ಕನ್ನಡಿಗರ ಕರ್ಮ ಕಥೆ/ವಿನಾಶಾಂಕುರ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages i-೧೦

 ।। ಶ್ರೀ ಶೇಷಾಚಲ ಸದ್ಗುರುವೇ ನಮಃ ।।  

ಕನ್ನಡಿಗರ ಕರ್ಮಕಥೆ

ಅಥವಾ

ವಿಜಯನಗರ ರಾಜ್ಯದ ನಾಶ !

೧ನೆಯ ಪ್ರಕರಣ

ವಿನಾಶಾಂಕುರ


ವಿಜಯನಗರದ ಕೃಷ್ಣದೇವರಾಯನ ಕಾಲವು, ಕನ್ನಡಿಗರ ಅತ್ಯಂತ ಗೌರವದ ಕಾಲವೆಂದು ಹೇಳಲವಶ್ಯವಿಲ್ಲ. ಆಗಿನ ಕನ್ನಡಿಗರ ಪ್ರತಾಪದ ಅಬ್ಬರದಲ್ಲಿ ನೆರೆಹೊರೆಯ ಮುಸಲ್ಮಾನ ಅರಸರು ತತ್ತರಿಸುತ್ತಲಿದ್ದರು. ಇಡಿಯ ದಕ್ಷಿಣ ಹಿಂದುಸ್ಥಾನವು ಕೃಷ್ಣದೇವರಾಯನ ಸ್ವಾಮಿತ್ವಕ್ಕೆ ಒಳಗಾಗಿತ್ತೆಂದು ಹೇಳಬಹುದು. ಮುಸಲ್ಮಾನರಿಗೆ ಮುಂದೆ ಬಹುದಿವಸ ಕೃಷ್ಣದೇವರಾಯನ ಹಾಗು ಅವನ ದಂಡಾಳುಗಳ ಭಯವು ತಪ್ಪಲಿಲ್ಲ. ಕೃಷ್ಣದೇವರಾಯನು ಜೀವದಿಂದಿರುವವರೆಗೆ ವಿಜಯನಗರದ ಮೇಲೆ ಸಾಗಿಬರಲಿಕ್ಕೆ ವಿಜಾಪುರದ ಆದಿಲಶಹನಿಗೆ ಧೈರ್ಯವಾಗಲಿಲ್ಲ. ಈ ಕಾಲದಲ್ಲಿ ಕನ್ನಡಿಗರ ಉತ್ಕರ್ಷದ ಪರಮಾವಧಿಯಾಯಿತೆಂದು ಹೇಳಬಹುದು. ವಿದ್ವಾಂಸರಿಗೆ ಆಶ್ರಯವುದೊರೆತು ವೈದಿಕ ವಿದ್ಯೆಗೆ ಉತ್ತೇಜವಾಯಿತು. ದೊಡ್ಡ ದೊಡ್ಡ ಕಟ್ಟಡಗಳಿಂದ ರಾಜಧಾನಿಯು ಶೃಂಗರಿಸಲ್ಪಟ್ಟಿತು. ಕೃಷ್ಣಸ್ವಾಮಿಯಗುಡಿ, ಹಜಾರರಾಮಸ್ವಾಮಿಯ ಗುಡಿ, ವಿಜಯವಿಠ್ಠಲನ ಗುಡಿ ಮೊದಲಾದ ಪ್ರಸಿದ್ಧ ಗುಡಿಗಳೂ ಕಟ್ಟಿಸಲ್ಪಟ್ಟು, ಧರ್ಮದ ಬಾಹ್ಯಸ್ವರೂಪಕ್ಕೆ ಕಳೆಯೇರಿತು. ತುಂಗಭದ್ರೆಯ ಕಾಲುವೆ, ಬಸವನ ಕಾಲುವೆ, ದೊಡ್ಡದೊಂದು ಕೆರೆ ಇವುಗಳಿಂದ ಪ್ರಜೆಗಳ ಸುಖಸಮೃದ್ಧಿಗಳು ಹೆಚ್ಚಿದವು. ಕೃಷ್ಣದೇವರಾಯನು ತನ್ನ ಪ್ರೀತಿಯ ಹೆಂಡತಿಯಾದ ನಾಗಲಾದೇವಿಯ ಸನ್ಮಾನಾರ್ಥವಾಗಿ ಕಟ್ಟಿಸಿದ ನಾಗಲಾಪುರವೆಂಬುದು, ಈಗ ಹೊಸಪೇಟೆ ಎಂಬ ಹೆಸರಿನಿಂದ ಪ್ರಸಿದ್ದವಾಗಿರುತ್ತದೆ. ತೆನ್ನಾಲಿರಾಮಕೃಷ್ಣನೆಂಬ ವಿನೋದ ಸ್ವಭಾವದ ರಸಿಕ ವ್ಯಕ್ತಿಯ ಮನೋಹರಿಕಥೆಗಳಿಗೆ ಈ ಕೃಷ್ಣದೇವರಾಯನ ಸಂಬಂಧವಿರುತ್ತದೆಂಬುದನ್ನು ಬಹುಜನ ವಾಚಕರು ಅರಿತಿರಬಹುದು, ಒಟ್ಟಿಗೆ ಕೃಷ್ಣದೇವರಾಯನ ಕಾಲವು ಸರ್ವಾಂಗಸುಂದರವೂ ಬಲಿಷ್ಠವೂ ಕನ್ನಡಿಗರ ಅಭಿಮಾನಾಸ್ಪದವೂ, ಆಗಿತ್ತೆಂದು ನಿರ್ಬಾಧವಾಗಿ ಹೇಳಬಹುದು ; ಆದರೆ ನಿರ್ದೋಷವಾದದ್ದು ಜಗತ್ತಿನಲ್ಲಿ ಯಾವದಿರುತ್ತದೆ ? ಅದರಂತೆ ಆಗಿನ ವಿಜಯನಗರದ ರಾಜ್ಯಕ್ಕೆ ಅಹಂಕಾರದ ಬಾಧೆಯು ತಟ್ಟಿ, ಅದು ಮುಸಲ್ಮಾನರ ಮನಸ್ತಾಪದ ಪ್ರಖರತೆಯಲ್ಲಿ ತನ್ನ ಸರ್ವಸ್ವದ ನಾಶಮಾಡಿಕೊಳ್ಳುವ ಹಾದಿಯನ್ನು ಹಿಡಿದಿತ್ತೆಂದು ದುಃಖದಿಂದ ಹೇಳಬೇಕಾಗುವುದು !

