ಕರ್ನಾಟಕ ಗತವೈಭವ/೪ನೆಯ ಪ್ರಕರಣ
ಕನ್ನಡಿಗರೇ, ಉಜ್ವಲವಾದ ನಿಮ್ಮ ಭಾಷೆಯು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಹು ದೂರದ ವರೆಗೆ ಮನೆ ಮಾಡಿಕೊಂಡಿತ್ತೆಂಬ ಸಂಗತಿಯು ನಿಮ್ಮ ಹೃದಯವನ್ನು ಸ್ಪೂರ್ತಿಗೊಳಿಸಲಿ.
೪ನೆಯ ಪ್ರಕರಣ
ಕರ್ನಾಟಕದ ವಿಭೂತಿಗಳು
नांतोस्ति मम दिव्यानां विभूतीनां परंतप ।
एपतूद्देशतः प्रोक्तो विभूतेर्विस्तरो मया ॥
- ಗೀತಾ, ೧೦-೪೦.
ಎಲೆ ಪರಂತಪ ದಿವ್ಯವೆನಿಸುವ| ಹಲವು ಬಗೆಯ ವಿಭೂತಿವಿಭವಕೆ |
ಸಲೆ ಮೊದಲು ಕಡೆಯಿಲ್ಲವೆನ್ನಯ ಯೋಗಮಾಯೆಗಳ ||
ಚೆಲುವೆನಿಸುವ ವಿಭೂತಿವಿಸ್ತರ ಜಲಧಿಯೊಳು ನಾಂ ನಿನಗೆ ಪೇಳ್ವೆನು |
ಕೆಲವ, ಮಿಕ್ಕ ವಿಭೂತಿನಿಭವಕೆ ಲೆಕ್ಕವಿಲ್ಲೆಂದ ||
-ನಾಗರಸ
ವಾಗುವುದು” ಎಂದು ಹಲವರು ಆಕ್ಷೇಪಿಸಬಹುದು, ಆದುದರಿಂದ, ಹಾಗೆ ಅಭಿಮಾನ ಪಡಲಿಕ್ಕೆ ಯೋಗ್ಯವಾದ ಸಂಗತಿಗಳಾವುವೆಂಬುದನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸುವೆವು.
ತನ್ನ ವಿರುದ್ಧವಾಗಿ ಬಂಡಾಯವನ್ನು ಹೂಡಿದ ಹನ್ನೆರಡು ಅರಸರನ್ನು ಬಗ್ಗು ಬಡಿದು, ಗುರ್ಜರ, ಮಾಳವ, ಮಧ್ಯಪ್ರಾಂತ ಇವೇ ಮೊದಲಾದ ನಾಡುಗಳನ್ನು ಗೆದ್ದು, ಪೂರ್ವಚಾಲುಕ್ಯರ ಅರಸನನ್ನು ಹಣ್ಣಿಗೆ ತಂದು, ಅವನಿಗೆ ತನ್ನ ಕೋಟೆ ಕೊತ್ತಳಗಳನ್ನು ಕಟ್ಟಲು ಹಚ್ಚಿದ ಸಂಗತಿಯೇನು ಸಾಧಾರಣವಾಯಿತೇ ? ಕರ್ನಾಟಕರು ಪ್ರತಿದಿನವೂ ಸ್ಮರಿಸಬೇಕಾಗಿರುವ ಆ ರಾಷ್ಟ್ರಕೂಟರ ಅಮೋಘವರ್ಷ ಅಥವಾ ನೃಪತುಂಗನು (೯ನೆಯ ಶತಕ) ಯಾವ ದೇಶಕ್ಕೆ ಭೂಷಣವೆನಿಸಲಾರನು ? ೬೩ ವರುಷಗಳ ವರೆಗೆ ಎಡೆಬಿಡದೆ ಆಳಿದ ಈ ನೃಪತುಂಗನೇ ಅಲ್ಲವೇ ಕನ್ನಡಿಗರ 