ಪುಟ:ಅಜಿತ ಕುಮಾರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ. ೩೩.

ಆತನ ಕೀರ್ತಿಯು ಅಷ್ಟು ಬೇಗನೆ ಎಲ್ಲೆಲ್ಲಿಯೂ ಹಬ್ಬಿ ಹರಡಿತ್ತು. ಆತನ ಮಹತ್ಕಾರ್ಯಗಳನ್ನು ತಿಳಿಯದ ಜನಗಳೇ ಇರಲಿಲ್ಲ. "ಇದೊ, ದಾರಕ, ಮಾರಕ, ಕೊರಾಕ್ಷ ಮೊದಲಾದವರನ್ನು ನಾಶಮಾಡಿದ ವೀರನು ಬರುತ್ತಿರುವನು” ಎಂದು ಎಲ್ಲರು ಕೂಗುತ್ತ ಸಾಲುಕಟ್ಟಿಕೊಂಡು ಆತನ ಹಿಂದೆಯೆ ಬರುತಿದ್ದರು.

ಆದರೆ ಅಜಿತನಿಗೆ ಉತ್ಸಾಹವೇ ಇರಲಿಲ್ಲ. ತನ್ನ ತಂದೆಯ ಸುತ್ತಲೂ ನೀಚರು ಬಳಸಿಕೊಂಡಿದ್ದಾರೆ! ಆ ಜಿಗಳೆಗಳನ್ನು ಹಿಂಡಿಬಿಡುವ ಬಗೆ ಹೇಗೆಂಬ ಯೋಚನೆಯಲ್ಲಿ ಮನಸ್ಸು ಸುಳಿಯುತಿತ್ತು.

ಅರಮನೆಯು ನಗರದ ಮಧ್ಯದಲ್ಲಿತ್ತು. ಅಜಿತನು ನೆಟ್ಟಗೆ ಬಾಗಿಲಿಗೆ ಹೋಗಿ, ಹೊಸ್ತಿಲಿನ ಮೇಲೆ ನಿಂತುಕೊಂಡು, ಒಳಕ್ಕೆ ನೋಡಿದನು. ಅಲ್ಲಿ ಕೆಲವರು ಯುವಕರು ಕುಳಿತುಕೊಂಡು ಮದ್ಯಪಾನ ಮಾಡುತಿದ್ದರು. ಅವರ ವಯಸ್ಸನ್ನೂ ವಸ್ತ್ರವನ್ನೂ ಕಂಡು, ತನ್ನ ಮಲತಾಯಿ ಮಾಧವಿಯ ಮಕ್ಕಳಾದ ಮಾಧವೇಯರೆಂದು ತಿಳಿದುಕೊಂಡನು. ತಾರಾಪತಿಯು ಅಲ್ಲಿರಲಿಲ್ಲ. ಆ ರಾಜಪುತ್ರರು ನಗುತ್ತಲೂ, ತಿನ್ನುತ್ತಲೂ, ಮದ್ಯಪಾತ್ರೆಯನ್ನು ಕೈಯಿಂದ ಕೈಗೆ ದಾಟಿಸುತ್ತಲೂ ಇದ್ದರು. ಹತ್ತಿರದಲ್ಲಿ ಕೆಲವರು ವೀಣೆಯನ್ನು ಬಾರಿಸುತ್ತಲೂ, ಕೆಲವರು ಹಾಡುತ್ತಲೂ ಕುಳಿತಿದ್ದರು.

ಹೊತ್ತು ಹೋಗುವಷ್ಟಕ್ಕೆ ನಗುವೂ ಹೆಚ್ಚುತ್ತ ಬಂತು, ಮದ್ಯಪಾತ್ರೆಯ ಸುತ್ತುತ್ತ ಬಂತು; ಅಜಿತನಿಗೆ ಇದನ್ನು ಕಂಡು ಅಸಹ್ಯವುಂಟಾಗಿ “ರಕ್ಷಕರಾದವರೇ ತಸ್ಕರರಂತಿದ್ದರೆ, ರಾಜ್ಯದ ವ್ಯವಸ್ಥೆಯು ಹೇಗೆ ತಾನೆ ಸರಿಯಾಗಿದ್ದೀತು ?” ಎಂದಂದುಕೊಂಡನು.

ಅಷ್ಟರಲ್ಲಿ ಆ ಕುಡುಕರಾದ ಮಾಧವೇಯರು ಅವನನ್ನು ಕಂಡು, “ಭಲಾ! ಬಾಗಿಲಿನ ಬಳಿ ನಿಂತಿರುವ ಉದ್ದ ಕಾಲಿನವನೇ! ಇಂದು ನಿನ್ನ ಬಯಕೆ ಏನಿದೆ ?” ಎಂದು ಹುಬ್ಬೆ ಪ್ರಶ್ನಿಸಿದರು.