ಕರ್ನಾಟಕ ಗತವೈಭವ/೧೧ನೆಯ ಪ್ರಕರಣ

ವಿಕಿಸೋರ್ಸ್ದಿಂದ

೧೧ನೆಯ ಪ್ರಕರಣ


ವಿಜಯನಗರ ವಂಶಾವಳಿ
ಸಂಗಮವಂಶ

ಸಂಗಮ~ಕಾಮಾಂಬಿಕಾ





(೧) ಹರಿಹರ (೧ನೇ) ಕಂಪಣ್ಣ(ಸಂಗಮ) (೨) ಬುಕ್ಕರಾಯ ಮಾರಪ್ಪ ಮುದ್ದಪ್ಪ
(೧೩೩೬-೧೩೫೩) ~ಗೌರಾಂಬಿಕಾ (೧೩೫೩-೧೩೭೭)




(೩) ಹರಿಹರ (೨ನೇ) ವಿರುಪಣ್ಣ ಮಲ್ಲಿನಾಥ ಕಂಪಣ್ಣ
(೧೩೭೭-೧೪೦೪)


(೪)ಬುಕ್ಕರಾಯ (೫) ದೇವರಾಯ, ಪ್ರತಾಪ ದೇವರಾಯ
(೧೪೦೫-೧೪೦೬) (೧೪೦೬-೧೪೧೬)
(೬) ವಿಜಯರಾಯ ೧೪೧೬-೧೪೧೭
(೭) ದೇವರಾಯ (೨) ೧೪೧೯-೧೪೪೬


(೮) ಮಲ್ಲಿಕಾರ್ಜುನ ೧೪೪೬- ೧೪೯೭ (೯) ವಿರೂಪಾಕ್ಷ ೧೪೬೭-೧೪೭೮
ನರಸ ಮನೆತನ.
(೧೨) ನರಸ, ನರಸಿಂಹ ೧೪೯೬-೧೦೩



(೧೩) ವೀರನರಸಿಂಹ, ಭುಜಬಲರಾಯ (೧೪) ಕೃಷ್ಣರಾಯ (೧೫) ಅಚ್ಯುತರಾಯ ರಂಗ
(೧೫೦೪-೧೫೦೯) (೧೫೦೯-೧೫೨೯) (೧೬೩೦-೧೫೪೨)


(೧೬) ವೆಂಕಟದೇವರಾಯ (೧೫೪೨) (೧೭)ಸದಾಶಿವರಾಯ (೧೫೪೩-೧೫೬೭)

೮೦

ಕರ್ನಾಟಕ ಗತವೈಭವ


ವಿಜಯನಗರದ ಅರಸರು


कर्णाटलोकनयनोत्सवपूर्णचंद्रः|
साकं तया हृदयसम्मतया नरेंद्रः॥
कालाचितान्यनुभवन् क्रमशः सुखानि ।
वीरश्चिराय विजयापुरमध्यवात्सीत् ॥

-ಗಂಗಾದೇವಿ.

