ನಾವೆಲ್ಲ ಸರಿಯಾಗಿದ್ದೇವೆ. ತಂಗಿ ಹೇಗಿದ್ದಾಳೋ ನೋಡಿಕೊಂಡು ಬರಬೇಕೆಂದು ಅಕ್ಕಂದಿರೆಲ್ಲ ಮನೆಗೆ ಬಂದರು. “ತಂಗ್ಯಾ ತಂಗ್ಯಾ ಬಾಗಿಲತೆಗೆ” ಎ೦ದರು. ತಂಗಿ ಬಾಗಿಲು ತೆಗೆದು ಅವರನ್ನು ಒಳಗೆ ಕರಕೊ೦ಡು ಹೋದಳು. ಊಟ ಉಪಚಾರ ಮಾಡಿದಳು. ಸುತ್ತಲೆಲ್ಲ ತಿರುಗಾಡಿ ನೋಡಿ, ಉಣ್ಣಲಿಕ್ಕೆ ತಿನ್ನಲಿಕ್ಕೆ ಏನಿದೆ ಇಲ್ಲಿ ? ಶಿವನ ಮನೆ ! ಅವರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಅದನ್ನು ತೋರಗೊಡದೆ ಅಕ್ಕಗಳೆಲ್ಲ ಹೋಗಿಬಿಟ್ಟರು.
ಮತ್ತೆ ನಾಲ್ಕು ದಿನ ಬಿಟ್ಟು ಬಂದರು. “ಅವ್ವ ! ಎಂದಿಲ್ಲದ ಅಕ್ಕಗಳು ಬಂದಿದ್ದಾರೆಂದು” ಹೇಳಿ ಮಂಚದ ಮೇಲೆ ಕುಳ್ಳಿರಿಸಿದಳು. ಸವತೀಬೀಜ ಹುಗ್ಗಿ ಮಾಡಿದಳು. ಅಕ್ಕಗಳು ಬರುವಾಗ ಖುಸಾಳಿಮುಳ್ಳು ಬಳೆಚೂರು ಕಲೆಸಿ ಕಾಗದ ಚೂರಿನಲ್ಲಿ ಕಟ್ಟಿಕೊಂಡು ಬಂದಿದ್ದರು. ತಂಗಿ ಅಡಿಗೆ ಮನೆಯಲ್ಲಿ ಹೋದಕೂಡಲೇ ಗಾದಿಯಮೇಲೆಲ್ಲ ಖುಸಾಳಿಮುಳ್ಳು ಹರಹಿಬಿಟ್ಟರು. ಊಟವಾದ ಮೇಲೆ ತಂತಮ್ಮ ಮನೆಗೆ ಹೋದರು.
ಅಕ್ಕಗಳು ಹೋದ ಬಳಿಕ ತಂಗಿ ತೊಟ್ಟಿಲವನ್ನು ನೀರಲ್ಲಿ ಒಗೆದಳು. ಸಬರ ಕೊಟ್ಟ ಹುಡುಗನು ತಟ್ಟನೆ ಬಂದನು. ಸವತೀಬೀಜ ಹುಗ್ಗಿಯನ್ನು ಉಣಿಸಲು ಆತನನ್ನು ಬರಮಾಡಿಕೊಂಡಿದ್ದಳು. ಪಲ್ಲಂಗದ ಗಾದಿಯ ಮೇಲೆ ಅತನು ಕೂಡುತ್ತಲೆ - “ನನ್ನನ್ನು ಕೊಂದಿ” ಎಂದು ಆಕ್ರೋಶಿಸಿದನು. ಜಲ್‌ದಿ ತೊಟ್ಟಿಲ ತೆಗೆ. ನಾ ಹೋಗತೀನಿ ಎ೦ದು ಚೇರಾಡಿದನು. ಆಕೆ ನೀರೊಳಗಿಂದ ತೊಟ್ಟಿಲು ತೆಗೆದಳು. ಆವನು ಹೋಗಿಬಿಟ್ಟನು.
ಬಂದು ನೋಡಿದರೆ ಗಾದಿಯ ಮೇಲೆಲ್ಲ ಬಳೆಚೂರು ಬಿದ್ದಿವೆ; ಖುಸಾಳಿಮುಳ್ಳು ಬಿದ್ದಿವೆ. ಅವನ್ನು ನೋಡಿ ಆಕೆಯ ಮನದಲ್ಲಿ ತಳಮಳವಾಯಿತು.
ತನ್ನ ಮನೆಗೆ ಹೋದ ಆ ಹುಡುಗನು ಬೊಬ್ಬೆಯಿಟ್ಟನು. ಮೈಯೆಲ್ಲ ಉರಿ ಹಚ್ಚಿದಂತೆ ಬೇನೆ ಆಯಿತು. ಯಾವ ಔಷಧಿ ಕೊಟ್ಟರೂ ಬೇನೆ ಕಡಿಮೆ ಆಗಲಿಲ್ಲ. ಭಿಕ್ಷುಕ ವೇಷ ಹಾಕಿಕೊಂಡು ಕಿರಿಯಮಗಳು ಹೊರಟಳು. ಹಾದಿಯಲ್ಲಿ ನಂದ್ಯಾಲಗಿಡದ ಕೆಳಗೆ ಅಡ್ಡಾದಳು. ನೆಲಕ್ಕೆ ಮೈ ಹತ್ತುವಷ್ಟರಲ್ಲಿ ಆಕೆಯ ಕಿವಿಯಲ್ಲಿ ಒಂದು ಮಾತು ಬಿತ್ತು - “ನಮ್ಮ ಹೇಲು ಕುದಿಸಿ ಮೈಯೆಲ್ಲ ಹಚ್ಚಿದರೆ ಮುಳ್ಳುಕಾಜು ಉದುರಿ ಹೋಗುತ್ತವೆ”. ಗಂಡುಹೆಣ್ಣು ಗರುಡಪಕ್ಷಿಗಳು ತಂತಮ್ಮೊಳಗೆ ಮಾತಾಡುತ್ತಿದ್ದವು. ಗಿಡದ ಕೆಳಗೆ ಬಿದ್ದ ಗರುಡಪಕ್ಷಿಗಳ ಹೇಲನ್ನು ಜೋಳಿಗೆಯಲ್ಲಿ ಹಾಕಿಕೊಂಡು ಆ ಹುಡುಗನ ಮನೆಗೆ ಹೋದಳು.