ಕರ್ನಾಟಕ ಗತವೈಭವ/ಪೂರಕ ಪ್ರಕರಣ ೧
ದೇವ ಬಿನ್ನಹ ನಿಮ್ಮ ಕಾರು| ಣ್ಯವ ಲೋಕನದಿಂದಲೆನ್ನ ಗು| ಣಾವಲಂ ಬನದಟ್ಟತನ ನೆರೆ ಕೆಟ್ಟಿದದರಿಂದ || ಜೀವಭಾವವನುಳಿದು ನಿಜ ಸಂ|ಭಾವಿಸಿತು ಸಂದೇಹ ಬೀತುದು| ದೇವನೀ ಹೇಳಿದುದ ಮಾಡುವೆನೆಂದನಾ ಪಾರ್ಥ ||
ಶ್ರೀಕೃಷ್ಣಾರ್ಪಣಮಸ್ತು.
ಪೂರಕ ಪ್ರಕರಣ ೧.
ಕರ್ನಾಟಕ-ಇತಿಹಾಸ-ಸಂಶೋಧನ
ಹಿಂದೆ ೫ನೆಯ ಪ್ರಕರಣದಲ್ಲಿ ಇತಿಹಾಸಕ್ಕೆ ಉಪಲಬ್ದವಾಗಬಹುದಾದ ಸಾಧನ ಸಂಪತ್ತಿಯನ್ನು ಹೇಳಿರುವೆವಷ್ಟೆ. ಆ ಸಾಧನ ಸಾಮಗ್ರಿಯಲ್ಲಿ ಸ್ಥೂಲವಾಗಿ ಎರಡು ವರ್ಗಗಳನ್ನು ಮಾಡಬಹುದು, (೧) ಪ್ರಾಚೀನ ವಸ್ತು ಸಂಶೋಧನ, (೨) ಹಿಂದಿನ ವಾಙ್ಮಯ ಸಂಶೋಧನ. ಇವುಗಳಲ್ಲಿ ಎರಡನೆಯದರ ಬಗ್ಗೆ ಹೆಚ್ಚಿಗೆ ಹೇಳುವ ಕಾರಣವಿಲ್ಲ. ಚನ್ನಬಸವಪುರಾಣ, ಕನಕದಾಸ, ಪುರಂದರದಾಸರ ಪದಗಳು ಮುಂತಾದುವುಗಳನ್ನು ಇತಿಹಾಸ ದೃಷ್ಟಿಯಿಂದ ಓದಿ, ಅವುಗಳಲ್ಲಿ ದೊರೆಯುವ ಇತಿಹಾಸದ ಅಂಶವನ್ನು ಒಂದೆ ಕಡೆಗೆ ಕೂಡಿಸಿಟ್ಟರೆ, ಕರ್ನಾಟಕದ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಉಪಯೋಗವಾಗಬಹುದು. ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಕನ್ನಡ ಮತ್ತು ಸಂಸ್ಕೃತ ಪುಸ್ತಕಗಳನ್ನು
ಕಾಲಕ್ರಮವಾಗಿ ಒಂದೊಂದು ತೆಗೆದುಕೊಂಡರೆ ಹೆಚ್ಚು ಒಳ್ಳೆಯದು. ಇಂಥಿಂಥ ಪುಸ್ತಕದಲ್ಲಿಯೇ ನಮ್ಮ ಇತಿಹಾಸದ ಅಂಶವು ದೊರೆಯುತ್ತದೆಂಬುದನ್ನು ಹೇಳುವುದು ಶಕ್ಯವಿಲ್ಲ. ಆದರೂ ಹಿಂದಿನ ಪ್ರಕರಣಗಳಲ್ಲಿ ಹೇಳಿದ ಇತಿಹಾಸದಿಂದ, ಯಾವ ದೃಷ್ಟಿಯಿಂದ ಆ ವಾಙ್ಮಯವನ್ನು ಓದಬೇಕಾಗುವುದೆಂಬುದು ಗೊತ್ತಾಗಿರಬಹುದು. ಯಾವುದೊಂದು ಪುಸ್ತಕವನ್ನೋದಿದ ಕೂಡಲೆ, ಅದರೊಳಗೆ ನಮ್ಮ ಅರಸರ ಹೆಸರುಗಳುಂಟೇ ಕರ್ನಾಟಕದ ಸುಧಾರಣೆಗೆ ಕೈ ಕೊಟ್ಟ ಜನರ ನಾಮ ನಿರ್ದೇಶವಿರುವುದೇ, ಆ ಪುಸ್ತಕವು ಎಂದು ಹುಟ್ಟಿತೆಂಬುದರ ಬಗ್ಗೆ ಅದರಲ್ಲಿ ಏನಾದರೂ ಆಧಾರವುಂಟೇ ಇವೇ ಮುಂತಾದ ಸಂಗತಿಗಳನ್ನು ಟಿಪ್ಪಣಿವಾಡಿ ಇಟ್ಟುಕೊಳ್ಳಬೇಕು. ಪುಸ್ತಕದ ಆರಂಭಕ್ಕೂ ಕೊನೆಗೂ ಗ್ರಂಥಕರ್ತರು ತಮ್ಮ ಕುಲಗೋತ್ರಗಳನ್ನು ಹೇಳಿಡುವ ಸಂಪ್ರದಾಯವಿರುತ್ತದೆ. ಆದುದರಿಂದ ಅತ್ತ ಲಕ್ಷ್ಯವಿಡಬೇಕು.
ಇನ್ನು ಎರಡನೆಯ ವರ್ಗದ ವಿಷಯವಾಗಿ ಎಂದರೆ ಪುರಾಣವನ್ನು ಸಂಶೋಧನದ ವಿಷಯವಾಗಿ ಮಾತ್ರ ಹೆಚ್ಚು ವಿಸ್ತರಿಸಿ ಹೇಳುವ ಅವಶ್ಯವಿದೆ. ಏಕೆಂದರೆ, ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಲಿಪಿಗಳೂ ಲೇಖಗಳೂ ಒಂದೇ ಕಡೆಗೆ ಸಂಕಲಿತವಾಗಿ ದೊರೆಯುವುದಿಲ್ಲ. ಅವು ಅನೇಕ ಪುಸ್ತಕಗಳಲ್ಲಿ ಹರಡಿರುತ್ತವೆ, ಮತ್ತು ಇಂದಿನವರೆಗೆ ಆಗಿಹೋದ ಪ್ರಯತ್ನಗಳ ಜ್ಞಾನವಿರದಿದ್ದರೆ, ನಮಗೆ ನಿಷ್ಕಾರಣವಾಗಿ ಶ್ರಮವುಂಟಾಗುವ ಸಂಭವವುಂಟೆಂದು ನನ್ನ ಸ್ವಂತ ಅನುಭವಕ್ಕೆ ಬಂದಿದೆ. ಇಂದಿನವರೆಗೆ ಎಷ್ಟು ಶಿಲಾಲಿಪಿಗಳು ಎಲ್ಲೆಲ್ಲಿ ಮುದ್ರಿತವಾಗಿವೆ, ಅವುಗಳ ಅರ್ಥವನ್ನು ಗೊತ್ತು ಹಚ್ಚಿರುವರೇ ಇಲ್ಲವೇ, ಇಲ್ಲದಿದ್ದರೆ, ಅವುಗಳ ಸಂಗ್ರಹವು ಯಾರ ಹತ್ತರವುಂಟು, ಶಿಲಾಲಿಪಿಗಳು ಯಾವ ಯಾವ ಸ್ಥಳದಲ್ಲಿ ಸಿಕ್ಕುತ್ತವೆ. ಇವೇ ಮುಂತಾದ ವಿಷಯಗಳನ್ನು ಕುರಿತು ಸವಿಸ್ತರವಾದ ಪುಸ್ತಕವೊಂದನ್ನು ರಚಿಸಿದರೆ ಮುಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗುವುದು. ಆದರೆ ಆ ಕಾರ್ಯವನ್ನು ತೃಪ್ತಿಕರವಾಗಿ ಮುಂದೆ ಯಾರು ಮಾಡುವರೋ ಮಾಡಲಿ; ಸದ್ಯಕ್ಕೆ ಹತ್ತು ಹನ್ನೆರಡು ವರ್ಷಗಳಲ್ಲಿ ಆಗಿಷ್ಟು ಈಗಿಷ್ಟು ಮಾಡಿದ ಅಭ್ಯಾಸದಿಂದ ನಮಗೆ ಪುಸ್ತಕಗಳಲ್ಲಿ ದೊರೆತ ಸಂಗತಿಗಳನ್ನು ಇಲ್ಲಿ ಅತಿ ಸಂಕ್ಷೇಪವಾಗಿ ಹೇಳಿಡುವೆವು.
'ಕರ್ನಾಟಕ'ವೆಂಬ ಶಬ್ದವನ್ನುಚ್ಚರಿಸಿದೊಡನೆಯೇ ಮೈ ಮುಳ್ಳಿಡುವಷ್ಟು ರಾಷ್ಟ್ರೀಯತ್ವವು ನಮ್ಮ ಕನ್ನಡಿಗರಲ್ಲಿ ಇಷ್ಟು ದಿವಸ ವಿಕಾಸವಾಗಲಿಲ್ಲವೆಂಬ ಕಾರಣದಿಂದಲೋ, ಕರ್ನಾಟಕವು ತುಂಡುತುಂಡಾಗಿ ಹೋಗಿ ಅಖಂಡ ಕರ್ನಾಟಕವು* ಕಣ್ಣೆದಿರಿಗೆ ನಿಲ್ಲುವುದಿಲ್ಲೆಂಬ ಕಾರಣದಿಂದಲೋ, ನಮ್ಮ ಕನ್ನಡಿಗರು ತಮ್ಮ ಇತಿಹಾಸವನ್ನು ಕುರಿತು ಮೂಕ ಭಾವವನ್ನೇ ಅವಲಂಬಿಸಿದ್ದಾರೆ. ಮುಂಬಯಿ ಕರ್ನಾಟಕದವರು ಸಮೀಪದಲ್ಲಿರುವ ಮರಾಠಿ ಬಂಧುಗಳ ಅಭಿಮಾನಪೂರ್ವಕವಾದ ರಾಷ್ಟ್ರೀಯ ಪ್ರಯತ್ನಗಳಿಂದ ಜಾಗರೂಕರಾಗಿ ತಮ್ಮ ಭಾಷಾ ವಿಷಯದಲ್ಲಿ ಕೆಲವುಮಟ್ಟಿಗೆ ಅಭಿಮಾನಗೊಂಡವರಾಗಿದ್ದರೂ, ಆ ಅಭಿಮಾನವು ಭಾಷಾಕ್ಷೇತ್ರವನ್ನು ಮಾತ್ರವೇ ವ್ಯಾಪಿಸಿಕೊಂಡಿರುವುದಲ್ಲದೆ, ಹೆಚ್ಚು ವಿಸ್ತಾರವಾದ ಸ್ವರೂಪವು ಅದಕ್ಕೆ ಇಂದಿನವರೆಗೆ ಪ್ರಾಪ್ತವಾಗಿಲ್ಲ. ಉತ್ತರ ಕರ್ನಾಟಕದ ಬಿಕ್ಕಟ್ಟಿನ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿರಬಹುದು. ಅಥವಾ ಕಾಲವು ಅನುಕೂಲವಿರಲಿಲ್ಲವೆಂದೂ ಹೇಳಬಹುದು. ಅದು ಏನೇ ಇರಲಿ ; ಹಿಂದಿನ ೫೦-೬೦ ವರ್ಷಗಳಲ್ಲಿ, ಕರ್ನಾಟಕದಲ್ಲಿ ಪಂಡಿತರೇನೋ ಅನೇಕರು ಆಗಿಹೋದರು; ವಿದ್ವಾಂಸರೇನೋ ಕಡಿಮೆಯಾಗಲಿಲ್ಲ; ಭಾಷಾಭಿಮಾನಿಗಳೂ ಬಗೆಬಗೆಯಾಗಿ ತಲೆದೋರಿದರು; ಆದರೆ, ನಮ್ಮ ಕರ್ನಾಟಕವನ್ನು ಅಭಿಮಾನಕ್ಕೆ ಜೀವನವಾದ ಇತಿಹಾಸ ದೃಷ್ಟಿಯಿಂದ ಯಾರೂ ಅಭ್ಯಾಸಮಾಡಲಿಲ್ಲ, ಇದರ ಪರಿಣಾಮವೇನಾಯಿತೆಂದರೆ, ಕರ್ನಾಟಕರ ಮನಸ್ಸಿನಲ್ಲಿ ಭಾಷಾಭಿಮಾನವು ಕೆಲವು ಮಟ್ಟಿಗೆ ಬೇರೂರಿದರೂ, ಅದು ವ್ಯಕ್ತವಾಗಿ ಬೆಳೆಯಲಿಕ್ಕೆ ಬೇಕಾದ ಇತಿಹಾಸ ಜೀವನವು ಅವರಿಗೆ ದೊರೆಯದಿದ್ದುದರಿಂದ, ಆ ಬೇರು ಕಸುವಿಲ್ಲದೆ ಒಣಗ ಹತ್ತಿತು. ಇರಲಿ! ಇದು ಕನ್ನಡಿಗರ ಸ್ಥಿತಿಯಾಯಿತು, ಇನ್ನು, ಕನ್ನಡಿಗರೇ ಈ ವಿಷಯದಲ್ಲಿ ಉದಾಸೀನರಾಗಿದ್ದ ಬಳಿಕ, ಅದನ್ನು ಕಣ್ಣೆತ್ತಿ ನೋಡುವವರಾರು! ತಮ್ಮ ಜನರ ಇತಿಹಾಸವು ತಮಗೆ ಹೇಗೆ ಕಾಣುವುದು
* ಮೈಸೂರು ವಿಶ್ವವಿದ್ಯಾಲಯದವರು ತೀರ ಮೊನ್ನೆ, ಮೈಸೂರ ಇತಿಹಾಸ ಬರೆಯುವವರಿಗೆ ಬಹುಮಾನ ಕೊಡುವೆವೆಂದು ಜಾಹೀರ ಮಾಡಿದ ಸಂಗತಿಯನ್ನು ಓದಿ, ಯಾವ ಕನ್ನಡಿಗನಿಗೆ ಆನಂದವಾಗದೆ ಇದ್ದಿತು! ಆದರೆ, ರಾಷ್ಟ್ರದಲ್ಲಿ ನವಜೀವನವು ಸಂಚರಿಸುತ್ತಿರುವ ಇ೦ಥ ಕಾಲದಲ್ಲಿ ಮೈಸೂರ ಮಟ್ಟಿಗೆ ಸಂಕುಚಿತವಾದ ಅಭಿಮಾನವನ್ನು ತಾಳದೆ 'ಕರ್ನಾಟಕ'ದ ಅಭಿಮಾನವನ್ನು ತಾಳಿದ್ದರೆ ಎಷ್ಟು ಸೊಗಸಾಗುತ್ತಿತ್ತು!