ರ್ನಾಟಕದ ಕೊನೆಯ ಮನೆತನವೇ ವಿಜಯನಗರವು. ಬಾದಾಮಿಯ ಚಾಲುಕ್ಯರನ್ನು ಕರ್ನಾಟಕ-ಸಿಂಹಾಸನ-ಸ್ಥಾಪನಾಚಾರ್ಯರೆಂದು ಹೇಳಬಹುದು. ಯಾಕೆಂದರೆ, ಚಾಲುಕ್ಯರಿಗಿಂತ ಮೊದಲು ಕದಂಬ, ಗಂಗ ಮುಂತಾದ ಬೇರೆ ಬೇರೆ ರಾಜ್ಯಗಳು ಕರ್ನಾಟಕದಲ್ಲಿ ಆಳಿಹೋಗಿದ್ದರೂ, ಇಡೀ ಕರ್ನಾಟಕವು ಒಬ್ಬನೇ ಅರಸನ ಏಕಛತ್ರಾಧಿಪತ್ಯಕ್ಕೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿಯೇ ಒಳಪಟ್ಟಿತು. ಆಗ ಸ್ಥಾಪಿತವಾದ ಏಕಛತ್ರಾಧಿಪತ್ಯವು ರಾಷ್ಟ್ರಕೂಟರ ಕಾಲಕ್ಕೂ ಪುನಃ ಕಲ್ಯಾಣ-ಚಾಲುಕ್ಯರ ಕಾಲಕ್ಕೂ ಅವಿಚ್ಛಿನ್ನವಾಗಿ ನಡೆಯಿತು. ಮುಂದೆ ಅದು ಎರಡು ಹೋಳುಗಳಾಗಿ, ಉತ್ತರದ ಅರ್ಧ ಭಾಗವು ದೇವಗಿರಿ ಯಾದವರ ವಶವಾಯಿತೆಂದೂ ದಕ್ಷಿಣದ ಅರ್ಧ ಭಾಗವು ಹೊಯ್ಸಳ ಯಾದವರ ವಶಕ್ಕೆ ಹೋಯಿತೆಂದೂ ಸ್ಥೂಲಮಾನ ದಿಂದ ಹೇಳಬಹುದು. ಮುಂದೆ ಮುಸಲ್ಮಾನರು ದೇವಗಿರಿ ಯಾದವರನ್ನು ಸೋಲಿಸಿ ಉತ್ತರದ ಅರ್ಧ ಭಾಗವನ್ನು ನುಂಗಿದರು. ದಕ್ಷಿಣದ ಅರ್ಧ ಭಾಗವನ್ನು ನುಂಗುವ ಹಂಚಿಕೆಯಲ್ಲಿದ್ದರು. ಮುಸಲ್ಮಾನರ ಮೊದಲನೆಯ ಪ್ರಹಾರವು ದೇವಗಿರಿ ಯಾದವರಿಗೂ ವರಂಗಲ್ಲ ಕಾಕತೀಯ ಅರಸರಿಗೂ ತಗುಲಿತು. ಆ ಪೆಟ್ಟು ತಗಲುವವರೆಗೆ ಮಿಕ್ಕ ಅರಸರು, ಎಚ್ಚರಗೊಳ್ಳಲಿಲ್ಲ. ಆದರೆ ಆ ಪಟ್ಟು ಬಡಿದ ಕೂಡಲೆ ದಕ್ಷಿಣ ಹಿಂದುಸ್ಥಾನದಲ್ಲಿ ಹಾಹಾಕಾರವೆದ್ದಿತು. ಮುಸಲ್ಮಾನರು ಪ್ರಬಲರಾದ ಶತ್ರುಗಳಾದುದರಿಂದ, ಒಬ್ಬೊಬ್ಬರೇ ಅವರಿದಿರಿಗೆ ನಿಂತರೆ ನಡೆಯಲಾರದೆಂದು ಬಗೆದು, ಎಲ್ಲರೂ ಒಕ್ಕಟ್ಟಾಗಿ ನಿಲ್ಲುವುದು ಅವಶ್ಯವೆಂಬ ಕಲ್ಪನೆಯು ಆಗ ಉದ್ಭವಿಸಿತು. ಈ ಕಲ್ಪನೆಯ, ಮೂಲೋತ್ಪಾದಕರೇ ಶ್ರೀ ವಿದ್ಯಾರಣ್ಯರು. ಚದರಿಹೋದ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಟ್ಟುಗೂಡಿಸಿ, ಮುಸಲ್ಮಾನರಿದಿರಿಗೆ

೧೧ನೆಯ ಪ್ರಕರಣ - ವಿಜಯನಗರ ಅರಸರು

೮೧


ಒಕ್ಕಟ್ಟಿನಿಂದ ನಿಲ್ಲುವಂತೆ ಮಾಡಿದುದೇ ಶ್ರೀ ವಿದ್ಯಾರಣ್ಯರು ಮಾಡಿದ ಮಹತ್ವದ ಕೆಲಸವು. ಪರದೇಶೀಯ ಶತ್ರುಗಳಿಗೆ ಇದಿರಾಗಬೇಕಾದರೆ ನಾವು ನಮ್ಮ ಒಳ ಜಗಳಗಳನ್ನೆಲ್ಲವನ್ನೂ ಮರೆತು ಬಿಡಬೇಕೆಂಬ ತತ್ವವನ್ನು ಹಿಂದುಸ್ಥಾನದ ಇತಿಹಾಸದಲ್ಲಿ ಎಲ್ಲಕ್ಕೂ ಮೊದಲಿಗೆ ಶ್ರೀ ವಿದ್ಯಾರಣ್ಯರೇ ಕಲಿಸಿದವರು. ಈ ತತ್ವವನ್ನರಿಯದ ಮೂಲಕವೇ ಉತ್ತರ ಹಿಂದುಸ್ಥಾನವು ಮುಸಲ್ಮಾನರ ಅಂಕಿತವಾಯಿತು; ಈ ತತ್ವವನ್ನು ಮರೆತ ಮುಸಲ್ಮಾನರು ವಿಜಯನಗರದ ಬಲಾಡ್ಯರಾದ ಅರಸರೊಡನೆ ಸುಮಾರು ಎರಡು ಶತಮಾನಗಳವರೆಗೆ ಎಡೆಬಿಡದೆ ಕಾದಬೇಕಾಯಿತು. ಈ ತತ್ವವನ್ನು ಮುಸಲ್ಮಾನರು ಕಂಡುಹಿಡಿದು, ತಮ್ಮ ತಪ್ಪನ್ನು ತಿದ್ದಿಕೊಂಡು ಒಕ್ಕಟ್ಟಿನಿಂದ ಕಾದಿದುದರಿಂದಲೇ ಅವರಿಗೆ ವಿಜಯನಗರವನ್ನು ಪಾತಾಳಕ್ಕೆ ಮೆಟ್ಟುವುದಕ್ಕೆ ಸಾಧ್ಯವಾಯಿತು, ಇರಲಿ! ಸುಮಾರು ಎರಡು ಶತಮಾನಗಳವರೆಗೆ ವಿಜಯ ನಗರದ ಅರಸರು ಮುಸಲ್ಮಾನರ ಪ್ರವಾಹವನ್ನು ಕೃಷ್ಣೆಯ ದಕ್ಷಿಣಕ್ಕೆ ಬರಗುಡದಂತೆ ಹೇಗೆ ತಡೆದು ಹಿಡಿದರೆಂಬುದರ ಇತಿಹಾಸವು ಅತ್ಯಂತ ಮನೋರಂಜಕವಾಗಿದೆ. ಈ ದೃಷ್ಟಿಯಿಂದ ನೋಡಲು, ವಿಜಯನಗರ ರಾಜ್ಯವು ಹಿಂದಿನ ರಾಜ್ಯಗಳಷ್ಟು ವಿಸ್ತಾರವನ್ನು ಹೊಂದಿರದಿದ್ದರೂ ಅದಕ್ಕಿಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. ಯಾಕಂದರೆ ದಕ್ಷಿಣ ಹಿಂದುಸ್ಥಾನಕ್ಕೆ ಅತ್ಯಂತ ದುರ್ಘಟವಾದ ಸಂಕಟಕಾಲ ವೊದಗಿದಾಗ ಅದನ್ನು ರಕ್ಷಿಸಿದ್ದೇನೂ ಕಡಿಮೆಯ ಕಾರ್ಯವಲ್ಲ. ವಿಜಯ ನಗರದ ಅರಸರು ತಮ್ಮ ಪೂರ್ವ ವೈಭವವನ್ನೂ ಅಚ್ಚಳಿಯದೆ ಕಾಯ್ದು ಕೊಂಡ ರೆಂಬುದು ಕರ್ನಾಟಕಸ್ಥರಿಗೆ ನಿಜವಾಗಿಯೂ ಅತ್ಯಂತ ಗೌರವಾಸ್ಪದವಾದ ಸಂಗತಿಯಾಗಿದೆ.

