ಪುಟ:ಅಜಿತ ಕುಮಾರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

೩೫

ಯೊಡನೆ ಸಲ್ಲಾಸ ಮಾಡುತಿದ್ದನು. ಅಜಿತನೆಂಬ ಹೆಸರನ್ನು ಕೇಳಿದಾ ಕ್ಷಣವೇ ಅವನಿಗೆ ನಡುಕ ಉಂಟಾಯಿತು; ಫಕ್ಕನೆ ಕುಳಿತಲ್ಲಿಂದ ಎದ್ದನು. ಮಾಯಾವಿಯಾದ ಮಾಧವಿಯು ಈತನ ಚರ್ಯೆಚೇಷ್ಟೆಗಳನ್ನು ನೋಡಿ, “ಏನು ಸಮಾಚಾರ ?” ಎಂದು ಕೇಳಿದಳು.

ಅದಕ್ಕೆ ತಾರಾಪತಿಯು "ಈ ಅಜಿತನು ಯಾರೆಂಬುದು ನಿನಗೆ ಗೊತ್ತಿಲ್ಲವೆ ? ಈತನೇ ಆ ದುಷ್ಟರನ್ನು ಕೊಂದವನು. ತಾರಾಂಗಣದಿಂದ ಇಲ್ಲಿಗೆ ಬಂದಿದ್ದಾನೆಂಬುದು ಹೊರತು ಬೇರೇನೂ ನನಗೆ ತಿಳಿಯದು. ಆಗಲಿ ; ಈಗ ಆತನನ್ನು ತಕ್ಕ ಬಗೆಯಿಂದ ಸತ್ಕರಿಸಬೇಕು” ಎಂದು ಹೇಳುತ್ತ ಚಾವಡಿಗೆ ಹೊರಟುಹೋದನು.

ತಾರಾಪತಿಯನ್ನು ನೋಡುತ್ತಲೇ ಅಜಿತನ ಎದೆಯಲ್ಲಿ ಸಂತೋಷವು ಉಕ್ಕಿಬಂದು, ಆತನನ್ನು ಒಂದು ಸಲ ಅಪ್ಪಿಕೊಳ್ಳಬೇಕೆಂದು ಆಸೆಯಾಯಿತು, ಆದರೆ ತಂದೆಗೆ ತನ್ನನ್ನು ಕಂಡರಾಗುವುದೂ ಇಲ್ಲವೊ ಎಂಬುದನ್ನು ಮೊದಲು ಗೊತ್ತು ಮಾಡಿಕೊಳ್ಳಬೇಕೆಂದು ಎಣಿಸಿ, ತನ್ನ ಮನಸ್ಸನ್ನು ಬಿಗಿದು, ಆತನಿಗೆ ನಮಸ್ಕರಿಸಿ, “ಮಹಾರಾಜರ ರಾಜ್ಯದಲ್ಲಿದ್ದ ಹಲವರು ರಾಕ್ಷಸರನ್ನು ಸಂಹರಿಸಿರುವ ನನಗೆ ಬಹುಮಾನಾರ್ಥವಾಗಿ ಒಂದು ಉಡುಗೊರೆ ದಯಪಾಲಿಸಿದರೆ ಆಗಬಹುದು !” ಎಂದು ಹೇಳಿದನು.

ತಾರಾಪತಿಯು ಆತನ ಮುಖದಲ್ಲಿಯೇ ದೃಷ್ಟಿಯನ್ನು ಅಂಟಿಸಿ ಸಂತೋಷದಿಂದ, “ ಅಯ್ಯಾ, ವೀರನೇ ! ನೀನು ಮಾಡಿರುವ ಸಾಹಸಕ್ಕೆ ಸರಿಯಾದ ಉಡುಗೊರೆ ಕೊಡಲು ನಾನು ಸಮರ್ಥನಲ್ಲ ! ಮನುಷ್ಯ ಮಾತ್ರನಿಗೆ ಅಸಾಧ್ಯವಾದ ಕೆಲಸಗಳನ್ನು ಮಾಡಿರುವ ನೀನು, ನಿಜವಾಗಿಯೂ, ಮರ್ತ್ಯನಲ್ಲವೆಂದು ನನ್ನ ಭಾವನೆ !” ಎಂದನು.

ಆಗ ಅಜಿತನು, “ನನಗೆ ಬೇರೇನೂ ಬೇಡ ! ತಮ್ಮ ಪಂಕ್ತಿಯಲ್ಲಿ ಕುಳಿತುಕೊಂಡು ಒಂದು ತುತ್ತು ಉಣ್ಣುವುದಕ್ಕೆ ಅನುಜ್ಞೆಯಾದರೆ ತೀರಿತು! " ಎಂದು ದೈನ್ಯದಿಂದ ಕೇಳಿಕೊಂಡನು.