ಕರ್ನಾಟಕ ಗತವೈಭವ/೩ನೆಯ ಪ್ರಕರಣ

ವಿಕಿಸೋರ್ಸ್ ಇಂದ
Jump to navigation Jump to search
೧೫
೩ನೆಯ ಪ್ರಕರಣ - ಕರ್ನಾಟಕ-ವಿಸ್ತಾರ

೩ನೆಯ ಪ್ರಕರಣ


ಕರ್ನಾಟಕ-ವಿಸ್ತಾರ

ಕಾವೇರಿಯಿಂದ ಮಾಗೊ | ದಾವರಿವರಮಿರ್ದ ನಾಡದಾ ಕನ್ನಡದೊಳ್ ||
ಭಾವಿಸಿದ ಜನಪದಂ ವಸು | ಧಾವಳಯವಿಲೀನ ವಿಶದವಿಷಯ ವಿಶೇಷಂ ||

– ನೃಪತುಂಗ

ವಾ

ಚಕರೇ! ಹಿಂದಿನ ಪ್ರಕರಣದಲ್ಲಿ ನಾವು ನಿಮಗೆ ಕರ್ನಾಟಕದ ಇತಿಹಾಸ ವನ್ನು ಅಭ್ಯಾಸಿಸಲಿಕ್ಕೆ ಹೇಳಿರುವೆವಷ್ಟೇ! ಆದರೆ ಕರ್ನಾಟಕವೆಂದರೇನು! ಅದರ ವ್ಯಾಪ್ತಿಯೆಷ್ಟು ! ಇದೇ ಮೊದಲು ಮನಸಿನಲ್ಲಿರದಿದ್ದರೆ, ಅದರ ಇತಿಹಾಸವನ್ನು ಅಭ್ಯಾಸಿಸುವ ಬಗೆ ಹೇಗೆ? ಕರ್ನಾಟಕವೆಂದರೆ, ಮುಂಬಯಿ ಇಲಾಖೆಯಲ್ಲಿ ರುವ ಧಾರವಾಡ, ಬೆಳಗಾಂವ, ವಿಜಾಪೂರ, ಕಾರವಾರ, ಈ ನಾಲ್ಕು ಜಿಲ್ಲೆಗಳು; ಮದ್ರಾಸ ಇಲಾಖೆಗೆ ಸೇರಿರುವ ಬಳ್ಳಾರಿ, ಅನಂತಪೂರ, ಮಂಗಳೂರ ಈ ಜಿಲ್ಲೆಗಳು; ಹೈದರಾಬಾದ ಸಂಸ್ಥಾನಕ್ಕೆ ಹೊಂದಿದ ರಾಯಚೂರು, ಕಲಬುರ್ಗಿ ಮೊದಲಾದವುಗಳು; ಇಡೀ ಮೈಸೂರ ಸಂಸ್ಥಾನವು; ಸಾಂಗಲಿ, ಮಿರಜ, ಜಮಖಂಡಿ, ಕೊಲ್ಲಾಪೂರ, ಕುರುಂದವಾಡ, ಮುಧೋಳ, ರಾಮದುರ್ಗ ಮುಂತಾದ ಸಂಸ್ಥಾನದೊಳಗಿನ ಕೆಲವು ಭಾಗಗಳು; ಕೊಡಗು ಪ್ರಾಂತ-ಇವಿಷ್ಟೇ ಎಂದು ನಮ್ಮ ಈಗಿನ ಕಲ್ಪನೆ, ಈ ತಪ್ಪು ತಿಳುವಳಿಕೆಯನ್ನು ನೀವು ನಿಮ್ಮ ತಲೆಯೊಳಗಿಂದ ಮೊದಲು ಕಿತ್ತಿ ಹಾಕಿರಿ! ಹಿಂದಿನ ಕರ್ನಾಟಕವು ಕರಗುತ್ತ ಕರಗುತ್ತ ಹೋಗಿ, ಈಗ ಅದರ ಕಾಲು ಪಾಲು ಮಾತ್ರ ಉಳಿದುಕೊಂಡಿದೆ. ಅದರ ಕೆಲವು ಭಾಗವು ಮಹಾರಾಷ್ಟಕ್ಕೂ, ಕೆಲವು ಭಾಗವು ತೆಲುಗು ಸೀಮೆಗೂ, ಕೆಲವು ಭಾಗವು ಅರವು ಮುಂತಾದ ಭಾಷೆಗಳನ್ನಾಡುವ ಸೀಮೆಗೂ ಸೇರಿಹೋಗಿದೆ; ಆದುದರಿಂದ ನಾವು ಈ ಪ್ರಕರಣದಲ್ಲಿ ಹಿಂದಕ್ಕೆ ಕನ್ನಡ ಭಾಷೆಯ ವಿಸ್ತಾರವು ಎಲ್ಲಿಯವರೆಗಿತ್ತೆಂಬುದನ್ನು ಹೇಳುವವರಿದ್ದೇವೆ.
ಹಿಂದಕ್ಕೆ 'ಕರ್ನಾಟಕ' ಮತ್ತು ಕನ್ನಡ ಭಾಷೆಯ ಪ್ರದೇಶ, ಇವೆರಡೂ ಸಮಾನಾರ್ಥಕ ಶಬ್ದಗಳಾಗಿರಲಿಲ್ಲ. ಕನ್ನಡ ಭಾಷೆಯನ್ನಾಡುವ ಪ್ರದೇಶಗಳಲ್ಲಿ 

