III ನಾಗಕನ್ನೆಯರ ದರ್ಶನ.
ಅಜಿತನು ಜಾಲವ್ಯೂಹ ಪರ್ವತಗಳನ್ನು ಕಳೆದು ನಾಲ್ಕು ಗಾವುದ ಹೋಗುತ್ತಲೆ, ಒಂದು ವಿಶಾಲವಾದ ಮೈದಾನದ ಮೇಲೆ ಕೆಲವು ಕುರಿಗಳು ಹಾಯಾಗಿ ನಿದ್ರಿಸಿದ್ದು ದನ್ನು ಕಂಡನು. ಹತ್ತಿರದಲ್ಲಿ ಮರಗಳ ಮತ್ತು ಬಂಡೆಗಳ ಎಡೆಯಲ್ಲಿದ್ದ ಒಂದು ಕಾರಂಜಿಯ ಸುತ್ತಲೂ ಕೆಲವರು ನಾಗಕನ್ಯಯರು ಕುಣಿದಾಡುತಿದ್ದರು, ಅವರ ಕುಣಿತಕ್ಕೆ ಹಾಡುಗಳಾಗಲಿ ಮದ್ದಳೆಯಾಗಲಿ ಇರಲಿಲ್ಲ. ಅಜಿತನನ್ನು ಕಾಣುತ್ತಲೇ ಆ ನಾಗಕನ್ಯೆಯರು ಚಿಟ್ಟನೆ ಚೀರಿಕೊಂಡು ಕಾರಂಜಿಯೊಳಕ್ಕೆ ಹೊಕ್ಕು ಮಾಯವಾದರು. ಅಷ್ಟರಲ್ಲಿ ಹತ್ತಿರವಿದ್ದ ಕುರುಬರು ಕೂಡ ತಮ್ಮ ತಮ್ಮ ಮಂದೆಯನ್ನು ಹೊಡೆದುಕೊಂಡು ಹೋಗುವುದಕ್ಕೆ ಎದ್ದರು.
ಇದನ್ನು ಕಂಡು ಅಜಿತನಿಗೆ ಆಶ್ಚರ್ಯವಾಯಿತು, ಆ ಜನಗಳು ಅಪರಿಚಿತರನ್ನು ಕಂಡ ಕೂಡಲೆ ಮೂಢರಂತೆ ಓಡಿಹೋಗುವುದನ್ನೂ ತಾಳಹಾಕದೆ ಕುಣಿಯುವುದನ್ನೂ ಕಂಡು, ಆತನಿಗೆ ನಗು ಬಂತು. ಆತನು ದಾರಿ ನಡೆದು ಬಳಲಿ ಬಾಯಾರಿದ್ದು ದರಿಂದ ಅವರ ಯೋಚನೆಯನ್ನೆ ಬಿಟ್ಟು, ಬೇಗನೆ ಕೆಳಕ್ಕೆ ಹೋಗಿ ಮಿಂದು, ತಿಳಿನೀರು ಕುಡಿದು, ಒಂದು ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡನು. ಊಟೆಯ ನೀರು ಕಲ್ಲಿನಿಂದ ಕಲ್ಲಿಗೆ ದುಮುಕುವಾಗ ಜೊಕ್ಕಿನ್ನುವ ಶಬ್ದವೇ ಜೋಗುಳದಂತಾಗಲು, ಆತನ ರೆಪ್ಪೆಗಳು ಒತ್ತಿಕೊಂಡುವು.
ಅಜಿತನು ನಿದ್ದೆಯಿಂದ ಎಚ್ಚತ್ತಾಗ ಯಾರೋ ಮಾತಾಡುವ ಗುಜುಗುಜು ಕೇಳಿಸಿತು; ಸುತ್ತಲೂ ನೋಡಿದನು. ಆ ಕಾರಂಜಿಯ