ಕನ್ನಡಿಗರ ಕರ್ಮ ಕಥೆ/ಶಾಪಪ್ರದಾನ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೦೯-೧೧೫

೧೨ನೆಯ ಪ್ರಕರಣ

ಶಾಪಪ್ರದಾನ

ನಿಜವಾಗಿ ನೋಡಿದರೆ ಪತ್ರದಲ್ಲಿ ಅಯೋಗ್ಯವೇನೂ ಬರೆದಿದ್ದಿಲ್ಲ ; ಬರೆಯತಕ್ಕದ್ದನ್ನು ಸ್ಪಷ್ಟವಾಗಿ ಹ್ಯಾಗೆ ಬರೆಯಬೇಕೋ, ಹಾಗೆಯೇ ಬರೆದಿತ್ತು; ಆದರೆ ರಣಮಸ್ತಖಾನನಿಗೆ ಮಾತ್ರ ಅದು ಸೇರಲಿಲ್ಲ. ಆ ಪತ್ರವು ಅತನಿಗೆ ಮುತ್ಸದ್ದಿತನದ್ದಾಗಿಯೂ, ಕಾರಸ್ಥಾನದ್ದಾಗಿಯೂ ಮೋಸದ್ದಾಗಿಯೂ ತೋರಿತು. ಕೂಡಲೆ ಅವನು ಸಿಟ್ಟಿಗೆದ್ದು ಆ ದರ್ಬಾರಿ ಗೃಹಸ್ಥನನ್ನು ಕುರಿತು ಸಂತಾಪದಿಂದ “ನಡೆಯಿರಿ, ಈ ನರನನ್ನು ಕರಕೊಂಡು ರಾಮರಾಜನ ಕಡೆಗೇ ನಡೆಯಿರಿ. ಇವರನ್ನು ಬಿಡಿಸಿದ ಹೊರತು ನಾನು ಅನ್ನಗ್ರಹಣ-ಮಾಡಲಿಕ್ಕಿಲ್ಲೆಂದು ನಿಶ್ಚಯಿಸಿದ್ದೇನೆ. ಈ ಹೆಂಗಸರನ್ನು ನನ್ನ ಬಿಡಾರಕ್ಕೆ ಒಯ್ದ ಬಳಿಕ ಆಮೇಲೆ ಅನ್ನ-ನೀರಿನ ವಿಚಾರವು” ಅನ್ನಲು, ಆ ಗೃಹಸ್ಥನು-ಅವರು ರಾಮರಾಜರ ಕಡೆಗೇ ಹೋಗುತ್ತಿದ್ದರು. ನಡುವೆ ನೀವು ಗೊಂದಲ ಹಾಕದಿದ್ದರೆ ಇಷ್ಟು ಹೊತ್ತಿಗೆ ಅವರು ಬಿಡುಗಡೆ ಹೊಂದಿ ಸಹ ಬರುತ್ತಿದ್ದರು, ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು ಏನೂ ಮಾತಾಡಲಿಲ್ಲ. ರಾಮರಾಜನ ಕಡೆಗೆ ಹೋಗುವದಕ್ಕಾಗಿ ಮಾತ್ರ ಜನರಿಗೆ ಅವಸರ ಮಾಡಹತ್ತಿದನು. ಅವರೆಲ್ಲರೂ ರಾಮರಾಜನ ಮಂದಿರದ ಕಡೆಗೆ ನಡೆದರು. ಮಂದಿರದ ಬಳಿಗೆ ಹೋದಕೂಡಲೆ, ರಣಮಸ್ತಖಾನನು ತಾನು ಬಂಧ ವರ್ತಮಾನವನ್ನು ರಮರಾಜನಿಗೆ ತಿಳಿಸಿದನು. ಆಗ ರಾಮರಾಜನ ಸಿರಸ್ತೆದಾರನು ರಣಮಸ್ತಖಾನನನ್ನು ಕರಕೊಂಡು ಹೋಗುವದಕ್ಕಾಗಿ ಎದುರಿಗೆ ಬಂದನು. ಅದನ್ನು ನೋಡಿ ತರುಣ ರಣಮಸ್ತಖಾನನಿಗೆ ಸಮಾಧಾನವಾಗಲಿಲ್ಲ; ಅವನು ರೇಗಿಗೆದ್ದನು ರಾಮರಾಜನೇ ತನ್ನನ್ನು ಕರಕೊಂಡು ಹೋಗತಕ್ಕದೆಂದು ಆತನು ಭಾವಿಸಿದನು; ಆದರೆ ಜಗಳ ತೆಗೆಯಲಿಕ್ಕೆ ಇದು ಸಮಯವಲ್ಲೆಂದು ತಿಳಿದು ಆತನು ಸಿರಸ್ತೆದಾರರ ಸಂಗಡ ಹೋದನು. ರಾಮರಾಜನು ಆಗ ತನ್ನ ವಾಡೆಯೊಳಗಿನ ಕಚೇರಿಯಲ್ಲಿ ಕೆಲಸಮಾಡುತ್ತ ಕುಳಿತಿದ್ದನು. ಆತನ ಮುಂದೆ ಸಣ್ಣ ದರ್ಬಾರವೇ ನೆರೆದಂತೆ ಆಗಿತ್ತು. ರಣಮಸ್ತಖಾನನು ಅಲ್ಲಿಗೆ ಹೋದ ಕೂಡಲೆ ರಾಮರಾಜನು ಕುಳಿತ ಸ್ಥಳ ಬಿಟ್ಟು ಏಳದೆ “ತಮ್ಮ ಪತ್ರದ ಬೆನ್ನಹಿಂದೆ ತಾವು ಬರುವ ಶ್ರಮ ತಕ್ಕೊಂಡಿರಲ್ಲ? ಇದೇ ಈಗ ನಾನು ತಮ್ಮ ಪತ್ರಕ್ಕೆ ಉತ್ತರವನ್ನು ಬರೆದು ಕಳಿಸಿದ್ದೆನು” ಎಂದು ನುಡಿದು ತನ್ನಿಂದ ಸ್ವಲ್ಪ ಅಂತರದ ಮೇಲೆ ಕುಳಿತುಕೊಳ್ಳುವದಕ್ಕಾಗಿ ಸನ್ನೆಯಿಂದ ರಣಮಸ್ತಖಾನನಿಗೆ ಸೂಚಿಸಿದನು. ಇದರಿಂದಂತು ರಣಮಸ್ತಖಾನನ ಪಿತ್ತವು ತಲೆಗೇರಿತು. ಆತನು ಕುಳಿತುಕೊಳ್ಳುದೆ, ನಿಂತುಕೊಂಡೇ ರಾಮರಾಜನಿಗೆ- “ನಾನು ಕುಳಿತುಕೊಳ್ಳುವದಕ್ಕಾಗಿ ಇಲ್ಲಿಗೆ ಬಂದಿರುವದಿಲ್ಲ. ನಾನು ಬಂದ ಕೆಲಸವಾದರೆ ಕುಳಿತುಕೊಂಡಂತೆ ಆಯಿತು. ಆ ಜನರು ಬಂದಿದ್ದಾರೆ. ಒಂದು ನಿಟ್ಟಿನ ಜನರ ವಿಚಾರವನ್ನಂತು ನೀವು ಕೇಳಿಕೊಂಡಿರುವಿರಿ. ಇನ್ನೊಂದು ನಿಟ್ಟಿನವರ ವಿಚಾರವನ್ನು ಸಾವಕಾಶ ಕೇಳಿಕೊಳ್ಳಿರಿ; ಆದರೆ ಆ ಸ್ತ್ರೀಯರ ವಿಡಂಬನೆ ಮಾಡಬೇಡಿರಿ, ಅವರನ್ನಷ್ಟು ನನಗೆ ಒಪ್ಪಿಸಿರಿ. ಉಳಿದವರ ಮುಖದಿಂದ ಕೇಳಿಕೊಳ್ಳತಕ್ಕದ್ದನ್ನು ಕೇಳಿಕೊಂಡು, ಅವರಿಗೆ ಮಾಡತಕ್ಕ ಶಿಕ್ಷೆಯನ್ನು ಮಾಡಿರಿ” ಎಂದನು.

ರಣಮಸ್ತಖಾನನು ಅತ್ಯಂತ ಆತುರದಿಂದ ಮನಃಪೂರ್ವಕವಾಗಿ ಮಾತಾಡುತ್ತಿದ್ದನು, ರಾಮರಾಜು ಅರ್ಧ ಆತನ ಕಡೆಗೆ ಅರ್ಧ ಬೇರೆ ಕಡೆಗೆ ನೋಡುತ್ತ, ಮುಗುಳುನಗೆ ನಗುತ್ತ, ಆತನ ಮಾತುಗಳನ್ನು ಕೇಳುತ್ತಿದ್ದನು. ರಣಮಸ್ತಖಾನನ ಮತುಗಳು ಮುಗಿದ ಕೂಡಲೆ ರಾಮರಾಜನು ಮೇಲಕ್ಕೆ ಮುಖವನ್ನೆತ್ತಿ ಆತನನ್ನು ಕುರಿತು- ಹಿಂದುಗಳ ರಾಜ್ಯದಲ್ಲಿ ಹೆಂಗಸರ ವಿಡಂಬನೆಯ ಹೆಸರು ಸಹ ತೆಗೆಯಬೇಡಿರಿ; ಆದರೆ ವಿಚಾರಮಾಡಿ, ಮಾಡತಕ್ಕದನ್ನು ಮಾಡೋಣ, “ಯಾರವರು ಅಲ್ಲಿ? ಬಂದ ಆ ಜನರನ್ನು ಕರೆಯಿರಿ ಇತ್ತ” ಎಂದು ಅಜ್ಞಾಪಿಸುವದರೊಳಗೆ, ಆ ಜನರು ಬಂದ ಸುದ್ದಿಯನ್ನು ಒಬ್ಬಸೇವಕನು ರಾಮರಾಜನಿಗೆ ಹೇಳಿದನು. ಆಗ ರಾಮರಾಜನು ಈಗಲೇ ಅವರನ್ನು ಇಲ್ಲಿ ನನ್ನ ಎದುರಿಗೆ ಕರೆದುಕೊಂಡು ಬರ್‍ರಿ ಎಂದು ಹೇಳುತ್ತಿರಲು, ರಣಮಸ್ತಖಾನನು “ತಾವು ಈ ಅಪ್ಪಣೆಯನ್ನು ಯಾರ ಸಲುವಾಗಿ ಮಾಡುವಿರಿ ? ಒಳಗೆ ತಮ್ಮ ಎದುರಿಗೆ ಯಾರನ್ನು ಕರಕೊಂಡು ಬರತಕ್ಕದ್ದು? ಆ ಸ್ತ್ರೀಯರನ್ನು ಕರಕೊಂಡು ಬರಬೇಕೆಂದು ತಮ್ಮ ಅಪ್ಪಣೆ ಇರುವದೋ ಏನು? ಹೀಗೆ ಅಜ್ಞಾಪಿಸಿ ಸ್ತ್ರೀಯರನ್ನು ದರ್ಬಾರದಲ್ಲಿ ಬರಮಾಡುವದು ತೀರ ಅಯೋಗ್ಯವು. ಈ ಮಾತನ್ನು ತಮಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ” ಅನ್ನಲು ರಾಮರಾಜನು ಹುಬ್ಬುಗಂಟಿಕ್ಕಿ, ರಣಮಸ್ತಖಾನನ ಕಡೆಗೆ ನೋಡಿದನು ಮಾತ್ರ, ಆಮೇಲೆ ಆತನು ಗಟ್ಟಿಯಾಗಿ ತನ್ನ ಸಿರಸ್ತೆದಾರರನ್ನು ಕುರಿತು- “ಎಲ್ಲರನ್ನು ಕರೆತಂದು ತನ್ನ ಮುಂದೆ ನಿಲ್ಲಿಸಿರಿ. ವಿಜಾಪುರದವರು ನಮ್ಮ ಮಿತ್ರರೆನಿಸಿಕೊಳ್ಳುತ್ತಿದ್ದರೂ, ಅವರು ಅಹ್ಮದನಗರದವರೊಡನೆ ಒಕ್ಕಟ್ಟು ಬೆಳೆಸಿ, ಕಾರ್ಯಸಾಧನ ನಡೆಸುತ್ತಿರುವರೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿರುತ್ತದೆ. ಆ ಸುದ್ದಿಗೆ ಇದೊಂದು ಪ್ರತ್ಯಕ್ಷ ಸಾಕ್ಷಿಯಾಗಿರುವಂತೆ ನನಗೆ ತೋರುವದು. ಹೀಗೆ ಹೆಂಗಸರನ್ನು ಕಳಿಸುವ ನೆವದಿಂದ ಇಲ್ಲಿಯ ಸರದಾರರು ಅಲ್ಲಿಗೆ ಹೋಗಿ, ಅಲ್ಲಿಯ ಸರದಾರರು ಇಲ್ಲಿಗೆ ಬಂದು ಗುಪ್ತ ಸುದ್ದಿಯನ್ನು ತಿಳಿಸುತ್ತಿರುವರು ಇವರಲ್ಲಿ ಕಾಗದಪತ್ರಗಳೇನಾದರೂ ಇರುತ್ತವೆಯೋ ಹ್ಯಾಗೆಯೆಂಬದನ್ನು ಪರೀಕ್ಷಿಸಿ, ಆಮೇಲೆ ಬಿಟ್ಟುಬಿಡೋಣ. ಇಂಥ ಜನರನ್ನು ಇಟ್ಟುಕೊಂಡು ನಾವು ಮಾಡುವದೇನು ?” ಅನ್ನಲು, ತನ್ನನ್ನು ಉದ್ದೇಶಿಸಿ ನುಡಿದ ಈ ಮಾತುಗಳನ್ನು ಕೇಳಿ ರಣಮಸ್ತಖಾನನ ಕಣ್ಣುಗಳು ಕೆಂಡದಂತಾದವು. ಅಷ್ಟರಲ್ಲಿ ಎಲ್ಲ ಜನರನ್ನು ಒಳಗೆ ಕರಕೊಂಡು ಬಂದರು. ಅವರಲ್ಲಿ ಸ್ತ್ರೀಯರೂ ಇದ್ದರು.

ರಾಮರಾಜನು ರಣಮಸ್ತಖಾನನಿಗೆ ಮತ್ತೊಮ್ಮೆ- “ತಾವು ಇಲ್ಲಿ ಕುಳಿತು ಕೊಳ್ಳಿರಿ. ಎಲ್ಲ ವಿಚಾರವು ತಮ್ಮ ಸಮಕ್ಷಮ ಆಗುವದು” ಎಂದು ಹೇಳಿ, ತನ್ನ ಬಲಗಡೆ ಇದ್ದ ಸ್ಥಳದಲ್ಲಿ ಕುಳಿತುಕೊಳ್ಳಲಿಕ್ಕೆ ಕೈಯಿಂದ ತೋರಿಸಿದನು. ಆದರೆ ರಣಮಸ್ತಖಾನನಿಗೆ ಅದೂ ಒಂದು ಅಪಮಾನದ ಸಂಗತಿಯಾಗಿಯೇ ತೋರಿತು. ತಮ್ಮ ಸ್ತ್ರೀಯರನ್ನು ದರ್ಬಾರದಲ್ಲಿ ಕರತರಬೇಡಿರೆಂದು ತಾನು ಹೇಳಿದ್ದನ್ನು ನಿರಾಕರಿಸಿದ್ದಕ್ಕಾಗಿ ರಣಮಸ್ತಖಾನನಿಗೆ ಪರಮಾವಧಿ ಸಂತಾಪವಾಯಿತು. ಆತನಲ್ಲಿ ಸಾಮರ್ಥ್ಯವಿದ್ದರೆ, ರಾಮರಾಜನನ್ನು ಅದೇ ಕ್ಷಣದಲ್ಲಿ ನಿಲ್ಲಿಸಿ ಸುಡಿಸಲಿಕ್ಕೆ ಅಪ್ಪಣೆ ಕೊಡುತ್ತಿದ್ದನು; ಆದರೆ ಸದ್ಯಕ್ಕೆ ಆತನು ತನ್ನ ತುಟಿಗಳನ್ನು ತಾನೇ ಕಡಕೊಳ್ಳುತ್ತ ಸುಮ್ಮನೆ ನಿಂತುಕೊಳ್ಳಬೇಕಾಯಿತು. ಆಮೇಲೆ ರಾಮರಾಜನು ರಣಮಸ್ತಖಾನನ ಕಡೆಗೆ ವಿಶೇಷ ಲಕ್ಷಗೊಡಲಿಲ್ಲ. ಆತನು ತನ್ನ ಜನರನ್ನು ಕುರಿತು- “ಈ ಹಿಡಿದು ತಂದ ಜನರ ಮುಖ್ಯರು ಯಾರು ?” ಎಂದು ಕೇಳಿದನು. ಆಗ ಪಾಳಯಗಾರರಲ್ಲಿ ಮುಖ್ಯನಾದವನು ಮುಂದಕ್ಕೆ ಬಂದು ಮಹಾರಾಜ. ಇವರ ಮುಖ್ಯಸ್ಥನಿದ್ದವನು ಹೊಡೆದಾಟದಲ್ಲಿ ಮರಣ ಹೊಂದಿದನು. ಇವರಿಗೆ ನಾವು ಮೊದಲು ಒಳ್ಳೆಯ ಮಾತಿನಿಂದ ಹೇಳಿದೆವು; ನೀವು ನಮ್ಮ ಸಂಗಡ ಏನೂ ಮಾತಾಡಬೇಡಿರಿ ; ಬಡಿದಾಟ-ಹೊಡದಾಟ ಮಾಡಬೇಡಿರಿ; ನಮ್ಮ ಮಹಾರಾಜರ ಬಳಿಗೆ ಕರಕೊಂಡು ಹೋಗುವೆವು ; ಹೇಳಿಕೊಳ್ಳುವದನ್ನು ನೀವು ಇಲ್ಲಿ ಹೇಳಿಕೊಳ್ಳಿರಿ ; ಎಂದು ಪರಿಪರಿಯಾಗಿ ಹೇಳಿದೆವು ; ಆದರೆ ನಮ್ಮ ಮಾತನ್ನು ಅವರು ಕೇಳಲಿಲ್ಲ. ಒಮ್ಮೆಲೆ ಕತ್ತಿಗಳನ್ನು ಹಿರಿದು ನಮ್ಮಮೈಮೇಲೆ ಬಂದರು. ಆಗ ನಾವೂ ನಿರ್ವಾಹವಿಲ್ಲದೆ ಕತ್ತಿಗಳನ್ನು ಹಿರಿಯಬೇಕಾಯಿತು. ಬಡೆದಾಟದಲ್ಲಿ ಕೆಲವರು ಓಡಿಹೋದರು. ಉಳಿದವರನ್ನು ಕರಕೊಂಡು ಬಂದಿದ್ದೇವೆ. ಪ್ರಭುಗಳು ಕೇಳುವದನ್ನು ಕೇಳಿಕೊಳ್ಳಬೇಕು. ಇವರ ಮುಖ್ಯಸ್ಥನು ದೊಡ್ಡ ಸರದಾರನಿದ್ದನೆಂದು ಗೊತ್ತಾಗುತ್ತದೆ” ಎಂದು ಹೇಳಿದನು. ಆಗ ರಾಮರಾಜನು ಆ ಹಿಡಿದು ತಂದ ಜನರಲ್ಲಿ ಒಬ್ಬೊಬ್ಬನನ್ನು ಮುಂದಕ್ಕೆ ಕರೆದು, “ನಿಮ್ಮ ಬಳಿಯಲ್ಲಿ ರಾಜಕಾರಣದ ಏನಾದರೂ ಕಾಗದಪತ್ರಗಳು ಇದ್ದರೆ ನಮಗೆ ಒಪ್ಪಿಸಿ ಬಿಡಿರಿ. ಅಂದರೆ ನಾವು ನಿಮ್ಮನ್ನು ಈಗಲೇ ಬಿಟ್ಟುಬಿಡುವೆವು. ನಿರುಪದ್ರವಿಗಳಾದ ದಾರಿಕಾರರಿಗೆ ತ್ರಾಸಮಾಡುವಿಚ್ಛೆಯು ನಮಗಿಲ್ಲ. ನಮ್ಮ ಸಂಬಂಧವಿದ್ದ ಮಟ್ಟಿಗೆ ನಾವು ನೋಡಬೇಕಾಗುವದು, ಎಂದು ನುಡಿದು, ರಣಮಸ್ತಖಾನನ ಕಡೆಗೆ ತಿರುಗಿ ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುವ ಹಾದಿಯು ನಮ್ಮ ಹದ್ದಿನೊಳಗಿಂದಲೇ ಹಾದು ಹೋಗಿರುತ್ತದೆನ್ನುವ ಹಾಗಿಲ್ಲ. ನಿಜವಾಗಿ ನೋಡಿದರೆ ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುವವರು ನಮ್ಮ ಗಡಿಯನ್ನು ಸ್ಪರ್ಶಮಾಡುವ ಕಾರಣವಿಲ್ಲ. ಬೇರೆ ಕಡೆಯಿಂದ ಹಾದಿಯಿರುತ್ತದೆ. ಹೀಗಿದ್ದು ಬುದ್ಧಿಪೂರ್ವಕವಾಗಿ ನಮ್ಮ ಹದ್ದಿನೊಳಗಿಂದ ಹಾಯಬೇಕಾದರೆ, ಇವರ ಉದ್ದೇಶವು ಬೇರೆ ಪ್ರವಾಸಿಗಳ ಉದ್ದೇಶದಂತೆ ಸರಳವಾದದ್ದಿರಲಿಕ್ಕಿಲ್ಲ. ನಮ್ಮದಿಷ್ಟು ಸಂಶಯವನ್ನು ನೀವು ದೂರಮಾಡಿಕೊಟ್ಟು, ಈಗಲೇ ಇವರನ್ನು ಕರಕೊಂಡು ಹೋಗಿರಿ. ನಮ್ಮದೇನೂ ಪ್ರತಿಬಂಧವಿಲ್ಲ; ಆದರೆ ನಾನು ಹೇಳಿದಂತೆ ಸಂಶಯಕ್ಕೆ ಆಸ್ಪದವಿರುತ್ತದೋ, ಇಲ್ಲವೋ ನೀವೇ ಹೇಳಿರಿ ಬುದ್ದಿಪೂರ್ವಕವಾಗಿ ಇವರು ನಮ್ಮ ಸೀಮೆಯೊಳಗಿಂದ ಹೋಗಲಿಕ್ಕೆ ಕಾರಣವೇನೆಂಬುದನ್ನು ನೀವೇ ವಿಚಾರ ಮಾಡಿರಿ; ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು- “ಈ ಕಾಲದಲ್ಲಿ ನಾನು ಏನೂ ಮಾತಾಡುವದಿಲ್ಲ ; ಯಾವ ವಿಚಾರವನ್ನೂ ಮಾಡುವದಿಲ್ಲ. ನೀವು ವಿಚಾರ ಮಾಡಬೇಕಾದ್ದನ್ನು ಮಾಡಿಕೊಳ್ಳಿರಿ” ಎಂದು ನುಡಿದು, ಮೊದಲಿನಂತೆ ಕ್ಷುದ್ರದೃಷ್ಟಿಯಿಂದ ನೋಡುತ್ತ ನಿಂತುಕೊಂಡನು. ಅದನ್ನು ನೋಡಿ ರಾಮರಾಜನು ತನ್ನೊಳಗೆ ನಕ್ಕು, ಹಿಡಿಯಲ್ಪಟಿದ್ದ ಜನರನ್ನು ಕುರಿತು ಯಾಕರಿ. ನಮ್ಮ ಪ್ರಶ್ನೆ ನಿಮಗೆ ತಿಳಿಯಿತೋ ಇಲ್ಲವೋ? ನಿಮ್ಮಲ್ಲಿ ಕಾಗದಪತ್ರಗಳೇನಾದರೂ ಇರುವವೋ ಹ್ಯಾಗೆ? ನೀವು ವಿಜಾಪುರಕ್ಕೆ ಹೋಗುವ ಸರಳ ಮಾರ್ಗವನ್ನು ಬಿಟ್ಟು ನಮ್ಮ ಸೀಮೆಯೊಳಗಿಂದ ಯಾಕೆ ಬಂದಿರಿ? ಇವೆರಡು ಪ್ರಶ್ನೆಗಳಿಗೆ ಸರಳವಾದ ಸಮಾಧಾನಕಾರಕ ಉತ್ತರಗಳು ನಿಮ್ಮಿಂದ ದೊರೆತರೆ, ಈಗಲೇ ನಿಮ್ಮನ್ನು ಬಿಟ್ಟುಕೊಡುವೆವು; ಅಥವಾ ನಮ್ಮ ಈ ವಕೀಲರಿಗೆ ನಿಮ್ಮನ್ನು ಒಪ್ಪಿಸುವೆವು. ಹಾಗೆ ಉತ್ತರ ದೊರೆಯದೆ ಇದ್ದ ಪಕ್ಷದಲ್ಲಿ, ಯಾರ ಮುಲಾಜನ್ನೂ ಹಿಡಿಯದೆ ಮಾಡತಕ್ಕದ್ದನ್ನು ನಾವು ಮಾಡುವೆವು.

ರಾಮರಾಜನ ಈ ಮಾತುಗಳನ್ನು ಕೇಳಿ ಹಿಡಿದುತಂದ ಮನುಷ್ಯರಲ್ಲಿಯೊಬ್ಬನು ಧೀರ ಗಂಭೀರ ಸ್ವರದಿಂದ- “ಕಾಗದಪತ್ರಗಳೇನೂ ನಮ್ಮ ಬಳಿಯಲ್ಲಿ ಇರುವದಿಲ್ಲ. ನಿಮ್ಮ ಸೀಮೆಯೊಳಗಿಂದ ಹಾದು ಹೋಗಲಿಕ್ಕೆ, ನಮ್ಮ ಒಡೆಯನ ಮಗಳಾದ ಈ ಹೆಣ್ಣು ಮಗಳಿಗೆ ಸಂಗನಪಲ್ಲಿಯ ದರ್ಗೆಯ ದರ್ಶನ ಮಾಡಿಸಬೇಕೆಂದು ನಮ್ಮ ಒಡೆಯನು ಇಚ್ಚಿಸಿದ್ದೇ ಕಾರಣವು” ಎಂದು ಹೇಳದನು. ದರಗೆಯ ಹೆಸರು ಕಿವಿಗೆ ಬಿದ್ದ ಕೂಡಲೆ ರಾಮರಾಜನು ಉಪಹಾಸದಿಂದ ನಕ್ಕು- ಸರಿ ಸರಿ. ಈ ದಂಗೆಯು, ನಮ್ಮ ರಾಜ್ಯದ ಸ್ಥಿತಿಗತಿಗಳನ್ನು ನೋಡಿ ಹೋಗಲಿಕ್ಕೂ ಗುಪ್ತ ಒಳಸಂಚುಗಳನ್ನು ಮಾಡಲಿಕ್ಕೂ ನಿಮಗೆ ತಕ್ಕ ಸ್ಥಳವಾಗಿರುತ್ತದೆ. ಆ ದರಗೆಯು ಇಲ್ಲದ ಹಾಗೆ ಆದ ದಿನವೇ ಸುದಿನವು. ಈಗಂತು ನಮ್ಮ ಸಂಶಯವು ಮತ್ತಷ್ಟು ಹೆಚ್ಚಾಯಿತು. ನೀವು ನಮ್ಮ ರಾಜ್ಯದೊಳಗಿನ ಗುಪ್ತ ಸಂಗತಿಗಳನ್ನು ತಿಳಕೊಳ್ಳಲಿಕ್ಕೆ ಬಂದಂತೆ ತೋರುತ್ತದೆ. ಈ ಗೋಷೆಯಲ್ಲಿದ್ದವರು ಹೆಣ್ಣುಮಕ್ಕಳೇ ಇರುವರೋ ಎಂಬ ಬಗ್ಗೆ ನಮಗೆ ಸಂಶಯ ಬರಹತ್ತಿದೆ. ತರುಣರು, ವೃದ್ಧರು, ಗೋಷೆಯ ಹೆಂಗಸರ ಸೋಗಿನಿಂದ ಗುಪ್ತಚಾರರ ಕೆಲಸಗಳನ್ನು ಮಾಡುತ್ತಿರುವರು. ಹಿಂದೂ ಜನರು ಸ್ತ್ರೀಯರನ್ನು ತಡವುದಿಲ್ಲೆಂಬುದು ಎಲ್ಲರಿಗೂ ಗೊತ್ತಿರುವದು. ಯಾರಾದರೂ ಹೆಂಗಸರ ಅಪಮಾನ ಮಾಡಿದರೆ, ನಮಗೆ ಸಂತಾಪವಾಗುವದು, ನಮ್ಮ ಈ ಉದಾರಗುಣದ ಲಾಭ ಮಾಡಿಕೊಂಡು, ಹೆಂಗಸರ ಸೋಗಿನಿಂದ ಕಾಗದ ಪತ್ರಗಳನ್ನು ಬಚ್ಚಿಟ್ಟುಕೊಂಡಿಟ್ಟರೆ ನಾವು ಮಾಡುವದೇನು? ಆದ್ದರಿಂದ ಈ ಮೂವರೂ ಹೆಂಗಸರು ತಮ್ಮ ತಮ್ಮ ಬುರುಕಿಗಳನ್ನು ತೆಗೆದು, ತಮ್ಮ ಮೋರೆಗಳನ್ನು ತೋರಿಸಿದರೆ ಅವರ ಬಿಡುಗಡೆ ಯಾಗುವದು. ಇಲ್ಲದಿದ್ದರೆ ಇಲ್ಲ ಎಂದು ನುಡಿಯಲು, ಮೊದಲೇ ಸಂತಪ್ತನಾಗಿದ್ದ ರಣಮಸ್ತಖಾನನು, ರಾಮರಾಜನ ಈ ಮಾತುಗಳನ್ನು ಕೇಳಿ ಕ್ರೋಧ ಪರವಶವಾಗಿ ಕಂಪಿತ ಸ್ವರದಿಂದ- “ಈ ಸ್ತ್ರೀಯರ ಬುರುಕಿಗಳನ್ನು ನಾನು ಕಾಲತ್ರಯದಲ್ಲಿಯೂ ತೆಗೆಯಗೊಡಲಿಕ್ಕಿಲ್ಲ. ಇದೇನು ಹುಡುಗಾಟಿಕೆಯೋ ಏನು?” ಎಂದು ಕೇಳಿದನು. ರಾಮರಾಜನು ಆತನ ಈ ಮಾತಿನ ಕಡೆಗೆ ಎಷ್ಟು ಮಾತ್ರವೂ ತನ್ನ ಲಕ್ಷ್ಯವಿಲ್ಲದಂತೆ ತೋರಿಸಿ, ಮತ್ತೆ ಆ ಹೆಂಗಸರನ್ನು ಕುರಿತು-“ಅವರವರು ತಮ್ಮ ತಮ್ಮ ಬುರುಕಿಗಳನ್ನು ತಾವೇ ತೆಗೆದು ಮೋರೆ ತೋರಿಸಬೇಕು; ಇಲ್ಲದಿದ್ದರೆ ಎರಡನೆಯವರು ಬುರುಕಿ ತೆಗೆಯಬೇಕಾಗುವುದು. ಯಾರು ಯಾರು ಬುರಕಿಗಳನ್ನು ತೆಗೆಯಲಿಕ್ಕೆ ಎಷ್ಟು ಎಷ್ಟು ತಡಮಾಡುವರೋ ಅಷ್ಟು ಅಷ್ಟು ನಮ್ಮಲ್ಲಿ ಅವರ ವಿಷಯವಾಗಿ ಹೆಚ್ಚು ಹೆಚ್ಚು ಸಂಶಯವು ಉತ್ಪನ್ನವಾಗುವದು; ಆದ್ದರಿಂದ ಇನ್ನು ನಮ್ಮ ನಿಶ್ಚಯದಲ್ಲಿ ಎಂದಿಗೂ ಅಂತರವಾಗಲಿಕ್ಕಿಲ್ಲ.

