ರಾತ್ರಿರಾಜ
ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಂಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು ತನ್ನ ಸಿಬ್ಬಂದಿಯೊಡನೆ ಪೃಥ್ವಿಗಿಳಿದನು. ಅರ್ಜಿದಾರರಿಗೆ ಕೊಡಬೇಕಾದ ಪರಿಹಾರಗಳನ್ನೂ ಹೊತ್ತುತಂದನು.
ಊರಮುಂದಿನ ಧರ್ಮಶಾಲೆಯಲ್ಲಿ ಬೀಡುಬಿಟ್ಟು ಊರಲ್ಲೆಲ್ಲ ಡಂಗುರ ಹೊಡಿಸಿದನು. "ಯಾರಾರ ಬೇಡಿಕೆ ಏನೇನಿದೆಯೆಂಬುದನ್ನು ಸಮಕ್ಷಮದಲ್ಲಿ ತಿಳಿಸಿ ಪರಿಹಾರ ಪಡೆಯಬೇಕು" ಎನ್ನುವ ಸುದ್ದಿ ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಊರವರಿಗೆ ತಿಳಿದುಬಂತು.
ಮರುದಿನ ಮುಂಜಾನೆ ಧರ್ಮಶಾಲೆಯತ್ತ ಜನರು ಸಾಲುಗಟ್ಟಿ ಸಾಗಿಯೇ ಸಾಗಿದರು. ತಮ್ಮ ಬೇಡಿಕೆಗಳನ್ನು ಬ್ರಹ್ಮದೇವನ ಮುಂದಿಟ್ಟರು. ಬ್ರಹ್ಮದೇವನಾದರೂ ಯಾರನ್ನೂ ಬರಿಗೈಯಿಂದ ಕಳಿಸದೆ, ಕೈಸಡಿಲು ಬಿಟ್ಟು ಕೇಳಿದವರಿಗೆ ತೃಪ್ತಿಯಾಗುವಂತೆ ಅವರವರ ಜೇಡಿಕೆಗಳನ್ನು ಪೂರಯಿಸಿದನು. ಸಂತ್ರಸ್ತರಲ್ಲಿ ಕೆಲವರಿಗೆ ಹೊಲ ಸಿಕ್ಕವು. ಕೆಲವರಿಗೆ ಮನೆ ಸಿಕ್ಕವು. ಹಿಂಡುವ ಎಮ್ಮೆ ಕೆಲವರಿಗೆ, ಹೂಡುವ ಎತ್ತು ಕೆಲವರಿಗೆ ದೊರೆತವು. ಕುದುರೆ ಬೇಡಿದವರಿಗೆ ಕುದುರೆ, ಗಾಡಿ ಬೇಡಿದವರಿಗೆ ಗಾಡಿ, ಪ್ರಾಯ ಬೇಡಿದರೂ ಸಿಕ್ಕಿತು. ಆರೋಗ್ಯ ಬೇಡಿದರೂ ಸಿಕ್ಕಿತು. ಚೆಲುವಿಕೆ — ಆಭರಣಗಳನ್ನೂ ಬ್ರಹ್ಮದೇವನು ಇಲ್ಲೆನ್ನದೆ ಕೊಟ್ಟೇಕೊಟ್ಟನು.
ದೀಪ ಹಚ್ಚುವ ವೇಳೆಯಾಯಿತು. ಬಡ ನೇಕಾರನೊಬ್ಬನು ಧರ್ಮಶಾಲೆಗೆ ಬಂದು, ಬ್ರಹ್ಮದೇವರಿಗೆ ಕೈಮುಗಿದು ನಿಂತನು.
"ಏನು ಬೇಕಾಗಿತ್ತು ನಿನಗೆ" ಎಂದು ಕೇಳಿದನು ಬ್ರಹ್ಮದೇವ.
"ನನಗೆ ಅರಸೊತ್ತಿಗೆಯನ್ನು ಕೊಟ್ಟುಬಿಡಿರಿ" ಎ೦ದನು ಆ ನೇಕಾರ.
"ತೀವ್ರ ಏಕೆ ಬರಲಿಲ್ಲ ನೀನು ?”
"ಮಗ್ಗದ ಮೇಲಿನ ಸೀರೆ ನೆಯ್ದು ಮುಗಿಸಬೇಕಾಗಿತ್ತು. ಆದ್ದರಿಂದ ತಡವಾಯಿತು? ಎಂದು ನೇಕಾರನು ಕೈತಿಕ್ಕುತ್ತ ನುಡಿದು ಮುಗಿಸಿದನು.