ಕರ್ನಾಟಕ ಗತವೈಭವ/೧೨ನೆಯ ಪ್ರಕರಣ
೧೨ನೆಯ ಪ್ರಕರಣ
ವೈಭವ ವರ್ಣನೆ
ಕರ್ನಾಟಕದಲ್ಲಿ ಎಲ್ಲಕ್ಕೂ ಹಳೆಯ ಅರಸು ಮನೆತನವು ಕದಂಬರದು. ಇವರ ರಾಜಧಾನಿಯು ಬನವಾಸಿ. ಕದಂಬರಾಳಿದ ದೇಶವನ್ನು ಬನವಾಸಿ ದೇಶ ವೆಂದೂ ಕರೆಯುತ್ತಿದ್ದರು. ಈ ಬನವಾಸಿ ದೇಶವನ್ನು ಕನ್ನಡ ಭಾಷೆಯ ಪ್ರಖ್ಯಾತ ಕವಿಯಾದ ಆದಿಪಂಪನು ತನ್ನ ಭಾರತದಲ್ಲಿ ಈ ಬಗೆಯಾಗಿ ವರ್ಣಿಸಿರುವನು.
ತೆಂಕಣ ಗಾಳಿ ಸೋಂಕಿದೊಡಮೊಳ್ಳುತಿಗೆಯೊಡಮಿಪನಾಳ ಗೇ |
ಯಂ ಕಿವಿವೊಕ್ಕಡಂ ಬಿರಿದ ಮಲ್ಲಿಗೆಗಂದೊಡಮಾದ ಕೆಂದಂ ||
ಪಂ ಕೆಳೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ |
ರಂಕುಸವಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ ||
'ದಕ್ಷಿಣದ ಮಲಯಮಾರುತವು ನನ್ನ ಮೈಗೆ ಸುಳಿದರೂ, ಉತ್ತಮವಾದ ಸ್ತೋತ್ರಮಿಶ್ರಿತವಾದ ಸುಭಾಷಿತಗಳನ್ನು ಶ್ರವಣಮಾಡಿದರೂ, ಇಂಪಾದ ಗಾಯನವು ಕಿವಿಗೆ ಬಿದ್ದರೂ, ಅದೇ ಈಗ ಅರಳಿದ ಮಲ್ಲಿಗೆಯ ಮೊಗ್ಗೆಗಳನ್ನು ಕಂಡರೂ ಕಾಂತಾಸಮಾಗಮದ ಸಂತೋಷವುಂಟಾದರೂ, ವಸಂತೋತ್ಸವವನ್ನು ಅನುಭವಿಸಿದರೂ (ಮುಖ್ಯವಾಗಿ, ಎಂಥ ಸುಖಗಳನ್ನು ಅನುಭವಿಸುತ್ತಿದ್ದಾಗ್ಯೂ), ಯಾರು ಎಷ್ಟೇ ಪ್ರತಿಬಂಧಮಾಡಿದರೂ, ನನ್ನ ಮನಸ್ಸು ಆ ಬನವಾಸಿದೇಶವನ್ನು ಸ್ಮರಿಸದೆ ನಿಲ್ಲದು.
೬೪೫ ನೆಯ ಇಸವಿಯವರೆಗೆ ಹಿಂದುಸ್ಥಾನದಲ್ಲೆಲ್ಲಾ ಸಂಚರಿಸಿದನು. ಆತನು ಪುಲಿಕೇಶಿಯ ರಾಜ್ಯವನ್ನೂ ಪ್ರಜೆಗಳನ್ನೂ ಕುರಿತು ಬರೆದಿರುವುದೇನೆಂದರೆ
ರಿಸುವುದರಲ್ಲಿ ಸೋಜಿಗವೇನು? ಈ ಅರಸನು ಕ್ಷತ್ರಿಯ ಕುಲದವನು. ಈತನ ಹೆಸರು ಪುಲಿಕೇಶಿ. ಇವನ ವಿಚಾರಗಳು ಉದಾತ್ತ ಮತ್ತು ಗಂಭೀರವಾದವುಗಳು; ಪ್ರಜೆಗಳ ಮೇಲೆ ಇವನಿಗೆ ಬಲು ಪ್ರೀತಿ, ಇವನು ಕೊಡುಗೈ ದೊರೆ ಎಂದು ಹೆಸರುಗೊಂಡಿರುವನು. ಈತನ ಪ್ರಜೆಗಳು ಅತ್ಯಂತ ರಾಜನಿಷ್ಠರಾಗಿ ಈತನ ಸೇವೆಯಲ್ಲಿ ತತ್ಪರರಾಗಿರುವರು, ಚಕ್ರವರ್ತಿಯಾದ ಹರ್ಷವರ್ಧನನು ಅನೇಕ ರಾಜ್ಯಗಳನ್ನು ಗೆದ್ದಿರುವನು; ನೆರೆಹೊರೆಯವರೂ ದೂರ ದೂರ ದೇಶದವರೂ ಈ ಹರ್ಷವರ್ಧನನಿಗೆ ಅಂಜಿ ನಡಗುವರು. ಆದರೆ ಈ ಪುಲಿಕೇಶಿಯ ಪ್ರಜೆಗಳು ಮಾತ್ರ ಆತನನ್ನು ಲೆಕ್ಕಿಸಿರುವುದಿಲ್ಲ. ಆ ಹರ್ಷವರ್ಧನನು ಇವರನ್ನು