ಪುಟ:ಅಜಿತ ಕುಮಾರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

ತಾರಾಪತಿಯು ಹೇಗೆ ತಾನೆ ಸಂತೋಷದಿಂದ ಸ್ವೀಕರಿಸುವನು ?” ಈ ರೀತಿಯಾಗಿ ಅಜಿತನ ಯೋಚನೆಗಳು ಎದ್ದು , ಅವನ ಮನಸ್ಸು ಅಲೆ ಮಸಗಿತು.

ಕೊನೆಗೆ “ಸರಿ ! ನಮ್ಮ ತಂದೆಗೆ ನನ್ನಲ್ಲಿ ಅನುರಾಗವು ಹುಟ್ಟುವಂತೆ ಮಾಡಬೇಕು, ನನ್ನಲ್ಲಿ ಯೋಗ್ಯತೆಯು ಕೊಂಚವಾದರೂ ಇದೆಯೆಂದು ತೋರಿಸಬೇಕು. ಇದು ವೀರ ಕಾರ್ಯಗಳನ್ನು ಮಾಡಿ ಕೀರ್ತಿವಂತನಾಗದ ಹೊರತು ಸಾಧ್ಯವಿಲ್ಲ. ನನ್ನ ಹೆಸರು ಒಂದಿಷ್ಟು ಮುಂದೆಬಂತೆಂದರೆ, ಆಮೇಲೆ-ನಮ್ಮ ತಂದೆಗೆ ಬೇರೆ ಐವತ್ತು ಮಕ್ಕಳು ಬೇಕಾದರೂ ಇರಲಿ-ನನ್ನನ್ನು ವಿಶ್ವಾಸದಿಂದ ಕಾಣದೆ ಎಂದಿಗೂ ಇರಲಾರನು. ನಾನೇ ಅವನ ಅತ್ಯಂತ ಪ್ರೀತಿಗೆ ಪಾತ್ರನಾಗುವೆನು, ಆದರೆ ಕೀರ್ತಿ ಸುಲಭಸಾಧ್ಯವಲ್ಲ. ಇರಲಿ! ನೋಡೋಣ. ಏಕೆ ? ಅನೇಕವಾದ ವಿಘ್ನಗಳು ಬಂದರೂ ನಮ್ಮ ವಜ್ರಾಂಗನು ಖ್ಯಾತಿಯನ್ನು ಸಂಪಾದಿಸಲಿಲ್ಲವೆ? ಆತನು ನೂರಾರು ಕಳ್ಳಕಾಕರನ್ನೂ ದುಷ್ಟ ಮೃಗಗಳನ್ನೂ ಸಂಹರಿಸಿ, ಕೆರೆತೊರೆಗಳನ್ನು ಹಾರಿಬಿಟ್ಟು, ಎಷ್ಟೊ ಬೆಟ್ಟಗಳನ್ನು ತನ್ನ ಗದೆಯಿಂದ ಪುಡಿಪುಡಿ ಮಾಡಲಿಲ್ಲವೆ ? ಆತನು ಜನಗಳ ಕಷ್ಟ ಸಂಕಷ್ಟಗಳನ್ನು ಪರಿಹರಿಸಿ, ಅವರನ್ನು ಸಾರೋದ್ದಾರವಾಗಿ ಸುಖವಾಗಿರುವಂತೆ ಮಾಡಿದ್ದರಿಂದ ಅಲ್ಲವೆ ಆತನನ್ನು ಎಲ್ಲರೂ ಬಹು ಗೌರವದಿಂದಲೂ ವಿಶ್ವಾಸದಿಂದಲೂ ಕಾಣುತಿದ್ದರು ? ಆದರೆ ವಜ್ರಾಂಗನು ಮಾಡಿದಂತೆ ನಾನೇನು ಮಾಡಲಿ ? ರಾಕ್ಷಸರನ್ನೂ, ಚೋರರನ್ನೂ, ದುಷ್ಟ ಮೃಗಗಳನ್ನೂ ಹುಡುಕಿಕೊಂಡು ಎಲ್ಲಿಗೆ ತಾನೆ ಹೋಗಲಿ ? ಒಂದು ವೇಳೆ ಜಲದಾರಿಯನ್ನು ಬಿಟ್ಟು, ನೆಲದಾರಿಯಾಗಿ ಹೋದರೆ, ಆ ಬೆಟ್ಟ ತಪ್ಪಲುಗಳಲ್ಲಿ ಎಲ್ಲಿ ಯಾದರೂ ನನ್ನ ಸಾಹಸವನ್ನು ತೋರಿಸುವುದಕ್ಕೆ ಅವಕಾಶವಿರಬಹುದು. ಈ ನೆಲಹಾದಿಯಿಂದಲೇ ಹೋಗಬೇಕು,” ಎಂದು ನಿರ್ಧರಿಸಿ, ತನ್ನ ತಂದೆಯ ಕತ್ತಿಯನ್ನು ಸೊಂಟದಲ್ಲಿ ಕಟ್ಟಿಕೊಂಡು ಹೊರಟು ಹೋದನು.

ಅಜಿತನು ಕೆಲ ಗಾವುದ ಹಾದಿ ನಡೆದು ಜಾಲವ್ಯೂಹವೆಂಬ ಹೆಸರಿನ