ಈ ಮಾತುಗಳನ್ನು ಕೇಳಿ ರಣಮಸ್ತಖಾನನ ಮೈಮೇಲೆ ಎಚ್ಚರವು ತಪ್ಪಿದಂತಾಯಿತು. ಆತನಿಗೆ ಏನು ಮಾತಾಡಬೇಕು, ಏನು ಮಾಡಬೇಕು ಎಂಬದು ತಿಳಿಯದೆ ಹೋಯಿತು. ಆತನು ಕ್ರೋಧಾತಿರೇಕದಿಂದ ಥರ ಥರ ನಡುಗಹತ್ತಿದನು. ಆಗಿನ ಕಾಲದ ಆತನ ಮುದ್ರೆಯನ್ನು ನೋಡಿ, ಸ್ವತಃ ರಾಮರಾಜನು ಕೂಡ ಸ್ವಲ್ಪ ಬೆದರಿದನು. ಇನ್ನು ಇದಕ್ಕೂ ಹೆಚ್ಚಿಗೆ ಮುಂದಕ್ಕೆ ಹೋಗದೆ, ಇಲ್ಲಿಂದ ಹಿಂದಕ್ಕೆ ಸರಿಯಬೇಕೆನ್ನುವ ಹಾಗೆ ಆತನಿಗೆ ಒಮ್ಮೆ ಅನಿಸಿತು: ಆದರೆ ಆತನು ತನ್ನ ಮನಸ್ಸನ್ನು ತಿರುಗಿಸಿ, “ತನ್ನ ಮುಖದಿಂದ ಒಮ್ಮೆ ಉಚ್ಚರಿಸಿಹೋದ ಮಾತನ್ನು ಇನ್ನು ನಡಿಸದಿದ್ದರೆ, ಜನರ ಮನಸ್ಸಿನ ಮೇಲೆ ತನ್ನ ದರ್‍ಪದ ವಿಷಯವಾಗಿ ದುಷ್ಪರಿಣಾಮವಾದೀತು ಆದ್ದರಿಂದ ತಾನು ನುಡಿದಂತೆ ನಡೆಯಲೇ ಬೇಕು” ಎಂದು ವಿಚಾರ ಮಾಡಿ, ಆತನು ಪುನಃ ಆ ಹೆಂಗಸರನ್ನುದ್ದೇಶಿಸಿ- ಯಾಕೆ, ಸುಮ್ಮನೆ ನಿಂತಿರಿ ? ನೀವು ಬುರುಕಿಗಳನ್ನು ತೆಗೆಯಲೇಬೇಕು. ಎಲ್ಲರ ಬುರುಕಿಗಳನ್ನು ತೆಗೆಸಿ, ನಿಮ್ಮ ಮುಖಮುದ್ರೆಯನ್ನು ನೋಡಿದ ಹೊರತು ನಾನು ಬಿಡುವವನಲ್ಲ, ಎಂದು ನುಡಿದು ರಣಮಸ್ತಖಾನನ ಕಡೆಗೆ ತಿರುಗಿ- ನೀವು ನಿಮ್ಮ ಪದವಿಗೆ ಯೋಗ್ಯವಾಗಿ ಆಚರಿಸಿರಿ. ನೀವು ಏನು ತಿಳಿಸಬೇಕಾದದ್ದನ್ನು ನಿಮ್ಮ ಬಾದಶಹರಿಗೆ ತಿಳಿಸಿರಿ. ಇಲ್ಲಿ ಅಮಲು ನಮ್ಮದಿರುತ್ತದೆ. ನಮ್ಮ ರಾಜ್ಯದ ಸುರಕ್ಷಿತೆಯ ಬಗ್ಗೆ ನಾವು ಎಚ್ಚರ ಪಡಲಿಕ್ಕೆಬೇಕು. ನೀವು ಸಾಹಸದಿಂದ ಮುಂದುವರಿದದ್ದರಿಂದ ಏನಾದರೂ ಅನರ್ಥವಾದರೆ, ಅದರ ಜವಾಬುದಾರಿಯು ನಮ್ಮ ಮೇಲೆ ಇರುವದಿಲ್ಲ. ಹಿಂದೂ ಜನರು ಸ್ತ್ರೀಯರ ವಿಡಂಬನೆಯನ್ನು ಎಂದೂ ಮಾಡುವದಿಲ್ಲ; ಒಂದು ಪಕ್ಷದಲ್ಲಿ ಅಪ್ಪಿ ತಪ್ಪಿ ಆಂಥ ಅಪರಾಧವು ಅವರಿಂದ ಘಟಿಸಿದರೆ, ಅದನ್ನು ಕೇಳುವ ಅಧಿಕಾರವು ನಿಮಗೆ ಇರುವದಿಲ್ಲ. ನೀವು ಹಿಂದಕ್ಕೆ ಸರಿದು, ನಿಮ್ಮ ಸ್ಥಳಕ್ಕೆ ಹೋಗಿರಿ. ನೀವು ಇಲ್ಲಿ ಒಬ್ಬರೇ ಇರುತ್ತೀರಿ. ಎಷ್ಟು ಹಾರಾಡಿದರೂ ನಿಮ್ಮ ಮಾತು ನಡೆಯಗೊಡಲಿಕ್ಕಿಲ್ಲ.