ಸೋಲಿಸುವುದಕ್ಕಾಗಿ ಪಂಚನದಗಳ ಸೈನ್ಯವೆಲ್ಲವನ್ನೂ ಕಲೆ ಹಾಕಿದ್ದಾನೆ; ತನ್ನ ರಾಜ್ಯದೊಳಗಿನ ಅತಿರಥ ಮಹಾರಥರನ್ನೆಲ್ಲ ಕರೆಸಿಕೊಂಡಿದ್ದಾನೆ. ಇಷ್ಟೆಲ್ಲ ಬಲವಾದ ಸೇನಾ ಸಾಮಗ್ರಿಯನ್ನಳವಡಿಸಿಕೊಂಡು ಹರ್ಷವರ್ಧನನು ತಾನೇ ಸ್ವತಃ ಇವರ ಮೇಲೆ ದಂಡೆತ್ತಿ ಬಂದಿದ್ದಾನೆ, ಆದರೂ ಇವರನ್ನು ಮುರಿಬಡಿಯುವದು ಅವನಿಂದಾಗಲಿಲ್ಲ. ಇದರ ಮೇಲಿಂದ, ಈ ನಾಡಿನ ಜನರ ಕ್ಷಾತ್ರತೇಜವು ಎಷ್ಟೆಂಬುದು ಗೊತ್ತಾಗುವುದು. ಜನರು ವಿದ್ಯಾವಂತರು; ಇವರಲ್ಲಿ ನಾಸ್ತಿಕರೂ ಆಸ್ತಿಕರೂ ಇರುವರು. ಈ ರಾಜ್ಯದಲ್ಲಿ ನೂರು ಮಠಗಳುಂಟು. ಅದರೊಳಗೆ ಸುಮಾರು ೫೦೦೦ ಬೌದ್ಧ ಭಿಕ್ಷುಗಳಿದ್ದಾರೆ. ಅವರೊಳಗೆ ಮಹಾಯಾನ ಪಂಥದವರೂ, ಹೀನಯಾನ ಪಂಥದವರೂ ಇರುವರು. .....
ವಾಚಕರೇ ! ಈ ರೀತಿಯಾಗಿ ಇನ್ನೂ ಹೆಚ್ಚಿಗೆ ವರ್ಣನೆಯಿರುವುದು. ವಿಸ್ತಾರ ಭಯದಿಂದ ನಾವು ಅದನ್ನು ಇಲ್ಲಿ ಕೊಟ್ಟಿಲ್ಲ. ಕರ್ನಾಟಕಸ್ಥರೇ ಈ ಮೇಲಿನ ವರ್ಣನೆಯನ್ನು ಓದಿ ಯಾವ ಕರ್ನಾಟಕಸ್ಥನಿಗೆ ತನ್ನ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನವುಂಟಾಗುವುದಿಲ್ಲ? ಕನ್ನಡಿಗರೇ, ನಿಮ್ಮ ಪೂರ್ವಜರ ಆ ಧೀರೋದಾತ್ತವಾದ ಸ್ವಭಾವಕ್ಕೆ ಈಗಿನ ನಿಮ್ಮ ನಿರ್ಬಲ ಸ್ವಭಾವವನ್ನು ಹೋಲಿಸಿ ನೋಡಿ, ನಾಚಿರಿ.
तत्सूनुरानतनृपो नृपतुंगदेव:|
सो भूत्स्वसैन्यभरभंगुरिताहि राजः ||
यो मान्यखेटममरेंद्रपुरोऽपहासि ।
गीर्वाणगर्वमिव खर्वयितुं व्यधत्त ॥
- ವರ್ಧಾ ಮತ್ತು ಕರ್ಹಾಡ ತಾಮ್ರ ಶಾಸನ
"ತನ್ನ ಮಹಾಸೈನ್ಯದಿಂದ ಅಹಿರಾಜನನ್ನು ಹಣ್ಣಿಗೆ ತಂದಂಥ ಮತ್ತು ನೃಪತಿಗಳಿಂದ ನಮಿಸಲ್ಪಡುವಂಥ ಅವನ ಮಗ ನಾದ ನೃಪತುಂಗದೇವನು- ದೇವತೆಗಳ ಗರ್ವವನ್ನು ಖಂಡಿಸುವ ಉದ್ದೇಶದಿಂದಲೋ ಏನೋ, ತನ್ನ ರಾಜಧಾನಿಯಾದ ಮಾನ್ಯಖೇಟ (ಮಳಖೇಡ) ಪುರವನ್ನು ದೇವತೆಗಳ ಅಮರಾವತಿಯ ಪಟ್ಟಣವನ್ನು ಕೂಡ ನಾಚಿಸುವಂತೆ ಬೆಳಿಸಿದನು” ಎಂಬುದಾಗಿ ಇದರಲ್ಲಿ ವರ್ಣಿಸಿರುತ್ತದೆ.
ಸಾಲೋಟಗಿಯ ಶಿಲಾಲೇಖದಲ್ಲಿ, ಈ ಪಟ್ಟಣವು ಸುಂದರವಾದ ಭವ್ಯ ಮಂದಿರಗಳಿಂದ ತುಂಬಿತ್ತೆಂದೂ ನದಿಯ ದಂಡೆಯ ಮೇಲೆ ವೀರಾಂಗನೆಯರ ಮುಖ ಕಮಲಗಳೇ ಕಾಣುತ್ತಿದ್ದುವೆಂದೂ ವರ್ಣನೆಯುಂಟು.
