ಕನ್ನಡಿಗರ ಕರ್ಮ ಕಥೆ/ರಣಮಸ್ತಖಾನನ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೨೫೬-೨೬೪

೨೮ನೆಯ ಪ್ರಕರಣ

ರಣಮಸ್ತಖಾನನ ಕಪಟನಾಟಕವು

ರಣಮಸ್ತಖಾನನು ತನ್ನ ಮಗನೆಂಬದು ರಾಮರಾಜನಿಗೆ ತೊಂಬತ್ತರೊಂಬತ್ತು ಪಾಲು ಗೊತ್ತಾದಂತಾಗಿತ್ತು. ಅದರಲ್ಲಿ ರಣಮಸ್ತನ ರೂಪ ತೇಜಸ್ವಿತೆಗಳೂ ರಾಯನ ಮನಸ್ಸನ್ನು ಪೂರ್ಣವಾಗಿ ಆಕ್ರಮಿಸಿದ್ದರಿಂದ, ರಣಮಸ್ತನೆಂದರೆ ರಾಮರಾಜನು ಜೀವ ಕಳೆದುಕೊಳ್ಳುತ್ತಿದ್ದನು. ರಣಮಸ್ತನು ಒಂದು ಕ್ಷಣ ಮರೆಯಾದರೆ ರಾಮರಾಜನಿಗೆ ಚಡಪಡಿಕೆಯಾಗುತಿತ್ತು. ರಾಯನು ಪ್ರೇಮಾಂಧನಾಗಿ ಹೋಗಿದ್ದನು; ಆದರೆ ರಣಮಸ್ತನ ಮನಸ್ಸು ಮಾತ್ರ ಶ್ರದ್ಧವಾಗಿದ್ದಿಲ್ಲ. ಆ ದುಷ್ಟನು ನೂರಜಹಾನಳ ಮುಂದೆ ಮಾಡಿದ್ದ ತನ್ನ ಪ್ರತಿಜ್ಞೆಯನ್ನು ಕೊನೆಗಾಣಿಸಲು ಹೊಂಚುಹಾಕಿ ಕುಳಿತಿದ್ದನು. ಕಪಟ ನಾಟಕದ ಹೊರತು ರಾಮರಾಜನ ಶಿರಸ್ಸು ಹಾರಿಸುವದು ಆಗಬೇಕೆಂದು ಆತನು ತಿಳಿದಿದ್ದನು. ವಿಜಾಪುರಕ್ಕೆ ಹೋದಾಗ, ಆ ದುಷ್ಟ ರಣಮಸ್ತನ ಅಪಮಾನವಾದಂತೆ ಜನರಿಗೆಲ್ಲ ತೋರಿತು. ಆದರೆ ಬಾದಶಹನ, ಹಾಗು ರಣಮಸ್ತನ ಗುಪ್ತಾಲೋಚನೆಗಳು ನಡೆದು, ಕಪಟನಾಟಕವನ್ನು ರಚಿಸುವದಕ್ಕಾಗಿಯೇ ಆ ಪ್ರಸಂಗವು ಒದಗಿತ್ತು. ರಣಮಸ್ತನನ್ನು ಮುಖ್ಯವಾಗಿ ಒಂದು ಚಿಂತೆಯು ಯಾವಾಗಲೂ ಬಾಧಿಸುತ್ತಿತ್ತು. ತನ್ನ ಕುಲೀನತೆಯ ಸಂಬಂಧದಿಂದ ಶಂಕಿಸಿ, ನೂರಜಹಾನಳು ತನ್ನನ್ನು ಎಲ್ಲಿ ಲಗ್ನವಾಗದೆ ಬಿಡುವಳೋ ಎಂದು ಆತನು ಯಾವಾಗಲೂ ಆಲೋಚಿಸತ್ತಿದ್ದನು. ಆ ಆಲೋಚನೆಯೊಂದೇ ಆತನ ಶರೀರದ ಕ್ಷೀಣತೆಗೆ ಕಾರಣವಾಗಿತ್ತು. ಅದರಲ್ಲಿ ಮಾಸಾಹೇಬರು ವಿಜಾಪುರಕ್ಕೆ ಹೋಗಿಬಂದು, ನೂರಜಹಾನಳ ಪ್ರಾಪ್ತಿಯ ಸಂಬಂಧದಿಂದ ನಿರಾಶೆಯನ್ನು ಪ್ರಕಟಿಸಿದಾಗಿನಿಂದಂತು, ಆತನ ಚಿಂತೆಯು ಮತ್ತಷ್ಟು ಹೆಚ್ಚಿತು; ಆದರೂ ತಾನು ತನ್ನ ಪ್ರತಿಜ್ಞೆಯನ್ನು ನೆರವೇರಿಸಿ, ನೂರಜಹಾನಳ ಪ್ರಾಣಿಗ್ರಹಣದ ಪ್ರಾತ್ತತೆಯನ್ನು ಪಡೆಯುವದನ್ನಂತು ಪಡೆಯಬೇಕೆಂದು ಆತನು ನಿಶ್ಚಯಿಸಿದ್ದನು. ಈತನ ನಿಶ್ಚಯಕ್ಕೆ ರಾಮರಾಜನ ಪುತ್ರವ್ಯಾಮೋಹವು ಅನಾಯಾಸವಾಗಿ ಅನುಕೂಲಿಸಿತು. ವಿನಾಶಕಾಲಕ್ಕೆ ಅನುಸರಿಸಿ ರಣಮಸ್ತನ ಹುಚ್ಚು ರಾಮರಾಜನ ತಲೆಗೇರಿದಂತೆ, ರಣಮಸ್ತನ ಇಷ್ಟಾರ್ಥ ಪೂರ್ತಿಯು ಸಮೀಪಿಸಹತ್ತಿತ್ತು. ಧೂರ್ತನಾದ ವಿಜಾಪುರದ ಬಾದಶಹನಂತು ಅಂತರಂಗದಲ್ಲಿ ರಣಮಸ್ತನಿಗೆ ಪೂರ್ಣ ಅನುಕೂಲವಾಗಿ, ಬಹಿರಂಗದಲ್ಲಿ ಆತನನ್ನು ಸಂಪೂರ್ಣ ನಿರಾಕರಿಸುತ್ತಿದ್ದನು. ರಣಮಸ್ತನ ಕೃತಿಗಳೆಲ್ಲ ಬಾದಶಹನ ಅತಿ ಗುಪ್ತವಾದ ಆಲೋಚನೆಯಿಂದಲೇ ನಡೆದಿದ್ದವು. ವಿಜಯನಗರದ ರಾಜಕಾರಣ ಸುದ್ದಿಗಳೆಲ್ಲ ರಣಮಸ್ತಖಾನನ ಮುಖಾಂತರ ಬಾದಶಹನ ಕಿವಿಗೆ ಮುಟ್ಟುತ್ತಿದ್ದವು; ಆದರೆ ಇದರ ಗಂಧವು ಕೂಡ ಯಾರಿಗೂ ಗೊತ್ತಾಗಿದ್ದಿಲ್ಲ. ರಣಮಸ್ತನ ಒಳಸಂಚುಗಳು ಬಾದಶಹನಿಗೂ, ಆತನ ಮುಖಮಂತ್ರಿಗಳಿಗೂ ಮಾತ್ರ ಗೊತ್ತಿದ್ದವು. ಉಳಿದ ಮುಸಲ್ಮಾನರೆಲ್ಲ ರಣಮಸ್ತನನ್ನು ದ್ರೋಹಿಯೆಂತಲೇ ಭಾವಿಸಿದ್ದರು. ಸ್ವತಃ ಮಾಸಾಹೇಬರಿಗೂ ಈ ಗುಪ್ತಸಂಚಿನ ಸುದ್ದಿಯಿದ್ದಿಲ್ಲ.

