ವಿಷಯಕ್ಕೆ ಹೋಗು

ಕರ್ನಾಟಕ ಗತವೈಭವ/ಪ್ರಬಂಧ ಪರಿಚಯ

ವಿಕಿಸೋರ್ಸ್ದಿಂದ



श्री गणेशाय नमः।

ಪ್ರಬಂಧ ಪರಿಚಯ.

  • “महाराष्ट्र आणि कर्नाटक निराळीं नाहींत. दोघांमध्ये एकच रक्त खेळत आहे; दोघांची भाषा एकच ह्मणजे कानडी ही होती. भाषेच्या बाबतीत महाराष्ट्र बाटून मराठी झाले आहे."
- लोकमानय टिळक.

“ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆ ಅಲ್ಲ. ಎರಡರಲ್ಲಿಯೂ ಒಂದೇ ರಕ್ತವು ಆಡು ಇದೆ; ಎರಡೂ ದೇಶಗಳ ಭಾಷೆಯು ಒಂದೇ ಅಂದರೆ ಕನ್ನಡವಿತ್ತು. ಭಾಷೆಯ ವಿಷಯದಲ್ಲಿ ಮಹಾರಾಷ್ಟ್ರವು ಕುಲಗೆಟ್ಟು ಮರಾಠಿಯಾಗಿರುತ್ತದೆ.”

- ಲೋಕಮಾನ್ಯ ಟಿಳಕ.

ರ್ತಮಾನಕಾಲವೆಂಬ ವೃಕ್ಷಕ್ಕೆ ಭೂತಕಾಲವೇ ಬೀಜ; ಭವಿಷ್ಯ ಕಾಲವೇ ಫಲ; ಭವಿಷ್ಯಕಾಲದ ರಾಷ್ಟ್ರೀಯ ಫಲವನ್ನು ಪಡೆಯಲಪೇಕ್ಷಿಸುವವರು ಭೂತ ಕಾಲದ ಬೀಜ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಆವಶ್ಯವು, ಈ ದೃಷ್ಟಿಯಿಂದ ನೋಡಲು, ರಾಷ್ಟ್ರೀಯ ಕಾರ್ಯಕ್ಕೆ ಇತಿಹಾಸವು ಹೇಗೆ ಸಾಧನವಾಗುವುದೆಂಬುವುದು ಮನವರಿಕೆಯಾಗುವುದು. ಭರತ ಭೂಮಿಯ ಮಿಕ್ಕ ಜನಾಂಗಗಳು ತಮ್ಮ ತಮ್ಮ ಇತಿಹಾಸವನ್ನು ಹುರುಪಿನಿಂದ ಅಭ್ಯಾಸಮಾಡುತ್ತಿರಲು ನಮ್ಮ ಕರ್ನಾಟಕವು ಇನ್ನೂ ಕುಂಭಕರ್ಣ ನಿದ್ರೆಯಲ್ಲಿಯೇ ಮಲಗಿದೆ. ಆದುದರಿಂದ, "ಕರ್ನಾಟಕ ಮಾಹಾತ್ಮ್ಯ"ವನ್ನು ಹೊಗಳಿ, ಇನ್ನೂ ಎಚ್ಚರಾಗದಿದ್ದ ತರುಣರನ್ನು ಎಚ್ಚರಿಸಬೇಕೆಂದು ಈ ಪ್ರಬಂಧವನ್ನು ಕೈಕೊಂಡಿದ್ದೇವೆ.
ಇದು ಕೇವಲ ಇತಿಹಾಸವಲ್ಲ;ಆದರೆ ಕಟ್ಟು ಕಥೆಯೂ ಅಲ್ಲ, ಕರ್ನಾಟಕದ ಇತಿಹಾಸದೊಳಗಿನ ಚಿತ್ತಾಕರ್ಷಕವಾದ ಹಲಕೆಲವು ಸಂಗತಿಗಳನ್ನು ಅನೇಕ ಪುಸ್ತಕಗಳಿಂದ ಆರಿಸಿ, ನಮಗೆ ತೋರಿದ ಕೆಲವು ವಿಧಾನಗಳನ್ನು ಅವು

  • ಇದು, ಲೋಕ ಮಾನ್ಯರವರು ತಾ:೨೬-೧೧-೧೯೦೭ ನೆಯ ಇಸವಿಯ ದಿವಸ ಗುರ್ಲಹೊಸೂರಿನಲ್ಲಿ ಮಾಡಿದ ಭಾಷಣದೊಳಗಿನ ಅವತರಣಿಕೆಯು. -ವೆ.ಭೀ.ಆಲೂರ. 
    - ೬ -
    .

ಗಳಲ್ಲಿ ಬೆರಿಸಿ, ಆ ಮಿಶ್ರಣವನ್ನು ಕಾಸಿ ಕರ್ನಾಟಕದ ಅಭಿಮಾನವೆಂಬ ಎರಕದಲ್ಲಿ ಕೈಲಾದಷ್ಟು ಮಟ್ಟಿಗೆ ಹೊಯ್ದು ಈ ಪ್ರಬಂಧವನ್ನು ರಚಿಸಲಾಗಿದೆ. ಆದುದರಿಂದ, ನಮ್ಮ ಪೂರ್ವಜರ ಗುಣಾನುವಾದವೇ ಈ ಪ್ರಬಂಧದಲ್ಲಿ ಕಂಡುಬರುವುದು. ನಾವು ಹೊಗಳುಭಟ್ಟರಂತೆ ನಮ್ಮ ಪೂರ್ವಜರನ್ನು ಹೀಗೆ ಹೊಗಳಿರುವ ಮಾತ್ರದಿಂದ, ಅವರು ಲೋಕವಿಲಕ್ಷಣರೂ ಸರ್ವಗುಣ ಪರಿಪೂರ್ಣರೂ ದೋಷವಿವರ್ಜಿತರೂ ಆಗಿದ್ದರೆಂದು ನಮ್ಮ ಅಭಿಪ್ರಾಯವಿರುವುದಾಗಿ ಯಾರೂ ಊಹಿಸಕೂಡದು. ಆದರೆ, ಇಲ್ಲದ ಸಲ್ಲದ ದೋಷಗಳನ್ನು ಕೇಳಿ ಕೇಳಿ ನನ್ನ ಕಿವಿಗಳು ಮರಗಟ್ಟಿರುತ್ತವೆ; ಮತಿಯು ಮಸಣಿಸಿದೆ; ಕ್ರಿಯಾಶಕ್ತಿಯು ಕುಗ್ಗಿದೆ, ಮತ್ತು 'ನಾವು ಎಂದಿಗೂ ಹೇಡಿಗಳೇ, ಮುಂದೆಯೂ ಹಾಗೆಯೇ ಉಳಿಯುವವರು' ಎಂಬ ರಾಷ್ಟ್ರವಿಘಾತಕ ಭಾವನೆಯು ನಮ್ಮಲ್ಲಿ ಬೇರೂರಿದೆ. ಆದ್ದರಿಂದ ನಾವು ಅಭಿಮಾನ ಶೂನ್ಯರಾಗಿದ್ದೇವೆ, ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಈಗ.