ಶ್ರೀ ವಿದ್ಯಾರಣ್ಯರು ಹುಕ್ಕಬುಕ್ಕರನ್ನು ಪ್ರೋತ್ಸಾಹಿಸಿ, ಈ ಸ್ವರಾಜ್ಯ ಸ್ಥಾಪನೆಯ ಕಾರ್ಯವನ್ನು ಕೊನೆಗಾಣಿಸಿದರು. ಶ್ರೀ ವಿದ್ಯಾರಣ್ಯರು ಆಗ ಶೃಂಗೇರಿಯಲ್ಲಿ ಶಂಕರಾಚಾರ್ಯರ ಸ್ಥಾನಾಪನ್ನರಾಗಿದ್ದರು. ಆದರೆ ದೇಶಕ್ಕೆ ಇಂಥ ವಿಪತ್ತು ಬಂದೊದಗಿದಾಗ ಸುಮ್ಮನೆ ಮೂಗು ಹಿಡಿದುಕೊಂಡು ಕುಳ್ಳಿರುವುದು ಮಾತ್ರವೇ ತಮ್ಮ ಕರ್ತವ್ಯವಲ್ಲವೆಂದೂ ಆ ತಮ್ಮ ಧರ್ಮ ರಕ್ಷಣಾರ್ಥವಾಗಿಯೇ ಸ್ವರಾಜ್ಯವನ್ನು ಸ್ಥಾಪಿಸುವುದು ತಮ್ಮ ಆದ್ಯ ಕರ್ತವ್ಯವೆಂದೂ ಆಲೋಚಿಸಿ, ಅವರು ವಿಜಯನಗರದಲ್ಲಿ ರಾಜ್ಯವನ್ನು ಸ್ಥಾಪಿಸಿದರು.ಸಂಗಮವಂಶ (೧೩೩೬-೧೪೭೮), 