ಹೀಗಿರುವಾಗ, ರಾಮರಾಜನು ರಣಮಸ್ತಖಾನನನ್ನು ಒಲಿಸಿಕೊಳ್ಳುವದಕ್ಕಾಗಿ ಶುದ್ಧಾಂತಃಕರಣದಿಂದ ಮನಃಪೂರ್ವಕವಾಗಿ ಪ್ರೀತಿಸುತ್ತಿರಲು, ದುಷ್ಟ ರಣಮಸ್ತನು ಆ ರಾಯನನ್ನು ಸಂಪೂರ್ಣವಾಗಿ ಮೋಸಗೊಳಿಸಿದನೆಂದು ಹೇಳಬಹುದು. ವಿಜಾಪುರದ ಎಲ್ಲ ಮುಸಲ್ಮಾನ ಬಾದಶಹರ ಸೈನ್ಯಗಳು ವಿಜಯನಗರದ ಮೇಲೆ ಸಾಗಿಬರುತ್ತಿರುವಾಗ, ಆ ಸೈನ್ಯಗಳಿಗೆ ಅನುಕೂಲವಾಗಿ ವಿಜಯನಗರದ ಸೈನ್ಯದಲ್ಲಿ ಕಪಟವ್ಯೂಹವನ್ನು ರಚಿಸಲಿಕ್ಕೆ ರಣಮಸ್ತನು ಆರಂಭಿಸಿದನು. ರಾಮರಾಜನು ತನ್ನನ್ನು ಅಂಗರಕ್ಷಕನಾಗಿ ನಿಯಮಿಸಿಕೊಂಡದ್ದರಿಂದ, ರಣಮಸ್ತನಿಗೆ ಅಂತರಂಗದಲ್ಲಿ ಸಂತೋಷವಾಗಿತ್ತು. ತಾನು ಹಲವು ಪಠಾಣರ ಹಾಗು ಅರಬರ ಗುಪ್ತಚಾರರನ್ನು ಕಳಿಸಿ, ವೈರಿಗಳ ಕಡೆಯ ಗುಪ್ತಸಂಗತಿಗಳ ಗೊತ್ತು ಹಚ್ಚಿಸತೊಡಗಿರುವೆನೆಂದು ರಣಮಸ್ತನು ರಾಮರಾಜನ ಮುಂದೆ ಹೇಳುತ್ತಲಿದ್ದನು; ಆ ಹೇಳಿಕೆಯಂತೆ ಎರಡು ದಿನಕ್ಕೆ ಮೂರು ದಿನಕ್ಕೆ ಒಮ್ಮೆ ಹೊಸಹೊಸ ಸುದ್ದಿಗಳನ್ನು ಹುಟ್ಟಿಸಿ, ತನ್ನ ಚಾರರ ಮುಖಾಂತರ ರಾಮರಾಜನಿಗೆ ತಿಳಿಸಹತ್ತಿದನು. ಆ ಸುದ್ದಿಗಳಲ್ಲಿ ಎಷ್ಟೋ ಸುದ್ದಿಗಳು ಅಸಂಭವವಾದವುಗಳಿದ್ದರೂ, ಅವು ರಣಮಸ್ತನ ಚಾರರ ಮುಖದಿಂದ ಹೊರಟವಾದ್ದರಿಂದ, ರಾಮರಾಜನಿಗೆ ಸಂಭವವಾಗಿ ತೋರುತ್ತಿದ್ದವು. ವಿಜಯನಗರದ ದೂರದರ್ಶಿಗಳಾದ ಮುತ್ಸದ್ದಿಗಳು, ಈ ಸುದ್ದಿಗಳ ಅಸಂಭವತೆಯನ್ನು ತೋರಿಸಲು ರಾಮರಾಜನ ಸಮಕ್ಷಮ ಅವರ ಮಾತನ್ನು ನಿರಾಕರಿಸಿ, ಉಪಹಾಸ ಮಾಡಹತ್ತಿದನು. ಆದ್ದರಿಂದ ಮುಂದೆ ರಾಮರಾಜನಿಗೆ ಹಿತವಚನಗಳನ್ನು ಹೇಳುವವರೇ ಇಲ್ಲದಾದರು, ಈ ಮೊದಲೆ ರಾಮರಾಜನು ಶತ್ರುಗಳ ಸೈನ್ಯವನ್ನು ತುಂಗಭದ್ರೆಯ ಕಾಳ ಹೊಳೆಯಲ್ಲಿ ತರುಬಬೇಕೆಂದು ಯೋಚಿಸಿದ್ದನಷ್ಟೇ; ಆದರೆ ಬಾದಶಹನು ಶತ್ರುವನ್ನು ಬೈಲಿಗೆಳೆಯಬೇಕೆಂದು ಯೋಚಿಸುತ್ತಿದ್ದನು.

