ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೨೪೯


ಮಾತನ್ನು ಕೇಳು ?" ಎಂದನು. ಅದಕ್ಕೆ ಮಾನಕಚಂದನು ಪೆಟ್ಟಿನ ಹೆದರಿಕೆಗೆ ಅವರು ಸುಳ್ಳುಹೇಳುತ್ತಾರೆ ಎಂದನು. ಅದಕ್ಕೆ ಬೀರಬಲನು "ಇವರು ಕಣ್ಣಿನಿಂದ ರತ್ನವನ್ನು ಕಂಡವರಾಗಿದ್ದರೆ ಅದರ ಆಕಾರವಿದ್ದಷ್ಟು ಮಣ್ಣಿನ ಉಂಡೆಗಳನ್ನು ಮಾಡುತ್ತಿದ್ದರು ಈ ವಿಷಯದಲ್ಲಿ ನೀನು ಅಸತ್ಯವನ್ನು ನುಡಿದದ್ದೇ ನಿಜ ?” ಎಂದು ಹೇಳಿ ಕರ್ಮಚಾರಿಗಳಿಗೆ ನೇತ್ರಸಂಕೇತಮಾಡಲು ಅವರು ಮಾನಕಚಂದನ ಬೆನ್ನ ಮೇಲೆ ಒಳಿತಾಗಿ ಒಂದು ಪೆಟ್ಟು ಕೊಟ್ಟರು ಆ ಕೂಡಲೆ ಮಾನಕಚಂದನು ತನ್ನಲ್ಲಿದ್ದ ಎರಡೂ ರತ್ನಗಳನ್ನು ತೆಗೆದು ಮುಂದಿಟ್ಟನು. ಅವುಗಳಲ್ಲೊಂದನ್ನು ಜವಾಹರಚಂದನಿಗೆ ಕೊಟ್ಟು ಮತ್ತೊಂದನ್ನು ರಾಜಭಂಡಾರದಲ್ಲಿಡಿಸಿ ಅಸತ್ಯ ಭಾಷಣ ಮಾಡಿದಬಗ್ಗೆ ಮಾನಕಚಂದನಿಗೂ, ಅವನ ಪಕ್ಷವನ್ನು ಸ್ವೀಕರಿಸಿಬಂದ ಜನರಿಗೂ, ಕಠಿಣವಾದ ದಂಡನೆಯನ್ನು ವಿಧಿಸಿದನು.

--(೧೪೭,ವಿಶ್ವಾಸಘಾತಕಿಯಾದ ಮಿತ್ರ)--,

ದಿಲ್ಲಿಯಲ್ಲಿ ಮೋತೀಚಂದ ನಾಮಕನಾದ ಒಬ್ಬ ವರ್ತಕನಿದ್ದನು ಅವನಿಗೆ ರಾಮದಾಸನೆಂಬ ಒಬ್ಬ ಸ್ನೇಹಿತನಿದ್ದನು, ಉಭಯತರಲ್ಲಿ ಅನಿರ್ವಾಚ್ಯವಾದ ಮೈತ್ರಿಯಿತ್ತು, ಮೋತೀಚಂದನು ಯಾತ್ರೆಗೆ ಹೊರಡಬೇಕೆಂಬ ಇಚ್ಛೆಯಿಂದ ತನ್ನಲ್ಲಿದ್ದ ಯಾವತ್ತು ಆಸ್ತಿ ಮನೆಮಾರು ಮೊದಲಾದ ಯಾವತ್ತು ಸ್ವತ್ತನ್ನು ರಾಮದಾಸನಿಗೊಪ್ಪಿಸಿ ಕುಟುಂಬಸಮೇತನಾಗಿ ಹೊರಟು ಹೋದನು. ಆ ಕಾಲದಲ್ಲಿ ಉಗಿಬಂಡಿಯು ಇದ್ದಿಲ್ಲ, ಕಾಲುನಡಿಗೆಯಿಂದಲೆ ಪ್ರಯಾಗ, ಕಾಶೀ, ಗಯಾ ಮೊದಲಾದ ಪವಿತ್ರಸ್ಥಳಗಳ ಯಾತ್ರೆಯನ್ನು ಮಾಡುತ್ತಾ ಮಾಡುತ್ತಾ ಮೂರು ವರುಷಗಳಾದ ಮೇಲೆ ಮರಳಿ ದಿಲ್ಲಿಗೆ ಬಂದನು. ಮನೆಗೆಬಂದು ನೋಡಲು ದ್ವಾರವು ತೆರೆದಿತ್ತು ಒಳಗೆ ಪ್ರವೇಶಮಾಡಿ ನೋಡಲು ಒಂದಾದರೂ ಪದಾರ್ಥವಿದ್ದಿಲ್ಲ. ಮನೆಯೆಲ್ಲ ಮಲಿನವಾಗಿ ಹೋ ಗಿತ್ತು, ಇಲಿ ಹೆಗ್ಗಣಗಳು ವಾಸಮಾಡಿಕೊಂಡಿದ್ದವು. ಆಗ ಅವನು ರಾಮದಾಸನ ಗೃಹಕ್ಕೆ ಬಂದನು ಪರಸ್ಪರರಲ್ಲಿ ಕುಶಲಪ್ರಶ್ನೆಗಳಾದವು, ಆಮೇಲೆ ಮೋತೀಚಂದನು ತನ್ನ ಯಾವತ್ತು ಸ್ವತ್ತನ್ನು ಮರಳಿಕೊಡು ! ಎಂದು ಕೇಳಲು ರಾಮದಾಸನು “ನನ್ನಲ್ಲಿ ನೀನು ಯಾವ ಸ್ವತ್ತನ್ನು ಇಟ್ಟು ಹೋಗಿರುವಿ ! ಯಾರಲ್ಲಿ ಇಟ್ಟಿದ್ದಿಯೋ ಅವರನ್ನು ಕೇಳಿಕೋ” ಎಂದನು.
ಮೋತೀಚಂದ-"ನಾನು ನನ್ನ ಸ್ವತ್ತನ್ನೆಲ್ಲ ನಿನಗೇ ಒಪ್ಪಿಸಿ ಹೋಗಿದ್ದೆನು,
ಅದರಿಂದಲೇ ನಿನ್ನನು ಕೇಳಲಿಕ್ಕೆ ಬಂದಿದ್ದೇನೆ ಇದು ವಿನೋದಕ್ಕೆ
ಸಮಯವಲ್ಲ. ಕೃಪೆಮಾಡಿ ನನ್ನ ಆಸ್ತಿಯನ್ನು ನನಗೆ ಕೊಡು.