ಪುಟ:ಅರಮನೆ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೨೫೧


ಯಿರಬೇಕಾದರ ನಿನ್ನ ಕರುಣೆಯ ಕಂದಮ್ಮನಾದ ನಂಗೆ ಯೇಟಿರಬ್ಯಾಡ
ತಾಯೀ.. ಯಾವ ಪುರಸಾರ್ಥಕ್ಕೆ ನನ್ನ ಆಟು ದೂರದಿಂದ ಕರಸ್ಗೆಂಡೀ.. ನಾಕು
ಮಂದಿ ಯದುರಿಗೆ ನನ್ ಮರುವಾದೀನ ಕಳೆಯಲಕಂತ ಅಲ್ಲ... ನನ್ನೊಳಗss
ನೀನಿಲ್ಲ ಅಂದಮ್ಯಾಲ.. ನಿನ್ನೊಳಗss ನಾನಿಲ್ಲ ಅಂದಮ್ಯಾಲ.. ನಾನ್ಯಾಕ ಭೂಮಿಗೆ
ಭಾರಾಗಿ ಬದುಕಿರಬೇಕವ್ವಾ” ಯಂದನಕಂತಾಲೇ ಅಲ್ಲೇ ವಂದು ಅನಕತದ
ಬಿಸಿಲಿಗೆ ಮಿರಮಿರನೆ ಮಿಂಚುತಲಿದ್ದ ಗುದ್ದು ಬಾಕುವನ್ನು ಸರ್ರನೆ ಕಯ್ಗೆ
ಯತ್ತಿಕೊಂಡನು. ಅದರಿಂದ ಮುಂಗಯ್ಯ ಮ್ಯಾಲ ಚುಚ್ಚಿಕೊಂಡು ವಸ್ತಿಯ
ಮ್ಯಾಲಕ ಚಾಚಿದನು.. ವಸ್ತಿಯ ಮುಖದ ಮ್ಯಾಲ ರಗುತವು ತೊಟ ತೊಟ
ಸುರಿಯತೊಡಗಿತು. ಕುಡಿಯವ್ವಾ.. ಕುಡುಕ್ಯಾ.. ಯಂದವಯ್ಯನು....
ಆ ಭೀಕರ ದ್ರುಸ್ಯವ ನೋಡಿ ಮಂದಿ ಅಲಲಲಾ ಅಂತು..
ಕಲಾವುಲಿಗೊಂಡಿತು.. ರಗುತಾಲಂಕಾರದಿಂದ ವಸ್ತಿಯ ಮುಖವು ಕೆಂಬಣ್ಣ
ಗುಡ್ಡವಾಗಲಾರಂಭಿಸಿತು. ಅದರ ದರುಸನವು ರವುಸವಾಗಿ ರಭಸದಿಂದ
ಸಾಂಕ್ರಾಮಿಕವಾಯಿತು.. ವಾದ್ಯಗಳು ನುಡಿ ನುಡಿವುತ ರವುಸಕ್ಕ ಪವುರಸದ
ಡಾಬು ತೊಡಿಸಿದವು. ಚವುಡಿಕೆಗಳ ಆಕ್ರಂದನ ಮಾರ್ಮಯಾಯಿತು..
ಜಯನ್ನಾಮ ಪಾರೋತೀ ಪತಿ ಹರಹರ ಮಹಾದೇವss
ಯಂದಂಬುತಲಿದ್ದವರೆಷ್ಟೋ? ಕುದುರೆಡವ ದೊರೆಸಾನಿ.. ನಿನಗಾರು ಸರಿಕಾಣಿ..
ಸರಿ ಅಂದವರ ಹಲ್ಲು ಮುರಿ ತಾಯಿ.. ಭೋ ಪರಾಕ್.. ಭೋ ಪರಾಕ್...
ಯಂಬ ಘೋಷಣೆಗಳ ಅಟ್ಟವಣಿ ಮಾಡುತ ಲಿದ್ದವರೆಷ್ಟೋ...?
ಅದರ ವಸ್ತಿಯು ಅಂಡನು ಯತ್ತಿ ಯಿಡಲಿಲ್ಲ.. ಬಾಯಿ ಬಿಟ್ಟು ವಂದೇ
ವಂದು ಕಾರಣಿಕವ ನುಡಿಯಲಿಲ್ಲ ಅಂದಮ್ಯಾಲ ನಿಜಭಕುತನಾದವಂಗೆ
ಸರಿಸಾಟಿಯಿಲ್ಲದ ಪವುರಸ ಬರದಂಗಿರುವುದಾ?.. ಹಂಪಜ್ಜನು ತನ್ನ ಸರೀರದ
ಭಾಗಗಳನ್ನು ಅಡ್ಡಡ್ಡ, ವುದ್ದುದ್ದ ಕುಯ್ದು ಕೊಂಡು ಮುಕ್ಕಾಲುವಾಸಿ
ರಗುತದಿಂದಾಭಿಷೇಕ ಮಾಡುತಲಿರುವಾಗ ವಸ್ತಿಯ ಕಪ್ಪಾನುಕಪ್ಪನೆಯ
ಅಂಗಾಂಗವು ಕೆಂಪಾನುಕೆಂಪಗಾತು.
ವಂದು ಗಳಿಗಾತು.. ಯರಡು ಗಳಿಗಾತು.. ಮೂರು ಗಳಿಗೇನೂ ಆತು..
ತಾಯಿಗೆ ಯಿನ್ನೂ ಕರುಣೆ ಬ೦ದ೦ಗಾಗಲಿಲ್ಲ. ತನ್ನ ಬಲಿ
ಬಯಕೆಯಲ್ಲಿದ್ದಂಗವಳೆ.. ತಾನಿನ್ನು ಆತುಮಾಹುತಿ ಮಾಡಿಕೊಂಡು ಸಾಯುಜ್ಯ
ಪದವಿ ಪಡೆಯುವುದೇ ವಾಸಿಯಂದು ಹಂಪಜ್ಜನು ನಿರ್ದಾರ ಕಯ್ನ ಕೊಂಡನು