ಕೃಷ್ಣದೇವರಾಯನ ಕಾಲದಲ್ಲಿ ಹಿಂದೂ ಸರದಾರರ ವರ್ಚಸ್ಸು ವಿಶೇಷವಾಗಿತ್ತು. ರಾಜ್ಯದ ನಿಜವಾದ ಅಧಿಕಾರವು ಸರದಾರರ ಕೈಯಲ್ಲಿಯೇ ಇತ್ತೆಂದು ಹೇಳಬಹುದು. ಬಹುಜನ ಸರದಾರರು. ಅರಸನಿಗೆ ಗೊತ್ತಾಗದಂತೆ ಮನಸೋಕ್ತವಾಗಿ ಆಚರಿಸುತ್ತಲಿದ್ದರು. ಹೀಗಿರುವಾಗ, ರಾಮರಾಜನೆಂಬ ಮಹಾ ಪ್ರತಾಪಿಯಾದ ಸರದಾರನು, ಬೇಟೆಗಾಗಿ ಮುದಗಲ್ಲಿನ ಹತ್ತಿರದ ಅರಣ್ಯವನ್ನು ಕುರಿತು ಸಾಗಿದ್ದನು. ಆಗ ವೈಶಾಖ ಮಾಸದ ಕೃಷ್ಣಪಕ್ಷವು ಮುಗಿದು, ಅದೇ ಜ್ಯೇಷ್ಠಮಾಸಕ್ಕೆ ಆರಂಭವಾಗಿತ್ತು. ಮುಂಗಾರಿನ ಕಪ್ಪು ಮೋಡವು ಕವಿದು, ಗುಡುಗು ಮಿಂಚುಗಳು ಮಳೆಯ ಅಬ್ಬರವನ್ನು ಸೂಚಿಸುತ್ತಲಿದ್ದವು. ಹೊರಗೆ ಮೂರು ತಾಸು ಹೊತ್ತು ಉಳಿದಿತ್ತು. ಒಕ್ಕಲಿಗರು ಮುಗಿಲ ಕಡೆಗೆ ಆನಂದದಿಂದ ನೋಡುತ್ತ, ಮಳೆ ಬಂದರೂ ಬರಲಿ, ಆದಷ್ಟು ತಮ್ಮ ಹೊಲಗೆಲಸವನ್ನು ತೀರಿಸಿಕೊಳ್ಳಬೇಕೆಂದು ಆತುರಪಡುತ್ತ, ಎತ್ತುಗಳನ್ನು ಬೆದರಿಸುತ್ತಲಿದ್ದರು. ಕೆಲವರು ಹೊಲಕ್ಕೆ ಗೊಬ್ಬರವನ್ನು ಬೇಗ ಬೇಗ ಕಡಿಯುತ್ತಲಿದ್ದರು. ಒತ್ತರದಿಂದ ಬೀಸುವ ತಂಗಾಳಿಯ ಸೋಂಕಿನಿಂದ ಹಾದಿಕಾರರಿಗೆ ಸುಖವಾಗುತ್ತಿತ್ತು. ತಾವು ತೋಯಿಸಿಕೊಂಡೇನೆಂಬ ಭಯದಿಂದ ಮುಗಿಲುನೋಡುತ್ತ ಲಗುಲಗು ನಡೆಯುತ್ತಲಿದ್ದರು. ಮೋಡಗಳು ಕವಿದದ್ದರಿಂದ ಸೂರ್ಯದರ್ಶನಕ್ಕೆ ಆಸ್ಪದವಿಲ್ಲದಾಯಿತು. ಈ ಮೊದಲು ಪೆಟ್ಟಿನ ಮೇಲೆ ಪೆಟ್ಟು ಎರಡು ಮೂರು ಮುಂಗಾರಿಯ ದೊಡ್ಡ ಮಳೆಗಳಾದದ್ದರಿಂದ, ಹೊಲಕ್ಕೆ ಹದಬಿದ್ದು ಹಾದಿಬಟ್ಟೆಗಳ ಹಚ್ಚಗಾಗುತ್ತಲಿದ್ದವು. ತಗ್ಗುಗಳಲ್ಲಿ ನೀರುತುಂಬಿ ಹಳ್ಳಕೊಳ್ಳಗಳಲ್ಲಿ ನೀರು ಸರವುಗಟ್ಟಿ ಹರಿಯುತ್ತಿದ್ದದ್ದರಿಂದ, ಮಳೆಗಾಲವು ದಿವ್ಯಾಲಂಕಾರಗಳನ್ನಿಟ್ಟು ಕೊಟ್ಟಂತೆ ಆಗಿತ್ತು. ಬರಬರುತ್ತ ಗಾಳಿಯು ಒತ್ತರವಾಯಿತು. ಆಕಾಶದಲ್ಲೆಲ್ಲ ಮೋಡಗಳು ಸ್ವಚ್ಛಂದದಿಂದ ಸಂಚರಿಸತೊಡಗಿ, ದೊಡ್ಡ ದೊಡ್ಡ ಹನಿಗಳು ಉದುರಹತ್ತಿದವು. ದನಕಾಯುವ ಹುಡುಗರು ತಮ್ಮ ದನಗಳ ಹಿಂಡುಗಳನ್ನು ಓಡಿಸುತ್ತ, ತಮ್ಮ ಕಂಬಳಿಯ ಕೊಪ್ಪಿಗಳ ತುದಿಯನ್ನು ಎಡಗೈಯಿಂದ ಹಿಡಿದುಕೊಂಡು, ಬಲಗೈಯಿಂದ ಕೋಲನ್ನೆತ್ತಿ ದನಗಳನ್ನು ಬೆದರಿಸುತ್ತ, ಬಡಿಯುತ್ತ ಆನಂದದಿಂದ ಸಾಗಹತ್ತಿದರು. ತೋಯಿಸಿಕೊಳ್ಳುವ ಭಯದ ಸುದ್ದಿಯನ್ನು ಕೂಡ ಅರಿಯದವರಂತೆ ಅವರು ಆನಂದದಿಂದ ಕೂಗುತ್ತಲಿದ್ದರು. ಮೇಲೆ ಮೇಲೆ ಮಳೆಯಾಗಿ ಹುಡಿ ಕೂತದ್ದರಿಂದ ಆಗ ಕಣ್ಣು ತೆರೆದು, ಸಾಗಲಿಕ್ಕೆ ಯಾರಿಗೂ ಪ್ರತಿಬಂಧವಾಗುತ್ತಿದ್ದಿಲ್ಲ. ಮೋಡದ ಗಮ್ಮಿದಿಂದತಳಮಳಿಸುತಿದ್ದವರಿಗೆ ಅಂಥ ದೊಡ್ಡ ಬಿರುಗಾಳಿಯಿಂದಾದರೂ ಸುಖವೇ ಆಗುತ್ತಿತ್ತು. ಗಾಳಿಯು ಮಳೆಯನ್ನು ತರುವುದೂ ಉಂಟು; ಕಳೆಯುವುದೂ ಉಂಟು. ಬಿರುಗಾಳಿಯಿಂದ ಮಳೆಯ ಕಸುವು ಕಡಿಮೆಯಾಯಿತು. ಒಂದು ಕಂಬಳಿ ತೋಯುವಷ್ಟು ಮಳೆಯಾಗಿ, ಮೋಡಗಳು ಚದರಿ ಬಿಸಿಲು ಬಿದ್ದಿತು. ಆಗ ಆಕಾಶದ ಹಾಗೂ ದಿಕ್ಕುಗಳ ಸುಪ್ರಸನ್ನತೆಯು ಹೆಚ್ಚಿ, ಅದರೊಡನೆ ಪ್ರಾಣಿಗಳ ಆನಂದವು ಹೆಚ್ಚಿತು. ಬೇಟೆಗಾಗಿ ಸಾಗಿದ್ದ ರಾಮರಾಜನಿಗಂತು ಹಿಡಿಸಲಾರದಷ್ಟು ಆನಂದವಾಯಿತು. ಆತನು ಒತ್ತರದಿಂದ ಅರಣ್ಯವನ್ನು ಸೇರಿ, ಒಂದು ನದಿಯದಂಡೆಗೆ ಹೋದನು.

