ಪುಟ:ಅಜಿತ ಕುಮಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

೪೯


ಅಜಿತನು ಅವುಗಳನ್ನು ಬಚ್ಚಿಟ್ಟುಕೊಂಡು, ಆಕೆಯನ್ನು ತನ್ನೊಡನೆ ಕರೆದುಕೊಂಡು ಹೋಗುವುದಾಗಿ ಅವಳಿಗೆ ಮಾತುಕೊಟ್ಟು ನಗುನಗುತ್ತ, “ ಈಗ ನನಗೇನೂ ಭಯವಿಲ್ಲ ” ಎಂದು ಹೇಳಿ ಆಕೆಯನ್ನು ಕಳುಹಿಸಿ ಕೊಟ್ಟನು. ಅರಿಂದಮೆಯು ಅಳುತ್ತ ಅಂತಃಪುರಕ್ಕೆ ಹೊರಟುಹೋದಳು. ಅಜಿತನು ಸುಖವಾಗಿ ನಿದ್ದೆಹೋದನು.

ಮರುದಿನ ಸಾಯಂಕಾಲಕ್ಕೆ ಸರಿಯಾಗಿ ಪಹರೆಯವರು ಬಂದು, ಅಜಿತನನ್ನು ಆ ಚಕ್ರವ್ಯೂಹಕ್ಕೆ ಕರೆದುಕೊಂಡು ಹೋದರು. ಎಲ್ಲರೂ ಬಾಗಿಲಲ್ಲಿ ನಿಂತರು; ಅಜಿತನೊಬ್ಬನೆ ಒಳಗೆ ಹೋದನು. ಹೋಗುತ್ತ ನೂಲಿನ ತುದಿಯನ್ನು ಒಂದು ಕಲ್ಲಿಗೆ ಕಟ್ಟಿ ಬಿಟ್ಟು, ಮುಂದೆ ಹೋದ ಹಾಗೆ ನೂಲನ್ನು ಬಿಡುತ್ತ ಹೋದನು. ದಾರಿಯು ಬಹಳ ಸುತ್ತು, ಒಂದೆಡೆ ಕಲ್ಲಿನ ರಾಶಿಗಳು ಕುಸಿದು ಬಿದ್ದಿವೆ, ಮತ್ತೊಂದು ಎದೆ ತುಂಬ ಇಕ್ಕಟ್ಟು. ಒಂದೊಂದು ಕಡೆ ಕುಳಿಗಳು, ಜಾಗರೂಕತೆಯಿಂದ ನಡೆಯದಿದ್ದರೆ ಕಾಲುಮುರಿದುಹೋಗುವುದು, ಇಂಥ ಕೋಟೆಯೊಳಗೆ ಹಾಗೂ ಹೀಗೂ ತಡವರಿಸಿಕೊಂಡು ಬಹಳ ಹೊತ್ತಿನ ತನಕ ಹೋದನು, ತಲೆಸುತ್ತುವುದಕ್ಕೆ ಆರಂಭವಾಯಿತು, ಅಷ್ಟರಲ್ಲಿ ಬಂಡೆಗಳ ನಡುವೆ ಒಂದು ಇಕ್ಕಟ್ಟಾದ ಸ್ಥಳದಲ್ಲಿ ಪುರುಷಾಮೃಗವು ನೋಡುವುದಕ್ಕೆ ಸಿಕ್ಕಿತು, ಅದನ್ನು ಕಂಡು, ಒಂದು ನಿಮಿಷ ಬೆರಗಾಗಿ ನಿಂತುಕೊಂಡನು. ಅಂಥ ಪ್ರಾಣಿಯನ್ನು ಅದುವರೆಗೆ ಆತನು ನೋಡಿರಲಿಲ್ಲ, ಮನುಷ್ಯನ ಮೈ, ಎತ್ತಿನ ತಲೆ, ಸಿಂಹದ ಕೊರೆಗಳು-ವಿಜಾತೀಯವಾದ ಮೃಗ.

ಅಜಿತನನ್ನು ಕಂಡ ಕೂಡಲೆ ಅದು ಗರ್ಜಿಸುತ್ತ ತಲೆಬಗ್ಗಿಸಿಕೊಂಡು ಕೊಂಬುಗಳಿಂದ ತಿವಿಯುವುದಕ್ಕೆ ಬಂತು. ಅಜಿತನು ಮೆಲ್ಲನೆ ಒಂದು ಬದಿಗೆ ಸರಿದು ನಿಂತುಕೊಂಡು, ಅದರ ಕಾಲನ್ನೇ ಕಡಿದು ಬಿಟ್ಟನು. ಅದು ಪುನಃ ತಿರುಗುವುದರೊಳಗಾಗಿಯೆ ಹಿಂದಿನಿಂದ ಮೇಲೆ ಇರಿದನು. ಆ ಪುರುಷಾಮೃಗವು ನೋವೆಂಬದನ್ನು ಕಂಡರಿಯದು. ಆದುದ