ವಿಷಯಕ್ಕೆ ಹೋಗು

ಕರ್ನಾಟಕ ಗತವೈಭವ/೧೫ನೆಯ ಪ್ರಕರಣ

ವಿಕಿಸೋರ್ಸ್ದಿಂದ

೧೫ನೆಯ ಪ್ರಕರಣ - ವಾಙ್ಮಯ ವೈಭವ
೧೧೫

ಕೈಯನ್ನು ಕೂಡಿಸಿ ಉಭಯರಿಗೂ ತಮ್ಮ ಧರ್ಮಕ್ಕನುಸಾರವಾಗಿಯೇ ವರ್ತಿಸಲು ಬೋಧಿಸಿದನು. ಇದಕ್ಕಿಂತ ಪರಧರ್ಮ ಸಹಿಷ್ಣುತೆಯು ಸಿಕ್ಕುವುದೇ? ಈ ಸದ್ಗುಣವು ನಮ್ಮ ಅರಸರಿಗೆ ಪೂರ್ಣವಾಗಿ ಗೊತ್ತಿತ್ತು. ಜಾತಿ ಜಾತಿಗಳಿಗೆ ಅವರು ಎಂದೂ ದ್ವೇಷವನ್ನು ಬೆಳಿಸಲಿಲ್ಲ. ಬುದ್ದಿವಂತರು ಕೇವಲ ತಮ್ಮ ಬುದ್ಧಿಬಲದಿಂದಲೇ ಜನರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬೇಕೆಂಬ ತತ್ವವನ್ನು ಅವರು ಅರಿತವರಾಗಿದ್ದರು.

ಇರಲಿ! ಕನ್ನಡಿಗರೇ! ಈಗ ಆ ಧಾರ್ಮಿಕ ಸಂಪತ್ತು ಎಲ್ಲಿ ಉಳಿದಿದೆ? ನಾವು ನಾಮ ಮಾತ್ರಕ್ಕೆ ಶೈವರೂ ವೈಷ್ಣವರೂ ಆಗಿದ್ದೇವೆ. ಇದು ಅನುಕಂಪನೀಯವಲ್ಲವೋ?


೧೫ನೆಯ ಪ್ರಕರಣ.


ವಾಙ್ಮಯ ವೈಭವ

"No scheme of self-government, however benevolently or generously it may be bestowed upon us, will ever make us a self-governing nation, if we have no respect for the languages our mothers speak"
-M. K. Gandhi.
“ಯಾರು ಎಷ್ಟೇ ಪರೋಪಕಾರ ಬುದ್ಧಿಯಿಂದ ಅಥವಾ ಉದಾರ ಬುದ್ಧಿಯಿಂದ ಯಾವ ತರದ ಸ್ವರಾಜ್ಯವನ್ನೇ ನಮಗೆ ಕೊಡಲಿ; ನಮ್ಮ ತಾಯಿಯಂದಿರಾಡುವ ಭಾಷೆಯ ವಿಷಯದಲ್ಲಿ ನಮ್ಮ ಮನದಲ್ಲಿ ಆದರ ಬುದ್ಧಿಯಿಲ್ಲದಿದ್ದರೆ ನಾವು ನಿಜವಾದ ಸ್ವರಾಜ್ಯ ಭೋಗಿಗಳಾಗಲಾರೆವು.
-ಮಹಾತ್ಮಾ ಗಾ೦ಧಿ.

ಕ್ರಿ.ಶಕದ ೧೫೦ರಲ್ಲಿ ಹಿಂದುಸ್ಥಾನಕ್ಕೆ ಬಂದ ಪ್ರಖ್ಯಾತ ಪ್ರವಾಸಿಯಾದ ಟಾಲೆಮಿಯು ಬಾದಾಮಿ, ಇಂಡಿ, ಕಲಕೇರಿ, ಪಟ್ಟದಕಲ್ಲ, ಇವೇ ಮುಂತಾದ
೧೧೬
ಕರ್ನಾಟಕ ಗತವೈಭವ

ಕರ್ನಾಟಕದ ಪಟ್ಟಣಗಳ ಹೆಸರುಗಳನ್ನು ಹೇಳಿರುವನು. ಮೇಲ್ಕಂಡ ಹೆಸರುಗಳು ಕನ್ನಡವಾಗಿರುವುದರಿಂದ, ಕನ್ನಡ ಭಾಷೆಯು ಆಗಿನ ಕಾಲದಲ್ಲಿ ಒಳ್ಳೆ ಊರ್ಜಿತ ಸ್ಥಿತಿಯಲ್ಲಿ ಇರುವುದಾಗಿ ಸ್ಪಷ್ಟವಾಗುತ್ತದೆ. ೨ನೆಯ ಶತಮಾನದಲ್ಲಿ ಮಾಮುಲನಾರ ಎಂಬ ಕವಿಯಿಂದ ರಚಿತವಾದ 'ಅಹನಾನೂರ' ಎಂಬ ಗ್ರಂಥದಲ್ಲಿ ಮಹಿಷ ಮಂಡಲವೆಂಬುದಕ್ಕೆ ಪರ್ಯಾಯದಿಂದ 'ಎರಮೈನಾಡು' ಎಂಬ ಮೈಸೂರ ದೇಶದ ಹೆಸರು ಉಕ್ತವಾಗಿದೆ. ಅಲ್ಲದೆ, ಕೆಳಗಣ ಇಜಿಪ್ತ ದೇಶದಲ್ಲಿಯ "ಅಕ್ಸಿರಿಂಕಸ್" ಎಂಬ ಸ್ಥಳದಲ್ಲಿ ದೊರೆತ ಕ್ರಿ.ಶ.೨ನೆಯ ಶತಮಾನದಲ್ಲಿ ರಚಿತವಾದ ಒಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳುಳ್ಳ ವಾಕ್ಯವು ದೊರೆಯುತ್ತದೆ. ಆ ವಾಕ್ಯವು ಯಾವುದೆಂದರೆ-
"ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕಿ; ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೇರೆತ್ತುವೆನ್ "