ಆ ಅರಣ್ಯವು ಹುಲಿ-ಕರಡಿಗಳು ಸೇರುವಷ್ಟು ಗಹನವಾದದ್ದಿದ್ದಿಲ್ಲ. ಆದರೆ ತಪ್ಪಿಸಿಕೊಂಡು ಬಂದ ಒಂದು ಹುಲಿಯು ಬೆಳೆಗಳಲ್ಲಿ ಸೇರಿಕೊಂಡು ದನಕರುಗಳಿಗೆ ಬಹಳ ಉಪದ್ರವ ಕೊಡುತ್ತಲಿತ್ತು. ಈ ಸುದ್ದಿಯನ್ನು ಕೇಳಿದ ರಾಮರಾಜನು ತಾನೇ ಆ ಹುಲಿಯನ್ನು ಕೊಲ್ಲುವೆನೆಂದು ಹೇಳಿ, ಇಂದು ಒಬ್ಬನೇ ಸ್ವಚ್ಛಂದದಿಂದ ಬೇಟೆಗೆ ನಡೆದಿದ್ದನು. ರಾಮರಾಜನ ಬೇಟೆಯ ಹುಲಿಯೆಂಬ ಭಯದಿಂದ ಒಬ್ಬರೂ ಅದರ ಗೊಡವಿಗೆ ಹೋಗಿದ್ದಿಲ್ಲ. ಏರಿಕೆಯ ರಕ್ತದ ನಮ್ಮ ಆ ತರುಣ ಕನ್ನಡ ಸರದಾರನು. ಒಂದು ಕುರಿಯನ್ನು ಒಂದು ಗಿಡದ ಬೊಡ್ಡೆಗೆ ಕಟ್ಟಿಸಿ, ತಾನು ಗಿಡವೇರಿ ಕುಳಿತುಕೊಂಡನು. ದಡ್ಡಿಯೊಳಗಿದ್ದ ಆ ಕುರಿಯ ಎರಡು ಮರಿಗಳು ಅಕಸ್ಮಾತ್ತಾಗಿ ಮೇವು ಗುಟ್ಟುತ್ತ, ತಮ್ಮ ತಾಯಿಯ ಬಳಿಗೆ ಬಂದವು; ಕುರಿಯು ಶಿಶುವಾತ್ಸಲ್ಯದಿಂದ ಒಂದೇಸಮನೆ ಒದರುತ್ತ ಮರಿಗಳ ಬಳಿಗೆ ಹೋಗುವುದಕ್ಕಾಗಿ ತನ್ನ ಕೊರಳ ಹಗ್ಗವನ್ನು ಕಸುವಿನಿಂದ ಜಗ್ಗುತ್ತ, ಕೊಸರಿಹೋಗಲು ಯತ್ನಿಸುತ್ತಿತ್ತು. ಇದನ್ನು ಕೌತುಕದಿಂದ ನೋಡುತ್ತ ಕುಳಿತುಕೊಂಡಿದ್ದ ರಾಮರಾಜನ ಲಕ್ಷ್ಯವನ್ನು ಅಕಸ್ಮಾತಾಗಿ ಒಬ್ಬ ತರುಣಿಯು ಎಳೆದುಕೊಂಡಳೂ. ಹದಿನಾರು ವರ್ಷ ವಯಸ್ಸಿನ ಸುಂದರಿಯು, ಒಂದು ಸಣ್ಣ ಬಿಂದಿಗೆಯನ್ನು ಬಗಲಲ್ಲಿ ಇಟ್ಟುಕೊಂಡು ನದಿಗೆ ನೀರಿಗಾಗಿ ಬರುತ್ತಲಿದ್ದಳು. ಆಕೆಯ ಪರಿವಾರವು ಸ್ವಲ್ಪ ದೂರ ಒಂದು ಗಿಡದ ಬುಡದಲ್ಲಿ ಇಳಿದುಕೊಂಡು ವಿಶ್ರಮಿಸುತ್ತಲಿತ್ತು. ತರುಣಿಯು ಮುಸಲ್ಮಾನಳಾಗಿದ್ದರೂ ಇನ್ನೂ ಲಗ್ನವಾಗದೆಯಿದ್ದದ್ದರಿಂದಾಕೆಯು ಗೋಷೆಯ ನಿಯಮಕ್ಕೆ ಒಳಗಾಗಿದ್ದಿಲ್ಲ. ಸಮೀಪದಲ್ಲಿದ್ದ ಆ ಹಳ್ಳಿಯನ್ನು ಈಗ ಹೊತ್ತು ಮುಳುಗುವದರೊಳಗೆ ಸೇರೋಣವೆಂಬ ವಿಚಾರದಿಂದ ಆ ತರುಣಿಯ ಪರಿವಾರದವರು ನಿಶ್ಚಿಂತೆಯಿಂದ ತಮ್ಮ ತಮ್ಮೊಳಗೆ ಹರಟುತ್ತಿದ್ದರು. ಕುರಿಯ ವಾಸನೆಯಿಂದ ಹುಲಿಯು ಹೊರಬೀಳಬಹುದೆಂದು ಹಾದಿಯನ್ನು ನೋಡುತ್ತಿದ್ದ ರಾಮರಾಜನ ಕಣ್ಣಿಗೆ ಆ ಸುಂದರ ತರುಣಿಯ ಲಾವಣ್ಯಪ್ರಾಶನದ ಹೊಸದೊಂದು ಪ್ರಸಂಗವು ಬಿದ್ದಿದ್ದರಿಂದ ಆತನ ಮನಸ್ಸು ಇತ್ತಂಡವಾಯಿತು. ಒಬ್ಬನೇ ಪರಾಕ್ರಮವನ್ನು ತೋರಿಸಬೇಕೆಂಬ ಉಬ್ಬಿನಿಂದ ಸಂಗಡ ಯಾರನ್ನೂ ಕರಕೊಳ್ಳದೆ. ಆತನು ತಾನೊಬ್ಬನೇ ಬೇಟೆಗೆ ಬಂದಿದ್ದನು. ಕುರಿಯನ್ನು ತಂದುಕೊಟ್ಟ ಕುರುಬನು ಅದನ್ನು ಮರಕ್ಕೆ ಕಟ್ಟಿ, ಎಲ್ಲ ಸಿದ್ಧತೆಯನ್ನು ಮಾಡಿದ ಮೇಲೆ ರಾಮರಾಜನು ಆತನಿಗೆ ಹೊರಟು ಹೋಗುವುದಕ್ಕೆ ಕಟ್ಟಪ್ಪಣೆ ಮಾಡಿದ್ದನು. ಇತ್ತ ತನ್ನ ಮರಿಗಳು ಬಂದು ಮೊಲೆ ಕುಡಿಯ ಹತ್ತಿದ್ದರಿಂದ, ಕುರಿಯ ಜಗ್ಗಾಟವು ನಿಂತಿತು. ಬರಬರುತ್ತ ರಾಮರಾಜನ ಮನಸ್ಸನ್ನು ಆ ಸುಂದರ ತರುಣಿಯು ಸಂಪೂರ್ಣವಾಗಿ ಎಳಕೊಂಡದ್ದರಿಂದ ಆತನ ಮೇಲೆ ಆ ತಾಯಿಮಕ್ಕಳ ಪವಿತ್ರಪ್ರೇಮದ ಪರಿಣಾಮವಾಗಲಿ ಬಳಿಯಲ್ಲಿ ಹರಿಯುವ ನದಿಯ ಪ್ರವಾಹದ ಮಂಜುಳನಾದದ ಪರಿಣಾಮವಾಗಲಿ, ಇಳಿಯ ಹೊತ್ತಿನ ತಂಗಾಳಿಯ ಸುಖಸ್ಪರ್ಶದ ಪರಿಣಾಮವಾಗಲಿ ಆಗಲಿಲ್ಲ. ಯಾವ ಪಾಪವನ್ನೂ ಅರಿಯದಾ ಸುಂದರಿಯ ಮನಸ್ಸು, ಆ ನಿರಪರಾಧಿಗಳಾದ ಮೂಕ ಪ್ರಾಣಿಗಳ ಕಡೆಗೆ ತಿರುಗಿತು. ಆ ತಾಯಿಮಕ್ಕಳ ಅಕೃತ್ರಿಮ ಪ್ರೇಮವನ್ನು ನೋಡಿ, ಮುಗುಳಗೆ ನಗುತ್ತ ಆಕೆಯು ಅವುಗಳ ಬಳಿಗೆ ಕೌತುಕದಿಂದ ಬರುತ್ತಲಿದ್ದಳು, ಆ ಸುಂದರ ತರುಣಿಯ ಮನೋಹರ ಮುಖವನ್ನೂ, ತೇಜಃಪುಂಜವಾದ ವಿಶಾಲ ನೇತ್ರಗಳನ್ನೂ, ಮಂದಗಮನವನ್ನೂ, ನೋಡುವ ಭರದಲ್ಲಿ, ರಾಮರಾಜನು ಅನ್ಯ ವಿಷಯಗಳನ್ನು ಮರೆತನು. ಆತನಿಗೆ ತನ್ನ ಕೈಯೊಳಗಿನ ತುಬಾಕಿಯ ನೆನಪೂ ಉಳಿಯಲಿಲ್ಲ ; ಹುಲಿಯ ಸ್ಮರಣವಾಗಲಿಲ್ಲ ; ತಾನು ಯಾರು, ಯಾಕೆ ಬಂದೆನು, ಎಲ್ಲಿ ಕುಳಿತಿರುವೆನು ಎಂಬುದರ ಅರಿವು ಸಹ ನಿಲ್ಲಲಿಲ್ಲ; ಆತನು ಎಲ್ಲವನ್ನು ಮರೆತು ಎವೆಯಿಕ್ಕದೆ ಒಂದೇಸಮನೆ ಆ ತರುಣಿಯನ್ನು ನೋಡುತ್ತ ಕುಳಿತುಕೊಂಡಿದ್ದನು.

ಇತ್ತ ಆ ತರುಣಿಯು ಕುರಿಯು ಹಾಗೂ ಕುರಿಮರಿಗಳ ಪ್ರೇಮದ ಪ್ರಭಾವವನ್ನು ಕೌತುಕದಿಂದ ನೋಡುತ್ತ, ಅವುಗಳ ಬಳಿಗೆ ಬಂದು, ಆ ಕುರಿಯನ್ನು ಕುರಿತು ಉರ್ದು ಭಾಷೆಯಿಂದ-ಯಾವ ದುಷ್ಟನು ನಿನ್ನನ್ನು ಕಟ್ಟಿದ್ದಾನೆ ! ನಿಲ್ಲು ನಾನು ನಿನ್ನನ್ನು ಈಗ ಬಿಚ್ಚಿಬಿಡುತ್ತೇನೆ ಎಂದು ನುಡಿಯುತ್ತ ಕುರಿಯ ಕೊರಳ ಹಗ್ಗವನ್ನು ಬಿಚ್ಚಿ ಹೋದಳು. ಆಕೆಯ ಪ್ರಯತ್ನಕ್ಕೆ ಪ್ರತಿಬಂಧ ಮಾಡುವದೊತ್ತಟ್ಟಿಗೇ ಉಳಿದು, ರಾಮರಾಜನು ಆಕೆಯ ಚಲನವಲನವನ್ನೂ, ಲಲಿತವಾದ ಮನೋಹರ ಹಾವಭಾವವನ್ನೂ ನೋಡುವುದರಲ್ಲಿ ಮಗ್ನನಾಗಿ ಹೋದನು. ಆತನು ಹೀಗೆಯೇ ಎಷ್ಟು ಹೊತ್ತು ಮಗ್ನನಾಗಿರುತ್ತಿದ್ದನೋ ತಿಳಿಯದು. ಆದರೆ ಆತನನ್ನು ಎಚ್ಚರಗೊಳಿಸುವಂಥ ಒಂದು ಭಯಂಕರ ಪ್ರಸಂಗವು ಅಕಸ್ಮಾತ್ತಾಗಿ ಒದಗಿ, ಆತನ ಚಿತ್ತವು ಚಂಚಲವಾಯಿತು. ಕುರಿಯನ್ನು ಗಿಡಕ್ಕೆ ಕಟ್ಟಿಹೋದ ಕುರುಬನು ಗುಲ್ಲುಮಾಡಿ ಎಬ್ಬಿಸಿದ್ದರಿಂದಲೋ ಕುರಿಯ ವಾಸನೆಯಿಂದಲೋ, ಬೇರೆ ಯಾವ ಕಾರಣದಿಂದಲೋ ಆ ಭಯಂಕರವಾದ ಹುಲಿಯು ಗುರುಗುಟುತ್ತ ಎದ್ದಿತು. ಅದರ ಗುರುಗುಟ್ಟುವ ಧ್ವನಿಯು ರಾಮರಾಜನಿಗೆ ಸ್ಪಷ್ಟವಾಗಿ ಕೇಳಿಸಹತ್ತಿತು. ಇನ್ನು ಈ ಹುಲಿಯು ಇತ್ತ ಕಡೆಗೆ ಬಂದು, ಕುರಿಯ ಮೇಲಾಗಲಿ ಸುಂದರಿಯ ಮೇಲಾಗಲಿ, ಹಾರಿ, ಪ್ರಾಣಹರಣ ಮಾಡುವದೆಂದು ರಾಮರಾಜನು ತಿಳಿದನು. ಆ ತರುಣಿಯೊಬ್ಬಳು ಅಲ್ಲಿ ಇರದಿದ್ದರೆ, ಆತನಿಗೆ ಯಾತರ ಚಿಂತೆಯೂ ಇದ್ದಿಲ್ಲ. ಆತನು ಒಂದು ಕ್ಷಣದಲ್ಲಿ ಗುಂಡುಹಾಕಿ ಹುಲಿಯನ್ನು ಕೊಲ್ಲುತ್ತಿದ್ದನು. ಆದರೆ ಈಗ ಹಾಗೆ ಮಾಡುವ ಹಾಗಿದ್ದಿಲ್ಲ. ಕುರಿಯ ಬಳಿಯಲ್ಲಿ ನಿಂತಿದ್ದ ಸುಂದರಿಯನ್ನು ಬೆನ್ನಿಗೆ ಹಾಕಿಕೊಂಡು ಹುಲಿಗೆ ಎದುರಾಗಿ ನಿಂತು ಅದನ್ನು ಆತನು ಕೊಲ್ಲದಿದ್ದರೆ, ಆಕೆಯ ಪ್ರಾಣ ರಕ್ಷಣವಾಗುವಂತೆ ಇದ್ದಿಲ್ಲ. ಆದ್ದರಿಂದ ಮಹಾಸಾಹಸಿಯಾದ ರಾಮರಾಜನು