अभिमानो धनं येपं चिर जीवन्तु ते नराः।
अभिमानविहीनानां किं धनेन किमायुषा ॥
ಎಂಬಂತೆ, ಅಭಿಮಾನಶೂನ್ಯರಾದ ನಾವು ಇದ್ದೂ ಇಲ್ಲದಂತೆಯೇ ಆಗಿದೆ. ಆದುದ ರಿಂದ “ನಾವೂ ಮನುಷ್ಯರು; ನಮ್ಮನ್ನೂ ದೇವರೇ ಹುಟ್ಟಿಸಿರುವನು; ನಮ್ಮಿಂದಲೂ ಹಿಂದಕ್ಕೆ ಮಹಾ ಮಹಾ ಕಾರ್ಯಗಳು ನೆರವೇರಿವೆ; ನಮಗೂ ಬುದ್ಧಿಯುಂಟು, ಭಾಷೆಯುಂಟು, ರಾಷ್ಟ್ರವುಂಟು, ವೈಭವವುಂಟು, ಇತಿಹಾಸವುಂಟು; ಜಗತ್ತನ್ನು ವ್ಯಾಪಿಸಿರುವ ಮಹತ್ವದ ತತ್ವ ವಿಚಾರಗಳು ನಮ್ಮಿಂದಲೇ ಪ್ರಸೃತ ವಾಗಿವೆ; ನಮ್ಮವರೂ 'ಗಂಗಾವಾರಿಧಿಯೋಳ್ ಆತ್ಮತುರಂಗಮಂಮಿಸಿಸಿ'ರ್ದರು. ನಮ್ಮಲ್ಲಿಯ ವಿದ್ವಾಂಸರೂ ವೀರರೂ ಉದಯಿಸಿದರು.” ಇವೇ ಮುಂತಾದ ಕಲ್ಪನೆಗಳನ್ನು ಕನ್ನಡಿಗರಲ್ಲಿ ಹುಟ್ಟಿಸಲು (೧) ಈ ಪ್ರಸ್ತಾವನೆಯ ಪ್ರಾರಂಭದ ಅವತರಣಿಕೆಯಲ್ಲಿ ಲೋಕಮಾನ್ಯರವರು ಹೇಳಿದಂತೆ ಹಿಂದಕ್ಕೆ ಈಗಿನ ಮಹಾ ರಾಷ್ಟ್ರದಲ್ಲಿಯೂ ಕನ್ನಡ ಭಾಷೆಯೇ ಪ್ರಚಲಿತವಾಗಿತ್ತು, (೨) ನಮ್ಮ ಕರ್ನಾಟಕವು ಆಗಿನ ಕಾಲಕ್ಕೆ ತಕ್ಕಂತೆ ಇತಿಹಾಸರಂಗದಲ್ಲಿ ಮುಖ್ಯ ಪಾತ್ರವನ್ನು ಸ್ವೀಕರಿಸಿತ್ತು. ಎಂಬೆರಡು ಸಂಗತಿಗಳನ್ನು ವಾಚಕರ ಲಕ್ಷ್ಯಕ್ಕೆ ತಂದಿಡುವುದೇ ಈ ಪ್ರಬಂಧದ ಮೂಲೋದ್ದೇಶವು. 
- ೭ -

