ನಾಸ್ತಿಕ ಕೊಟ್ಟ ದೇವರು/ಒಂಟಿ ನಕ್ಷತ್ರ ನಕ್ಕಿತು

ವಿಕಿಸೋರ್ಸ್ ಇಂದ
Jump to navigation Jump to search

 

ಕಥೆ: ಹತ್ತು
ಒಂಟಿ ನಕ್ಷತ್ರ ನಕ್ಕಿತುಶುಭ ಮುಹೂರ್ತ ಸನ್ನಿಹಿತವಾಗಿತ್ತು.
ಅಡ್ಡ ಪಂಚೆಯ ಮೇಲೆ ರೇಶಿಮೆಯ ಅಂಗಿತೊಟ್ಟು, ರಾಮ ಗುಡಿಸಲಿನಿಂದ ಹೊರಬಂದ. ಮದುವೆಗೆಂದು ಹಿಂದೆ ಹೊಲಿಸಿದ್ದ ಆ ಅಂಗಿ, ಬೆಳೆದ ಮೈ ಮಾಂಸಖಂಡಗಳಿಗೆ ಹೊದಿಕೆಯಾಗಿ ಈಗ ಬಿರಿಯುತ್ತಿತ್ತು. ತುಂಬು ಮುಖಕ್ಕೆ ಶೋಭೆಯಾಗಿತ್ತು ಕುಡಿಮೀಸೆ. ನೀಳವಾಗಿತ್ತು ತಲೆಗೂದಲು.
ಅಲ್ಲಿಯೇ ಹಿತ್ತಿಲ ಬೇಲಿಗೊರಗಿ ನಿಂತಿದ್ದ ಲಚ್ಚಿ, ನೋವಿನ ಆಯಾಸದ ನಿಟ್ಟುಸಿರನ್ನು ಬಿಟ್ಟು, ಕಾತರ ತುಂಬಿದ ಧ್ವನಿಯಲ್ಲಿ ಕೇಳಿದಳು:
"ನೀವೂ ಓಗ್ತೀರಾ ?"
"ಊಂ. ಬಿರ್ನೆ ಬಂದ್ಬಿಡ್ತೀವಿ," ಎನ್ನುತ್ತ ಆತ, ಗುಡಿಸಲ ಕಡೆಗೆ ನೋಡಿ, ಅಸಹನೆಯ ಸ್ವರದಲ್ಲಿ ಕರೆದ:
"ಅಪ್ಪಾ! ಒತ್ತಾಗೋಯ್ತು! ಒರಡಾನ!"
ಹೊರಬಂದವನು ಮನೆಯ ಹಿರಿಯ. ಮಾಸಿದ ಪಂಚೆ. ಹರಕಲು ಅಂಗಿಯ ಮೇಲಿದ್ದ ಹಳೆಯ ಕೋಟು. ಇಳಿಮುಖವಾಗಿದ್ದ ಬಿಳಿಮೀಸೆ. ಸುಕ್ಕುಗಳನ್ನು ಆವರಿಸಿದ್ದ ನರೆತ ಗಡ್ಡ. ತೆಳ್ಳಗಾಗಿದ್ದ ತಲೆಗೂದಲನ್ನು ಮುಚ್ಚಿದ ರುಮಾಲು. ಅಪನಂಬಿಕೆಯೆ ನೆಟ್ಟನೋಟವಾಗಿ ಹೆಪ್ಪುಗಟ್ಟಿದ್ದ ಕಣ್ಣುಗಳು. ಎಕ್ಕಡ ಮೆಟ್ಟಿ ಆತನೆಂದ:
"ನಡಿ."
ಸೊಸೆಯನ್ನು ಹುಡುಕಿಬಂದ ಮನೆಯೊಡತಿ, ಬಾಗಿಲಲ್ಲೆ ತಡೆದು ನಿಂತಳು. ಮನೆಬಿಟ್ಟು ಹೊರಟಿದ್ದ ಮಗನನ್ನೂ ತನ್ನವನನ್ನೂ ಕಂಡಳು:
ಅವಳನ್ನು ದಿಟ್ಟಿಸಿ ಹಿರಿಯನೆಂದ:
"ಅದೇನೈತೋ ನೋಡ್ಬರ್ತೀನಿ."
