ಕನ್ನಡಿಗರ ಕರ್ಮ ಕಥೆ/ಸರ್ವಸ್ವದ ನಾಶ
೩೪ನೆಯ ಪ್ರಕರಣ
ಸರ್ವಸ್ವದ ನಾಶ
ಇದನ್ನು ನೋಡಿ ರಣಮಸ್ತಖಾನನು ದಂಗುಬಡಿದು ಏನೂ ತೋಚದೆ ಒಂದು ಕಲ್ಲಿನ ಗೊಂಬೆಯಂತೆ ಉಲುಕಾಡದೆ ಸುಮ್ಮನೆ ನಿಂತುಬಿಟ್ಟನು ಇಷ್ಟು ಹೊತ್ತಿನತನಕ ಆತನ ಮುಖದಲ್ಲಿ ತೋರುತ್ತಿದ್ದ ಆನಂದ, ವಿಜಯ, ಕೃತ ಕೃತ್ಯತೆ ಮೊದಲಾದ ವಿಕಾರಗಳ ಲಕ್ಷಣಗಳು ಮೆಹೆರ್ಜಾನಳ ಕಟ್ಟಕಡೆಯ ಮಾತಿನಿಂದಲೂ, ಕೃತಿಯಿಂದಲೂ ಲಯ ಹೊಂದಿದವು. ಉಳಿದ ಪ್ರಸಂಗದಲ್ಲಿ ಆತನ ತಾಯಿಯು ಬರಿಯ ಪುಷ್ಕರಣಿಯಲ್ಲಿಯೇ ಏಕೆ, ಒಂದು ದೊಡ್ಡ ಕೊಳ್ಳದಲ್ಲಿ ಹಾರಿಕೊಂಡಿದ್ದರೂ, ಆಕೆಯನ್ನು ಕಡೆಗೆ ತೆಗೆಯುವದಕ್ಕಾಗಿ ರಣಮಸ್ತಖಾನನು ಆಕೆಯ ಹಿಂದೆಯೇ ಹಾರಿಕೊಳ್ಳುತ್ತಿದ್ದು; ಆದರೆ ಈ ಪ್ರಸಂಗದಲ್ಲಿ ಆತನು ಕೇವಲ ನಿರ್ಜೀವನೂ. ನಿಶ್ಚಲನೂ, ನಿರ್ವಿಕಾರನೂ, ನಿರ್ವಿಚಾರಿಯೂ ಆಗಿದ್ದನು. ಆತನು ಕಲ್ಲುಗೊಂಬೆಯಂತೆ ಎಷ್ಟೊಂದು ಹೊತ್ತು ನಿಂತುಬಿಟ್ಟಿದ್ದನು! ಇತ್ತ ನೂರಜಹಾನಳ ಸ್ಥಿತಿಯೂ ಹಾಗೆಯೆ ಆಗಿತ್ತು. ರಾಮರಾಜನು ರಣಮಸ್ತಖಾನನ ತಂದೆಯೆಂಬ ಕಲ್ಪನೆಯು ಆಕೆಯ ಮನಸ್ಸಿನಲ್ಲಿ ಎಂದೂ ಹೊಳದಿದ್ದಿಲ್ಲ. ಈ ವೀರನು ತನ್ನ ಮುಂದೆ ಮಾಡಿದ ಪ್ರತಿಜ್ಞೆಯನ್ನು ನೆರವೇರಿಸಿದ್ದರಿಂದ, ಈತನನ್ನು ಮದುವೆಯಾಗಬೇಕೆಂದು ಆಕೆಯು ನಿಶ್ಚಯಿಸಿದ್ದಳು; ಆದರೆ ರಣಮಸ್ತನು ಒಬ್ಬ ಹಿಂದೂ ರಾಜನ ವ್ಯಭಿಚಾರದಿಂದ ಹುಟ್ಟಿ, ಪಿತೃವಧೆದಂಥ ನೀಚಕಾರ್ಯ ಮಾಡಿದವನೆಂಬ ವಿಚಾರವು ಮನಸ್ಸಿನಲ್ಲಿ ಹೊಳೆದ ಕೂಡಲೇ, ಆಕೆಯು ರಣಮಸ್ತನ ನೆರಳಿಗೆ ನಿಲ್ಲಲಿಕ್ಕೆ ಸಹ ಹೇಸಿಕೊಳ್ಳಹತ್ತಿದಳು. ಆಕೆಯು ಯಾವ ಉಪಾಯದಿಂದ ರಣಮಸ್ತನ ಬಳಿಯಿಂದ ತಪ್ಪಿಸಿಕೊಂಡು ಹೋಗಬೇಕೆಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ರಣಮಸ್ತನು ಎಚ್ಚತ್ತು ನೂರಜಹಾನಳ ಕಡೆಗೆ ನೋಡಿ-ನೂರಜಹಾನ, ನಿನ್ನ ಸಲುವಾಗಿ ನಾನು ಇಂಥ ಪರಾಕ್ರಮವನ್ನೂ, ಸಾಹಸವನ್ನೂ ಮಾಡಿದೆನು; ನಿನ್ನ ಮುಂದೆ ಮಾಡಿದ ಪ್ರತಿಜ್ಞೆಯನ್ನು ಪೂರ್ಣಮಾಡಿರುತ್ತೇನೆ. ಇನ್ನು ವಿಳಂಬವೇಕೆ? ನಮ್ಮಿಬ್ಬರ ಲಗ್ನವಾಗಲಿ, ಎಂದು ನುಡಿದು ನೂರಜಹಾನಳ ಕೈಹಿಡಿಯ ಹೋಗಲು, ಆಕೆಯು ತಟ್ಟನೆ ಹಿಂದಕ್ಕೆ ಸರಿದು, ಗಾಬರಿಯಾಗಿ ರಣಮಸ್ತನನ್ನು ಕುರಿತು ಇದೇನು ನಿಮ್ಮ ತಂದೆಯ ಶಿರಚ್ಛೇದ ಮಾಡಿದ ಕೈಯಿಂದಲೇ ನೀವು ನನ್ನ ಕೈ ಹಿಡಿಯುವಿರೇನು ? ನಿಮ್ಮ ಪ್ರೇಮಲಸ್ವಭಾವದ ಮಾತೃಶ್ರೀಯು ತನ್ನ ಪತಿಯ ಶಿರಸ್ಸಿನೊಡನೆ ಇದೇ ಈಗ ಜಲಸಮಾಧಿಯನ್ನು ಹೊಂದಿರಲು, ಅದನ್ನೆಲ್ಲ ಮರೆತು, ಇದೇ ಕ್ಷಣದಲ್ಲಿ ಇಂಥ ಮಾತುಗಳನ್ನು ಆಡುವಿರಾ ? ನೋಡಿರಿ, ನಿಮ್ಮ ವೃದ್ದದಾಸಿಯಾದ ಲೈಲಿಯು ಇತ್ತಕಡೆಗೆ ಬರುತ್ತಾಳೆ, ಅನ್ನಲು ರಣಮಸ್ತನು ಮಾರ್ಜೀನೆಯ ಕಡೆಗೆ ನೋಡಿ, ಆಕೆಯ ಕೈಯನ್ನು ಹಿಡಿದು ಆಕೆಯನ್ನು ದರದರ ಎಳೆಯುತ್ತ ತಂದು-ಲೈಲೀ, ಹಿಂದಕ್ಕೆ ನೀನು ನನ್ನ ಜನ್ಮವೃತ್ತಾಂತವನ್ನು ಗೂಢವಿಟ್ಟು ಹೇಳಿದೆಯಲ್ಲ, ಈಗ ಅದನ್ನು ಸ್ಪಷ್ಟವಾಗಿ ಹೇಳು, ಇಲ್ಲದಿದ್ದರೆ ಮಾಸಾಹೇಬರನ್ನು ಹಿಂಬಾಲಿಸಿ ಹೋಗುವಂತೆ ನಿನ್ನ ಕುತ್ತಿಗೆ ಹಿಚಿಕಿ ಈ ಪುಷ್ಕರಣಿಯಲ್ಲಿ ಹಾಕುವೆನು ಎಂದನು.