ಬಾದಶಹನ ಈ ವಿಚಾರಕ್ಕನುಸರಿಸಿ ರಣಮಸ್ತನು ಕಪಟನಾಟಕವನ್ನು ರಚಿಸಬೇಕಾಗಿತ್ತು. ಹೀಗಿರುವಾಗ, ಒಂದು ದಿನ ರಣಮಸ್ತಖಾನನು ರಾಮರಾಜನ ಬಳಿಗೆ ತನ್ನ ಇಬ್ಬರು ಗುಪ್ತಚಾರರನ್ನು ಕರಕೊಂಡು ಬಂದನು. ಅವರಲ್ಲಿ ಒಬ್ಬನು ಅರಬನಿದ್ದನು; ಮತೊಬ್ಬನು ಪಠಾಣನಿದ್ದನು. ರಾಮರಾಜನ ಬಳಿಗೆ ಬೇಕಾದಾಗಹೋಗಲಿಕ್ಕೆ ರಣಮಸ್ತನಿಗೆ ಪ್ರತಿಬಂಧವಿದ್ದಿಲ್ಲ. ರಣಮಸ್ತನು ರಾತ್ರಿ ಆ ಗುಪಚಾರರೊಡನೆ ರಾಮರಾಜನ ಬಳಿಗೆ ಹೋಗಿ- “ಸರಕಾರ್‌, ಇವರಿಬ್ಬರೂ ಇದೇ ಈಗ ಬೇರೆಬೇರೆ ಸ್ಥಾನಗಳಿಂದ ಶತ್ರುಗಳ ಕಡೆಯ ಸುದ್ದಿಗಳನ್ನು ತಂದಿದ್ದಾರೆ. ಸುದ್ದಿಗಳು ಬಹು ಮಹತ್ವದ್ದಿರುತ್ತವೆ. ತಾವು ಅವನ್ನಷ್ಟು ಕೇಳಿಕೊಂಡು ಅವರನ್ನು ಕಳಿಸಿಕೊಡಬೇಕು; ಆಮೇಲೆ ಏನು ಮಾಡಬೇಕೆಂಬದನ್ನು ಕುರಿತು ಆಲೋಚಿಸೋಣ” ಎಂದು ಹೇಳಿದನು. ಅದನ್ನು ಕೇಳಿ ರಾಮರಾಜನು ಸ್ವಾಭಾವಿಕವಾಗಿಯೇ ಅತ್ಯುತ್ಕಂಠಯಿಂದ ಆ ಯವನದೂತರಿಗೆ, ಸುದ್ದಿಯೇನೆಂದು ಕೇಳಿದನು. ಅದಕ್ಕೆ ಅವರು-ಸರಕಾರ್, ಅಲ್ಲಾದಿಲಶಹನು ಈವರೆಗೆ ತುಂಗಭದ್ರೆಯ ಕಾಳಹೊಳೆಯ ಮಾರ್ಗವಾಗಿ ನಮ್ಮ ಮೇಲೆ ಸಾಗಿಬರಬೇಕೆಂದು ಮಾಡಿದ್ದನಷ್ಟೆ ಆದರೆ ಅದು ಕೇವಲ ತೋರಿಕೆಗೆ ಮಾಡಿದ್ದು, ಆತನು ಉತ್ತರದಿಕ್ಕಿನಲ್ಲಿ ಬೇರೊಂದು ಕಡೆಯಲ್ಲಿ ತುಂಗಭದ್ರೆಯನ್ನು ದಾಟಿ, ನಮ್ಮ ರಾಜ್ಯದಲ್ಲಿ ಬರಬೇಕೆಂದು ಮಾಡಿದ್ದಾನೆ. ಈಗ ಆತನು ನಿಲ್ಲಿಸಿರುವ ಸ್ಥಳದಲ್ಲಿಯೇ ತನ್ನ ಸೈನ್ಯವನ್ನು ತೋರಿಕೆಗಾಗಿ ನಿಲ್ಲಿಸಿ, ಆರಿಸಿದ ಬೇರೆ ಕೆಲವು ದಂಡಾಳುಗಳನ್ನೂ, ತನ್ನ ಖಾಸ ಸೈನ್ಯವನ್ನೂ ತಕ್ಕೊಂಡು ಉತ್ತರಕಡೆಯ ಸ್ಥಳದಲ್ಲಿ ಹೊಳೆಯನ್ನು ದಾಟಿ, ನಮ್ಮ ರಾಜ್ಯವನ್ನು ಸೇರುವವನಿದ್ದಾನೆ. ಆತನು ಪ್ರವೇಶಿಸಬೇಕೆಂದು ಮಾಡಿರುವ ಸ್ಥಳದಲ್ಲಿ ನಮ್ಮ ಸೈನ್ಯವು ಇರುವದಿಲ್ಲ. ಆ ಸ್ಥಳವನ್ನು ನಾವು ತೋರಿಸುವೆವು. ಮುಂದೆ ಏನುಮಾಡಬೇಕೆಂಬದನ್ನು ತಾವು ಯೋಚಿಸಬೇಕು. ನಿಮ್ಮ ಶೂರ ಬಂಧುಗಳ ಸೈನ್ಯದೊಡನೆ ಈಗ ನಿಂತಿರುವ ಸ್ಥಳದಲ್ಲಿ ಶತ್ರುಗಳು ಹೊಳೆಯನ್ನು ದಾಟುವದಿಲ್ಲೆಂಬದು ನಿಶ್ಚಯವು, ನಿಮ್ಮ ಬಂಧುಗಳ ಭಯವು ಅವರಿಗೆ ವಿಶೇಷವಾಗಿರತ್ತದೆ.

