ಪರ್ವತಗಳ ಹತ್ತಿರ ಬಂದನು. ಒಂದೇ ಒಂದು ದೊಡ್ಡ ಶಿಖರದಿಂದ ಚಿಕ್ಕ ಚಿಕ್ಕ ಬೆಟ್ಟಗಳು ದಿಕ್ಕು ದಿಕ್ಕಿಗೆ ಕವಲುಗೊಂಡು ಜೇಡನ ಬಲೆಯಂತೆ ಹರಡಿದ್ದುದರಿಂದ, ಅವುಗಳಿಗೆ ಜಾಲವ್ಯೂಹವೆಂಬ ಹೆಸರು ಬಿದ್ದಿತ್ತು. ಇವುಗಳ ಮೇಲೇರುತ್ತ ಹೋಗುವಷ್ಟಕ್ಕೆ ಬಲು ಆಳವಾದ ಕಣಿವೆಗಳೂ ಮುಗಿಲು ಮುಟ್ಟುವ ಕೋಡುಗಳೂ ಕಾಣಿಸಿದುವು. ಅಂಥ ಪ್ರದೇಶಗಳಲ್ಲಿ ಪ್ರಯಾಣ ಮಾಡುವುದೇ ಅಪಾಯಕರವಾಗಿತ್ತು, ಆದರೆ ಅಜಿತನು ಬೆಚ್ಚು ಬೆದರನ್ನು ಅರಿಯನು, ಅದು ಹೊರತು ಅಲ್ಲಿಗೆ ಹೋಗುವುದಕ್ಕೆ ಬೇರೆ ಮಾರ್ಗವೂ ಇರಲಿಲ್ಲ.
ಸ್ವಲ್ಪ ದೂರ ಹೋದ ಮೇಲೆ ಅವನ ಹಾದಿಗೆ ಅಡ್ಡವಾಗಿ ಒಂದು ದೊಡ್ಡ ಕಲ್ಲು ರಾಶಿಯು ಕಣ್ಣಿಗೆ ಬಿತ್ತು, ಅದರ ಮೇಲೆ ವಿಕಾರವಾದ ಪುರುಷನೊಬ್ಬನು ಕುಳಿತಿದ್ದನು, ಆತನ ಅಂಗಿಯು ಕರಡಿಯ ತೊಗಲಿನದು ; ಕುಲಾವಿಯು ತಲೆಯ ಓಡಿನದು; ಅವನ ಹಣೆಯಲ್ಲಿ ಕರಡಿಯ ಕೋರೆಗಳು ಬೆಳ್ಳಗಾಗಿ ಹೊಳೆಯುತ್ತಿದ್ದುವು. ಆತನು ಒಂದು ಕರಡಿಯ ಕಾಲುಗಳನ್ನು ತನ್ನ ಕೊರಳಿನ ಬಳಿ ಬಿಗಿದುಕೊಂಡದ್ದರಿಂದ, ಅದರ ಉಗುರುಗಳು ಆತನ ಅಗಲವಾದ ಎದೆಯ ಮೇಲೆ ನೇತಾಡುತ್ತಿದ್ದುವು. ಇಂಥ ಭೀಕರ ಸ್ವರೂಪಿಯು ಅಜಿತನನ್ನು ಕಾಣುತ್ತಲೆ, ಎದ್ದು ನಿಂತು, ಪರ್ವತಗಳು ದನಿ ಕೊಡುವಂತೆ ಗಹಗಹನೆ ನಕ್ಕನು.
“ಎಲಾ, ಹುಳುಮಾನಿಸನೇ! ನನ್ನ ಬಲೆಯೊಳಕ್ಕೆ ಬಂದಿರುವ ನೀನು ಯಾರಯ್ಯ? " ಎಂದು ಅಣಕಿಸಿ ಕೇಳಿದನು, ಅಜಿತನು ಏನೊಂದು ಉತ್ತರವನ್ನೂ ಕೊಡದೆ ಇವನು ಯಾರು ಕಳ್ಳನಾಗಿರಬಹುದೇ? ಅಷ್ಟು ಬೇಗನೆ ನನಗೊಂದು ವಿನೋದವು ಒದಗಿತೇ ? " ಎಂದಂದುಕೊಂಡು ತನ್ನ ಹಾದಿ ಹಿಡಿದು ಹೋಗುತ್ತಿದ್ದನು.
ಆಗ ಆ ವಿಕಾರಪುರುಷನು ಮತ್ತಷ್ಟು ಗಟ್ಟಿಯಾಗಿ ನಕ್ಕು- "ಎಲಾ, ಸೊಕ್ಕಿದ ಕ್ರಿಮೀ, ಈ ಬಲೆಯಿಂದ ಯಾವ ಹುಳುವೂ ತಪ್ಪಿಸಿಕೊಂಡು