ಕರ್ನಾಟಕ ಗತವೈಭವ/ಪ್ರಾಕ್ತನ ವಿಮರ್ಶ ವಿಚಕ್ಷಣ.
ಪ್ರಾಕ್ತನ ವಿಮರ್ಶ ವಿಚಕ್ಷಣ.
(೧) ರಾವಬಹಾದ್ದೂರ ಆರ್. ನರಸಿಂಹಾಚಾರ್ಯ ಎಮ್.ಎ.,ಎಮ್.ಆರ್.ಎ.ಎಸ್.
"ತಮ್ಮ ಪುಸ್ತಕವನ್ನು ಆಮೂಲಾಗ್ರವಾಗಿ ಓದಿದೆನು. ಕರ್ನಾಟಕ ದೇಶದಲ್ಲಿ ತಮಗಿರುವ ಅಭಿಮಾನವು ಒಂದೊಂದು ಪುಟದಲ್ಲಿಯೂ ವ್ಯಕ್ತವಾಗುತ್ತದೆ. ಪುಸ್ತಕವು ಬಹಳ ಶ್ಲಾಘ್ಯವಾಗಿದೆ. ಓದುವವರ ಮನಸ್ಸಿನಲ್ಲಿ ದೇಶಪ್ರೀತಿಯನ್ನೂ ಭಾಷಾಪ್ರೀತಿಯನ್ನೂ ಹುಟ್ಟಿಸುವದರಲ್ಲಿ ಸಂಶಯವಿಲ್ಲ. ಈ ಪುಸ್ತಕವನ್ನು ಬರೆದು ನೀವು ಕನ್ನಡಿಗರಿಗೆ ಬಹಳ ಉಪಕಾರವನ್ನು ಮಾಡಿದ್ದೀರಿ. ಪುಸ್ತಕವನ್ನು ಓದಿ ನೋಡಿದುದರಲ್ಲಿ ನನಗೇನೂ ವಿಶೇಷ ತಪ್ಪುಗಳು ದೊರೆಯಲಿಲ್ಲ.
Asst, Director to the Director of Archaeological Researches Mysore, writes as follows:-
“I thank you for your letter and for your book which you kindly sent me. I have read letter throughout; and it is my opinion that it is very well-written and admirably suited for the object you have in view namely the waking up of the Bombay Karnatakas from their apathy, and indifferance towards everything of Karnatak origin; and leading them to take a proper pride in the achivements of their ancestors.
BANGALORE.
- (೩) ಕನ್ನಡ ಕೋಗಿಲೆಯ ಸಂಪಾದಕರಾದ ಎಮ್. ತಿಮ್ಮಪ್ಪಯ್ಯ.
ಚೌಪದಿ||ಮನೆ ಮುರಿಯಲಡಿಗೆಟ್ಟು ವಾತದಿಂ ನೋಂದು |
ತನುಜರಾ ಕವತಿಣಿಕ ವಿತ್ತದಿಂ ನವೆದು||
ಕೊನೆಗೀಗ ನುಡಿಯಲಾರದೆ ಬಂದ ಕಫದಿಂ |
ಮನಗುದಿವಳಕಟ! ಕನ್ನಡಮಾತೆ, ನೋಡಿ ||