ತುಬಾಕಿಯನ್ನು ಜೋಕೆಯಿಂದ ಹಿಡಿದು ಗಿಡದ ಮೇಲಿಂದ ಕೆಳಗೆ ದುಮುಕಿದನು. ಅಷ್ಟರಲ್ಲಿ ಹುಲಿಯು ಕುರಿಯನ್ನು ಹಿಡಿದಿತ್ತು. ಇನ್ನು ಗುಂಡು ಹಾಕುವದು ಅವಶ್ಯಕವಾಗಿ ತೋರಲು ರಾಮರಾಜನು ತುಬಾಕಿಯನ್ನು ಬಿಸುಟು, ಟೊಂಕದಲ್ಲಿ ಅಲೆದಾಡುತ್ತಿದ್ದ ಕಠಾರಿಯನ್ನು ಕೈಯಲ್ಲಿ ತಕ್ಕೊಂಡು ಹುಲಿಯ ಹೊಟ್ಟೆಯ ಬುಡದಲ್ಲಿ ಸೇರಿಸಿದನು. ಹುಲಿಯ ಬಾಯಲ್ಲಿ ಕುರಿಯಿದ್ದದ್ದರಿಂದಾಗಲಿ, ಬೇರೆ ಯಾವ ಕಾರಣದಿಂದೇ ಆಗಲಿ, ಅದರ ಆಯಕಟ್ಟಿನ ಸ್ಥಳ ನೋಡಿ ಒಂದೇ ಸಮನೆ ಕಠಾರಿಯಿಂದ ಇರಿಯಲಿಕ್ಕೆ ಆತನಿಗೆ ಅನುಕೂಲವಾಯಿತು. ಹುಲಿಯು ಬಾಯೊಳಗಿನ ಕುರಿಯನ್ನು ಚೆಲ್ಲಿಕೊಟ್ಟು, ರಾಮರಾಜನನ್ನು ಹಿಡಿಯಲು ಹಾತೊರೆಯಿತು. ಹೀಗೆ ಒಂದೇ ಸಮನೆ ಅವರಿಬ್ಬರ ಗುದುಮುರಿಗೆಯು ನಡೆದಿರಲು, ರಾಮರಾಜನ ಕಠಾರಿಯ ಇರಿತಗಳಿಂದ ಹುಲಿಯು ನೆಲಕ್ಕೆ ಉರುಳಿತು. ಹುಲಿಯ ಕಾಟ ತಪ್ಪುವವರೆಗೆ ರಾಮರಾಜನಿಗೆ ಆ ಸುಂದರಿ ಯೋಗಕ್ಷೇಮಕ್ಕೆ ಅನುಕೂಲವಾಗಲಿಲ್ಲ. ನೆಲಕ್ಕುರುಳಿ ಆಕ್ರೋಶಮಾಡುವ ಹುಲಿಯು ಇನ್ನು ಮೇಲಕ್ಕೇಳಲಾರದೆಂದು ಮನಗಂಡು, ರಾಮರಾಜನು ಸುಂದರಿಯ ಕಡೆಗೆ ಹೊರಳಿದನು. ಆಗ ಆಕೆಯು ಮೂರ್ಛಿತಳಾಗಿ ಭೂಮಿಯಲ್ಲಿ ಒರಗಿದ್ದಳು. ಮೊದಲು ಹುಲಿಯನ್ನು ಪೂರಾ ಕೊಲ್ಲಬೇಕೋ, ಸುಂದರಿಯನ್ನು ಎಚ್ಚರಗೊಳಿಸಬೇಕೋ ಎಂಬ ವಿಚಾರವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಯಿತು. ಆದರೆ ವಿಚಾರ ಮಾಡುತ್ತ ಕುಳಿತುಕೊಳ್ಳಲಿಕ್ಕೆ ಆಗ ಸಮಯವಿದ್ದಿಲ್ಲ. ಆತನು ತೀರ ನಿತ್ರಾಣವಾಗಿದ್ದ ಹುಲಿಯ ಗೊಡವೆಯನ್ನು ಬಿಟ್ಟು, ಆ ಮನೋಹರಳಾದ ಯೌವನ ಸುಂದರಿಯನ್ನು ಜಾಗ್ರತಗೊಳಿಸುವ ಉಪಾಯವನ್ನು ನಡೆಸಿದನು.

ರಾಮರಾಜನು ಮೂರ್ಛಿತಳಾದ ಆ ತರುಣಿಯನ್ನು ದೂರ ಎತ್ತಿಕೊಂಡು ಹೋಗಿ, ತನ್ನ ಸೆಲ್ಲೆಯ ಸೆರಗನ್ನು ನದಿಯಲ್ಲಿ ಅದ್ದಿಕೊಂಡು ಬಂದು ಶೀತೋಪಚಾರ ಮಾಡಹತ್ತಿದನು. ಕಣ್ಣಿಗೆ ನೀರು ಹಚ್ಚಿ ನೆತ್ತಿಗೆ ನೀರು ತಟ್ಟಿ ಗಾಳಿಹಾಕಹತ್ತಿದ ಸ್ವಲ್ಪ ಹೊತ್ತಿನ ಮೇಲೆ ಆ ತರುಣಿಯು ಸ್ವಲ್ಪ ಚೇತರಿಸಿ ಕಣ್ಣು ತೆರೆದಳು; ಆದರೆ ಅಷ್ಟರಲ್ಲಿ ರಾಮರಾಜನ ಮನಸ್ಸಿಗೆ ಏನೋ ಹೊಳೆದು, ಆತನು ಅರ್ಧ ಎಚ್ಚತ್ತಿದ್ದ ಆ ಸುಂದರಿಯನ್ನು ತನ್ನ ಕುದುರೆ ಕಟ್ಟಿದ ಗಿಡದ ಬಳಿಗೆ ಎತ್ತಿಕೊಂಡು ಹೋಗಿ, ಆಕೆಯನ್ನು ಕುದುರೆಯ ಮೇಲೆ ಅಡ್ಡ ಮಲಗಿಸಿ, ತಾನೂ ಕುದುರೆಯನ್ನು ಹತ್ತಿ ವೇಗದಿಂದ ಸಾಗಿದನು. ಇಷ್ಟಾದರೂ ಆ ತರುಣಿಯು ಪೂರ್ಣವಾಗಿ ಎಚ್ಚತ್ತಿರಲಿಲ್ಲ. ಈ ತರುಣನು ಯಾರು, ಈತನು ಏನು ಮಾಡುವನು ಎಂಬುದರ ಪ್ರಜ್ಞೆಯೂ ಆಕೆಗೆ ಇದ್ದಿಲ್ಲ. ಕುದುರೆಯನ್ನು ಒಂದೇ ಸಮನೆ ಓಡಿಸುತ್ತ ಸಾಗಿದ ರಾಮರಾಜನು, ವಿಜಯನಗರದಿಂದ ಕೆಲವು ಹರಿದಾರಿಯ ಮೇಲಿದ್ದ ಕುಂಜವನನೆಂಬ ಮನೋಹರವಾದ ತನ್ನ ಉದ್ಯಾನಕ್ಕೆ ಬಂದೇ ನಿಂತುಕೊಂಡನು. ಆ ಉದ್ಯಾನದ ಮಧ್ಯದಲ್ಲಿ ಒಂದು ಸುಂದರವಾದ ಮಂದಿರವು ಒಪ್ಪುತ್ತಿತ್ತು. ರಾಮರಾಜನು ಆ ಮಂದಿರದಲ್ಲಿಯ ಒಂದು ಕೋಣೆಯಲ್ಲಿ ಮಂಡಿಸಿದ್ದ ಪಲ್ಲಂಗದಲ್ಲಿ ಆ ತರುಣಿಯನ್ನು ಮಲಗಿಸಿ, ಆಕೆಯನ್ನು ಸಂಪೂರ್ಣವಾಗಿ ಎಚ್ಚರಗೊಳಿಸುವ ಉಪಾಯಗಳನ್ನು ನಡೆಸಿದನು. ಕೆಲಹೊತ್ತಿನ ಮೇಲೆ ಆ ತರುಣಿಯು ಎಚ್ಚತ್ತು ಕಣ್ಣೆರೆದು ನೋಡಲು ಮಚ್ಛರದಾನಿಯನ್ನು ಹಾಕಿದ ಒಂದು ಪಲ್ಲಂಗದ ಮೇಲೆ ಮಲಗಿದ್ದು ಬಳಿಯಲ್ಲಿ ಒಬ್ಬ ಸುಂದರನಾದ ತರುಣನು ಕುಳಿತಿರುವನೆಂಬುದು ಆಕೆಗೆ ಗೊತ್ತಾಯಿತು. ಕೂಡಲೇ ಆಕೆಯು ಮೆಟ್ಟಿಬಿದ್ದು, ಚಟ್ಟನೆ ಎದ್ದು ಪಲ್ಲಂಗದಿಂದ ಇಳಿದು ಕೆಳಗೆ ನಿಂತುಕೊಂಡಳು. ಆಗ ರಾಮರಾಜನು ಅಚ್ಚ ಫಾರಸೀ ಭಾಷೆಯಿಂದ ಆ ತರುಣಿಯನ್ನು ಕುರಿತು- "ತಾವು ಏಳಬಾರದು, ಇನ್ನೂ ನಿಮ್ಮ ಪ್ರಕೃತಿಯು ನೆಟ್ಟಗಾಗಲಿಲ್ಲ, ಸ್ವಸ್ಥ ಮಲಗಿಕೊಳ್ಳಬೇಕು, ಹುಲಿಯ ಭಯವೇನೂ ಇಲ್ಲಿ ಇರುವುದಿಲ್ಲ" ಎಂದು ನುಡಿದ ಕೂಡಲೇ ಆ ತರುಣಿಗೆ ಹೊಳೆಯ ದಂಡೆಯ ನೆನಪು ಆಗಿ, ಅಲ್ಲಿಯ ಭಯಂಕರವಾದ ನೋಟವು ಆಕೆಯ ಕಣ್ಣಿಗೆ ಕಟ್ಟಿತು. ಬಿರುಗಾಳಿಗೆ ತತ್ತರಿಸುವ ಬಳ್ಳಿಯಂತೆ ಆಕೆಯು ಗದಗದ ನಡುಗಹತ್ತಿದಳು, ಸ್ವಲ್ಪ ಹೊತ್ತಿನ ಮೇಲೆ ಆಕೆಯು ಸಮಾಧಾನ ತಾಳಿ ರಾಮರಾಜನನ್ನು ಕುರಿತು-
ತರುಣಿ- ನನ್ನನ್ನು ಆ ಭಯಂಕರವಾದ ಹುಲಿಯ ಬಾಯೊಳಗಿಂದ ಬಿಡಿಸಿದವರು ತಾವೇ ಏನು ?
ರಾಮರಾಜ- ಹೌದು; ಕ್ರೂರ ವ್ಯಾಘ್ರನ ದವಡೆಯೊಳಗಿಂದ ಚಿಗುರೆಯನ್ನು ಬಿಡಿಸಿ, ಬೇಟೆಯಲ್ಲಿ ಎರಡು ಫಲಗಳನ್ನು ಸಂಪಾದಿಸಿದ ಮಹದ್ಭಾಗ್ಯ ಶಾಲಿಯು.
ತರುಣಿ– ಆದರೆ ನನ್ನವರು ಎಲ್ಲಿದ್ದಾರೆ ?
ರಾಮರಾಜ- ನಾನೂ ನಿಮ್ಮವನೇ ಇರುತ್ತೇನೆ ; ಹಾಗೂ ಮರಣ ಪರ್‍ಯಂತರವಾಗಿ ನಿಮ್ಮವನೆನಿಸಿಕೊಳ್ಳುವ ಮಹದ್ಭಾಗ್ಯವು ದೊರೆಯಬೇಕೆಂದು ಮನಃಪೂರ್ವಕವಾಗಿ ನಾನು ಇಚ್ಚಿಸುತ್ತೇನೆ.
ತರುಣಿ- ತಾವು ಯಾರು ?
ರಾಮರಾಜ- ಇಂದಿನವರೆಗೆ ನಾನು ವಿಜಯನಗರದ ರಾಜ್ಯದೊಳಗಿನ ಒಬ್ಬ ದೊಡ್ಡ ಸರದಾನ ಮಗನು ಮಾತ್ರ ಆಗಿದ್ದೆನು, ಇಂದಿನಿಂದ ತಮ್ಮ ದಾಸನೂ ಆಗಿರುವೆನು.
ತರುಣಿ– ಆದರೆ ನಮ್ಮವರು ಎಲ್ಲಿದ್ದಾರೆ.
ರಾಮರಾಜ-ಅವರು ಎಲ್ಲಿರುವರೆಂಬುದನ್ನು ನೋಡಲಿಕ್ಕೆ ಆಗ ನನಗೆ ಕೂಡಲೇ ಆಗಲೇ ಇಲ್ಲ. ಕತ್ತಲಾಗುತ್ತದೆಂದು ತಮ್ಮನ್ನು ಕರಕೊಂಡು ಬಂದುಬಿಟ್ಟೆನು. ಇನ್ನು ನಿಮಗೆ ಪೂರಾ ನೆಟ್ಟಗಾದಮೇಲೆ ನಿಮ್ಮ ಅಪ್ಪಣೆಯಿಂದ ನಿಮ್ಮ ಮನೆಯವರನ್ನು ಹುಡುಕಿಸುವೆನು.
ತರುಣಿ-ನನ್ನನ್ನು ಸಂಗಡ ಕರಕೊಂಡು ಹೋಗಿಯೇ ನನ್ನ ಮನೆಯವರನ್ನು ಹುಡಿಕಿ, ಅವರ ಬಳಿಗೆ ನನ್ನನ್ನು ಕಳಿಸಬೇಕು.
ರಾಮರಾಜ- ಆಮೇಲೆ ನಿನ್ನನ್ನು ಯಾರಿಗೆ ಒಪ್ಪಿಸಲಿ ? ನನ್ನ ಗತಿಯೇನು? ನನ್ನಿಂದ ತಮ್ಮ ಸಂರಕ್ಷಣೆಯಾದಂತೆ. ಇನ್ನು ತಾವು ನನ್ನನ್ನು ರಕ್ಷಿಸಲೇಬೇಕು. ತರುಣಿ- ಇದೇನು ಮಾತು ? ಅನಾಥಳಾದ ನಾನು ನಿಮ್ಮನ್ನು ಹ್ಯಾಗೆ ರಕ್ಷಿಸುವೆನು ?