ಇನ್ನು, ನಾವು ಕರ್ನಾಟಕದ ಅರಸರೆಲ್ಲರೊಳಗೆ ಶ್ರೇಷ್ಠನಾದ ಚಾಲುಕ್ಯ ವಿಕ್ರಮ ಭೂಪತಿಯ ವರ್ಣನೆಯನ್ನು ಕೊಡುವೆವು. ಕವಿವರನಾದ ಬಿಲ್ಲಣನು ಈ ವಿಕ್ರಮದೇವನ ಚರಿತೆಯ ಬಗ್ಗೆ, ಸ್ವತಂತ್ರವಾದ ಒಂದು ಸಂಸ್ಕೃತ ಕಾವ್ಯವನ್ನೇ ರಚಿಸಿರುವನು, ಅದರೊಳಗಿನ ಒಂದೇ ಶ್ಲೋಕವನ್ನು ಇಲ್ಲಿ ಉದ್ಧರಿಸುತ್ತೇವೆ.
जनैरवज्ञातकवाटमुद्रणैः क्षपासु रक्षाविमुखैरसुप्यत |
करा विशन्ति स्म गवाक्षवर्मसु क्षपापतेश्छिद्रपथैर्न तस्कराः ॥
- विक्रमांकदेवचरित ९८-६
ಎಂದರೆ ಜನರು ರಾತ್ರಿಯಲ್ಲಿ ತಮ್ಮ ಬಾಗಿಲುಗಳನ್ನು ಕೂಡ ಮುಚ್ಚುತ್ತಿರಲಿಲ್ಲ; ಅವರಿಗೆ ಕಳ್ಳರ ಭೀತಿಯೇ ಇಲ್ಲ. ಕಳ್ಳರಿಗೆ ಬದಲು ಚಂದ್ರಕಿರಣಗಳು ಅವರ ಗೃಹಗಳನ್ನು ಪ್ರವೇಶಿಸುತ್ತಿದ್ದುವು. ಸಾರಾಂಶ:- ಈಗ, ರಾಮೇಶ್ವರದಿಂದ ಕಾಶಿಯವರೆಗೆ, ಕೋಲಿಗೆ ಬಂಗಾರ ತೂಗಹಾಕಿಕೊಂಡು ಹೋದರೂ ಅಂಜಿಕೆಯಿಲ್ಲವೆಂದು ಜನರು ನುಡಿಯುವಂತೆ, ಆಗ ಚಾಲುಕ್ಯ ವಿಕ್ರಮನ ಕಾಲದಲ್ಲಿ ಶಾಂತತೆಯು ಪೂರ್ಣವಾಗಿ ನೆಲೆಗೊಂಡಿತ್ತೆಂಬುದನ್ನು ಮೇಲೆ ಹೇಳಿದಂತೆ ವರ್ಣಿಸುತ್ತಿದ್ದರು.
ಹಿಂದೆ ನಮ್ಮ ದೇಶದಲ್ಲಿ ಶಾಂತತೆಯೇ ಇರಲಿಲ್ಲ, ಎಲ್ಲಿ ನೋಡಿದರೂ ಅರಾಜಕತೆಯೇ ಇತ್ತು; ಎಂದು ತಲೆಯೊಳಗೆ ತಪ್ಪು ಕಲ್ಪನೆಯನ್ನು ಹಾಕಿಕೊಂಡಿರುವ ನಮ್ಮ ಸುಶಿಕ್ಷಿತರ ತಲೆಯೊಳಗೂ ಮೇಲಿನ ವಾಕ್ಯದಿಂದ ಪ್ರಕಾಶ ಕಿರಣಗಳು ಬೀಳುವುವೆಂದು ಆಶೆಯದೆ. ಬಿಹ್ಲಣನು ಬರೆದುದು ಕೇವಲ ಕವಿ ಕಲ್ಪನೆಯಲ್ಲವೆಂಬುದು ಚಾಲುಕ್ಯ ವಿಕ್ರಮನ ಮಿಕ್ಕ ಇತಿಹಾಸವನ್ನೋದಿದರೆ ಮನವರಿಕೆಯಾಗುವುದು. ಆತನು, ಪಟ್ಟವೇರುವ ಪೂರ್ವದಲ್ಲಿಯೇ ಅನೇಕಾನೇಕ ರಾಜ್ಯಗಳನ್ನು ಗೆದ್ದನು. ಪಟ್ಟವೇರಿದ ನಂತರ ೫೦ ವರ್ಷಗಳವರೆಗೆ ಅವನ ರಾಜ್ಯದಲ್ಲಿ ಪೂರ್ಣ ಶಾಂತತೆಯು ನೆಲೆಗೊಂಡಿತ್ತು. ಅವನ ಕಾಲಕ್ಕೆ ಆಗಿ ಹೋದ ಗ್ರಂಥಗಳನ್ನು ನೋಡಲು, ಅಂಥ ಗ್ರಂಥಗಳು, ಪೂರ್ಣ ಶಾಂತತೆಯು ನೆಲೆಗೊಂಡ ಕಾಲದಲ್ಲಲ್ಲದೆ ಮಿಕ್ಕಕಾಲಕ್ಕೆ ಆಗುವುದು ಶಕ್ಯವಿಲ್ಲವೆಂದೂ ಗೊತ್ತಾಗುವುದು. ಅದೇ ಕಾಲದ ಮತ್ತೊಬ್ಬ ಪಂಡಿತನು ನಮ್ಮ ಈ ಕರ್ನಾಟಕದ ಅರಸನನ್ನು ವರ್ಣಿಸುವುದನ್ನು ಆಲಿಸಿರಿ. ವಿಜ್ಞಾನೇಶ್ವರನು ತನ್ನ ಪ್ರಸಿದ್ಧ ಪುಸ್ತಕವಾದ 'ಮಿತಾಕ್ಷರಾ' ಎಂಬ ಧರ್ಮ ಶಾಸ್ತ್ರದ ಕೊನೆಗೆ ಬರೆದಿರುವುದೇನೆಂದರೆ-