ಗುಪ್ತಚಾರರ ಈ ಮಾತುಗಳನ್ನು ಕೇಳಿ ರಾಮರಾಜನು ಅವರನ್ನು ಕುರಿತು ಏನೋ ವಿಚಾರಿಸಬೇಕೆನ್ನುತ್ತಿರಲು, ಧೂರ್ತನಾದ ರಣಮಸ್ತಖಾನನು ಅದಕ್ಕೆ ಆಸ್ಪದಕೊಡದೆ, ಕಣ್ಣಸನ್ನೆಯಿಂದ ಚಾರರಿಗೆ ಹೊರಗೆ ಹೋಗಿ ನಿಲ್ಲಲು ಆಜ್ಞಾಪಿಸಿದನು. ಅವರಾದರೂ ತಟ್ಟನೆ ಅಲ್ಲಿಂದ ಹೊರಟು ಹೋದರು. ಅವರು ರಾಮರಾಜನಿಗೆ ಪ್ರಶ್ನೆಮಾಡಲಿಕ್ಕೆ ಆಸ್ಪದವನ್ನೇ ಕೊಡಲಿಲ್ಲ. ಅವರಿಬ್ಬರು ಚಾರರು ಹೋದಕೂಡಲೆ ರಣಮಸ್ತಖಾನನು ರಾಮರಾಜನನ್ನು ಕುರಿತು “ಹುಜೂರ್,.......” ಎಂದು ಮಾತಾಡುತ್ತಿರಲು, ರಾಮರಾಜನು ನಡುವೆ ಬಾಯಿಹಾಕಿ-ಎಲಾ, ನಾನು ನಿನ್ನನ್ನು ಮಗನೆಂದು ಭಾವಿಸಿರಲು ನೀನು “ಹುಜೂರ್” “ಸರಕಾರ್” ಎಂದು ಕರೆಯುತ್ತೀಯಲ್ಲ ! ಇನ್ನು ಮೇಲೆ ಹಾಗೆ ಕರೆಯಬೇಡ, ಎಂದು ಹೇಳಿದನು. ರಣಮಸ್ತನು ತಂದ ಸುದ್ದಿಯಿಂದ ರಾಮರಾಜನಿಗೆ ಪ್ರೇಮೋದ್ರೇಕವಾದಂತಾಗಿತ್ತು. ರಣಮಸ್ತನ ಕಪಟವು ಆತನಿಗೆ ಹೊಳೆಯಲಿಲ್ಲ. ರಾಮರಾಜನ ಪ್ರೇಮೋದ್ಧಾರಗಳನ್ನು ಕೇಳಿ ರಣಮಸ್ತಖಾನನು ನಕ್ಕು-ತಾವು ನನ್ನನ್ನು ಮಗನೆಂದು ಭಾವಿಸುತ್ತಿದ್ದರೂ, ನಾನು ನಿಮ್ಮ ನೌಕರನೆಂಬುದನ್ನು ನಾನು ಹ್ಯಾಗೆ ಮರೆಯಬೇಕು? ಅದಿರಲಿ, ನಾನು ಹ್ಯಾಗೆ ಕರೆದರೇನು ? ನನ್ನ ಮೇಲೆ ತಮ್ಮ ಪ್ರೇಮವಿರುವದೊಂದು ಮುಖ್ಯ ಮಾತು. ನನಗೆ ಈಗ ತೋರುವದೇನೆಂದರೆ, ಚಾರರು ಹೇಳಿರುವ ಸುದ್ದಿಯ ಉಪಯೋಗವನ್ನು ನಾವು ಬೇಗನೆ ಮಾಡಿಕೊಂಡರೆ ಪ್ರಯೋಜನವಾಗುವದು. ನೀವು ಈಗ ಸೈನ್ಯವನ್ನು ವಿಭಾಗಿಸಿದ್ದು ಶತ್ರುಗಳಿಗೆ ಅನಾಯಾಸವಾಗಿ ಅನುಕೂಲಿಸಿದಂತೆ ಕಾಣುತ್ತದೆ. ತಾವು ಆಜ್ಞಾಪಿಸಿದರೆ ನಾನು ನನ್ನ ಸೈನ್ಯದೊಡನೆ ಆ ಉತ್ತರದಿಕ್ಕಿನ ಕಾಳ ಹೊಳೆಯ ಕಡೆಗೆ ಹೋಗಿ ಶತ್ರುಗಳ ಸಮಾಚಾರವನ್ನು ತಕ್ಕೊಳ್ಳುವೆನು. ಆ ಸ್ಥಳದ ಗುರತು ನನಗೆ ಚೆನ್ನಾಗಿರುತ್ತದೆ. ಅಲ್ಲಿ ಕಾಳ ಹೊಳೆಯು ಸುಲಭವಾದದ್ದಿದ್ದರೂ, ಹಾದಿಯು ಬಹು ಕಿರಿದು ಇರುತ್ತದೆ. ಬಹಳವಾದರೆ ನಾಲ್ಕು ಜನರು ಮಾತ್ರ ಸಾಲಾಗಿ ಆ ಹಾದಿಯಲ್ಲಿ ಬರಬಹುದು. ಹಾದಿಯ ಎಡಬಲಗಳಲ್ಲಿ ಮಡುವುಗಳು ಇರುವವು, ಹಾದಿಯು ಸುಲಭವಾದದ್ದೆಂದು ತಿಳಿದು ದಂಡಾಳುಗಳು ಕುರಿಯ ಹಾಗೆ ನುಗ್ಗಬಹುದು. ಆಗ ನಾವು ಅಲ್ಲಿ ಇರದಿದ್ದರೆ ಕಷ್ಟಪಟ್ಟಾದರು ಅವರು ಹೊಳೆಯನ್ನು ದಾಟಿ ಬರಬಹುದು. ಆದರೆ ನಾವು ಅಲ್ಲಿ ಹಿತ್ತಿಗೆ ಹೋಗಿ ಮುಗಿಬಿದ್ದರೆ, ಶತ್ರುಗಳಿಗೆ ಜಲಸಮಾಧಿಯು ದೊರೆಯುವದು. ಇದರ ಮೇಲೆ ತಮ್ಮ ಅಪ್ಪಣೆಯಂತೆ ನಡೆದುಕೊಳ್ಳುವೆನು, ಎಂದು ಹೇಳಿದನು. ಅದಕ್ಕೆ ರಾಮರಾಜ ರಣಮಸ್ತನ ಬೆನ್ನಮೇಲೆ ಕೈಯಾಡಿಸಿ

ರಾಮರಾಜ-ನೀನು ನನ್ನನ್ನು ಆಗಲಿ ದೂರ ಹೋಗಲಾಗದು. ನನ್ನ ಮೇಲೆ ಶತ್ರುಗಳು ಏರಿಬಂದ ಪಕ್ಷದಲ್ಲಿ ನೀನುಹತ್ತರ ಇರಬೇಕು, ನನ್ನ ಎಡಬಲದಲ್ಲಿ ನನ್ನ ಇಬ್ಬರು ಬಂಧುಗಳೂ, ಮಧ್ಯದಲ್ಲಿ ನನ್ನ ಬಳಿಯಲ್ಲಿ ನೀನೂ ಇರಲೇಬೇಕು. ನನ್ನ ಸಂರಕ್ಷಣದ ವ್ಯವಸ್ಥೆಯನ್ನು ನಾನು ಮಾಡಿಕೊಳ್ಳುವದಕ್ಕಿಂತ, ನಿನ್ನ ಶೌರ್ಯವನ್ನು ಕಣ್ಣುಮುಟ್ಟಿ ನೋಡುವ ವ್ಯವಸ್ಥೆಯನ್ನು ನಾನು ಮೊದಲು ಮಾಡಿಕೊಳ್ಳಬೇಕಾಗಿರುತ್ತದೆ; ಯಾಕೆಂದರೆ ಪರಾಕ್ರಮದಲ್ಲಿ ನನ್ನ ಆದರಕ್ಕೆ ನೀನು ಪಾತ್ರವಿರುತ್ತೀಯೆಂದು ನಾನು ಈ ಮೊದಲೇ ತರ್ಕಿಸಿರುವದು ನಿಜವೆಂದು ನನ್ನ ಅನುಭವಕ್ಕೆ ಬರಬೇಕಾಗಿರುತ್ತದೆ.

ರಣಮಸ್ತಖಾನ-ತಮ್ಮ ಸಂರಕ್ಷಣದ ವ್ಯವಸ್ಥೆಯನ್ನು ಎರಡನೆಯವರು ಯಾಕೆ ಮಾಡಬೇಕು ? ನೂರಾರು ಜನರು ಒಮ್ಮೆಲೆ ನಿಮ್ಮ ಮೈಮೇಲೆ ಬಂದರೂ ನೀವು ಅವರಿಗೆ ಸೊಪ್ಪುಹಾಕುವಹಾಗಿಲ್ಲ. ತಮ್ಮ ಬಳಿಯಲ್ಲಿ ನಾನೂ ಇರುವದರಿಂದ ನನ್ನ ಶೌರ್ಯವು ತಮ್ಮ ಕಣ್ಣಿಗೆ ಬಿದ್ದು ನನ್ನ ಲಾಭವು ಮಾತ್ರ ಆಗುವದು.