೧೬
ಕರ್ನಾಟಕ ಗತವೈಭವ


'ಕರ್ನಾಟಕ' ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಇವೇ ಮುಂತಾದ ಭಾಗಗಳಿದ್ದವು, ಆದರೆ ಮುಂದೆ ಬರಬರುತ್ತ 'ಕರ್ನಾಟಕ' ವೆಂಬ ಭಾಗವೇ ಹೆಚ್ಚು ಪ್ರಬಲವಾದುದರಿಂದ, ಅದೇ ಹೆಸರು ಕನ್ನಡ ದೇಶಕ್ಕೆಲ್ಲ ರೂಢವಾಯಿತು; ಮತ್ತು ಇತಿಹಾಸ ದೃಷ್ಟಿಯಿಂದ ನೋಡಿದರೆ, ಕನ್ನಡ ದೇಶಕ್ಕೆ 'ಕರ್ನಾಟಕ' ವೆಂಬ ಹೆಸರೇ ಒಪ್ಪುತ್ತದೆಂದು ಕಂಡು ಬರುವದು. ಯಾಕೆಂದರೆ, ಕನ್ನಡ ಭಾಷೆಗೆ 'ಕರ್ನಾಟಕ' ಎಂಬ ಹೆಸರು ಬಹು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಮಹಾಭಾರತದಲ್ಲಿಯೂ ಕೂಡ 'ಕರ್ನಾಟಕ' ದ ಉಲ್ಲೇಖವು ಬಂದಿದೆ. ಕನ್ನಡಿಗರು ತಮ್ಮ ವೈಭವದ ಕಾಲದಲ್ಲಿ ತಮಗೆ 'ಕರ್ನಾಟಕ' ರೆಂತಲೇ ಹೇಳಿಕೊಳ್ಳುತ್ತಿದ್ದರು, ಚಾಲುಕ್ಯರ ದಂಡಿಗೆ 'ಕರ್ನಾಟಕ ಬಲ' ವೆಂಬ ಹೆಸರಿರುವುದಾಗಿ ಶಿಲಾಲಿಪಿಗಳಿಂದ ತಿಳಿದುಬರುತ್ತದೆ, ವಿಜಯನಗರದ ಸಾಮಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ 'ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ' ಎಂಬ ಬಿರುದಿತ್ತು, ಇವೆಲ್ಲ ಸಂಗತಿಗಳನ್ನು ಮನಸ್ಸಿನಲ್ಲಿ ತಂದುಕೊಂಡರೆ, ಭಾಷಾದೃಷ್ಟಿಯಿಂದಲೂ, ರಾಜ್ಯ ವಿಸ್ತಾರದ ದೃಷ್ಟಿಯಿಂದಲೂ ಸಾರ್ಥಕವಾದ ಈ 'ಕರ್ನಾಟಕ' ಎಂಬ ಹೆಸರನ್ನೇ ಕನ್ನಡಿಗರೆಲ್ಲರೂ ಅಭಿಮಾನಪೂರ್ವಕವಾಗಿ ಎತ್ತಿಕೊಂಡಿರುವದೇನೂ ಆಶ್ಚರ್ಯವಲ್ಲ.

ರಲಿ; ಇನ್ನು ಕನ್ನಡ ಭಾಷೆಯು ಹಿಂದೆ ಎಲ್ಲಿಯ ವರೆಗೆ ಹಬ್ಬಿತ್ತೆಂಬು ದನ್ನು ವಿಚಾರಮಾಡುವ, ೯ನೆಯ ಶತಮಾನದಲ್ಲಿ ಅದು ಉತ್ತರದಲ್ಲಿ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿಯವರೆಗೆ ಹಬ್ಬಿತ್ತೆಂಬುದಕ್ಕೆ ನೃಪತುಂಗನ ಕವಿ ರಾಜಮಾರ್ಗದಲ್ಲಂತೂ ಬಲವಾದ ಪ್ರಮಾಣವಿದೆ. (ಶಿರೋಲೇಖದ ಪದ್ಯವನ್ನು ನೋಡಿರಿ.) ಇದೇ ವಿಧಾನವನ್ನು ೧೬ನೆಯ ಶತಮಾನದಲ್ಲಿಯ ನಂಜುಂಡನೆಂಬ ಕವಿಯು ತನ್ನ ಪರದಾರ ಸೋದರ ರಾಮನಾಥ ಚರಿತವೆಂಬ ಗ್ರಂಥದ ಎರಡನೆಯ ಸಂಧಿಯಲ್ಲಿ 'ಕಾವೇರಿಯಿಂದ ಗೋದಾವರಿದಾವರೆಗಮಿರ್ದಾ ವಸುಧಾ ತಳವಳಯ | ಭಾವಿಸೆ ಕರ್ನಾಟಕ ಜನಪದವದನವನೊಲಿದು ಬಣ್ಣಿಸುವನು ||' ಎಂಬುದಾಗಿ ಬಲಪಡಿಸಿರುವನು. ಸಾರಾಂಶ:-ಕರ್ನಾಟಕದ ವ್ಯಾಪ್ತಿಯು, ಆಗಿನ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಇತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಪದ್ಯಗಳನ್ನು ಅನೇಕರು ಓದಿದ್ದರೂ, ಕನ್ನಡನಾಡಿನ
೧೯
೩ನೆಯ ಪ್ರಕರಣ - ಕರ್ನಾಟಕ-ವಿಸ್ತಾರ