'ಕವಿರಾಜಮಾರ್ಗ'ವೆಂಬ ಅಲಂಕಾರ ಗ್ರಂಥವನ್ನು ಬರೆದವನು? ಪ್ರತಿಯೊಬ್ಬ ಆರ್ಯಪುತ್ರನಿಗೂ ಗೊತ್ತಿರುವ ಆ ಪ್ರಸಿದ್ಧ ಭೋಜರಾಜನ ಕಕ್ಕನಾದ ಶೂರಧೀರ ಮುಂಜನನ್ನು ಸೆರೆಹಿಡಿದು ತಂದವನು ನಿಮ್ಮ ಕರ್ನಾಟಕ ತೈಲಪನೇ (೧೦ನೆಯ ಶತಕ), ಮೇಲ್ಗಡೆಗೆ, ಗುರ್ಜರ ಮಾಳವ ಮುಂತಾದ ಅರಸರನ್ನು ಗೆದ್ದು ವಿಂದ್ಯ ಪರ್ವತದವರೆಗೆ ರಾಜ್ಯವನ್ನು ಪಾದಾಕ್ರಾಂತವಾಗಿ ಮಾಡಿಕೊಂಡು ಬಂಗಾಲದ ಮೇಲೆ ದಾಳಿಮಾಡಿ ಈಶಾನ್ಯ ದಿಕ್ಕಿನಲ್ಲಿ ಅಸಾಮದಲ್ಲಿಯೂ, ಕೆಳಗಡೆಗೆ ಕೇರಳ ಚೋಳ ಪಾಂಡ್ಯ ಮುಂತಾದ ಅರಸರನ್ನು ಮುರಿಬಡೆದು, ಸಮುದ್ರದವರೆಗೆ ರಾಜ್ಯವನ್ನು ಹಬ್ಬಿಸಿ ದಕ್ಷಿಣದಲ್ಲಿ ಸಿಂಹಲದ್ವೀಪದಲ್ಲಿಯೂ ಕರ್ನಾಟಕದ ವಿಜಯ ಪತಾಕೆಯನ್ನೂರಿದ, ಆ ರಣಧೀರನೂ ರಾಜತಂತ್ರ ಪ್ರವೀಣನೂ ವಿದ್ಯಾ ಪಕ್ಷ ಪಾ ತಿಯೂ ಆದ ಮಹಾ ಬಲಾಡ್ಯ ವಿಕ್ರಮಾದಿತ್ಯನೆಂಬ (೧೧ನೆಯ ಶತಕ) ಶಕಪುರು ಪನ ಅರಿವು ಕೂಡ ಕನ್ನಡಿಗರಿಗೆ ಈಗ ಇರದಿದ್ದರೂ ಅವನ ಹೆಸರನ್ನು ಕರ್ನಾಟಕ ಇತಿಹಾಸವು ಆಚಂದ್ರಾರ್ಕವಾಗಿ ಮರೆಯಲಾರದು, ಗಂಗ, ಕದಂಬ, ಶಿಲಾಹಾರ, ಯಾದವ ಮುಂತಾದ ಅರಸರು ಇವನಿಗೆ ದಾಸಾನುದಾಸರಾಗಿದ್ದರು. ಬಿಲ್ಲಣ, ವಿಜ್ಞಾನೇಶ್ವರ ಮುಂತಾದ ಕವಿವರರು ಏಕಛತ್ರಾಧಿಪತಿಯಾದ ಈತನ ಆಸ್ಥಾನವನ್ನಲಂಕರಿಸಿದ್ದರು. ಕರ್ನಾಟಕಸ್ಥರೇ, ಪುಲಿಕೇಶಿ, ನೃಪತುಂಗ, ಗೋವಿಂದ, ತೈಲಪ, ವಿಕ್ರಮಾದಿತ್ಯರಂಥ ಮಹಾಮಹಿಮರಾದ ರಾಜರು ನಿಮ್ಮ ಪಾಲಿಗೆ ಬಂದಿದ್ದು ಘನವಾದ ಪುಣ್ಯವೆಂದು ಭಾವಿಸಿರಿ, ಅಷ್ಟೇಕೆ ? ನಿಮ್ಮ ಹರಿಹರ ಬುಕ್ಕರಾಯರೇನು (೧೪ನೇ ಶತಕ) ಕಡಿಮೆ ಪ್ರತಾಪಿಗಳೊ? ಉತ್ತರ ಹಿಂದುಸ್ಥಾನ