ನೃಪತುಂಗನ ಕಾಲದಿಂದಲೂ ಕನ್ನಡದೊಳಗೆ ಹಳೆಗನ್ನಡ-ಹೊಸಗನ್ನಡವೆಂಬ ಭೇದವು ಇರುವುದಂತೂ ಸರಿಯಷ್ಟೆ! ಈ ಕಾಲಕ್ಕೆ ಕನ್ನಡ ಭಾಷೆಯು ಯಾವದೋ ಒಂದು ಹಳೆಯ ಅವಸ್ಥೆಯಿಂದ ಹೊಸದಾದ ಅವಸ್ಥೆಗೆ ಹೆಜ್ಜೆಯಿಕ್ಕಿತ್ತೆಂದು ಊಹಿಸಲಿಕ್ಕೆ ಅವಕಾಶವಾಗಿದೆ. ಹಳೆಗನ್ನಡವು ಹೋಗಿ ಹೊಸಗನ್ನಡವು ಹುಟ್ಟುವುದಕ್ಕೆ ಮುಂಚೆ ೭-೮ ಶತಮಾನಗಳು ಕಳೆದು ಹೋಗಿರಬೇಕು. ಸಾರಾಂಶ:- ಕನ್ನಡ ಭಾಷೆಯು ೨ನೆಯ ಶತಮಾನದಲ್ಲಿ ಒಳ್ಳೆ ಘನತಗೇರಿತ್ತೆಂದು ಹೇಳಬಹುದು. ಮುಂದೆ ೩ರಿಂದ ೫ನೆಯ ಶತಮಾನಗಳಲ್ಲಿ ಗಂಗ ಅರಸರ ಆಳಿಕೆಯಲ್ಲಿಯೂ, ಕದಂಬ ಅರಸರ ಕಾಲದಲ್ಲಿಯೂ ಬಾಳಿದ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯ ಪಾದ, ದುರ್ವಿನೀತ ಮುಂತಾದ ಮಹಾಮಹಾ ಪ್ರಾಸಾದಿಕ ಕವಿಗಳ ಗ್ರಂಥಗಳಿಂದಲೂ ಇದೇ ವ್ಯಕ್ತವಾಗುತ್ತದೆ.

ಚಾಲುಕ್ಯರ ಆಳಿಕೆಯಲ್ಲಿಯೂ ಕನ್ನಡ ನುಡಿಯ ಅಭಿವೃದ್ಧಿಯ ಲಕ್ಷಣಗಳು ದೃಗ್ಗೋಚರವಾಗುತ್ತವೆ. ಇವರ ಕಾಲಕ್ಕೆ ಶ್ರೀವರ್ಧದೇವ, ವಿಮಲ, ಉದಯ, ನಾಗಾರ್ಜುನ ಮುಂತಾದ ಕವೀಶ್ವರರು ಜನಿಸಿದರು. ಹಾನಗಲ್ಲ ತಾಲೂಕ ಆಡೂರಿನಲ್ಲಿಯ ಶಿಲಾಲಿಪಿಯ ಕನ್ನಡ ಅಕ್ಷರಗಳು ಅತಿಶಯ ಪ್ರಾಚೀನವಾದುವು. ಅದು ಸುಮಾರು ೫೬೬ನೆಯ ಇಸವಿಯ ಶಿಲಾಲಿಪಿಯು.

೧೫ನೆಯ ಪ್ರಕರಣ – ವಾಙ್ಮಯ ವೈಭವ
೧೧೭

ರಾಷ್ಟ್ರಕೂಟರ ಕಾಲಕ್ಕಂತೂ ಕನ್ನಡನುಡಿಗೆ ಮತ್ತಷ್ಟು ಹೆಚ್ಚಿನ ಪ್ರಾಶಸ್ತ್ಯವು ಪ್ರಾಪ್ತವಾಯಿತು. ರಾಷ್ಟ್ರಕೂಟದ ಅರಸನಾದ ನೃಪತುಂಗನು ಸ್ವತಃ ವಾಙ್ಮಯ ಪ್ರಭುವಾಗಿರುವನಲ್ಲದೆ, ಕನ್ನಡಕ್ಕೆ ಒಳ್ಳೆ ಆಶ್ರಯವಾಗಿದ್ದನು. ಇವನು ಬರೆದ 'ಕವಿರಾಜಮಾರ್ಗ' ವೆಂಬ ಅಲಂಕಾರ ಗ್ರಂಥವು ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು (೯ನೆಯ ಶತಕ), ಈ ನೃಪತುಂಗನು ಸಂಸ್ಕೃತದಲ್ಲಿಯೂ 'ಪ್ರಶೋತ್ತರಮಾಲಾ' ಎಂಬ ಗ್ರಂಥವನ್ನು ರಚಿಸಿರುವನು. ಈ ಗ್ರಂಥವು ತಿಬೇಟ ಭಾಷೆಯಲ್ಲಿ ಪರಿವರ್ತಿತವಾಗಿರುವ ಸಂಗತಿಯನ್ನು 'ಸಿಫಸ' ಎಂಬವರು ಗೊತ್ತುಹಿಡಿದಿದ್ದಾರೆ. ಕನ್ನಡನಾಡು, ಕನ್ನಡಿಗರು, ಕನ್ನಡ ಭಾಷೆ ಇವುಗಳ ಬಗ್ಗೆ ನೃಪತುಂಗನಲ್ಲಿರುವ ಆದರಾತಿಶಯವು ಅವನ ಗ್ರಂಥದಿಂದ ಚನ್ನಾಗಿ ತೋರ್ಪಡುತ್ತದೆ. ಇವನ ಕಾಲದಲ್ಲಿದ್ದ ಬಂಕೇಶನೆಂಬ ಸೇನಾಪತಿಯ ಹೆಂಡತಿ 'ವಿಜಯಾ' ಎಂಬವಳು ಒಂದು ಸಂಸ್ಕೃತ ಕಾವ್ಯವನ್ನು ಬರೆದಿರುವುದಾಗಿ ತಿಳಿಯಬರುತ್ತದೆ. ಅದರೊಳಗಿನ ಒಂದು ಶ್ಲೋಕವನ್ನು ಇಲ್ಲಿ ಉದ್ಧರಿಸುವೆವು. 