ಚತುಸ್ಸೀಮೆಯನ್ನು ಇದುವರೆಗೂ ಯಾರೂ ಗೊತ್ತು ಮಾಡಿರುವುದಿಲ್ಲ. ವಿಜಯನಗರದ ಸಾಮ್ರಾಜ್ಯದ ಕಾಲಕ್ಕೆ ಕರ್ನಾಟಕದ ಸೀಮೆಯು ದಕ್ಷಿಣಕ್ಕೆ ಮುಳಬಾಯಿಯ (ಮುಳಬಾಗಲ)ವರೆಗೆ ಹರಡಿತ್ತೆಂಬುದು ಬುಕ್ಕರಾಯನ ಸೊಸೆಯಾದ ಗಂಗಾ ದೇವಿಯು ರಚಿಸಿದ ಕಾವ್ಯದೊಳಗಿನ ಕೆಳಗಿನ ಈ ಶ್ಲೋಕದಿಂದ ಗೊತ್ತಾಗುವುದು.

अथ लङ्घितकर्णाटः पञ्चपैरेव वासरैः ।
प्रापत्कम्पमहीपालः कण्टकाननपट्टणम् ॥

– ವೀರಕ೦ಪಣ ರಾಯ ಚರಿತ್ರ ೪, ೪೭

ಭಾವಾರ್ಥ- ಐದು ದಿವಸ ದಾರಿಯನ್ನು ನಡೆದ ಬಳಿಕ ಕಂಪಮಹಿಪಾಲನು ಕರ್ನಾಟಕವನ್ನು ದಾಟಿ ಕಂಟಕಾನನ (ಮುಳಬಾಗಿಲ) ಪಟ್ಟಣವನ್ನು ತಲ್ಪಿದನು.

ದುದರಿಂದ ಹಿಂದಕ್ಕೂ ಕೂಡ ಕನ್ನಡನಾಡಿನ ಗಡಿಯು ಕಾವೇರಿಯ ನದಿಯ ವರೆಗೆ ಹಬ್ಬಿರಬಹುದೆಂಬುದಕ್ಕೆ ಸಂದೇಹವಿಲ್ಲ. ಈಗ ಕೂಡ ಅಲ್ಲಿಯವರೆಗೆ ಕನ್ನಡ ನುಡಿಯು ಪ್ರಚಾರದಲ್ಲಿರುವುದರಿಂದ ಕನ್ನಡನಾಡಿನ ದಕ್ಷಿಣಗಡಿಯ ನಿಷ್ಕರ್ಷೆ ಯಾದಂತಾಯಿತು. ಇನ್ನು, ಪೂರ್ವಕ್ಕೆ ಕಾವೇರೀ ನದಿಯ ನಡುವಿನಿಂದ ಉತ್ತರಕ್ಕೆ ಸುಮಾರು ಗೋದಾವರಿ ನದಿಯ ಮುಖದವರೆಗೆ ಗೆರೆಯನ್ನಳೆದರೆ ಅದು ಕನ್ನಡನಾಡಿನ ಪೂರ್ವ ಸೀಮೆಯಾಗಬಹುದು. ಇದಲ್ಲದೆ, 'ಮಾಮೂಲನಾರ್' ಎಂಬ ತಮಿಳು ಕವಿಯು ಬರೆದ 'ಕುರುಂಟೋಕಾಯಿ' ಎಂಬುದೊಂದು ತಮಿಳ ಪುಸ್ತಕದಲ್ಲಿ ತಮಿಳು ಭಾಷೆಯ ಸೀಮೆಯನ್ನು ವರ್ಣಿಸಿರುವುದರ ಮೇಲಿಂದ ಕನ್ನಡ ಭಾಷೆಯ ಆಗ್ನೆಯ ಗಡಿಯು ಪುಲಿಕೋಟ್ (ಪಳವೇರ್ಕಾಡು) ಎಂಬ ಪಟ್ಟಣದವರೆಗೆ ಇತ್ತೆಂದು ಊಹಿಸಲಿಕ್ಕೆ ಆಸ್ಪದವಾಗಿದೆ. ಪಶ್ಚಿಮದಲ್ಲಿ ಗೋವೆಯ ಕೆಳಗೆ ಸಮುದ್ರವೇ ಕೊನೆಯ ಸೀಮೆಯಾಗಿತ್ತೆಂಬುದು ದಕ್ಷಿಣ ಕೊಂಕಣದಲ್ಲಿ ದೊರೆಯುವ ಶಿಲಾಲಿಪಿಗಳಿಂದ ಗೊತ್ತಾಗುತ್ತದೆ, ಇನ್ನು ವಾಯವ್ಯ ಮತ್ತು ಉತ್ತರದ ಗಡಿಗಳನ್ನು ನಿಶ್ಚಯಿಸುವುದು ಮಾತ್ರ ಬಲು ಕಠಿಣವಾದ ಕೆಲಸವಾಗಿದೆ. ಏಕೆಂದರೆ, ಅತ್ತ ಕಡೆಯಿಂದ ಮರಾಠರ ದಾಳಿಯು ನಮ್ಮ ನಾಡಿನ ಮೇಲೆ ಬಲವಾಗಿ ಬಿದ್ದು, ಅದನ್ನು ಬಲು ಕೆಳಕ್ಕೆ ಒತ್ತಿದೆ. ಹೀಗೆ, ನಿಜವಾದ ಕರ್ನಾಟಕ ಎಲ್ಲವೂ ಮಹಾರಾಷ್ಟ್ರಮಯವಾಗಿರುವುದರಿಂದ, ಉತ್ತರಕ್ಕೆ ಗೋದಾವರಿಯವರೆಗೆ ನಮ್ಮ ಕನ್ನಡನಾಡು ಹಬ್ಬಕ್ಕೆಂದು ಹೇಳಿದರೆ, ನಮ್ಮ ಕನ್ನಡಿಗರು ಅದು ಸುಳ್ಳೆಂದೇ 
೧೮
ಕರ್ನಾಟಕ ಗತವೈಭವ