ವೆಲ್ಲವೂ ತಮ್ಮ ಗಂಟಲಲ್ಲಿ ಇಳಿಯಿತೆಂಬ ಗರ್ವದಿಂದ ದಕ್ಷಿಣ ಹಿಂದುಸ್ಥಾನವನ್ನು ಕೂಡ ನುಂಗಿ ನೀರು ಕುಡಿಯಬೇಕೆಂದು ಮುಸಲ್ಮಾನರು ಹವಣಿಸಿದ ಸಮಯದಲ್ಲಿ ಆರ್ಯ ಧರ್ಮವನ್ನೂ, ಆರ್ಯ ಸುಧಾರಣೆಯನ್ನೂ, ಆರ್ಯ ವೈಭವವನ್ನೂ ಅವರ ಬಾಯಿಯೊಳಗಿಂದ ಬದುಕಿಸಿದ ಬಂಟರು ಇವರೇ ಅಲ್ಲವೇ? ಚದರಿ ಹೋದ ಕದಂಬ, ಹೊಯ್ಸಳ, ಗಂಗ ಇವರೇ ಮೊದಲಾದ ಅರಸರೆಲ್ಲರನ್ನೂ ಒಟ್ಟುಗೂಡಿಸಿ ದಕ್ಷಿಣ ಹಿಂದೂಮಾತೆಯ ಮರ್ಯಾದೆಯನ್ನು ಕಾಯ್ದವರಾರು! ಅಷ್ಟದಿಗ್ಗಜಗಳೆಂದು ಕರೆಯಲ್ಪಡುವ ವಿಖ್ಯಾತರಾದ ಪಂಡಿತ ಜನರಿಗೆ ಆಶ್ರಯಕೊಟ್ಟ ಆ ವೈಭವ ಶಾಲಿಯಾದ ವಿಜಯನಗರದ ಕೃಷ್ಣರಾಯನು ನಮ್ಮ ಅರಸನೆಂಬುದು ಕರ್ನಾಟಕರಿಗೆ ಗೊತ್ತಾಗಬಾರದೇ? ಸಾರಾಂಶ:- ಗಂಗ, ಕದಂಬ, ಚಾಲುಕ್ಯ, ರಾಷ್ಟ ಕೂಟ, ಹೊಯ್ಸಳ, ಯಾದವ, ವಿಜಯನಗರ ಮುಂತಾದ ಅರಸರು ಭಿನ್ನ ಭಿನ್ನ ಕಾಲಕ್ಕೆ ಬೇರೆ ಬೇರೆ ಹೆಸರುಗಳನ್ನು ಧರಿಸಿಕೊಂಡಿದ್ದರೂ, ಅವರೆಲ್ಲರೂ ಶುದ್ಧ ಕನ್ನಡಿಗರೇ ! ಅವರೂ ನಮ್ಮಂತೆಯೇ ಕನ್ನಡ ನುಡಿಯನ್ನೇ ಆಡುತ್ತಿದ್ದರು! ಈ ಕರ್ನಾಟಕವೇ ಅವರ ಜನ್ಮಭೂಮಿಯು; ಪೂರ್ವದ ಚಾಲುಕ್ಯರ ರಾಜಧಾನಿಯಾದ ಬಾದಾಮಿಯೂ, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡವೂ, ಕೊನೆಯ ಚಾಲುಕ್ಯ ವಂಶದ ರಾಜಧಾನಿಯಾದ ಕಲ್ಯಾಣವೂ ವಿಜಯನಗರ ಅರಸರ ರಾಜಧಾನಿಯಾದ ವಿಜಯನಗರವೂ ಇವೆಲ್ಲ ಕೇವಲ ಕರ್ನಾಟಕದ ಪಟ್ಟಣಗಳೇ, ಆ ನಿಮ್ಮ ಅರಸರೆಲ್ಲರೂ ಈ 'ಕಾಡುಕಗ್ಗಾದ' ಕನ್ನಡ ಭಾಷೆಯನ್ನಾಡುವುದು ಅಪಮಾನಕಾರಕವೆಂದು ತಿಳಿಯಲಿಲ್ಲ! ಹೀಗೆ ನಿಮ್ಮಲ್ಲಿ ಶೂರರೂ ವೀರರೂ ಆದ ಅರಸರ ಪರಂಪರೆಯು ಬಲು ಪುರಾತನದಿಂದ ಅವಿಚ್ಛಿನ್ನವಾಗಿ ನಡೆದುಬಂದಿರಲು, ನೀವು ಹತವೀರ್ಯರಾಗಲು ಕಾರಣವೇನು !
ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಶ್ರೀರಾಮಾನುಜಾಚಾರ್ಯರು ಕನ್ನಡ ಅರಸನಾದ ವಿಷ್ಣು ವರ್ಧನನ್ನು ಆಶ್ರಯಿಸಿ ತಮ್ಮ ಮತಪ್ರಸಾರಣೆಯನ್ನು ಮಾಡಿದರು. ಮಧ್ವಾಚಾರ್ಯರಿಗೆ ನಿಮ್ಮ ಕರ್ನಾಟಕವೇ ತವರುಮನೆಯು, ವೀರಶೈವ ಮತೋದ್ದಾರಕನಾದ ಬಸವೇಶ್ವರನಂತೂ ಶುದ್ಧ ಕನ್ನಡಿಗನೇ, ಜೈನ ಮತದ ಪ್ರಖ್ಯಾತ ಗುರುಗಳಾದ ಪೂಜ್ಯ ಪಾದ, ಜಿನಸೇನ, ಗುಣಭದ್ರ ಮುಂತಾದವರು ಈ ನಮ್ಮ ಕನ್ನಡ ನಾಡಿನಲ್ಲಿಯೇ ಬಾಳಿಬದುಕಿದರು; ಚಾಲುಕ್ಯ ವಿಕ್ರಮಾದಿತ್ಯನ ದರಬಾರಿನಲ್ಲಿ 'ವಿದ್ಯಾಪತಿ'ಯಾಗಿದ್ದ ಬಿಲ್ಲಣನೂ ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ, ಪ್ರಸಿದ್ಧ ವೇದಾಂತಿಯಾದ ಸಾಯಣನೂ ಪ್ರಖ್ಯಾತ ಜ್ಯೋತಿಷಿಯಾದ ಭಾಸ್ಕರಾಚಾರ್ಯನೂ, ಇವರೆಲ್ಲರಿಗೂ ಮುಕುಟ ಮಣಿಯಂತಿರುವ ಕರ್ನಾಟಕ 'ಸಿಂಹಾಸನ ಸ್ಥಾಪನಾಚಾರ್ಯ'ರೆಂಬ ಬಿರುದುಳ್ಳ ಜಗದ್ವಿಖ್ಯಾತರಾದ ಶ್ರೀ ವಿದ್ಯಾರಣ್ಯರೂ, ಇವರೆಲ್ಲರೂ ಕನ್ನಡ ತಾಯಿಯ ಮುದ್ದು ಮಕ್ಕಳೇ ಅಲ್ಲವೆ? ಕಳೆದ ಅನೇಕ ಶತಮಾನಗಳಿಂದ ಕರ್ನಾಟಕ ವಾಙ್ಮಯವೆಂಬಗಗನ ಮಂಡಲದೊಳಗೆ ದಿವ್ಯ ನಕ್ಷತ್ರಗಳಂತೆ ಬೆಳಗುತ್ತಿರುವ ಆದಿಪಂಪ, ಪೊನ್ನ, ರನ್ನ, ಜನ್ನ, ಮೊದಲಾದ ವಾಙ್ಮಯ ಪ್ರಭುಗಳು ಕೇವಲ ಕನ್ನಡಿಗರೇ ! ಪರಮ ಭಗವದ್ಭಕ್ತರಾದ ಪುರಂದರದಾಸ, ಕನಕದಾಸ ಮುಂತಾದ ದಾಸ ಶ್ರೇಷ್ಠರಿಗೆ ಈ ನಮ್ಮ ಬಡ ಕರ್ನಾಟಕವೇ ಜನ್ಮಭೂಮಿ, ಇಷ್ಟೇ ಅಲ್ಲ, ಕನ್ನಡಿಗರೇ ನಿಮ್ಮ ಭಾಗ್ಯವನ್ನು ಎಷ್ಟೆಂದು ಹೇಳಬೇಕು! ನಿಮ್ಮ ಅರಸರೂ ಸ್ವಂತ ಕವಿಗಳಾಗಿದ್ದರು. ಗಂಗ ಅರಸರಲ್ಲಿ ಮಾಧವ, ದುರ್ವಿನೀತ ಮುಂತಾದ ಅನೇಕ ರಾಜರು ಅಶ್ವಶಾಸ್ತ್ರ, ಗಜಶಾಸ್ತ್ರ, ಕಿರಾತಾರ್ಜುನ ಟೀಕೆ, ದತ್ತಕ ಸೂತ್ರ ಮುಂತಾದ ಮಹತ್ವದ ಪುಸ್ತಕಗಳನ್ನು ಬರೆದಿರುವರು, ರಾಷ್ಟ್ರಕೂಟದ ಪ್ರಖ್ಯಾತ ಆರಸನಾದ ನೃಪತುಂಗನು 'ಕವಿರಾಜಮಾರ್ಗ' ಎಂಬ ಸುಪ್ರಸಿದ್ಧವಾದ ಅಲಂಕಾರಶಾಸ್ತ್ರದ ಗ್ರಂಥವನ್ನು ಬರೆದಿರುವನು, ಚಾಲುಕ್ಯವಂಶದ ಅರಸನಾದ ಸೋಮೇಶ್ವರನೆಂಬುವನು “ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥಚಿಂತಾಮಣಿ” ಎಂಬ ರಾಜಕೀಯ ಗ್ರಂಥವನ್ನು ಬರೆದನು. ಇಂಥ ರಾಜಕವಿಗಳೂ ವರಕವಿಗಳೂ ನಿಮ್ಮಲ್ಲಿ ಹುಟ್ಟಿರಲು ನೀವು ನಿಮ್ಮ ಕರ್ನಾಟಕಕ್ಕೆ ಹೆಸರಿಡುವುದೇಕೆ ?