सरस्वतीव कर्णाटी विजयांका जयत्यसौ ।
या वैदर्भगिरां वासः कालिदासादनन्तरम् ॥

"ಕಾಳಿದಾಸನ ತರುವಾಯ ವೈದರ್ಭಶೈಲಿಗೆ ಆಶ್ರಯಕೊಟ್ಟ ವಿಜಯಾ ಎಂಬ ಬಿರುದು ಕರ್ನಾಟಿಯು, ಪ್ರತಿಸರಸ್ವತಿಯಂತೆ ಮೆರೆಯುತ್ತಿರುವಳು.” ಅಕಲಂಕ, ಗುಣ ನಂದಿ, ಪೊನ್ನ ಮೊದಲಾದ ಕವಿಗಳು ಈತನ ಆಳಿಕೆಯಲ್ಲಿಯೇ ಬೆಳಕಿಗೆ ಬಂದರು, ಹಲಾಯುಧನು ರಚಿಸಿದ ಕವಿರಹಸ್ಯ ಎಂಬ ಗ್ರಂಥಕ್ಕೆ ರಾಷ್ಟ್ರಕೂಟದ ಅರಸನಾದ ಕೃಷ್ಣನೇ ನಾಯಕನಾಗಿದ್ದಾನೆ. ಪ್ರಸಿದ್ದ ಜೈನ ಕವಿಗಳಾದ ಜಿನಸೇನ ಮತ್ತು ಗುಣಭದ್ರ ಇವರೀರ್ವರೂ ರಾಷ್ಟ್ರಕೂಟರ ಆಸ್ಥಾನಪಂಡಿತರಾಗಿದ್ದರು.

ಹೊಸಚಾಲುಕ್ಯರ ಆಡಳಿತದಲ್ಲಿ ಕನ್ನಡಭಾಷೆಯು ಮತ್ತಷ್ಟು ಹೆಚ್ಚು ಪ್ರಗಲ್ಭಸ್ಥಿತಿಗೆ ಬಂದಿತು. ಇವರ ಕಾಲಕ್ಕೆ ಕರ್ನಾಟಕದ ರಾಜ್ಯ ವಿಸ್ತಾರವು ಪರಮಾವಧಿಯನ್ನು ಹೊಂದಿದಂತೆ ಭಾಷೆಯೂ ಪರಿಣತಾವಸ್ಥೆಯನ್ನು ಹೊಂದಿತು. ಕರ್ನಾಟಕದ ಮಹಾಮಹಾ ಕವಿಗಳೆಲ್ಲರೂ ಸಾಧಾರಣವಾಗಿ ಇವರ ಆಳಿಕೆ