ಭಾವಿಸುವರು, ಈಗಿನ ಮಹಾರಾಷ್ಟ್ರದ ಪೂರ್ವಕ್ಕೆ ತೆಲುಗು ದೇಶದಲ್ಲಿ ಗೋದಾವರಿಯ ತೀರದವರೆಗೆ ಕನ್ನಡನಾಡು ಹಿಂದಕ್ಕೆ ಹಬ್ಬಿದ್ದರೂ ಹಬ್ಬಿರಬಹುದು; ಮಹಾರಾಷ್ಟ್ರದಲ್ಲಿ ಮಾತ್ರ ಕನ್ನಡ ಪ್ರದೇಶವಿರಲಿಲ್ಲವೆಂದು ಅನೇಕರು ಇನ್ನೂ ನಂಬುತ್ತಾರೆ, ಆದರೆ ಈ ವಿಷಯವನ್ನು ಚೆನ್ನಾಗಿ ಅಭ್ಯಾಸಮಾಡಿದ ನಮ್ಮ ಪರಮ ಸ್ನೇಹಿತರಾದ ಶ್ರೀ ನಾರಾಯಣ ಶ್ರೀನಿವಾಸ ರಾಜಪುರೋಹಿತ ಇವರು 'ಜ್ಞಾನೇಶ್ವರಿ'ಯಲ್ಲಿ ಕನ್ನಡ ಶಬ್ದಗಳು ತುಂಬಿರುತ್ತವೆಂದೂ, ಗೋವೆಯಲ್ಲಿಯ ಲೆಖ್ಖ ಪತ್ರಗಳು ಮೊನ್ನೆ ಮೊನ್ನಿನ ವರೆಗೆ ಕನ್ನಡದಲ್ಲಿಯೇ ಇದ್ದುವೆಂದೂ, ಪಂಢರಪುರದ ಶ್ರೀ ವಿಠಲನು ಮುಖ್ಯವಾಗಿ ಕನ್ನಡಿಗರ ದೇವತೆಯೇ ಎಂದೂ, ಪಂಢರಪುರದ ಸುತ್ತಲಿನ ಪ್ರದೇಶವು ಕನ್ನಡವೇ ಎಂದೂ, ಈಗ ನಾಲೈದು ವರ್ಷಗಳ ಕೆಳಗೆಯೇ ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಪ್ರಸಿದ್ಧ 'ಕೇಸರೀ' ಪತ್ರದಲ್ಲಿ 'महाराष्ट्र व करनाटक्' ಎಂಬ ಲೇಖಮಾಲೆಯಲ್ಲಿ ಸಪ್ರಮಾಣವಾಗಿ ಸಾಧಿಸಿರುವರು. ಆದರೆ ಇದೇ ವಿಷಯವನ್ನು ವ್ಯಾಸಂಗ ಮಾಡುತ್ತಿರುವಾಗ, ನಮಗೆ ಗೊತ್ತಾದ ಕೆಲವು ಮಹತ್ವದ ಸಂಗತಿಗಳನ್ನು ಇಲ್ಲಿ ನಾವು ಹೇಳುವೆವು. ಇತಿಹಾಸ ಸಂಶೋಧಕರು ಆ ಮಾರ್ಗದಿಂದ ಮುಂದೆ ಸಾಗಿ, ಹೆಚ್ಚಿನ ಶೋಧಗಳನ್ನು ಮಾಡಿ, ಈಗಿನ ಮಹಾರಾಷ್ಟ್ರ ಭಾಷೆಯ ನಾಡಿನಲ್ಲಿ, ಕನ್ನಡಿಗರ ರಾಜ್ಯ ವಿಸ್ತಾರ ವಿದ್ದುದಲ್ಲದೆ, ಕನ್ನಡ ಭಾಷಾ ವಿಸ್ತಾರವು ಕೂಡ ಇತ್ತೆಂಬ ನಮ್ಮ ವಿಧಾನವನ್ನು ಹೆಚ್ಚಿಗೆ ಬಲಪಡಿಸಬೇಕೆಂದು ಪ್ರಾರ್ಥನೆ. ನಮಗೆ ಗೊತ್ತಾದ ಸಂಗತಿಗಳು ಯಾವುವೆಂದರೆ:- (೧) ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ, ಕನ್ನಡಿಗರಿಗೆ ಆನಂದವೂ ಆಶ್ಚರ್ಯವೂ ಆಗದಿರದು. 'ಕೆಂದೂರು' ಎಂಬ ಶುದ್ಧ ಕನ್ನಡ ಹೆಸರಿನ ಊರು, ಪುಣೆಯ ಹತ್ತಿರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠಿ ಜಿಲ್ಲೆಗಳಲ್ಲಿಯೂ, ಕನ್ನಡ ಹೆಸರಿನ ಗ್ರಾಮಗಳು ತುಂಬಿರುತ್ತವೆ, ಉದಾಹರಣೆಗಾಗಿ- ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೆರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗುಡ, ಕಣಕವಲ್ಲಿ, ಬ್ರಮನಾಳ, ಗಾಣಗಾಪೂರ, ಕುರಡೀವಾಡೀ, ಕಳಸ, ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾ
೧೯
೩ನೆಯ ಪ್ರಕರಣ - ಕರ್ನಾಟಕ-ವಿಸ್ತಾರ

ರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ದ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಮೊನ್ನೆ ಮೊನ್ನೆ ಒಪ್ಪಿಕೊಂಡಿದ್ದಾರೆ. (೨) ಅಣ್ಣಂಭಟ್ಟ, ಕೃಷ್ಣಂಭಟ್ಟ, ಮುಂತಾದ ಹೆಸರುಗಳೊಳಗಿನ ಮಕಾರವು ಕನ್ನಡ ಪ್ರತ್ಯಯವಾಗಿದೆ. (೩) ಸಾತಾರಾ ಮುಂತಾದ ಸ್ಥಳಗಳಲ್ಲಿಯ ಜೈನರು ಬುನಾದಿಯಿಂದಲೂ ಕನ್ನಡ ಭಾಷೆಯನ್ನು ಆಡುತ್ತಾರೆ. (೪) ಕರ್ನಾಟಕದಲ್ಲಿಯ ಹಲವು ಮನೆತನಗಳ ಕುಲದೇವತೆಗಳು ಮಹಾ ರಾಷ್ಟ್ರದಲ್ಲಿವೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾ ಭವಾನಿ ಇವೇ ಅವು. (೫) ಕರ್ನಾಟಕದಲ್ಲಿಯ ಗುಡಿಗಳೊಳಗಿನ ಆಚಾರ ಪದ್ಧತಿಗಳು ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತವೆ. ನಮ್ಮ ಮಿತ್ರರಾದ ಶ್ರೀ ರಾಜ ಪುರೋಹಿತರವರು ದೇವರಗುಡ್ಡದಲ್ಲಿಯ ಗುಡಿಗೂ, ಜೇಜೂರಿನಲ್ಲಿರುವ ಗುಡಿಗೂ ಇರುವ ಸಾಮ್ಯವನ್ನು ಸಿದ್ಧ ಪಡಿಸಿರುವರಷ್ಟೇ! ಅದರಂತೆಯೇ ಚಿಪಳೂಣದ ಹತ್ತಿರ ಇರುವ ಪರಶುರಾಮರೇಣುಕಾ ಗುಡಿಯು ಸವದತ್ತಿಯ ಯಲ್ಲಮ್ಮನ ಗುಡಿಗೆ ಸಾಮ್ಯವಾಗಿರುತ್ತದೆ. (೬) ಮುಂಬೈ ಸುತ್ತು ಮುತ್ತಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದರೆಂದು ಮುಂಬಯಿ ಗ್ಯಾಜಟಿಯರ (Bombay Gazeteer) ದಲ್ಲಿ ಉಲ್ಲೇಖವಿದೆ. (೭) ಕೊಲ್ಲಾಪುರದ ಅರಸುಮನೆತನದ ಲಗ್ನಗಳಲ್ಲಿ 'ಬಿಸಿಯೂಟ' ಎಂಬುವ ಪದ್ಧತಿಯು ಉಂಟಂತೆ. (೮) ಹಿಂದೂ ದೇಶದ ಬ್ರಾಹ್ಮಣರಲ್ಲಿ ಪಂಚದ್ರಾವಿಡರೆಂತಲೂ, ಪಂಚಗೌಡರೆಂತಲೂ ವರ್ಗಗಳುಂಟು. ಮಹಾ ರಾಷ್ಟ್ರದೊಳಗಿನ ಕೊಂಕಣಸ್ಥ ಮತ್ತು ದೇಶಸ್ಥ ಬಾಹ್ಮಣರು ಪಂಚದ್ರಾವಿಡರಲ್ಲಿ ಸೇರುತ್ತಾರೆ. ಇದಕ್ಕೆ ಕಾರಣವೇನಿರಬಹುದು? (೯) ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ दोडामार्ग (ದೊಡ್ಡ ಮಾರ್ಗ) ಎಂದು ಈಗ್ಯೂ ಎನ್ನುತ್ತಾರೆ. (೧೦) ಕೊಂಕಣದಲ್ಲಿಯ ಮಹಾರಾಷ್ಟ್ರ ಭಾಷೆಯಲ್ಲಿ 'ಮಣೆ' 'ನಿಚ್ಚಣೆ' ಮುಂತಾದ ಕನ್ನಡ ಹೆಸರುಗಳಿರುತ್ತವೆ. (೧೧) ಜಕಣಾಚಾರ್ಯರು ಕಟ್ಟಿದ ಕಟ್ಟಡಗಳು ಮಹಾರಾಷ್ಟ್ರದಲ್ಲಿಯೂ ಇವೆ. ಅವುಗಳಿಗೆ ಅವರು 'ಹೇಮಾಡಪಂತೀ' ಗುಡಿಗಳೆಂದು ಹೇಳುತ್ತಾರೆ. (೧೨) ಇನ್ನೂ ಮಹತ್ವವುಳ್ಳ ಸಂಗತಿಯೇನೆಂದರೆ, ನಡು ಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲು ಗಳೂ ದೊರೆತಿದ್ದು, ಸಾತಾರಾ ಜಿಲ್ಲೆಯ ಮಸವಡ ಎಂಬ ಗ್ರಾಮದಲ್ಲಿ ಒಂದು ಕನ್ನಡ 
೨೦
ಕರ್ನಾಟಕ ಗತವೈಭವ