ರಾಮರಾಜ-ನೀನು ಅಂಥ ಸಮರ ಪಾಂಡಿತ್ಯವನ್ನು ತೋರಿಸುವೆ ಎಂಬುದನ್ನು ನಾನು ಬಲ್ಲೆನು. ನೀನು ನನ್ನ ಬಳಿಯಲ್ಲಿಯೇ ಇರು. ನಿನ್ನ ಚಾರರು ಹೇಳಿರುವ ಸುದ್ದಿಯ ಉಪಯೋಗವನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದನ್ನು ನಾನು ಪೂರ್ಣವಾಗಿ ಆಲೋಚಿಸಿರುತ್ತೇನೆ. ಶತ್ರುಗಳು ತುಂಗಭದ್ರೆಯ ಹೊಳೆಯನ್ನು ದಾಟುವ ಹಾದಿಯನ್ನು ನಾನು ನೋಡುವದೇ ಇಲ್ಲ. ನಾವೇ ತುಂಗಭದ್ರೆಯನ್ನು ದಾಟಿಹೋಗಿ ತುಂಗೆ ಕೃಷ್ಣಗಳ ಮಧ್ಯದಲ್ಲಿರುವ ಅವರೊಡನೆ ಕಾದಿ, ಅವರನ್ನು ಹಿಂದಕ್ಕಟ್ಟುವೆವು. ತುಂಗಭದ್ರೆಯ ತನಕ ಅವರನ್ನು ಬಾರದಂತೆ ಮಾಡಿಬಿಟ್ಟರೆ ಕಾಳಹೊಳೆಗಳ ವಾದವೇ ನಿಂತು ಹೋಗುವದು. ಶತ್ರುಗಳು ಹ್ಯಾಗೂ ಕೃಷ್ಣೆಯನ್ನು ದಾಟಿ ಬಂದೇ ಇರುವರು. ಇತ್ತಕಡೆಯಿಂದ ನಾವು ದೂಡುತ್ತ ಹೋಗುತ್ತೇವೆ. ನಾವು ಮುಗಿಬಿದ್ದು ಹೋದೆವೆಂದರೆ ಅವರಿಗೆ ಓಡಲಿಕ್ಕೆ ದಿಕ್ಕುಗಳು ಸಾಲಲಿಕ್ಕಿಲ್ಲ. ನಾವು ಅವರನ್ನು ನಮ್ಮ ಸೀಮೆಯಲ್ಲಿಯಾದರೂ ಯಾಕೆ ಬರಗೊಡಬೇಕು ?

ಈ ಮೇರೆಗೆ ನುಡಿದು ರಾಮರಾಜನು ಕೂಡಲೆ ತಿರುಮಲ ವೆಂಕಟಾದ್ರಿಗಳ ಕಡೆಗೆ ಪತ್ರಗಳನ್ನು ಬರೆದು ಅವನ್ನು ರಾವುತರ ಕೂಡ ಕಳಿಸಿದನು. ಆ ಪತ್ರಗಳಲ್ಲಿ ಆತನು ಅವರಿಗೆ ಸ್ಪಷ್ಟವಾಗಿ- “ನಾವು ನಮ್ಮ ಮೂರೂ ಸೈನ್ಯಗಳನ್ನು ತುಂಗಭದ್ರೆಯನ್ನು ದಾಟಿಸಿಕೊಂಡು ಹೋಗಿ ಶತ್ರುಗಳ ದೂಳಹಾರಿಸಿಬಿಡಬೇಕು. ತುಂಗಾ-ಕೃಷ್ಣೆಗಳ ಮಧ್ಯದಲ್ಲಿ ಯವನರನ್ನು ಹಿಡಿದುಬಿಟ್ಟರೆ, ಅವರಿಗೆ ಓಡಿಹೋಗಲಿಕ್ಕೆ ಭೂಮಿಯು ಸಾಲಲಿಕ್ಕಿಲ್ಲ. ಆಗ ಪುನಃ ತಲೆಯೆತ್ತದಂತೆ ಅವರನ್ನು ಚೆನ್ನಾಗಿ ಥಳಿಸೋಣ” ಎಂದು ಬರೆದಿದ್ದನು. ಶತ್ರುಗಳ ಮೇಲೆ ಯಾರು ಯಾವ ಕಡೆಯಿಂದ ದಾಳಿಯಾಡಬೇಕೆಂಬದನ್ನು ಆ ಪತ್ರದಲ್ಲಿ ರಾಯನು ಸ್ಪಷ್ಟವಾಗಿ ಕಾಣಿಸಿದ್ದನು. ರಾಮರಾಜನು ಪತ್ರಗಳನ್ನು ರಣಮಸ್ತಖಾನನಿಗೆ ಓದಿತೋರಿಸಿಯೇ ಕಳಿಸಿದ್ದನಲ್ಲದೆ, ಅದರೊಳಗೆ ಆತನ ಬಂಧುಗಳ ಕಡೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ, ರಣಮಸ್ತಖಾನನು ಆ ಸುದ್ದಿಯನ್ನೆಲ್ಲ ಬರೆದಿದ್ದ ಪತ್ರವನ್ನು ತನ್ನ ಇಬ್ಬರು ಸೇವಕರ ಕೈಯಲ್ಲಿ ಕೊಡಲು ಅವರು ತುಂಗಭದ್ರೆಯನ್ನು ದಾಟಿ ಬಾದಶಹನ ಠಾಣ್ಯದ ಕಡೆಗೆ ನಡೆದರು. ಹೀಗೆ ವಿಜಯನಗರದಲ್ಲಿ ನಡೆದ ಪ್ರತಿ ಒಂದು ಮಹತ್ವದ ಸುದ್ದಿಯನ್ನು ರಣಮಸ್ತಖಾನನು ಶತ್ರುಗಳಿಗೆ ಗುಪ್ತವಾಗಿ ತಿಳಿಸುತ್ತಿದ್ದನು; ಆದರೆ ಅತ್ಯಂತ ಚಾಣಾಕ್ಷನಾದ ರಾಮರಾಜನು ಸಹ ಪ್ರೇಮಾಂಧನಾದ್ದರಿಂದ ರಣಮಸ್ತನ ಈ ಘಾತಕವನ್ನು ಅರಿಯದೆ ಹೋದನು. ಆತನು ಹಾಗೆ ಅಂಧನಾಗದೆ, ತನ್ನ ಸ್ವಾಭಾವಿಕವಾದ, ಧೂರ್ತತನದಿಂದ ನಡೆದಿದ್ದರೆ, ಕನ್ನಡಿಗರ ಈ ಕರ್ಮಕಥೆಯನ್ನು ಬರೆಯುವ ಪ್ರಸಂಗವು ಬರುತ್ತಿತ್ತೋ ಇಲ್ಲವೋ ಯಾರಿಗೆ ಗೊತ್ತು !