ಶಕ್ಯವದೆಯೋ, ಹಾಗೆ ಅದು ಪರಕೀಯರಿಗೆ ಕಾಣುವುದು ಶಕ್ಯವಿಲ್ಲವಷ್ಟೆ ! ಆದುದರಿಂದ, ಪರಕೀಯರು ನಮ್ಮ ಇತಿಹಾಸವನ್ನು ಸ್ವಾಭಿಮಾನದೃಷ್ಟಿಯಿಂದ ಅಭ್ಯಾಸಮಾಡಿಲ್ಲವೆಂದು ಹೇಳಿದರೆ ಆಶ್ಚರ್ಯವೇನು? ಆದರೆ ಕೆಲವು ಯುರೋಪೀಯ ವಿದ್ವಾಂಸರು ಪುರಾತನ ವಸ್ತು ಸಂಶೋಧನ ಕಾರ್ಯದಲ್ಲಿ ತೊಡಗಿದಾಗ, ಅವರಿಗೆ ನಮ್ಮ ಇತಿಹಾಸದ ಸಂಗತಿಗಳು ಗೊತ್ತಾಗಿ, ಅವರು ಅವುಗಳನ್ನು ಕುತೂಹಲದಿಂದ ಸಂಗ್ರಹಿಸಿರುವರು. ಅವರ ಈ ಪ್ರಯತ್ನಗಳ ವಿಷಯವಾಗಿ ನಾವು ಅವರ ಉಪಕಾರವನ್ನು ಎಷ್ಟು ಸ್ಮರಿಸಿದರೂ ತೀರದು. ಅವರ ಆ ಪ್ರಯತ್ನಗಳೇ ನಮ್ಮ ಇತಿಹಾಸಾಭ್ಯಾಸಕ್ಕೆ ಮೂಲಾಕ್ಷರಗಳಾಗಿವೆ. ಈ ವಿದ್ವಾಂಸರು ಪುರಾಣವಸ್ತುಗಳನ್ನು ಸಂಶೋಧಿಸುವಾಗ, ಕೆಲವರಿಗೆ ಶಿಲಾಲಿಪಿಗಳು ದೊರೆತವು, ಕೆಲವರ ಲಕ್ಷ್ಯವು ನಮ್ಮಲ್ಲಿಯ ನಾಣ್ಯಗಳ ಕಡೆಗೆ ಎಳೆಯಿತು, ಕಟ್ಟಡಗಳು ಕೆಲವರ ಮನಸ್ಸನ್ನು ಆಕರ್ಷಿಸಿದುವು; ಅವರು ಆಯಾ ವಿಷಯಗಳಲ್ಲಿ ಪರಿಶ್ರಮಪಟ್ಟು ಅನೇಕ ಪುಸ್ತಕಗಳನ್ನು ಬರೆದಿರುವರು. ಯುರೋಪೀಯ ಜನರ ಇತಿಹಾಸದೃಷ್ಟಿಯು ಈ ಮೊದಲೇ ಎಚ್ಚರಗೊಂಡಿರುವುದರಿಂದ, ಮತ್ತು ಹೊಸ ವಸ್ತುಗಳನ್ನು ಕಂಡೊಡನೆಯೇ ಅವುಗಳನ್ನು ಲಕ್ಷ್ಯ ಪೂರ್ವಕವಾಗಿ ಪರಿಶೋಧಿಸುವ ಪರಿಪಾಠವು ಅವರಿಗೆ ಮೊದಲಿನಿಂದ ಇದ್ದುದರಿಂದ, ಅವರು ತಮ್ಮ ಬುದ್ಧಿ ಸಾಮರ್ಥ್ಯವನ್ನು ವೆಚ್ಚ ಮಾಡಿ, ಅವುಗಳನ್ನು ಅಭ್ಯಾಸಮಾಡಿ ಅವುಗಳಿಂದ ನಿಷ್ಪನ್ನವಾಗುವ ಸಂಗತಿಗಳನ್ನು ತಿಳಿಯಲು ಮನಗೊಂಡವರಾದರು. ಸಾರಾಂಶ:- ಆಂಗ್ಲ ಪಂಡಿತರ ಕುತೂಹಲವೇ ನಮ್ಮ ಇತಿಹಾಸ ಸಂಶೋಧನದ ಆಕಸ್ಮಿಕವಾದ ಮೂಲವು. ಈ ಹೊತ್ತಿನವರೆಗೆ ಅವರು ಮಾಡಿದ ಪ್ರಯತ್ನಗಳ ಫಲವನ್ನೇ ಮೂಲಧನವಾಗಿಟ್ಟು ಕೊಂಡು ಮುಂದಿನ ಇತಿಹಾಸವನ್ನು ನಿಜವಾದ ಕರ್ನಾಟಕದ ಅಭಿಮಾನದಿಂದ ಅಭ್ಯಾಸ ಮಾಡಬೇಕಾಗಿದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಕುರಿತು ಹೇಳುವ ಮೊದಲು, ಹಿಂದುಸ್ಥಾನದ ಇತಿಹಾಸದ ಬಗ್ಗೆ ಯಾರು ಯಾರು ಈ ಮಾರ್ಗದಿಂದ ಪ್ರಯತ್ನ ಮಾಡಿದರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಈ ವಿಷಯವಾಗಿ ಖಾಸಗೀರೀತಿಯಿಂದ ಪ್ರಯತ್ನ ಮಾಡಿದವರಲ್ಲಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಗಳ ಮುಖ್ಯವಾದವುಗಳು. ಬಂಗಾಲ ರಾಯಲ್
ಏಶಿಯಾಟಿಕ್ ಸೊಸಾಯಿಟಿಯು ೧೭೭೫ರಲ್ಲಿ ಸ್ಥಾಪಿತವಾಯಿತು. ಮುಂಬಯಿ ಸಂಸ್ಥೆಯು ೧೮೦೪ನೆಯ ಇಸ್ವಿಯಲ್ಲಿ ಸ್ಥಾಪನವಾಯಿತು. ೧೮೧೮ನೆಯ ಇಸ್ವಿಯಲ್ಲಿ ಮದ್ರಾಸ್ ಸಂಸ್ಥೆಯು ಸ್ಥಾಪಿತವಾಯಿತು, ೧೮೨೫ ನೆಯ ಇಸ್ವಿಯಲ್ಲಿ ಲಂಡನ್ ಸೊಸಾಯಿಟಿಯು ಸ್ಥಾಪಿತವಾಗಿ, ಮೊದಲು ಬೇರೆ ಬೇರೆ ಹೆಸರುಗಳಿಂದ ಕೆಲಸ ಮಾಡುತ್ತಿದ್ದ ಇವೆಲ್ಲ ಸಂಸ್ಥೆಗಳು ಆ ಲಂಡನದ ಮುಖ್ಯ ಸಂಸ್ಥೆಗೆ ಶಾಖೆಗಳಾಗಿ ಮಾಡಲ್ಪಟ್ಟವು. ಡಾ| ಫರ್ಗುಸನ್, ಪ್ರಿನ್ಸೆಸ್, ಇಲಿಯಟ್ ಮುಂತಾದ ಆನೇಕ ವಿದ್ವಾಂಸರು, ಆಯಾ ಸಂಸ್ಥೆಗಳಿಂದ ಹೊರಡಿಸಲ್ಪಟ್ಟ ಮಾಸಪತ್ರಿಕೆಗಳಲ್ಲಿ ಲೇಖಗಳನ್ನು ಬರೆದಿರುವರು. ಆದರೆ ಶಿಲಾಲಿಪಿ ತಾಮ್ರಶಾಸನಗಳನ್ನು ಸಂಶೋಧಿಸುವುದೊಂದೇ ಆ ಸಂಸ್ಥೆಯ ಕೆಲಸವಿರಲಿಲ್ಲ. ಪೌರ್ವಾತ್ಯ ದೇಶಗಳಿಗೆ ಸಂಬಂಧಿಸಿದ ಯಾವದೇ ವಸ್ತುವಿರಲಿ, ಯಾವದೇ ಜ್ಞಾನವಿರಲಿ, ಅವೆಲ್ಲವನ್ನೂ ಸಂಶೋಧಿಸುವುದು ಅವರ ಕೆಲಸವಾಗಿತ್ತು. ಆದಕಾರಣ, ನಮ್ಮ ದೇಶದ ಭೂಗರ್ಭಶಾಸ್ತ್ರ, ಪ್ರಕೃತಿಶಾಸ್ತ್ರ ಮುಂತಾದ ನಾನಾತರದ ವಿಷಯಗಳ ಮೇಲೆ ಲೇಖಗಳು ಬಂದಿರುತ್ತವೆ. ನಡುನಡುವೆ ಶಿಲಾಲಿಪಿ, ತಾಮ್ರಶಾಸನಗಳ ವಿಷಯವಾಗಿಯೂ ಶೋಧನೆಗಳು ದೊರೆಯುತ್ತವೆ. ನಮ್ಮ ಇತಿಹಾಸಕ್ಕೆ ಸಂಬಂಧಿಸಿದ ಲೇಖಗಳು ಬಹುತರವಾಗಿ ಮುಂಬಯಿ ಸಂಸ್ಥೆಯವರು ತೆಗೆದ ಮಾಸಪತ್ರಿಕೆಯಲ್ಲಿಯೇ ವಿಶೇಷವಾಗಿ ದೊರೆಯುತ್ತವೆ, ಅದನ್ನು ವಿಸ್ತಾರವಾಗಿ ಮುಂದೆ ಕೊಡುವವು. ಸದ್ಯಕ್ಕೆ ನೆನಪಿನಲ್ಲಿಡತಕ್ಕ ಸಂಗತಿಯೇನೆಂದರೆ, ಈ ಸಂಸ್ಥೆಗಳಿಂದ ಹೊರಡುವ ಮಾಸಪತ್ರಿಕೆಗಳನ್ನು ಸಂಶೋಧಕರು ಆದಷ್ಟು ಮಟ್ಟಿಗೆ ಸಂಗ್ರಹಿಸಬೇಕೆಂಬುದು.
ಈ ಇಂಡಿಯನ್ ಆಂಟಿಕ್ವರಿ(Indian Antiquary) ಮಾಸಪತ್ರಿಕೆಯ ಜೊತೆಗೇ ಎಫಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಸ್ವತಂತ್ರವಾದ ಪತ್ರಿಕೆಯನ್ನು ೧೮೯೧ನೆಯ ಇಸಿವಿಯಿಂದ ಹೊರಡಿ ಸಹತ್ತಿರುವರು. ಇದರಲ್ಲಿ ಕೇವಲ ಲಿಪಿಗಳೇ ದೊರೆಯುತ್ತವೆ. ಇವೆರಡು ಪತ್ರಿಕೆಗಳೂ ಇನ್ನೂ ನಡೆಯುತ್ತಿವೆ. ಇವು ಸಂಶೋಧಕರಿಗೆ ಅವಶ್ಯವಾದ ಪುಸ್ತಕಗಳು.
ಮೈಸೂರು ಸರಕಾರದವರಂತೂ ತಮ್ಮ ಪ್ರಾಂತದ ಶಿಲಾಲಿಪಿ ಮುಂತಾದುವುಗಳನ್ನು ಸಂಪೂರ್ಣವಾಗಿ ಸಂಶೋಧಿಸಿ ಅಚ್ಚು ಹಾಕಿದ್ದಾರೆ. ಈಗ ಒಟ್ಟು ೧೨ ಪುಸ್ತಕಗಳು ಹೊರಬಿದ್ದಿವೆ. ಇದಲ್ಲದೆ, ಆ ಖಾತೆಯವರು ಪ್ರತಿ ವರುಷವೂ ಹೊಸಶೋಧಗಳನ್ನು ಮಾಡುತ್ತಿದ್ದಾರೆ. ಅವೆಲ್ಲಾ ಪುಸ್ತಕಗಳೂ ನಮ್ಮ ಇತಿಹಾಸಕ್ಕೆ ಸಂಬಂಧಪಟ್ಟವುಗಳೇ ಆಗಿರುವುದರಿಂದ ಅವೆಲ್ಲವೂ ಓದತಕ್ಕವೇ.
ಇತ್ತಿತ್ತ ತಿರುವಾಂಕೂರು ಮತ್ತು ನಿಜಾಮ ಸರಕಾರದವರೂ ಈ ಪುರಾಣ ವಸ್ತು ಸಂಶೋಧನದ (Archeology) ಬೇರೆ ಖಾತೆಯನ್ನೇ ಏರ್ಪಡಿಸಿದ್ದಾರೆ. ನಿಜಾಮ ಇಲಾಖೆಯಲ್ಲಿಯ ಹೊಸದಾಗಿ ಈ ಸಂಬಂಧದಿಂದ ಒಂದು ಖಾತೆಯು ನಿರ್ಮಿತವಾಗಿದೆ.
ವುದು. ಅವರ ರಿಪೋರ್ಟುಗಳು ಕಾಲಕಾಲಕ್ಕೆ ಹೊರಡುತ್ತಿರಲಿಲ್ಲ, ಸಾಕಷ್ಟು ಸಲಕರಣೆಗಳು ಕೂಡಿದನಂತರ ಒಂದೊಂದು ಪುಸ್ತಕವು ಬೈಲಿಗೆ ಬರುತ್ತಿತ್ತು. ೧೮೭೪ನೇ ಇಸವಿಯಿಂದ ೧೯೦೨ ಇಸವಿಯವರೆಗೆ ಅಂದರೆ ೨೯ ವರ್ಷಗಳಲ್ಲಿ ೩೨ ಪುಸ್ತಕಗಳು ಹೊರಬಿದ್ದಿರುತ್ತವೆ. ಅದಕ್ಕೆ ವಾಲ್ಯುಮ್ಸ್ ಆಫ್ ದಿ ಇಂಪೀರಿಯಲ್ ಸಿರೀಸ್ (Volumes of the Imperial Series) ಎಂದೆನ್ನುತ್ತಾರೆ. ಒಮ್ಮೊಮ್ಮೆ ೫ ವರ್ಷಕ್ಕೊಮ್ಮೆ ಒಂದು ಪುಸ್ತಕವು ಹೊರಟಿತು. ಒಮ್ಮೊಮ್ಮೆ ಒಂದೇ ವರ್ಷದಲ್ಲಿ ೫ ಪುಸ್ತಕಗಳು ಹೊರಬಿದ್ದುವು. ಡಾ. ಬರ್ಗೆಸ್ (Dr. Burgess) ಇವರ ಜೊತೆಗೆ ಮತ್ತೆ ೯ ಜನರು ಕೆಲಸ ಮಾಡುವವರಿದ್ದರು. ಆದರೆ, ಈ ೩೨ ಪುಸ್ತಕಗಳಲ್ಲಿ ೧೯ ಪುಸ್ತಕಗಳನ್ನು ಡಾ. ಬರ್ಗೆಸ್ (Dr. Burgess) ಇವರೊಬ್ಬರೇ ಬರೆದಿರುತ್ತಾರೆ.