ಶಿಲಾಶಾಸನವು ದೊರೆತಿದೆ. ಇದಲ್ಲದೆ, ಈ ವಿಷಯವನ್ನು ಕುರಿತು ನಾವು ವ್ಯಾಸಂಗ ಮಾಡುವಾಗ, ಕುಲಾಬಾ ಜಿಲ್ಲೆಯ 'ಚೌಲ' ಎಂಬ ಗ್ರಾಮದಲ್ಲಿ ಕನ್ನಡ ಶಿಲಾಲಿಪಿಯೊಂದು, ಸಿಂಕ್ಲೇಯರ ಸಾಹೇಬರಿಗೆ (W.S.Sinclair) ೧೮೭೪ನೆಯ ಫೆಬ್ರುವರಿಯಲ್ಲಿ ದೊರೆತಂತೆ ಇಂಡಿಯನ್ ಅಂಟಿಕ್ವೇರಿ(Indian Antiquary)ಯ ೭ನೆಯ ಸಂಪುಟದ ೨೩೪ ನೆಯ ಪುಟದಲ್ಲಿ ಉಲ್ಲೇಖವಿರುವುದಾಗಿ ನಾವು ಓದಿರುವೆವು, ವಾಚಕರ ಅವಲೋಕನಾರ್ಥವಾಗಿ ಅದರ ಕೆಲವು ಭಾಗವನ್ನು ಇಲ್ಲಿ ಕೊಡುತ್ತೇವೆ.

"Between the temples and cenotaph, the toddydrawers, were whetting their knives at the time of my visit upon a loose slab, bearing a Kanarese inscription, a thing of itself (philologically Speaking) very remarkable in so thoroughly Maratha country, as in north Konkan. A little money and a good deal of diplomacy ennabled me to place it in the collection of the Bombay Branch of the Royal Asiatic Society; where it has remained unheaded, from that day to this, upon a landing place, where scholars passed it every Week”
ಸಾರಾಂಶ:- “ನಾನು ಅಲ್ಲಿಗೆ ಹೋದಾಗ, ಅಲ್ಲಿರುವ ಗುಡಿ ಮತ್ತು ಸಮಾಧಿಗಳ ನಡುವೆ ಹೆಂಡತೆಗೆಯುವವರು ಒಂದು ಕಲ್ಲಿಗೆ ತಮ್ಮ ಚೂರಿಗಳನ್ನು ಮಸೆಯುತ್ತ ಕುಳಿತು ಕೊಂಡುದುದನ್ನು ಕಂಡೆನು. ನೋಡುವಷ್ಟರಲ್ಲಿ, ಆ ಕಲ್ಲು ಕನ್ನಡ ಶಿಲಾಲೇಖವಾಗಿತ್ತು !ಉತ್ತರ ಕೊಂಕಣದಂಥ ನಡು ಮಹಾರಾಷ್ಟ್ರದಲ್ಲಿ ಈ ತರದ ಕನ್ನಡ ಶಿಲಾಲೇಖವು ದೊರತುದು ಭಾಷಾಶಾಸ್ತ್ರದೃಷ್ಟಿಯಿಂದ ನಿಜವಾಗಿ ಮಹತ್ವದ ಸಂಗತಿಯಲ್ಲವೇ? ಸ್ವಲ್ಪ ಹಣವನ್ನೂ ಬಹಳ ಯುಕ್ತಿಯನ್ನೂ ವಿನಿಯೋಗಿಸಿ ನಾನು ಆ ಶಿಲಾಲೇಖವನ್ನು ಸಂಪಾದಿಸಿ ಅದನ್ನು ರಾಯಲ್ ಏಶಿಯಾಟಿಕ್ ಸೊಸಾಯಟಿಯ ಮುಂಬಯಿ ಶಾಖೆಯಲ್ಲಿರುವ ವಸ್ತು ಸಂಗ್ರಹಗಳಲ್ಲಿ ಇಟ್ಟೆನು. ಅಂದಿನಿಂದ ಇಂದಿನವರೆಗೆ ಅದು ಪಂಡಿತರು ಪ್ರತಿವಾರ ಹಾಯ್ದು ಹೋಗುವ ದಾರಿಯ ಹತ್ತಿರವೇ ಹೊರ

೨೧
೩ನೆಯ ಪ್ರಕರಣ – ಕರ್ನಾಟಕ-ವಿಸ್ತಾರ


೪ಾಡುತ್ತ ಬಿದ್ದಿದೆ!"