...ಬಿಸಿಲು. ಸೂರ್ಯ ನೆತ್ತಿಯಾಚೆಗೆ ಆಗಲೆ ಸರಿದಿದ್ದರೂ ಚುರುಕುಮುಟ್ಟಿಸುತ್ತಿದ್ದ ಖಾರಬಿಸಿಲು. ಬೇಸಗೆಯೇನೊ ಮುಗಿಯುತ್ತ ಬಂದಿತ್ತು. ಆದರೆ, ಮೋಡಗಳ ಸುಳಿವಿರಲಿಲ್ಲ. ಹಾದಿ ನಡೆಯುತ್ತಿದ್ದ ಹಿರಿಯನನ್ನು, ಎಂದಿನ ಸಂಕಟವೇ ಇಂದೂ ಬಾಧಿಸಿತು. ಮತ್ತೂ ಹತ್ತಾರು ದಿನ ಮಳೆ ಬರದೇ ಹೋದರೆ? ಈ ಸಲದ ಬಿತ್ತನೆಯ ಗತಿ? ವರ್ಷಕ್ಕೊಂದೇ ಆದ ಪೈರಿನ ಗತಿ? ... ಗುಡ್ಡದ ಮರೆಯಲ್ಲಿ ಕ್ಷಾಮರಾಕ್ಷಸ ಹೊಂಚುಹಾಕುತ್ತ ಅಡಗಿ ಕುಳಿತಿದ್ದ. ತಾಯ್ನೆಲ ಭಣಗುಡುತ್ತಿತ್ತು. ಪರೆಕಳಚಿದ ಹಾವು, ಪ್ರಕೃತಿ. ಉದ್ದಕ್ಕೂ ಒರಗಿತ್ತು ಆ ಶ್ವೇತ ಕವಚ. ಪುಡಿಪುಡಿಯಾಗಿದ್ದ ಕಣಕಣವಾಗಿದ್ದ ಕಾಲುಹಾದಿ. ದಾರಿ ತುಳಿಯುತ್ತ ಆ ಬಿಳಿಯ ಗೆರೆಯನ್ನು ಹಿರಿಯ ನೋಡಿದ. ದೃಷ್ಟಿಯೊಡನೆ ನಡುಬಾಗಿತು. ಹೃದಯದ ಭಾರದಿಂದ ತಪ್ಪಿಸಿಕೊಂಡ ಬಿಸಿಯುಸಿರು ದೀರ್ಘವಾಗಿ ಹೊರಬಂತು.
ಹಿರಿಯನ ಸಂಕಟವನ್ನು ಗ್ರಹಿಸಿದ ರಾಮ, ಕನಸಿನ ಲೋಕದಿಂದ ಕೆಳಕ್ಕಿಳಿದು ಬಂದ. ಎಂದಿಗಿಂತ ಭಿನ್ನವಾದ ಆ ದಿನದಲ್ಲೂ ಆ ಹೊತ್ತಿನಲ್ಲೂ ಹಾಗಿರಬೇಕೆ ತನ್ನ ತಂದೆ?
"ಏನಪ್ಪಾ ಅದು?"
"ಈ ದುರ್ಗತಿ ನಮಗೆ ಬಂತಲ್ಲಾ ಅಂತ ಯೋಚಿಸ್ತಿದ್ದೆ, ಮಗಾ."
"ಸಾಕು, ಸಾಕು! ನಿನ್ನದು ಯಾವಾಗಲೂ ಒಂದೇ ಹಾಡು!"
ಬಿಸಿಲಿನಷ್ಟೇ ಬಿಸಿಯಾಗಿದ್ದ ಉಗುಳನ್ನು ಹಿರಿಯ ನುಂಗಿದ. 'ಉಚ್ಮುಂಡೆ!' ಎಂದುಕೊಂಡ ಮನಸಿನಲ್ಲೆ. 'ಒಂದೇ ಹಾಡು'... ಹೂಂ ... ಹೀಗಾಗಬಹುದೂಂತ ಯಾರಿಗೆ ಗೊತ್ತಿತ್ತು? ತನ್ನ ಹಿರಿಯ ಮಗನಿಗೇ ಈ ರೀತಿ ಹುಚ್ಚು ಹಿಡಿಯುವುದೆಂದರೆ? ಸಾಲದುದಕ್ಕೆ, ಶಹರದಲ್ಲಿ ಓದುತ್ತಿದ್ದ ಎರಡನೆಯ ಮಗ ಕೃಷ್ಣನೂ ಕೂಡಾ...
'ಕಲಿಗಾಲ...'

ಕೆಟ್ಟ ಸುದ್ದಿಯನ್ನು ಕೇಳಿದ ಆ ದಿನ, ತನ್ನ ಓರಗೆಯವರೆಷ್ಟೋ ಜನ ನಕ್ಕಿದ್ದರು.
—'ಆದರೆ ಹೋದರೆ, ಅಜ್ಜಿಗೆ ಮೀಸೆ ಬಂದರೆ...!'
—'ಐ—ಬಿಡಿ !'
ಗಾಳಿಯಲ್ಲಿ ಸುದ್ದಿ, ತೇಲಿ ಬಂದಿತ್ತು–ತೇಲಿ ಹೋಗಿತ್ತು.
ಸ್ವಲ್ಪ ಸಮಯದ ಅನಂತರ, ಅದನ್ನೆಲ್ಲರೂ ಮರೆತಿದ್ದ ಹೊತ್ತಿಗೆ, ಹೊಸ ಜನ ಅಲ್ಲಿಗೆ ಬಂದರು—ಹ್ಯಾಟು ಬೂಟು ತೊಟ್ಟ ಅಪರಿಚಿತರು. ಅವರ ಹಿಂದೂ ಮುಂದೂ ಓಡಾಡಿದರು ಗ್ರಾಮಾಧಿಕಾರಿಗಳು.
—' ಹಳ್ಳಿಯನ್ನು ಬಿಟ್ಟು ಹೋಗ್ಬೇಕು.'
—[' ಆಹಾ! ಎಲ್ಲಿಗೆ? ಯಾರಪ್ಪನ ಮನೆಗೆ? ']
—' ಏ ಗೌಡ! ನೀನೊಬ್ಬನೇ ಅಲ್ಲ ಕಣಯ್ಯ!'
— ' ರೀ, ಗೌರವ ಕೊಟ್ಟು ಮಾತನಾಡಿ.'
—' Oh! I see!'
—' ಒಟ್ಟು ಹನ್ನೆರಡು ಹಳ್ಳಿ ಖಾಲಿಯಾಗ್ತವೆ.'
—' ಅನ್ನೆರಡು ಅಳ್ಳಿ?'
—' ಹೂ. ದೇಸಾಯರು, ಜೋಡೀದಾರ್ರು, ಇನಾಂದಾರ್ರು— ಎಲ್ರೂ ಒಪ್ಕೊಂಡಿದಾರೆ. ಸಣ್ಣ ಪುಟ್ಟ ಆಸ್ತಿ ಪಾಸ್ತಿ ಇರೋ ನಿಮ್ಮದೇನಪ್ಪ ಇನ್ನು?'
ಮಹಾ ಬುದ್ಧಿವಂತರೇ ಸರಿ. ಚತುರೋಪಾಯಗಳೂ ಗೊತ್ತಿದ್ದುವು ಅವರಿಗೆ. ಪರಿಹಾರ- ಹಣ. 'ಬೇರೆ ಕಡೆ ಭೂಮಿ ಕೊಂಡ್ಕೋಬಹುದು.' ಅಥವಾ ಹೊಲಕ್ಕೆ ಬದಲು ಹೊಲ. [ಬಂಜರು ಭೂಮಿಗೇನು ಬರಗಾಲ?] ಸಾವಿರಾರು ಜನರಿಗೆ ಕೆಲಸ ಬೇರೆ.
"ಕೆಲಸ? ಎಂಥ ಕೆಲಸ?”
"ಕೂಲಿ ಕೆಲಸ."
"ಕೂಲಿ—? ನಾವು ರೈತರು. ಕೂಲಿ-ನಾಲಿ ಮಾಡೋವರಲ್ಲ!”
"ಈ ರೈತರಿಗೆ ಒಂದೂ ಅರ್ಥವಾಗೋದಿಲ್ಲ."
"ಹುಂ!"
"ಈ ಹಳ್ಳಿಗಳೆಲ್ಲ ನೀರಿನ ಕೆಳಗೆ ಮುಳುಗುತ್ವೆ ಗೌಡರೆ!”
"ನೀರಿನ ಕೆಳಗೆ? ಮುಳುಗುತ್ವೆ?”
“ಹೌದು: ಸಾವಿರ ಎಕರೆ ಮುಳುಗಿದರೇನ್ರಿ? ಲಕ್ಷ ಎಕರೆ ಭೂಮಿಗೆ ನೀರು ಸಿಗುತ್ತೆ. ಅಷ್ಟೇ ಅಲ್ಲ—”
"ಸಾಕು ! ಸಾಕು !"
ಸಿಡಿಮಿಡಿಗೊಂಡ ತಾನು ದಡದಡನೆ ಅಲ್ಲಿಂದ ಹೊರಟುಬಿಟ್ಟಿದ್ದ. ರಾಮ ಮಾತ್ರ, ಆ ಜನರ ಜತೆಯಲ್ಲೇ, ಮಾತುಗಳಿಗೆ ಕಿವಿಗೊಡುತ್ತ, ನಿಂತಿದ್ದ. ಹುಚ್ಮುಂಡೆ! ಕತ್ತಲಾಗುವ ಹೊತ್ತಿಗೆ ಮನೆಗೆ ಬಂದ.
"ಅಲ್ಲೇನೊ ಮಾಡ್ತಿದ್ದೆ ಇಷ್ಟೊತ್ತು?”