नासीदस्ति भविष्यति क्षितितले कल्याणकल्पं पुरं ।
नो दृष्टः श्रुत एव वा क्षितिपतिः श्रीविक्रमार्कोपमः ।।
विज्ञानेश्वरपंडितो न भजते किञ्चान्यदन्योपमः ।
आकल्पं स्थिरमस्तु कल्पलतिका कल्पं तदत्रयम् ।।
"ಪೃಥ್ವಿಯ ಮೇಲೆ ಕಲ್ಯಾಣದಂಥ ಮತ್ತೊಂದು ಪಟ್ಟಣವು ಹಿಂದೆ ಇದ್ದಿಲ್ಲ, ಈಗಲೂ ಇಲ್ಲ, ಮುಂದೆಯೂ ಹುಟ್ಟುವುದಿಲ್ಲ. ವಿಕ್ರಮಾರ್ಕನಂಥ ಪ್ರತಾಪಶಾಲಿಯಾದ ಅರಸನು ಜಗತ್ತಿನೊಳಗೆ ಬೇರೊಬ್ಬರೂ ಇಲ್ಲ” – ಮುಂತಾಗಿ ವರ್ಣಿಸಿದುದೇನು ಸಾಮಾನ್ಯ ವರ್ಣನೆಯೇ? ಕನ್ನಡಿಗರೇ ನಿಮ್ಮ ಅರಸನ ಸ್ತುತಿಯನ್ನು ನಿತ್ಯದಲ್ಲಿ ಪಾರಾಯಣಮಾಡಿ ಪುಣ್ಯ ಕಟ್ಟಿಕೊಳ್ಳಿರಿ.
ಆದರೆ ನಮ್ಮ ಅರಸರ ವರ್ಣನೆಗಳನ್ನು ಆದ್ಯಂತವಾಗಿ ಕೊಡುವುದು ನಮ್ಮ ಉದ್ದೇಶವಲ್ಲ. ಕನ್ನಡಿಗರಲ್ಲಿ ಬೇರೂರಿದ ಕೆಲವು ಭ್ರಾಮಕ ಕಲ್ಪನೆಗಳನ್ನು ಹೊಡೆದೋಡಿಸಲಿಕ್ಕೆ ದಿಗ್ದರ್ಶನಾರ್ಥವಾಗಿ ನಾವು ಇವನ್ನು ಇಲ್ಲಿ ಕೊಟ್ಟಿರುವೆವು.
ಇನ್ನು ಕನ್ನಡಿಗರ ಕೊನೆಯ ರಾಜಧಾನಿಯಾದ ವಿಜಯನಗರದ ವೈಭವವನ್ನು ಸಂಗ್ರಹವಾಗಿ ವರ್ಣಿಸುವೆವು. ಇರಾಣದ ರಾಯಭಾರಿಗಳೂ ಯರೋಪಿಯು ಪ್ರವಾಸಿಗಳೂ ವಿಜಯನಗರ ರಾಜ್ಯಕ್ಕೆ ಬಂದು ಆ ಪಟ್ಟಣವನ್ನು ನೋಡಿ ಬೆರಗಾಗಿ ಬೆರಳು ಕಚ್ಚಿರುವರು.
ನಿಕೊಲಿಸಕೋಂಟ ಎಂಬೊಬ್ಬ ಇಟಲಿ ದೇಶದ ಪ್ರವಾಸಿಯು ೧೪೨೦ ನೆಯ ಇಸವಿಯಲ್ಲಿ ಈ ಪಟ್ಟಣಕ್ಕೆ ಬಂದಿದ್ದನು. ಅವನು ಹೇಳಿದ ವರ್ಣನೆಯ ಸಾರಾಂಶವನ್ನು ಕೊಡುತ್ತೇವೆ.
"ಈ ಪಟ್ಟಣದ ಸುತ್ತಳತೆಯು ೬೦ ಮೈಲು ಇರುತ್ತದೆ. ಈ ಒಂದೇ ಪಟ್ಟಣದಲ್ಲಿ ೯೦,೦೦೦ ಸೈನಿಕರಿರುವರು. ಈ ಪಟ್ಟಣಕ್ಕೆ ಪ್ರಚಂಡವಾದ ಅಗಸೆ ಬಾಗಿಲಗಳು ಏಳು ಸುತ್ತಿನ ಭದ್ರವಾದ ಕೋಟೆಯಿರುವುದು. ನೀರಿನ ವಿಪುಲತೆಯಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಬನಗಳೂ ಭತ್ತದ ಮತ್ತು ಕಬ್ಬಿನ ತೋಟಗಳೂ ಕಂಗೊಳಿಸುವುವು. ಅಲ್ಲಲ್ಲಿ ಭವ್ಯವಾದ ಸುಂದರ ದೇವಾಲಯಗಳೂ ಅವಕ್ಕೆ ಹೊಂದಿ ಮಹಾ ಪಾಠಶಾಲೆಗಳೂ ವಿದ್ಯಾಲಯಗಳೂ ತುಂಬಿವೆ.”
