ಪುಟ:ಉಮರನ ಒಸಗೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಉಮರನ ಗಣಿತ ನೈಪುಣ್ಯದ ಖ್ಯಾತಿಯು ಹೀಗೆ ದೊಡ್ಡದಾದರೂ, ಅದಕ್ಕೂ ಮರೆ ಕಟ್ಟುವಷ್ಟು ದೊಡ್ಡದು ಆತನ ಕವಿತ್ವ ಚಾತುರ್ಯದ ಖ್ಯಾತಿ. ಆತನ ಕಾವ್ಯವು "ರುಬಾ-ಯಿ" ಎಂಬ ಛಂದಸ್ಸಿನ ಪದ್ಯಗಳಾಗಿ, "ರುಬಾಯ್ಯಾತ್" ಎಂಬ ಹೆಸರಿನಿಂದ ಪ್ರಸಿದ್ದವಾಗಿದೆ. "ರುಬಾ-ಯಿ" ಪದ್ಯವು ನಾಲ್ಕು ಪಾದಗಳುಳ್ಳುದು. ಇವುಗಳಲ್ಲಿ ಮೊದಲನೆಯ, ಎರಡನೆಯ ಮತ್ತು ನಾಲ್ಕನೆಯ ಪಾದಗಳ ಅಂತ್ಯಾಕ್ಷರಗಳು ಒಂದೇ ಪ್ರಾಸದವು, ಮೂರನೆಯ ಪಾದದಲ್ಲಿ ಪ್ರಾಸವಿರಬೇಕಾದ ನಿಯಮವಿಲ್ಲ. "ರುಬಾಯ್ಯಾತ್" ಕಾವ್ಯಕ್ಕೆ ಸೇರಿದುವೆಂಬ ಸುಮಾರು ೫೦೦ ಪದ್ಯಗಳು ಈಗ ಪ್ರಚಾರದಲ್ಲಿವೆ. ಕಾವ್ಯದ ಸಮಗ್ರ ಸಂಖ್ಯೆಯೆಷ್ಟೋ, ಮತ್ತು ಈಗ ಪ್ರಚಾರದಲ್ಲಿರುವವುಗಳಲ್ಲಿ ನಿಜವಾಗಿಯ ಉಮರನವೇ ಆದವುಗಳೆಷ್ಟೋ ನಿಶ್ಚಯಿಸುವುದು ಕಷ್ಟ. ಈ ಕಾವ್ಯದಲ್ಲಿ ಉಮರನು ಮಾನವ ಜೀವನದ ಒಳತತ್ತ್ವವನ್ನು ಕುರಿತು ವಿಚಾರಮಾಡತೊಡಗಿ, ತನ್ನ ಅಂತರಂಗದ ಆಲೋಚನೆಗಳನ್ನೂ, ಭಾವಗಳನ್ನೂ, ಅಭಿಲಾಷೆಗಳನ್ನೂ, ಸಂಶಯಗಳನ್ನ ಸರಸ ವಚನಗಳಿಂದ ತೋರಿಸಿದ್ದಾನೆ. ಈತನ ತತ್ತ್ವ ನಿರ್ಣಯವನ್ನು ಕುರಿತು ಒಂದೆರಡು ವಾಕ್ಯಗಳನ್ನು ಬೇರೆಯಾಗಿ ಬರೆಯುವುದು ಅನುಕೂಲ. ಇಲ್ಲಿ ಆತನ ಸುತ್ತುಮುತ್ತಲಿದ್ದ ಸನ್ನಿವೇಶಗಳೆಂತಹವೆಂಬುದನ್ನು ಸಂಕ್ಷೇಪವಾಗಿ ಗಮನಕ್ಕೆ ತಂದುಕೊಳ್ಳಬಹುದು.

ಉಮರನ ಕಾಲಕ್ಕೆ ಕಾವ್ಯ ವ್ಯಾಸಂಗವು ಆ ದೇಶಕ್ಕೆ ಹೊಸ ಸಂಗತಿಯೇನೂ ಆಗಿರಲಿಲ್ಲ. ಅಂದಿಗೆ ಬಹು ಹಿಂದಿನಿಂದಲೂ ಪಾರಸೀಕರಲ್ಲಿ ಸಾಹಿತ್ಯವೂ ಲಲಿತ ಕಲೆಗಳೂ ಬೆಳೆದು ಬಂದಿದ್ದುವು. ಉಮರನ ಸಮಯದ ಸರಿಸುಮಾರಿಗೆ ಅಲ್ಲಿ ಫಿರ್ದೌಸಿ ಎಂಬ ಮಹಾಕವಿಯು ಪ್ರಖ್ಯಾತನಾಗಿದ್ದನು.