ಕರ್ನಾಟಕ ಗತವೈಭವ/೨ನೆಯ ಪ್ರಕರಣ

ವಿಕಿಸೋರ್ಸ್ ಇಂದ
Jump to navigation Jump to search

ನಾಮಾವಳಿಯು ನಲಿದಾಡುವದೆಂತು? ಅವರಲ್ಲಿ ರಾಷ್ಟ್ರೀಯ ವಿಭೂತಿಗಳ ಉತ್ಸವಗಳಾಗುವದೆಂತು? ತಮ್ಮ ಪೂರ್ವಜರ ಅಭಿಮಾನವೇ ಇಲ್ಲದಂಥವರು ತಮ್ಮ ಜನರಲ್ಲಿ ರಾಷ್ಟ್ರೀಯತ್ವದ ಭಾವನೆಗಳನ್ನು ಬಿತ್ತುವದೆಂತು? ಇಂಥ ಜನರಲ್ಲಿ ನಿಜವಾದ ರಾಷ್ಟ್ರಾಭಿಮಾನವು ಎಂದಾದರೂ ಮೊಳೆದೋರುವದೋ? ಯಾವ ಕರ್ನಾಟಕಸ್ಥರಿಗೆ ತಮ್ಮ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನ ವುಂಟಾಗಿರುವದಿಲ್ಲವೋ, ಯಾರು ತಮ್ಮ ಜನರ ಮಹಾ ಕಾರ್ಯಗಳ ಜ್ಞಾನವಿಲ್ಲದೆ ಇನ್ನೂ ಕಗ್ಗತ್ತಲೆಯಲ್ಲಿ ಅಲೆ ದಾಡುತ್ತಿರುವರೋ ಅಂಥ ಜನರ ಭಾಷಾವೃಕ್ಷವು ಕೂಡ ಭರದಿಂದ ಬೆಳೆಯದಿದ್ದರೆ ಸೋಜಿಗವೇನು? ಕನ್ನಡಿಗರೇ, ನಿಮ್ಮ ಈ ವಿಷಾದವನ್ನು ಹೋಗಲಾಡಿಸಿ, ನಿಮ್ಮ ಮೇಲಿನ ನಿರಭಿಮಾನತೆಯ ಮುಸಕನ್ನು ಹಾರಹೊಡೆಯಲಿಕ್ಕೆ ನೀವು ನಿಮ್ಮ ಇತಿಹಾಸಕ್ಕೆ ಶರಣುಹೋಗಿರಿ, ನಿಮ್ಮ ಮಂದದೃಷ್ಟಿಗೆ ಅದೇ ಮೇಲಾದ ಅಂಜನವು.

Rule Segment - Span - 40px.svgRule Segment - Fancy1 - 40px.svgRule Segment - Span - 40px.svg

೨ನೆಯ ಪ್ರಕರಣ


ಕರ್ನಾಟಕವು ಮೃತರಾಷ್ಟ್ರವೇ?

कैब्यं मा स्म गमः पार्थ नैतत्त्वय्युपपद्यते |
क्शुद्र ह्ऋदयदौरबल्य त्यक्तोत्तिष्ट परंतप ||

- ಗೀತಾ, ೨. ೩.

ಅರಿಭಯಂಕರ ನೀ ನಪುಂಸಕ | ರಿರವನೈದಲು ಬೇಡ ನಿನಗಿದು |
ದೊರಕಲಾಗದು ಧೀರತನಕಿದು ಹಾನಿಕರವಹುದು ||
ಮರುಳೆ, ಬಡಮನದಿಂದ ಹೆದರದೆ | ಮರುಳತನವನು ಬಿಟ್ಟು ಕದನಕೆ |
ಭರವಸದಲೇಳೆನಲು ಕೃಷ್ಣಗೆ ಪಾರ್ಥ ನಿಂತೆಂದ ||

-ನಾಗರಸ

ರತಖಂಡಾಂತರ್ಗತರಾದ ಕನ್ನಡಿಗರೇ,
ಳೆದ ಪ್ರಕರಣದಲ್ಲಿ ನಾವು ನಮ್ಮ ಮಿಕ್ಕ ರಾಷ್ಟ್ರಬಂಧುಗಳಲ್ಲಿ ಉಂಟಾಗಿರುವ ಪೂರ್ವಸ್ಥಿತಿಯ ತಿಳುವಳಿಕೆಯನ್ನೂ, ಸದ್ಯಸ್ಥಿತಿಯ ವಿಷಯದಲ್ಲಿ ಅವರು ನಡಿಸಿರುವ ಪಶ್ಚಾತ್ತಾಪ ಪೂರ್ವಕವಾದ ಉನ್ನತಿಯ ಕ್ರಮವನ್ನೂ, ನಾವು ಮಾತ್ರ

೨ನೆಯ ಪ್ರಕರಣ - ಕರ್ನಾಟಕವು ಮೃತರಾಷ್ಟ್ರವೇ?