ಜನರಲ್ ಕನಿಂಗಹ್ಯಾಮ್ (General Cunningham) ಇವರ ಡಿಸ್ಟ್ರಿಕ್ಟ್ ರಿಪೋರ್ಟುಗಳೆಂದರೆ, ಇವರು ತಮ್ಮ ಪ್ರವಾಸದಲ್ಲಿ ತೆಗೆದುಕೊಂಡ ಟಿಪ್ಪಣಿಗಳು. ೧೮೬೨ರಿಂದ ೧೮೮೪ರ ವರೆಗೆ ಇಂಥ ರಿಪೋರ್ಟುಗಳು ಮುದ್ರಿಸಲ್ಪಟಿವೆ. ಇವು ಡಾ. ಬರ್ಗೆಸ್ (Dr. Burgess) ಇವರ ರಿಪೋರ್ಟುಗಳಿಗಿಂತ ಹೆಚ್ಚು ವಿಸ್ತ್ರತವಾಗಿರುತ್ತವೆ. ಆದರೆ ಇವರ ರಿಪೋರ್ಟುಗಳೂ, ಮಧ್ಯ ಮತ್ತು ಉತ್ತರ ಹಿಂದುಸ್ಥಾನಕ್ಕೆ ಸಂಬಂಧಿಸಿರುತ್ತವೆ. ಆದುದರಿಂದ ಕರ್ನಾಟಕದ ಇತಿಹಾಸದ ವಿಷಯವಾಗಿ ಪ್ರತ್ಯಕ್ಷವಾಗಿ ಏನೂ ಮಾಹಿತಿಯು ಈ ಬರ್ಗೆಸ್ ಮತ್ತು ಕನಿಂಗಹ್ಯಾಮ್ ಇವರ ರಿಪೋರ್ಟುಗಳಲ್ಲಿ ಸಿಕ್ಕುವುದಿಲ್ಲ.
of such remains as most deserve notice with the history of them, so far as it is traceable, and record the traditions that are retained regarding them."
ಸಾರಾಂಶ:- “ಐತಿಹಾಸಿಕ ಅವಶೇಷಗಳನ್ನು ಅವುಗಳ ಇತಿಹಾಸ ಸಹಿತವಾಗಿ ಗೊತ್ತಿದ್ದ ಮಟ್ಟಿಗೆ ಚನ್ನಾಗಿ ವರ್ಣಿಸಿ ಅವುಗಳ ವಿಷಯಕ್ಕೆ ಪ್ರಚಲಿತವಿರುವ ದಂತಕಥೆಗಳನ್ನು ಸಂಗ್ರಹಿಸುವುದು” ಎಂದು ಸರಕಾರದವರು ಗೊತ್ತುಪಡಿಸಿದ್ದರು. ಆದರೆ ೧೮೬೨ರಿಂದ ೧೮೮೧ರ ವರೆಗೆ ಕೆಲಸಮಾಡಿದರೂ ಈ ಕೆಲಸವು ಮುಗಿಯದಿದ್ದುದರಿಂದ ಆ ವರ್ಷ ಡಾಯರೆಕ್ಟರ್ ಜನರಲ್ ಆಫ್ ಆರ್ಕಿಆಲಾಜಿಕಲ್ ಸರ್ವೆ ಆಫ್ ಇಂಡಿಯಾ (Director General of Archaeological Survey of India) ಎಂಬುದೊಂದು ಹೊಸ ಹುದ್ದೆಯು ನಿರ್ಮಿತವಾಗಿ, ಅವನು ಮುಂದೆ ಹೇಳಿದಂತೆ ಕೆಲಸ ಮಾಡತಕ್ಕುದಂದು ಗೊತ್ತಾಯಿತು, ಅದೇನೆಂದರೆ 'To superintend a complete Search over the whole country and make a systematic record and description of all architectural and other remains that are remarkable alike for their antiquity, or other beauty or their historical interest.' ಸಾರಾಂಶ:- ದೇಶದಲ್ಲೆಲ್ಲ ಸಂಚರಿಸಿ, ಪ್ರಾಚೀನತೆ, ಸೌಂದರ್ಯ, ಅಥವಾ ಐತಿಹಾಸಿಕ ಮಹತ್ವ ಇವುಗಳ ಬಗ್ಗೆ ಖ್ಯಾತಿಗೊಂಡಿರುವ, ಶಿಲ್ಪಕಲೆಯ ಮತ್ತು ಮಿಕ್ಕ ಅವಶೇಷಣಗಳನ್ನು ಸಂಗ್ರಹಿಸುವುದೂ ಚನ್ನಾಗಿ ಅವುಗಳ ವರ್ಣನೆಯನ್ನು ಬರೆಯುವುದೂ, ಆದರೆ ಈ ಮೇರೆಗೆ ಇಡೀ ಹಿಂದುಸ್ಥಾನದಲ್ಲಿ ಅವರು ಕೆಲಸ ಮಾಡಬೇಕೆಂದು ಗೊತ್ತಾದರೂ ಅವರು ಪ್ರಾಯಶಃ ಉತ್ತರ ಹಿಂದುಸ್ಥಾನದಲ್ಲಿ ಮಾತ್ರವೇ ಕೆಲಸ ಮಾಡಿರುತ್ತಾರೆ.
ಮಾಡುವುದು ಇವರ ಕೆಲಸವಾಗಿರಲಿಲ್ಲ. ಅದು ಪ್ರಾಂತಿಕ ಸರಕಾರದವರ ಕೆಲಸ ಎಂದು ಸರಕಾರದವರ ತಿಳುವಳಿಕೆಯಾಗಿತ್ತು. ಪ್ರಾಂತಿಕ ಸರಕಾರದವರ ಲಕ್ಷ್ಯದಲ್ಲಿ ಈ ಕಟ್ಟಡಗಳ ಸಂರಕ್ಷಣೆಯ ವಿಷಯವು ಚನ್ನಾಗಿ ಬರದುದೇನೂ ಆಶ್ಚರ್ಯವಲ್ಲ. ಆದ್ದರಿಂದ, ದೊಡ್ಡ ದೊಡ್ಡ ಸುಂದರವಾದ ಕಟ್ಟಡಗಳು ಕೂಡ ಬಿದ್ದು ಹೋಗಹತ್ತಿದುವು. ಈ ಮಾತು Lord Lytton ಇವರ ಲಕ್ಷ್ಯದಲ್ಲಿ ೧೮೭೮ ನೆಯ ಇಸವಿಯಲ್ಲಿ ಮೊದಲಿಗೆ ಬಂದಿತು. ಅವರು ಹೇಳಿದ್ದೇನೆಂದರೆ “The preservation of the National Antiquities and works of art ought not to be exclusively left to the charge of Local Governments, which may not always be alive to the importance of such a duty. Lieut. Governors who combine aesthetic culture with administrative energy are not likely to be very common and I can not conceive any claim upon the administrative initiative and financial resources of the supreme Government more essentially imperial than this." ಸಾರಾಂಶ:- ರಾಷ್ಟ್ರೀಯ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸ್ಥಾನಿಕ ಸರಕಾರಗಳ ಕಡೆಗೆ ಒಪ್ಪಿಸುವುದು ಯೋಗ್ಯವಾಗಲಾರದು. ಯಾಕಂದರೆ, ಅವರಿಗೆ ಅವುಗಳ ಮಹತ್ವವು ಚನ್ನಾಗಿ ಲಕ್ಷ್ಯದಲ್ಲಿ ಬರುವ ಸಂಭವವಿಲ್ಲ. ಸೌಂದರ್ಯದ ಅಭಿರುಚಿ ರಾಜಕಾರಸ್ಥಾನದ ಶಕ್ತಿ ಇವೆರಡೂ ಉಳ್ಳ ಲೆಫ್ಟಿನೆಂಟ ಗವರ್ನರ ಜನರು ತೀರಕಡಿಮೆ. ಇದಲ್ಲದೆ, ಇದು ವರಿಷ್ಟ ಸರಕಾರದವರು ತಾವೇ ಕೈಕೊಂಡು ತಮ್ಮ ಹಣವನ್ನು ವೆಚ್ಚ ಮಾಡಿ ಮಾಡತಕ್ಕ ವಿಷಯವು. ಇದರ ಪರಿಣಾಮವೇನಾಯಿತಂದರೆ- ಮುಂದೆ ಕ್ಯುರೇಟರ್ ಆಫ್ ಏನ್ಸೆಂಟ ಮೊನ್ಯೂಮೆಂಟ್ಸ್(Curator of ancient Monuments) ಎಂಬ ಅಧಿಕಾರಿಯು ನೇಮಿಸಲ್ಪಡಬೇಕೆಂದು ಹಿಂದುಸ್ಥಾನ ಸರಕಾರದವರು ಇಂಗ್ಲಂಡಿಗೆ ಸೂಚಿಸಿದರು. ಅದಕ್ಕೆ, ಆಗ ಸೆಕ್ರಿಟರಿ ಆಫ್ ಸ್ಟೇಟ್ (Secretary of State) ಇವರು ಒಪ್ಪಲಿಲ್ಲ. ಮುಂದೆ, ೧೮೯೧ನೆಯ ಇಸವಿಯಲ್ಲಿ ಮಾತ್ರ ಮೇಜರ್ ಕೋಲ್ (Major
Kole R.E.) ಇವರು ಕ್ಯುರೇಟರ್ ಆಫ್ ಏನ್ಸೆಂಟ ಮಾನ್ಯುಮೆಂಟ್ಸ್ (Curator of ancient monuments) ಎಂಬ ಹುದ್ದೆಯ ಮೇಲೆ ಮೂರು ವರ್ಷಗಳ ಮಟ್ಟಿಗೆ ನೇಮಕವಾದರು. ಅವರು ತಮ್ಮ ಕೆಲಸವನ್ನು ಮೂರು ಪುಸ್ತಕಗಳ ರೂಪದಿಂದ ಪ್ರಕಟಿಸಿದರು. ಅವಕ್ಕೆ ಮೇಜರ್ ಕೋಲ್ ಇವರ ಮೂರು ವಾಲ್ಯೂಮಗಳು (Major Kole's three volumes) ಎಂದೆನ್ನುತ್ತಾರೆ. ಇದಲ್ಲದೆ, ಪ್ರಿಝರ್ವೇಶನ್ ಆಫ್ ನ್ಯಾಶನಲ್ ಮೊನ್ಯುಮೆಂಟ್ಸ್ ಇನ್ ಇಂಡಿಯಾ (Preservation of National monuments in India) ಎಂಬ ರಿಪೋರ್ಟುಗಳನ್ನು ಬರೆದರು. ಈ ರಿಪೋರ್ಟುಗಳು ಬಹಳ ಮಹತ್ವವುಳ್ಳವುಗಳಾಗಿವೆ.
೧೮೯೫ ನೆಯ ಇಸವಿಯಲ್ಲಿ ಜನರಲ್ ಕನಿಂಗಹ್ಯಾಮ್ (General Cunningham) ಇವರು ಕೆಲಸದಿಂದ ನಿವೃತ್ತರಾದರು. ಆಗ ಡಾ. ಬರ್ಗೆಸ್ (Dr. Burgess) ಇವರು ಆ ಸ್ಥಳಕ್ಕೆ ನೇಮಿಸಲ್ಪಟ್ಟರು. ಆಗ ಒಟ್ಟು ಐದು ಸರ್ವೆ ಕ್ಷೇತ್ರಗಳು ಮಾಡಲ್ಪಟ್ಟುವು, (೧) ಮದ್ರಾಸ, (೨) ಮುಂಬಯಿ, (೩) ಪಂಜಾಬ (ಸಿಂಧ ಮತ್ತು ರಜಪುತಸ್ಥಾನ ಸಹಿತ), (೪) ವಾಯುವ್ಯ ಪ್ರಾಂತ (ಮಧ್ಯ ಪ್ರಾಂತ ಸಹಿತ), (೫) ಬಂಗಾಲ (ಅಸಾಮಸಹಿತ).
೧೮೯೫ನೆಯ ಇಸವಿಯಲ್ಲಿ ಪುನಃ ವಿಚಾರ ನಡೆಯಿತು. ಮೂರು ವರ್ಷ ವಿಚಾರ ನಡೆದು, ೧೮೯೭ ನೆಯ ಇಸವಿಯಲ್ಲಿ ಕಾನ್ಸರ್ವೆಶನ್ (Conservation) ಎಂದರೆ ಕಟ್ಟಡ ಮುಂತಾದವುಗಳನ್ನು ರಕ್ಷಿಸುವ ಕೆಲಸವು ರೀಸರ್ಚ್(Research) ಎಂದರೆ ಹೊಸ ಶೋಧಕ್ಕಿಂತ ಮಹತ್ವದ ಕೆಲಸವೆಂದು ನಿರ್ಧರಿಸಲ್ಪಟ್ಟಿತು. ಆಗ ಪುನಃ ಐದು ಸರ್ವೇ ಕ್ಷೇತ್ರಗಳು ಏರ್ಪಟ್ಟುವು. (೧) ಮದ್ರಾಸ (ಕೊಡಗು ಸಹಿತ), (೨) ಮುಂಬಯಿ (ಸಿಂಧ ಮತ್ತು ವರ್ಹಾಡ ಸಹಿತ), (೩) ಪಂಜಾಬ (ಬಲೂಚಿಸ್ಥಾನ ಅಜಮೀರ ಇವುಗಳು ಸಹಿತ), (೪) ವಾಯವ್ಯ ಪ್ರಾಂತ (ಮಧ್ಯ ಪ್ರಾಂತಸಹಿತ), (೫) ಬಂಗಾಲ (ಅಸಾಮ ಸಹಿತ) ಈ ಇಲಾಖೆಗಳೇ ಇನ್ನೂ ಇರುತ್ತವೆ. ಪ್ರತಿಯೊಂದು ಇಲಾಖೆಯ ಮುಖ್ಯಸ್ಥನ ವೇತನವು ಹಿಂದುಸ್ಥಾನ ಸರಕಾರದಿಂದ ಕೊಡಲ್ಪಡುತ್ತದೆ. ಆದರೆ ಅವನು ಪ್ರಾ೦ತಿಕ ಸರಕಾರಕ್ಕೆ ತಾಬೇದಾರನಾಗಿರುತ್ತಾನೆ.