ಕರ್ನಾಟಕ ಗತವೈಭವ ಈ ಪುಸ್ತಕವನ್ನು ಕರ್ನಾಟಕ ಇತಿಹಾಸಮಂಡಲದ ೧ನೆಯ ಗ್ರಂಥವನ್ನಾಗಿ ಮ|ರಾ|ವೆಂಕಟೇಶ ಭೀಮರಾವ ಅವರ್ಗಳ್ ಬಿ.ಎ., ಎಲ್.ಎಲ್.ಬಿ ಇವರು ರಚಿಸಿದರು. ಈ ಮಹನೀಯರೆ ಮಂಡಲದ ಅಧ್ಯಕ್ಷರು. ಆದಿಯಲ್ಲಿ ಬಾಳಾಚಾರ್ಯ ಸಕ್ಕರಿ (ಶಾಂತಕವಿ) ಇವರಿಂದ ರಚಿತವಾದ ಭರ್ತೃಹರಿಯ ವೈರಾಗ್ಯ ಶತಕದಿಂದ ಪರಿವರ್ತಿಸಿದ ೧ ಶ್ಲೋಕವೂ ಕಡೆ ಯಲ್ಲಿ ಕರ್ನಾಟಕ ಪರಮಹಂಸರಾದ ಶ್ರೀ ವಿದ್ಯಾರಣ್ಯರ ಇಷ್ಟ ದೇವತಾ ಸ್ತುತಿಯ ಕಾಲನ ಪ್ರಾರ್ಥನೆಯೂ ಇವೆ. ಆಕರ್ಷಕ ಮತ್ತು ಅವಶ್ಯವಾದ ಅನೇಕ ಚಿತ್ರಗಳಿಂದ ಕೂಡಿದೆ. ಅವುಗಳಲ್ಲಿ ಪರಮೇಶ್ವರ ಶ್ರೀ ಸತ್ಯಾಶ್ರಯ, ಪುಲಿಕೇಶಿ ಮಹಾರಾಜ, ವೇರೂಳಿನ ಪ್ರಸಿದ್ಧ ಕೈಲಾಸ ದೇವಾಲಯ ಈ ಚಿತ್ರಗಳನ್ನೂ ಇವುಗಳ ವಿಷಯ ವಿಮರ್ಶೆಯನ್ನೂ ಈಗಿನ ಸ್ಥಿತಿಯನ್ನೂ ಎಣಿಸಿ ನಮಗೇನೋ ಕಣ್ಣಿನಲ್ಲಿ ನೀರು ತುಂಬಿತು. ಈ ಗ್ರಂಥದಲ್ಲಿ ನಮ್ಮ ಎಂದರೆ ವಿಜಯನಗರದ ಹಿಂದಿನ ವೈಭವವೂ, ಆ ವಿಷಯವಾಗಿ ಆಗ ಇಲ್ಲಿಗೆ ಬಂದಿದ್ದ ಹುಯಿನ್‌ತ್ಸಾಂಗ ಮುಂತಾದ ಪರದೇಶೀಯ ಪ್ರವಾಶಿಗಳ ಸುವರ್ಣಾಭಿಪ್ರಾಯಗಳೂ ನಮ್ಮ ವಾಙ್ಮಯ ವೈಭವವೂ ಧಾರ್ಮಿಕಾದಿ ಎಲ್ಲ ವಿಷಯವೂ ಅನನ್ಯ ಸಾಧಾರಣವಿತ್ತೆಂಬುದೂ ಸರಸವಾಗಿ ಮನಮುಟ್ಟುವಂತೆ ವರ್ಣಿಸೋಣಾಗಿದೆ.
ಬರಲಾರದು. ಎಂದು ಯಾರೂ ಸಂದೇಹಗ್ರಸ್ತರಾಗಕೂಡದು. ಬಂದು ಹೋದ ವ್ಯಕ್ತಿಗೆ, ಪುನಃ ಬರಲಿಕ್ಕೆ ಹೆಚ್ಚಿನ ಅನುಕೂಲ್ಯವಲ್ಲವೇ? ಒಮ್ಮೆ ಬಿಸಿಲಿನ ತಾಪದಿಂದ ನೀರಾರಿದರೂ ಮೇಘರಾಜನು ಪುನಃ ಪ್ರವೇಶಿಸಿ ತನ್ನ ಜೀವನ (ನೀರು) ಸಂತಾನವನ್ನು ಉಕ್ಕೇರುವಂತೆ ಮಾಡದಿರುವನೆ? ಮನಮುಟ್ಟಿ ಪ್ರಯತ್ನಿಸಿದರೆ ಇಂದಲ್ಲ ಇನ್ನೊಮ್ಮೆ 'ಗತವೈಭವ' ವನ್ನು ಆಗತ (ಬಂದಂಥ) ವೈಭವವನ್ನಾಗಿ ಮಾಡಬಹುದು. ಕನ್ನಡಿಗರೇ, ಒಂದೇ ಒಂದು ರೂಪಾಯಿ ಬೆಲೆಯ ೧೫೪ ಪುಟದ ಈ ಪುಸ್ತಕವನ್ನು ಒಮ್ಮೆ ತರಿಸಿ ಓದಿ. ಆ ಮೇಲೆ ಕಾರ್ಯಶಕ್ತಿಯನ್ನು ಹಬ್ಬಿಸಿ ಕೃತಾರ್ಥರಾಗಿರಿ.
- ಕನ್ನಡ ಕೋಗಿಲೆ,
- ಮಾರ್ಚಿ, ಸನ್ ೧೯೧೮.