"ಇಕಾ, ಕಾಜಗ ಕೊಟ್ಟವ್ರೆ. ಇದರೊಳಗೆಲ್ಲಾ ಪಿರಿಂಟ್ ಮಾಡೈತೆ.”
"ಪಿರಿಂಟ್ ಮಾಡೈತೆ — ಮಣ್ಣು !”

****

ಮುಂದೆ ಆಗಬೇಕಾಗಿದ್ದುದು ಆಗಿಯೇಹೋಯಿತು. ರಾಮ ಪಲ್ಲವಿ ನುಡಿದ :
"ನಡಿ, ಓಗಾನ. ಎಲ್ಲಾರಿಗಾಗೋದು ನಮಗೂ ಆಗ್ತೇತೆ."
ಹೊಲವನ್ನು ಮಾರಲಿಲ್ಲ ನಾನು. ಬದಲಿ ಭೂಮಿಯನ್ನು ಕೊಟ್ಟರು. ಮೂರೆಕರೆಗೆ ಮೂರೆಕರೆ. ನದಿಯ ದಂಡೆಯಲ್ಲಿ ಅಲ್ಲ. ಕೆಳಕ್ಕೆ, ಒಳಕ್ಕೆ.
ಹುಟ್ಟಿ ಬೆಳೆದ ಹಳ್ಳಿಯ ಹನುಮಂತರಾಯನ ಗುಡಿಯ ಮುಂದೆ ನಿಂತು ನಾನೆಂದೆ:
"ಓಗ್ಬರ್ತೀವಪ್ಪಾ. ಅಳ್ಳಿ ಮುಣಿಗಿಸ್ಬೌದು. ನಿನ್ನನ್ನ ಮುಣಿಗಿಸೋ ಕಾತದಾ? ಮನಿಸ್ಯರು ತಿಳೀದೆ ತಪ್ಮಾಡ್ತಾ ಅವರೆ. ಕ್ಸಮ್ಸಪ್ಪಾ ...”
ವಲಸೆ ಬಂದವರನ್ನು ಅಣಕಿಸಿತು ಬರಿದಾಗಿದ್ದ ಹೊಸ ಮಣ್ಣು. ಆ ನೆಲಕ್ಕೆ ಕೈ ಬಡೆದು, ಅಂಥ ಸ್ಥಿತಿಗೆ ನಮ್ಮನ್ನು ತಂದವರಿಗೆ ನಾನು ಶಾಪವಿತ್ತೆ; ಹಣೆ ಚಚ್ಚಿಕೊಂಡು ಮನದಣಿಯೆ ಅತ್ತೆ.
...ಆ ದಿವಸದಿಂದ ಇವತ್ತಿನವರೆಗೆ—ಈ ಮೂರು ವರ್ಷಗಳ ಕಾಲ—ಏನನ್ನೆಲ್ಲಾ ಕಂಡೆ ನಾನು!
ಮೊದಮೊದಲು, ಎಲ್ಲೋ ಕೇಳಿದ ಯಾವುದೋ ಸುದ್ದಿ ಎನ್ನುವ ಹಾಗೆ - ಬಳಿಕ ಉತ್ಸಾಹದಿಂದ - ನನ್ನ ಮಗ ರಾಮನೇ ಬಂದು ಹೇಳುತ್ತಿದ್ದ:
"ಎಲ್ರೂ ಬಂದ್ಬಿಟ್ಟವ್ರೆ. ನದೀಲಿ ತಳ ಎಷ್ಟು ಆಳಕ್ಕೈತೆ ಅಂತ ಭೈರಿಗೆ ಕೊರೆದು ನೋಡ್ತವ್ರೆ. ದೊಡ್ಡೊಡ್ಡ ಲಾರಿಗ್ಳು ಬಂದವೆ—ಅತ್ತಿಪ್ಪತ್ತು. ಮಿಸ್ನುಗಳು ಯಂತ್ರಗಳೂ ಬಂದ್ಬಿಟ್ಟವೆ. ಅದೇನೋ ಕ್ರೇನೂಂತ ತಗೊಂಡ್ಭಂದವ್ರೆ ಅಪ್ಪಾ. ತೆಂಗಿನಮರದಂಗೆ ಎತ್ತರಕ್ಕೈತೆ. ಎಂಗ್ಬೇಕಾದರೂ ತಿರುಗ್ತೇತೆ. ಕೈಯಿಂದ ಕಡ್ಡೀನ ಇಂಗೆತ್ತಿ ಅಂಗ್ಮಡ್ಗಾಕಿಲ್ವಾನಾವು?— ಅಂಗೇನೆ, ಎಸ್ಟ್ ಬಾರದ್ಸಾಮಾನಿದ್ರೂ ಒಂದ್ಕಡೆಯಿಂದ ಇನ್ನೊಂದ್ಕಡೆಗಿಡ್ತೇತೆ."