೮೨

ಕರ್ನಾಟಕ ಗತವೈಭವ


ವಿಜಯನಗರದಲ್ಲಿ ಒಟ್ಟು ಮೂರು ವಂಶಗಳು ಆಳಿದವು. ಮೊದಲನೆಯ ವಂಶವು ಸಂಗಮವಂಶವು, ಇದರಲ್ಲಿ ೯ ಜನ ಅರಸರು ಆಗಿಹೋದರು. ಇವರು ಯಾದವರು. ಇವರ ಕುಲದೇವತೆ ವಿರೂಪಾಕ್ಷನು. ಬುಕ್ಕರಾಯನೇ ಈ ವಂಶದಲ್ಲಿ ಪ್ರಬಲನಾದ ಮೊದಲನೆಯ ರಾಜನು (೧೩೫೪-೧೩೭೭). ವಿಜಯನಗರ ದಲ್ಲಿಯ ಕೋಟೆ ಕೊತ್ತಳಗಳನ್ನು ಕಟ್ಟಿಸಿದವನು ಇವನೇ. ಇವನಿಗೆ “ಭಾಷೆಗೆ ತಪ್ಪುವ ರಾಯರ ಗಂಡ”, “ ಪೂರ್ವ- ಪಶ್ಚಿಮ-ದಕ್ಷಿಣ ಸಮುದ್ರಾಧೀಶ್ವರ” ಎಂಬ ಬಿರುದುಗಳಿದ್ದು ವು. ೧೩೬೮ನೆಯ ಇಸವಿಯಲ್ಲಿ ಈತನು ಜೈನರಿಗೂ ವೈಷ್ಣವರಿಗೂ ಉಂಟಾದ ಜಗಳವನ್ನು ತೀರಿಸಿದ ಕಥೆಯು ಮನೋವೇಧಕವಾಗಿದೆ. (೧೪ನೆಯ ಪ್ರಕರಣ ನೋಡಿರಿ.) ಅದರಿಂದ ಈ ಅರಸನು ಧರ್ಮ ವಿಷಯದಲ್ಲಿ ಎಷ್ಟು ಸಮ ಬುದ್ಧಿಯುಳ್ಳವನಿದ್ದನೆಂಬುದು ಗೊತ್ತಾಗುತ್ತದೆ. ಈ ಬುಕ್ಕರಾಯನ ಸೊಸೆಯಾದ ಗಂಗಾದೇವಿಯೆಂಬವಳು "ವೀರಕಂಪಣರಾಯ ಚರಿತ"ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯವೊಂದನ್ನು ರಚಿಸಿದ್ದಾಳೆ. ಅದು ಮೊನ್ನೆ ಮೊನ್ನೆ ಪ್ರಸಿದ್ದವಾಗಿದೆ. ಬುಕ್ಕರಾಯ ಪಟ್ಟಣ ಮುಂತಾದ ಇವನ ಹೆಸರಿನ ಊರುಗಳೂ ಈಗಲೂ ಪ್ರಸಿದ್ದ ವಿರುತ್ತವೆ. ಇವನ ಮಗನಾದ ಹರಿಹರನು ವಿದ್ವಾಂಸರಿಗೆ ಬಹಳ ಆಶ್ರಯಕೊಡುತಿದ್ದನು. ಈ ೨ನೆಯ ಹರಿಹರರಾಯನನ್ನು “ಕರ್ನಾಟಕ ವಿದ್ಯಾವಿಲಾಸ” ವೆಂದು ಕರೆಯುತ್ತಿದ್ದರು. ಈ ಹರಿಹರನ ಕಾಲದಲ್ಲಿ ಗುಂಡನೆಂಬ ಸೇನಾನಾಯಕನು ಅನೇಕ ಶೂರಕೃತ್ಯಗಳನ್ನು ಮಾಡಿದನು. ಹರಿಹರನು ೩೦-೮-೧೪೦೪ ನೆಯ ಇಸವಿಯಲ್ಲಿ ಮರಣಹೊಂದಿದನು.
ನೆಯ ದೇವರಾಯನಿಗೆ ಪ್ರೌಢದೇವರಾಯನೆಂದೂ ಹೆಸರುಂಟು. ಈತನು ಧೂರ್ತ ವಿಚಾರವಾಡಿ ತನ್ನ ಸೈನ್ಯದಲ್ಲಿ ಮುಸಲ್ಮಾನರನ್ನಿಟ್ಟುಕೊಂಡು, ತನ್ನ ಸೈನಿಕರಿಗೆ ಯುದ್ಧಕಲೆಯನ್ನು ಕಲಿಸಿದನು. ಈತನು ೨೪-೫-೧೪೪೬ರಲ್ಲಿ ಸತ್ತನು. ಇವನ ತರುವಾಯ ಈ ಸಂಗಮವಂಶವು ಕುಗ್ಗಿತು. ಮುಂದೆ ವಿಜಯನಗರದ ೨ನೆಯ ವಂಶವು ಎದ್ದಿತು.
ಸಾಳ್ವರ ಮನೆತನ (೧೪೭೯-೧೪೯೬): ಸಂಗಮ ಮನೆತನದ ಕೊನೆಯ ಆರಸನಾದ ವಿರೂಪಾಕ್ಷನ ಮುಖ್ಯ ಸರದಾರನಾದ ಸಾಳ್ವನರಸಿಂಹನು ವಿಜಯ ನಗರದ ಪಟ್ಟವನ್ನು ಸೆಳೆದುಕೊಂಡು ಅರಸನಾದನು. ಮುಸಲ್ಮಾನರಿಗೂ, 