- (೪) ವಿಜ್ಯಾಪುರ ಕರ್ನಾಟಕ ಗತವೈಭವದ ಅಭಿಪ್ರಾಯ.
ರಾ| ರಾ| ವೆಂಕಟೇಶ ಭೀಮರಾವ ಆಲೂರ ಇವರು ಬರೆದ “ಕರ್ನಾಟಕ ಗತವೈಭವ” ಎಂಬ ಪುಸ್ತಕವು ನಮ್ಮ ಕೈಸೇರಿರುವದು. ಈ ಪುಸ್ತಕವು ಭಾಷಾ ದೃಷ್ಟಿಯಿಂದಲೂ ಐತಿಹಾಸಿಕ ದೃಷ್ಟಿಯಿಂದಲೂ ವಾಚನಾರ್ಹವಾಗಿರುವದು. ಇತ್ತಿತ್ತಲಾಗಿ ಕನ್ನಡ ಭಾಷಾ ಸೇವಕರ ಪರಿಶ್ರಮವಾದ ಪ್ರತಿ ವರ್ಷ ನಾಲ್ಕೆಂಟು ಪುಸ್ತಕಗಳು ಹೊರ ಬೀಳಹತ್ತಿರುವದು ಕನ್ನಡಿಗರ ಸುದೈವವೇ. ಆದರೆ ಈ ಪುಸ್ತಕಗಳನ್ನೆಲ್ಲಾ ಸೂಕ್ಷ ದೃಷ್ಟಿಯಿಂದ ಪರೀಕ್ಷಿಸಿ ನೋಡಲು ನಿಜವಾದ ಕನ್ನಡ ಅಭಿಮಾನಿಗಳಿಗೆ ಬಾಣವು ಬಡಿಯದಂತಾಗುವದು. ಯಾಕಂದರೆ ಅವುಗಳೊಳಗಿನ ವಾಕ್ಯ ರಚನೆಯು ಮಹಾರಾಷ್ಟ್ರ ಭಾಷೆಯನ್ನು ಹೋಲುವದು. ಶುದ್ಧ ಕನ್ನಡ ಶಬ್ದಗಳ ಯೋಜನೆಯಂತೂ ಅವುಗಳಲ್ಲಿ ಹೇಳ ಹೆಸರಿರುವದಿಲ್ಲ. ವಾಕ್ಯಗಳ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ಪುನಃ ಪುನಃ ಅವುಗಳನ್ನು ಓದಬೇಕಾಗುತ್ತದೆ. ಇನ್ನೂ ಅದರೊಳಗಿನ ಮರ್ಮವು ತಿಳಿಯುವದಂತೂ ಒತ್ತಟ್ಟಿಗಿರಲಿ ..
'ಕರ್ನಾಟಕ ಗತವೈಭವ'ದ ಭಾಷಾ ಸರಣಿಯನ್ನು ನೋಡಿ ಮನಸ್ಸು ಉಕ್ಕೇರುವದು. ಅದರಲ್ಲಿಯ ಶುದ್ಧ ಕನ್ನಡ ಶಬ್ದಗಳ ಯೋಜನೆಯು ಮನಸ್ಸಿಗೆ ಪರಮಾನಂದವನ್ನೀಯುವದು. ಸ್ವಲ್ಪದರದಲ್ಲಿ ಹೇಳುವದೇನಂದರೆ, ಹೊಸದಾಗಿ ಲೇಖಕರಾಗಲಿಚ್ಛಿಸುವವರು ಈ ಪುಸ್ತಕವನ್ನು ತಮ್ಮ ಮೇಲಪಂಗ್ತಿಯಾಗಿ ಇಟ್ಟು