ಕರ್ನಾಟಕದ ಇತಿಹಾಸವನ್ನು ಅಭ್ಯಾಸಮಾಡುವವರು ತೀರ ಅಪೂರ್ವ. ಇಂದಿನವರೆಗೆ, ಈ ವಿಷಯಕ್ಕೆ ತರುಣರಲ್ಲಿ ಸಂಪೂರ್ಣ ಅನಾಸ್ಥೆಯೇ ಉಂಟೆಂದರೂ ಸಲ್ಲುವುದು, ಈ ಅನಾಸ್ಥೆಯನ್ನು ದೂರಗೊಳಿಸಿ, ಕರ್ನಾಟಕದ ಇತಿಹಾಸ ವನ್ನು ಅಭ್ಯಾಸಮಾಡುವವರಿಗೆ ಉಂಟಾಗಬಹುದಾದ ತೊಂದರೆಗಳನ್ನು ತಿಳಿಯ ಹೇಳಿ, ಅವರಿಗೆ ಮಾರ್ಗದರ್ಶಿಯಾಗುವಂತೆ ಕೆಲವು ಸೂಚನೆಗಳನ್ನು ಮಾಡುವುದೇ ಈ ಪ್ರಬಂಧದ ಎರಡನೆಯ ಉದ್ದೇಶವು. ಈ ಉದ್ದೇಶಗಳಿಂದಲೇ, ಎರಡು ಪೂರಕ ಪ್ರಕರಣಗಳನ್ನು ಜೋಡಿಸಿ, ಇತಿಹಾಸ ಸಂಶೋಧನದ ವಿಷಯವಾಗಿ, ಈ ದೇಶದಲ್ಲಿ ಇಲ್ಲಿಯವರೆಗೆ ಆಗಿಹೋದ ಪ್ರಯತ್ನಗಳನ್ನು ಸಂಕ್ಷೇಪವಾಗಿ ವರ್ಣಿಸಿ, ಲಿಪಿಗಳ ಮುದ್ರೆಯನ್ನು ತೆಗೆದುಕೊಳ್ಳುವ ರೀತಿಯನ್ನು ಹೇಳಲಾಗಿದೆ.
ಸಾರಾಂಶ, ಈ ಪ್ರಬಂಧವು ಕರ್ನಾಟಕ ಇತಿಹಾಸದೇವಿಯ ಮಂದಿರಕ್ಕೆ ಹೋಗುವ ದಾರಿಯನ್ನು ತೋರಿಸುವ ಕೈಕಂಬವು, ಆ ಮಂದಿರದೊಳಗೆ ಪ್ರವೇಶಿಸತಕ್ಕ ಮಹಾದ್ವಾರವನ್ನು ತೆರೆಯುವ ಕೆಲಸವು. ಮುಂದಿನ ಇತಿಹಾಸ ಸಂಶೋಧಕರದು; ಅದು ನನ್ನ ಯೋಗ್ಯತೆಯದಲ್ಲ. ಆ ಮಹಾದ್ವಾರವು ತೆರೆದು, ಇತಿಹಾಸ ಮಂದಿರಕ್ಕೆ ಪ್ರವೇಶ ದೊರೆಯುವ ಮೊದಲು "ಈ ಇಗೋ, ಇದೇ ಆ ಪವಿತ್ರವಾದ ದೇವಾಲಯವು; ಇದೇ ಇಲ್ಲಿ ಈ ಬಾಗಿಲ ಕಿಂಡಿಯೊಳಗಿಂದ ಆ ದೇವತೆಯ ದರ್ಶನವನ್ನು ಈಗ ತೆಗೆದುಕೊಳ್ಳಿರಿ." ಎಂದು ಬೊಟ್ಟು ಮಾಡಿ ತೋರಿಸುವುದಷ್ಟೇ ನನ್ನ ಕೆಲಸವು.

ಕೆಲಸಕ್ಕೂ ನಾವು ಎಷ್ಟು ಅನರ್ಹರಿದ್ದೆವೆಂಬುದನ್ನು ಪೂರ್ಣವಾಗಿ ಆರಿತಿರುವವು. ಇದಕ್ಕಾಗಿಯೇ, ನಾವು ಇಷ್ಟು ದಿವಸ ಪ್ರಬಂಧವನ್ನು ಬರೆಯಲಿಲ್ಲ. ಆದರೆ, ೪ನೆಯ ಮೇ ೧೯೦೫ ನೆಯ ಇಸವಿಯ ದಿವಸ ಆನೆಗೊಂದಿಯ ಆಕಸ್ಮಿಕ ದರ್ಶನದಿಂದ ನಮ್ಮಲ್ಲಿ ಮಿಂಚಿದ ಸ್ಪುರಣವು ನಮ್ಮನ್ನು ಅಣ್ಣಿಗೇರಿ, ಲಕ್ಕುಂಡಿ, ಗುಡಿಗೇರಿ, ಲಕ್ಷೇಶ್ವರ, ಹಳೆಬೀಡು, ಬೇಲೂರು, ಕಾರ್ಲೆ, ಕಾನ್ಸರಿ, ಬಂಕಾಪುರ, ಬಾದಾಮಿ, ಪಟ್ಟದಕಲ್ಲು, ಐಹೊಳಿ, ವೇಗೂಳ, ಮುಂತಾದ ಐತಿಹಾಸಿಕ ಕ್ಷೇತ್ರಗಳಿಗೆ ಎಳೆದೊಯ್ದಂತೆಯೇ ತರುಣರನ್ನೂ ಎಳೆದೊಯ್ಯಬಹುದೆಂಬ ಆಶೆಯಿಂದ, ನಮ್ಮ ಕೆಲವು ತರುಣ ಮಿತ್ರರ ಇಚ್ಛೆಯ ಮೇರೆಗೆ, ಅಪೂರ್ಣಾವಸ್ಥೆ
- ೮ -