ಎಳ್ಳಷ್ಟೂ ಸದ್ದಿಲ್ಲದೆ ಮಲಗಿರುವ ಶೋಚನೀಯವೂ ಲಜ್ಜಾಸ್ಪದವೂ ಆದ ಸಂಗತಿ ಯನ್ನೂ ಅರಿಕೆ ಮಾಡಿಕೊಂಡೆವು. ಆದರೆ ನಿಜವಾಗಿಯೂ ಕನ್ನಡಿಗರಾದ ನಾವು ಹೀಗೆ ವಿಷಾದಗೊಂಡು ಹತಾಶರಾಗಲಿಕ್ಕೆ ಏನಾದರೂ ಪ್ರಬಲ ಕಾರಣವುಂಟೋ, ಎಂಬುದನ್ನು ನಾವೀ ಪ್ರಕರಣದಲ್ಲಿ ಯೋಚಿಸುವ.
ವಾಚಕರೇ, ತಿಪ್ಪೆಯು ಹೋಗಿ ಉಪ್ಪರಿಗೆಯಾದ ಕಥೆಗಳೂ ಅರಮನೆ ಹೋಗಿ ಸೆರೆಮನೆಯಾದ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಒಂದೆರಡು ಇರುತ್ತವೆಯೋ! ಅಹಹ! चक्रनेमिक्रमेण ಅಂದರೆ ಗಾಲಿಯ ಹಲ್ಲು ಗಳಂತ ತಿರುಗುತ್ತಿರುವ ಈ ಕಾಲನ ಅದ್ಭುತವಾದ ಕೃತಿಯನ್ನು ನಿರೀಕ್ಷಿಸಿದ ಹಾಗೆ ಮನಸ್ಸಲ್ಲವೂ ಅಗಾಧವಾದ ದುಃಖ ಸಮುದ್ರದಲ್ಲಿ ಮುಳುಗಿ, ಹೃದಯ ದೌರ್ಬಲ್ಯವನ್ನು ತಳೆವುದರಲ್ಲಿ ಸೋಜಿಗವೇನು! ಅದು ಮನುಷ್ಯ ಸ್ವಭಾವಕ್ಕನುಗುಣವಾಗಿಯೇ ಇದೆ. ಆದರೆ ಕ್ಷಣಿಕವಾದ ಈ ಹೃದಯ ದೌರ್ಬಲ್ಯವನ್ನೂ, ವಿಮೂಢ ಸ್ಥಿತಿಯನ್ನೂ ಕೊನೆಯ ವರೆಗೂ ಹಾಗೆಯೇ ಧೃಡವಾಗಿಟ್ಟು ಕೊಂಡು ಹೇಡಿಗಳಂತೆ ಅಳುತ್ತ ಕುಳಿತರೆ ಮಾತ್ರ ಅದು ಅಕ್ಷಮ್ಯವಾದ ತಪ್ಪಾಗುವದು; ಮತ್ತು ಈ ನಮ್ಮ ತಪ್ಪಿಗಾಗಿ ನಮಗೆ ಅಷ್ಟೇ ಅಲ್ಲದೆ, ನಮ್ಮ ಮಕ್ಕಳು ಮರಿಗಳಿಗೂ ಸಹ ನಮ್ಮ ಹೆಸರಿನಿಂದ ಕಲ್ಲೊಡೆಯುತ್ತ ಕುಳ್ಳಿರುವ ಪ್ರಸಂಗವು ಬಾರದೇ ಇರದು! ವೈಭವ ಶಿಖರವನ್ನಡರಿದ ಯಾವ ಜನಾಂಗಕ್ಕಾದರೂ ಒಮ್ಮೆಲ್ಲೊಮ್ಮೆ ಇಂಥ ದುರವಸ್ಥೆಯು ಬಂದೇ ತೀರಬೇಕಾಗಿ ಸೃಷ್ಟಿಯ ನಿಯಮವಿರುವದೆಂದು ಪ್ರಾಚೀನ ಇತಿಹಾಸವು ಈ ವಿಷಯದಲ್ಲಿ ನಮ್ಮನ್ನು ಸಂತಯಿಸಲಿಕ್ಕೆ ಕಾಯ್ದು ಕೊಂಡು ನಿಂತಿದೆ, ನಾವು ಜಾಣರಾದರೆ ಆ ಪ್ರಾಚೀನ ಇತಿಹಾಸದ ಅನುಭವದ ಮಾತನ್ನು ಕೇಳಿ, ನಮ್ಮ ಅಳ್ಳೆದೆಯನ್ನು ಕಲ್ಲೆದೆಯಾಗಿ ಮಾಡಲು ಪ್ರಯತ್ನಿಸಬೇಕು, ರಾಷ್ಟ್ರಕ್ಕೆ ಬಿಕ್ಕಟ್ಟಿನ ಸ್ಥಿತಿಯು ಒದಗಿದಾಗ, ಆ ರಾಷ್ಟ್ರೀಯರು ಕೌಟುಂಬಿಕ -ಅತಏವ ಸಂಕುಚಿತವಾದ- ತಮ್ಮ ವಿಚಾರಗಳನ್ನು ವಿಶಾಲ ಗೊಳಿಸಿ, ಮನೆಮಾರುಗಳನ್ನು ಕಸಕ್ಕಿಂತ ಕಡೆಮಾಡಿ, ಹೆಂಡಿರು ಮಕ್ಕಳನ್ನು ದೂರೀಕರಿಸಿ ಕ್ಷಣಹೊತ್ತು ಧೀರರಾಗಲಿಕ್ಕೆ ಬೇಕು, ಹೃದಯ ದೌರ್ಬಲ್ಯವು ಯಾರಿಗೆ ಉಚಿತವು ? ಮೃತರಾಷ್ಟ್ರಕ್ಕೆ! ಯಾವ ರಾಷ್ಟ್ರದೊಳಗಿನ ನಾಡಿಗಳ ಚಲನಯೆಲ್ಲವೂ ನಿಂತುಹೋಗಿ, ಸ್ವಲ್ಪವಾದರೂ ಜೀವಕಳೆ ಇರುವದಿಲ್ಲವೋ, ಯಾವ 