೧೧೮
ಕರ್ನಾಟಕ ಗತವೈಭವ

ಯಲ್ಲಿಯೇ ಹೆಸರಿಗೆ ಬಂದರು. ರಾಷ್ಟ್ರಕೂಟರ ಅಂತ್ಯಕಾಲಕ್ಕೆ ಎಂದರೆ ಚಾಲುಕ್ಯರ ಆಳಿಕೆಯ ಆರಂಭಕ್ಕೆ ಉತ್ತರ ಹಿಂದುಸ್ಥಾನದಲ್ಲಿ ಬಲಾಡ್ಯರಾದ ಅರಸರಿರಲಿಲ್ಲ. ಹೀಗಿರುವುದರಿಂದ ಪ್ರಖ್ಯಾತ ಕವಿಯಾದ ಬಿಲ್ಹಣನು ಆಶ್ರಯಕ್ಕಾಗಿ, ಅಲೆಯುತ್ತ ಅಲೆಯುತ್ತ, ಹಿಂದುಸ್ಥಾನವನ್ನೆಲ್ಲ ಸುತ್ತಿ ಕೊನೆಗೆ ದಕ್ಷಿಣದಲ್ಲಿ ಆಳುತ್ತಿರುವ ಚಾಲುಕ್ಯ ವಿಕ್ರಮನ ಆಸ್ಥಾನಕ್ಕೆ ಬಂದು ಅಲ್ಲಿ ನಿಂತನು. ಅವನಿಗೆ 'ವಿದ್ಯಾಪತಿ' ಎಂದು ಬಿರುದುಂಟು. ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ ಈತನ ಹತ್ತರವೇ ಇದ್ದನು. ಅವನು 'ಮಿತಾಕ್ಷರಾ' ಎಂಬ ಪ್ರಸಿದ್ಧ ಧರ್ಮಶಾಸ್ತ್ರ ಗ್ರಂಥವನ್ನು ಬರೆದಿರುವನು. ಅದು ಮುಂಬಯಿ ಇಲಾಖೆಯ ಕೋರ್ಟುಗಳಲ್ಲಿಯ ಹಿಂದುಸ್ಥಾನದ ಮಿಕ್ಕ ಅನೇಕ ಭಾಗಗಳಲ್ಲಿಯೂ, ಹಿಂದು ಧರ್ಮಕ್ಕೆ ಪ್ರಮಾಣ ಗ್ರಂಥವಾಗಿದೆ. ಕನ್ನಡ ಭಾಷೆಯ ಕವಿಗಳಲ್ಲಿ, ಆದಿಪಂಪ, ರನ್ನ, ಚಂದ್ರರಾಜ, ದುರ್ಗಸಿಂಹ, ಕೀರ್ತಿವರ್ಮ, ನಾಗವರ್ಮ, ಇವರೇ ಪ್ರಮುಖರು. ಆಗಿನ ಕಾಲಕ್ಕೆ ಅರಸರು ಕನ್ನಡ ಕವಿಗಳನ್ನು ನಾನಾ ಬಗೆಯಿಂದ ಬಹುಮಾನಿಸುತಿದ್ದರು. ಕನ್ನಡ ಕವಿರತ್ನತ್ರಯದಲ್ಲಿ (ಪೊನ್ನ, ರನ್ನ, ಆದಿಪಂಪ) ಒಬ್ಬನಾದ ರನ್ನನಿಗೆ ತೈಲಪನು ಛತ್ರ ಚಾಮರಾದಿ ರಾಜಚಿಹ್ನಗಳನ್ನು ಸಲ್ಲಿಸಿ ಮನ್ನಣೆಮಾಡಿದನು. ಚಾಲುಕ್ಯ ವಿಕ್ರಮನ ಮಗನಾದ ೩ನೆಯ ಸೋಮೇಶ್ವರನು 'ಮಾನಸೋಲ್ಲಾಸ' ವೆಂಬ ಸಂಸ್ಕೃತ ಗ್ರಂಥವನ್ನು ರಚಿಸಿದನು. ಇದರಿಂದ ಅನೇಕ ರಾಜಕೀಯ ಸಂಗತಿಗಳು ತಿಳಿಯುವಂತಿವೆ. ಇದರಲ್ಲಿ, ರಾಜ್ಯ ಸಂಪಾದಿಸುವ ಬಗೆ, ರಾಜ್ಯ ಕಾಯ್ದುಕೊಳ್ಳುವ ಬಗೆ, ರಾಜ ವಿಲಾಸ ವರ್ಣನೆ ಮುಂತಾದ ವಿಷಯಗಳಿವೆ. ಅರಸರು, ರಾಜನೀತಿ, ಜ್ಯೋತಿಷ, ಫಲಜ್ಯೋತಿಷ, ಭಾಷಾಶಾಸ್ತ್ರ, ಅಲಂಕಾರ ಶಾಸ್ತ್ರ, ಕಾವ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಆಶ್ವವಿದ್ಯೆ ಮುಂತಾದುವುಗಳಲ್ಲಿ ನಿಷ್ಣಾತರಾಗಿರಬೇಕೆಂದು ಇದರಲ್ಲಿ ಹೇಳಿದೆ. ಈ ಅರಸನು ವಿದ್ಯಾವಂತನಾದುದರಿಂದ ಅವನಿಗೆ 'ಸರ್ವಜ್ಞ ಭೂಪ' ಎಂಬ ಹೆಸರಿತ್ತು.

ಹೊಯ್ಸಳ ಅರಸರ ರಾಜ್ಯಕಾರಭಾರದಲ್ಲಿಯೂ ಅಭಿನವಪಂಪ, ಕಂತಿ, ರಾಜಾದಿತ್ಯ ಸುಮನೋಬಾಣ, ಮಲ್ಲಿಕಾರ್ಜುನ, ರುದ್ರಭಟ್ಟ, ಜನ್ನ, ಕೇಶಿರಾಜ ಇತ್ಯಾದಿ ರತ್ನಗಳು ಕರ್ನಾಟಕಕ್ಕೆ ಲಭಿಸಿದುವು. ವಿಜಯನಗರದ ಕಾಲಕ್ಕೆ, ವೇದಾಂತ, ನ್ಯಾಯ, ಮಿಮಾಂಸಾ, ಆಯುರ್ವೇದ, ನೀತಿ, ಯುದ್ಧಕಲೆ, ರಸಾ

೧೫ನೆಯ ಪ್ರಕರಣ – ವಾಙ್ಮಯ ವೈಭವ
೧೧೯

ಯನ, ಇಂಥ ಅನೇಕ ಬಗೆಯ ಶಾಸ್ತ್ರಗಳಿಗೂ ವೇದಗಳಿಗೂ ವ್ಯಾಖ್ಯಾನ ಬರೆದಂಥ ವಿದ್ಯಾರಣ್ಯರು ಜನ್ಮವೆತ್ತಿದರು. ಈ ಕಾಲಕ್ಕೆ ಬಾಳಿದ ಕನ್ನಡ ಕವಿಗಳು- ಮಧುರ, ಮಂಗರಸ, ಗದಗಿನ ಕುಮಾರವ್ಯಾಸ, ನಿತ್ಯಾತ್ಮಶುಕ, ಲಕ್ಕಣ್ಣ ದಂಡೇಶ, ಇವರಲ್ಲದೆ ಪುರಂದರದಾಸ ವ್ಯಾಸರಾಯರಂಥ ಧಾರ್ಮಿಕ ಸತ್ಪುರುಷರು ಉದಯಿಸಿದರು. ಕೃಷ್ಣರಾಯನ ಆಸ್ಥಾನವಂತೂ ಅಷ್ಟದಿಗ್ಗಜಗಳಿಂದ ಶೋಭಿಸುತ್ತಿತ್ತು. ಕರ್ನಾಟಕ ಕವಿಗಳನೇಕರು ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳಲ್ಲಿಯೂ ಪಂಡಿತರಾದುದರಿಂದ ಅವರಿಗೆ ಉಭಯ ಕವಿಚಕ್ರವರ್ತಿ ಎಂದು ಬಿರುದಿತ್ತು.