ನ್ನಡಿಗರೇ, ಇಂಥ ಮಹತ್ವದ ಶಿಲಾಲಿಪಿಯು ಬೆಳಕಿಗೆ ಬಂದು ಮೂರು ತಪಗಳಾಗಿ ಹೋದರೂ, ಅದು ಕನ್ನಡಿಗರಿಗೆ ಮಾತ್ರ ಕಾಣದಿರುವುದು ಯಾತರ ಹೆಗ್ಗುರುತು? ಈ ಶಿಲಾಲೇಖವನ್ನು ನೋಡಬೇಕೆಂಬ ಅಪೇಕ್ಷೆಯಿಂದ ನಾವು ಮುಂಬೈಯಲ್ಲಿ ನಾಲ್ಕು ದಿವಸಗಳ ವರೆಗೆ ಅದನ್ನು ಹುಡುಕಿದರೂ ಅದು ನಮಗೆ ದೊರೆಯದೇ ಹೋಯಿತು. ಆ ಸಂಸ್ಥೆಯ ಯಾದಿ (Catalogue) ಯಲ್ಲಿಯೂ ಅದರ ಹೆಸರು ಸೇರಿದಂತೆ ತೋರಲಿಲ್ಲ, ಸಂಶೋಧಕರು ಈ ವಿಷಯದಲ್ಲಿ ಹೆಚ್ಚು ಶ್ರಮಪಡಬೇಕೆಂದು ನಮ್ಮ ಪ್ರಾರ್ಥನೆ.
(೧೩) ಮೊನ್ನೆ ಮೇ ತಿಂಗಳಲ್ಲಿ ಈ ವಿಷಯವನ್ನೇ ತಲೆಯಲ್ಲಿ ತುಂಬಿಕೊಂಡು ಇತಿಹಾಸ ಭಕ್ತರಾದ ನಮ್ಮ ಕೆಲವು ಸ್ನೇಹಿತರನ್ನು ಕೂಡಿ ಕೊಂಡು ಕನ್ನಡಿಗರಿಗೆ ಅತ್ಯಂತ ಅಭಿಮಾನಾಸ್ಪದವಾದ ವೇರೂಳದ ಮೇಣಬಸ್ತಿಗಳನ್ನೂ, ಮೇಣ ಗುಡಿಗಳನ್ನೂ ನೋಡಲಿಕ್ಕೆ ಹೋಗಿದ್ದೆವು, ಆ ಕಾಲಕ್ಕೆ ಅಲ್ಲೇನಾದರೂ, ಕನ್ನಡ ಶಿಲಾಲಿಪಿಯು ದೊರೆಯುತ್ತದೇನು ಎಂದು ಹುಡುಕುತ್ತಿರಲು, ನಮಗೆ ೩೩ ನೆಯ ನಂಬರಿನ ಮೇಣಬಸ್ತಿಯ ಕಂಬದ ಮೇಲೆ ಕನ್ನಡ ಅಕ್ಷರದ *ಶಿಲಾಲಿಪಿಯೊಂದು ಕಣ್ಣಿಗೆ ಬಿದ್ದಿತು. ಆಗ ನನಗಾದ ಆನಂದವನ್ನು ಬಣ್ಣಿಸಲಳವಲ್ಲ. ವೇರೂಳ ಗ್ರಾಮವಿದ್ದ ತಾಲೂಕಿಗೆ 'ಕನ್ನಡ'ವೆಂಬ ಹೆಸರು. ಸಾರಾಂಶ:- ಇಂಥ ಶಿಲಾ ಲಿಪಿಗಳ ಶೋಧದಿಂದ ನಮ್ಮ ಕನ್ನಡ ಭಾಷೆಯು ಎಲ್ಲಿಯವರೆಗೆ ತನ್ನ ಕಾಲು ಚಾಚಿತ್ತೆಂಬುದು ವಾಚಕರ ಗಮನಕ್ಕೆ ಬಾರದಿರದು. ಆದರೆ ಆ ಕಾರ್ಯವು ಕನ್ನಡಿಗರಿಗಲ್ಲದೆ ಮತ್ತಾರಿಗೆ ಸಾಧ್ಯವು?
(೧೪) ಸಾತಾರೆಯ ಹತ್ತರ ಯವತೇಶ್ವರದಲ್ಲಿ ಜಕಣಾಚಾರ್ಯರ ಕಟ್ಟಿನದೊಂದು ಗುಡಿಯುಂಟು, ಆ ಗುಡಿಯ ಹತ್ತರ ಶಿಲಾಲೇಖವನ್ನು ಹುಡುಕುವಷ್ಟರಲ್ಲಿ ಸಮಿಾಪದ ಹೊಲದಲ್ಲೊಂದು 'ವೀರಗಲ್ಲು' ದೊರೆಯಿತು, ಮರಾಠರಿಗೆ ಈ ವೀರಗಲ್ಲು ಗಳ ಕಲ್ಪನೆಯಿಲ್ಲ,
ಬಗೆಯಾಗಿ ನಮಗೆ ಗೊತ್ತಾದ ಸಂಗತಿಗಳನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ಕೊಟ್ಟಿರುವೆವು. ಇವುಗಳಿಂದ ಯಾವ ನಿಶ್ಚಿತವಾದ ಸಿದ್ಧಾಂತವನ್ನೂ