೧೦
ಕರ್ನಾಟಕ ಗತವೈಭವ

ದೇಶದ ಇತಿಹಾಸದಲ್ಲಿ ವೈಭವದ, ಪರಾಕ್ರಮದ, ಬುದ್ಧಿವಂತಿಕೆಯ ಸಂಗತಿಗಳು ಎಂದಿಗೂ ಶೂನ್ಯವಾಗಿರುವವೋ, ಯಾವ ನಾಡು ನಾಮ ಮಾತ್ರಕ್ಕೆ ಮನುಷ್ಯರಿಂದ ತುಂಬಿರುವದೋ, ಅಂಥ ನಾಡಿನವರು ಹೀಗೆ ಅಪ್ಪುಗೈ ಹಾಕಿಕೊಂಡು ಕುಳಿತರೆ ಒಂದು ವೇಳೆ ಸರಿದೋರಬಹುದು; ಏಕೆಂದರೆ ದೇಶದಲ್ಲಿ ಎಂದಿಗೂ ಜೀವಂತತನದ ಕುರುಹುಗಳೇ ಇಲ್ಲದ ಮೇಲೆ, ಆ ದೇಶದವರಿಂದ ಮುಂದೆ ಏನಾದರೂ ಮಹಾ ಕಾರ್ಯಗಳಾಗುವವಂದರೆ ಒಂದು ವೇಳೆ ಸಂದೇಹವುಂಟಾಗಬಹುದು. ಆದರೆ ಯಾವ ರಾಷ್ಟ್ರವು ಇತಿಹಾಸ ರಂಗದೊಳಗೆ ಬಹು ಗೌರವದಿಂದ ಎಡೆಬಿಡದೆ ಸಾವಿರಾರು ವರ್ಷಗಳ ತನಕ ಮೆರೆಯಿತೋ, ಯಾವುದರ ಹೆಸರು ಸುವರ್ಣಾಕ್ಷರಗಳಿಂದ ಬರೆಯಲ್ಪಡಲಿಕ್ಕೆ ಯೋಗ್ಯವೋ, ಅಂಥ ರಾಷ್ಟ್ರವು ಕಾಲನಿಂದ ಗೃಸ್ತವಾಗಿ ನಿದ್ರಿತವಾಗಿದ್ದರೂ, ಅದು ಇಂದಿಲ್ಲದಿದ್ದರೆ, ನಾಳೆಯಾದರೂ ತನ್ನ ಕಳೆದು ಕೊಂಡ ವೈಭವವನ್ನು ಸಂಪಾದಿಸಿಯೇ ತೀರುವದೆಂಬುದು ನಿರ್ವಿವಾದವಾದ ಸಂಗತಿಯು. ಸಾರಾಂಶ: ಒಮ್ಮೆ ಜೀವಂತವಾಗಿದ್ದ ರಾಷ್ಟ್ರವು ಎಂದೂ ಮೃತ ವಾಗದು, ಅದು ನಿದ್ದೆ ಹೋಗಿರಬಹುದು; ಗಾಬರಿಗೊಂಡು ಕಕ್ಕಾಬಿಕ್ಕಿಯಾದ ನಮ್ಮ ಕಣ್ಣಿಗೆ ಅದು ಮೃತವಾದಂತ ತೋರಬಹುದು, ಆದರೆ ಸೂಕ್ಷವಾಗಿಯೂ, ಕೂಲಂಕಷವಾಗಿಯ ವಿಚಾರಿಸಿದರೆ, ನಮ್ಮ ಭ್ರಮೆಯು ಬಯಲಾಗಿ, ಅದರಲ್ಲಿ ವೈಭವದ ಬೀಜಗಳು ಇನ್ನೂ ಅಚ್ಚಳಿಯದೆ ಇರುವವಾಗಿ ನಿದರ್ಶನಕ್ಕೆ ಬಾರದಿರದು.