ಅನೇಕ ಅರಸರು ಸ್ವತಃ ಕನ್ನಡ ಕವಿಗಳಾಗಿದ್ದರು. ೩ನೆಯ ಶತಮಾನದಲ್ಲಿ ಗಂಗ ಅರಸನಾದ ೨ನೆಯ ಮಾಧವನು “ದತ್ತಕಸೂತ್ರವೃತ್ತಿ” ಎಂಬ ಗ್ರಂಥವನ್ನು ಬರೆದನು. ೫ನೆಯ ಶತಮಾನದಲ್ಲಿ ದುರ್ವಿನೀತನೆಂಬ ಗಂಗ ಅರಸನು ಶಬ್ದಾವತಾರವನ್ನೂ ಪೈಶಾಚ ಭಾಷೆಯಲ್ಲಿದ್ದ ಬೃಹತ್ಕಥೆಗೆ ಸಂಸ್ಕೃತ ಪರಿವರ್ತನವನ್ನೂ ಭಾರವಿಯ ಕಿರಾತಾರ್ಜುನಕ್ಕೆ ಕನ್ನಡ ಟೀಕೆಯನ್ನೂ ಬರೆದನು. ಅಲ್ಲದೆ ಕನ್ನಡದಲ್ಲಿ ಒಂದು ಗದ್ಯಗ್ರಂಥವನ್ನು ಬರೆದಂತೆ ತಿಳಿಯುತ್ತದೆ. ಆದರೆ ಇದು ಉಪಲಬ್ಧವಿಲ್ಲ. ೮ನೆಯ ಶತಮಾನದಲ್ಲಿ ಗಂಗರಸನಾದ ಶ್ರೀಪುರುಷನೆಂಬವನು ಗಜಶಾಸ್ತ್ರವೆಂಬ ಗ್ರಂಥವನ್ನು ರಚಿಸಿದ್ದನಂತೆ! ಅವನ ಮಗನಾದ ಶಿವಮಾರನೆಂಬವನು 'ರಾಜಾಷ್ಟಕ'ವೆಂಬ ಗ್ರಂಥವನ್ನು ರಚಿಸಿದನು. ಇವನು ನಾಟಕಾದಿಗಳಲ್ಲಿ ಪ್ರಮಾಣ ಪ್ರವೀಣನೆಂದೆನಿಸಿಕೊಂಡಿರುವನು. ಅಲ್ಲದೆ, ಆನೆ ಕುದುರೆಗಳನ್ನು ಶಿಕ್ಷಿಸುವುದರಲ್ಲಿಯೂ ಇವನ ಗ್ರಂಥವನ್ನೇ ಪ್ರಮಾಣವಾಗಿ ಹಿಡಿಯುತ್ತಿದ್ದರಂತೆ!

ನಮ್ಮ ಕರ್ನಾಟಕ ಹೆಂಗಸರು ವಾಙ್ಮಯಕ್ಕೆ ಮಾಡಿದ ಸೇವೆಯು ಮಿಕ್ಕ ಯಾರಿಗಿಂತಲೂ ಕಡಿಮೆಯಾಗಿರುವುದಿಲ್ಲ. ಕಂತಿ, ಹೊನ್ನಮ್ಮ ಮುಂತಾದ ಕವಯಿತ್ರಿಯರು ಕನ್ನಡಿಗರಿಗೆ ಗೊತ್ತೇ ಇರುವುದರಿಂದ ಅವರ ಹೆಸರನ್ನು ಇಲ್ಲಿ ಪುನಃ ಹೇಳುವುದಿಲ್ಲ. ಆದರೆ ಕರ್ನಾಟರಾಜಪ್ರಿಯಾ ಕರ್ಣಾಟೀ, ನಾಗಮ್ಮ ವಿಜ್ಜಕಾ ಮುಂತಾದ ಹೆಂಗಸರು ಸಂಸ್ಕೃತ ಕವಯಿತ್ರಿಯರಾಗಿದ್ದರೆಂಬುದು ಹೋದ ವರುಷದ ವಾಗ್ಭೂಷಣದ ವಾಚಕರಿಗೆ ಗೊತ್ತಾಗಿರಬಹುದು. ಆದರೆ ಮೊನ್ನೆ ಮೊನ್ನೆ ಜಗತ್ತಿಗೆ ಗೊತ್ತಾದ ವಿಜಯನಗರದ ಬುಕ್ಕಮಹಾರಾಯನ ಹಿರೀ ಸೊಸೆಯಾದ ಗಂಗಾದೇವಿಯೆಂಬವಳೂ ಅತಿಶಯ ಪ್ರತಿಭಾಸಂಪನ್ನಳಾದ ಸಂಸ್ಕೃತ

೧೨೦
ಕರ್ನಾಟಕ ಗತವೈಭವ

ಕವಯಿತ್ರಿಯಾಗಿದ್ದಳೆಂದು ಹೇಳಿದರೆ ಯಾವ ಕನ್ನಡಿಗನಿಗೆ ಆನಂದವಾಗಲಿಕ್ಕಿಲ್ಲ. ಇವಳು ತನ್ನ ಗಂಡನಾದ ಕಂಪಣನು ಮಧುರೆಯ ಮೇಲೆ ದಂಡೆತ್ತಿ ಹೋದ ಸಂಗತಿಯನ್ನು "ಮಧುರಾ ವಿಜಯಂ ಅಥವಾ ವೀರ ಕಂಪಣ ರಾಯಚರಿತಂ” ಎಂಬ ಪ್ರೌಢಶೈಲಿಯಿಂದ ಯುಕ್ತವಾದ ಕಾವ್ಯದಲ್ಲಿ ವರ್ಣಿಸಿರುವಳು.

ಸಾರಾಂಶ, ಸಂಸ್ಕೃತ-ಕನ್ನಡ ವಾಙ್ಮಯಕ್ಕೆ ನಮ್ಮ ಕರ್ನಾಟಕಸ್ಥರು ಮಾಡಿದ ಸೇವೆಯು ಅಷ್ಟಿಷ್ಟೆಂದು ಹೇಳಲಳವಲ್ಲ.

ಕರ್ನಾಟಕದಲ್ಲಿ ಅನೇಕ ಕಡೆ ವಿದ್ಯಾಲಯಗಳಿದ್ದುವು, ವಿಜಯನಗರ, ಬಳ್ಳೆಗಾವಿ ಮುಂತಾದ ಪಟ್ಟಣಗಳಲ್ಲಿ ವಿಶ್ವವಿದ್ಯಾಲಯಗಳಿದ್ದುವು. ಆದರೆ ಅವುಗಳ ವರ್ಣನೆಯನ್ನು ಕೊಡಲು ಇಲ್ಲಿ ಅವಕಾಶವಿಲ್ಲ. ಒಂದೇ ವಿದ್ಯಾಲಯವನ್ನು ಕುರಿತು ತುಸ ಹೇಳುವೆವು.

ಇಂಡಿ ತಾಲೂಕಿಗೆ ಸೇರಿದ ಸಾಲೋಟಗಿ ಎಂಬಲ್ಲಿ, ನೃಪತುಂಗನ ಕಾಲಕ್ಕೆ ಚಕ್ರಾಯುಧನೆಂಬವನು ಒಂದು ವಿದ್ಯಾಲಯವನ್ನು ಸ್ಥಾಪಿಸಿದ್ದನು. ಅವನು ವಿದ್ಯಾರ್ಥಿಗಳಿಗೆ ೫೦೦ 'ನಿವರ್ತನ' ಭೂಮಿಯನ್ನು ದಾನವಾಗಿ ಕೊಟ್ಟನು. ಅಲ್ಲದೆ, ಅವರು ವಾಸಿಸಲಿಕ್ಕೆ ೨೭ ಮನೆಗಳನ್ನು ಕೊಟ್ಟಿದ್ದನು. ಮತ್ತು ಊರಲ್ಲಿ ಮದುವೆ ಮುಂಜಿಗಳಾದರೆ ಆ ಶಾಲೆಗೆ ಜನರು ಇಷ್ಟೇ ಹಣವನ್ನು ಕೊಡಲೇ ಬೇಕೆಂದು ಕಟ್ಟುಮಾಡಿದ್ದನು (ಶಾಲಾ ವಿದ್ಯಾರ್ಥಿಸಂಘಾಯ ಮುದ್ರವ್ಯಾಣಿ ದ್ವಿಜಾತಿಭಿಃ| ಪಂಚಪುಷ್ಪಾಣಿ ದೇಯಾನಿ ವಿವಾಹೆ ಸತಿ ತಜ್ಜನೈಃ). ಅಧ್ಯಾಪಕರಿಗೆ ಇರಲಿಕ್ಕೆ ಮನೆಯ ಅವರ ಉಪಜೀವನಕ್ಕಾಗಿ ಹೊಲವೂ ಕೊಡಲ್ಪಟ್ಟಿದ್ದುವು. ಇದೇ ಬಗೆಯಾಗಿ, ಅನೇಕ ವಿದ್ಯಾಲಯಗಳ ವರ್ಣನೆಗಳನ್ನು ನಾವು ಕಲೆಹಾಕಬಹುದು.

ಈ ಮೇರೆಗೆ ನಾವು ವಾಙ್ಮಯ ವೈಭವವನ್ನು ಸಂಕ್ಷೇಪವಾಗಿ ವರ್ಣಿಸಿರುವೆವು. ಮೊದಲು ಮೊದಲು ಸಂಸ್ಕೃತದ ಪ್ರಾಬಲ್ಯವಿದ್ದುದರಿಂದ, ಕನ್ನಡ ವಾಙ್ಮಯವು ಅದರೊಡನೆ ಕಾದಬೇಕಾಯಿತು. ಬ್ರಾಹ್ಮಣರ ಗ್ರಂಥಗಳೆಲ್ಲವೂ ಅನೇಕ ನೂರು ವರ್ಷಗಳವರೆಗೆ ಸಂಸ್ಕೃತದಲ್ಲಿಯೇ ಇದ್ದುವು, ಆದರೆ ಬೌದ್ಧ ಜೈನ ಧರ್ಮಗಳು ವೈದಿಕ ಧರ್ಮದಿಂದ ಸಿಡಿದು ನಿಂತುದರಿಂದ, ವೈದಿಕ ಧರ್ಮದ ಮುಖ್ಯ ಭಾಷೆಯಾದ ಸಂಸ್ಕೃತದಲ್ಲಿ ಅವರು ಗ್ರಂಥಗಳನ್ನು ಬರೆಯದೆ ದೇಶ

