ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಜನಪದ ಕಥೆಗಳು

ಹೇಳಿದನು. ಮಗಳು ತಂದೆಗೆ ಹೇಳಿದಳು - “ಎಳ್ಳು ಉತ್ತಮವಾಗಿದ್ದರೆ ಮನೆಗೆ ತಂದು ಬಿಡಿರಿ. ಧಾರಣಿಯ ವ್ಯವಹಾರವನ್ನು ನಾನು ನಿಸ್ತರಿಸುತ್ತೇನೆ.”

ಸಾಹುಕಾರನ ಮಗಳು ಎಳ್ಳನ್ನೆಲ್ಲ ದೋಸೆಯ ಹಂಚಿನಲ್ಲಿ ಅಳೆದುಕೊಂಡು, ಅದೇ ಹಂಜಿನಿಂದ ಎಳ್ಳೆಣ್ಣೆಯನ್ನು ಅಳೆದುಕೊಟ್ಟಳು. ಒಂದು ಗಾಡಿ ಎಳ್ಳಿಗೆ ಒಂದು ಕೊಡದಷ್ಟು ಎಳ್ಳೆಣ್ಣೆ ಸಿಕ್ಕಿತು. ಅದನ್ನು ತೆಗೆದುಕೊ೦ಡು ಹೋಗಿ ತಂದೆಗೆ ಒಪ್ಪಿಸಲು, ಆತನು ವ್ಯವಹಾರದ ವಿಷಯವನ್ನೆಲ್ಲ ಕೇಳಿದನು. ಸಾಹುಕಾರನ ಮಗಳ ಜಾಣತನಕ್ಕೆ ಸೈದೂಗಿ ಆಕೆಯನ್ನೇ ತನ್ನ ಸೊಸೆಯಾಗಿ ತಂದುಕೊಳ್ಳಬೇಕೆಂದು ಯೋಜಿಸಿ ಆ ದಿಶೆಯಲ್ಲಿ ಪ್ರಯತ್ನಿಸಿದಾಗ ಅದು ಸಾಧ್ಯವೂ ಆಗಿಬಿಟ್ಟಿತು.

ಹೊಸ ಸೊಸೆ ಬಂದ ಬಳಿಕ ತಂದೆಯು ಮಗನಿಗೆ ಸನಗಿನ ವ್ಯಾಪಾರಕ್ಕೆ ತೊಡಗಿಸಿದನು. ಸನಗಿನ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು, ದೂರ ದೂರದ ಪಟ್ಟಣಗಳಿಗೆ ಹೋಗಿ ಅಲ್ಲಿ ವ್ಯಾಪಾರ ಮಾಡುವುದಕ್ಕೆ ಮಗನು ನಡುಗಟ್ಟಿ ನಿಂತನು.

ಒಂದಾನೊಂದು ಪಟ್ಟಣ. ಅಲ್ಲಿ ಒಬ್ಬ ಪಾತ್ರದವಳು ಜೂಜುಗಾರಿಕೆಯಲ್ಲಿ ಹೆಸರಾದವಳು. ಜೂಜಿನಾಟವು ರಾತ್ರಿಯಲ್ಲಿ ನಡೆಯುವುದು. ಪಾತ್ರದವಳ ಮಗ್ಗುಲಲ್ಲಿ ಕುಳಿತ ಒಂದು ಬೆಕ್ಕಿನ ನೆತ್ತಿಯ ಮೇಲೆ, ಹಣತಿ ದೀವಿಗೆಯನ್ನಿರಿಸಿ ಅದರ ಪ್ರಕಾಶದಲ್ಲಿ ಕವಡಿ ಹಾಕಿ ಜೂಜನಾಡುವುದು. ಆಟ ಆಡುತ್ತಿರುವಾಗ ಆ ಬೆಕ್ಕು ಹಣತಿ ಒಗೆದು ಓಡಿಹೋದರೆ ಆಕೆ ಸೋತಂತೆ. ಅದು ಓಡಿ ಹೋಗದೆ ಕುಳಿತೇ ಬಿಟ್ಟರೆ ಆಕೆ ಗೆದ್ದಂತೆ. ಸೋತವರು ತಮ್ಮ ವಸ್ತುವನ್ನೂ ಧನವನ್ನೂ ಆಕೆಗೊಪ್ಪಿಸಿ ಆಕೆ ಹೇಳಿದಂತೆ ಕೇಳಬೇಕು.

ಸನಗಿನ ವ್ಯಾಪಾರಿಯು ಪಾತ್ರದವಳ ಮನೆಗೆ ಹೋಗಿ ಒಂದು ರಾತ್ರಿ ಜೂಜನಾಡಿ ಸೋತೇಬಿಟ್ಟಿದ್ದರಿ೦ದ ಸನಗಿನ ಗ೦ಟುಗಳು, ಬಳಿಯಲ್ಲಿದ್ದ ಹಣ ಎಲ್ಲವನ್ನೂ ಆಕೆಗೆ ಒಪ್ಪಿಸಬೇಕಾಯಿತು. ಅಂಥ ಜೀತುದಾಳುಗಳದೊಂದು ದವಣಿಯನ್ನೇ ಮಾಡಿದ್ದಳಾಕೆ.

ವ್ಯಾಪಾರಕ್ಕೆಂದು ಹೋದಮಗನ ಸುದ್ದಿ ತಿಳಿಯದೆ ತಂದೆ ಹಾಗೂ ಹೆಂಡತಿ ಚಿ೦ತಿಸತೊಡಗಿದರು. ಅಲ್ಲಲ್ಲಿ ಆಳುಗಳನ್ನು ಕಳಿಸಿ ಹುಡುಕಾಡುವ ಕ್ರಮವನ್ನು ಕೈಕೊಂಡರು. ಸೊಸೆಯು ಒಮ್ಮೆ ಹಳ್ಳಕ್ಕೆ ಬಟ್ಟೆಗಳನ್ನು ಒಗೆಯಲು ಹೋದಾಗ ಆಕೆಗೆ ತೇಲಿ ಬರುವ ಹೂರಣಿಗೆ ಸಿಕ್ಕಿತು. ಅದನ್ನು ಮನೆಗೆ ತಂದು, ಅದರ ದ್ವಾರವನ್ನು ಮೆಲ್ಲಗೆ ತೆರೆದು ನೋಡುವಷ್ಟರಲ್ಲಿ ಒಳಗೆ ಕಾಗದ ಕಾಣಿಸಿತು.