ದು ಸಾಮಾನ್ಯ ವಿಚಾರವಾಯಿತು, ನಮ್ಮ ಜನ್ಮಭೂಮಿಯಾದ ಕನ್ನಡನಾಡಿನ ಸದ್ಯದ ಅವಸ್ಥೆಯೇನು? ಅದು ಮೃತರಾಷ್ಟ್ರವೋ ಜೀವಂತರಾಷ್ಟ್ರವೋ, ಎಂಬುದನ್ನು ನಾವಿನ್ನು ತಿಳಿಯಲು ಮುಂದುವರಿಯುವ, ಕನ್ನಡಿಗರೇ, ನಾವು ನಿಮ್ಮ ಕೈಯಲ್ಲಿ ಕಟ್ಟಿಕೊಟ್ಟು ಸಾರಿ ದೂಗಿ ಹೇಳುವದೇನಂದರೆ, ನಮ್ಮ ಕರ್ನಾಟಕವು ಮೃತರಾಷ್ಟ್ರವಲ್ಲ; ಅದು ಜೀವಂತರಾಷ್ಟ್ರವು, ಅಷ್ಟೇಕೆ ! ಅದೊಂದು ಪ್ರತಿಭಾ ಸಂಪನ್ನವಾದ ರಾಷ್ಟ್ರವು, ೧೦೦೦-೧೫೦೦ ವರ್ಷಗಳ ವರೆಗೆ ಅವ್ಯಾಹತವಾಗಿ ಹಿಂದೂ ದೇಶದ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಷ್ಟ್ರವೆಂದರೆ ಕರ್ನಾಟಕವೊಂದೇ! ಉತ್ತರ ಹಿಂದುಸ್ತಾನದಂಥ ಬಲವಾದ ರಾಷ್ಟ್ರದ ಇತಿಹಾಸವು ಕೂಡ ಹರ್ಷವರ್ಧನನ ಕಾಲದಿಂದ ಲುಪ್ತವಾಗಿ ಹೋಯಿತು, ಆದರೆ ದಕ್ಷಿಣ
೧೧
೨ನೆಯ ಪ್ರಕರಣ – ಕರ್ನಾಟಕವು ಮೃತರಾಷ್ಟ್ರವೇ?

ದಲ್ಲಿ ನಮ್ಮ ಕರ್ನಾಟಕವು ಮಾತ್ರ ಪೂರ್ವದಿಂದ ನಡೆದುಬಂದ ತನ್ನ ವೈಭವವನ್ನು ಸ್ವಲ್ಪವಾದರೂ ಕುಂದಿಸದೆ, ತಿರಿಗಿ ಹಬ್ಬುವಂತೆ ಮಾಡಿ, ಮುಂದೆ ಸಾವಿರಾರು ವರ್ಷಗಳವರೆಗೆ ತನ್ನ ಘನತೆಯನ್ನು ಅತ್ಯಂತ ದಕ್ಷತೆಯಿಂದ ಕಾಪಾಡಿಕೊಂಡಿದೆ. ಈ ಕರ್ನಾಟಕದಲ್ಲಿಯೇ ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಯನ್ನುಂಟುಮಾಡುವಂಥ ಧರ್ಮಸ್ಥಾಪನಾಚಾರ್ಯರು ಜನ್ಮ ತಾಳಿರುವರು. ಈ ಕರ್ನಾಟಕವೂ ಮಹಾ ಮಹಾ ಕವಿಪುಂಗವರಿಗೆ ಜನ್ಮಕೊಟ್ಟಿದೆ. ಈ ಕರ್ನಾಟಕದಲ್ಲಿಯೇ ಜಗತ್ತನ್ನು ಆಶ್ಚರ್ಯಗೊಳಿಸುವಂಥ ಅನ್ಯಾದೃಶವಾದ ಕಟ್ಟಡಗಳು ಹುಟ್ಟಿವೆ. ಈ ಕರ್ನಾಟಕದಲ್ಲಿಯೇ ಇತರ ವಾಙ್ಮಯಗಳನ್ನು ಮೀರಿಸುವ ಗ್ರಂಥಗಳು