“It is in the exploration and study of purely Indian remains, in the probing of archaic mounds, in the excavation of old Indian cities, and in the copying and reading of ancient inscriptions that a good deal of Indian History is known to us, and can be read by all, but a curtain of dark and romantic mystery hangs over the earlier chapters, of which we are only slowly beginning to lift the corners."
deration for the productions, of our own time-if indeed any are worthy of such-unless we have ourselves shown a like respect to the hand-work of our predecessors. ಸಾರಾಂಶ: – ನಮ್ಮ ಪೂರ್ವಜರ, ಸರೀಕದವರ ಮತ್ತು ವಂಶಜರ ಸಂಬಂಧದಿಂದ ನಾವು ಮಾಡತಕ್ಕದ್ದೊಂದು ಕರ್ತವ್ಯವಿದೆ - ಅಲ್ಲ, ಕೊನೆಯ ಕೊನೆಯ ಇಬ್ಬರ ವಿಷಯವಾಗಿ ನಾವು ಮಾಡಬೇಕಾಗಿರುವ ಕರ್ತವ್ಯವೇ ನಾವು ನಮ್ಮ ಪೂರ್ವಜರ ವಿಷಯವಾಗಿ ಮಾಡತಕ್ಕ ಕರ್ತವ್ಯವಾವುದೆಂಬುದನ್ನು ತೋರಿಸಿಕೊಡುತ್ತದೆ. ಯಾಕಂದರೆ, ನಮ್ಮ ಹಿಂದಿನವರು ಮಾಡಿದ ಕೆಲಸಗಳ ಇಡಿಗಂಟು ನಮ್ಮ ಕಡೆಗೆ ಬಂದಿರುತ್ತದೆ. ಅದನ್ನು ನಾವು ಯೋಗ್ಯ ರೀತಿಯಿಂದ ನಮ್ಮ ವಂಶಜರಿಗೆ ಒಪ್ಪಿಸದಿದ್ದ ಮೂಲಕ ನಾವು ಅನುಭೋಗಿಸುವ ಅದರ ಲಾಭಗಳಿಗೆ ಅವರು ಎರವಾದರೆ ಆ ದೋಷಕ್ಕೆ ನಾವು ಪಾತ್ರರಲ್ಲವೆ? ಇದೂ ಅಲ್ಲದೆ, ನಾವೇ ನಮ್ಮ ಪೂರ್ವಜರ ಕೃತಿಗಳ ಬಗ್ಗೆ ಯೋಗ್ಯವಾದ ಅಭಿಮಾನವನ್ನು ತಾಳದಿದ್ದರೆ ನಮ್ಮ ಕೃತಿಗಳ ಬಗ್ಗೆ (ಅಂಥ ಅಭಿಮಾನ ತಾಳಲಿಕ್ಕೆ ಯೋಗ್ಯವಾದವುಗಳು ಇದ್ದರೆ) ನಮ್ಮ ವಂಶಜರು ಅಭಿಮಾನ ತಾಳಿಯಾರೆಂದು ಆಶಿಸುವುದು ಹೇಗೆ?
ಈ ಪ್ರಕಾರವಾಗಿ, ಇತಿಹಾಸದ ಬಗ್ಗೆ ಯಾವ ಸಂಸ್ಥೆಗಳು ಹಿಂದಕ್ಕೆ ಪ್ರಯತ್ನ ಪಟ್ಟವೆಂಬುದನ್ನೂ ಈಗ ಯಾವುವು ಪ್ರಯತ್ನ ಪಡುತ್ತಿರುವುವೆಂಬುದನ್ನೂ ಹೇಳಿದೆವು.
ಇನ್ನು ಇವರ ಪ್ರಯತ್ನಗಳ ಪರಿಣಾಮವು ಏನಾಗಿರುವದೆಂಬದರ ವಿಷಯಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದ ಸಂಗತಿಗಳನ್ನಷ್ಟೇ ವಿಶೇಷವಾಗಿ ಹೇಳುವೆವು.
ದೃಷ್ಟಿಯಿಂದ ಇವರು ಇವುಗಳನ್ನು ಅವಲೋಕಿಸಿ, ಪುಸ್ತಕವನ್ನು ಬರೆದರು. ಇವರು ನೋಡದೆ ಇದ್ದ ಕಟ್ಟಡಗಳೇ ಇಲ್ಲ, ರೇಲ್ವೆ ಸ್ಟೇಶನದಿಂದ ಬಹು ದೂರದಲ್ಲಿರುವ ಹಳ್ಳಿ ಹಳ್ಳಿಗಳಲ್ಲಿ ಸಹ ಹೋಗಿ ಇವರು ಕಟ್ಟಡಗಳ ಚಿತ್ರವನ್ನು ತೆಗೆದುಕೊಂಡು, ಅದರಿಂದ ಇತಿಹಾಸಕ್ಕೆ ಹೇಗೆ ಸಹಾಯವಾಗುತ್ತದೆಂಬುದನ್ನು ಸಪ್ರಮಾಣವಾಗಿ ತೋರಿಸಿಕೊಟ್ಟಿರುವರು. ಇವರು ಕರ್ನಾಟಕದಲ್ಲಿ, ಬಾದಾಮಿ, ಐಹೊಳೆ, ಪಟ್ಟದಕಲ್ಲ, ಲಕ್ಕುಂಡಿ, ಇಟಗಿ ಮುಂತಾದ ಅನೇಕ ಸ್ಥಳಗಳನ್ನು ನೋಡಿ ಅಲ್ಲಿಯ ಕಟ್ಟಡಗಳನ್ನು ವರ್ಗೀಕರಿಸಿದ್ದಾರೆ. ಇವರ ಶೋಧದಿಂದಲೇ ಹುರುಪುಗೊಂಡು ರಾಯಲ್ ಏಶಿಯಾಟಿಕ್ ಸೊಸಾಯಿಟಿಯವರು, ಇಂಗ್ಲೆಂಡಿನಲ್ಲಿಯ ಕೋರ್ಟ ಆಫ ಡಾಯರೇಕ್ಟರರಿಗೆ ಬರೆದು ಅಜಂತಾಗವಿಯೊಳಗಿನ ಚಿತ್ರಗಳನ್ನು ತೆಗೆಯಲಿಕ್ಕೆ ಹಚ್ಚಿದರು. ಆಮೇರೆಗೆ ರಾಬರ್ಟಗಿಲ್ ಎಂಬವರು ೧೨ ವರ್ಷ ಶ್ರಮಪಟ್ಟು ಅಜಂತೆಯೊಳಗಿನ ಚಿತ್ರಗಳನ್ನು ನಕ್ಷೆ ತೆಗೆದುಕೊಂಡರು. ಆದರೆ ಕನ್ನಡಿಗರ ದುರ್ದೈವದಿಂದ ಅವೆಲ್ಲವೂ ೧೮೫೬ ನೆಯ ದಿಶೆಂಬರ ತಿಂಗಳಲ್ಲಿ ಕ್ರಿಸ್ಟಲ ಪ್ಯಾಲೇಸಿಗೆ ಬೆಂಕಿ ಹತ್ತಿ ಸುಟ್ಟು ಹೋದುವು. ೧೮೪೮ ನೆಯ ಇಸವಿಯಲ್ಲಿ ಡಾ. ವುಯಿಲಸನ ಎಂಬವರ ಅಧ್ಯಕ್ಷತೆಯಲ್ಲಿ ಕೇವ್ಹ ಟೆಂಪಲ್ ಕಮಿಶನ್ (Cave temple Commission) ನೇಮಿಸಲ್ಪಟ್ಟಿತು. ಈ ಕಮಿಶನದವರು, ೧೮೫೦-೫೨ ಇಸವಿಗಳಲ್ಲಿ ಪಶ್ಚಿಮ ಹಿಂದುಸ್ಥಾನದಲ್ಲಿರುವ ಬೌದ್ಧರ ಬ್ರಾಹ್ಮಣರ ಮತ್ತು ಜೈನರ ಗವಿಗುಡಿಗಳ ಮತ್ತು ಮಠಗಳ ಅವಶೇಷಗಳ ವಿಷಯಕ್ಕೆ (Two memoirs of the cave temples and monastries and other ancient Buddhest Brahmanical and Jain Remains of Western India) ಎಂಬೆರಡು ಪುಸ್ತಕಗಳನ್ನು ಪ್ರಸಿದ್ಧ ಪಡಿಸಿದರು. ಮುಂದೆ ಸರ್ ಬಾರ್ಟಲ್ ಫ್ರೀರ್ (Sir Bartle Frere) ಇವರು ಮುಂಬಯಿ ಗವರ್ನರರಿದ್ದಾಗ ಇತ್ತ ಕಡೆಯ ಚಿತ್ರಗಳ ತಸವೀರು ತೆಗೆಯುವುದಕ್ಕಾಗಿ ಒಂದು ಕಮಿಟಿಯು ನೇಮಿಸಲ್ಪಟ್ಟಿತು. ಈ ಕಮಿಟಿಯವರು ಡಾ. ಫರ್ಗ್ಯುಸನ ಇವರ ಸಹಾಯದಿಂದ ಮೂರು ಪುಸ್ತಕಗಳನ್ನು ತೆಗೆದರು. ಅವು ಯಾವುವೆಂದರೆ (೧) ಅಹಮ್ಮದಾಬಾದ, (೨) ಬಿಜಾಪುರ (4) ಮೈಸೂರ ಮತ್ತು ಧಾರವಾಡ. ಡಾ. ಫರ್ಗ್ಯುಸನ ಇವರಿಗೆ ಸರಕಾರದವರ ಸಹಾಯವು
ಇರಲಿಲ್ಲ. ಆದರೂ ಇವರು ಇಷ್ಟು ವಿಲಕ್ಷಣವಾದ ಕೆಲಸವನ್ನು ಮಾಡಿದುದು ನಿಜವಾಗಿಯೇ ಆಶ್ಚರ್ಯಕರವಾದ ಸಂಗತಿಯು. ಇವರು ಬರೆದ “ಶಿಲ್ಪಕಲೆಯ ಇತಿಹಾಸ” (“History of Architecture”) ಎಂಬುದು ಈ ಹೊತ್ತಿಗೂ ಪ್ರಮಾಣ ಗ್ರಂಥವಾಗಿ ಕೂತಿದೆ. ಸುಮಾರು ೬೦ ವರ್ಷಗಳ ಕೆಳಗೆ ಎಮ್. ವಿವೆನ್ ಡಿ ಸೇಂಟ್ ಮಾರ್ಟಿನ್ (M, Vivien De St Martin) ಎಂಬವನು ಹುಏನತ್ಸಾಂಗನು ಹಿಂದುಸ್ಥಾನದಲ್ಲಿ ಯಾವ ಹಾದಿಯಿಂದ ಪ್ರವಾಸ ಮಾಡಿದನೆಂಬುದನ್ನು ಅವನ ಪುಸ್ತಕದ ಮೇಲಿಂದ ಗೊತ್ತು ಹಚ್ಚಿದನು. ಮುಂದೆ ಪ್ರೊ. ವುಯಿಲ್ಸನ್, (Prof. Wilson) ಕರ್ನಲ್ ಯೂಲ್ (Col. Yule) ಮತ್ತು ಜನರಲ್ ಕನಿಂಗಹ್ಯಾಮ್ (General Cunningham) ಮುಂತಾದವರೂ ಈ ವಿಷಯದಲ್ಲಿ ಸುಧಾರಣೆಮಾಡಿದರು.
ಆದರೆ ಹೀಗೆ ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ವಿರಳವಾಗಿ ನಡೆದಿದ್ದರೂ ಈ ವಿಷಯವನ್ನು ಕ್ರಮವಾಗಿ ಅಭ್ಯಾಸಮಾಡುವುದಕ್ಕೆ ೧೮೭೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ (Dr. Burgess) ಇವರು ಇಂಡಿಯನ್ ಎಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ತೆಗೆದಂದಿನಿಂದ ಪ್ರಾರಂಭವಾಯಿತೆಂದು ಹೇಳಬಹುದು. ಡಾ. ಬರ್ಗೆಸ್ (Dr. Burgess) ಇವರು ೧೩ ವರ್ಷ ಆ ಮಾಸಪತ್ರಿಕೆಯನ್ನು ನಡಿಸಿದರು. ಈ ಅವಧಿಯಲ್ಲಿ ಸುಮಾರು ೨೬೦ ಶಿಲಾಲಿಪಿಗಳು ಮುದ್ರಿಸಲ್ಪಟ್ಟಿವೆ. ಮುಂದೆ ಡಾ. ಫ್ಲೀಟ್ (Dr. Fleet) ಮತ್ತು ಸರ್ ರಿಚಾರ್ಡ್ ಟೆಂಪಲ್ (Sir Richard Temple) ಇವರು ಅದಕ್ಕೆ ಸಂಪಾದಕರಾದರು.