ನಮ್ಮ ನದಿ. ಬೇಸಗೆಯಲ್ಲಿ ಕಿರುಬೆರಳಿನಷ್ಟು ನೀರು. ಮಳೆ ಬಂದಾಗ ಕೆರಳಿದ ಮಹಾಕಾಳಿ. ಏನಾದರೇನು? ಮನುಷ್ಯ ಮಾಡುವ ತಪ್ಪಿಗೆ, ಅದು ದೇವರು ಕೊಡುವ ಶಿಕ್ಷೆ. ಅಂಥ ದೇವರ ಶಕ್ತಿ ಯೊಡನೆ ಈ ಜನರ ಸೆಣಸಾಟ. ನಾಸ್ತಿಕರು! ಹುಂ!
ರಾಮನೆಂದ :
"ಹಾಫೀಸರ್ ಗಳಲ್ಲಿ ಬಿರಾಮರು, ಲಿಂಗವಂತರು, ಒಕ್ಕಲಿಗರು, ಸಾಬರು, ಕಿರಸ್ತಾನರು—ಎಲ್ಲ ಜಾತಿಯವರೂ ಅವರೆ. "
ಕಟ್ಟುನಿಟ್ಟಾಗಿ ನಾನೆಂದೆ :
" ಅವರ ಜತೆ ನೀನು ಸೇರ್ಕೋಬ್ಯಾಡ. "
ದಿನ ಕಳೆದ ಹಾಗೆ ಜನರೆಲ್ಲ ಅವರ ಜತೆ ಸೇರಿದರು. ಕೆಲಸದ ಜಾಗಕ್ಕೆ ಅಂಟಿಕೊಂಡೇ ಊರು ಹುಟ್ಟಿತು. ಎಲ್ಲೆಲ್ಲಿಂದಲೊ ಜನರು ಬಂದರು. ಸಾವಿರ—ಹತ್ತು ಸಾವಿರ— ಇಪ್ಪತ್ತು ಸಾವಿರ ಜನ. ಹೆಣ್ಣಾಳು, ಗಂಡಾಳು. ಹಟ್ಟಿಗಳನ್ನು ಕಟ್ಟಿದರು. ಜತೆಯಲ್ಲೆ ಹೋಟೆಲು ಬಂತು... ದಿನಸಿನಂಗಡಿ, ಹೆಂಡದಂಗಡಿ ... ಮಣ್ಣು ಅಗೆಯುವವರು, ಕಲ್ಲು ಒಡೆಯುವವರು ... ಮನುಷ್ಯರು, ಯಂತ್ರಗಳು. ಕಿವಿ ಕಿವುಡಾಗುವ ಹಾಗೆ ಹಗಲೆಲ್ಲ ಸದ್ದು. ಮಣ್ಣುತೋಡಿ ಕಲ್ಲಿರಿಸಿದರು. ಕಲ್ಲು, ಗಾರೆ; ಕಲ್ಲು ಗಾರೆ.
'ಮಳೆ ಬರಲಿ, ಆಗ ತಿಳೀತದೆ,' ಎಂದುಕೊಂಡೆ.
ಮಳೆ ಬಂತು. ಕಟ್ಟಿದ್ದು ಮಿಸುಕಲಿಲ್ಲ.
ನವರಾತ್ರಿಯ ರಜೆಯಲ್ಲಿ ಮನೆಗೆ ಬಂದ ಕೃಷ್ಣನೆಂದ :
" ಅಣೆಕಟ್ಟು ಕಟ್ಟಿದ್ಮೇಲೆ ಮಹಾಪೂರ ಬರೋದಿಲ್ಲ. ಕಾಲಿವೆ ಕಡಿದು, ಊರೂರಿಗೆ ನೀರು ತಗೊಂಡು ಹೋಗ್ತಾರೆ. ಎಲ್ಲೆಲ್ಲೂ ಬೆಳೆ ಬೆಳೀತದೆ. ವಿದ್ಯುಚ್ಛಕ್ತಿ ಉತ್ಪಾದಿಸ್ತಾರೆ. ಮನೆ ಮನೆಗೆ ದೀಪ ಬರ್ತದೆ. ಕಾರ್ಖಾನೆಗಳು ಹುಟ್ಕೋತವೆ. ನದೀಲಿ ದೊಡ್ಡ ದೊಡ್ಡ ದೋಣಿಗಳು ಸಂಚಾರ ಮಾಡ್ತವೆ."
ರೇಗುತ್ತ ನಾನೆಂದೆ:
"ನಮ್ಮ ಅಳ್ಳಿ ಏನಾಗ್ತೇತೆ?”
"ಹಳ್ಳಿ ಮುಳುಗೋಗ್ತದೆ.”