ಅಬ್ದುಲ ರಜಕ ನೆಂಬ ಇರಾಣದ ರಾಯಭಾರಿಯು ೧೪೪೨ ನೆಯ ಇಸ್ವಿಯಲ್ಲಿ ಇಲ್ಲಿಗೆ ಬಂದಿದ್ದನು. ಆತನು ಈ ಪಟ್ಟಣವನ್ನು ಬಲು ಸುಂದರವಾಗಿ ಬಣ್ನಿಸಿರುವನು. ಅದೇನಂದರೆ :-
ಈ ವಿಜಯನಗರದ *ರಾಯನ ವಶದಲ್ಲಿ ೩೦೦ ಬಂದರಗಳುಂಟು. ಎಡೆಬಿಡದೆ ಮೂರು ತಿಂಗಳು ಪ್ರವಾಸ ಮಾಡುವಷ್ಟು ಈ ರಾಜ್ಯ ವಿಸ್ತಾರವಿದೆ. ಈ ರಾಜನ ಹತ್ತಿರ ೧೧ ಲಕ್ಷ ಸೈನ್ಯವಿರುತ್ತದೆ. ಇಂಥ ವೈಭವ ಸಂಪನ್ನನಾದ ಬೇರೆ ಅರಸನನ್ನು ಕಾಣುವುದು ದುರ್ಲಭ. ಈ ವಿಜಯನಗರಕ್ಕೆ ಸರಿಗಟ್ಟುವ ಪಟ್ಟಣವನ್ನು ಕಣ್ಣುಗಳು ನೋಡಿಲ್ಲ, ಕಿವಿಗಳು ಕೇಳಿಲ್ಲ. ಅರಮನೆಯ ಮಗ್ಗಲಿಗೆ ಪಗಡಿಯ ಪಟದಂತೆ ಇದಿರು ಬದಿರಾಗಿ ನಾಲ್ಕು ಪೇಟೆಯ ಸಾಲುಗಳಿರುತ್ತವೆ. ಉತ್ತರಕ್ಕೆ ರಾಯನ ಅರಮನೆಯ ಮುಖ ಮಂಟಪವಿರುತ್ತದೆ. ಪೇಟೆಗಳ ಎರಡು ಮಗ್ಗಲಿಗೂ ಭವ್ಯವೂ ಎತ್ತರವೂ ಆದ ಉಪ್ಪರಿಗೆಯ ಸಾಲುಗಳು.
- *ಆಗ ವಿಜಯನಗರದ ಅರಸರಿಗೆ ಮಾತ್ರ 'ರಾಯ' ರೆಂದು ಪ್ರಸಿದ್ಧಿಯಿತ್ತು, ಈಗ ನಾವೂ ರಾಯರೇ ನೀವೂ ರಾಯರೇ! ರಾಜ, ರಾಯ, ರಾವ ಈ ಅನುಕ್ರಮವಾಗಿ ರೂಪಗಳಲ್ಲಿ ಬದಲಾಗುತ್ತ ಬ೦ದಿರುತ್ತದೆ. ೧೨ನೆಯ ಪ್ರಕರಣ - ವೈಭವ-ವರ್ಣನೆ೯೩
ಕಂಗೊಳಿಸುತ್ತವೆ, ಅರಮನೆಯ ಸಭಾಮಂಟಪವು ಇವೆಲ್ಲಕ್ಕೂ ಎತ್ತರವಾಗಿ ಭವ್ಯವಾಗಿರುತ್ತದೆ. ಪೇಟೆಯ ಬೀದಿಗಳು ಅತ್ಯಂತ ವಿಶಾಲವಾದವೂ ಉದ್ದವಾದವೂ ಇರುತ್ತವೆ. ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಗುಲಾಬಿ ಹೂಗಳ ಸುಗ್ಗಿ, ಇಲ್ಲಿಯ ಜನರಿಗೆ ಅವುಗಳ ಮೇಲೆ ಬಲು ಪ್ರೀತಿ; ಊಟವಿಲ್ಲದಿದ್ದರೂ ಅವರಿಗೆ ಸಾಗೀತು, ಆದರೆ ಈ ಹೂವುಗಳಿಲ್ಲದೆ ಸಾಗುವುದಿಲ್ಲ. ಮುತ್ತು - ರತ್ನ, ಪಚ್ಚ- ವಜ್ರಗಳ ವ್ಯಾಪಾರವು ಪ್ರತಿ ನಿತ್ಯವೂ ನಡೆಯುತ್ತದೆ. ಎಲ್ಲಿ ನೋಡಿದರೂ, ಅಂದವಾದ ಕಲ್ಲುಗಳಿಂದ ಕಟ್ಟಲ್ಪಟ್ಟ ನೀರುಕಾಲುವೆಗಳು ಜುಳುಜುಳು ಹರಿಯುತ್ತವೆ. ಅರಮನೆಯಲ್ಲಿ ಅನೇಕ ನೆಲಮನೆಗಳುಂಟು. ಅವೆಲ್ಲವುಗಳಲ್ಲಿ ನಾಣ್ಯದ ಬೊಕ್ಕಸಗಳು ತುಂಬಿವೆ. ದಿವಾಣಖಾನೆಯ ಇದಿರಿಗೆ ಆನೆಯ ಸಾಲುಗಳು ಉಂಟು. ಪ್ರತಿಯೊಂದು ಆನೆಗೆ ನಿಲ್ಲಲಿಕ್ಕೆ ಒಂದು ದೊಡ್ಡ ಕಟ್ಟಡ ಇರುತ್ತದೆ. ಟಂಕಸಾಲೆಯ ಮುಂದೆ ಪಟ್ಟಣದ ಮುಖ್ಯಾಧಿಕಾರಸ್ಥನ ಮನೆಯುಂಟು. ಅಲ್ಲಿ ೧೨೦೦೦ ಕಾವಲುಗಾರರಿದ್ದಾರೆ.