ರಾಮರಾಜ-ಈಗ ನೀವು ಅನಾಥರಾಗಿರುವಿರಾ ! ಹೀಗೆ ನುಡಿಯಲಾಗದು. ನಿಮ್ಮ ಸಂರಕ್ಷಣಕ್ಕಾಗಿ ಈಗೊಂದು ಸಾರಿ ನನ್ನ ಪ್ರಾಣವನ್ನು ಸಂಕಟಕ್ಕೆ ಗುರಿಮಾಡಿದ್ದೆನು. ಇನ್ನು ಮೇಲೆ ನನ್ನ ಜೀವಮಾನವಿರುವ ತನಕ ನಿಮ್ಮ ಸಂರಕ್ಷಣಕ್ಕಾಗಿ ಜೀವವನ್ನಾದರೂ ಕೊಟ್ಟೆನು; ನಿಮ್ಮ ಕೂದಲು ಕೊಂಕಗೊಡಲಿಕ್ಕಿಲ್ಲ. ಇನ್ನು ಮೇಲೆ ಇಲ್ಲಿಂದ ಹೋಗುವ ಮಾತು ಮಾತ್ರ ನೀವು ತೆಗೆಯಬೇಡಿರಿ.
ತರುಣೀ- ಏನು ! ನನ್ನನ್ನು ನೀವು ಇಲ್ಲಿಯೇ ಇಟ್ಟುಕೊಳ್ಳುವಿರೋ ?
ರಾಮರಾಜ- ನಾನು ಇಟ್ಟುಕೊಳ್ಳುವುದಿಲ್ಲ. ನೀವೇ ಇದ್ದು, ನನ್ನ ಪ್ರಾಣವನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಿರಿ.
ಈ ಮಾತುಗಳಿಗೆ ಏನೆಂದು ಉತ್ತರಕೊಡಬೇಕೆಂಬುದು ಆ ತರುಣಿಗೆ ಗೊತ್ತಾಗದ್ದರಿಂದ, ಸುಮ್ಮನೆ ನಿಂತುಕೊಂಡಳು. ಸ್ವಲ್ಪಹೊತ್ತಿನ ಮೇಲೆ ತುಸು ಧೈರ್‍ಯ ತಾಳಿ -
ತರುಣಿ- ನನ್ನ ಅತ್ತೆ, ನನ್ನ ಸೋದರಮಾವ, ನನ್ನ ಮಾರ್ಜೀನೆ, ನನ್ನ ಅಣ್ಣ ಇವರು ಏನಂದಾರು ?
ರಾಮರಾಜ-ಹುಲಿಯು ತಿಂದಿತೆಂದು ಅಂದಾರು ! ನಾಲ್ಕೂ ಕಡೆಯಲ್ಲಿ ಹುಡುಕಿ, ನಿರಾಶೆಪಟ್ಟು, ಈಗ ಮುಂದೆ ಹೋಗಬೇಕೆಂದು ಹೊರಟಿರುವ ಸ್ಥಳಕ್ಕೆ, ಅಥವಾ ಹಿಂದಕ್ಕೆ ತಿರುಗಿ ತಮ್ಮ ಊರಿಗೆ ಹೋದಾರು.
ತರುಣಿ- ಹಾಗಾದರೆ ನಾನು ಹುಲಿಯ ಬಾಯೊಳಗಿಂದ ಪಾರಾಗಿ ಏನು ಉಪಯೋಗವಾದ ಹಾಗಾಯಿತು.
ರಾಮರಾಜ- ನೀವು ಪಾರಾದದ್ದರ ಉಪಯೋಗವು ಅವರಿಗೆ ಇರಲಿಕ್ಕಿಲ್ಲ; ಆದರೆ ನನಗಂತೂ ಇರುತ್ತದಷ್ಟೆ? ನನಗೆ ಒಬ್ಬ ಸುಂದರ ದೇವತೆಯು ಲಭಿಸಿದ್ದೇನು ಸಾಮಾನ್ಯ ಭಾಗ್ಯವೇನು ? ಈವರೆಗೆ ಮುಸುಲ್ಮಾನರು ಅಪ್ಪರೆಯರಂಥ ನಮ್ಮ ಎಷ್ಟೋ ಹಿಂದೂ ತರುಣಿಯರನ್ನು ಅಪಹರಿಸಿಕೊಂಡು ಹೋದರು. ಇಂದು ನಾನು ಅವರ ಒಬ್ಬ ಅಪ್ಸರೆಯನ್ನು ಸಂಪಾದಿಸಿರುತ್ತೇನೆ. ಆ ಅಪ್ಸರೆಯ ಪ್ರಾಣರಕ್ಷಣದ ಕಾವ್ಯದಲ್ಲಿ ನನ್ನ ಪ್ರಾಣವನ್ನು ಒಡ್ಡಿ ಪಾರಾಗಲು, ಅದರ ಫಲವನ್ನು ಅನುಭವಿಸುವದಕ್ಕೂ ನನಗೆ ಆಸ್ಪದವಿರಬಾರದೇನು ? ಮಾರ್ಜೀನೆಯು ಯಾರು?
ತರುಣಿ - ಅದೇಕೆ ? ಮಾರ್ಜೀನೆಯನ್ನೇ ಕೇಳುವದೇಕೆ ? ಮಾರ್ಜೀನೆಯೆಂದರೆ ನನ್ನ ಎರಡನೆಯ ತಾಯಿಯೇ ಸರಿ. ತಾಯಿಗಿಂತ ಹೆಚ್ಚಾಗಿ ಆಕೆಯು ನನ್ನನ್ನು ಪ್ರೀತಿಯಿಂದ ರಕ್ಷಿಸುತ್ತಾಳೆ. ಅಂಥವಳು ಇಂದು ನನ್ನನ್ನು ಅಗಲಿದಳು. ಪರವರದಿಗಾರ, ಎಂಥ ಪ್ರಸಂಗವನ್ನು ನನ್ನ ಮೇಲೆ ತಂದೆಯಲ್ಲ! ನಾವು ಯಾವ ಕೆಲಸಕ್ಕೆ ಹೋಗುತ್ತಿದ್ದೆವು, ಇದೇನು ಗತಿ...............

ಈ ಮೇರೆಗೆ ನುಡಿದು ಆ ತರುಣಿಯು ಒಂದೇ ಸಮನೆ ಕಣ್ಣೀರು ಸುರಿಸ ಹತ್ತಿದಳು. ರಾಮರಾಜನು ಆಕೆಯನ್ನು ಸಮಾಧಾನಗೊಳಿಸಹತ್ತಿದನು. ಆತನು ತರುಣಿಗೆ-ಇನ್ನು ನೀವು ಹೀಗೆ ಅಳುತ್ತ ಕುಳಿತುಕೊಂಡರೆ ಆಗುವದೇನು? ನಾನು ನಿಮ್ಮವರನ್ನು ಹುಡುಕಿಸಿ ಕರಕೊಂಡು ಬರುವೆನು. ನಿಮ್ಮ ಮಾರ್ಜೀನೆಯೋ ಯಾರು, ಆಕೆಯನ್ನಂತು ಎಲ್ಲಿದ್ದರೂ ಹುಡುಕಿಸುವೆನು. ಈಗ ನೀವು ಮೋರೆ ತೊಳಕೊಂಡು ಊಟ ಮಾಡಿ ಸ್ವಸ್ಥ ಮಲಗಿಕೊಳ್ಳಬೇಕು. ನಾಳೆ ಬೆಳಗಾದ ಬಳಿಕ ನಿಮ್ಮ ಮಾರ್ಜೀನೆಯ ಶೋಧದ ಕೆಲಸವನ್ನು ಮೊದಲು ಮಾಡುವೆನು; ಆದರೆ ತಾವು ನನ್ನ ಮನಸ್ಸಿನ ಒಲವನ್ನನುಸರಿಸಿ ನಡೆಯಲು ನಿರ್ಧರಿಸಿ ನನ್ನ ಮನಸ್ಸನ್ನು ಸಮಾಧಾನ ಗೊಳಿಸಲೇಬೇಕು.