ರಾಮರಾಜನ ಪತ್ರಗಳು ತಿರುಮಲ-ವೆಂಕಟಾದ್ರಿಗಳಿಗೆ ಮುಟ್ಟಲು, ಅವನ್ನು ಓದಿ ಅವರಿಗೆ ಬಹಳ ಸಮಾಧಾನವಾಯಿತು. ಶತ್ರುಗಳ ಮೈಮೇಲೆ ಬರುವವರೆಗೆ ತಾವು ಕೈಮುಚ್ಚಿಕೊಂಡು ಹಾದಿಯನ್ನು ನೋಡುತ್ತ ಕುಳಿತುಕೊಳ್ಳುವದು ಹೇಡಿತನದ ಲಕ್ಷಣವೆಂದು ತಿಳಿದು, ತಾವು ಮುಂದಕ್ಕೆ ಸಾಗಿ ಹೋಗುವ ಬಗ್ಗೆ ತಿರುಮಲನು ರಾಮರಾಜನಿಗೆ ಪತ್ರವನ್ನು ಬರೆಯತಕ್ಕವನಿದ್ದನು. ಅಷ್ಟರಲ್ಲಿ ರಾಮರಾಜನ ಈ ಪತ್ರವು ಆತನ ಕೈಸೇರಿತು. ಆದ್ದರಿಂದ ಆತನ ಆನಂದವು ಹೊಟ್ಟೆಯಲ್ಲಿ ಹಿಡಸದಾಯಿತು. ಆತನು ತನ್ನ ಸೈನ್ಯಕ್ಕೆ ಇಷ್ಟು ಹೊತ್ತಿಗೆ ತುಂಗಭದ್ರೆಯನ್ನು ದಾಟಿಹೋಗಬೇಕೆಂದು ಆಜ್ಞಾಪಿಸಿ, ಆ ಸುದ್ದಿಯನ್ನು ವೆಂಕಟಾದ್ರಿಗೆ ತಿಳಿಸಿ ಅದೇ ಹೊತ್ತಿಗೇ ಆತನು ತುಂಗಭದ್ರೆಯನ್ನು ದಾಟಿಬರುವಂತೆ ಮಾಡಿದನು. ತಿರುಮಲನು ರಾಮರಾಜನಿಗೂ ತಾನು ಮಾಡಿದ ವ್ಯವಸ್ಥೆಯನ್ನು ತಿಳಿಸಿ, ಅದೇ ಕಾಲದಲ್ಲಿಯೇ ತಮ್ಮ ಸೈನ್ಯವನ್ನು ನಿರ್ಬಂಧವಾಗಿ ಮುಂದಕ್ಕೆ ನೂಕಬೇಕೆಂದು ರಾಮರಾಜನಿಗೆ ಹೇಳಿಕೊಂಡನು. ಇದರಿಂದ ರಾಯರ ಮೂರೂ ದಂಡುಗಳೂ ನಿಯಮಿತ ವೇಳೆಯಲ್ಲಿ ತುಂಗಭದ್ರೆಯನ್ನು ದಾಟಲನುವಾದವು. ಈ ಸುದ್ದಿಯೂ ರಣಮಸ್ತನ ಮುಖಾಂತರ ಶತ್ರುಗಳಿಗೆ ಮುಟ್ಟಿತು. ಈ ಮೂವರ ಸೈನ್ಯಗಳ ಸಂಖ್ಯೆಯು ಅಪಾರವಾಗಿತ್ತು, ಸೈನಿಕರು- “ಜಯ ನರಹರಿ ! ಜಯ ವಿಠ್ಠಲಸ್ವಾಮಿ! ಜಯವಿರೂಪಾಕ್ಷ ! ಜಯ ನರಸಿಂಹ” ಎಂದು ಜಯ ಘೋಷ ಮಾಡುತ್ತ ತುಂಗಭದ್ರೆಯನ್ನು ಪ್ರವೇಶಿಸಿದರು. ಕಾಳಹೊಳೆಯೂ ಅವರ ಗೊತ್ತಿನದಾದ್ದರಿಂದ, ಅವರ ಸೈನ್ಯವು ಬೇಗನೆ ಆಚೆಯ ದಂಡೆಯನ್ನು ಕಂಡಿತು. ಸೈನಿಕರು ನವೀನ ಸೇತುವೆಯನ್ನೂ ಉಪಯೋಗಿಸಿದರು. ರಾಮರಾಜನ ಈ ಸೈನ್ಯದ ಚಲನವಲನವು ಈ ಮೊದಲೆ ವಿಜಾಪುರದ ಅವರು ಆದಿಲಶಹನಿಗೂ, ಮಹಮ್ಮದನಗರದ ಹುಸೇನ ನಿಜಾಮಶಹನಿಗೂ ಗೊತ್ತಾದದ್ದರಿಂದ, ಆದರೂ ತಮ್ಮ ಸೈನ್ಯವನ್ನು ಒಮ್ಮೆಲೆ ಒಟ್ಟುಗೂಡಿಸಿ ಮಾಡತಕ್ಕ ವ್ಯವಸ್ಥೆಯನ್ನು ಮಾಡಿದರು. ಈ ಪ್ರಚಂಡ ಸೈನ್ಯವು ತಮ್ಮ ಮೇಲೆ ಅಕಸ್ಮಾತ್ ಸಾಗಿಬರುವದನ್ನು ನೋಡಿ, ತಾವು ಅಂಜಿ ಹಿಂದಕ್ಕೆ ಸರಿಯುವಂತೆ ಹೂಯಿಲೆನ್ನೆಬ್ಬಿಸಬೇಕೆಂದು ಮುಸಲ್ಮಾನರು ಮೊದಲೇ ಯೋಚಿಸಿದ್ದರು. ಹಾಗೆ ವಿಜಯನಗರದ ಸೈನಿಕರು ತುಂಗಭದ್ರೆಯನ್ನು ದಾಟಿದ ಕೂಡಲೆ, ಶತ್ರು ಸೈನ್ಯವು ಹಿಂದೆಗೆಯಹತ್ತಿತು. “ತಾವು ಹಿಂದಕ್ಕೆ ಸರಿಯುತ್ತ ಹೋಗಿ, ಹೊಡತಕ್ಕೆ ಅನುಕೂಲವಾದ ಸ್ಥಳವನ್ನು ಮುಟ್ಟಿದ ಕೂಡಲೆ ಹಿಂದಿರುಗಿ ನಿಂತು ಶತ್ರುಗಳ ಮೇಲೆ ಬೀಳಬೇಕು ಆಮೇಲೆ ಆಗುವದು ಆಗಲಿ” ಎಂದು ಮುಸಲ್ಮಾನರು ನಿಶ್ಚಯಿಸಿದ್ದರು. ವಿಜಯನಗರದ ಸೈನ್ಯದ ವಿಷಯವಾಗಿ ಅವರು ನಿರ್ಭಯರಾಗಿದ್ದರೆನ್ನುವ ಹಾಗಿದ್ದಿಲ್ಲ; ಆದರೆ ಅವರು ರಚಿಸಿದ ಕಪಟನಾಟಕದ ಧೈರ್ಯವು ಅವರಿಗೆ ವಿಶೇಷವಾಗಿತ್ತು.