೧೧ನೆಯ ಪ್ರಕರಣ - ವಿಜಯನಗರ ಅರಸರು

೮೩


ವಿಜಯನಗರದ ಅರಸರಿಗೂ ಕೃಷ್ಣಾ-ತುಂಗಭದ್ರಾ ನದಿಗಳ ನಡುವಿನ ಸೀಮೆಗಾಗಿ ಆಗಾಗ ಯುದ್ಧಗಳಾಗುತ್ತಿದ್ದುವು. ಈ ಯುದ್ಧಗಳಲ್ಲಿ ಸಾಳ್ವ ನರಸಿಂಹನು ಪರಾಕ್ರಮವನ್ನು ತೋರಿಸಿ ಅತ್ಯಂತ ಪ್ರಬಲನಾಗಿದ್ದನು. ಆದುದರಿಂದಲೇ ಇವನಿಗೆ ಸಿಂಹಾಸನವನ್ನು ಎತ್ತಿಹಾಕುವುದಕ್ಕೆ ಸಾಧ್ಯವಾಯಿತು. ಆದರೆ ಈತನ ವಂಶಜರು ಬಹಳ ದಿವಸ ಆಳಲಿಲ್ಲ. ಈತನ ಮಗನಾದ ಇಮ್ಮಡಿ ನರಸಿಂಹ ನನ್ನು ನರಸ ಅಥವಾ ನರಸಿಂಗನೆಂಬ ಅವನ ಸೇನಾಧಿಪತಿಯು ೧೪೯೬ನೆಯ ಇಸ್ವಿಯಲ್ಲಿ ಕೊಂದುಹಾಕಿದಂತೆ ತೋರುತ್ತದೆ.
ನರಸಮನೆತನ (೧೪೯೬-೧೫೬೭): ಈ ನರಸನು ತುಳವನು; ಬಲು ಶೂರನು, ಈತನು ಚೇರ-ಚೋಳ- ಪಾಂಡ್ಯ ದೇಶಗಳನ್ನು ಗೆದ್ದನು. ಈತನ ತರುವಾಯ ಈತನ ಮೂರು ಮಂದಿ ಮಕ್ಕಳು ಒಬ್ಬರ ಹಿಂದೊಬ್ಬರು ಪಟ್ಟವೇರಿದರು. ಆದರೆ ಅವರಲ್ಲಿ ೨ನೆಯವನಾದ ಕೃಷ್ಣ ದೇವರಾಯನೇ ಅತ್ಯಂತ ಪ್ರತಾಪಶಾಲಿಯು, ಈತನು ಪಟ್ಟವೇರಿದಕೂಡಲೇ ಮುಸಲ್ಮಾನರೊಡನೆ ಕಾಳಗಕ್ಕೆ ನಿಂತನು. ಈತನ ಆಳಿಕೆಯಲ್ಲಿ ಮುಸಲ್ಮಾನರು ಇವನೊಡನೆ ಅನೇಕ ಕಾಳಗ ಗಳನ್ನು ಮಾಡಿದರೂ, ಅವರಿಗೆ ಒಂದರಲ್ಲಿಯೂ ಜಯವು ಸಿಕ್ಕಲಿಲ್ಲ. ಕೃಷ್ಣರಾಯನು ಮಹಾ ಪರಾಕ್ರಮಿಯಾಗಿದ್ದು ದಲ್ಲದೆ, ವಿದ್ಯೆ- ಕಲಾಕೌಶಲ್ಯ-ಔದಾರ್ಯ ಗಳಲ್ಲಿಯೂ ಬಹು ವಿಖ್ಯಾತನಾಗಿದ್ದನು. ಈತನು ಸ್ವತಃ ತೆಲುಗು ಭಾಷೆಯಲ್ಲಿ ಗ್ರಂಥವನ್ನು ಬರೆದಿರುವನು. ಇವನಿಗೆ ಆಂಧ್ರಭೋಜನೆಂದು ಕರೆಯುತ್ತಿದ್ದರು. ಇವನು ತೆಲುಗು ಮನುಷ್ಯನೆಂದು ಕೆಲವರ ಕಲ್ಪನೆ. ಆದರೆ, ಇದು ತಪ್ಪೆಂದು ತೋರುತ್ತದೆ. ಇವನು ತೆಲುಗು ಭಾಷೆಯಲ್ಲಿ 'ಅಮುಕ್ತ ಮಾಲ್ಯದ' ಅಥವಾ 'ವಿಷ್ಣು ಚಿತ್ತೀಯ' ಎಂಬ ಗ್ರಂಥವನ್ನು ರಚಿಸಿರುವನೆಂಬುದರಿಂದ ಇವನು ತೆಲುಗುಮನುಷ್ಯನೆಂದು ಜನರು ಊಹಿಸುವಂತೆ ತೋರುತ್ತದೆ. ಆದರೆ ಆ ಪುಸ್ತಕವು ಏಕೆ ಬರೆಯಲ್ಪಟಿತೆಂಬುದಕ್ಕೆ ಅದರ ಪ್ರಾರಂಭದಲ್ಲಿ ಕೊಟ್ಟ ಕಥೆಯನ್ನು ಓದಿದರೆ ಅವನು ನಿಜವಾಗಿಯೇ ಕನ್ನಡ ಮನುಷ್ಯನೆಂದು ಹೇಳಲಿಕ್ಕೆ ಆಸ್ಪದವಿದೆ.