ಮಾಸಾಹೇಬರು ಪುಷ್ಕರಣೆಯಲ್ಲಿ ಹಾರಿಕೊಂಡದ್ದನ್ನು ಮಾರ್ಜೀನೆಯು ದೂರದಿಂದ ನೋಡಿದ್ದಳಾದ್ದರಿಂದ, ಆಕೆಗೆ ತನ್ನ ಜೀವವು ಬೇಡಾಗಿತ್ತು. ರಣಮಸ್ತನು ತನ್ನನ್ನು ನೋಡಿ ಕೈಹಿಡಿಯದಿದ್ದರೆ ಆಕೆಯು ಇಷ್ಟು ಹೊತ್ತಿಗೆ ಪುಷ್ಕರಣಿಯಲ್ಲಿ ಹಾರಿಕೊಂಡುಬಿಡುತ್ತಿದ್ದಳು. ನಿರಿಚ್ಛಳಾದ ಆಕೆಯು ಈಗ ರಣಮಸ್ತನ ಆಗ್ರಹದ ಪ್ರಶ್ನಕ್ಕೆ ಉತ್ತರವನ್ನು ಹೇಳಿಬಿಡಬೇಕೆಂದು ನಿಶ್ಚಯಿಸಿ, ರಣಮಸ್ತನ ಜನ್ಮವೃತ್ತಾಂತವನ್ನು ಸಾದ್ಯಂತವಾಗಿ ಅವನಿಗೆ ಹೇಳಿದಳು. ಇದನ್ನು ಕೇಳುತ್ತಿರುವಾಗ ರಣಮಸ್ತನ, ಹಾಗು ನೂರಜಹಾನಳ ಚಿತ್ತ ವೃತ್ತಿಗಳು ಹ್ಯಾಗಾಗಿರಬಹುದೆಂಬದನ್ನು ವರ್ಣಿಸುವದು ಸಾಧ್ಯವಿಲ್ಲ. ಪ್ರತ್ಯಕ್ಷತಂದೆಯು ನನ್ನನ್ನು ಅಕೃತ್ರಿಮ ರೀತಿಯಿಂದ ಪ್ರೀತಿಸುತ್ತಿರಲು, ನಾನು ಈ ಕೈಯಿಂದ ಆತನ ಶಿರಚ್ಛೇದ ಮಾಡಿ ಮಹಾಪಾತಕಕ್ಕೆ ಗುರಿಯಾದೆನಲ್ಲ ! ಎಂದು ವಿಚಾರ ಮಾಡುತ್ತ ರಣಮಸ್ತನು ಸುಮ್ಮನೆ ಕುಳಿತುಬಿಟ್ಟನು. ಇತ್ತ ನೂರಜಹಾನಳು ರಣಮಸ್ತಖಾನನ ಕುಲವೃತ್ತಾಂತವನ್ನು ಕೇಳಿ, ಅವನನ್ನು ಬಹಳವಾಗಿ ತಿರಸ್ಕರಿಸಹತ್ತಿ, ತಾನು ಇನ್ನು ಈತನ ಬಳಿಯಲ್ಲಿಂದ ಹ್ಯಾಗೆ ಪಾರಾಗಿಹೋಗಬೇಕೆಂದು ಯೋಚಿಸುತ್ತ ಸುಮ್ಮನೆ ಕುಳಿತುಕೊಂಡಳು. ಹೀಗೆ ಇವರಿಬ್ಬರು ವಿಚಾರಮಗ್ನರಾಗಿರಲು ಮಾರ್ಜೀನೆಯು ಈ ಸಂಧಿಯನ್ನು ಸಾಧಿಸಿ ಪುಷ್ಕರಣಿಯಲ್ಲಿ ಹಾರಿಕೊಂಡಳು. ಆಕೆಯು ಹಾರಿಕೊಂಡ ಸಪ್ಪಳಕ್ಕೆ ರಣಮಸ್ತನು ಎಚ್ಚತ್ತು ನೂರಜಹಾನಳ ಕೈಯನ್ನು ಕಸುವಿನಿಂದ ಹಿಡಿದನು. ಈ ಕಾಲದಲ್ಲಿ ರಣಮಸ್ತನು ಉನ್ಮತ್ತನಾಗಿದ್ದನು. ಆತನ ಮೈಮೇಲೆ ಪೂರಾ ಎಚ್ಚರವು ಇದ್ದಿಲ್ಲ. ಆತನು ನೂರಜಹಾನಳನ್ನು ಕುರಿತು-ನಿನ್ನ ಸಲುವಾಗಿ ನಾನು ಇದನ್ನೆಲ್ಲ ಮಾಡಿದೆನು. ಇನ್ನು ಈ ಮಂಗಳ ಭೂಮಿಯಲ್ಲಿ ನಮ್ಮಿಬ್ಬರ ಲಗ್ನವಾಗಲಿ, ನೋಡು, ನಮ್ಮ ಲಗ್ನದ ಸಮಾರಂಭವನ್ನು ನೋಡಿ ಸಂತೋಷಪಟ್ಟು ನಮ್ಮನ್ನು ಆಶೀರ್ವದಿಸುವದಕ್ಕಾಗಿ ನನ್ನ ತಾಯಿ-ತಂದೆಗಳಿಬ್ಬರು ಪುಷ್ಕರಣಿಯ ಮೇಲೆ ಹ್ಯಾಗೆ ಬಂದು ಕುಳಿತುಕೊಂಡಿದ್ದಾರೆ ! ಎಂದು ನುಡಿದವನೇ ಅರ್ಧ ಸತ್ತಂತೆ ಅಗಿದ್ದ ನೂರಜಹಾನಳನ್ನು ಎತ್ತಿಕೊಂಡು ಆ ರಾಕ್ಷಸ-ಸದೃಶನಾದ ರಣಮಸ್ತು ಪುಷ್ಕರಣಿಯಲ್ಲಿ ಹಾರಿಕೊಂಡನು. ಅಂದಿನ ಕಗ್ಗತ್ತಲೆಯ ರಾತ್ರಿಯಲ್ಲಿ ಆತನು ಹಾರಿಕೊಂಡ ಶಬ್ದವು ಪುಷ್ಕರಣೆಯಲ್ಲಿ ಪ್ರತಿಧ್ವನಿತವಾಯಿತು.
ಇತ್ತ ಹಿಂದೂ ದಂಡಾಳುಗಳು ರಾಮರಾಜನ ಶಿರಚ್ಛೇದವಾದದ್ದನ್ನು ಕೇಳಿ ದಿಕ್ಕುದಿಕ್ಕಿಗೆ ಓಡಹತ್ತಿರು. ಆಗ ಮುಸಲ್ಮಾನರು ಮಾಡಿದ ಕೊಲೆಯನ್ನು ವರ್ಣಿಸಲಸಾಧ್ಯವು. ಇಷ್ಟು ಭಯಂಕರ ರೀತಿಯಿಂದ ಹಿಂದೂ ಸೈನ್ಯದ ನಾಶಮಾಡುವ ಪ್ರಸಂಗ ಬಂದೀತೆಂದು ಮುಸಲ್ಮಾನರು ತಿಳಿದಿದ್ದಿಲ್ಲ. ಇಂಥ ಅನರ್ಥಕಾರಕವಾದ ಅಪಜಯಕ್ಕೆ ತಾವು ಗುರಿಯಾದೇವೆಂದು ಹಿಂದೂ ಸೈನಿಕರೂ ತಿಳಿದಿದ್ದಿಲ್ಲ. ಮುಸಲ್ಮಾನರ ಪರಾಭವವಾಗಿ ಬೇಗನೆ ಅವರು ತಮ್ಮ ಮಾಂಡಲಿಕರಾಗಿ ವಿಜಯನಗರದ ಸಾಮ್ರಾಜ್ಯವು ಕೃಷ್ಣೆಯ ಆಚೆಗಷ್ಟೇ ಅಲ್ಲ. ಉತ್ತರಹಿಂದುಸ್ತಾನದಲ್ಲಿಯೂ ಪರಸರಿಸಿ, ಮೊಗಲರು ಸಹ ತಮ್ಮ ಮಾಂಡಲಿಕರಾಗುವರೆಂಬ ಸುಖಕರ ಕಲ್ಪನೆಯಿಂದ ವಿಜಯನಗರ ಜನರ ಮಸ್ತಕಗಳು ತುಂಬಿಹೋಗಿದ್ದವು. ಆದರೆ ಒಂದು ದುರ್ದೈವವು ಆ ಕಲ್ಪನೆಗಳನ್ನೆಲ್ಲ ಮಣ್ಣುಗೂಡಿಸಿ ಸರ್‍ವಸ್ವದ ನಾಶವನ್ನುಂಟುಮಾಡಿತು. ಯುದ್ಧ ಭೂಮಿಯಿಂದ ಹತಾಶರಾಗಿ ರಾಜಧಾನಿಗೆ ಬಂದ ಸೈನಿಕರು ದೀನವಾಣಿಯಿಂದ ತಮ್ಮ ದುಃಸ್ಥಿತಿಯನ್ನು