ಕರ್ನಾಟಕದ ಸ್ತ್ರೀಯರೇನು ಕಡಿಮೆ ಪ್ರಸಿದ್ದರೆ? ನಮ್ಮ ಕರ್ನಾಟಕದ ಸ್ತ್ರೀಯರ ಹೆಸರುಗಳೂ ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಷ್ಟು ಉಜ್ವಲವಾಗಿವೆ. ಸುಪ್ರಸಿದ್ಧ ಪುಲಕೇಶಿ ಮಹಾರಾಜನ ಹಿರಿಯ ಸೊಸೆಯಾದ 'ವಿಜಯಮಹಾದೇವಿ'ಯು ಅಬಲೆಯಾದರೂ ರಾಜ್ಯಭಾರವನ್ನು ಬಹು ಚಾತುರ್ಯದಿಂದ ತೂಗಿಸಿಕೊಂಡು ಹೋಗಲಿಲ್ಲವೇ ! ಪಶ್ಚಿಮ ಚಾಲುಕ್ಯರ ೨ನೆಯ ಸೋಮೇಶ್ವರನ 'ಹಿರಿಯರಸಿ'ಯಾದ 'ಮೈರಳಾದೇವಿ'ಯು ಆಗಿನ ಕಾಲಕ್ಕೆ ಮುಂಬಯಿ ಪ್ರಾಂತದಷ್ಟು ದೊಡ್ಡದಾದ ಬನವಾಸಿ ಪ್ರಾಂತವನ್ನಾಳಿರುವುದು ಕರ್ನಾಟಕ ಸ್ತ್ರೀ ಸಮಾಜಕ್ಕೆ ಎಷ್ಟು ಗೌರವಾಸ್ಪದವಾದ ಸಂಗತಿಯು ? ಪಶ್ಚಿಮ ಚಾಲುಕ್ಯರ ೩ನೆಯ ಜಯಸಿಂಹನ ತಂಗಿಯರಾದ 'ಅಕ್ಕಾದೇವಿಯರ್ ಕಿಸುನಾಡ ಪಟ್ಟಂ ಸುಖ ಸಂಕಥಾ ವಿನೋದದಿಂ ಆಳುತ್ತಿರೆ' ಆಗಿನ ಕಾಲಕ್ಕೆ ಗೋಕಾವಿಯಲ್ಲಿದ್ದ ಬಂಡಾಯವನ್ನು ಮುರಿದೊತ್ತಿ, 'ರಣಭೈರವಿ' ಎಂಬ ತಮ್ಮ ಅಭಿದಾನವನ್ನು ಸಾರ್ಥಕಗೊಳಿಸಿದ ಸಂಗತಿಯನ್ನು ಕೇಳಿದೊಡನೆ ಯಾವ ಕನ್ನಡಿಗನ ಮುಂದೆ ಆ ವೀರಾಂಗನೆಯ ಚಿತ್ರವು ಬಂದು ನಿಲ್ಲದೆ ಇದ್ದೀತು ! ಕಂತಿ, ನೀಲಮ್ಮ, ಹೊನ್ನಮ್ಮ, ಗಿರಿಯಮ್ಮ, ಇವರು ರಚಿಸಿದ 'ಪ್ರಸಾದ ಸಂಪಾದನ' 'ಹದಿಬದೆಯ ಧರ್ಮ' 'ಚಂದ್ರಹಾಸಚರಿತ್ರೆ' ಇವೇ ಮೊದಲಾದ ಗ್ರಂಥರತ್ನಗಳು ಕನ್ನಡತಿಯರಿಗೆ ಆವರಣವೂ ಆದರ್ಶವಾಗದೆ ಇರವು ! ಮೊನ್ನೆ ಮೊನ್ನೆ ಕರ್ನಾಟಕದ ಕಣ್ಣಿಗೆ ಬಿದ್ದಿರುವ 'ವೀರಕಂಪಣರಾಯಚರಿತ'ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯದ ಕರ್ತಿಯೂ ಶುದ್ಧ ಕರ್ನಾಟಕ ರಾಜಪುತ್ರಿಯೇ. ಅವಳ ಹೆಸರು 'ಗಂಗಾದೇವಿ'. ಇವಳು ವಿಜಯನಗರದ ಪ್ರಖ್ಯಾತ ಅರಸನಾದ ಬುಕ್ಕರಾಯನ ಸಾಕ್ಷಾತ್ ಸೊಸೆ, ಸಾರಾಂಶ:- ಕನ್ನಡಿಗರಾದ ಕರ್ನಾಟಕ ವರಕವಿಗಳನ್ನು ನಿತ್ಯದಲ್ಲಿ ಸ್ಮರಿಸಿ ಅವರ ಅಡಿಯಲ್ಲಿ ಕುಳಿತು, ಈಗಿನ ಕವಿಗಳು ಕವಿತೆಯ ಸ್ಫೂರ್ತಿ ಯನ್ನು ಪಡೆಯಬೇಕು!
