ಪುಟ:ಅಜಿತ ಕುಮಾರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಜಿತ ಕುಮಾರ

೩೧

ಕರೆದುಕೊಂಡು ಅಲ್ಲಿಗೆ ಬಂದನು, ಸಾಹುಕಾರರು ಸಂತೋಷದಿಂದ ಮಾತನಾಡುತ್ತಲೂ ನಗುತ್ತಲೂ ಬರುತಿದ್ದರು. ಮಾರಕನು ಅಜಿತನ ಬಳಿ ಹೋಗಿ, "ಅಯ್ಯಾ ಕ್ಷಮಿಸಿರಿ ; ಬಹಳ ಹೊತ್ತು ತಡಿಸಿಬಿಟ್ಟೆನಲ್ಲವೆ ?” ಎಂದನು.

ಅದಕ್ಕೆ ಅಜಿತನ ಉತ್ತರವು ಬೇರೆಯೇ ಆಯಿತು. “ ಊರೆಲ್ಲಾ ಧರ್ಮವನ್ನು ಸಂಸ್ಥಾಪಿಸುವ ಕಾಲಕ್ಕೆ, ಬಂದಬಂದವರನ್ನು ಮಂಚದ ಮೇಲೆ ಮಲಗಿಸಿ, ಕೈ ಕಾಲುಗಳನ್ನು ಕತ್ತರಿಸುವಂಥ ದುರುಳನಿಗೆ ಎಂಥ ಶಿಕ್ಷೆಯನ್ನು ವಿಧಿಸಬೇಕು, ಹೇಳಿರಿ, ನೋಡೋಣ ” ಎಂದು ಕೇಳಿದನು.

ಇದನ್ನು ಕೇಳಿದೊಡನೆಯೆ ಮಾರಕನ ಮುಖವು ವಿವರ್ಣವಾಯಿತು; ಕೆನ್ನೆಗಳು ಹಲ್ಲಿಯಂತೆ ಬಣ್ಣಗೆಟ್ಟುವು, ಕತ್ತಿಯ ಮೇಲೆ ಕೈ ಹೋಯಿತು. ಅಜಿತನು ತಟ್ಟನೆ ಅವನ ಮೇಲೆ ಹಾರಿ, ಕತ್ತಿಯನ್ನು ತೆಗೆಯದಂತೆ ಅವನ ಕೈಗಳನ್ನು ಬಲವಾಗಿ ಹಿಡಿದುಕೊಂಡು, ಇದು ನಿಜವೋ ಸುಳ್ಳೋ? ಖಂಡಿತವಾಗಿ ಹೇಳು” ಎಂದು ದಕ್ಷಿಸಿದನು.

ಮಾರಕನ ಬಾಯಿಂದ ಮಾತು ಹೊರಡದ್ದನ್ನು ಕಂಡು, ಅವನನ್ನು ಹಿಂದಕ್ಕೆ ದೂಡಿ, ಅಜಿತನು ತನ್ನ ಗದೆಯನ್ನು ಜಡಿದು, ಬಲವಾಗಿ ಹೊಡೆಯಲು, ಮಾರಕನು ನೆಲದ ಮೇಲೆ ಮಲಗಿಬಿಟ್ಟನು. ಅಜಿತನ ಮತ್ತೊಂದು ಏಟಿಗೆ ಮಾರಕನ ಪ್ರಾಣವು ಹಾರಿಹೋಯಿತು. ಆ ಮೇಲೆ ಅವನ ಮೈಮೇಲಿನ ಚಿನ್ನದ ಒಡವೆಗಳನ್ನು ತೆಗೆದುಕೊಂಡು, ಅಜಿತನು ಅವನ ಅರಮನೆಯನ್ನು ಹೊಕ್ಕು, ಆ ರಾತ್ರಿಯನ್ನು ಅಲ್ಲಿಯೇ ಕಳೆದನು.

ಮರುದಿನ ಬೆಳಗ್ಗೆ ಅರಮನೆಯ ಹಲವು ಕೋಣೆಗಳಲ್ಲಿ, ಹುಡುಕಿ ಹುಡುಕಿ ನೋಡಿ, ದಾರಿಗರಿಂದ ಮಾರಕನು ಕಸಕೊಂಡಿದ್ದ ಧನ ಕನಕ ವಸ್ತ್ರಗಳ ರಾಶಿಗಳು ಅಲ್ಲಿ ಬಿದ್ದಿದ್ದು ದನ್ನು ಕಂಡು, ಊರುಗರನ್ನು ಕರೆದು ಆ ಸೊತ್ತನ್ನು ಅವರಿಗೆ ಹಂಚಿಕೊಟ್ಟು, ಅಜಿತನು ತನ್ನ ಹಾದಿಹಿಡಿದು ಮುಂದಕ್ಕೆ ಹೋದನು.