ಕೊಳ್ಳಬೇಕು. ಐತಿಹಾಸಿಕ ವಿಷಯದ ಪ್ರತಿಪಾದನೆಯನ್ನು ಮಧುರ ಭಾಷೆಯೊಡನೆ ಬೆರೆಸಿದ್ದರಿಂದ ಈ ಪ್ರಬಂಧವು ಬಹಳ ಸರಸವಾಗಿ ತೋರುವದು. ಸಾಮಾನ್ಯ ವಾಚಕರಿಗೆ ಈ ಪ್ರಬಂಧವು ಮನೋರಂಜನೆಯನ್ನೀಯುವದು. ಕರ್ನಾಟಕ ಇತಿಹಾಸ ಮಂದಿರವನ್ನು ಪ್ರವೇಶಲಿಚ್ಚಿಸುವವರಿಗೆ ಇದು ಮಾರ್ಗದರ್ಶಿಯಾಗಿರುವದು. ಭಾಷಾಭಿಲಾಷಿಗಳಿಗೆ ಇದು ಕೈಪಿಡಿಯಾಗಿರುವದು. ಸ್ವದೇಶಕ್ಕೂ ಸ್ವಭಾಷೆಯ ವಿಷಯಕ್ಕೂ ಅನಾದರವನ್ನೂ ನಿರಾಶವನ್ನೂ ತಾಳಿದ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಈ ಪ್ರಬಂಧವು ಸ್ವಾಭಿಮಾನದ ಬೀಜವನ್ನು ಒಡಮೂಡಿಸದೆ ಇರದು. ಕರ್ನಾಟಕದ ಗತವೈಭವವನ್ನು ಅರಿತು ಕೊಳ್ಳಲಿಚ್ಚಿಸುವವರು ಈ ಪುಸ್ತಕವನ್ನು ಒಂದು ಅರಘಳಿಗೆ ಓದಿದರೆ ಸಾಕು, ಪ್ರಾಚೀನ ಕಾಲದ ನಮ್ಮ ಎಲ್ಲ ವೈಭವವು ನಮ್ಮ ಕಣ್ಣ ಮುಂದೆ ಕಟ್ಟಿದಂತಾಗುವದು. ರಾ। ರಾ| ವೆಂಕಟರಾವ್ ಆಲೂರವರು ಕರ್ನಾಟಕ ಉದ್ಧಾರಾರ್ಥವಾಗಿ ಪ್ರಾರಂಭಿಸಿದ ತಪಶ್ಚರ್ಯಕ್ಕೆ ಕನ್ನಡ ಮಾತೆಯು ಪ್ರಸನ್ನಳಾಗಿ ಅವರ ಲೆಖ್ಖಣಿಕೆಗೆ ಸ್ಫೂರ್ತಿ ಯನ್ನು ಕೊಟ್ಟಿರುವಳು. ಕನ್ನಡ ಮಾತೆಯ ಮುದ್ದು ಮಕ್ಕಳಾದ ಕೈ.ವಾ.ತೂರಮರಿ, ವೆಂಕಟ ರಂಗೋಕಟ್ಟಿ, ಧೋಂಡೋ ನರಸಿಂಹ ಮುಳಬಾಗಲ ಮುಂತಾದ ಲೇಖಕರ ಮಣಿಮಾತೆಯಲ್ಲಿ ಇವರನ್ನು ಪೋಣಿಸಲಿಕ್ಕೆ ಏನೂ ಅಡ್ಡಿ ಇಲ್ಲ. ರಾ। ರಾ| ಆಲೂರವರ ಮಾತೃ ವಾತ್ಸಲ್ಯಕ್ಕೆ ಲುಬ್ಧಳಾದ ನಮ್ಮ ಕನ್ನಡ ಮಾತೆಯು ಕನ್ನಡ ಪುಸ್ತಕ ಭಾಂಡಾರವನ್ನು ಸುಶೋಭಿತ ಮಾಡಲಿಕ್ಕೆ ಅವರಿಗೆ ಹೆಚ್ಚಿನ ಬುದ್ಧಿಯನ್ನೂ ಸಾಮರ್ಥ್ಯವನ್ನೂ ಕೊಟ್ಟು ಕನ್ನಡಿಗರನ್ನು ಜಾಗ್ರತೆ ಪಡಿಸಲೆಂದು ನಾವು ಪರಮೇಶ್ವರನನ್ನು ಪ್ರಾರ್ಥಿಸುತ್ತೇವೆ.
೫ ಮಾರ್ಚಿ, ಸನ್ ೧೯೧೮
ಇವಲ್ಲದೆ ವಾಗ್ಭೂಷಣ, ಚಂದ್ರೋದಯ, ಡೆಕ್ಕನ ಕಾಲೇಜ ಪತ್ರಿಕೆ, ಕರ್ನಾಟಕ ಕಾಲೇಜ ಪತ್ರಿಕೆ ಮುಂತಾದವುಗಳಲ್ಲಿ ಉತ್ತಮವಾದ ಅಭಿಪ್ರಾಯಗಳು ಬಂದಿವೆ.