೧೫ನೆಯ ಪ್ರಕರಣ –ವಾಙ್ಮಯ ವೈಭವ
೧೨೧

ಭಾಷೆಯಲ್ಲಿ ಬರೆಯತೊಡಗಿದರು. ಆದರೆ ಮುಂದೆ ಬರಬರುತ್ತ ವೈದಿಕಧರ್ಮದಲ್ಲಿ ಸುಧಾರಕರಾಗಿ ಉದ್ಭವಿಸಿದ ವೀರಶೈವ ಧರ್ಮದವರೂ ಜೈನಬೌದ್ದರನ್ನೇ ಅನುಕರಣಮಾಡಿದರು, ಆದರೆ ಮುಂದೆ ಬ್ರಾಹ್ಮಣರೂ ಕೆಲವಂಶದಿಂದ ಈ ದೇಶಭಾಷೆಯ ಪ್ರಾಬಲ್ಯ ಪ್ರವಾಹದ ಸೆಳವಿಗೆ ಸಿಕ್ಕಿ ಹರಿದುಬಂದರು. ಅವರೂ ತಮ್ಮ ಧರ್ಮ ವಿಷಯಗಳನ್ನು ಕೂಡ ಪ್ರಾಕೃತದಲ್ಲಿ ಬರೆಯ ತೊಡಗಿದರೆಂಬುದು ಶ್ರೀ ಪುರಂದರದಾಸ ಮುಂತಾದವರ ಆಚರಣೆಯಿಂದ ಗೊತ್ತಾಗುತ್ತದೆ. ಈ ಮೇರೆಗೆ ಕನ್ನಡ ವಾಙ್ಮಯವು ಸಂಸ್ಕೃತದೊಡನೆ ಮಾಡಿದ ಯುದ್ಧದ ಕಥೆಯು ಮನೋರಂಜಕವಾಗಿದೆ. ಆದರೆ ಅದನ್ನು ಇಲ್ಲಿ ದಿಗ್ದರ್ಶನ ಮಾಡುವುದಕ್ಕಿಂತ ಹೆಚ್ಚಿಗೆ ಹೇಳುವುದಕ್ಕೆ ಅವಕಾಶವಿಲ್ಲ. ಇಷ್ಟಾದರೂ ಇದು ಪ್ರೇಮ ಯುದ್ದವೇ ಆಗಿತ್ತು. ಏಕಂದರೆ ಸಂಸ್ಕೃತ ಭಾಷೆಯ ವಿಷಯಕ್ಕಿರುವ ಆದರವು ಅದರಿಂದ ತಿಲಪ್ರಾಯವೂ ಕಡಿಮೆಯಾಗಲಿಲ್ಲ. ಇಷ್ಟೇ ಅಲ್ಲ; ಅನೇಕ ಜೈನ ಬೌದ್ಧ ವೀರಶೈವ ಧರ್ಮದವರೂ ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದರು.

ಶಿಲಾಲಿಪಿ, ತಾಮ್ರ ಪಟಗಳ ವಿಷಯವಾಗಿಯೂ ಸಾಮಾನ್ಯವಾಗಿ ಇದೇ ಪ್ರಕಾರದ ವಿಧಾನವನ್ನು ಮಾಡಬಹುದು. ಪ್ರಾಚೀನ ಶಿಲಾಲೇಖಗಳೆಲ್ಲವೂ ಸಂಸ್ಕೃತದಲ್ಲಿಯೇ ಇವೆ. ಬರಬರುತ್ತ, ಅವುಗಳಲ್ಲಿ ಕನ್ನಡ ಅಕ್ಷರ, ಮತ್ತು ಶಬ್ದಗಳ ಪ್ರವೇಶವಾಗಿದೆ. ಅನಂತರ, ಅವು ಕನ್ನಡ ಮತ್ತು ಸಂಸ್ಕೃತ ಮಿಶ್ರವಾದುವು. ಕೊನೆಗೆ, ಪೂರ್ಣ ಕನ್ನಡ ಶಿಲಾಲೇಖಗಳೇ ಹೆಚ್ಚಾದುವು. ಕದಂಬರ ಕಾಲದ ತಾಮ್ರಪಟಗಳು (ಅವರ ಶಿಲಾಲಿಪಿಗಳು ಕಡಿಮೆ) ಸಂಸ್ಕೃತದಲ್ಲಿ ಇರುತ್ತವೆ. ಚಾಲುಕ್ಯರ ಶಿಲಾಲಿಪಿಗಳಲ್ಲಿ ಅಲ್ಲಿಷ್ಟು ಇಲ್ಲಿಷ್ಟು ಕನ್ನಡ ಅಕ್ಷರಗಳೂ ಶಬ್ದಗಳೂ ದೊರೆಯುತ್ತವೆ, ರಾಷ್ಟ್ರಕೂಟರ ಕಾಲದಲ್ಲಿ ಕನ್ನಡ ಶಿಲಾಲಿಪಿಗಳು ದೊರೆಯುತ್ತವೆ. ಕೊನೆಗೆ ಹೊಸ ಚಾಲುಕ್ಯರ ಕಾಲದಲ್ಲಂತೂ ಶಿಲಾಲಿಪಿಗಳು ಬಹುತರವಾಗಿ ಕನ್ನಡ ಭಾಷೆಯಲ್ಲಿಯೇ ಇರುತ್ತವೆ. ಕೊನೆಗೆ, ನಮ್ಮ ಕನ್ನಡ ಭಾಷೆಯ ವರ್ಚಸ್ಸು ಧರ್ಮ ಕ್ಷೇತ್ರದಲ್ಲಿಯೂ ಹೇಗೆ ಪ್ರಸ್ಥಾಪಿತವಾಗಿತ್ತೆಂಬುದಕ್ಕೆ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರದಲ್ಲಿಯ ಎರಡು ಶ್ಲೋಕಗಳನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುತ್ತೇವೆ. ಅವು ಯಾವುವೆಂದರೆ