ನಿರ್ಮಾಣವಾಗಿವೆ. ಈ ನಮ್ಮ ಕರ್ನಾಟಕದ ಸುಧಾರಣೆಯು ವಿಶಿಷ್ಟ ಬಗೆಯದಾಗಿರುವದರಿಂದಲೇ ಗಾಯನಶಾಸ್ತ್ರದಲ್ಲಿ 'ಕರ್ನಾಟಕ' ವೆಂಬುದೊಂದು ಹೊಸ ಪದ್ಧತಿಯೇ ರೂಢವಾಗಿದೆ. ಸಾರಾಂಶ, ನಮ್ಮ ಅರಸರು ದೊಡ್ಡವರಿದ್ದರು; ನಮ್ಮ ರಾಜ್ಯವು ವಿಸ್ತಾರವಾಗಿ ಹಬ್ಬಿತ್ತು; ನನ್ನ ವೈಭವವು ಅತಿಶಯವಾದ ಘನತೆಗೇರಿತ್ತು; ಆ ಕಾಲಕ್ಕೆ ಹಿಂದುಸ್ಥಾನದಲ್ಲಿ ಕರ್ನಾಟಕವನ್ನು ಹಿಂದೆ ಹಾಕುವ ರಾಷ್ಟ್ರವು ಯಾವುದೂ ಇರಲಿಲ್ಲ. ಕರ್ನಾಟಕದೊಳಗಿರುವಷ್ಟು ದೊಡ್ಡ ಪಟ್ಟಣಗಳು ಹಿಂದೂದೇಶದಲ್ಲಿರಲಿಲ್ಲ. ಕರ್ನಾಟಕದಲ್ಲಿರುವಷ್ಟು ವಿದ್ವಾಂಸರು ಬೇರೆ ಕಡೆಯಲ್ಲಿರಲಿಲ್ಲ. ಕರ್ನಾಟಕದಷ್ಟು ಸಂಪನ್ನವಾದ ವಾಙ್ಮಯವೂ ಮಿಕ್ಕ ಕಡೆ ಯಲ್ಲಿರಲಿಲ್ಲ. ಕರ್ನಾಟಕದಲ್ಲಿರುವಂಥ ಕಟ್ಟಡಗಳು ಹಿಂದೂದೇಶದ ಕಣ್ಣು ಮುಂದಿರಲಿಲ್ಲ; ಹೀಗಿದ್ದು, ನಾವು ಅದಕ್ಕೆ ಮೃತವೆಂದು ಕರೆಯುವದೆಂತು!
ನ್ನಡಿಗರೇ, ನಿಮ್ಮ ಸುತ್ತಮುತ್ತಲೂ ದೃಷ್ಟಿಯನ್ನು ಚಲ್ಲಿದರೆ ಅಲ್ಲಲ್ಲಿ ನಿಮ್ಮ ಪ್ರಾಚೀನ ಕರ್ನಾಟಕದ ಸಂಪನ್ನತೆಯ ದೇದೀಪ್ಯಮಾನವಾದ ಹೆಗ್ಗುರುತುಗಳು ಕಣ್ಣಿಗೆ ಕಟ್ಟದಿರಲಾರವು; ಆ ನಾಡಿನಲ್ಲಿ ಹುಟ್ಟಿ ಬೆಳೆದು ದಿಗಂತ ಕೀರ್ತಿಯನ್ನು ಪಡೆದ ರಾಜಕಾರ್ಯಧುರಂಧರರ, ಮೇಧಾವಿಗಳ ಮತ್ತು ರಾಜಗುರುಗಳ ಜೀವನ ಚರಿತ್ರೆಯನ್ನೋದಿದರೆ, ನಿಮ್ಮ ಜೀವನದ ಒಗಟೆಯು ಸಹಜವಾಗಿ ಒಡೆ ಯದೆ ನಿಲ್ಲದು; ಆ ನಾಡಿನ ಪ್ರಾಚೀನ ಸಂಪತ್ತಿಗೂ, ಕಲಾ ಕೌಶಲ್ಯಕ್ಕೂ ಸಾಕ್ಷಿಯಾಗಿ ನಿಂತಿರುವ ಗುಡಿ ಗೋಪುರಗಳನ್ನು ನೋಡಿದರೆ, ಇಂಥ ಅಮಾನುಷ ಕಾರ್ಯಗಳನ್ನು ಸುಲಭವಾಗಿ ನೆರವೇರಿಸಿದ ರಾಷ್ಟ್ರದ ಅಗ್ಗಳಿಕೆಯು ಸಹಜವಾಗಿ ಗೊತ್ತಾ