ಧಾರವಾಡ.
(ಸ್ಥಾಪನೆಯಾದ ತಾರೀಖು ೨೮-೯-೧೯೧೪.)
೨. ಈಗ ಮೂರು ನಾಲ್ಕು ವರ್ಷಗಳಲ್ಲಿ ಮಂಡಲದ ಸಭಾಸದರು ಪುಸ್ತಕಗಳ ರೂಪದಿಂದಲೂ, ಲೇಖಗಳ ರೂಪದಿಂದಲೂ, ಭಾಷಣಗಳ ರೂಪದಿಂದಲೂ ಇತಿಹಾಸದ ಅಭಿಮಾನವನ್ನು ಜಾಗೃತಿಗೊಳಿಸಿರುವ ಸಂಗತಿಯು ಸರ್ವರಿಗೂ ಈಗ ಗೊತ್ತೇ ಇದೆ. ಮಂಡಲದ ಉಚ್ಛ ಧ್ಯೇಯವನ್ನರಿತು ಮುಂಬಯಿ- ಮದ್ರಾಸ-ಮೈಸೂರ-ವಾಯವ್ಯ ಪ್ರಾಂತಗಳ ಸರಕಾರದವರು ತಮ್ಮ ಆರ್ಕಿಯಾಲಾಜಿಕಲ್ ರಿಪೋರ್ಟುಗಳನ್ನು ಮಂಡಲಕ್ಕೆ ಉಚಿತವಾಗಿ ಕಳುಹಿಸುತ್ತಿರುವರು. ಪುಣೆಯ ಭಾರತ-ಇತಿಹಾಸ-ಸಂಶೋಧಕ-ಮಂಡಲದವರು ಈ ಮಂಡಲದ ಸಂಗಡ ಸಹಕಾರದಿಂದ ಕೆಲಸಮಾಡಲು ಒಪ್ಪಿಕೊಂಡಿದ್ದಾರೆ. ಧುಳೆಯ ಸತ್ಕಾರ್ಯೋತ್ತೇಜಕ ಸಭೆಯ ಪತ್ರಿಕೆಯಲ್ಲಿ ಈ ಮಂಡಲದ ಬಗ್ಗೆ ಪ್ರಶಂಸನಾ ಪರ ಲೇಖವು ಬಂದಿದೆ.
೩. ಮಂಡಲದ ಸಂಗ್ರಹದಲ್ಲಿ ಕರ್ನಾಟಕ-ಇತಿಹಾಸಕ್ಕೆ ಸಂಬಂಧ ಪಟ್ಟ ಗ್ರಂಥಗಳೂ, Epigraphia Indica, Mythic Society Journal, Hyderabad Archælogical Society Journal, इतहिहास व ऐतहिहासिक ಮುಂತಾದ ಪತ್ರಿಕೆಗಳೂ ಇರುತ್ತವೆ. ಕೆಲವು ಮಹನೀಯರ ಮುಖಾಂತರ ಸಂಪಾದಿಸಿದ ತಾಮ್ರ ಪಟಗಳೂ, ಕನ್ನಡಗೀತೆಯ ಮೂರು ಹಸ್ತಲಿಖಿತ ಪ್ರತಿಗಳೂ, ಚಾವುಂಡರಾಯ ಪುರಾಣದ ತಾಡುವಲಿಯ ಒಂದು ಅಪರೂಪ ಪ್ರತಿಯೂ, ಮತ್ತೂ ಅನೇಕ ಹಸ್ತಲಿಖಿತ ಪ್ರತಿಗಳೂ ಶಿಲಾಲಿಪಿಗಳ ಅನೇಕ ಮುದ್ರಣಗಳೂ ಮಂಡಲಕ್ಕಾಗಿ ದೊರೆತಿವೆ. ತಾಮ್ರ ಪಟಗಳಾಗಲಿ, ಮಹತ್ವದ ಕಾಗದ ಪತ್ರಗಳಾಗಲಿ ಸಂಗ್ರಹದಲ್ಲಿದ್ದವರು ಅವನ್ನು ಮಂಡಲಕ್ಕೆ ಕಳಿಸಿದರೆ, ಮಂಡಲದವರು ಅವುಗಳ ಉಪಯೋಗವನ್ನು ಮಾಡಿಕೊಂಡು ಬೇಕಾದರೆ, ಅವ ರವರ ವಸ್ತುಗಳನ್ನು ಅವರಿಗೆ ತಿರುಗಿ ಕಳಿಸಿ ಕೊಡುವರು. ಹಳ್ಳಿಗಳಲ್ಲಿ ಶಾಲೆಯ ಮಾಸ್ತರರು ತಮ್ಮ ಊರಿನ ಇತಿಹಾಸದ ಬಗ್ಗೆ ವಿಶೇಷ ಸಂಗತಿಗಳನ್ನು ತಿಳಿಸಿದರೆ, ಮಂಡಲವು ಅವರಿಗೆ ಅತ್ಯಂತ ಋಣಿಯಾಗುವುದು.