ವರ್ಣಿಸಲು, ನಾಲ್ಕೂ ಕಡೆಯಲ್ಲಿ ಆಹಾಕಾರವು ಉತ್ಪನ್ನವಾಯಿತು. ಅರಮನೆಯಲ್ಲಿದ್ದ ರಾಜನ ವಂಶಿಕರು ತಮ್ಮ ಕೈಗೆ ಸಿಕ್ಕ ಸಂಪತ್ತನ್ನು ತಕ್ಕೊಂಡು ರಾಜಧಾನಿಯನ್ನು ಬಿಡತೊಡಗಿದರು. ಇದನ್ನು ನೋಡಿ ನಾಗರಿಕರು ಹೌಹಾರಿದರು. ಅದರಲ್ಲಿ, ರಣಾಂಗಣದಿಂದ ಪಾರಾಗಿ ಬಂದ ತಿರುಮಲರಾಯನು, ಅರಮನೆಗೆ ಬಂದಕೂಡಲೆ, ಮೊದಲೆ ಸೆರೆಮನೆಯಲ್ಲಿಟ್ಟಿದ್ದ ಸದಾಶಿವರಾಯನನ್ನು ಕರಕೊಂಡು ಅಗಣಿತ ಸಂಪತ್ತಿನೊಡನೆ ರಾಜಧಾನಿಯಿಂದ ಹೊರಟುಹೋದನು, ಪ್ರತ್ಯಕ್ಷ ಸೇನಾಪತಿಯೇ ಹೀಗೆ ಓಡಿಹೋದ ಬಳಿಕ ಉಳಿದವರು ಏನು ಮಾಡಬೇಕು? ಯಾವನ ಕೈಗೆ ಏನು ಸಿಕ್ಕಿತೋ ಅದನ್ನು ತಕ್ಕೊಂಡು ಜನರು ರಾಜಧಾನಿಗೆ ಶರಣುಹೊಡೆದು ನಡೆಯ ಹತ್ತಿದರು. ಪಟ್ಟಣದೊಳಗಿನ ಶೆಟ್ಟರು-ಸಾಹುಕಾರರು ಮಾತ್ರ ಎಲ್ಲಿಗೂ ಹೋಗಲಿಕ್ಕೆ ಬಾರದಾಯಿತು. ಆನೆ-ಕುದುರೆ-ಒಂಟೆ-ಎತ್ತುಕತ್ತೆ ಮುಂತಾದ ವಾಹನಗಳು ಯುದ್ಧಕ್ಕೆ ಹೋದದ್ದರಿಂದ, ಅವರಿಗೆ ವಾಹನಗಳೇ ಸಿಗದಾದವು. ಅವರು ತಮ್ಮ ಸಂಪತ್ತನ್ನೆಲ್ಲ ಹೂಳಿಕೊಂಡು ಕುಳಿತರು. ಪಟ್ಟಣದೊಳಗಿನ ಸಶಸ್ತ್ರರಾದ ತರುಣರು ಆತ್ಮ ರಕ್ಷಣವನ್ನು ಮಾಡಿಕೊಳ್ಳಲು ಸಜ್ಜಾಗಿ ನಿಂತರು. ಈ ಅರಾಜಕ ಸ್ಥಿತಿಯಲ್ಲಿ ಲಮಾಣಿಗಳು, ಕೊರಚರು ಮುಂತಾದ ಕಾಡು ಜನರು ಹಗಲುಹಾಡೆ ಸಾವುಕಾರರ ಮನೆಗೆ ದರವಡೆಗಳನ್ನಿಕ್ಕಹತ್ತಿದರು. ಹೀಗೆ ಒಂದು ದಿವಸದಲ್ಲಿ ವಿಜಯನಗರದ ಅಂತಃಸ್ಥಿತಿಯು ಕೆಟ್ಟುಹೋಗಲು, ಮುಂದೆ ಮೂರು ದಿವಸ ಒಂದೇಸವನೆ ಅಂತಃಶತ್ರುಗಳ ಸುಲಿಗೆಯ ಕೆಲಸವು ನಡೆಯಿತು. ಮುಂದೆ ನಾಲ್ಕನೆಯ ದಿವಸ ಶತ್ರುಗಳು ಪಟ್ಟಣವನ್ನು ಪ್ರವೇಶಿಸಿ ಘೋರ ಕೃತ್ಯಗಳನ್ನು ನಡೆಸಿದರು. ಬರಿಯ ಪಟ್ಟಣವನ್ನು ಸುಲಿದು ಸಂಪತ್ತು