೧೨
ಕರ್ನಾಟಕ ಗತವೈಭವ

ಗುವದು, ಇಂಥ ರಾಷ್ಟ್ರವು ಮೃತವಾಗಿರುವದೆಂದು ಕಲ್ಪನೆ ಮಾಡುವದಾದರೂ ಹೇಗೆ ! ಕನ್ನಡಿಗರೇ ! ಕರ್ನಾಟಕವು ಮೃತರಾಷ್ಟ್ರವಲ್ಲ. ಅದು ಸ್ವಭಾವತಃ ಚೈತನ್ಯ ಪೂರ್ಣವಾದ ರಾಷ್ಟ್ರವು, ಕಾಲಾನುಸಾರವಾಗಿ ಅದು ಮೇಲು ಕೀಳು ಸ್ಥಿತಿಗೆ ಈಡಾಗಿರಬಹುದು, ಆದರೆ ಅದರಲ್ಲಿರುವ ಚೈತನ್ಯ ಶಕ್ತಿಯು ಮಾತ್ರ ಯಾವ ಕೃತ್ರಿಮೋಪಾಯಗಳಿಂದಲೂ ಕುಂದಲಾರದು. ಈಗ ಅದು ತನ್ನ ಆಲಸ್ಯದ ಮೂಲಕ, ತನ್ನ ಜನರ ಹೇಡಿತನದ ಮೂಲಕ, ತನ್ನ ಕಡುತರವಾದ ದೈವ ದುರ್ವಿಲಾಸದ ಮೂಲಕ, ಸಾಲದುದಕ್ಕೆ ಸುತ್ತಲಿನ ಬಿಕ್ಕಟ್ಟಾದ ಪರಿಸ್ಥಿತಿಯ ಮೂಲಕ, ವಿಲಕ್ಷಣವಾದ ನಿದ್ರೆಗೀಡಾಗಿರುವದೇನೋ ಸರಿ ! ಆದರೆ ಇಂಥ ಸಂದು ಕಟ್ಟಿನಲ್ಲಿ, ತಾನು ಸತ್ತಿರದೆ ಜೀವಂತವಾಗಿರುವದೆಂಬ ತಿಳಿವನ್ನು ಮಾತ್ರ ನಾವು ಆ ರಾಷ್ಟ್ರದ ಮನಸ್ಸಿನಲ್ಲಿ ಚೆನ್ನಾಗಿ ತುಂಬಿಸಿದರೆ ಸಾಕು. ಅದೇ, ಅದನ್ನು ಅಡಬಡಿಸಿ ಎಚ್ಚರಗೊಳ್ಳುವಂತೆ ಮಾಡುವದು; ಅಲ್ಲದೆ ತನ್ನ ಸಾಂಪ್ರತದ ಹೀನಸ್ಥಿತಿಯ ಬಗ್ಗೆ ಪರಾಕಾಷ್ಟೆಯ ಉದ್ಯೋಗವನ್ನೂ ಉಂಟುಮಾಡುವದು. ಸಾರಾಂಶ:- ರಾಷ್ಟ್ರಕ್ಕೂ ಮನುಷ್ಯನಂತೆ ಆತ್ಮವಿರುವ ಕಾರಣ ವೇದಾಂತ ಶಾಸ್ತ್ರವನ್ನೋದಿ ಆತ್ಮನ ಅಮೃತತ್ವವನ್ನೂ ಆವ್ಯಯತ್ವವನ್ನೂ ಅವಿಕಾರಿತ್ವವನ್ನೂ ತಿಳಿದುಕೊಂಡಿರುವ ಮನುಷ್ಯನು ಹೇಗೆ ದುಃಖಿಸದ, ಎದೆಗುಂದದೆ, ಧೀರನಾಗಿಯೂ, ವೀರನಾಗಿಯ ಇರುವನೋ, ಹಾಗೆಯೇ ತನ್ನ ಜೀವದ್ದಶೆಯನ್ನರಿತು ಕೊಂಡ ರಾಷ್ಟ್ರವು ಎಂಥ ಕಷ್ಟ ಪರಂಪರೆಗಳಿಗೂ ಅಂಜದೆ ಅಳುಕದೆ ಇರುವದು. ಆದರೆ ಈಗ ನಮ್ಮ ಸ್ಥಿತಿಯು ಹಾಗೆಲ್ಲಿದೆ ! ಕನ್ನಡಿಗರಾದ ನಾವು ಈ ನಿತ್ಯ ತತ್ವವನ್ನು ಎಂದರೆ 'ಕರ್ನಾಟಕತ್ವ' ವನ್ನು ಮರೆತು, ಈಗಿರುವ ನಮ್ಮ ಕ್ಷಣಿಕವಾದ ಅವಸ್ಥೆಯೇ ಕಡೆಯವರೆಗೂ ಇರುವುದೆಂದು ಭಾವುಕ ಭಾವನೆಯಿಂದ ಕೈಕಾಲು ಕಳೆದುಕೊಂಡು ಕುಳಿತಿರುವೆವಲ್ಲಾ ! ಅದೇ, ನಾವು ನಮ್ಮ ಗತವೈಭವದ ಇತಿಹಾಸವನ್ನು, ನಮ್ಮ ಪ್ರಾಚೀನ ಸಂಸ್ಕೃತಿಯ ಹೃದಯಂಗಮವಾದ ಮೇಲ್ಮೆಯನ್ನು ಮನಸ್ಸಿನಲ್ಲಿ ನೆಡುವಂತೆ ಅರಿತವರಾಗಿದ್ದರೆ, ನಮ್ಮ ಕರ್ನಾಟಕವು ಭಾರತೀಯ ಇತಿಹಾಸದ ನಾಟ್ಯರಂಗದೊಳಗೆ ಕೈಕೊಂಡ ಪಾತ್ರದ ಬಲ್ಮೆಯು ನಮ್ಮ ಮಸಕಾದ ಮನಸಿನಲ್ಲಿ ಮೂಡಿದ್ದರೆ, ಈಗಿನಂತೆ ನಾವು ಜೋಲುಬಿದ್ದ ಮತ್ತು ಬಾಡಿದ ಮೋರೆಯವರಾಗಿ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ ! ಒಳ್ಳೇದು! ಆದದ್ದಾ

೧೩
೨ನೆಯ ಪ್ರಕರಣ – ಕರ್ನಾಟಕವು ಮೈ ತರಾಷ್ಟವೇ?

ಯಿತು! ಈಗಲಾದರೂ ಕಣ್ದೆರೆದು, ನಾವು ನಮ್ಮ 'ಕರ್ನಾಟಕ' ವನ್ನು ಅರಿತು, ನಮ್ಮ ಮುಂದಣ ಮಾರ್ಗವನ್ನು ತಿದ್ದಿಕೊಂಡರೆ, ಜಗತ್ತಿನ ನಗೆಗೀಡಾಗದೆ, ನಮ್ಮ ಮಾನವನ್ನು ನಾವು ಕಾಯ್ದು ಕೊಂಡಂತಾಗುವದು, ಇದೀಗ ನಮ್ಮೆಲ್ಲರ ಶ್ರೇಷ್ಠವಾದ ಕರ್ತವ್ಯವು.