"ಅ೦ಗ೦ತೀಯಾ ನೀನೂ ?”
"ಈ ಪುಸ್ತಕದಲ್ಲಿ ಬರೆದವರೆ.”
"ಉಚ್ಮುಂಡೆ ! ನಿನ್ನ ಪುಸ್ತಕನ ಸುಡ್ತು!”
ಹುಡುಗರು ಮೊದಲು ಕೆಟ್ಟರು. ವಯಸ್ಸಾದವರು ಆಮೇಲೆ. ಲೋಕ ತಲೆ ಕೆಳಗಾಗಿ ಹಾಳಾಗುತ್ತಿದ್ದುದನ್ನು ನೋಡಲು ನಾನೊಬ್ಬನೆ ಉಳಿದೆ ಎನಿಸಿತು...
ಭೂಮಿತಾಯಿ ಮುನಿದಳು. ಅರೆ ಹೊಟ್ಟೆ ಕೆಡವಿದಳು.
... ವರ್ಷ ಒಂದಾಯಿತು. ಅನಂತರವೂ ಒ೦ದು. ನದಿಗೆ ಅಡ್ಡವಾಗಿ ಮರಳಿನ ಗೋಡೆ ಕಟ್ಟಿ, ಅದರ ಹಾದಿಯನ್ನೆ ಬದಲು ಮಾಡಿದರು. ಎರಡೂ ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತಿದ್ದ ಕೆರೆಯಾಯಿತು. ನದಿ ಆಳವಾಯಿತು.
ಆಗ ಬಲ್ಲಿದನಾಗಿದ್ದ ರಾಮನನ್ನು, ಕೆಣಕಿ ಕೇಳಿದೆ:
"ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”
"ಇನ್ನೇನು ಮುಣುಗೋಗ್ತವೆ.”
"ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಆಮ್ಯಾಕೆ ಯೇಳ್ತೀನಿ !"
ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರ ಸಾಗರವಾಯಿತು. ದೇವರು ತುಟಪಿಟ್ಟೆನ್ನಲಿಲ್ಲ.
ನನ್ನೊಳಗಿನದೇನೋ ಕುಸಿದುಬಿದ್ದಂತಾಯಿತು.
ನಾನು ಕಾಹಿಲೆ ಮಲಗಿದು ಆಗಲೇ . . .

****

ನಿಶ್ಯಕ್ತನಾಗಿ ಎದ್ದ ಬಳಿಕ, ಅಣೆಕಟ್ಟಿನ ಪ್ರಸ್ತಾಪವನ್ನೇ ಹಿರಿಯ ಮಾಡಲಿಲ್ಲ. ಬದುಕಿನಲ್ಲಿ ಆತ ಒಂದಿಷ್ಟಾದರೂ ಆಸಕ್ತಿ ತೋರಲು ಕಾರಣ, ಅದೇ ಮೊದಲ ಬಾರಿ ಸೊಸೆ ಲಚ್ಚಿಗೆ ನೀರು ನಿಂತುದು. ರಾಮನ ಮುಖದ ಮೇಲೆ ಆಗ ಮೂಡಿದ ಮುಗುಳುನಗೆ, ಕರಿಯ ಕಲ್ಲಿನಲ್ಲಿ ಕೊರೆದ ನಿತ್ಯ ಮಲ್ಲಿಗೆಯಾಯಿತು....
ಕಿಂವದಂತಿಯ ಕೀಚಲು ಧ್ವನಿ ಕೇಳಿಸಿತೊಮ್ಮೆ:
“ನರಬಲಿ ಕೊಡ್ತಾರಂತಪ್ಪೋ ! ಅಯ್ಯಪ್ಪೋ !
ಎಳೆಯರು—ಮೂರನೆಯವನಾದ ಒಬ್ಬ ಹುಡುಗ, ಕೊನೆಯ ಸಂತಾನವಾದ ಹುಡುಗಿ—ಮನೆಯಲ್ಲೇ ಬಂದಿಗಳಾದರು. ತುಂಬಿದ ಬಸುರಿ ಲಚ್ಚಿ, ಹಿತ್ತಲು ದಾಟಿ ಹೊರಕ್ಕಿಳಿಯಲಿಲ್ಲ.
"ಸುಮ್ಸುಮ್ನೆ ಪುಕಾರು ಉಟ್ಟಿಸ್ತಾರೆ,” ಎಂದ ರಾಮ.
ಆದರೆ, ಕೆಲಸವೆಲ್ಲ ಮುಗಿಯುತ್ತ ಬಂದಂತೆ, ಒಂದು ಯಂತ್ರದಡಿಗೆ ಬಿದ್ದ ಇಬ್ಬರು ಆಳುಗಳು ಬಲಿಯಾದಾಗ, ಜನರೆಲ್ಲ ಕ್ಷಣ ಕಾಲ ಉಸಿರು ಬಿಗಿಹಿಡಿದರು...