೧೮೭೪ನೆಯ ಇಸವಿಯಲ್ಲಿ ಮುಂಬಯಿ ಇಲಾಖೆಯ ಆರ್ಕಿಯಾಲಾಜಿಕಲ ಸರ್ವೆಗೆ ಪ್ರಾರಂಭವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲ ಮುಂತಾದ ಸ್ಥಳಗಳಲ್ಲಿಯ ೫೬ ಚಿತ್ರಗಳುಳ್ಳ ರಿಪೋರ್ಟು ಮುದ್ರಿತವಾಯಿತು. ೧೮೮೯ನೆಯ ಇಸವಿಯಲ್ಲಿ, ವೇರೂಳ, ಅಜಂತಾ, ಕಾರ್ಲೆ, ಕಾನ್ಹೆರಿ, ಜುನ್ನರ, ಭಾಜಾ ಮುಂತಾದ ಸ್ಥಳಗಳಲ್ಲಿಯ ಗುಡಿಗಳ ವಿವರವುಳ್ಳ ಒಂದು ಪುಸ್ತಕವು ಹೊರಡಿಸಲ್ಪಟ್ಟಿತು. ೧೮೯೬ನೆಯ ಇಸಿವಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯ ಚಾಲುಕ್ಯರ ಗುಡಿಗಳ ವಿಷ
ಯಕ್ಕೆ ೧೧೪ ಪ್ಲೇಟಗಳುಳ್ಳ ಒಂದು ರಿಪೋರ್ಟು ಮುದ್ರಿತವಾಗಿದೆ. ೧೮೯೭ನೆಯ ಇಸವಿಯಲ್ಲಿ ಮಿ. ಕೌಝನ್ಸ್ (Mr. Cousens) ಇವರು ಮುಂಬಯಿ ಇಲಾಖೆಯಲ್ಲಿಯ “ಮೊನ್ಯುಮಂಟಲ್ ಆ್ಯಂಟಿಕ್ವಟೀಜ್ ” (Monumental Antiquities) ಎಂಬ ಹೊಸ ಪಟ್ಟಿಯನ್ನು ತಯಾರಿಸಿದ್ದಾರೆ. ಅವರು ಇದೇ ವಿಷಯವಾಗಿ ಹೊಸದೊಂದು ಪುಸ್ತಕವನ್ನು ಬರೆಯ ಹತ್ತಿದ್ದಾರೆ. ಅಜಂತಾ ಗವಿಯಲ್ಲಿಯ ಚಿತ್ರಗಳು ೧೮೬ನೆಯ ಇಸವಿಯಲ್ಲಿ ಸುಟ್ಟು ಹೋದ ಸಂಗತಿಯನ್ನು ನಾವು ಮೇಲೆ ತಿಳಿಸಿರುವೆವಷ್ಟೆ, ಆದರೆ ಮುಂದೆ ಪುನಃ ಜಾನ್ ಗ್ರಿಫಿಥ್ (John Griffith) ಎಂಬವರು ಪುನಃ ಅವುಗಳನ್ನು ಪರಿಶ್ರಮಪಟ್ಟು ತೆಗೆದುಕೊಂಡಿದ್ದರು. ಆದರೆ ನಮ್ಮ ಕಡುತರವಾದ ದುರ್ದೈವದಿಂದ ಅವರು ತಗೆದುಕೊಂಡ ೩೩೪ ಚಿತ್ರಗಳಲ್ಲಿ ೧೭೫ ಚಿಕ್ಕ ದೊಡ್ಡ ಚಿತ್ರಗಳು ನಾಶವಾದವು, ಇಲ್ಲವೆ ಕೆಟ್ಟು ಹೋದವು. ಇತ್ತ ಕಡೆಗೆ ಮಿ. ಗ್ರಿಫಿಥ್ (Mr. Griffith) ಇವರು ೧೫೯ ಪ್ಲೇಟುಗಳುಳ್ಳ ಆ ವಿಷಯಕವಾದ ಒಂದು ಪುಸ್ತಕವನ್ನು ಮುದ್ರಿಸಿದ್ದಾರೆ.
೧೮೭೨ನೆಯ ಇಸವಿಯಲ್ಲಿ ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ಡಾ. ಬರ್ಗೆಸ್ (Dr. Burgess) ಇವರು ಪ್ರಾರಂಭಮಾಡುವ ಪೂರ್ವದಲ್ಲಿ ಬಹುಶಃ ಲಿಪಿಗಳನ್ನು ಎಲ್ಲ ರಾಯಲ್ ಏಶಿಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ (Bombay Branch of the Royal Asiatic Society)ಯವರೇ ಮುದ್ರಿಸಿರುತ್ತಾರೆಂದು ಹೇಳಿರುವವಷ್ಟೆ. ಅವರು ಮುದ್ರಿಸಿರುವ ಲೇಖಗಳ ವಿವರವನ್ನು ಇಲ್ಲಿ ಕೊಡುವೆವು. ಮುಂಬಯಿ ಇಲಾಖೆಯಲ್ಲಿ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ಅಶೋಕನ ಜುನಾಗಡದಲ್ಲಿಯ ಲಿಪಿಗಳು (ಕ್ರಿ.ಶ.ಪೂ. ೨೪೫). ಅವು ಒಂದನೇ ಸಂಪುಟದಲ್ಲಿ ಮುದ್ರಿತವಾಗಿವೆ. ಅನಂತರದ ಲಿಪಿಗಳೆಂದರೆ, ಗುಡ್ಡದ ಗವಿಯೊಳಗಿನ ಲಿಪಿಗಳು. ಈ ಲಿಪಿಗಳು ಶಾತವಾಹನ ಅಥವಾ ಶಾಲಿವಾಹನ ಮನೆತನಕ್ಕೆ ಸಂಬಂಧಿಸಿರುತ್ತವೆ. ಇವು ನಾಸಿಕ, ಕಾರ್ಲೆ, ನಾನಘಾಟ, ಕಾನ್ಹೆರಿ, ಭಾಜಾ, ಜುನ್ನರ ಕೂಡ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ. ಅವುಗಳೊಳಗೆ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ನಾಸಿಕದ ಲಿಪಿಗಳು, ಈ ಲಿಪಿಗಳಲ್ಲಿ ಶಾತವಾಹನ ಮನೆತನಕ್ಕೆ ಸೇರಿದ ಕೃಷ್ಣರಾಜನ ಹೆಸರು ದೊರೆಯುತ್ತದೆ. ಕಾನ್ಹೆರಿ, ನಾಸಿಕ, ಭಾಜಾ
ಮತ್ತು ಕೂಡ ಇಲ್ಲಿಯ ಲೇಖಗಳನ್ನು ಲೆಫ್ಟಿನೆಂಟ್ ಬ್ರಾಟ್ (Lieut. Brat) ಎಂಬವರು ೧೮೫೪ನೆಯ ಇಸವಿಯಲ್ಲಿ ರಾಯಲ್ ಏಶಿಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ (Bombay Branch of the Royal Asiatic Society)ಯ ಮಾಸಪತ್ರಿಕೆಯ ೫ ನೇ ಸಂಪುಟ (Vol.) ನಲ್ಲಿ ಮುದ್ರಿತವಾಗಿರುತ್ತವೆ. ಆರನೆಯದರಲ್ಲಿ ಕಾನ್ಹೆರಿಯ ವಿಷಯಕ್ಕೆ ಉತ್ತಮವಾದ ಲೇಖಗಳು ಮುದ್ರಿತವಾಗಿವೆ. ೭ನೆಯದರಲ್ಲಿ ನಾಸಿಕದ ಲೇಖಗಳಿವೆ. ೮ನೆಯದರಲ್ಲಿ ಬಾಡ್ಸಾ ವಿಷಯಕ ಲೇಖಗಳಿವೆ. ಶಾತವಾಹನರು ೨ನೆಯ ಶತಮಾನದವರೆಗೆ ಆಳಿದರು. ಮುಂದೆ ೫ನೆಯ ಶತಮಾನದವರೆಗೆ ಯಾರು ಆಳಿದರೆಂಬುದು ಚೆನ್ನಾಗಿ ಗೊತ್ತಾಗುವುದಿಲ್ಲ. ಬಹಳವಾಗಿ ತ್ರೈಕೂಟರೆಂಬವರು ಆಳಿದಂತೆ ತೋರುತ್ತದೆ. ಅವರದೊಂದು ತಾಮ್ರಶಾಸನವು ಕಾನ್ಹೆರಿಯಲ್ಲಿ ದೊರೆತ್ತಿದ್ದು, ಅದು ೫ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ಮತ್ತೊಂದು ೧೬ನೆಯದರಲ್ಲಿ ಮುದ್ರಿತವಾಗಿದೆ.
ಇನ್ನು, ಚಾಲುಕ್ಯರ ವಿಷಯವಾಗಿ ಈ ಸೊಸಾಯಿಟಿಯ ಮಾಸಪತ್ರಿಕೆಯಲ್ಲಿ ಯಾವ ಲೇಖಗಳಿರುತ್ತವೆಂಬುದನ್ನು ನೋಡುವ. ೨ನೆಯ ಸಂಪುಟದಲ್ಲಿ ಚಾಲುಕ್ಯ ವಿಷ್ಣುವರ್ಧನನ ತಾಮ್ರಶಾಸನವು ಮುದ್ರಿತವಾಗಿದೆ. ಅದರಲ್ಲಿಯೇ ಪುಲಕೇಶಿಯ ತಮ್ಮನಾದ ಜಯಸಿಂಹನಂಬವನ ಮಗನಾದ ನಾಗವರ್ಧನನ ತಾಮ್ರಶಾಸನಗಳು ಮುದ್ರಿತವಾಗಿವೆ. ೧೮೫೧ನೆಯ ಇಸವಿಯಲ್ಲಿ ನೇರೂರಲ್ಲಿ ದೊರೆತ ಎರಡು ತಾಮ್ರ ಶಾಸನಗಳೂ ೯ನೆದರಲ್ಲಿ ಮುದ್ರಿತವಾಗಿವೆ. ಅವುಗಳಲ್ಲಿ ಒಂದು ಚಾಲುಕ್ಯರ ೯ನೆಯ ಅರಸನಾದ ವಿಜಯಾದಿತ್ಯನದು; ಮತ್ತೊಂದು ಪುಲಕೇಶಿಯ ಮಗನಾದ ಚಂದ್ರಾದಿತ್ಯನೆಂಬವನ ಹೆಂಡತಿಯಾದ ವಿಜಯಭಟ್ಟಾರಿಕಾ ಎಂಬವಳದು. ಅದೇ ವಿಜಯಭಟ್ಟಾರಿಕೆಯ ಕೋಚೇರಮ್ ದಲ್ಲಿ ದೊರೆತ ಮತ್ತೊಂದು ತಾಮ್ರಶಾಸನವು ೯ನೆಯದರಲ್ಲಿ ಮುದ್ರಿತವಾಗಿದೆ. ೧೦ನೆಯದರಲ್ಲಿ ರೇವತಿ ದ್ವೀಪದಿಂದ ಸತ್ಯಾಶ್ರಯನು (ಪುಲಿಕೇಶಿಯು) ಮತ್ತು ರಾಜೇಂದ್ರ ವರ್ಮನೆಂಬವನು ೫೩೨ನೆಯ ಶಕದಲ್ಲಿ ಕೂರಿಸಿದ ತಾಮ್ರಶಾಸನವು ಅಚ್ಚು ಹಾಕಲ್ಪಟ್ಟಿದೆ. ೯ನೆಯದರಲ್ಲಿ ಡಾ. ಭಾವುದಾಜೀಯವರು ಧಾರವಾಡ ಮತ್ತು ಮೈಸೂರ ಶಿಲಾಲೇಖಗಳ ಬಗ್ಗೆ ಬರೆದಿರುವರು. ೧೪ನೆಯ ಸಂಪುಟದಲ್ಲಿ, ಹಿಂದಕ್ಕೆ ಹೇಳಿದ ನಾಗವರ್ಧನನ ತಾಮ್ರಶಾಸನದ ಸುಧಾರಿಸಿದ ಆವೃತ್ತಿಯು ಪ್ರಸಿದ್ಧವಾಗಿದೆ.
೧೬ನೆಯದರಲ್ಲಿ, ಡಾ. ಫ್ಲೀಟರವರು ಚಾಲುಕ್ಯರ ಗುಜರಾಥದಲ್ಲಿಯ ಶಾಖೆಯ ಅರಸನಾದ ೨ನೆಯ ಪುಲಿಕೇಶಿಯ ಮಗನಾದ ಆದಿತ್ಯವರ್ಮನ ತಾಮ್ರ ಶಾಸನವು ಮುದ್ರಿತವಾಗಿದೆ. ಇದಲ್ಲದೆ, ಒಂದನೆಯ ವಿಕ್ರಮಾದಿತ್ಯನ ಮೂರು ತಾಮ್ರ ಶಾಸನಗಳೂ ವಿಜಯಾದಿತ್ಯನ ಒಂದು ತಾಮ್ರ ಶಾಸನವೂ ಮುದ್ರಿತವಾಗಿವೆ.
ರಾಷ್ಟ್ರಕೂಟ– ೨ನೆಯ ಸಂಪುಟದಲ್ಲಿ, ಸಾಮನಗಡದಲ್ಲಿ ಸಿಕ್ಕಿದ ತಾಮ್ರ ಶಾಸನವು (೯೭೫ ಶಕ) ಮುದ್ರಿತವಾಗಿದೆ. ೩ನೆಯದರಲ್ಲಿ, ರಾಷ್ಟಕೂಟದ ೧೫ನೆಯ ಅರಸನಾದ ೪ನೆಯ ಗೋವಿಂದನೆಂಬವನ ೮೫೫ನೆಯ ಶಕದ ಸಾಂಗಲಿಯಲ್ಲಿಯ ದೊರೆತ ತಾಮ್ರ ಶಾಸನವು ಮುದ್ರಿತವಾಗಿದೆ. ೧೮ನೆಯ ಸಂಪುಟದಲ್ಲಿ ೮೬೨ ಶಕದ ೩ನೆಯ ಕೃಷ್ಣನೆಂಬವನ ದೇವಳೆಯಲ್ಲಿಯ ದೊರೆತ ತಾಮ್ರ ಶಾಸನವು ಮತ್ತು ೧೩ನೆಯ ಅರಸನಾದ ೩ನೆಯ ಇಂದ್ರನ ನವಸರಿಯಲ್ಲಿ ದೊರೆತ ೮೩೬ನೆಯ ಶಕದ ಶಾಸನವೂ ಮುದ್ರಿತವಾಗಿವೆ. ೧೦ನೆಯ ಸಂಪುಟದಲ್ಲಿ, ಮಾಂಡಲೀಕ ಆರಸನಾದ ಪೃಥ್ವಿ ವರ್ಮನೆಂಬವನು ಸುಗಂಧವರ್ತಿ(ಸವದತ್ತಿ)ಯನ್ನು ೮೯೬ನೆಯ ಶಕದಲ್ಲಿ ಜೈನಗುಡಿಗೆ ದಾನಕೊಟ್ಟ ಶಿಲಾಲೇಖವೂ ಮತ್ತೂ ಒಂದು ೮೩೪ನೆಯ ಶಕದಲ್ಲಿ ಮುಳಗುಂದದಲ್ಲಿ ಜೈನ ಗುಡಿ ಕಟ್ಟಿದ ಶಿಲಾಲೇಖಗಳೂ ಮುದ್ರಿತವಾಗಿವೆ. ೧ನೆಯ ಸಂಪುಟದಲ್ಲಿ ಖಾರೆಪಟ್ಟಣದಲ್ಲಿಯ ಶಾಸನವು ೧೮೪೩ನೆಯ ಇಸವಿಯಲ್ಲಿ ಮುದ್ರಿತವಾಯಿತು.
