸಂಗಡ ಪ್ರತ್ಯಕ್ಷ ಮಾತಾಡದಿದ್ದರೂ, ಮಾರ್ಜೀನೆಯ ಮುಖಾಂತರ ಮಾಡಿದರು. ಮಾರ್ಜೀನೆಯು ಬಂದಕೂಡಲೆ ಮಾಸಾಹೇಬರು ಆಕೆಗೆ ತಮ್ಮ ವಿಚಾರವನ್ನೆಲ್ಲ ತಿಳಿಸಿ, ನೂರಜಹಾನಳ ಯೋಗಕ್ಷೇಮವನ್ನು ವಿಚಾರಿಸ ಹೇಳಿದರು.
****