ತಾವು ತುಂಗಭದ್ರೆಯನ್ನು ದಾಟಿ ಮುಂದಕ್ಕೆ ಸಾಗಿ ಹೋದ ಕೂಡಲೆ ಶತ್ರುಗಳ ಓಡಿಹೋಗುತ್ತಿರುವದನ್ನು ನೋಡಿ ರಾಮರಾಜನೂ ಆತನ ಬಂಧುಗಳೂ ಬಹಳ ಹಿಗ್ಗಿದರು. ತಾವು ಮುಂದಕ್ಕೆ ಸಾಗಿ ಬಂದದ್ದು ಬಹಳ ನೆಟ್ಟಗಾಯಿತೆಂದು ಅವರು ಉತ್ಸಾಹಗೊಂಡರು. ಇನ್ನು ಶತ್ರು ಸೈನ್ಯವನ್ನು ಒಂದೇಸಮನೆ ಬೆನ್ನಟ್ಟಿಹೋದರೆ ಕಾರ್ಯವು ಚೆನ್ನಾಗಿ ಸಾಧಿಸುವದೆಂದು ತಿಳಿದು, ಅವರು ತಮ್ಮ ಸೈನಿಕರನ್ನು- “ಎಲೆ ಬೇಟೆಯನ್ನು ಹೊಡೆಯಿರಿ-ಬೇಟೆಯನ್ನು ಹೊಡೆಯಿರಿ. ಜಯ ನರಹರಿ ? ಜಯ ವಿಠ್ಠಲಸ್ವಾಮಿ” ಎಂದು ಜಯಘೋಷ ಮಾಡುತ್ತ ಪೋತ್ಸಾಹಗೊಳಿಸಹತ್ತಿದರು. ಶತ್ರು ಸೈನ್ಯದ ಮೇಲೆ ಬಾಣಗಳವೃಸ್ಟಿಯಾಗಹತ್ತಿತು; ಶತ್ರುಗಳಿಗೆ ಓಡಿಹೋಗಲಿಕ್ಕೆ ಭೂಮಿಯು ಸಾಲಲೊಲ್ಲದೆನ್ನುವ ಹಾಗೆ ತೋರಿತು. ಹೀಗೆ ಶತ್ರುಗಳ ಓಡಿಹೋಗುವ ಸೋಗುಮಾಡಿದ ಹಾಗೆಲ್ಲ ವಿಜಯನಗರದ ದಂಡಾಳುಗಳ ಆನಂದವು ಹೊಟ್ಟೆಯಲ್ಲಿ ಹಿಡಿಸದಾಯಿತು. ಆಗ ರಾಮರಾಜನು ತನ್ನ ಬಳಿಯಲ್ಲಿದ್ದ ರಣಮಸ್ತಖಾನನನ್ನು ಕುರಿತು ಡೌಲಿನಿಂದ - ನಿಮ್ಮ ಮಾತು ಕೇಳಿ ನಾವು ಉತ್ತರದಿಕ್ಕಿನ ತುಂಗಭದ್ರೆಯ ಕಾಳಹೊಳೆಯನ್ನು ಕಾಯುತ್ತ ಕುಳಿತು ಕೊಂಡಿದ್ದರೆ ಹೀಗಾಗುತ್ತಿತ್ತೋ ? ಈಗ ನೋಡು, ಶತ್ರುಸೈನ್ಯವು “ಕಚ್ಚೆಗೊಂದು ಕೈ ಮುಜ್ಜೆಗೊಂದು ಕೈ” ಅನ್ನುವ ಹಾಗೆ ಓಡಹತ್ತಿದೆ ! ಇನ್ನು ಅವರು ಹೋಗುವದೆತ್ತ? ಅವರನ್ನು ರಸಾತಳಕ್ಕೆ ಇಳಿಸುವೆನು, ಕೃಷ್ಣೆಯನ್ನು ದಾಟಿಹೋದರೂ, ಅವರ ನಾಶವಾಗುವದು. ದಾಟದೆಯಿದ್ದರೂ ಅವರ ನಾಶವಾಗುವದು. ಅನ್ನಲು, ರಣಮಸ್ತಖಾನನು ಏನೂ ಉತ್ತರ ಕೊಡದೆ, ಸುಮ್ಮನೆ ರಾಮರಾಜನಿಗೆ ಮುಜುರೆಮಾಡಿ ನಕ್ಕನು. ಆ ನಗೆಯಿಂದ ಆತನು ರಾಮರಾಜನಿಗೆ “ಮಹಾರಾಜರೇ, ತಮ್ಮ ಅನುಭವ, ತಮ್ಮ ಶೌರ್ಯ, ತಮ್ಮ ರಾಜಕಾರಣಪಟುತ್ವ ಇವನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಇರುವದು” ಎಂಬರ್ಥವನ್ನು ಪ್ರಕಟಿಸಿದನು, ಮನಸ್ಸಿನಲ್ಲಿ ಮಾತ್ರ ರಾಮರಾಜನು ಮೋಸ ಹೋಗುತ್ತಿರುವ ಬಗ್ಗೆ ಖಾನನಿಗೆ ಬಹಳ ಸಮಾಧಾನವಾಗಿತ್ತು. ಹೀಗೆ ಆತನು ಸಮಾಧಾನಪಡುತ್ತಿರುವಾಗ ರಾಮರಾಜನು ರಣಮಸ್ತನಿಗೆ

ರಾಮರಾಜ-ರಣಮಸ್ತಖಾನ, ನೀನು ವೀರಪುತ್ರನಿರುತ್ತೀ. ಈ ಯುದ್ಧದಲ್ಲಿ ನಾನು ನಿನಗೊಂದು ಮಹತ್ವದ ಕಾರ್ಯವನ್ನು ಹೇಳುವವನಿದ್ದೇನೆ. ಅದನ್ನು ನೀನು ಮಾಡಲೇಬೇಕು.

ರಣಮಸ್ತ-ನೀವು ನನ್ನನು ದೂರ ಹೋಗಗೊಟ್ಟರಷ್ಟೇ ನಾನು ಮಹತ್ಕಾರ್ಯವನ್ನು ಮಾಡುವದು ? ನನ್ನ ಬಳಿಯಲ್ಲಿಯೇ ಇರಬೇಕೆಂದು ನೀವು ಆಗ್ರಹಪಡುತ್ತಿರುವಿರಿ ನಿಮ್ಮ ಸುತ್ತು ಮುತ್ತು ಅನೇಕ ವೀರರು ದಕ್ಷತೆಯಿಂದ ನಿಮ್ಮನ್ನು ರಕ್ಷಿಸುತ್ತಿರಲು, ಪರಾಕ್ರಮವನ್ನು ತೋರಿಸುವ ಪ್ರಸಂಗವು ನನಗೆ ಹ್ಯಾಗೆ ಬರಬೇಕು ? ನನ್ನನ್ನು ನೀವು ಹರಿಯಬಿಡುವದಿಲ್ಲ. ನನ್ನನ್ನು ಬಿಟ್ಟು ಹೋಗಲೇಬೇಡೆಂದು ನೀವು ಅನ್ನುತ್ತೀರಿ, ಅಂದಬಳಿಕ ನಾನೇನು ಮಾಡಲಿ ?

