ಅಲ್ಲಿ ಹುಡುಗನು ಹಾಸಿಗೆಯಲ್ಲಿ ಹೊರಳಾಡುತ್ತಿದ್ದನು; ಬೋರಾಡಿ ನರಳಾಡುತ್ತಿದ್ದನು. “ಈ ಬೇನೆಯನ್ನು ನಾನು ನೆಟ್ಟಗೆ ಮಾಡತೀನಿ” ಎಂದು ಭಿಕ್ಷುಕಿ ಹೇಳಿದರೂ, ಯಾರೂ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಬಹಳ ಹೇಳಿಕೊಂಡಮೇಲೆ “ನೀ ಏನು ಮಾಡುತ್ತೀ' ಎ೦ದು ಕೇಳಿದರು. “ನನಗೊಂದು ಔಷಧಿ ಗೊತ್ತಿದೆ” ಎನ್ನಲು ಆಕೆಯನ್ನು ಒಳಗೆ ಬಿಟ್ಟರು.
ಮೂರುಕಲ್ಲು ಇಟ್ಟು ಮೇಲೊಂದು ಬೋಕಿಯಿಕ್ಕಿ ಒಲೆ ಹೂಡಿ ಹೇಲು ಕುದಿಸಿದಳು. ಆ ಬೂದಿ ತೆಗೆದುಕೊಂಡು ಆ ಹುಡುಗನ ಮೈಗೆಲ್ಲ ಒರೆಸಿದಳು. ಕಾಜು, ಮುಳ್ಳು ಎಲ್ಲ ಉದುರಿ ಬಿದ್ದವು. ಹುಡುಗನಿಗೆ ಸಂತೋಷವಾಗಿ ಮೈಮೇಲಿನ ಶಾಲು ಹಾಗೂ ಮುದ್ರೆಯುಂಗುರ ತೆಗೆದುಕೊಟ್ಟನು. ಆಕೆ ಅವುಗಳನ್ನು ತೆಗೆದುಕೊಂಡು ನೆಟ್ಟಗೆ ಮನೆಗೆ ಬಂದಳು.
ಮನೆಗೆ ಬಂದವಳೇ ಹಿಟ್ಟುನಾದಿ ಕಣಕಮಾಡಿ, ಅದರಿಂದ ಮಾಡಿದ ಮೂರ್ತಿಗೆ ಸೀರೆಯುಡಿಸಿ ವಸ್ತ್ರ ತೊಡಿಸಿ, ಪಡಸಾಲೆಯಲ್ಲಿ ಕುಳ್ಳಿರಿಸಿದಳು. ಬಚ್ಚಲಿಗೆ ಹೋಗಿ ಸಬರದ ತೊಟ್ಟಲು ಬಿಟ್ಟಳು. ಹುಡುಗನು ಸಿಟ್ಟಿನಲ್ಲಿಯೇ ಬಂದನು, ಮತ್ತೇಕೆ ಈಕೆ ನನ್ನನ್ನು, ಕರೆದಳು - ಅನ್ನುತ್ತ. ಪಡಸಾಲೆಯಲ್ಲಿ ಆಕೆಯೇ ಕುಳಿತಿದ್ದಾಳೆಂದು ಬತ ತಲವಾರದಿಂದ ಹೊಡೆಯುತ್ತಾನೆ. ಕಣಕದಲ್ಲಿರುವ ಬೆಲ್ಲದ ಪಾಕವೆಲ್ಲ ಸೋರಾಡುತ್ತದೆ. ಆಗ ಸಣ್ಣಾಕೆ ಶಾಲು ಮತ್ತು ಉಂಗುರ ತೆಗೆದುಕೊಂಡು ಪಡಸಾಲೆಗೆ ಬರುತ್ತಾಳೆ.
“ಇವೆಲ್ಲಿಂದ ಬಂದವು” ಎಂದು ಹುಡುಗನು ಕೇಳಲು, “ನಾನೇ ಭಿಕ್ಷುಕಳಾಗಿ ಬಂದಿದ್ದು; ನಾನೇ ನಿನ್ನನ್ನು ಗುಣಪಡಿಸಿದ್ದು. ನಮ್ಮ ಅಕ್ಕಗಳು ಮಾಡಿದ ಫಲವನ್ನು ನಾನೇ ಭೋಗಿಸಬೇಕಾಯಿತು” ಎಂದು ಹೇಳಿದಳು. ಆಗ ಆತನಿಗೆ ಸಮಾಧಾನವಾಯ್ತು. ಆ ಬಳಿಕ ಆಕೆ ನಿಚ್ಚ ಸಬರದ ತೊಟ್ಟಿಲು ನೀರಲ್ಲಿ ಬಿಡುವಳು; ನಿಚ್ಚ ಆ ಯುವಕ ಬರುವನು.