ಪುಟ:ಅರಮನೆ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೮

ಅರಮನೆ

ಪಾರೋತಿ ಪತಿಹರಹರ ಮಾದೇವ ಜಯಘೋಷಗಳ ತೋರಣಗಳು ಹಾದಿ
ಯಿಕ್ಕೆಲದಲ್ಲಿ ರಾರಾಜಿಸಲಾರಂಭಿಸಿದ್ದವು. ಅಂಥ ದಾರಿಗುಂಟ ಹಂಪಜ್ಜನು
ನಡೆಯುತ್ತಿರುವಾಗ್ಗೆ ಗೇಣು ಗೇಣು ಹೆಜ್ಜೆ ಗುರುತುಗಳು ಮೂಡಲಾರಂಭಿ
ಸಿದ್ದವು. ಅವಯ್ಯನ ಹೆಜ್ಜೆ ಕಂಪನಕ, ಯವ್ವಾ.. ಯವ್ವಾ.. ಯಂಬುವ
ನಾದದಲೆಗಳಿಗೆ.....
ಯಿತ್ತ ಕಡೆ ವಂದಾಳಗಲ, ಮಂದಾಳುದ್ದದ ಹಮುಸತೂಲಿಕಾತಲ್ಪದ ಮ್ಯಾಲ
ಅಂಗಾತ ವರಕ್ಕೊಂಡಿದ್ದ ವಸ್ತಿಯು ಮಿಸುಕಾಡಲಕ ಹತ್ತಿತು,
ಕಣ್ಣುಗಳನ್ನರಳಿಸತೊಡಗಿತು, ಬಾಯನ ತೆರೆಯೋದು ಮುಚ್ಚೋದು ಮಾಡುತ
ಸಿಸುಮಗನೇ ಯಂದು ವುಸುರುತಲಿದ್ದಿತು. ವಸ್ತಿಯೊಳಗೆ ಕಾಣಿಸಿಕೊಂಡಿದ್ದ
ಚಲನೆಯನ್ನು ಭಕುತಾದಿ ಮಂದಿ ಅಗಾಧ ಯಂಬಂತೆ ನೋಡುತಲಿದ್ದಿತು.
ಆಟು ದೂರದಲ್ಲಿದ್ದ ಹಂಪಜ್ಜನು 'ನನ್ನವ್ವಾ ನನ್ನ ತಾಯೀ.. ಅಲ್ಲದೀಯಲ್ಲೇ'
ಯಂದಬ್ಬರಿಸುತ್ತ ಮೋಡೋಡಿ ಬಂದು ವಸ್ತಿಯ ಪಾದಂಗಳ ಬುಡಕ
ಕಡಕೊಂಡು ಬಿದ್ದನು, ಬಿದ್ದವನೆ ಸಾವು ಸಲ ಮುತ್ತಿಕ್ಕಿದನು, ತನ್ನ ಕಣ್ಣಿಂದ
ಜಲಧಾರೆ ಸುರಿದು ತೊಳೆದು ಅವುಗಳನ್ನು ಥಳಥಳ ಹೊಳೆಯುವಂತೆ
ಮಾಡಿದನು, ಆ ಪಾದಂಗಳನ್ನು ತನ್ನೆದೆಗೆ ವತ್ತಿಕೊಂಡನು, ಹಿಂಗಾಗಿ ಆ
ಯರಡೂ ಸರೀರಗಳ ನಡುವೆ ವರ್ತಮಾನದ ಕೊಡು ಕೊಳ್ಳಿಗೆ, ಸರಾಗವಾಗಿ
ನಡೆಯ ತೊಡಗಿತೆಂಬಲ್ಲಿಗೆ ಸಿವಸಂಕರ ಮಾದೇವಾs...
ಅದಕಿದು ಕಂದಯ್ಯನೋ? ಯಿದಕದು ಕಂದಯ್ಯನೋ?
ಯಲ್ಲಿ ನೋಯ್ತದೇನೇ ನನ್ನವ್ವಾ.. ಅಲ್ಲಿ ನೋಯ್ತದೇನೇ ತಾಯೀs....
ಅಯ್ಯೋ ಮುಟ್ಟಿದ ಕಡೇಲೆಲ್ಲ ಯಲುವುಗಳು ಕಯ್ಗೆ ಅಟೆತಾವಲ್ಲಾ.. ಪಕ್ಕೆಲುವುಗಳ
ನಡುವೆ ಯದೆಗೂಡು ಹೊರಗೆ ಹೊಂಟಯ್ತಲ್ಲಾ.. ಕಣ್ಣುಗುಡ್ಡೆಗಳು ತಳ
ಸೇರಿಕೊಂಡಿರುವವಲ್ಲಾ.. ಮುಖದೊಳಗ ಹಲ್ಲುಗಳೊಂದೇ ಕಾಣುತ್ತಿರುವವಲ್ಲಾ...
ಅಯ್ಯೋ ನನ ತಾಯಿ.. ನೀನು ವಸ್ತಿ ಮಾಡಿರೋ ಸರೀರವು ಹೆಂಗಯ್ತಲ್ಲವ್ವಾ..
ಯೀ ನಿನ್ನ ವಸ್ತಿಯು ವುಂಡು ಯೇಸುದಿನಗಳಾದುಮೋ... ಯೀ ನಿನ್ನ ವಸ್ತಿಯು
ನೀರು ಮುಟ್ಟದೆ ಯೇಸು ದಿನಗಳಾದುವೋ? ಯೀ ನಿನ್ನ ವಸ್ತಿಯು ಮಜ್ಜಣ
ಮಾಡದೆ ಯೇಸು ದಿನವಾತೋ? ಪ್ರತಿ ವುಸುರಾಟಕೂ ಕೀರಕು ಕೀರಕು ಯಂದು
ಸಬುದ ಮಾಡುತ್ತಿರುವುದಲ್ಲಾ.....
ಅದಕಿದು ಕಂದಯ್ಯನೋ? ಯಿದಕದು ಕಂದಯ್ಯನೋ?