ರಾಮರಾಜ- ಇಲ್ಲ, ನಿನಗೆ ನಾನು ಹೋಗಬೇಡೆನ್ನುವದಿಲ್ಲ. ಯೋಗ್ಯ ಪ್ರಸಂಗ ಒದಗಿದ ಕೂಡಲೆ ನಿನ್ನನ್ನು ಕಳಿಸುವೆನು. ಕಾರ್ಯವನ್ನು ಸಾಧಿಸಲಿಕ್ಕೆ ಮಾತ್ರ ನೀನು ಸಿದ್ಧವಾಗಿರಲಿಕ್ಕೇ ಬೇಕು.

ರಣಮಸ್ತ-ನಾನು ಸಿದ್ಧನೇ ಇರುತ್ತೇನೆ.ಅದರ ವಿಷಯವಾಗಿ ತಮಗೆ ಸಂಶಯವೇತಕ್ಕೆ ? ನಾನು ಸಾಧಿಸಬೇಕಾಗಿರುವ ಕಾರ್ಯವು ಯಾವದೆಂಬದನ್ನು ಹೇಳಿಬಿಡಬೇಕು.

ರಾಮರಾಜ-ಅನ್ಯಾಯವಾಗಿ ನಿನಗೆ ದೇಹಂತ ಶಾಸನ ಮಾಡಬೇಕೆಂದು ಮಾಡಿರುವ ವಿಜಾಪುರ ಬಾದಶಹನನ್ನು ನೀನು ಸೆರೆಹಿಡಿದು ತಂದು ಕೊಡಬೇಕು. ಅದು ಸಾಧಿಸದಿದ್ದರೆ, ಆತನ ರುಂಡವನಾದರೂ ತಂದು ಕೊಡಬೇಕು.

ರಾಮರಾಜನ ಮುಖದಿಂದ ಹೊರಟ ಈ ಮಾತುಗಳನ್ನು ಕೇಳಿ ರಣಮಸ್ತಖಾನನು ಚಕಿತನಾದಂತೆ ತೋರಿತು. ಆತನು ಸಂತಾಪದಿಂದ ಅವಡುಗಚ್ಚಿ “ಏನನ್ನುವಿರಿ ? ನಾನು ಇಂಥ ಕೃತಘ್ನನಾಗಲಾ ?” ಎಂದು ಕೇಳಿದನು. ಅದಕ್ಕೆ ರಾಮರಾಜನು- “ಇದರಲ್ಲಿ ಕೃತಘ್ನತನವೇನು ? ನಿನ್ನನ್ನು ನಾನು ಬಾದಶಹನಿಗೆ ಒಪ್ಪಿಸಿದ್ರೆ, ಆತನು ನಿನ್ನ ಶಿರಚ್ಛೇದ ಮಾಡಿಸದೆ ಬೀಡುತ್ತಿದ್ದನೋ ? ಅಂದಬಳಿಕ ನನ್ನ ಪಕ್ಷವನ್ನು ವಹಿಸಿದ ನೀನು ಯುದ್ಧದಲ್ಲಿ ನನ್ನ ಸಲುವಾಗಿ ಬಾದಶಹನ ಶಿರಚ್ಛೇದ ಮಾಡಿದರೆ ಕೃತಘ್ನತನವು ಹ್ಯಾಗಾಗುವುದು ? ಅದರಲ್ಲಿ ನಾನು ನಿನಗೆ ಒಮ್ಮೆ ಶಿರಚ್ಛೇದ ಮಾಡೆಂದು ಹೇಳಿದೆನು. ನನ್ನ ಪಕ್ಷ ವಹಿಸಿ ನೀನು ಈ ಕಾರ್ಯ ಮಾಡಿದೆಯೆಂದರೆ, ನಿನ್ನ ಅಖಂಡ ಕಲ್ಯಾಣ ಮಾಡುವೆನು, ನೀನು ವಿಜಾಪುರದ ಬಾದಶಹನು ಸಹ ಆಗಬಹುದು. ಇದಲ್ಲದೆ ನಿನಗೊಂದು ಮಹತ್ವದ ಸುದ್ದಿಯನೂ ಹೇಳುವವನಿದ್ದೇನೆ.

ಈ ಮೇರೆಗೆ ಸಂಭಾಷಣವು ನಡೆದಿರಲು, ಶತ್ರುಗಳು ಕೃಷ್ಣಯ ದಂಡೆಯಲ್ಲಿ ತಳೂರಿದರೆಂಬ ಸುದ್ದಿಯನ್ನು ಚಾರರು ರಾಮರಾಜನ ಮುಂದೆ ಹೇಳಿದರು. ಅದನ್ನು ಕೇಳಿ ರಾಮರಾಜನು ಸಮಾಧಾನಪಟ್ಟು, ತಾನು ಇನ್ನು ಶತ್ರುಗಳ ಮೇಲೆ ಬೀಳುವ ಮೊದಲು ತನ್ನ ಸೈನ್ಯವನ್ನು ವಿಶ್ರಮಿಸಗೊಡಬೇಕೆಂದು ನಿಶ್ಚಯಿಸಿದನು. ಹಾಗೆ ತನ್ನ ಸೈನ್ಯದವರು ವಿಶ್ರಾಂತಿಗೊಳ್ಳದಿದ್ದರೆ, ಈಗ ಬೆನ್ನಟ್ಟುವಾಗ ದಣಿದಿರುವವರಿಗೆ ಶತ್ರುಗಳ ಮೇಲೆ ಬಿದ್ದಾಗ ಶೌರ್ಯದಿಂದ ಕಾದಲಿಕ್ಕೆ ನೆಟ್ಟಿಗಾಗಲಿಕ್ಕಿಲ್ಲೆಂಬ ವಿಚಾರವು ಆತನಲ್ಲಿ ಉತ್ಪನ್ನವಾಯಿತು. ಆಗ ರಾಮರಾಜನು ವಿಶ್ರಮಿಸುವದಕ್ಕಾಗಿ ತನ್ನ ಸೈನ್ಯಕ್ಕೆ ಅಪ್ಪಣೆಯನ್ನಿತ್ತು, ಈವರೆಗೆ ತನ್ನ ಕೈ ಸೇರಿರುವ ವೈರಿಗಳ ದೇಶವನ್ನು ಸುಲಿಯಬಹುದೆಂದು ಅವರಿಗೆ ಹೇಳಿದನು !


****