ಕೃಷ್ಣರಾಯನು ಶ್ರೀಕುಲವೆಂಬ ಗ್ರಾಮಕ್ಕೆ ಹೋದಾಗ ಅಲ್ಲಿಯ ಆಂಧ್ರ ವಿಷ್ಣು ದೇವರು ಏಕಾದಶಿಯ ದಿವಸ ಆ ರಾಜನ ಕನಸಿನಲ್ಲಿ ಬಂದು, ಆತನಿಗೆ ತೆಲುಗು ಭಾಷೆಯಲ್ಲಿ ಒಂದು ಕಾವ್ಯವನ್ನು ಬರೆದು ಅದನ್ನು ತಿರುಪತಿಯ ಶ್ರೀ

೮೪

ಕರ್ನಾಟಕ ಗತವೈಭವ


ವೆಂಕಟರಮಣ ದೇವರಿಗೆ ಸಮರ್ಪಿಸಲಿಕ್ಕೆ ಹೇಳಿದನಂತೆ. ಆಗ ತೆಲುಗು ಭಾಷೆಯಲ್ಲಿಯೇ ಈ 'ಕನ್ನಡರಾಯ'ನು ಏಕೆ ಗ್ರಂಥವನ್ನು ಬರೆಯಬೇಕೆಂಬುದಕ್ಕೆ ಆ ದೇವರು ಕೆಲವು ಕಾರಣಗಳನ್ನು ಹೇಳಿದನು. ಅವು ಯಾವುವೆಂದರೆ:- (೧) ಇದು ತೆಲುಗುದೇಶ, (೨) ನಾನು ತೆಲುಗು ದೇವರು, (೩) ತೆಲುಗು ಭಾಷೆ ಸಾಮಾನ್ಯ ಭಾಷೆಯಲ್ಲ, (೪) ಅನೇಕ ದೇಶಭಾಷೆಗಳನ್ನು ಬಲ್ಲವನಾದ ನಿನಗೆ ತೆಲುಗು ಭಾಷೆಯು ಲೇಸಾದ ಭಾಷೆಯೆಂಬುದು ಗೊತ್ತುಂಟು. ಆದರೆ, ಇಷ್ಟರಿಂದ ಆತನ ಮಾತೃ ಭಾಷೆಯು ತೆಲುಗು ಆಗಿತ್ತೆಂದು ಊಹಿಸಲಾಗದು, ತದ್ವಿರುದ್ದವಾಗಿ (೧) ಆ ತೆಲುಗು ದೇವರು ಆತನಿಗೆ 'ಕನ್ನಡರಾಯ' ನೆಂದು ಕರೆದಿರುವನು, (೨) ಕೃಷ್ಣರಾಯನು ತೆಲುಗು ಭಾಷೆಯವನೇ ಆಗಿದ್ದರೆ ಆತನಿಗೆ ತೆಲುಗು ಭಾಷೆಯಲ್ಲಿಯೇ ಗ್ರಂಥವನ್ನು ಬರೆಯಬೇಕೆಂದು ಬೇರೆ ಹೇಳುವ ಪ್ರಯೋಜನವಿರಲಿಲ್ಲ, (೩) ವಿಜಯನಗರ ರಾಜ್ಯವು ಬಹುತರವಾಗಿ ಕನ್ನಡ ರಾಜ್ಯವು, (೪) ರಾಜಧಾನಿಯಾದ ವಿಜಯನಗರ ಪಟ್ಟಣದ ಮುಖ್ಯ ಭಾಷೆ ಕನ್ನಡವು, (೫) ಕೃಷ್ಣರಾಯನಿಗೆ 'ಕನ್ನಡ ರಾಜ್ಯ ರಮಾ ರಮಣ” ಎಂದು ಬಿರುದಿತ್ತು. ಇವೇ ಮುಂತಾದ ಕಾರಣಗಳ ಮೂಲಕ ಆ ರಾಯನ ಮಾತೃಭಾಷೆಯು ಕನ್ನಡವೇ ಆಗಿತ್ತೆಂದು ಊಹಿಸಲಿಕ್ಕೆ ಬಲವಾದ ಆಸ್ಪದವುಂಟಾಗಿದೆ. ಇರಲಿ.