ಪಂತ, ಮುಕೇಶ್ವರರು, ಕೃಷ್ಣದೇವರಾಯನೇ ನಮ್ಮ ಅಕಬರನು, ಹೊನ್ನಮ್ಮ ಗಿರಿಯಮ್ಮ ಇವರೇ ಮುಕ್ತಾಬಾಯಿ ಮಾರಾಬಾಯಿಯವರು, ವಿಜಯಮಹಾ ದೇವಿ, ಮೈರಳದೇವಿಯವರೇ ನಮ್ಮ ತಾರಾಬಾಯಿ ಅಹಲ್ಯಾಬಾಯಿಯವರು, ಅಕ್ಕಾದೇವಿ, ಕಿತ್ತೂರಿನ ಚನ್ನಮ್ಮ ಇವರೇ ನಮ್ಮ ಝಾಂಸಿ ಲಕ್ಷ್ಮಿ ಬಾಯಿಯವರು. ವಾಚಕರೇ, ಈ ವಿಧವಾಗಿ ನಮ್ಮ ಪ್ರಾಚೀನ ಇತಿಹಾಸವು ಮಹಾಪುರುಷರಿಂದಲೂ, ಮಹಾ ಸತಿಯರಿಂದಲೂ ತುಂಬಿಕೊಂಡಿದ್ದು, ಕನ್ನಡಿಗರಾದ ನಮಗೆ ಮಾತ್ರ ಅದು ಕಾದಂಬರಿಯಂತೆ ಕಾಣುತ್ತಿರುವುದು ಎಂಥ ದೈವದುರ್ವಿಲಾಸವು ! ಈ ನಿಮ್ಮ ವಿಭೂತಿಗಳ ನಾಮಾವಳಿಯನ್ನು ಕೇಳಿ ಕನ್ನಡಿಗರೇ ಇನ್ನಾದರೂ ಕಣ್ಣೆರಿಯಿರಿ!
ನಮ್ಮ ಕರ್ನಾಟಕದ ಅರಸರು ಈ ದೇಶದಲ್ಲಿ ಮಾತ್ರವೇ ಪ್ರಖ್ಯಾತರೆಂತಲ್ಲ. ಅವರು ಇರಾಣ ಮುಂತಾದ ಪರದೇಶದ ಚಕ್ರವರ್ತಿಗಳ ಕಡೆಗೆ ಕೂಡ ತಮ್ಮ ರಾಯಭಾರಿಗಳನ್ನು ಕಳುಹಿಸುತ್ತಿದ್ದರೆಂದು ಹೇಳಿದರೆ ಕನ್ನಡಿಗರಿಗೆ ಅದು ಕನಸಿನಂತೆ ಭಾಸವಾಗಬಹುದು, ಆದರೆ ಕನ್ನಡಿಗರೇ ! ಅದು ಕನಸಲ್ಲ. ಈ ಪುಲಿಕೇಶಿಯೇ ತನ್ನ ರಾಯಭಾರಿಗಳನ್ನು ಇರಾಣದ ಅರಸರ ಕಡೆಗೆ ಕಳುಹಿಸಿದ್ದನು. ಅಲ್ಲದೆ, ಇರಾಣದ ಅರಸನು ತನ್ನ ರಾಯಭಾರಿಗಳನ್ನು ನಮ್ಮ ಬಾದಾಮಿಯ ಪುಲಿಕೇಶಿಯ ಒಡೋಲಗಕ್ಕೆ ಕಳುಹಿದ್ದನು. ಇದರ ಪ್ರತ್ಯಕ್ಷ ಚಿತ್ರವು ಉತ್ತರದಲ್ಲಿರುವ ಅಜಂತೆಯ ಗವಿಯೊಳಗೆ ಈಗಲೂ ಸ್ಪಷ್ಟವಾಗಿ ಕಂಗೊಳಿಸುತ್ತಿದೆ. ಕನ್ನಡಿಗರು ಆ ತಮ್ಮ ಸಾರ್ವಭೌಮನ ಚಿತ್ರವನ್ನು ಒಮ್ಮೆಯಾದರೂ ಕಣ್ಣಾರೆ ಕಂಡು ಧನ್ಯರಾಗಬಾರದೇ ? (ಆ ಭಾವಚಿತ್ರವನ್ನು ಇಲ್ಲಿ ಕೊಟ್ಟಿರುವೆವು. ಯಾವನೋ ದುಷ್ಟನಿಂದ ಪುಲಿಕೇಶಿಯ ಅಲ್ಲಿಯ ಮುಖವು ವಿಕೃತನಾಡಲ್ಪಟ್ಟಿದೆ!) ಸುಮಾರು ೧೩೦೦ ವರ್ಷಗಳ ಹಿಂದಿನ ಇಂಥ ಹಳೆಯ ಚಿತ್ರವು ಕರ್ನಾಟಕರಿಗೆ ದೊರೆತಿದ್ದು ಅವರ ಮಹತ ಪುಣ್ಯವಲ್ಲವೇ !