ಚಾಲುಕ್ಯರು- ಇವರ ಶಿಲಾಲೇಖಗಳು ಈ ಮಾಸಪತ್ರಿಕೆಯಲ್ಲಿ ಬಹಳವಾಗಿ ದೊರೆಯುವುದಿಲ್ಲ. ೯ನೆಯ ಸಂಪುಟದಲ್ಲಿ ತ್ರಿಭುವನಮಲ್ಲ ವಿಕ್ರಮಾದಿತ್ಯನ ಶಿಲಾಲೇಖವಿದೆ. ೧೦ನೆಯದರಲ್ಲಿ ತೈಲಪದೇವನ ಮಾಂಡಲಿಕ ಅರಸನಾದ ಶಾಂತಿ ವರ್ಮನೆಂಬವನು ೯೦೨ನೆಯ ಶಕದಲ್ಲಿ ಸವದತ್ತಿಯಲ್ಲಿ ಜೈನಗುಡಿಗೆ ಕೊಟ್ಟ ತಾಮ್ರಶಾಸನವುಂಟು. ಮತ್ತೊಂದರಲ್ಲಿ ಕಾರ್ತವೀರ್ಯನ ಹೆಸರು ಇರುತ್ತದೆ. ೩ನೆಯದರಲ್ಲಿ ತ್ರಿಭುವನಮಲ್ಲನ ಮಾಂಡಲಿಕನಾದ ಸೇನನೆಂಬವನ ಹೆಸರುಂಟು. ೧೧ನೆಯದರಲ್ಲಿ ಡಾ. ಫ್ಲೀಟ ಇವರು ಸಿಂದವಂಶದ ಶಿಲಾಲೇಖಗಳನ್ನು ಮುದ್ರಿಸಿದ್ದಾರೆ. ಈ ಸಿಂದವಂಶದ ಶಿಲಾಲೇಖಗಳು ೨-೩-೪ನೆಯ ಸಂಪುಟಗಳಲ್ಲಿಯೂ ಉಂಟು.
ಕಲಚೂರ್ಯರು- ಕಲಚೂರಿಯ ಬಿಜ್ಜಣನ ಮಗನಾದ ಸೋಮನೆಂಬವನ ತಾಮ್ರಶಾಸನವು ೧೮ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ೨ನೆಯದರಲ್ಲಿ ಯಾದವರ ೭ ಶಿಲಾಲೇಖಗಳು ಮುದ್ರಿತವಾಗಿವೆ. ೯ನೆಯದರಲ್ಲಿ ೧ ಮುದ್ರಿತವಾಗಿದೆ, ಮತ್ತು ೧೫ನೆಯ ಸಂಪುಟದಲ್ಲಿಯೂ ಯಾದವರ ಒಂದು ಲೇಖವು ಮುದ್ರಿತವಾಗಿದೆ. ಕೊಲ್ಲಾಪುರ ಶಿಲಾಹಾರವಂಶದಲ್ಲಿ ೧೫ ಮಂದಿ ಅರಸರು ಆಳಿದರು. ಅವರ ಶಿಲಾಲೇಖಗಳು ೨|೩|೧೩ ನೆಯ ಸಂಪುಟದಲ್ಲಿ ಅಚ್ಚಾಗಿವೆ.
ಈ ಮಾಸಪತ್ರಿಕೆಯೊಳಗಿನ ಲೇಖಗಳಲ್ಲದೆ, ಮತ್ತೆ ಕೆಲವರ ಪ್ರಯತ್ನಗಳಿಂದ ಕರ್ನಾಟಕಕ್ಕೆ ಅತಿಶಯವಾಗಿ ಸಹಾಯವಾಗಿದೆ. ಈ ಬಗೆಯಾಗಿ ಪ್ರಯತ್ನ ಮಾಡಿದವರಲ್ಲಿ, ಸರ್ ವಾಲ್ಟರ್ ಇಲಿಯಟ್ (Sir Walter Elliot) ಎಂಬವರೇ ಮೊದಲನೆಯವರು. ಇವರು ಮದ್ರಾಸ ಇಲಾಖೆಯಲ್ಲಿ ಸರಕಾರೀ ಅಧಿಕಾರಸ್ಥರಾಗಿದ್ದರು. ಇವರು ೭-೮ ವರ್ಷ ಸತತ ಶ್ರಮಪಟ್ಟು ಕರ್ನಾಟಕ ಪ್ರಾಂತ, ನಿಜಾಮರಾಜ್ಯದ ಪಶ್ಚಿಮಭಾಗ ಮತ್ತು ಮೈಸೂರು ಪ್ರಾಂತದ ಉತ್ತರ ಭಾಗ ಈ ಮೂರು ಪ್ರದೇಶಗಳೊಳಗಿನ ಸುಮಾರು ೧೩೦೦ ಶಿಲೆಯ ಮತ್ತು ತಾಮ್ರ ಶಾಸನಗಳ ಲೇಖಗಳನ್ನು ಕೂಡಿಹಾಕಿದರು. ಅವುಗಳಲ್ಲಿ ಸ್ವಚ್ಛವಾದ ೫೯೫ ಲೇಖಗಳನ್ನು ಬೇರೆ ತಗೆದು, ಒಂದೊಂದರ ನಾಲ್ಕು ನಾಲ್ಕು ಪ್ರತಿಗಳನ್ನು ಮಾಡಿಸಿದರು. ಅವುಗಳಲ್ಲೊಂದು ಎಡಿನ್‌ಬರೋ: ಪಟ್ಟಣದಲ್ಲಿರುವ ವಿಶ್ವ ವಿದ್ಯಾಲಯದ ಪುಸ್ತಕಾಲಯ (Edinborough University Library) ದಲ್ಲಿ ಕರ್ನಾಟಕದ ಲೇಖಗಳು (Karnataka Inscriptions) ಎಂಬ ಹೆಸರಿನಿಂದ ಎರಡು ಸಂಪುಟಗಳಾಗಿ ಈಗೂ ಇರುತ್ತವೆ. ಮತ್ತೊಂದು ಲಂಡನ ಪಟ್ಟಣದಲ್ಲಿರುವ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ (Royal Asiatic Society, London) ಲಾಯಬ್ರರಿಯಲ್ಲಿ ಇರುತ್ತದೆ. ಮಿಕ್ಕ ಎರಡು ಪ್ರತಿಗಳ ಅವಸ್ಥೆಯೇನಾಗಿದೆಯೋ ಗೊತ್ತೇ ಇಲ್ಲ. ಸರ್ ವಾಲ್ಟರ್ ಇಲಿಯಟ್ ಇವರು ಈ ೫೯೫ ಲೇಖಗಳ ಇತ್ಯರ್ಥವನ್ನು ತೆಗೆದು ಒಂದು ಪ್ರಬಂಧವನ್ನು ಬರೆದು ಅವರು ಅದನ್ನು ಲಂಡನ ಸೊಸಾಯಿಟಿಯ ಮುಂದೆ ೧೮೩೬ನೆಯ ಇಸವಿಯ ಜುಲೈ ತಿಂಗಳಲ್ಲಿ ಓದಿದರು. ಅದು ಹಿಂದು ಶಿಲಾಲೇಖಗಳು (Hindu Inscriptions) ಎಂಬ ಹೆಸರಿನಿಂದ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ
ಹಳೆಯ ಮಾಸಪತ್ರಿಕೆಗಳ ನಾಲ್ಕನೆಯ ಸಂಪುಟದ ೧ನೇ ಪುಟದಲ್ಲಿ (Journal of the Royal Asiatic Society old Series vol. IV page 1 &c.) ಅಲ್ಲಿ ಮುದ್ರಿತವಾಗಿದೆ. ಮುಂದೆ ಅದರಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ, ಅವರು ಅದನ್ನು ವಾಙ್ಮಯ ಮತ್ತು ಶಾಸ್ತ್ರ ಇವುಗಳ ಸಂಬಂಧಪಟ್ಟ ಮದ್ರಾಸ್ ಜರ್ನಲಿನ ೭ನೆಯ ಸಂಪುಟದ ೧೯೩ನೆಯ ಪುಟ (Madras Journal of the Literature and Science vol. VII page 193) ದಲ್ಲಿ ಪ್ರಸಿದ್ಧಗೊಳಿಸಿರುವರು.
ಅನಂತರ ಕರ್ನಲ ಮೆಕೆಂಝಿ ಸಾಹೇಬರು ದಕ್ಷಿಣ ಹಿಂದುಸ್ಥಾನದೊಳಗಿನ ಅನೇಕ ಪ್ರಾಚೀನ ಶಿಲಾಲೇಖಗಳನ್ನೂ ತಾಮ್ರ ಪಟಗಳನ್ನೂ ಮುದ್ರಣ ತೆಗೆದು ಕೊಂಡು ದೊಡ್ಡ ಸಂಗ್ರಹ ಮಾಡಿರುವರು. ಅದು ಇನ್ನೂ ಪ್ರಸಿದ್ದವಾದಂತೆ ತೋರಲಿಲ್ಲ.
ಇತ್ತ ಮೈಸೂರಲ್ಲಿ ಮೈಸೂರು ಸರಕಾರದವರು, ಮೇಜರ್ ಡಿಕ್ಸನ್ (Major Dixon) ಇವರು ತೆಗೆದುಕೊಂಡ ತಸಬೀರುಗಳನ್ನು ಮುದ್ರಿಸಿದರು. ಮೇಜರ್ ಡಿಕ್ಸನ್ (Major Dixon) ಸಾಹೇಬರು ಮೈಸೂರು ಸರಕಾರದ ಆಶ್ರಯದಿಂದ, ಚಿತ್ರಕಲ್ಲುದುರ್ಗ, ಬಳ್ಳೆಗಾಂವಿ, ಹರಿಹರ ಮುಂತಾದುವುಗಳಲ್ಲಿಯು ಸುಮಾರು ೯೦ ಲೇಖಗಳನ್ನು ೧೮೬೫ ನೆಯ ಇಸವಿಯಲ್ಲಿ ಪ್ರಸಿದ್ಧ ಪಡಿಸಿದರು.
ಡಾ. ಪಿಗು ಮತ್ತು ಕರ್ನಲ್ ಟ್ರಸ್ಟ್ ಈ ಉಭಯರು ಧಾರವಾಡ ಮತ್ತು ಮೈಸೂರ ಪ್ರಾಂತಗಳೊಳಗಿನ ಸುಮಾರು ೬೦ ಶಿಲಾಲೇಖಗಳ ತಸಬೀರು ತೆಗೆದು ಕೊಂಡಿದ್ದರು. ಅವುಗಳ ಆಧಾರದಿಂದ ವಿ||. ಹೋಪ್ ಎಂಬವರು ಸರಕಾರದವರ ಸಹಾಯದಿಂದ ಧಾರವಾಡ ಮತ್ತೂ ಮೈಸೂರುಗಳಲ್ಲಿಯ ಶಿಲಾಲೇಖಗಳು (Inscriptions in Dharwar and Mysore) ಎಂಬ ಪುಸ್ತಕದಲ್ಲಿ ೬೪ ಶಿಲಾಲಿಪಿಗಳ ತಸಬೀರುಗಳನ್ನು ಮುದ್ರಿಸಿದರು. ಆದರೆ ಇದರ ಹತ್ತೇ ಪ್ರತಿಗಳು ಮುದ್ರಿತವಾಗಿದ್ದುವು. ಅವು ಇರುವ ವಿವರ:- (೧) ರಾಯಲ್ ಏಶಿಯಾಟಿಕ್ ಲಾಯಬ್ರರಿ ಲಂಡನ್ (Royal Asiatic Society London). (೨) ಸೊಸಾಯಿಟಿ ಏಶಿಯಾಟಿಕ್ ಪಾರೀಸ್ (Society Asiatic Paris). (೩) ಆಯಲ್ ಒರಿಯಂಟಲ್ ಸೊಸಾಯಿಟಿ, ಲೀಪ್ಸಿಕ್ (Royal Oriental
Society Leepzic), (೪) ಇಂಡಿಯಾ ಆಫೀಸ್ ಲಾಯಬ್ರರಿ, ಲಂಡನ್ (India Office Library London). (೫) ಮಿಸ್ ಥಾಮಸ್ (Miss. Thomas), ಮಿಕ್ಕ ಪ್ರತಿಗಳು ಮುಂಬಯಿಗೆ ಕಳುಹಿಸಲ್ಪಟ್ಟಿದ್ದುವು. ಅವುಗಳ ಪತ್ತೆ ಇಲ್ಲ.
ಅದರ ಮೇಲೆ ಹೇಳಿದ ಸಂಗ್ರಹಗಳು ದೊರೆಯಲಿಕ್ಕೆ ಕಠಿಣವಾದುದರಿಂದ ಅವುಗಳನ್ನು ಒಟ್ಟಿಗೆ ಕೂಡಿಸಿ ಕ್ರಮವಾಗಿ ಒಂದೇ ಗ್ರಂಥದಲ್ಲಿ ಇಂಡಿಯಾ ಅಫೀಸ್ (Indian Office) ನ ವತಿಯಿಂದ ೧೮೭೮ನೆಯ ಇಸವಿಯಲ್ಲಿ ಡಾಂ, ಫ್ಲೀಟ ಎಂಬವರು ಮುದ್ರಿಸಿದರು. ಈ ಪುಸ್ತಕದ ಹೆಸರು (Pali Sanskrit and Old Kanarese Inscriptions from the Bombay Presidency and Parts of the Madras Presidency and Mysore.) ಮುಂಬಯಿ ಇಲಾಖೆಯ ಮತ್ತು ಮದ್ರಾಸ ಇಲಾಖೆಯ ಮತ್ತು ಮೈಸೂರು ಪ್ರಾಂತದ ಕೆಲವು ಭಾಗಗಳಲ್ಲಿಯ ಪಾಲೀ, ಸಂಸ್ಕೃತ ಮತ್ತು ಹಳೆ ಕನ್ನಡ ಭಾಷೆಗಳಲ್ಲಿರುವ ಲೇಖಗಳು, ಆದರೆ ಇದರ ಒಂಭತ್ತೇ ಪ್ರತಿಗಳು ಮುದ್ರಿತವಾಗಿದ್ದುವು, ಅವು ಮುಂದೆ ಹೇಳಿದ ಸ್ಥಳಗಳಲ್ಲಿ ಇರುತ್ತವೆ, (೧) ಇಂಡಿಯಾ ಆಫೀಸ್, ಲಂಡನ್ (India Office, London). (೨) ಬ್ರಿಟಿಷ್ ಮ್ಯುಝೀಯಮ್, ಲಂಡನ್ (British Museum, London). (೩) ರಾಯಲ್ ಏಶಿಯಾಟಿಕ್ ಸೊಸಾಯಟಿ, ಲಂಡನ್ (Royal Asiatic Society, London), (೪) ಮುಂಬಯಿ ಸೆಕ್ರೆಟರೇಟ್ (The Bombay Secretariat), (೫) ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಶಾಖೆ (The Bombay Branch of the Royal Asiatic Society). (೬) ಆನ್. ಮಿ. ಗಿಬ್ಬ (The Hon. Mr. Gibbs), (೭) ಡಾ. ಬರ್ಗ್‌ಸ್ (Dr. Burgess), (೮) ಡಾ. ಫ್ಲೀಟ್ (Dr. Fleet), (೯) ಬಾಡ್ಲಿಯನ್ ಲಾಯಬ್ರರಿ (Bodlean Library).