ಹೀಗೆ ನುಡಿದು ರಾಮರಾಜನು ಆ ತರುಣಿಯ ಕಡೆಗೆ ಆತುರದಿಂದ ನೋಡುತ್ತಿರಲು, ಆ ತರುಣಿಯು ನೆಲವನ್ನು ನೋಡುತ್ತ ಏನೋ ವಿಚಾರ ಮಾಡುತ್ತಿದ್ದಳು. ಆಕೆಯು ಸರ್ವಸಾಧಾರಣ ಮನುಷ್ಯಳಿದ್ದಿಲ್ಲ. ದೊಡ್ಡ ಸರದಾರನ ಮಗಳಿದ್ದಳು. ಒತ್ತಟ್ಟಿಗೆ ಕೃತಜ್ಞತೆ, ಮತ್ತೊತ್ತಟ್ಟಿಗೆ ಪ್ರೇಮ, ಇನ್ನೊತ್ತಟ್ಟಿಗೆ ಕುಲೀನತೆ ಈ ಮೂರರ ಜಗ್ಗಾಟದಲ್ಲಿ ಆಕೆಯು ಗಾಸಿಯಾಗ ಹತ್ತಿದಳು. ಜೀವದ ಹಂಗು ಇಲ್ಲದೆ ತನ್ನನ್ನು ಹುಲಿಯ ಬಾಯೊಳಗಿಂದ ಬಿಡಿಸಿದ ಕೃತಜ್ಞತೆಗೆ, ರಾಮರಾಜನ ಸೌಜನ್ಯ ಸುಂದರರೂಪ-ಶೌರ-ಸಾಹಸಗಳೂ ಜೋಡಾಗಲು, ತಾರುಣ್ಯದ ಸ್ವಾಭಾವಿಕ ಧರ್ಮಕ್ಕನುಸರಿಸಿ ಆ ಸುಂದರಿಯ ಹೃದಯದಲ್ಲಿ ಪ್ರೇಮೋದಯವಾಯಿತು. ಆ ಪ್ರೇಮಕ್ಕೆ ರಾಮರಾಜನ ಸವಿಮಾತುಗಳಿಂದ ಕಳೆಯೇರಿ ಆ ತರುಣಿಯು ರಾಮರಾಜನ ಕೈಸೇರಬೇಕೆನ್ನುವುದರೊಳಗೆ ಕುಲೀನತೆಯು ಆಕೆಯನ್ನು ಹಿಂದಕ್ಕೆ ಜಗ್ಗುತ್ತಿತ್ತು ! ಮುಸುಲ್ಮಾನರೂ ಹಿಂದೂ ಜನರನ್ನು ಬಹಳವಾಗಿ ನಿಂದಿಸಿ, ಅವರನ್ನು ಕಾಫರರೆಂದು ಕರೆಯುತ್ತಿರಲು, ಇಂಥ ಹಿಂದೂ ತರುಣನಿಗೆ ಕುಲೀನಳಾದ ತಾನು ತನ್ನ ದೇಹವನ್ನು ಅರ್ಪಿಸಿ ಅಪವಿತ್ರವಾಗಲಿಕ್ಕೆ ಆ ತರುಣಿಯು ಹಿಂಜರಿದರೆ ಆಶ್ಚರ್ಯವಲ್ಲ. ಆಕೆಯು ಈ ಮೂರರ ಎಳೆತದಿಂದ ಗಾಸಿಯಾಗಿ ರಾಮರಾಜನನ್ನು ಕುರಿತು-ತರುಣವೀರರೇ, ಹಿಂದುಗಳೆನಿಸುವ ನೀವು ನನ್ನ ಸೌಂದರ್ಯಕ್ಕೆ ಮೋಹಿಸಿ, ನಿಮ್ಮ ಧರ್ಮ ವಿರುದ್ಧವಾಗಿ ನನ್ನ ಸಮಾಗಮವನ್ನು ಬಯಸುತ್ತಿರುವಿರಿ ! ಇದು ಸರಿಯಲ್ಲ. ನಿಮ್ಮ ಈ ಆತುರದ ಪ್ರೇಮವು ಕಡೆತನಕ ನನ್ನ ಮೇಲೆ ನಿಲ್ಲುವದೆಂತಲೂ ಹೇಳಲಾಗವುದಿಲ್ಲ. ನನ್ನ ಮುಸಲ್ಮಾನ ಧರ್ಮಕ್ಕೆ ಕಳಂಕ ಉಂಟಾಗುವ ಕೆಲಸವನ್ನು ನೀವು ಮಾಡಿ, ಕಡೆಗೆ ಪ್ರಸಂಗವಶಾತ್ ಪ್ರೇಮಭಂಗವನ್ನು ಮಾಡಿದರೆ, ನೀವಾಗಿ ವಿನಾಶಾಂಕುರವನ್ನು ಉತ್ಪನ್ನ ಮಾಡಿದ ಹಾಗಾದೀತು. ಈ ಮಾತನ್ನು ನಾನು ಕಲಿತು ಆಡುತ್ತೇನೆಂದು ತಿಳಿಯಬೇಡಿರಿ. ಅಲ್ಲಾನೇ ನನ್ನ ಮುಖದಿಂದ ಈ ಮಾತನ್ನು ಆಡಿಸುವನೆಂದು ತಿಳಿಯಿರಿ, ಎಂದು ನುಡಿಯುತ್ತಿರಲು, ರಾಮರಾಜನು ಆತುರದಿಂದ-ಆಗಲಿ, ನಾನು ಹಾಗೆ ಕೃತಘ್ನನಾದ ಪಕ್ಷದಲ್ಲಿ ನೀವಂದಂತೆಯೇ ನನ್ನ ನಾಶವಾಗಲಿ. ಆ ನಾಶವನ್ನು ನಾನು ನನ್ನ ಕೃತಘ್ನತೆಯ ಯೋಗ್ಯ ಪ್ರಾಯಶ್ಚಿತ್ತವೆಂದು ತಿಳಿಯುವೆನು. ಅದರ ಚಿಂತೆ ಬೇಡ, ನಿಮ್ಮ ವಿಯೋಗದಿಂದ ನಾನು ಈಗಲೇ ನಾಶವನ್ನು ಹೊಂದುತ್ತಿರಲು, ಪ್ರಸಂಗವಶಾತ್ ವಿನಾಶಾಂಕುರವನ್ನು ಹುಟ್ಟಿಸಿಕೊಂಡರೆ ಹಾನಿಯೇನು ? ಮೊದಲು ಊಟವಾಗಲಿ, ನಿಮ್ಮ ಮಾರ್ಜೀನೆಯು ಬರುವತನಕ ಯಾವ ಮಾತೂ ಬೇಡ, ಎಂದು ಹೇಳಿ, ರಾಮರಾಜನು ಹೊರಟುಹೋದನು. ಆತನ ಅಪ್ಪಣೆಯಂತೆ ಒಬ್ಬ ವೃದ್ಧ ದಾಸಿಯು ಆ ತರುಣಿಯನ್ನು ಪರಾಮರ್ಶಿಸಹತ್ತಿದಳು.

****