ನಾದ ಕೃಷ್ಣನೆಂಬೊಬ್ಬ ರಾಷ್ಟ್ರಕೂಟದ ಅರಸನು ಕಟ್ಟಿಸಿದನೆಂದರೆ, ಅಹುದೋ, ಅಲ್ಲವೋ, ಎಂದು ನಿಮ್ಮ ಮನಸ್ಸು ಸಂಶಯಗ್ರಸ್ತವಾಗಬಹುದಲ್ಲವೇ! ಬಾದಾಮಿಯ ಮೇಣಬಸ್ತಿಗಳೂ, ಕಾರ್ಲೆಯ ಅತ್ಯಂತ ಮನೋಹರವಾದ ಚೈತ್ಯಾಲಯವೂ, ಅಜಂತೆಯೊಳಗಿನ ನಿತಾಂತ ಸುಂದರವಾದ ಚಿತ್ರಗಳೂ, ಇವೆಲ್ಲವೂ ನಿಮ್ಮ ಕನ್ನಡನಾಡಿನ ಕಲ್ಲುಕುಟಿಗರ ಕೈಗಾರಿಕೆಗಳೇ ! ಕರ್ನಾಟಕದೊಳಗಿನ ಶ್ರವಣಬೆಳಗುಳದ ಗೋಮಠೇಶ್ವರನ ಭವ್ಯವೂ ರಮಣೀಯವೂ ಆದ ಮೂರ್ತಿಯು ಸಾವಿರಾರು ಮೈಲುಗಳ ಮೇಲಿರುವ ಜಪಾನ ಮತ್ತು ಚೀನ ದೇಶಗಳ ಜನರನ್ನು ಸಹ ಸೂಜಿಗಲ್ಲಿನಂತೆ ಎಳೆಯ ಹತ್ತಿರುವುದಿಲ್ಲವೇ! ಲಂಡನ್ನಿನಷ್ಟು ವಿಸ್ತೀರ್ಣವಾದ ಪಟ್ಟಣವು ಲೋಕದಲ್ಲಿ ಇದ್ದಿಲ್ಲವಂತಲೇ ನಿಮ್ಮ ತಿಳಿವಳಿಕೆಯಲ್ಲವೇ! ಆದರೆ ಈಗ ಹಾಳಾಗಿರುವ ವಿಜಯನಗರದೊಳಗೆ ಹಿಂದಕ್ಕೆ ೫೦-೬೦ ಲಕ್ಷ ಜನರು ವಾಸಿಸುತಿದ್ದರೆಂದು ವಿದ್ವಾಂಸರು ತರ್ಕಕಟ್ಟುತ್ತಾರೆ. ನೋಡಿದ ಕಡೆಯಲ್ಲೆಲ್ಲ ವಿಶಾಲವಾದ ರಾಜಬೀದಿಗಳಿಂದಲೂ, ಉನ್ನತವಾದ ಗೋಪುರಗಳಿಂದಲೂ, ಸುಂದರವಾದ ಗುಡಿಗಳಿಂದಲೂ, ಭವ್ಯವಾದ ಕೋಟೆ ಕೊತ್ತಳಗಳಿಂದಲೂ, ಜೀರ್ಣವಾದ ರಮ್ಯೋದ್ಯಾನಗಳಿಂದಲೂ ತುಂಬಿಕೊಂಡಿದ್ದು, ಈಗ ಕುರುಹಿಗೆ ಮಾತ್ರ ಉಳಿದಿರುವ ಆ ಕರ್ನಾಟಕ ರಾಜಧಾನಿಯನ್ನು ನೋಡಿ, ಕಣ್ಣೀರು ಸುರಿಸದ ಪಾಪಿ ಯಾರು!
ಕನ್ನಡಿಗರೇ, ನಿಮ್ಮ ಭಾಗ್ಯವನ್ನು ಎಷ್ಟೆಂದು ವರ್ಣಿಸಬೇಕು! ಜಗದೊಳಗೆಲ್ಲ ಸೌಂದರ್ಯಾತಿಶಯದಿಂದ ಮೆರೆಯುತ್ತಿರುವ ಬೇಲೂರಿನ ಚನ್ನಕೇಶವನ ದೇವಾಲಯವನ್ನೂ, ಒಂದೇ ಸಮವಾಗಿ ೮೬ ವರ್ಷಗಳವರೆಗೆ ಕಟ್ಟಿದರೂ ಪೂರ್ಣವಾಗದೆ ಇರುವ ಅತ್ಯಂತ ಸುಂದರವಾದ ಹೊಯ್ಸಳೇಶ್ವರನ ಗುಡಿಯನ್ನೂ, ನಿಮ್ಮ ಕನ್ನಡಿಗರ ಅಲ್ಲಿಯ ಅತಿ ಕುಶಲವಾದ ಕುಸುರು ಕೆಲಸವನ್ನೂ ಕಂಡು, ಆ ಕಾಲದ ವೈಭವವನ್ನೂ, ಬುದ್ದಿವಂತಿಕೆಯನ್ನೂ ನೆನಿಸಿ ಉಸುರ್ಗರೆಯದ ಮನುಷ್ಯನಾವನು! ಈ ಗುಡಿಗಳು ಸೌಂದರ್ಯದ ಕಳಸಗಳೆಂದರೂ ಸಲ್ಲುವುದು.