ಒಯ್ಯುದರಿಂದಿಷ್ಟೇ ಅವರ ತೃಪ್ತರಾಗುವಂತೆ ಇದ್ದಿಲ್ಲ. ವಿದ್ಯಾನಗರವನ್ನು ಸಮೂಲ ನಾಶಮಾಡಲು, ಅವರು ಪ್ರತಿಜ್ಞೆ ಮಾಡಿರುವಂತೆ ತೋರಿತು. ಅವರು ಮೊದಲು ನಿರ್ದಯತನದಿಂದ ಕೈಗೆ ಸಿಕ್ಕವರನ್ನು ಕೊಂದುಹಾಕಿದರು. ತೋಪುಗಳನ್ನು ಹೂಡಿ ಅರಮನೆಯನ್ನು ನಾಶಮಾಡಿದರು, ದೇವಸ್ಥಾನಗಳನ್ನು ಕೆಡವಿದರು. ನೂರಾರು ಮೂರ್ತಿಗಳನ್ನು ಒಡೆದರು. ನೃಸಿಂಹನ ಪ್ರಚಂಡ ಮೂರ್ತಿಯನ್ನು ಭಿನ್ನ ವಿಚ್ಛಿನ್ನವಾಗಿ ಮಾಡಿದರು. ದೊಡ್ಡದೊಡ್ಡ ಸಭಾಮಂಟಪಗಳನ್ನು ನೆಲಸಮ ಮಾಡಿದರು. ಕೋಟಿ ಗಟ್ಟಲೆ ವೆಚ್ಚಮಾಡಿ
ರಚಿಸಿದ ಕಲಾಕೌಶಲ್ಯಗಳ ನಾಶ ಮಾಡಲಿಕ್ಕೆ ಮುಸಲ್ಮಾನರಿಗೆ ಎಂಟು ದಿನಗಳು ಸಹ ಹತ್ತಲಿಲ್ಲ. ವಿಜಯನಗರವನ್ನು ರಕ್ಷಿಸುವವರು ಯಾರೂ ಉಳಿಯಲಿಲ್ಲ. ಈ ಐಶ್ವರ್ಯಯುಕ್ತ ನಗರದಲ್ಲಿ ಸಂಪತ್ತು ಎಷ್ಟು ತುಂಬಿರುವದೆಂಬದರ ಕಲ್ಪನೆಯು, ಈ ಸುಲಿಗೆಯ ಪ್ರಸಂಗವು ಒದಗುವರೆಗೂ ಯಾರಿಗೂ ಆಗಿದ್ದಿಲ್ಲೆಂದು ಹೇಳಬಹುದು. ಕೋಟೆ ಎಂಬ ಹೆಸರಿನ ಇತಿಹಾಸಕಾರನು ಹೇಳುವದೇನಂದರೆ- “ಈ ಸುಲಿಗೆಯಲ್ಲಿ ಅಗಣಿತ ಸಂಪತ್ತು ಸುಲಿಯಲ್ಪಟ್ಟಿತು. ಅರದಲ್ಲಿ ಸಿಕ್ಕ ಒಂದು ರತ್ನವು ಕೋಳಿಯ ತತ್ತಿಯಷ್ಟು ಇತ್ತು. ಈ ರತ್ನವನ್ನು ರಾಮರಾಜನು ತನ್ನ ಕುದುರೆಯ ಶಿರೋಭೂಷಣದಲ್ಲಿ ಕೂಡ್ರಿಸಿದ್ದನು. ಈ ರತ್ನವು ಮುಂದೆ ಆದಿಲಶಹನ ವಶವಾಯಿತು. ಕುದುರೆಯ ಶಿರೋಭೂಷಣದಲ್ಲಿಯೇ ಇಷ್ಟು ದೊಡ್ಡ ರತ್ನವಿದ್ದ ಬಳಿಕ ರಾಜಗೃಹದಲ್ಲಿಯೂ, ಧನಿಕರ ಮನೆಗಳಲ್ಲಿಯೂ ಎಷ್ಟು ಸಂಪತ್ತು ಕೂಡಿಬಿದ್ದಿತ್ತೆಂಬದನ್ನು ನಮ್ಮಂಥ ದರಿದ್ರರು ಕಲ್ಪಿಸುವದು ಅಸಾಧ್ಯವೇ ಸರಿ ! ಅರಸರೇನು, ದರಿದ್ರರೇನು, ಕರ್ಮಫಲವನ್ನು ಭೋಗಿಸಿಯೇ ತೀರಬೇಕು !