ಪುಟ:ಅಜಿತ ಕುಮಾರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಮಾಯಾವಿಯಾದ ಮಾಧವಿ.

"ಅಷ್ಟೆ ತಾನೆ? ಅದಕ್ಕೆ ಏನು ಅಡ್ಡಿ?” ಎಂದು ಹೇಳಿ ತಾರಾಪತಿಯು ಅಜಿತನನ್ನು ಭೋಜನಶಾಲೆಗೆ ಕರೆದುಕೊಂಡು ಹೋದನು. ಸೇವಕರು ಬೆಳ್ಳಿಯ ಮನೆಗಳನ್ನು ಇಟ್ಟು, ಇಬ್ಬರಿಗೂ ಚಿನ್ನದ ತಳಿಗೆಗಳನ್ನು ತಂದಿಟ್ಟರು, ಅಡಿಗೆಯವರು ಸೊಗಸಾದ ಸಣ್ಣಕ್ಕಿಯ ಅನ್ನವನ್ನು ಬಡಿಸಿದರು. ರಾಜನೂ ಅಜಿತನೂ ಇಬ್ಬರೂ ಒಂದೇ ಸಾಲಿನಲ್ಲಿ ಊಟಕ್ಕೆ ಕುಳಿತುಕೊಂಡರು. ಅಜಿತನು ಉಣ್ಣುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಬಡಿಸಿದಷ್ಟು ಭಕ್ಷ್ಯಭೋಜ್ಯಗಳು ಆತನ ಬಾಯಿಯೊಳಕ್ಕೆ ಹೋಗುತಿದ್ದುವು.

ಮಾಧವಿಯು ಕೂಡ ಅಲ್ಲಿ ನಿಂತುಕೊಂಡು, ಇವನನ್ನು ಪರೀಕ್ಷೆ ಮಾಡಿ ನೋಡುತಿದ್ದಳು. ತಾರಾಗಣವೆಂಬ ಹೆಸರನ್ನು ಕೇಳಿದೊಡನೆಯೆ ತಾರಾಪತಿಗೆ ಹತ್ತಿದ್ದ ಅಂಜಿಕೆಯನ್ನೂ, ಅಜಿತನೊಡನೆ ಏನೂ ಮುಚ್ಚು ಮರೆಯಿಲ್ಲದೆ ಅವನು ಮಾತನಾಡುವ ರೀತಿಯನ್ನೂ, ಮೂಳೆ ನಾಯಿಗಳಂತಿರುವ ಮಾಧವೇಯರ ನಡುವೆ ಹುಲಿಮರಿಯಂತಿರುವ ಅಜಿತನು ಕಂಗೊಳಿಸುವ ಅಂದವನ್ನೂ ಯೋಚಿಸಿ, “ಈ ಯುವಕನು ಇಲ್ಲಿಗೆ ರಾಜನಾಗುವನೆ ? ಒಂದು ವೇಳೆ ಈತನು ತಾರಾಪತಿಯ ಹತ್ತಿರದ ನಂಟನಾಗಿರಬಹುದೇ ? ಹೇಗೂ ಇರಲಿ, ಈತನಿದ್ದರೆ, ನನ್ನ ಮಕ್ಕಳ ಹೊಟ್ಟೆ ಮೇಲೆ ಕಾಲುಮಾಡುವನು!” ಎಂದಂದುಕೊಳ್ಳುತ್ತ ಒಳಕ್ಕೆ ಹೋದಳು.

ಉಣ್ಣುತಲಿದ್ದ ಅಜಿತನನ್ನು ಸೇವಕರು ಕಂಡು, “ ಆ ರಕ್ಕಸರನ್ನು ಕೊಂದವನು ಇವನೇನು ? ಎಷ್ಟು ವೀರನಾಗಿ ಕಾಣಿಸುತ್ತಾನೆ! ಎಷ್ಟು ಅಗಲವಾದ ಎದೆ! ಎಷ್ಟು ಉಬ್ಬಿದ ಹೆಗಲು! ಎಷ್ಟು ಸಣಕಲಾದ ಮೈ ! ಈತನೇ ನಮ್ಮ ದೊರೆಯ ಮಗನಾಗಿರಬಾರದೆ?” ಎಂದು ತಮ್ಮೊಳಗೆನೇ ಅಂದುಕೊಳ್ಳುತಿದ್ದರು.

ಅಷ್ಟರಲ್ಲಿ ಮಾಧವಿಯು ನವರತ್ನಗಳ ಒಡವೆಗಳನ್ನು ಇಟ್ಟುಕೊಂಡು, ಮೋಹಿನಿಯಂತೆ ಕಾಣಿಸುತ್ತ, ಒಂದು ಚಿನ್ನದ ಬಿಂದಿಗೆಯನ್ನು ಹಿಡಿದು