ಈ ಅಬ್ದುಲರಜಕನು ಪಟ್ಟಣದಲ್ಲಿ ಒಮ್ಮೆ ಉತ್ಸವ ನಡೆದುದನ್ನು ನೋಡಿ, ಈ ರೀತಿಯಾಗಿ ವರ್ಣಿಸಿರುವನು.
"ರಾಯನ ಅಪ್ಪಣೆಯ ಮೇರೆಗೆ ರಾಜ್ಯದೊಳಗಿನ ಮುಖ್ಯ ಮುಖ್ಯ ಸರದಾರರೂ ರಾಜಪುತ್ರರೂ, ಚಕಚಕಿಸುವ ಅಂಬಾರೆಗಳನ್ನೊಡಗೂಡಿದ ಸಾವಿರಾರು ಆನೆಗಳನ್ನೇರಿ ಅರಮನೆಗೆ ಬಂದಿರುವರು. ಕೆಳಗಿನಿಂದ ಮೇಲ್ತುದಿಯವರೆಗೆ ಸುಂದರವಾದ ಚಿತ್ರಗಳಿಂದ ಮುಚ್ಚಿದ ೩-೪-೫ ಅಂತಸ್ತುಗಳುಳ್ಳ ಡೇರೆಗಳಲ್ಲಿ ಇವರು ಇಳಿದು ಕೊಂಡಿರುವರು. ಈ ಡೇರೆಯಲ್ಲಿ ಹಲವು ಡೇರೆಗಳು ತಿರುಗಿಸಿ ದತ್ತ ತಿರುಗುತ್ತವೆ. ಆ ಡೇರೆಯಲ್ಲಿ ಪ್ರತಿಯೊಂದು ಕ್ಷಣಕ್ಕೂ ಹೊಸ ಸಭಾ ಮಂಟಪಗಳು ದೃಷ್ಟಿಗೆ ಬೀಳುತ್ತಿದ್ದುವು. ಇವೆಲ್ಲವುಗಳ ಮುಂದೆ ೯ ಅಂತಸ್ತುಗಳುಳ್ಳ ಸುಂದರವಾದ ಒಂದು ದೊಡ್ಡ ಡೇರೆಯುಂಟು. ಈ ಡೇರೆಯಲ್ಲಿ ೯ನೆಯ ಉಪ್ಪರಿಗೆಯಲ್ಲಿ ರಾಯನ ರತ್ನಖಚಿತವಾದ ಬಂಗಾರದ ಸಿಂಹಾಸನವು ಕಂಗೊಳಿಸುತ್ತದೆ. ೧೦ ಗಜ (೩೦ ಚಚ್ಚೌಕ ಫೂಟು) ಉದ್ದಗಲವುಳ್ಳ ನಡುವಿನ ಸಭಾಮಂಡಪಕ್ಕೆ ನನ್ನನ್ನು ಕರೆದೊಯ್ದುರು, ಆ ಸಭಾಮಂಡಪದ ಗೋಡೆಗಳೂ, ಮೇಲ್ಬದಿಯೂ ಬೆಲೆಯುಳ್ಳ ಮುತ್ತು ರತ್ನಗಳಿಂದ ಕೆತ್ತಲ್ಪಟ್ಟ ಬಂಗಾರದ ನಕ್ಷತ್ರ
ಗಳಿಂದ ತುಂಬಾ ಮುಚ್ಚಲ್ಪಟ್ಟಿದ್ದು ವು. ಅದರ ತಗಡುಗಳು ಕತ್ತಿಯ ಅಲಗಿನಷ್ಟು ದಪ್ಪವಾಗಿ ಬಂಗಾರದ ಮೊಳೆಗಳಿಂದ ಗಟ್ಟಿಯಾಗಿ ಕೂಡಿಸಲ್ಪಟ್ಟಿದ್ದುವು.
"ದುಯಾರ್ಟ ಬಾರ್ಬೊಸಾ” ಎಂಬ ಪೋರ್ಚುಗೀಸ್ ಪ್ರವಾಸಿಯು ೧೫೦೪ ರಲ್ಲಿ ಇಲ್ಲಿಗೆ ಬಂದಿದ್ದನು. ಅವನೂ ಹೀಗೆಯೇ ಬಣ್ಣಿಸಿರುವನು.