ಹಾಗಾದರೆ ಆ 'ಕರ್ನಾಟಕತ್ವ' ವನ್ನು ಅರಿತುಕೊಳ್ಳುವದೆಂತು! ಅದೇನು ಕಣ್ಣಿಗೆ ಕಾಣಿಸುವದೋ ! ಕಿವಿಗೆ ಕೇಳಿಸುವದೋ ! ಕೈಗೆ ಸ್ಪರ್ಶಿಸುವದೊ ! ಮೂಗಿಗೆ ಮೂಸುವದೋ ! ಇಲ್ಲ. ಇಲ್ಲ. ಹಾಗಿದ್ದರೆ ಈ ಕಾರ್ಯವು ಎಷ್ಟೊಂದು ಸುಲಭ ಸಾಧ್ಯವಿರಬಹುದಾಗಿತ್ತು ! ಆಮೇಲೆ ಈ ತರದ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ: ಹಾಗಿಲ್ಲವೆಂದೇ ಪ್ರತಿಯೊಬ್ಬನು ಅದನ್ನು ಜ್ಞಾನ ದೃಷ್ಟಿಯಿಂದಲೇ ಕಂಡುಹಿಡಿದು, ಅದರ ಅಸ್ತಿತ್ವವನ್ನು ಹೃನ್ಮಂದಿರದಲ್ಲಿ ಚಿಂತಿಸ ಬೇಕಾಗಿದೆ! ಆದರೆ ಅಹಾ! ಆ ತರದ ದೃಷ್ಟಿಯಿಲ್ಲದಿರುವದರಿಂದಲೇ ನಾವು ಕಣ್ಣಿದ್ದು ಕುರುಡರೂ, ಕಿವಿಯಿದ್ದು ಕಿವುಡರೂ, ಆಗಿದ್ದೇವೆ! ನನ್ನ ಸುತ್ತಲೂ ಎಲ್ಲೆಲ್ಲಿಯೂ ಇತಿಹಾಸದ ರಾಶಿಯೇ ಒಟ್ಟಿದ್ದೂ, ನಮಗೆ ಇತಿಹಾಸವೇ ಇಲ್ಲವೆಂದು ನಾವು ಸುಮ್ಮನೆ ಅರಚಿಕೊಳ್ಳುತ್ತಿದ್ದೇವೆ! ಇದೋ, ಇಲ್ಲಿ ನಮ್ಮಿದಿರಿಗೆ ಮೈಗೊಂಡು ನಿಂತಿರುವ ಈ ಕೋಟೆ ಕೊತ್ತಳಗಳು ನಮ್ಮ ಗತವೈಭವದ ಹೆಗ್ಗುರುತುಗಳಲ್ಲವೇ! ಅದೋ, ಅಲ್ಲಿ ಕಾಣುತ್ತಿರುವ ಸುಂದರವಾದ ಭವ್ಯ ದೇವಾಲಯಗಳು ನಮ್ಮ ಇತಿಹಾಸದ ಪವಿತ್ರ ರಕ್ಷಾ ಭಾಂಡಾರಗಳಲ್ಲವೇ ! ಜಗತ್ತಿನಲ್ಲೆಲ್ಲ ಹೆಸರು ಪಡೆದಿರುವ ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂಬೀ ಮತಗಳು ಕರ್ನಾಟಕಸ್ಥರ ಹೆಸರನ್ನು ಎಂದಾದರೂ ಮರೆಯಿಸುವವೇ ! ಕೋಣದ ಮುಂದೆ ಕಿನ್ನರಿಯನ್ನು ಬಾರಿಸಿದಂತೆ, ಇವೆಲ್ಲವು ನಮ್ಮ ಮನಸ್ಸಿನಲ್ಲಿ ಕಿಂಚಿತ್ತಾದರೂ ಸ್ಫೂರ್ತಿಯನ್ನುಂಟುಮಾಡುವದಿಲ್ಲವಲ್ಲ! ಕರ್ನಾಟಕವು ನಮ್ಮ ಹುಟ್ಟು ನಾಡು! ಅದನ್ನಾಳಿದ ಅರಸರು ನಮ್ಮವರು! ಸಂಕಟಕಾಲದಲ್ಲಿ ಅದರ ಜೋಕೆಗಾಗಿ ಕಾದಿ, ನೀರಿನಂತೆ ತನ್ನ ಮೈ ನೆತ್ತರವನ್ನು ಬಸಿದಂಥ ಕಾದಾಳುಗಳು ನಮ್ಮ ವೀರಬಂಧುಗಳು! ಅನೇಕ ಶತಮಾನಗಳು ಸಂದು ಹೋದರೂ ದಿಕ್ಕುದಿಕ್ಕುಗಳಲ್ಲಿ ತಮ್ಮ ಕೈಗಾರಿಕೆಯ ಸೊಕ್ಕಿನಿಂದ ಮೊಗವೆತ್ತಿಕೊಂಡು ನಿಂತಿರುವ ಗುಡಿಗೋಪುರಗಳು ನಮ್ಮ ಪುರಾತನ ಶಿಲ್ಪಶಾಸ್ತ್ರದ ಮಾದರಿಗಳು! ಎಂಬ ಅಭಿಮಾನವು ನಮ್ಮ ಮನೋಭೂಮಿಕೆಯಲ್ಲಿ
೧೪
ಕರ್ನಾಟಕ ಗತವೈಭವ

