ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಂಬುನೀರಲ

ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶೆಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು. ಅವರು ಇಡಿಯರಾತ್ರಿ ನಿದ್ರೆಯಿಲ್ಲದೆ ಕೆಲಸಮಾಡಿದರು.

ಒಲೆ,ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿಹಾಕಿ ನೀರುಕಾಯಿಸಿ ಎರಕೊಳ್ಳುವುದು. ಒಬ್ಬಿಬ್ಬರು ಕಾಯಿಪಲ್ಯೆ ಸೋಸಿದರೆ, ಮತ್ತೆ ಒಬ್ಬಿಬ್ಬರು ಅಡಿಗೆ ಅಂಬಲಿ ಮಾಡಿದರು. ಮಾಡಿದ ಅಡಿಗೆಯನ್ನು ಹೆಡಿಗೆಬುಟ್ಟಿಯಲ್ಲಿ ಓರಣವಾಗಿ ಹೊಂದಿಸಿಟ್ಟರು ಬೇರಿಬ್ಬರು.

ಆ ಏಳು ಜನ ನೆಗೇಣಿಯರಲ್ಲಿ ನಾಗಮ್ಮ ಚಿಕ್ಕವಳು. ಅವಳನ್ನು ಮನೆಯ ಕಾವಲಕ್ಕೆ ಬಿಟ್ಟರು. ಮನೆಮಾರು ಜೋಕೆಯೆಂದು ಹೇಳಿದರು; ಆಕಳ ಕರುವನ್ನು ಬಿಟ್ಟು ಕೊಡುವುದನ್ನೂ ಕಟ್ಟಿಹಾಕುವುದನ್ನೂ ಸೂಚಿಸಿದರು.

ಮಧ್ಯಾಹ್ನದಲ್ಲಿ ಆಕಳ ಕರುವನ್ನು ಬಿಟ್ಟು ಬೇರೆ ಗೂಟಕ್ಕೆ ಕಟ್ಟಬೇಕೆನ್ನುವಷ್ಟರಲ್ಲಿ ಅದು ರಾಜಬೀದಿಗೆ ಹೋಗಿಬಿಟ್ಟಿತು. ಅದನ್ನು ಅಟ್ಟಿಕೊಂಡು ಹೊರಟ ನಾಗಮ್ಮ ಪಟ್ಟಸಾಲೆಯ ಶೆಟ್ಟಿಯವರ ಮನೆಯ ಮುಂದೆ ಹಾದು ಬರುವಾಗ ಕೇರಿಯಲ್ಲಿ ಸಂಧಿಸಿದ ಶೆಟ್ಟಿಯು ಆಕೆಯನ್ನು ಕಂಡನು. ಆಕೆಯೊಡನೆ ಆತನ ಮನಸ್ಸೂ ಹಿಂಬಾಲಿಸಿತು. ಏನು ಮಾಡಿವುದನ್ನು?

ಶೆಟ್ಟಿ ಲಗುಬಗೆಯಿಂದ ಮನೆಯ ಹೋದವನೇ ಹಾಸಿಕೊಂಡು ಮಲಗಿಬಿಟ್ಟನು. "ತಲೆನೋವೇ, ಹೊಟ್ಟೆನೋವೇ" ಎಂದು ತಾಯಿ ಕೇಳಿದರೆ-"ಯಾವುದೂ ಬೇನೆಯಲ್ಲ: ಸರಿಕೆಯಲ್ಲಿ. ಕಳಶೆಟ್ಟಿಯವರ ಸೊಸೆಯಮೇಲೆ ನನ್ನ ಮನಸ್ಸು ಹೋಗಿದೆಯವ್ವ!" ಎಂದು ಹೊಟ್ಟೆಬಿಚ್ಚಿ ಹೇಳಿದನು. ಅದನ್ನು ಸಾಧಿಸುವ ಚಿಂತೆ ತಾಯಿಗೆ ಅಂಟಿಕೊಂಡಿತು. ಅದರ ಯುಕ್ತಿಯೂ ಆಕೆಗೆ ಹೊಳೆಯಿತು.

ಅಂದೇ ಸಾಯಂಕಾಲಕ್ಕೆ ಕಲಶೆಟ್ಟಿಯವರ ಏಳೂ ಜನ ನೆಗೇಣಿ ಮಕ್ಕಳಿಗೆ ಮುತ್ತೈದೆತನದ ಊಟಕ್ಕೆ ಹೇಳಿಸಿದರು, ಪಟ್ಟಸಾಲೆಯ ಶೆಟ್ಟರು. ಸಾಯಂಕಾಲಕ್ಕೆ ಅವರೆಲ್ಲ ಬಂದರು. ಗಂಧ, ಕುಂಕುಮ, ಉಡಿಯಕ್ಕಿಗಳಿಂದ ಅವರನ್ನು ಸತ್ಕರಿಸಿದ ಬಳಿಕ ಉಣಬಡಿಸಲಾಯಿತು. ಚಿಕ್ಕವಳಾದ ನಾಗಮ್ಮನ ಎಡೆಯಲ್ಲಿ ನೊಣಹೊಡೆದು