“ಈ ಪಟ್ಟಣದಲ್ಲಿ ಅಸಂಖ್ಯಾತ ಜನರುಂಟು.* ಅರಮನೆಗಳೂ ಅಸಂಖ್ಯಾತವಾಗಿವೆ; ಇಲ್ಲಿ ಎಲ್ಲ ತರದ ಜನಾಂಗಗಳ ಮತ್ತು ಜಾತಿಗಳ ಜನರ ಮುಖಗಳನ್ನು ನೋಡಬಹುದು, ಇಲ್ಲಿಗೆ ಪೇಗೂ ಮತ್ತು ಸಿಂಹಲದೀಪದಿಂದ ವಜ್ರಗಳು ಬರುತ್ತವೆ”.
ನನಿಝನೆಂಬ ಮತ್ತೊಬ್ಬ ಪೋರ್ಚುಗೀಸ್ ಪ್ರವಾಸಿಯೂ ಹೀಗೆಯೇ ವರ್ಣಿಸುವನು.
ಪೇಯಸನೆಂಬ ಪೋರ್ಚುಗೀಸ್ ಪ್ರವಾಸಿಯು ೧೫೨೦ರಲ್ಲಿ ಎಂದರೆ ಈ ವೈಭವದ ಪರಮಾವಧಿಯ ಕಾಲದಲ್ಲಿ ಇಲ್ಲಿಗೆ ಬಂದಿದ್ದನು. ಅವನು ವಿಜಯನಗರ ಪಟ್ಟಣವನ್ನು ಅತಿವಿಸ್ತಾರವಾಗಿ ವರ್ಣಿಸಿರುವನು. ಅದರಿಂದ ಇಂಥ ಪೇಟೆಯು ಇಂಥ ಕಡೆಯೇ ಇತ್ತೆಂದೂ ಇಂಥ ಗುಡಿಯು ಇಲ್ಲಿಯೇ ಇತ್ತೆಂದೂ ಈಗಲೂ ಗೊತ್ತು ಹಿಡಿಯಬಹುದು, ಆದರೆ ಸ್ವಲ್ಪ ಸಾರಾಂಶವನ್ನು ಇಲ್ಲಿ ಕೊಡದಿರಲಾರೆವು.
"ಈ ಪಟ್ಟಣದ ವಿಸ್ತಾರವನ್ನು ನಾನು ಏನೆಂದು ಬಣ್ಣಿಸಲಿ! ಒಮ್ಮೆಯೇ ಇಡೀ ಪಟ್ಟಣವನ್ನು ಕಂಡರಷ್ಟೇ ಇದನ್ನು ನಾನು ಚೆನ್ನಾಗಿ ಬಣ್ಣಿಸಲಾದೀತು! ಆದರೂ ನಾನು ಒಂದು ಗುಡ್ಡವನ್ನೇರಿ ನೋಡಿದನು. ಆಗ ನನ್ನ ಕಣ್ಣಿಗೆ ಬಿದ್ದ ಭಾಗವೇ ರೋಮ್ ಪಟ್ಟಣದಷ್ಟು ವಿಶಾಲವೂ ಅತ್ಯಂತ ಮನೋಹರವೂ ಆಗಿದೆ. ಅಲ್ಲಿ ನಿಬಿಡವಾದ ಗಿಡಗಳ ಸಾಲುಗಳು ಅಂದವಾಗಿ ಕಂಡವು. ಅಲ್ಲಲ್ಲಿಗೆ ಅನೇಕ ಸರೋವರಗಳು ಕಂಗೊಳಿಸುತ್ತವೆ, ಅರಮನೆಯ ಸಮೀಪದಲ್ಲಿಯೇ ತೆಂಗಿನ ಬನಗಳೂ ಫಲಭರಿತವಾದ ತೋಟಗಳೂ ತುಂಬಿವೆ, ಅಲ್ಲಲ್ಲಿಗೆ ನಿರ್ಮಲ
- *ಹಿ೦ದೆ ಆನೆಯ ಪ್ರಕರಣದಲ್ಲಿ ಜನಸಂಖ್ಯೆಯು ೫೦-೬೦ ಲಕ್ಷ ಇರಬಹುದೆಂದು ತಪ್ಪಿ ಬಿದ್ದದೆ. ಶ್ರಿ. ಬಿ. ಸೂರ್ಯ ನಾರಾಯಣ ರಾವ ಇವರು ೩೦ ಲಕ್ಷವಿರಬಹುದೆಂದು ಊಹೆ ಕಟ್ಟುತ್ತಾರೆ. ೧೨ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು೯೫