ವನ ಕಾಲಕ್ಕೆ ವಿಜಯನಗರದ ಸಾಮ್ರಾಜ್ಯವು ಪರಮಾವಧಿಯ ಘನತೆಗೇರಿತ್ತು. ಆದರೆ ನಮ್ಮ ಮಿಕ್ಕ ರಾಜ್ಯಗಳಂತೆ ಇದಕ್ಕೂ ಮುಂದೆ ಬಲಾಡ್ಯರಾದ ರಾಜರು ದೊರೆಯದುದರಿಂದ, ಇದು ಒಮ್ಮೆಲೆ ನೆಲಕ್ಕೆ ಕುಕ್ಕರಿಸಿತು. ಇರಲಿ, ಈ ಕೃಷ್ಣರಾಜನು ಅತ್ಯಂತ ಉದಾತ್ತ ಗುಣಗಳುಳ್ಳವನಾದುದರಿಂದ ತನ್ನ ದೇಶದಲ್ಲಿಯ ಮುಸಲ್ಮಾನ ಪ್ರಜೆಗಳು ತನಗೆ ಸಲಾಂ ಮಾಡಲಿಕ್ಕೆ ಹಿಂದುಮುಂದೆ ನೋಡಿಯಾರೆಂದು ಬಗೆದು, ತನ್ನಿದಿರಿಗೆ ಒಂದು ಕುರಾನವನ್ನು ಇಟ್ಟು, ಅದಕ್ಕೆ ಪೂಜ್ಯ ಭಾವವನ್ನು ತೋರಿಸಿದರೆ ಸಾಕೆಂದು ಹೇಳಿದ್ದನು, ಈತನ ದರಬಾರಿನಲ್ಲಿ ಅಷ್ಟ ದಿಗ್ಗಜಗಳೆಂಬ ಎಂಟು ಮಂದಿ ಮಹಾ ಪಂಡಿತರಿದ್ದರು. ತೆನ್ನಾಲ ರಾಮಕೃಷ್ಣನೂ ಅಪ್ಪಯ್ಯ ದೀಕ್ಷಿತರೂ ಅವರೊಳಗಿನವರೇ. ಈತನ ಕಾಲಕ್ಕೆ ಪರದೇಶಿಯ ಪ್ರವಾಸಿಕರು ವಿಜಯನಗರದ ವೈಭವವನ್ನು ಬಲು ಸುಂದರವಾಗಿ ವರ್ಣಿಸಿದ್ದಾರೆ. (ಮುಂದೆ ೧೨ನೆಯ ಪ್ರಕರಣದಲ್ಲಿ ನೋಡಿರಿ.)

೧೧ನೆಯ ಪ್ರಕರಣ - ವಿಜಯನಗರ ಅರಸರು

೮೫


ಅಚ್ಯುತರಾಯನೆಂಬ ಮುಂದಿನ ಅರಸನು ೧೫೩೯ ನೆಯ ಇಸವಿಯಲ್ಲಿ "ಆನಂದನಿಧಿ"ಯೆಂಬ ದೊಡ್ಡ ದಾನವನ್ನು ಮಾಡಿದನು.
ದರೆ ಅವನ ತರುವಾಯ ವಿಜಯನಗರದ ರಾಜ್ಯವು ಬಹಳ ದಿವಸ ಬಾಳಲಿಲ್ಲ. ಕಡೆಯಲ್ಲಿ, ಸದಾಶಿವರಾಯನ ಆಳಿಕೆಯಲ್ಲಿ ಕೃಷ್ಣ ದೇವರಾಯನ ಅಳಿಯನಾದ ರಾಮರಾಜನೆಂಬವನ ಕೈಯಲ್ಲಿ ರಾಜ್ಯ ಸೂತ್ರಗಳಿದ್ದುವು. ವಿಜಾಪುರ, ಗೋವಳ ಕೊಂಡ, ಅಹಮ್ಮದನಗರ, ಬೀದರ, ಈ ನಾಲ್ಕು ರಾಜ್ಯಗಳ ಬಾದಶಹಗಳೂ ಒಕ್ಕಟ್ಟಾಗಿ ಒಳಸಂಚು ಮಾಡಿ ಅವನೊಡನೆ ಯುದ್ಧಕ್ಕೆ ಅನುವಾದರು. ರಾಮರಾಜನು ಅತ್ಯಂತ ಶೂರನಾಗಿದ್ದನು, ಅವನಿಗೆ ಆಗ ೯೬ ವರುಷವಾಗಿತ್ತು, ಇಂಥ ಮುಪ್ಪಿನ ಮುದುಕನಾದರೂ ಅವನು ೩೦ ವರುಷದ ತರುಣನಂತೆ ಉತ್ಸಾಹವುಳ್ಳವನಾಗಿದ್ದನಂತೆ ! ಅವನು ತನ್ನ ದೊಡ್ಡ ಸೈನ್ಯದೊಂದಿಗೆ ತಾಳಿಕೋಟೆಯಲ್ಲಿ ಮುಸಲ್ಮಾನರ ಒಕ್ಕಟ್ಟಾದ ಮಹಾಸೈನ್ಯಕ್ಕೆ ಇದಿರಾದನು. ಅಲ್ಲಿ ೧೫೬೫ ನೆಯ ಇಸವಿಯ ಜನವರಿ ೨೩ ರಲ್ಲಿ ಅತ್ಯಂತ ತುಮುಲ ಕಾಳಗವೆಸಗಿತು. ರಾಮರಾಜನ ಪಕ್ಷದ ವೆಂಕಟಾದ್ರಿಯೂ, ಇಳೋತ್ತಮರಾಜನೂ ಬಹು ಪರಾಕ್ರಮದಿಂದ ಹೋರಾಡಿ ಹಗೆಗಳನ್ನು ಓಡಿಸುವ ಸಂಧಿಯಲ್ಲಿ, ರಾಮರಾಜನು ತಾನು ಮೇನೆಯಲ್ಲಿ ಕುಳಿತು ತನ್ನ ಸೈನ್ಯದವರಿಗೆ ಧೈರ್ಯಕೊಡುವುದಕ್ಕಾಗಿ ತಿರುಗಾಡುತ್ತಿದ್ದನು. ಅಷ್ಟರೊಳಗೆ ಶತ್ರುಗಳ ಮದ್ದಾನೆ ಮೈಮೇಲೆ ಬಿದ್ದುದನ್ನು ನೋಡಿ ಬೋಯಿಗಳು ಅಂಜಿ ತಮ್ಮ ಜೀವದಾಶೆಯಿಂದ ಮೇನೆಯನ್ನು ಚೆಲ್ಲಿ ಓಡಿಹೋಗಲಾಗಿ, ನಿಜಾಮ ಶಹನು ರಾಮರಾಜನನ್ನು ಸೆರೆಹಿಡಿದು ಅಲ್ಲಿಯೇ ಅವನ ತಲೆಯನ್ನು ಕೊಯ್ದು ಭಲ್ಯಕ್ಕೆ ಚುಚ್ಚಿ ಸೈನ್ಯದೊಳಗೆ ತಿರುಗಿಸಿದನು. ಅದನ್ನು ನೋಡಿ ವಿಜಯನಗರದ ದಂಡಿನವರು ಧೈರ್ಯಗುಂದಿ ಬೆನ್ನು ತೋರಿಸಿದರು. ಆಗ ಮುಸಲ್ಮಾನರು ಮಾಡಿದ ಕೊಲೆಗೆ ಅಳವಿಲ್ಲ; ರಕ್ತದ ಕಾಲುವೆಗಳು ಹರಿದುವು. ಈ ಮೇರೆಗೆ ಜಯವಾದ ಕೂಡಲೆ ಮುಸಲ್ಮಾನರು ನೆಟ್ಟಗೆ ವಿಜಯನಗರಕ್ಕೆ ಸಾಗಿ, ತಮಗೆ ಜಯವು ಸಿಕ್ಕೇ ಸಿಕ್ಕುವುದೆಂಬ ಭರವಸದಿಂದ ಮೈ ಮರೆತಿದ್ದ ಪಟ್ಟಣದ ನಿವಾಸಿಗಳನ್ನಲ್ಲಿ ಕೈಗೆ ಸಿಕ್ಕಿದಂತೆ ಕೊಂದು, ಪಟ್ಟಣವನ್ನು ಯಥೇಚ್ಚವಾಗಿ ಸುಲಿಗೆಮಾಡಿದರು.