ತನ್ನ ನಿರ್ಧಾರದ ಮಾತುಗಳನ್ನು ಕೇಳಿದಕೂಡಲೆ ರಣಮಸ್ತಖಾನನು ಅಂಜಿ ಹಿಂದಕ್ಕೆ ಸರಿದಾನೆಂದು ರಾಮರಾಜನು ತಿಳಿದಿದ್ದನು ; ಆದರೆ ಆ ತರುಣ ವಕೀಲನು ಹಾಗೇನು ಮಾಡದೆ, ಮತ್ತೆ ಎರಡು ಹೆಜ್ಜೆ ಮುಂದಕ್ಕೆ ಬಂದು ಆ ಸ್ತ್ರೀಯರನ್ನು ಕುರಿತು- “ನೀವು ಬರುಕಿಯನ್ನು ತೆಗೆದುಗಿಗಿದೀರಿ. ಯಾರು ನಿಮ್ಮ ಮೈಮುಟ್ಟುತ್ತಾರೋ ನಾನು ನೋಡುತ್ತೇನೆ” ಎಂದು ನುಡಿದು ತನ್ನ ಖಡ್ಗವನ್ನು ಒರೆಯಿಂದು ಹಿರಿದನು. ಇದರಿಂದ ರಾಮರಾಜನ ಶಾಂತ ಮುದ್ರೆಯು ಅಣುಮಾತ್ರವು ಕುಗ್ಗಲಿಲ್ಲ, ಆತನು ರಣಮಸ್ತಖಾನನಿಗೆ- “ನಿಮ್ಮ ಈ ದುರಾಗ್ರಹವನ್ನು ನೋಡಿ ನನ್ನ ಮನಸ್ಸಿನಲ್ಲಿ ಮತ್ತೊಂದು ಸಂಶಯವು ಉತ್ಪನ್ನವಾಗಿರುತ್ತದೆ. ನೀವು ಇವರನ್ನು ಇಷ್ಟು ಮೇಲುಗಟ್ಟಿ ಬರುವುದರಿಂದ, ನಿಮಗೆ ಇವರ ಸಂಬಂಧವೇನಾದರೂ ಇರಲಿಕ್ಕೆ ಬೇಕು. ಸರಿ ಸರಿ. ಈಗ ನನ್ನ ಲಕ್ಷ್ಯದಲ್ಲಿ ಬಂದಿತು; ಈ ಜನರು ನಿಮ್ಮ ಬಳಿಗೆ ಕಾಗದ ಪತ್ರಗಳನ್ನು ಕೊಡುವುದಕ್ಕಾಗಿಯೇ ಈ ಹಾದಿಯಿಂದ ಬಂದಿರಬಹುದು. ನೀವು ಏನೇನು ಒಳಸಂಚುಗಳನ್ನು ನಡಿಸಿರುವಿರೆಂಬದನ್ನು ಕೇಳಿಕೊಂಡು ಹೋಗುವ ಉದ್ದೇಶವು ಇವರದಿರಬಹುದು. ದರಗೆಯ ಹರಕೆ-ಗಿರಕೆಗಳೆಲ್ಲ ಸುಳ್ಳು; ಇಲ್ಲದಿದ್ದರೆ ನೀವು ಇಷ್ಟು ಮೇಲುಗಟ್ಟಿ ಬರುವ ಕಾರಣವೇನು ? ಈಗ ನಾನು ಕೈಮುಟ್ಟಿ ಪ್ರತಿಯೊಬ್ಬರ ಬುರುಕಿಯನ್ನು ತೆಗೆಯುತ್ತೇನೆ, ನೀವು ನನ್ನ ಜೀವಕ್ಕೆ ಅಪಾಯ ಮಾಡಲಿಕ್ಕೆ ಮುಂದುವರಿದರೆ............

ಆದರೆ ಆತನ ಮುಖದಿಂದ ಮುಂದಿನ ಮಾತುಗಳು ಹೊರಡಲಿಲ್ಲ. ಆತನು ಸ್ವಲ್ಪ ಹೊತ್ತು ಸುಮ್ಮನಿದ್ದು, ಬಹು ಕಷ್ಟದಿಂದ ಖಾನನನ್ನು ಕುರಿತು-"ನಿಮಗೆ ಸ್ವಲವೂ ಅಪಾಯವಾಗಬಾರದೆಂದು ನಾನು ಇಚ್ಚಿಸುತ್ತೇನೆ; ಇದರ ಮೇಲೆ ನಿಮ್ಮ ಇಚ್ಚೆಯು” ಅನ್ನಲು, ಆಗ ರಣಮಸ್ತಖಾನನು- “ನನ್ನ ಶರೀರ ಸಾವಿರಾರು ಚೂರುಗಳಾದರೂ ಚಿಂತೆಯಿಲ್ಲ; ಆದರೆ ನಾನು ಬದುಕಿರುವವರೆಗೆ ಈ ಸ್ತ್ರೀಯರ ಮೈಮೇಲಿನ ಬುರುಕಿಗಳನ್ನು ದೂರ ಮಾಡಲಿಕ್ಕಿಲ್ಲ” ಎಂದು ಉತ್ತರ ಕೊಟ್ಟನು. ಮಾತಾಡುವಾಗಿನ ಆತನು ಅವಿರ್ಭಾವವು ವಿಲಕ್ಷಣವಾದದ್ದಿತ್ತು. ಈತನು ನುಡಿದಂತೆ ನಡೆಯದೆ ಬಿಡನೆಂದು ಎಲ್ಲರ ನಂಬಿಗೆಯಾಯಿತು. ರಣಮಸ್ತಖಾನನು ಇಷ್ಟು ಮಾತಾಡುವದರೊಳಗಾಗಿ ಏನು ಚಮತ್ಕಾರವಾಯಿತೋ ತಿಳಿಯದು. ಆ ಸ್ತ್ರೀಯಳಲ್ಲಿ ಮುಜ್ಯಳಾದ ತರುಣೆಯು, ಒಮ್ಮೆಲೆ ತನ್ನ ಬುರಕಿಯನ್ನು ಕಳಚಿ ಚೆಲ್ಲಿ, ತನ್ನ ಟೊಂಕದ ಮೇಲೆ ಎರಡೂ ಕೈಯಿಟ್ಟುಕೊಂಡು ಮುಖವೆತ್ತಿ ನಿಂತಳು, ಆಗ ಆಕೆಯ ಮುಖದಿಂದ 'ಛೇ ಛೇ' ನನ್ನ ಸಲುವಾಗಿ ಇಂಥ ಶೂರ ಪುರುಷನ ಶರೀರದ ಸಾವಿರಾರು ತುಣುಕುಗಳಾಗುವದು ಸರಿಯಲ್ಲ. ಅರಸಾ ನೋಡು; ನಿನ್ನ ಸಂಶಯವಿದ್ದದ್ದನ್ನು ದೂರಮಾಡಿಕೊ. ಆದರೆ ನೀನು ಸೆರಗಿಗೆ ಗಂಟು ಹೊಡೆದುಕೊಳ್ಳು; ಇಂದಿನ ನಿನ್ನ ಈ ಕೃತಿಯ ಪರಿಣಾಮವು ಘೋರವಾಗುವದು ! ಬಹಳ ಘೋರವಾಗುವದು !!