ವಾಗಿ ಹರಿಯುವ ಝರಿಗಳಿಂದಲೂ, ಹಸರು ಬಳ್ಳಿಗಳಿಂದಲೂ ಲಿಂಬಿ, ದ್ರಾಕ್ಷ, ಕಿತ್ತಳೆ, ಅಂಜೀರು ಮುಂತಾದ ಫಲವೃಕ್ಷಗಳಿಂದಲೂ ಈ ಪಟ್ಟಣವು ಬಹು ಶೋಭಾಯಮಾನವಾಗಿದೆ. ಈ ಪಟ್ಟಣದಲ್ಲಿ ಜನಸಂಖ್ಯೆಯು ಅಪರಿಮಿತವಾಗಿದೆ. ವರ್ತಕರು ಮುತ್ತು-ರತ್ನ-ಹವಳ-ಮಾಣಕ-ವಜ್ರಗಳ ವ್ಯಾಪಾರ ವನ್ನು ಮಿತಿಮೀರಿ ಮಾಡುತ್ತಾರೆ, ಪ್ರತಿ ಶುಕ್ರವಾರಕ್ಕೊಮ್ಮೆ ದೊಡ್ಡ ಸಂತೆಯಾಗುತ್ತದೆ, ಆದರೆ ಪ್ರತಿಯೊಂದು ದಿನವೂ ಬೇರೆ ಬೇರೆ ಬೀದಿಗಳಲ್ಲಿ ಸಂತೆಗಳು ಕೂಡಿಯೇ ಕೂಡುತ್ತವೆ. ಈ ಪಟ್ಟಣದಲ್ಲಿ ಇಂಥ ಮಾಲು ಸಿಕ್ಕುವುದಿಲ್ಲ ವೆಂದಿಲ್ಲ, ಹಣ್ಣು ಹಂಪಲ ಕಾಯಿಪಲ್ಯಗಳ ರಾಶಿಯನ್ನು ನೋಡಿದರೆ ಕಣ್ಣು ತಿರುಗುತ್ತವೆ, ಅಂಗಡಿ ಮುಂತಾದವುಗಳಲ್ಲದೆ, ಜನರು ವಾಸಿಸುವ ಮನೆಗಳೇ ಈ ಪಟ್ಟಣದಲ್ಲಿ ಒಂದು ಲಕ್ಷವಿರುತ್ತವೆ. ಈ ರಾಯನು ೨೦ ಲಕ್ಷ ಸೈನ್ಯವನ್ನು ಕೂಡಿಸಬಲ್ಲನು. ಇವನ ಸೈನಿಕರನ್ನು ನಾನು ನೋಡಿದನು, ಆ ಸೈನಿಕರಲ್ಲಿ ಹೇಡಿಯೊಬ್ಬನೂ ನನಗೆ ಕಾಣಬರಲಿಲ್ಲ”.
ವಾಚಕರೇ, ದಕ್ಷಿಣೋತ್ತರ ೧೪ ಮೈಲು, ಪೂರ್ವ ಪಶ್ಚಿಮ ೧೦ ಮೈಲು ವಿಸ್ತಾರವುಳ್ಳ ಈ ಪಟ್ಟಣದ ವೈಭವವನ್ನು ಸಾಕಾದಷ್ಟು ಬಣ್ಣಿಸುವುದಂತು? ಅಲ್ಲಿಯ ಪ್ರತಿಯೊಂದು ಬೀದಿಯು ಮುಂಬಯಿಯಲ್ಲಿರುವ ಎಲ್ಲಕ್ಕೂ ದೊಡ್ಡ ಬೀದಿಗಿಂತ ಅಗಲವೂ ಸರಳವೂ ಚಂದವೂ ಆಗಿದೆ. ಪ್ರತಿಯೊಂದರ ಮಗ್ಗಲಿಗೆ ಒಂದು ಸುಂದರವಾದ ಸರೋವರವಿತ್ತು, ಈಗಲೂ ಆ ಹಾಳುಪಟ್ಟಣದ ಕುರುಹುಗಳನ್ನು ಕಾಣಬಹುದು, ಆದುದರಿಂದ ಅದನ್ನು ಪ್ರತಿಯೊಬ್ಬ ಕನ್ನಡಿಗನೂ ಸ್ವತಃ ನೋಡಿಯೇ ತೃಪ್ತಿಗೊಂಡು ಸ್ಪೂರ್ತಿಗೊಳ್ಳಬೇಕು. ಆ ಪಟ್ಟಣವನ್ನು ನೋಡದವನು ಕನ್ನಡಿಗನೇ ಅಲ್ಲವೆಂದು ಹೇಳಬಹುದು.
ಈ ಪಟ್ಟಣಗಳಲ್ಲದೆ ಇನ್ನೂ ಅನೇಕ ಪಟ್ಟಣಗಳ ವರ್ಣನೆಯನ್ನೂ ಕೊಡಬಹುದು, ಹಳೆಬೀಡು ಅಥವಾ ದ್ವಾರಸಮುದ್ರವು ೫ ಮೈಲು ಉದ್ದವಿತ್ತು ; ಅದೊಂದೇ ಪಟ್ಟಣದಲ್ಲಿ ೭೭೦ ಗುಡಿಗಳಿದ್ದುವಂತೆ. ಐಹೊಳೆಯು ವ್ಯಾಪಾರದ ಪಡಿಮೂಲಿಯಿತ್ತೆಂದು ವರ್ಣನೆಗಳಿವೆ. ಬಳ್ಳಿಗಾವಿ, ದೇವಗಿರಿ, ತೇರದಾಳ, ಪಟ್ಟದಕಲ್ಲ ಮುಂತಾದ ಅನೇಕ ಪಟ್ಟಣಗಳ ವರ್ಣನೆಯನ್ನು ನಾವು ಪುಸ್ತಕಗಳಲ್ಲಿ ಓದಬಹುದು, ಕನ್ನಡಿಗರೇ ಅದನ್ನು ಓದಿ ಆನಂದಪಡಿರಿ.