. . .
. . . ಅಂತೂ ಕೊನೆಗೊಮ್ಮೆ ಬಂದಿತ್ತು ಆ ಘಳಿಗೆ.
ತಂದೆಯನ್ನು ಕರೆದವನು ರಾಮನೇ.
"ನಾನ್ಯಾಕೊ ಬರ್ಲಿ?”
"ಇಲ್ಲ ಅಪ್ಪ, ನೀನು ನಿನ್ನ ಕಣ್ಣಿಂದ್ಲೇ ನೋಡ್ಬೇಕು.”
ಅದಕ್ಕೇ ಆತ ತನ್ನಾಕೆ ಹೇಳಿದ್ದ.”
"ಅದೇನೈತೋ ನೋಡ್ಬರ್ತೀನಿ."

ಅವರನ್ನು ಹಾದು ಮುಂದೆಹೋದವರು—ಓಡುತ್ತ ಹೋದವರು—ಹಲವರು. ಹುಡುಗರಿಗೆ ಯುವಕರಿಗೆ ಮುದುಕರಿಗೆ—ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ತಗ್ಗಿನಿಂದ ಮೇಲಕ್ಕೆ ನಡೆದು ಬಂದಂತೆ ಅವರ ಕಣ್ಣಿಗೆ ಬಿತ್ತು—ಸಹಸ್ರ ಜನರನ್ನು ಹೊತ್ತು ಎತ್ತರದಲ್ಲಿ ಭವ್ಯವಾಗಿ ನಿಂತಿದ್ದ ಅಣೆಕಟ್ಟು. ಮೇಲೂ ಜನರು, ಕೆಳಗೂ ಜನರು. ಒಂದೇ ಕಡೆ ನೆರೆದಿತ್ತು, ಹತ್ತೂರುಗಳ ಜಾತ್ರೆ. ನೀರಿನ ಅಲೆಗಳು, ಮಾತಿನ ಹಾಡಿನ ಅಲೆಗಳು. ಹರ್ಷೋದ್ಗಾರ, ಜಯಜಯಕಾರ. ನಗೆ—ಎಲ್ಲ ಜನರಿಂದಲೂ ಹೊರಟು, ವಿರಾಟ್ ರೂಪ ತಳೆದು, ಗಿರಿಕಂದರ ಕಾನನಗಳನ್ನು ಕುಲುಕಿ ಅಲುಗಿಸಿ ನಗಿಸುತ್ತಿದ್ದ ನಗೆ. ತಳಿರುತೋರಣಗಳು, ಬಣ್ಣದ ಕಾಗದಗಳು. ನದಿಯ ಕತ್ತಿಗೆ ನೂರು ಹಾರಗಳಾಗಿದ್ದವು, ಸೂರ್ಯನ ಕೊನೆಯ ರಶ್ಮಿಗೆ ಮಿನುಗುತಿದ್ದ ಗಾಜಿನ ದೀಪಗಳು.
ಮೇಲೆ ಹೋಗಲು ಹಾದಿಯಿರಲಿಲ್ಲ, ಜಾಗವಿರಲಿಲ್ಲ.
"ತಡವಾಗಿ ಬಂದ್ವಿ,” ಎಂದು ರಾಮ ಗೊಣಗಿದ.
"ಏನು ಕೊಳ್ಳೆ ಹೋದದ್ದು? ಇಲ್ಲೇ ಇರಾನ,” ಎಂದ ಹಿರಿಯ.
ಜಲಾಶಯದೊಳಕ್ಕೆ ಸೂರ್ಯ ಧುಮುಕಿರಬೇಕು. ಒಮ್ಮೆಲೆ, ಕತ್ತಲಾಯಿತು. ಮತ್ತೆ ಒಮ್ಮೆಲೆ, ಗಾಜಿನ ಬುರುಡೆಗಳೆಲ್ಲ, ದೀಪದ ಉಂಡೆಗಳಾದುವು. ನದಿಯ ಕೊರಳಹಾರಗಳ ಹಲವು ಸಹಸ್ರ ಮಣಿಗಳು ವರ್ಣರಂಜಿತವಾಗಿ ಬೆಳಗಿದವು.
ಆಗ ಇದ್ದಕ್ಕಿದಂತೆ, ರುದ್ರಕಡಲು ಭೋರ್ಗರೆಯುತ್ತ ಏರಿ ಬಂದಂತಹ ಸದ್ದಾಯಿತು.
ಹಿರಿಯನ ಅಂಗಾಂಗಗಳು ತಣ್ಣಗಾದುವು.
[ಶಿಕ್ಷೆ ವಿಧಿಸಲು ಆ ಘಳಿಗೆಯನ್ನೆ ಆರಿಸಿದ್ದನೆ ದೇವರು?]