ಮೇರೆಗೆ ಸುಮಾರು ೨೩೦ ವರ್ಷ ಘನತೆಯಿಂದ ಮೆರೆದ ವೈಭವ ಸಂಪನ್ನರಾಷ್ಟ್ರವು ಆಕಸ್ಮಿಕ ಕಾರಣದಿಂದ ಅರ್ಧ ನಿಮಿಷದಲ್ಲಿ ಮಾಯವಾಯಿತು.

೮೬

ಕರ್ನಾಟಕ ಗತವೈಭವ


ತೀರಿತು. ಅಂದಿಗೆ ಕರ್ನಾಟಕದ ವೈಭವಕ್ಕೆ ಕೊನೆಯಾಯಿತು! ಕರ್ನಾಟಕ ದೇವಿಯ ಹಣೆಯ ಕುಂಕುಮವು ಅಳಿಸಿತು; ಕೊರಳ ಮಂಗಳಸೂತ್ರವು ಹೆಚ್ಚಿತು! ಕರ್ನಾಟಕದ ಸಂಪತ್ತಿಯು ಸಮಾಧಿ ಹೊಂದಿತು! ಕರ್ನಾಟಕ ವಿದ್ಯಾನಿಧಿಯು ಅಡಗಿಹೋಯಿತು! ಕರ್ನಾಟಕ ಪ್ರತಾಪ ಸೂರ್ಯನು ಅಸ್ತನಾದನು. ಸಾರಾಂಶವೇನೆಂದರೆ ಅಂದಿನಿಂದ ಇಂದಿನವರೆಗೆ ಕರ್ನಾಟಕರಾದ ನಾವು ಇತಿಹಾಸದಿಂದ ನಾಮಶೇಷರಾಗಿ ಹೋಗಿರುವವು ! ಕರ್ನಾಟಕರೇ ನಾವು ಪೂರ್ವವೈಭವವನ್ನು ಪಡೆಯಲು ಪ್ರಯತ್ನಿಸುವ ಕಾಲವು ಇನ್ನೂ ಪ್ರಾಪ್ತವಾಗಿಲ್ಲವೋ? ವಿಚಾರ ಮಾಡಿರಿ.