೪. ಈ ಮಂಡಲಕ್ಕೆ ಸಭಾಸದರಾಗತಕ್ಕವರ ವರ್ಗಗಳು:-
(ಅ) ೧೦೦ ಇಲ್ಲವೆ ಹೆಚ್ಚಿಗೆ ರೂಪಾಯಿ ಕೊಡತಕ್ಕವರು ಆಶ್ರಯದಾತರು.
(ಆ) ೫೦ ಇಲ್ಲವೆ ಹೆಚ್ಚಿಗೆ ರೂಪಾಯಿ ಕೊಡತಕ್ಕವರು ಫೆಲೋಗಳು.
(ಇ) ವಾರ್ಷಿಕ ೧೨ ರೂಪಾಯಿ ಕೊಡುವವರು ೧ನೇ ವರ್ಗದ ಸಭಾಸದರು.
(ಈ) ವಾರ್ಷಿಕ ೬ ರೂಪಾಯಿ ಕೊಡುವವರು ೨ನೇ ವರ್ಗದ ಸಭಾಸದರು.
(ಉ) ವಾರ್ಷಿಕ ೩ ರೂಪಾಯಿ ಕೊಡುವವರು ೩ ನೇ ವರ್ಗದ ಸಭಾಸದರು.
(ಊ) ಮಂಡಲದ ಪ್ರತ್ಯಕ್ಷ ಕೆಲಸ ಮಾಡಲೊಪ್ಪಿ ವರ್ಷಕ್ಕೆ ೧ ರೂಪಾಯಿ ಕೊಡುವವರು ವಿದ್ಯಾರ್ಥಿ-ಸಭಾಸದರು.
ಇತಿಹಾಸಾಭಿಮಾನಿಗಳು ಯಾವದೊಂದು ವರ್ಗದ ಸಭಾಸದರಾಗಿ, ಮಂಡಲಕ್ಕೆ ಪ್ರೋತ್ಸಾಹನ ಕೊಡುವರೆಂದು ಕೋರಿಕೆಯದೆ.
ತಾ. ೧ –೯ – ೧೯೧೯.
ಸ್ವದೇಶೀಯ ಮಾಲು
ನಮ್ಮಲ್ಲಿ ಎಲ್ಲ ತರದ ಮಸಿ ಚೀಟುಗಳು, ಬಾರನಿಸಿ (ಕಾಪಿಂಗ) ಮಸಿ, ಪ್ರಿಂಟಿಂಗ ಇಂಕ್, ನಾನಾ ಪ್ರಕಾರದ ದಂತಮಂಜನಗಳು, ಗಜಕರ್ಣದ ಮಲಮ, ಹುರುಕಿನ ಚೀಟುಗಳು, ಸುವಾಸಿಕ ಜರ್ದಾ ತಂಬಾಕ, ಸುವಾಸಿಕ ಕಾಚಿನವಡಿಯ ಚೀಟುಗಳು, ತಾಂಬೂಲ ವಿಹಾರ ಮೊದಲಾದ ಎಲ್ಲ ಸಾಮಾನುಗಳು ಯೋಗ್ಯ ಮತ್ತು ಮಾಫಕದರದಿಂದ ನಮ್ಮ ಕಾರಖಾನೆಯಲ್ಲಿ ದೊರೆಯುವವು, ಪತ್ರ ವ್ಯವಹಾರಮಾಡಿರಿ.
ಮಾಲಕ, ಶ್ರೀ ವಿದ್ಯಾರಣ್ಯ ಡಿಪೋ,
ಪೊ:- ತಾಳಿಕೋಟೆ,
ಜಿ: – ವಿಜಾಪೂರು.