ಯಲ್ಲಿರುವ ಈ ಪ್ರಬಂಧವನ್ನು, ಪ್ರಕಾಶನಕ್ಕೆ ಅನನುಕೂಲವಾದ ಈಗಿನ ತುಟ್ಟಿಯ ದಿವಸಗಳಲ್ಲಿಯೇ ಪ್ರಕಟಗೊಳಿಸುವ ಸಾಹಸಮಾಡಿದ್ದೇವೆ. ಇದಲ್ಲದೆ ಮುದ್ರಣಕ್ಕೆ ಪ್ರಾರಂಭ ಮಾಡದೆ ಬರೆಯುವ ಕೆಲಸವು ಒತ್ತರದಿಂದ ಸಾಗುವುದಿಲ್ಲವೆಂದೂ ಹಿಂದಕ್ಕೆ ಬರೆದ ಒಂದು ಪ್ರಬಂಧದಲ್ಲಿಯೇ ಇದರ ರೂಪರೇಖೆಯನ್ನು ತೆಗೆದಿಟ್ಟಿರುವುದರಿಂದ, ಬೇಕಾದಾಗ ಬರೆಯಬಹುದೆಂದೂ ಬಗೆದು ಮುದ್ರಣಕ್ಕೆ ಪ್ರಾರಂಭ ಮಾಡಿದೆವು. ಆದರೆ, ಈಗ ಕೆಲವು ವರ್ಷಗಳಿಂದ ದೇಶದಲ್ಲಿ ವ್ಯಾಪಿಸಿರುವ ಸ್ವರಾಜ್ಯ ಚಳವಳಿಯಲ್ಲಿ ಆಕಸ್ಮಿಕವಾಗಿ ಹೆಚ್ಚಿಗೆ ಮನಸ್ಸನ್ನು ತೊಡಕಿಸಬೇಕಾದುದರಿಂದ, ಸಾಕಷ್ಟು ವೇಳೆಯು ದೊರೆಯದೆ, ಪುಸ್ತಕವನ್ನು ಅವಸರದಿಂದ ಬರೆಯ ಬೇಕಾಯಿತು. ಆದುದರಿಂದ, ಮೊದಲೇ ಆಪೂರ್ಣಾವಸ್ಥೆಯುಳ್ಳ ಈ ಪ್ರಬಂಧಕ್ಕೆ ಹೆಚ್ಚಿಗೆ ಕುಂದು ಉಂಟಾಗಿದೆ. ನಮ್ಮ ಸನ್ಮಾನ್ಯ ಮಿತ್ರರೊಬ್ಬರು, ಹಂಪೆಯ ಶ್ರೀ ಶಂಕರಾಚಾರ್ಯರ ಮಠವೂ ಕರ್ನಾಟಕದಲ್ಲಿಯೇ ಇರುವುದೆಂಬ ಸಂಗತಿಯು ನಮ್ಮ ಸ್ಮೃತಿ ಪಥದಿಂದ ಹಾರಿ ಹೋಗಿರುವುದನ್ನು ಮೊನ್ನೆ ನಮ್ಮ ಲಕ್ಷಕ್ಕೆ ತಂದು ಕೊಟ್ಟಿರುತ್ತಾರೆ. ಇದೇ ಬಗೆಯಾಗಿ, ಮತ್ತೂ ಉಳಿದ ನಾನಾ ತರದ ದೋಷಗಳ ದೆಸೆಯಿಂದ ವಾಚಕರು ನಮ್ಮನ್ನು ಸರ್ವಥಾ ಕ್ಷಮಿಸದೆ, ಅವನ್ನು ಬೈಲಿಗೆ ತಂದರೆ, ನಾವು ಅವರಿಗೆ ಅತ್ಯಂತ ಋಣಿಯಾಗಿ, ಮುಂದೆ ತಿದ್ದುವ ಪ್ರಸಂಗ ಬಂದರೆ ತಿದ್ದುವೆವು. ಆದರೆ, ಇದನ್ನು ಮತ್ತೆ ಮುದ್ರಿಸುವ ಪ್ರಸಂಗವನ್ನೇ ತಾರದೆ, ಕನ್ನಡಿಗರು ಮುಂದುವರಿದು ಬಂದು, ದೋಷವರ್ಜಿತವಾದ ನೂತನ ಗ್ರಂಥಗಳನ್ನು ರಚಿಸಿ, ಇದನ್ನು ಮೂಲೆಗುಂಪಾಗಿ ಮಾಡಬೇಕೆಂದೇ ಅವರಿಗೆ ನಮ್ಮ ಮನಃಪೂರ್ವಕವಾದ ಪ್ರಾರ್ಥನೆ.