ಪ್ರೊ. ಡಾವುಸನ್ (Prof. Dowson) ಎಂಬವರು ರಾಯಲ್ ಏಶಿಯಾಟಿಕ್ ಸೊಸಾಯಿಟಿ(Journal of the Royal Asiatic Society)
ಯ ಮಾಸಪತ್ರಿಕೆಯಲ್ಲಿ ಹಲಕೆಲವು ಲಿಪಿಗಳನ್ನು ಅಚ್ಚು ಹಾಕಿಸಿದ್ದಾರೆ. ಅಲ್ಲದೆ, ಅವರು ದಕ್ಷಿಣದೊಳಗಿನ ಚಾಲುಕ್ಯರಾಜರ ವಿಷಯಕ್ಕೆ ಆ ಸೊಸಾಯಿಟಿಯ ಒಂದನೆಯ ವಾಲ್ಯೂಮ(New Series) ದಲ್ಲಿ ಒಂದು ಲೇಖವನ್ನು ಬರೆದಿರುವರು. ಇದಲ್ಲದೆ, ಪಂಡಿತ ಬಾಳ ಗಂಗಾಧರಶಾಸ್ತ್ರಿ, ಸರ್ ಲಿಗ್ರಾಂಡ, ಜೇಕಬ, ಮತ್ತು ಕ್ಯಾಪ್ಟನ ಜರ್ನಿಸ ಇವರು ಚಾಲುಕ್ಯರ ವಿಷಯವಾಗಿ ಕೆಲವು ಲೇಖಗಳನ್ನು ಮುದ್ರಿಸಿದ್ದಾರೆ. (Journa1 Bom.R.As.vol.II,III; J.R.A.S. vol. IX) ಮುಂಬಯಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಸಂಪುಟ ೨, ೩ ಮತ್ತು ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ೯ನೆಯ ಸಂಪುಟಗಳಲ್ಲಿ ಮಿಸ್ತರ್ ವ್ಯಾಥೆನ್ ಇವರು ಚಾಲುಕ್ಯರ ವಂಶಾವಳಿಯನ್ನು ಪ್ರಸಿದ್ದಗೊಳಿಸಿದ್ದಾರೆ. (J.R.A.S. vol. V 345); ಪಂಡಿತ ಕಾಶಿನಾಥ ತೆಲಂಗ ಇವರು ತೈಲಪನ ಪೂರ್ವದಲ್ಲಿ ಆದ ಚಾಲುಕ್ಯರ ವಿಷಯವಾಗಿ ಒಂದು ನಿಬಂಧವನ್ನು ಬರೆದು ಅದನ್ನು ಮುಂಬಯಿ ಸೊಸಾಯಿಟಿಯ ಜರ್ನಲಿನಲ್ಲಿ ಮುದ್ರಿಸಿದ್ದಾರೆ. (Jour. B.R.A.S.vol. X348-367): ಡಾ. ಟೇಲರ್ ಎಂಬುವವರು ಟ್ರಾನ್ಸಾಕ್ಶನ್ಸ್ ಆಫ್ ಲಿಟರರಿ ಸೊಸಾಯಟಿ ಮುಂಬಯಿ (Transactions of the Literary Society of Bombay) ಎಂಬುದರಲ್ಲಿಯೂ ಅನೇಕ ಲೇಖಗಳನ್ನು ಬರೆದಿರುವರು.
ಆದರೆ, ಇವೆಲ್ಲ ತೀರ ಅವಾದ ಪ್ರಯತ್ನಗಳು. ಒಂದೇ ಸಮನಾಗಿ ನಡೆದುವುಗಳಲ್ಲ. ೧೮೮೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ (Dr. Burgess) ಇವರು ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ತೆಗದಂದಿನಿಂದ ಈ ವಿಷಯವು ಒಂದೇ ಸಮನಾಗಿ ಚರ್ಚಿಸಲ್ಪಡಹತ್ತಿರುತ್ತದೆ. ಡಾ. ಬುಲ್ಕರ, ಪ್ರೊ. ಇಗ್ಲಿಂಗ್, ಮಿ. ಕಿಟೆಲ್, ವಿ. ರೆನ್, ರೆ.ಫೋಕ್ಸ್, ಡಾ. ಭಂಡಾರ್‌ಕರ್, ಪ್ರೊ.ಭಗವಾನ್ ಲಾಲ್ ಇಂದ್ರಜಿ, ಮಿ. ಪಂಡಿತ, ಮಿ. ತಲಂಗ, ಪ್ರೊ. ಪಾಠಕ, ಡಾ. ಫ್ಲೀಟ್ (Dr. Buther, Prof. Igling, Mr. Kittel, Mr Ren, Revd. Folkes, Dr. Bhandarkar, Prof. Bhagavan lal Indraji, Mr S. P. Pandit, Mr. K.T. Telang, Prof. Pathak, Dr.
Fleet) ಇವರೇ ಮುಂತಾದವರು ಈ ವಿಷಯವಾಗಿ ಲೇಖಗಳನ್ನು ಬರೆದಿರುವರು, ಇವೆಲ್ಲವುಗಳಲ್ಲಿ ಡಾ. ಫ್ಲೀಟ್ ರು ಶೋಧಿಸಿದ ಲಿಪಿಗಳೇ ಹೆಚ್ಚು. ೧೮೭೯ನೆಯ ಇಸವಿಯಲ್ಲಿ ಮಿ, ರಾಯಿಸ್ (Mr. Rice) ಇವರು ಡಿಕ್ಸನ್ (Dixon) ಇವರ ಸಂಗ್ರಹವನ್ನೂ ತಮ್ಮ ಸಂಗ್ರಹವನ್ನೂ ಒಟ್ಟುಗೂಡಿಸಿ ಮೈಸೂರಿನ ಲೇಖಗಳು (Mysore Inscriptions) ಎಂಬ ಪುಸ್ತಕವನ್ನು ಮುದ್ರಿಸಿದ್ದಾರೆ.
ಇಂಡಿಯನ್ ಆ್ಯಂಟಿಕ್ವರಿ (Indian Antiquiary) ಎಂಬ ಮಾಸ ಪತ್ರಿಕೆಯು ಹೊರಡುವ ಪೂರ್ವದಲ್ಲಿಯ ಲೇಖಗಳು ಅಲ್ಲೊಂದು ಇಲ್ಲೊಂದು ಇರುವುದರಿಂದ, ವಾಚಕರಿಗೆ ಅವುಗಳನ್ನು ಕೈಲಾದಮಟ್ಟಿಗೆ ಗೊತ್ತು ಮಾಡಿಕೊಟ್ಟಿರುವೆವು. ಆ ಮಾಸಪತ್ರಿಕೆಯಲ್ಲಿ ಕರ್ನಾಟಕ ಇತಿಹಾಸದ ವಿಷಯವಾಗಿ ಎಷ್ಟು ಲಿಪಿಗಳು ಮತ್ತು ಯಾವ ಲೇಖಗಳು ಬಂದಿರುತ್ತವೆಂಬುದರ ಯಾದಿಯನ್ನು ಕೊಡಬೇಕೆಂದು ಹವಣಿಸಿದ್ದವು. ಆದರೆ ಅದನ್ನು ತಯಾರಿಸಲಿಕ್ಕೆ ಕಾಲಾವಧಿಯು ಬೇಕು. ಮತ್ತು ಇತಿಹಾಸವನ್ನು ಅಭ್ಯಾಸಮಾಡುವವರಿಗೆ ಕೆಲವು ಮಟ್ಟಿಗಾದರೂ ಅನುಕೂಲವಾಗಬೇಕೆಂದು ನಮ್ಮ ಮಿತ್ರರ ಸೂಚನೆಯ ಮೇರೆಗೆ ಈ ಪುಸ್ತಕವನ್ನು ಅವಸರದಿಂದ ಅಪೂರ್ಣಾವಸ್ಥೆಯಲ್ಲಿಯೇ ತೆಗೆದಿರುವೆವು.
ಕೊನೆಗೆ ಸೂಚಿಸುವುದೇನಂದರೆ ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಪತ್ರಿಕೆಯ ೭ನೆಯ ಸಂಪುಟದಲ್ಲಿ, ದಕ್ಷಿಣದಲ್ಲಿಯ ಯಾವತ್ತು ಶಿಲಾಲಿಪಿಗಳ ಪಟ್ಟಿಯೊಂದನ್ನು ಪ್ರೊ. ಕಿಲಹಾರ್ನ್ ಇವರು ಅತ್ಯಂತ ಪರಿಶ್ರಮ ಪಟ್ಟು ಮುದ್ರಿಸಿರುವರು. ಆ ಮುಂದಿನ ಪಟ್ಟಿಯೊಂದನ್ನು ಯಾರಾದರೂ ವಿದ್ವಾಂಸರು ತಯಾರಿಸಿದರೆ ನಮ್ಮ ಇತಿಹಾಸಕ್ಕೆ ದೊಡ್ಡ ಉಪಕಾರ ಮಾಡಿದಂತಾಗುವುದು, ಇತಿಹಾಸವನ್ನು ಅಭ್ಯಾಸ ಮಾಡಲಿಚ್ಚಿಸುವವರು ಈ ಪಟ್ಟಿಯನ್ನು ಕಣ್ಣು ಮುಂದಿಟ್ಟುಕೊಂಡೇ ಅಭ್ಯಾಸ ಮಾಡಬೇಕು. ಇದೊಂದು ಸಂಗತಿಯು ಗೊತ್ತಿರದ ಮೂಲಕ ನಮ್ಮ ಎಷ್ಟೋ ಶ್ರಮವು ನಿರರ್ಥಕವಾಗಿರುತ್ತದೆ. ಆದುದರಿಂದ ನಾವು ಈ ಸಂಗತಿಯನ್ನು ಬೇಕೆಂದು ವಾಚಕರ ಧ್ಯಾನಕ್ಕೆ ತಂದುಕೊಟ್ಟಿದ್ದೇವೆ.
ಇನ್ನು, ಕರ್ನಾಟಕದ ಇತಿಹಾಸಕ್ಕೆ ಅತ್ಯಂತ ಅವಶ್ಯವಾದ ಬೇರೆ ಪುಸ್ತಕಗಳಾವುವೆಂದರೆ (೧) ಡಾ೦ ಫ್ಲೀಟ ಇವರ ೧೮೮೨ನೆಯ ಇಸವಿಯಲ್ಲಿ ಬರೆದ
ಮುಂಬಯಿ ಇಲಾಖೆಯಲ್ಲಿಯ ಕನ್ನಡ ರಾಜಮನೆತನಗಳು (The Dynasties of the Kanarese District of the Bombay Presidency). (೨) ಡಾ. ಭಾಂಡಾರಕರ ಇವರು ೧೮೮೪ನೆಯ ಇಸವಿಯಲ್ಲಿ ಬರೆದ ದಕ್ಷಿಣಾ ಪಥದ ಪ್ರಾಚೀನ ಇತಿಹಾಸ (The early history of the Dekkan). (೩) ಸಿವೆಲ್‌ರ 'ಮರೆತುಹೋದ ಸಾಮ್ರಾಜ್ಯ' (Forgotten Empire by Sewell), (೪) ಬಿ. ಸೂರ್ಯನಾರಾಯಣ ರಾಯರ “ಎಂದೂ ಮರೆಯದ ಸಾಮ್ರಾಜ್ಯ” (The Never to be Forgotten Empire by B. Surya-Narayanrao). (೫) ರಾ. ವೆಂಕಟ ರಂಗೋ ಕಟ್ಟಿಯವರು ಭಾಷಾಂತರಿಸಿದ "ಕರ್ನಾಟಕ ಗ್ಯಾಝಟಿಯರ್.” (೬) "ಮೈಸೂರು ಗ್ಯಾಝಿಟೀರ್” (Mysore Gazitteer) ಇವೇ ಮೊದಲಾದುವುಗಳು.
ಕರ್ನಾಟಕದ ಹಳೆಯ ಇತಿಹಾಸವನ್ನು ಇತಿಹಾಸ ದೃಷ್ಟಿಯಿಂದ ಅಭಿಮಾನ ಪೂರ್ವಕವಾಗಿ ಡಾ. ಭಾಂಡಾರಕರರು ಮೊದಲು ಬರೆದರು. ಡಾ. ಫ್ಲೀಟರು ಕೇವಲ ಕನ್ನಡ ಪ್ರಾಂತದ ಇತಿಹಾಸವನ್ನು ಬರೆದಿದ್ದರೂ, ಅವರು ಅದನ್ನು ಶಿಲಾಲಿಪಿಗಳ ದೃಷ್ಟಿಯಿಂದ ಮಾತ್ರವೇ ಶೋಧಿಸಿರುವರು. ಅವರು ತಮ್ಮ ಇತಿಹಾಸದಲ್ಲಿ ಒಟ್ಟು ಸುಮಾರು ೨೦೦ ಶಿಲಾಲಿಪಿಗಳಿಂದ ಹೊರಡುವ ಇತಿಹಾಸವನ್ನು ಸಂಗ್ರಹಿಸಿದ್ದಾರೆ. ಡಾ. ಫ್ಲೀಟರು ನಮ್ಮ ಇತಿಹಾಸಕ್ಕೆ ಮಾಡಿದ ಉಪಕಾರವನ್ನು ಅಷ್ಟಿಷ್ಟೆಂದು ಹೇಳಲಳವಲ್ಲ. ಇವರು ಈ ಪ್ರಾಂತದ ಕಮಿಶನರಾಗಿದ್ದರು. ಇವರು ತಾವು ಹೋದ ಹೋದಲ್ಲಿ ಕಂಡ ಶಿಲಾಲಿಪಿಗಳ ಮುದ್ರೆಗಳನ್ನು ತೆಗೆದು ಕೊಂಡಿರುವರು. ಅವರು ಈ ಇತಿಹಾಸವನ್ನು ಬರೆದು ಮೂರು ತಪಗಳಾಗಿ ಹೋದರೂ ಇಂದಿನವರೆಗೂ ಯಾವ ಕನ್ನಡಿಗನೂ ಅತ್ತ ಸಾಭಿಮಾನದಿಂದ ದೃಷ್ಟಿ ತಿರುಗಿಸಲಿಲ್ಲವೆಂಬುದಕ್ಕಿಂತ ಹೆಚ್ಚು ಕರುಣಾಸ್ಪದವಾದ ಸಂಗತಿಯು ಮತ್ತಾವದಿದೆ?