"ಅಗೋ!” ಎಂದ ರಾಮ, ಉಳಿದೆಲ್ಲ ಸದ್ದನ್ನೂ ಮೀರಿಸುವ ಏರು ದನಿಯಲ್ಲಿ.
ಅಣೆಕಟ್ಟಿನೆರಡು ತೆರೆದ ದ್ವಾರಗಳಿಂದ, ಕೋಟಿ ಶ್ವೇತಾಶ್ವಗಳು ಕರ್ಣ ಭೇದಕವಾಗಿ ಕೆನೆಯುತ್ತ, ಬಾಯಿಗಳಿಂದ ನೊರೆಯುಗುಳುತ್ತ, ಮುನ್ನುಗ್ಗುತ್ತಿದ್ದುವು. ಕುಪ್ಪಳಿಸುತ್ತ ಹಾರುತ್ತ ಕಿಲಕಿಲನೆ ನಗುತ್ತ ನೀರು ಧುಮು ಧುಮುಸಿ ಹರಿಯಿತು, ಕಾಲುವೆಗಳಲ್ಲಿ, ಉಪಕಾಲುವೆಗಳಲ್ಲಿ.
ಎಚ್ಚತ್ತ ಹಿರಿಯ " ಓಹ್ ! " ಎಂದ.
ಬಾಗಿದ್ದ ನಡು ನಿಡಿದುಕೊಂಡಿತು. ಜಡವಾಗಿದ್ದ ಕಾಲುಗಳು ಚೇತನಗೊಂಡುವು.
ಆತ ಮತ್ತೆ ಆಂದ: “ಓಹ್ ! ಓಹ್ !”
ದೂರಕ್ಕೆ ದೂರಕ್ಕೆ ಆತನ ಹೊಲಗಳಿದ್ದ ಕಡೆಗೂ ನೀರು ಧಾವಿಸಿತು.
ಬೇರೊಂದನ್ನೂ ಗಮನಿಸದೆ ಹಿರಿಯ ಆ ನೀರನ್ನೆ ನೋಡಿದ; ಆ ನೀರಿನ ಹಿಂದೆಯೇ ಒಡಿದ.
ತಂದೆಯಷ್ಟೇ ವೇಗವಾಗಿ ಓಡುವುದು ರಾಮನಿಗೂ ಕಷ್ಟವೆನಿಸಿತು.
...ಗುಡಿಸಲ ಮುಂದೆ ರಾಮನ ತಾಯಿ ನಿಂತಿದ್ದಳು. ಚಿಕ್ಕ ಹುಡುಗನಂತೆ ಓಡುತ್ತ ಬ೦ದ ಗಂಡನನ್ನು ನೋಡಿ ಆಕೆಯೆ೦ದಳು :
"ಲಚ್ಚಿಗೆ ಎರಿಗೆಯಾಯ್ತು! ಗಂಡು ಮಗು!”
"ಓಹ್ !" ಎಂದ ಹಿರಿಯ, ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನೊರೆಸಿಕೊಳ್ಳುತ್ತ.— "ಓಹ್ ! ಓಹ್ !"
ಎಲ್ಲ ಬೇಗೆಯನ್ನೂ ಮರೆಸುವ ಹಾಗೆ ಬೀಸುತ್ತಿತ್ತು ತಣ್ಣನೆಯ ಗಾಳಿ. ವಾತಾವರಣ ತುಂಬಿತ್ತು, ಹಾಲುಹೊಳೆಯ ಜುಳುಜುಳು ಗೀತದಿಂದ. ಮಂದವಾಗಿ ಕಾಣಿಸುತ್ತಿದ್ದುವು, ಬಲು ದೂರದಲ್ಲಿ ಅಣೆಕಟ್ಟಿನ ದೀಪಮಾಲೆಗಳು.
ಮೇಲ್ಗಡೆ ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದುವು.
ಅವುಗಳನ್ನೇ ಮುಗ್ಧನಾಗಿ ಹಿರಿಯ ನೋಡಿದ.
ಪಶ್ಚಿಮದಲ್ಲಿ ಒಂಟಿಯಾಗಿಯೆ ಇದ್ದೊಂದು ನಕ್ಷತ್ರ ಅವನನ್ನು ಕಂಡು ನಕ್ಕಿತು.
ಅದನ್ನು ಗಮನಿಸಿದ ಹಿರಿಯ ರುಮಾಲನ್ನೆಳೆದು, ತಲೆಯಾಡಿಸುತ್ತ, ಅಂದ: "ಉಚ್ಮುಂಡೆ !"
ಆ ನಕ್ಷತ್ರ ಮತ್ತೆ ನಕ್ಕಿತು.