ಗಳೆಲ್ಲವೂ ಬಹುಮಟ್ಟಿಗೆ ಬದಲಾಯಿಸಿ ಹೋಗಿವೆ. ಉತ್ತರ ಹಿಂದುಸ್ಥಾನದ ಅಶೋಕ, ಚಂದ್ರಗುಪ್ತ ಆಡುತ್ತಿದ್ದ ಭಾಷೆಯೇ ಬೇರೆ, ಅವರ ಈಗಿನ ಪೀಳಿಗೆಯವರು ಆಡುವ ಭಾಷೆಯೇ ಬೇರೆ. ಮರಾಠರಿಗೂ ಬಂಗಾಲಿಯರಿಗೂ ತಮ್ಮ ದೇಶಗಳ ಪ್ರಾಚೀನ ರಾಜರು ಮರಾಠಿ ಬಂಗಾಲಿ ಭಾಷೆಯನ್ನೇ ಆಡುತ್ತಿದ್ದರೆಂದು ಹೇಳಲಿಕ್ಕೆ ಬರಲಾರದು, ಆದರೆ ಕನ್ನಡಿಗರು ಮಾತ್ರ ನಮ್ಮ ಹಿಂದಿನ ಅರಸರೆಲ್ಲರೂ ಈ ಕನ್ನಡ ಭಾಷೆಯನ್ನೇ ಆಡುತ್ತಿದ್ದರೆಂದು ಎದೆ ತಟ್ಟಿ ಹೇಳಬಹುದು, ಈ ತರದ ಅಭಿಮಾನವು ಮತ್ತಾರಿಗೆ ಶಕ್ಯವು?
ಇನ್ನು, ಕರ್ನಾಟಕದೊಳಗೆ ಒಂದು ಕಾಲಕ್ಕೆ ಮೆರೆದು ಕರ್ನಾಟಕಕ್ಕೆ ತಿಲಕ ಪ್ರಾಯವಾಗಿರುವ ಪಟ್ಟಣಗಳ ವಿಷಯವನ್ನು ಹೇಳಿ ಈ ಪ್ರಕರಣವನ್ನು ಮುಗಿಸುವೆವು, ಇವುಗಳ ಪ್ರಾಚೀನ ವೈಭವವನ್ನು ಲಕ್ಷಕ್ಕೆ ತಂದುಕೊಂಡರೆ, ಇವಕ್ಕೆ ಐತಿಹಾಸಿಕ ಕ್ಷೇತ್ರಗಳೆಂತಲೇ ಹೇಳುವುದು ಯುಕ್ತವಾಗುವುದು. ಧಾರ್ಮಿಕ ದೃಷ್ಟಿಯಿಂದ ಕ್ಷೇತ್ರ ತೀರ್ಥಗಳಿಗೆ ಎಷ್ಟು ಪ್ರಾಶಸ್ತ್ಯವೋ, ರಾಜಕೀಯ ದೃಷ್ಟಿಯಿಂದಲೂ ಇವಕ್ಕೆ ಅಷ್ಟೇ ಪ್ರಾಶಸ್ತ್ಯವು. ಆದುದರಿಂದ ಕನ್ನಡಿಗರೇ, ನಿಮ್ಮ ಐತಿಹಾಸಿಕ ಕ್ಷೇತ್ರಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಳಖೇಡ, ಕಲ್ಯಾಣ, ಅಜಂತಾ, ವೇರಳ, ಹಳೇಬೀಡ (ದ್ವಾರಸಮುದ್ರ), ಲಕ್ಕುಂಡಿ, ಹಂಪ, ಇವೇ ಮುಂತಾದ ದರ್ಶನೀಯವಾದ ಸ್ಥಳಗಳನ್ನು ನೋಡಿ ನಿಮ್ಮ ಕಣ್ಣುಗಳ ಪಾರಣೆಯನ್ನು ತೀರಿಸಿಕೊಳ್ಳಿರಿ; ಮತ್ತು ಕೃತಕೃತ್ಯರಾಗಿರಿ.