೧೨೨
ಕರ್ನಾಟಕ ಗತವೈಭವ

ಆದರ್ಶವ ಗತಾಕ್ಷಭಾಷಾ (?) ಭೇದದಿಂದಲಿ ಕರೆಯಲದನುನಿ|
    ಷೇಧಗೈದವಲೋಕಿಸದೆ ಬಿಡುವರೆ ವಿವೇಕಿಗಳೂ ||
ಮಾಧವನ ಗುಣ ಪೇಳ್ವ ಪ್ರಾಕೃತ | ವಾದರೂ ಸರಿ, ಕೇಳಿ ಪರಮಾ
    ಹ್ಲಾದಬಡದಿಪ್ಪರೆ ನಿರಂತರ ಬಲ್ಲ ಕವಿಜನರು ||
                                              –೧೭ ನೆಯ ಸ೦ಧಿ ೩೪

ಭಾಸ್ಕರನ ಮಂಡಲವ ಕಂಡು ನ | ಮಸ್ಕರಿಸಿ ಮೋದಿಸದೆ ದ್ವೇಷದಿ |
   ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ ||
ಸಂಸ್ಕೃತವಿದಲ್ಲೆದು ಕುಹಕಿ ತಿ | ರಸ್ಕರಿಸಲೇನಹುದು ಭಕ್ತಿ ಪು |
   ರಸ್ಸರಬ ಕೇಳ್ವರಿಗೆ ಒಲಿವನು ಪುಷ್ಕರಾಕ್ಷಸಖಾ ||
                                             -೧೭ ನೆಯು ಸ೦ಧಿ ೩೫

ಅನೇಕ ಕನ್ನಡಿಗರು ತೆಲಗು ಭಾಷೆಯಲ್ಲಿ ಪಂಡಿತರಾಗಿ ತೆಲಗು ಭಾಷೆಯಲ್ಲಿ ಗ್ರಂಥಗಳನ್ನು ಬರೆದರೂ ಅವರಿಗೆ ತಾವು ಕರ್ನಾಟಕರೆಂದನಿಸಿಕೊಳ್ಳುವುದಕ್ಕೆ ತಿಲಾಂಶದಲ್ಲಿಯೂ ನಾಚಿಕೆಯುಂಟಾಗುತ್ತಿರಲಿಲ್ಲ, ಇಷ್ಟೇ ಅಲ್ಲ, ತಾವು ಕರ್ನಾಟಕರೇ ಎಂದು ಘಂಟಾಘೋಷವಾಗಿ ಸಾರುತ್ತಿದ್ದರು. ಶ್ರೀನಾಥನೆಂಬ ತೆಲಗು ಕವಿಯು ವಿಜಯನಗರದ ರಾಜನಾದ ಹರಿಹರರಾಯನ ಕಾಲಕ್ಕೆ ಪ್ರಸಿದ್ಧಿಗೆ ಬಂದನು. ಇವನು ತಾನು ಬರೆದ 'ಭೀಮೇಶ್ವರ ಪುರಾಣ' ವೆಂಬ ತೆಲಗು ಗ್ರಂಥದಲ್ಲಿ ಬರೆದಿರುವದೇನೆಂದರೆ "ಪ್ರೌಢ ಪರಿಕಿಂಪ ಸಂಸ್ಕೃತ ಭಾಷೆಯೆಂಡ್ರು ! ಪಲುಕು ನುಡಿಕಾರಮುನ ನಾಂಧ್ರ ಭಾಷೆಯೆಂಡ್ರು ! ಯೌವರೇ ಮನ್ನ ನಂಡ್ರು ! ನಾಕೇಮಿ ಕೊರತ ! ನಾ ಕವಿತ್ವಮಂಬು ನಿಜಮು ಕರ್ನಾಟಭಾಷಾ" ||

ಸಾರಾಂಶ:- "ನನ್ನ ಕವಿತೆಯ ಪ್ರೌಢಿ ನೋಡಿದರೆ ಅದು ಸಂಸ್ಕೃತ ಭಾಷೆಯೆನ್ನುವರು | ಮಾತಿನ ರೀತಿಯನ್ನು ನೋಡಿದರೆ ತೆಲುಗು ಭಾಷೆ ಎನ್ನುವರು ಯಾರು ಏನೇ ಎನವಲ್ಲರು! ನನಗೇನು ಕೊರತೆ! ನನ್ನ ಕವಿತ್ವವು ನಿಜವಾಗಿ "ಕರ್ನಾಟಕ ಭಾಷೆ" ಅಹಹ ! ಎಂಥ ಕರ್ನಾಟಕಾಭಿಮಾನವು !!

ಕನ್ನಡಿಗರೇ, ಇಂತಿಂಥವರು ಕನ್ನಡವನ್ನು ಗೌರವಿಸಿರಲು ನಾವು ಅದನ್ನು ತಿರಸ್ಕರಿಸುವುದುಚಿತವೇ !