* ಈ ಶಿಲಾಲೇಖವು ಇಲ್ಲಿಯವರೆಗೆ ಪ್ರವಾಸಿಕರ ಕಣ್ಣಿಗೆ ಬಿದ್ದಂತೆ ತೋರಲಿಲ್ಲ.
೨೨
ಕರ್ನಾಟಕ-ಗತವೈಭವ

ತೆಗೆಯಲು ನಾವು ಈಗ ಧೈರ್ಯಗೊಳ್ಳುವುದಿಲ್ಲ, ಆಗಿನ ಕಾಲದ ಭಾಷಾ ವಿಸ್ತಾರವನ್ನಷ್ಟೇ ವರ್ಣಿಸುವುದು ಈಗಿನ ನಮ್ಮ ಉದ್ದೇಶವಿರುವುದರಿಂದ ಇಷ್ಟೊಂದು ವಿಸ್ತಾರವಾದ ಪ್ರದೇಶದಲ್ಲಿ ನಮ್ಮ ಕನ್ನಡ ಭಾಷೆಯು ತನ್ನ ವರ್ಚಸ್ಸನ್ನು ಹರಡಿತ್ತೆಂಬುದನ್ನು ಮೇಲೆ ಹೇಳಿದ್ದೇವೆ. ಇದರಿಂದ, ಕಠೋರವಾಗಿರುವ ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ಭಾಷೆಯಲ್ಲಿ ಪೂಜ್ಯ ಬುದ್ಧಿಯೂ ಅಭಿಮಾನವೂ ಹೆಚ್ಚು ಘನ ವಾದರೆ, ನಮ್ಮ ಕಾರ್ಯವು ಕೈಗೂಡಿದಂತಾಯಿತು!
ನ್ನಡಿಗರೇ, ಈಗಿನ ಭಾಷಾ ವಿಸ್ತಾರಕ್ಕೂ ಹಿಂದಿನ ಭಾಷಾ ವಿಸ್ತಾರಕ್ಕೂ ಹೋಲಿಸಿ ನೋಡಿರಿ. ಸದ್ಯಕ್ಕೆ ಕನ್ನಡ ಭಾಷೆಯು ಉತ್ತರದಲ್ಲಿ ಸಾಂಗಲಿಯ ವರೆಗೆ ಮಾತ್ರ. ಹಾಗೂ ಹೀಗೂ, ಆಧುನಿಕ ಶಿಕ್ಷಣದ ಗಾಳಿಯು ಸೋಂಕದಿರುವಂಥ ಹಲ ಕೆಲವು ಜನರ ಬಾಯಿಯಲ್ಲಿ ಆಡುತ್ತಿರಬಹುದು. ಅದೂ ಕ್ರಮೇಣ, ಮರಾಠಿ ಭಾಷೆಯ ಉರುಬಿಗೆ ಸಿಲುಕಿ ಮೈ ಮುಚ್ಚಿ ಕೊಳ್ಳುತ್ತಲಿದೆ. ವಾಚಕರೇ, ನಮ್ಮ ದುರ್ದೈವದಿಂದಲೋ, ನಮ್ಮ ಮಾತೃಭಾಷೆಯ ದುರ್ದೈವದಿಂದಲೋ, ಒಂದು ಕಾಲಕ್ಕೆ ಕನ್ನಡನಾಡಿಗೆಲ್ಲ ದಿಗ್ದಂತಿಗಳಾಗಿ ಬಾಳಿದ ಪೊನ್ನ, ರನ್ನ ಮುಂತಾದವರು ಹುಟ್ಟಿದ ಊರುಗಳೇ ಪರಭಾಷೆಯಿಂದ ವ್ಯಾಪಿಸಲ್ಪಟ್ಟಿರುತ್ತವೆ. ಕನ್ನಡ ತಾಯ್ನುಡಿಯ ಕೊರಳಿಗೆ ಕೈ ಹಾಕಿ ದಬ್ಬುತ್ತಿರುವ ಈ ನೋಟವು ಯಾವ ಕನ್ನಡಿಗನ ಹೃದಯವನ್ನು ಕರಗಿಸದೆ ಇರದು! ಕನ್ನಡನಾಡೆಲ್ಲವೂ ಮಹಾರಾಷ್ಟ್ರಮಯವಾಗುತ್ತಿರುವುದು ಎಂಥ ಔದಾಸೀನ್ಯದ ಲಕ್ಷಣವು ! ಪೂರ್ವಕ್ಕಿರುವ ಬಳ್ಳಾರಿಯಂಥ ಶುದ್ದ ಕನ್ನಡಜಿಲ್ಲೆಯು ಕೂಡ ಕನ್ನಡಿಗರ ನಿರಭಿಮಾನತೆಯ ಮೂಲಕ ತೆಲುಗಿನವರ ಇರುಕಿನಲ್ಲಿ ಸಿಕ್ಕಿಕೊಂಡು ಬಾಡುತ್ತಿರುವ ನೋಟವು ಕನ್ನಡಿಗರ ಶೋಕ ಭಾರವನ್ನು ಇಮ್ಮಡಿಗೊಳಿಸದೆ ಇರದು. ಈ ಬಗೆಯಾಗಿ, ನಮ್ಮ ಕಣ್ಣೆದುರಿಗೇನೆ ನಮ್ಮ ಭಾಷೆಯನ್ನು ಪರಭಾಷೆಗಳು ಕೆಳಗೆ ದೂಡುತ್ತಿರಲು, 'ಕರ್ನಾಟಕ ವಿದ್ಯಾ ವರ್ಧಕ ಸಂಘ,' 'ಕರ್ನಾಟಕ ಸಾಹಿತ್ಯ ಪರಿಷತ್' ಮುಂತಾದ ಸಂಸ್ಥೆಗಳು, ಇನ್ನೂ ಕಣ್ಣು ಮುಚ್ಚಿಯೇ ಕುಳಿತಿರುವುದನ್ನು ಕೇಳಿ, ಯಾವ ಕನ್ನಡಿಗನ ಮನಸ್ಸು ವ್ಯಸನಾಕ್ರಾಂತವಾಗಲಿಕ್ಕಿಲ್ಲ ! ಕೊಡಗು ನೀಲಗಿರಿ ಪ್ರಾಂತಗಳ ಜನರು ಕನ್ನಡಿಗರೇ ಇರುವರೆಂಬ ಜ್ಞಾನವೂ ನಮಗೆ ಇರಬಾರದೋ ? ಧಿಕ್ಕಾರವಿರಲಿ ನಮ್ಮ ಔದಾಸೀನ್ಯಕ್ಕೆ!