ಪುಟ:ಅಜಿತ ಕುಮಾರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗಕನ್ನೆಯರ ದರ್ಶನ,

ಹೀಗೆ ಸತ್ತವನ ದೇಹವು ಅಲ್ಲಿರುವ ಮಹಾ ಕೂರ್ಮಕ್ಕೆ ಆಹಾರವಾಗುವುದು. ಅಲ್ಲಿಗೆ ಹೋದರೆ ನಿನಗೂ ಇದೇ ಗತಿ,” ಎಂದನು.

ಕೂಡಲೆ ಮೂರನೆಯ ಕುರುಬನು ಈ ಅಷ್ಟೆ ? ಅದಕ್ಕಿಂತಲೂ ಮಹತ್ತಾದ ಮತ್ತೊಂದು ಅಪಾಯವಿದೆ. ನೀನು ಮತ್ತೂ ಎಡಗಡೆ ಹೋಗುತ್ತ ಹೋಗುತ್ತ ಸಮುದ್ರದಿಂದ ಬಹು ದೂರವಾಗದಿದ್ದರೆ ಖಂಡಿತವಾಗಿಯ, ಕ್ರೂರಾಕ್ಷನೆಂಬ ಜಟ್ಟಿಯ ಊರಿಗೆ ಹೋಗುವೆ. ಆತನಿಗೆ ಕಣ್ಣಿನಲ್ಲಿ ರವಷ್ಟಾದರೂ ರಕ್ತವಿಲ್ಲ ; ತನ್ನ ಸ್ವಂತ ಮಗಳನ್ನೇ ಸೆರೆಯಲ್ಲಿ ಇರಿಸಿ, ಕೊಂದುಬಿಟ್ಟು, ಅವಳ ಮಗುವನ್ನು ಪರ್ವತಗಳ ಮೇಲೆ ಒಗೆದುಬಿಟ್ಟನು. ಏನೋ ದೈವಯೋಗದಿಂದ ಅಲ್ಲಿದ್ದ ಕುದುರೆಗಳು ಕರುಣೆಯಿಂದ ಆ ಮಗುವಿಗೆ ಹಾಲೂಡಿ ಅದನ್ನು ಸಂರಕ್ಷಿಸಿದುವು. ಕೊನೆಗೆ ಅಪ್ಸರೆಯರು ಅದನ್ನೆತ್ತಿಕೊಂಡು ಹೋದರು. ಆ ಜಟ್ಟಿಯು ಬಹುತ್ರಾಣಿ ; ಯಾರೂ ಆತನೊಡನೆ ಕಾದಿ ಜಯಿಸಿದ್ದಿಲ್ಲ. ಆತನು ಈಗ ಅಲ್ಲಿಯ ದೊರೆಯಾಗಿದ್ದಾನೆ. ಪರಸ್ಥಳದವರು ಯಾರಾದರೂ ಹೋದರೆ ಅವರೊಡನೆ ಕಾದಾಡಿ, ಸೋಲಿಸುವನು. ಹಾಗೆ ಸೋತವರನ್ನು ಕೊಂದು ಬಿಟ್ಟು, ಅವರ ಅಟ್ಟೆಗಳಿಂದ ಅರಮನೆಯ ಮುಂದುಗಡೆ ತೋರಣ ಕಟ್ಟಿಸುವನು,” ಎಂದನು.

ಇವರ ಮಾತುಗಳನ್ನು ಕೇಳಿ ಅಜಿತನು ಸಿಟ್ಟಿನಿಂದ ಹುಬ್ಬು ಗಂಟಿಕ್ಕಿ, “ಓ, ಹೊ ! ಈ ರಾಜ್ಯದ ಆಡಳಿತೆಯು ಚೆನ್ನಾಗಿಲ್ಲವೆಂದು ಕಾಣುತ್ತಿದೆ. ನಾನು ಮಾತ್ರ ಇದಕ್ಕೆ ರಾಜನಾಗಬೇಕಿತ್ತು; ಎಲ್ಲವನ್ನೂ ಸರಿಯಾಗಿ ಇಡುತ್ತಿದ್ದೆ! ಇದೊ, ನನ್ನ ರಾಜದಂಡವು ಇಲ್ಲಿಯೆ ಇದೆ,” ಎಂದು ಹೇಳುತ್ತ, ಕಂಚಿನ ಗದೆಯನ್ನು ತಿರ್ರನೆ ತಿರುಪಿ, ಹೋಗುವುದಕ್ಕೆ ಹೊರಟನು. ಹೆಂಗುಸರೂ ಕುರುಬರೂ ಹೋಗಕೂಡದೆಂದು ಅವನ ಕಾಲುಕಟ್ಟಿದರು. ಆದರೂ ಅಜಿತನು ಹೋಗೇ ಹೋದನು.