ಪುಟ:ಅರಮನೆ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೨೩೯

ದಾರಿ ಹಿಡದಾರು ಯಂದು ಯಚ್ಚರಿಕೆ ವಹಿಸಿ ಅವುದೋ ಅಲ್ಲವೋ
ಯಂಬಂತೆ ರೆಡ್ಡಿಯನ್ನು ಕೊಂಡಾಡುತ ಅಪ್ಪಣೆ ಕೊಡಿಸಿದ ನೂರು
ಮಾತುಗಳನ್ನು ನಾಕೇ ನಾಕು ಮಾತುಗಳಲ್ಲಿ ಕುಗ್ಗಿಸಿ ಹೇಳುವುದಾದರ.....
ರೆಡ್ಡಿಯ ವುಪಟಳ ನಿವಾರಣಾರ್ಥವಾಗಿ ಯಿನ್ನೂ ಬೇರು ಬಿಡುತಲಿರುವ
ಕುಂಪಣಿ ಸರಕಾರದ ಬೊಕ್ಕಸವು ಅರ್ದಕ್ಕರ್ದ ರುಥಾ ಆಗಿರುವುದು. ಕೊಡಲಿಯನ್ನು
ವುಪಯೋಗಿಸದೆ ಕೇವಲ ವುಗುರಿನಿಂದ ಕಾರ್ಯ ಸಾಧನೆ ಮಾಡುವುದು ಅವಶ್ಯವು.
ರಡ್ಡಿಯನ್ನು ಹಿಡಿಯಲಕೆಂದು ಯಲ್ಲೆಲ್ಲಿ ಸಿಪಾಯಿಗಳು ಕಾರ್ಯ
ಪ್ರವೃತ್ತರಾಗಿರುವರೋ ಅವರನ್ನೆಲ್ಲ ಯೀ ಕೂಡಲೆ ಬಳ್ಳಾರಿ ರೆಜಿಮೆಂಟಿಗೆ
ವಾಪಾಸು ಕರೆಯಿಸಿಕೊಳ್ಳಬೇಕು. ಆಯಾ ಮೂರುಗಳ ಜಮೀಂದಾರರಿಗೆ
ಅಸಂಗ್ರಹ ಬುದ್ದಿಯಿಂದ ಯಿರಬೇಕೆಂದು ನಿರೂಪ ಕಳಿಸಬೇಕು, ಪೆತ್ತಂದಾರಿಕೆಯ
ದವುರ್ಜನ್ಯ ಬಿಲ್‌ಕುಲ್ ಸಲ್ಲದು. ತನ್ನ ಸರೀರವ ಸಡಲ ಬಿಡುತಾನ ರೆಡ್ಡಿ
ದುಷ್ಟರೆಲ್ಲ ಸಜ್ಜನರಾಗಿ ಪರಿವರ್ತನಗೊಂಡರೆಂದು ಹಿರಿ ಹಿರಿ ಹಿಗ್ಗುತಾನ ರೆಡ್ಡಿ..
ಜನರ ನಡುವೆ ಬಹಿರಂಗವಾಗಿ ಕಾಣಿಸಿಕೊಳ್ಳಲಕ ಸುರುವು ಮಾಡುತಾನ ರೆಡ್ಡಿ...
ಆಗ ಆತಗೆ ಕುಂಪಣಿ ಸರಕಾರದ ಸಂಗಾಟ ಮಾತುಕತೆಗೆ ಬರುವಂತೆ
ಕೇಳಿಕೊಳ್ಳಬೇಕು. ಆ ಸಂದರ್ಭದಲ್ಲಿ ಆತನನ್ನು ಬಹುವಚನದಲ್ಲಿ ಶ್ಲಾಘಿಸುವುದನ್ನು
ಮರೆಯಬಾರದು.. ಯಂದು ಮುಂತಾಗಿsss ..
ಅಲಲಾ ಯಂಬಂಥ ರುದಯಯಿದ್ರಾವಕ ಸುದ್ದಿಯು ಕಮಾಂಡರು
ಥ್ಯಾಕರೆಯಿರುವ ಆದವಾನಿಯಿಂದ ಬಂತು, ಪ್ರಕ್ಷುಬ್ಧಗೊಂಡಿರುವಂಥಾ ಜನರಿಗೆ
ಸಮಾಧಾನ ಹೇಳಲೋಸುಗ ಸರ್ ಬಿರುದಾಂಕಿತ ಥಾಮಸ್ ಮನ್ರೋ
ಸಾಹೇಬನು ತರನೇಕಲ್ಲು ಕಡೇಕ ಬೀಳುಕೊಂಡು ಹೊರಟು ಹೋದೊಡನೆ
ಯಿತ್ತ ಅಧಿಕಾರಿಗಳು ವಬ್ಬರ ಮುಖವನ್ನು ವಬ್ಬರು ನೋಡಿಕೊಳುತ ಪೆಚ್ಚಾದರು.
ಕಲೆಟ್ಟರು ಸಾಹೇಬ ತನ್ನೊಂದು ಕಣ್ಣು ತನ್ನೊಂದು ಕಿವಿಯನ್ನಲ್ಲಿ
ಬಿಟ್ಟುಹೋಗಿರುವನೆಂಬುದು ನಿರ್ವಿವಾದವು.. ತಾವು ಸುಮ್ಮಕ ಕಯ್ನ ಕಟ್ಟಿ
ಕುಂಡುರುವಂತಿಲ್ಲ.. ವಂದು ಜಾಮು ಮದ್ಯ ಸೇವನೆ ಮಾಡಿ ತಮ ತಮ್ಮ
ಹೆಂಡರೊಂದಿಗೆ ವಂದು ಜಾವ ನಿದ್ದೆ ಮಾಡುವಂತಿಲ್ಲ... ನಿಗದಿ
ಸಮಯಕ್ಕನುಸಾರವಾಗಿ ತಾವು ಭೋಜನ ಮಾಡುವಂತಿಲ್ಲ.. ಯೇನಪ್ಪಾ
ಕರುಮವಿದು? ಯಾವ ಪಾಪದ ಪ್ರಾಯಶ್ಚಿತ್ತ ಅನುಭವಿಸಲೋಸುಗ ತಾವು
ಮಾಳಿಗಮಾನ್ಯ ಕುಂಪಣಿ ಸರಕಾರಕ್ಕೆ ಸೇರಿಕೊಂಡೆಮೋ ಸಿವನೆ.. ಹಿಂಗs