ಡಾ. ಭಾಂಡಾರಕರರವರು ಬರೆದ ಪುಸ್ತಕವು ಕನ್ನಡಿಗರಿಗೆ ಬಹಳ ಬೆಲೆಯುಳ್ಳದ್ದಾಗಿದೆ. ಆದರೆ ಡಾ.ರವರು ಕರ್ನಾಟಕದ ಅಭಿಮಾನದಿಂದ ಅದನ್ನು ಬರೆಯಲಿಕ್ಕೆ ಪ್ರವರ್ತಿಸಿಲ್ಲವೆಂಬುದನ್ನು ಮರೆಯಕೂಡದು. ಈ ಕಾರಣಕ್ಕೋಸ್ಕರವೇ, ಆ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೆ ಓದಿದರೂ ಅದು ಕರ್ನಾಟ
ಕಕ್ಕೆ ತಿಲಾಂಶವಾದರೂ ಸಂಬಂಧಿಸಿರಬಹುದೆಂಬ ಕಲ್ಪನೆಯೇ ಮನಸ್ಸಿನಲ್ಲಿ ಮೂಡುವುದಿಲ್ಲ. ಇಷ್ಟೇ ಅಲ್ಲ, ಅದನ್ನು ಓದುವವರಿಗೆ ಅದು ಮಹಾರಾಷ್ಟ್ರದ ಇತಿಹಾಸವೆಂತಲೇ ಭಾಸವಾಗುತ್ತದೆ. ಆದುದರಿಂದ ಅದನ್ನೋದುವ ಕನ್ನಡಿಗರು ಡಾಕ್ಟರರವರು ಆ ಪುಸ್ತಕವನ್ನು ತಮ್ಮ ಪ್ರಾಂತದ ಇತಿಹಾಸವೆಂಬ ದೃಷ್ಟಿಯಿಂದ ಬರೆದಿದ್ದರೂ ಅದು ಮುಖ್ಯವಾಗಿ ಕರ್ನಾಟಕದ ಇತಿಹಾಸವೇ ಆಗಿರುತ್ತದೆಂಬ ಭಾವನೆಯನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು ಅದನ್ನು ಓದಬೇಕೆಂದು ನಾವು ಒತ್ತಾಯದಿಂದ ಸೂಚಿಸುತ್ತೇವೆ. ಇರಲಿ, ಕರ್ನಾಟಕದ ಹಳೆಯ ಇತಿಹಾಸಕ್ಕೆ ಈಗ ಆಧಾರ ಭೂತವಾಗಿರುವ ಇವೆರಡು ಗ್ರಂಥಗಳ ಕರ್ತರಿಗೆ ನಾವೆಲ್ಲರೂ ಅತ್ಯಂತ ಋಣಿಗಳಾಗಿದ್ದೇವೆ.
ರಾ. ಬಿ. ಸೂರ್ಯನಾರಾಯಣರಾವ ಮತ್ತು ಮಿ. ಸಿವೆಲ್ಲ ಸಾಹೇಬರು ಬರೆದ ವಿಜಯನಗರದ ಇತಿಹಾಸಗಳು ಕನ್ನಡಿಗರಿಗೆ ಸಾಮಾನ್ಯತಃ ಗೊತ್ತಿರುವುದರಿಂದ ಅವುಗಳ ಬಗ್ಗೆ ಹೆಚ್ಚಿಗೆ ಬರೆಯುವ ಕಾರಣವಿಲ್ಲ.
ಶುದ್ದ ಕನ್ನಡಿಗರಲ್ಲಿ, ಕೇವಲ ಕರ್ನಾಟಕದ ಅಭಿಮಾನದಿಂದ ಈ ವಿಷಯವನ್ನು ಅಭ್ಯಾಸಮಾಡಿದವರು ನಮಗೆ ಪೂಜ್ಯರಾದ ರಾ. ವೆಂಕಟ ರಂಗೋ ಕಟ್ಟಿ ಎಂಬವರೇ ! ಇವರು ತಮ್ಮ ಉತ್ಕಟವಾದ ದೇಶಾಭಿಮಾನದಿಂದ ಕರ್ನಾಟಕದ ಸೇವೆಯನ್ನು ಮಾಡಿರುವುದರಿಂದ ಇವರ ಹೆಸರನ್ನು ಯಾವ ಕನ್ನಡಿಗನೂ ಮರೆಯುವಂತಿಲ್ಲ. ಇವರು ಸರಕಾರೀ ನವಕರಿಯಲ್ಲಿದ್ದಾಗ, ಸರಕಾರದವರ ಅಪ್ಪಣೆಯ ಮೇರೆಗೆ ಕರ್ನಾಟಕ ಗ್ಯಾಝಟಿಯರನ್ನು ಕನ್ನಡದಲ್ಲಿ ಸರಸವಾಗಿ ಭಾಷಾಂತರಿಸಿರುವರು. ಇದು ನಮ್ಮ ಇತಿಹಾಸವನ್ನು ಅಭ್ಯಾಸಮಾಡುವವರಿಗೆ ಅವಶ್ಯವಾದ ಪುಸ್ತಕವು. ಇದಲ್ಲದೆ, ಇವರು ಚಿಕ್ಕದೊಂದು ಕರ್ನಾಟಕದ ಇತಿಹಾಸವನ್ನು ಬರೆದಿರುವರು.
ರಾ. ಪಾಠಕರವರಿಗೆ ಶಿಲಾಲಿಪಿಗಳ ಮೇಲೆ ಬಲು ಪ್ರೀತಿ, ಇವರು ೨೫-೩೦ ವರ್ಷಗಳಿಂದ ಈ ಲಿಪಿಶೋಧನದ ಕೆಲಸವನ್ನು ಆಗಾಗ ಮಾಡುತ್ತ ಬಂದಿರುತ್ತಾರೆ. ಈಗಲೂ ಅವರು ಆ ವ್ಯವಸಾಯವನ್ನು ಬಿಟ್ಟಿಲ್ಲ.
ಇರಲಿ, ಇಲ್ಲಿಯವರೆಗೆ ಕರ್ನಾಟಕದ ಇತಿಹಾಸದ ಬಗ್ಗೆ ಪ್ರತ್ಯಕ್ಷವಾಗಿಯಾಗಲಿ, ಅಪ್ರತ್ಯಕ್ಷವಾಗಿಯಾಗಲಿ ಯಾರು ಪ್ರಯತ್ನಪಟ್ಟರೆಂಬುದನ್ನೂ ಪಡುತ್ತಿರುವರೆಂಬುದನ್ನೂ ನಿವೇದಿಸಿರುವವು. ಇವರೆಲ್ಲರ ಪ್ರಯತ್ನಗಳ ಫಲವನ್ನು ಗೊತ್ತು ಮಾಡಿಕೊಂಡು, ಕೇವಲ ಇತಿಹಾಸದ ಅಭಿಮಾನದಿಂದ ಪ್ರೇರಿತರಾದ ಜನರು ಮುಂದೆ ಬಂದು ಈ ಕಾರ್ಯವನ್ನು ಕೈಕೊಳ್ಳಬೇಕೆಂದು ನಮ್ಮ ಪ್ರಾರ್ಥನೆ.
ಕಕ್ಕೆ ತಿಲಾಂಶವಾದರೂ ಸಂಬಂಧಿಸಿರಬಹುದೆಂಬ ಕಲ್ಪನೆಯೇ ಮನಸ್ಸಿನಲ್ಲಿ ಮೂಡುವುದಿಲ್ಲ. ಇಷ್ಟೇ ಅಲ್ಲ, ಅದನ್ನು ಓದುವವರಿಗೆ ಅದು ಮಹಾರಾಷ್ಟ್ರದ ಇತಿಹಾಸವೆಂತಲೇ ಭಾಸವಾಗುತ್ತದೆ. ಆದುದರಿಂದ ಅದನ್ನೋದುವ ಕನ್ನಡಿಗರು ಡಾಕ್ಟರರವರು ಆ ಪುಸ್ತಕವನ್ನು ತಮ್ಮ ಪ್ರಾಂತದ ಇತಿಹಾಸವೆಂಬ ದೃಷ್ಟಿಯಿಂದ ಬರೆದಿದ್ದರೂ ಅದು ಮುಖ್ಯವಾಗಿ ಕರ್ನಾಟಕದ ಇತಿಹಾಸವೇ ಆಗಿರುತ್ತದೆಂಬ ಭಾವನೆಯನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು ಅದನ್ನು ಓದಬೇಕೆಂದು ನಾವು ಒತ್ತಾಯದಿಂದ ಸೂಚಿಸುತ್ತೇವೆ. ಇರಲಿ, ಕರ್ನಾಟಕದ ಹಳೆಯ ಇತಿಹಾಸಕ್ಕೆ ಈಗ ಆಧಾರಭೂತವಾಗಿರುವ ಇವೆರಡು ಗ್ರಂಥಗಳ ಕರ್ತರಿಗೆ ನಾವೆಲ್ಲರೂ ಅತ್ಯಂತ ಋಣಿಗಳಾಗಿದ್ದೇವೆ.
ರಾ. ಬಿ. ಸೂರ್ಯನಾರಾಯಣರಾವ ಮತ್ತು ಮಿ. ಸಿವಲ್ಲ ಸಾಹೇಬರು ಬರೆದ ವಿಜಯನಗರದ ಇತಿಹಾಸಗಳು ಕನ್ನಡಿಗರಿಗೆ ಸಾಮಾನ್ಯತಃ ಗೊತ್ತಿರುವುದರಿಂದ ಅವುಗಳ ಬಗ್ಗೆ ಹೆಚ್ಚಿಗೆ ಬರೆಯುವ ಕಾರಣವಿಲ್ಲ.
ಶುದ್ದ ಕನ್ನಡಿಗರಲ್ಲಿ, ಕೇವಲ ಕರ್ನಾಟಕದ ಅಭಿಮಾನದಿಂದ ಈ ವಿಷಯ ವನ್ನು ಅಭ್ಯಾಸಮಾಡಿದವರು ನಮಗೆ ಪೂಜ್ಯರಾದ ರಾ. ವೆಂಕಟ ರಂಗೋ ಕಟ್ಟಿ ಎಂಬವರೇ! ಇವರು ತಮ್ಮ ಉತ್ಕಟವಾದ ದೇಶಾಭಿಮಾನದಿಂದ ಕರ್ನಾಟಕದ ಸೇವೆಯನ್ನು ಮಾಡಿರುವುದರಿಂದ ಇವರ ಹೆಸರನ್ನು ಯಾವ ಕನ್ನಡಿಗನೂ ಮರೆಯುವಂತಿಲ್ಲ. ಇವರು ಸರಕಾರೀ ನವಕರಿಯಲ್ಲಿದ್ದಾಗ, ಸರಕಾರದವರ ಅಪ್ಪಣೆಯ ಮೇರೆಗೆ ಕರ್ನಾಟಕ ಗ್ಯಾಝಟಿಯರನ್ನು ಕನ್ನಡದಲ್ಲಿ ಸರಸವಾಗಿ ಭಾಷಾಂತರಿಸಿರುವರು. ಇದು ನಮ್ಮ ಇತಿಹಾಸವನ್ನು ಅಭ್ಯಾಸಮಾಡುವವರಿಗೆ ಅವಶ್ಯವಾದ ಪುಸ್ತಕವು. ಇದಲ್ಲದೆ, ಇವರು ಚಿಕ್ಕದೊಂದು ಕರ್ನಾಟಕದ ಇತಿಹಾಸವನ್ನು ಬರೆದಿರುವರು.
ರಾ. ಪಾಠಕರವರಿಗೆ ಶಿಲಾಲಿಪಿಗಳ ಮೇಲೆ ಬಲು ಪ್ರೀತಿ, ಇವರು ೨೫-೩೦ ವರ್ಷಗಳಿಂದ ಈ ಲಿಪಿಶೋಧನದ ಕೆಲಸವನ್ನು ಆಗಾಗ ಮಾಡುತ್ತ ಬಂದಿರುತ್ತಾರೆ. ಈಗಲೂ ಅವರು ಆ ವ್ಯವಸಾಯವನ್ನು ಬಿಟ್ಟಿಲ್ಲ.
ಇರಲಿ, ಇಲ್ಲಿಯವರೆಗೆ ಕರ್ನಾಟಕದ ಇತಿಹಾಸದ ಬಗ್ಗೆ ಪ್ರತ್ಯಕ್ಷವಾಗಿಯಾಗಲಿ, ಅಪ್ರತ್ಯಕ್ಷವಾಗಿಯಾಗಲಿ ಯಾರು ಪ್ರಯತ್ನಪಟ್ಟರೆಂಬುದನ್ನೂ ಪಡುತ್ತಿರುವರೆಂಬುದನ್ನೂ ನಿವೇದಿಸಿರುವವು. ಇವರೆಲ್ಲರ ಪ್ರಯತ್ನಗಳ ಫಲವನ್ನು ಗೊತ್ತು ಮಾಡಿಕೊಂಡು, ಕೇವಲ ಇತಿಹಾಸದ ಅಭಿಮಾನದಿಂದ ಪ್ರೇರಿತರಾದ ಜನರು ಮುಂದೆ ಬಂದು ಈ ಕಾರ್ಯವನ್ನು ಕೈಕೊಳ್ಳಬೇಕೆಂದು ನಮ್ಮ ಪ್ರಾರ್ಥನೆ.