ಇರಲಿ; ಇದರಲ್ಲಿಯ ನಕಾಶೆಗಳನ್ನು ಕೇವಲ ಇತಿಹಾಸದ ಮೇಲಿನ ಪ್ರೇಮದಿಂದ ತಯಾರಿಸಿಕೊಟ್ಟ ಶ್ರೀ ರಾಜೇಸಾಹೇಬ ಜಾತಿಗಾರ ಇವರ ಉಪಕಾರವನ್ನು ಈ ಪ್ರಸಂಗದಲ್ಲಿ ಎಷ್ಟು ಸ್ಮರಿಸಿದರೂ ಸ್ವಲ್ಪವೇ! ಈ ಪುಸ್ತಕವನ್ನೋದಿ, ಶಾಂತಕವಿಗಳು ಮೊದಲಿಗೆ ಮತ್ತು ಕಡೆಗೆ ಕೊಟ್ಟ ಕವಿತೆಗಳನ್ನು ಮಾಡಿ ಕೊಟ್ಟು ಆಶೀರ್ವದಿಸಿದ್ದು ಮಹಾ ಭಾಗ್ಯವೆಂದೇ ಭಾವಿಸುವೆವು, ಮಹಾವೀರ ಪ್ರೆಸ್ಸಿನ ಮಾಲಕರು ಈ ಪುಸ್ತಕವನ್ನು ನಿಯಮಿತವಾಗಿಯೂ ಸುಂದರವಾಗಿಯೂ ಮುದ್ರಿಸಿದ್ದನ್ನು ಮರೆಯುವುದು ಹೇಗೆ?


- ೯ -

ಕೊನೆಗೆ, ಯಾವ ಶ್ರೀಹರಿ ಪರಮಾತ್ಮನ ಕೃಪೆಯಿಂದ ಈ ಪುಸ್ತಕವು ಪೂಣ೯ವಾಯಿತೋ ಆ ಶ್ರೀಹರಿ ಪರಮಾತ್ಮನಿಗೆ ಅನಂತಾನಂತ ವಂದನೆಗಳನ್ನು ಸಮರ್ಪಿಸಿ ಈ ಪ್ರಸ್ತಾವನೆಯನ್ನು ಮುಗಿಸುವೆವು.

ವೆಂಕಟೇಶ ಭೀಮರಾವ ಆಲೂರ.

ಧಾರವಾಡ
(೧೮೩೯ ನೆಯ ಸ೦ವತ್ಸರ ಭಾ.ಶು. ೪ )
(ಗಣೇಶ ಚತುರ್ಥಿ)



ಈ ಪುಟ ಕಾಲಿ ಇದೆ