ಎಲ್ಲಿಯವರೆಗೆ ಅಂಕುರಿಸುವದಿಲ್ಲವೋ, ಅಲ್ಲಿಯ ವರೆಗೆ ಅವೆಲ್ಲವು ನಮ್ಮನ್ನು ಕಣ್ಣೆತ್ತಿ ನೋಡಲಾರವು! ನಮ್ಮನ್ನು ಸಮೀಪಿಸಲಾರವು! ನಮಗೆ ಬೋಧಿಸಲಾರವು! ನಮ್ಮನ್ನು ಪ್ರೇರಿಸಲಾರವು ! ಎಂದಮೇಲೆ, ಸವಿ ಸವಿಯೂಟಗಳನ್ನುಂಡು ವೀಳ್ಯವನ್ನು ಮೆಲ್ಲುತ್ತಲೂ, ಚಕ್ಕಂದವಾಡುತ್ತಲೂ, ಕೇವಲ ತಾಮಸವೃತ್ತಿಯಿಂದ ಕಾಲ ಕಳೆಯುತ್ತಿರುವ ನಮ್ಮಂಥ ವಿಚಾರ ಶೂನ್ಯರಾದ ಕನ್ನಡಿಗರಲ್ಲಿ ಅವುಗಳ ನೋಟದಿಂದ ಉಚ್ಚ ಭಾವನೆಯುಂಟಾಗುವ ಮಾತಂತೂ ದೂರವೇ ಸರಿ! ಕನ್ನಡಿಯಲ್ಲಿ ನಮ್ಮ ಮುಖವು ಕಾಣಿಸಬೇಕಾದರೆ ಅದು ಸ್ವಚ್ಛವಾಗಿರಬೇಕು. ಹಾಗೆಯೇ ಇಂಥ ಉದಾತ್ತ ಕಲ್ಪನೆಗಳು ನಮ್ಮಲ್ಲಿ ಮೂಡಬೇಕಾದರೆ, ನಮ್ಮ ಮನಸ್ಸು ಶುದ್ಧವೂ, ಸಾತ್ವಿಕಾಹಂಕಾರದಿಂದೊಡಗೂಡಿದ್ದೂ ಇರಬೇಕು, ಯಾವ ಮನುಷ್ಯನಲ್ಲಿ ಸಾತ್ವಿಕಾಹಂಕಾರದ ಕಿರಣಗಳು ಕಾಣಬರುವದಿಲ್ಲವೋ ಅವನ ಬಾಳು ಬಾಳಲ್ಲ. ಅದು ಭೂಭಾರವು. 'ನಾನು ಕನ್ನಡಿಗನು', 'ಕರ್ನಾಟಕವು ನನ್ನ ನಾಡು' ಎಂಬ ಸಕೃದ್ವಿಚಾರತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಧಿಂಕಿಡುವದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವದಿಲ್ಲವೋ, ತಳಮಳಿಸುವದಿಲ್ಲವೋ, ರೋಮ ರಂಧ್ರಗಳಲ್ಲಿ ಕೂಡ 'ಕರ್ನಾಟಕ' 'ಕರ್ನಾಟಕ' ಎಂದು ಸೊಲ್ಲು ಹೊರಡುವದಿಲ್ಲವೋ, ಅದು ಹೃದಯವಲ್ಲ; ಕಲ್ಲಿನ ಬಂಡೆ! ದೇಹವಲ್ಲ; ಮೋಟು ಮರ! 'ಇಂಥ ಚೇತನವಿಲ್ಲದಿರುವ ಜನರಿಗೆ ಕಣ್ಣೀರಿಡುತ್ತಿರುವ ಆ ಕನ್ನಡ ತಾಯಿಯ ಗೋಳಿನಿಂದೇನು ! ಕಳಚಿ ಬೀಳುತ್ತಿರುವ ಆ ಗುಡಿ ಗೋಪುರಗಳಿಂದೇನು ! ಬಾಯಿಯಿಲ್ಲದ ಉಚ್ಚ ಧ್ವನಿಯಿಂದ ಕೂಗುತ್ತಿರುವ ಆ ವಾಙ್ಮಯದಿಂದೇನು! ಕಾಡು ಬೀಡುಗಳಲ್ಲಿ ಕೇಳುವವರಿಲ್ಲದೆ ಸುಮ್ಮನೆ ಗಂಟಲು ಹರಿದುಕೊಂಡು ಕೂಗಿ ಹೊಗಳು ಭಟ್ಟರಂತೆ ತಮ್ಮ ವೀರರನ್ನೂ, ವೀರಸತಿಯರನ್ನೂ ಹೊಗಳುತ್ತಿರುವ ಆ ವೀರಗಲ್ಲು, ಮಹಾಸತಿಕಲ್ಲುಗಳಿಂದೇನು! ಆದುದರಿಂದ ಎಲೈ ಕನ್ನಡಿಗರೇ ! ನೀವು 'ಕರ್ನಾಟಕಾಭಿಮಾನ ದೇವತೆ'ಯನ್ನು ಪ್ರಸನ್ನೀಕರಿಸಿಕೊಂಡು, ಅವಳ ಅಮರತ್ವವನ್ನು ಜ್ಞಾನದೃಷ್ಟಿಯಿಂದ ಕಂಡು ಹಿಡಿದು, ಅವಳ ಇತಿಹಾಸವನ್ನು ಆದ್ಯಂತವಾಗಿ ಪರಿಶೀಲಿಸಿ, ಕನ್ನಡಿಗರೆಂಬ ನಿಮ್ಮ ಹೆಸರನ್ನು ಸಾರ್ಥಕಪಡಿಸಿಕೊಳ್ಳಿರಿ!

Rule Segment - Span - 40px.svgRule Segment - Fancy1 - 40px.svgRule Segment - Span - 40px.svg